ಸೋಮವಾರ, ಏಪ್ರಿಲ್ 12, 2010

ನಮ್ಮೊಳಗೊಬ್ಬ ಯುವ ಕಾದಂಬರಿಕಾರ


ಪುಟ್ಟ ಊರಿನಿಂದ ಈ ಬೃಹತ್ ಬೆಂಗಳೂರಿಗೆ ಬಂದು, ಇಲ್ಲಿಯ ಜನರೊಳಗೆ ಬೆರೆತು ಒಂದಾಗಿ, ತಾ ಪಡೆದ ಸಣ್ಣ ಪುಟ್ಟ ಅನುಭವಗಳನ್ನು ನಮ್ಮ ಮುಂದಿರಿಸುತ್ತಾ ಹೊರಟ ಸುಧೇಶ್ ಅವರ ಪರಿಚಯ ಅವರ ಬ್ಲಾಗ್ "ಅನುಭೂತಿ"ಯ ಮೂಲಕ ಈಗಾಗಲೇ ಬಹಳಷ್ಟು ಜನರಿಗಾಗಿರಬಹುದು. ಆದರೆ ಎಲೆಮರೆಯ ಕಾಯಂತೆ ಕಳೆದ ಜುಲೈ ತಿಂಗಳಿನಿಂದ ಅವರು ಬರೆಯುತ್ತಿರುವ ಬೊಚ್ಚಲ ಕಾದಂಬರಿಯ ಕುರಿತು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. "ನೀ ಬರುವ ಹಾದಿಯಲಿ..." ಎನ್ನುವ ಬ್ಲಾಗ್‌ನಲ್ಲಿ ಅದೇ ಶೀರ್ಷಿಕೆಯನ್ನು ಹೊಂದಿರುವ ಅವರ ಮೊದಲ ಕಾದಂಬರಿ ೨೦೦೯ ಜುಲೈ ತಿಂಗಳಿಂದ ಕಂತಿನಲ್ಲಿ ಬರುತ್ತಿದೆ. ಕೆಲಸದೊತ್ತಡ ಹಾಗೂ ಮೊದಲ ಬ್ಲಾಗ್ ಅನುಭೂತಿಯ ಅಪ್‌ಡೇಟ್ ಮಾಡುವ ಜವಾಬ್ದಾರಿಯ ನಡುವೆ ಧಾರಾವಾಹಿಯ ಕಂತುಗಳ ಬರುವಿಕೆಯಲ್ಲಿ ಸ್ವಲ್ಪ ನಿಧಾನವಾಗುತ್ತಿದೆಯಾದರೂ ಬಹು ಸುಂದರವಾಗಿ, ಕುತೂಹಲಕರವಾಗಿ, ಭಿನ್ನವಾದ ಶೈಲಿಯಲ್ಲಿ ನಿರೂಪಿಸುತ್ತಿದ್ದಾರೆ ಸುಧೇಶ್. ಈವರೆಗೆ ಒಟ್ಟೂ ಹದಿನೇಳು ಭಾಗಗಳು ಬಂದಿದ್ದು, ಕುತೂಹಲ ಘಟ್ಟದಲ್ಲಿದೆ ಕಥೆ.

ಕಾದಂಬರಿಯ ಕಿರು ಪರಿಚಯ : ಪ್ರಸ್ತುತ ವಿದ್ಯಮಾನಗಳನ್ನೆಲ್ಲಾ ಸಣ್ಣ ಪುಟ್ಟ ಘಟನೆಗಳ ಮೂಲಕ ಮತ್ತೂ ಆಪ್ತಗೊಳಿಸುತ್ತಾ, ಚುರುಕಾದ, ಮನಮುಟ್ಟುವ, ಸುಲಲಿತ ಸರಳ ಸಂಭಾಷಣೆಗಳ ಮೂಲಕ ಕಾದಂಬರಿಯನ್ನು ಒಂದು ಉತ್ತಮ ಹಾಗೂ ಸುಂದರ ಚೌಕಟ್ಟಿನೊಳಗೆ ಬಂಧಿಸಿಡುವಲ್ಲಿ ಸುಧೇಶ್ ಸಫಲರಾಗಿದ್ದಾರೆ. ಎಲ್ಲಕ್ಕಿಂತ ಮೊದಲು ನೆನಪಿಡಬೇಕಾದ್ದು, ಇದು ಅವರ ಮೊದಲ ಕಾದಂಬರಿ. ಪ್ರಥಮ ಪ್ರಯತ್ನದಲ್ಲೇ ಓದುಗರ ಮನಸ್ಸನ್ನು ಗೆಲ್ಲುವ ನಿಟ್ಟಿನಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. "ಏನೋ ಬರೀತಿನಿ ಅಷ್ಟೆ.... ನನ್ನ ತೃಪ್ತಿಗೆ, ಯಾರು ಓದ್ತಾರೆ ಇದನ್ನ? ಪಬ್ಲಿಷಿಂಗ್ ಎಲ್ಲಾ ಬೇಡ....ಪುಸ್ತಕ ಎಲ್ಲಾ ಮಾಡೋವಷ್ಟು ಚೆನ್ನಾಗಿದೆಯಾ..?!" ಎಂದೆಲ್ಲಾ ತನ್ನ ಸಾಮರ್ಥ್ಯದ ಬಗ್ಗೆ ಅಪನಂಬಿಕೆ ತೋರಿದರೂ, ಕಾದಂಬರಿಯ ಬರವಣಿಗೆಯಲ್ಲಿ ಬಹು ಭರವಸೆಯನ್ನು ಕಾಣಿಸುತ್ತಾರೆ. ಓರ್ವ ಹೆಣ್ಣಿನ ಒಂಟಿತನ, ಮಾನಸಿಕ ಘರ್ಷಣೆಗಳನ್ನು, ನೋವು ನಲಿವುಗಳನ್ನು, ಪ್ರೀತಿಯ ನವಿರತೆಯನ್ನು, ಸಾಮಾಜಿಕ ಬದ್ಧತೆಯನ್ನು, ಜವಾಬ್ದಾರಿಯನ್ನು ಮೊದಲ ಯತ್ನದಲ್ಲೇ ಸಮರ್ಥವಾಗಿ ನಿರೂಪಿಸಿದ್ದಾರೆ. ಅಲ್ಲಲ್ಲಿ ಅವಸರದ ಟೈಪಿಂಗ್‌ನಿಂದಾಗಿಯೋ ಇಲ್ಲ ಕಣ್ತಪ್ಪಿನಿಂದಾಗಿಯೋ ಸಣ್ಣ ಪುಟ್ಟ ತಪ್ಪುಗಳಾಗಿದ್ದರೂ ಸಹ ಕಾದಂಬರಿಯೊಳಗಿನ ಚುರುಕಾದ ಓಘ ಅವುಗಳನ್ನು ನಗಣ್ಯವಾಗಿಸುತ್ತದೆ.

ಕಥೆಯನ್ನು ಬರೆಯುವುದಕ್ಕಿಂತ ಕಾದಂಬರಿ ಬರೆಯುವುದು ಬಲು ಕಷ್ಟ ಎನ್ನುವುದು ನನ್ನ ಅಭಿಮತ. ಅದಕ್ಕೆ ಬೇಕಾಗಿರುವ ಚಾಕಚಕ್ಯತೆ, ನಿರೂಪಣಾ ಶೈಲಿಯೊಳಗಿನ ನಿಪುಣತೆ, ಸಂಭಾಷಣೆಯೊಳಗಿನ ಹೊಸತನ - ಇವೆಲ್ಲವೂ ಓದುಗನನಲ್ಲಿ ಆಸಕ್ತಿಯನ್ನೂ, ಕುತೂಹಲವನ್ನೂ ಹುಟ್ಟಿಸುವಂತಿವೆ. ಈ ನಿಟ್ಟಿನಲ್ಲಿ ಸುಧೇಶ್ ಅವರು ಇಷ್ಟು ಚಿಕ್ಕ ವಯಸ್ಸಿನಲ್ಲೇ ಪ್ರಯತ್ನಿಸಿ ಸಫಲತೆ ಕಾಣುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕಥೆ ಸಾಮಾಜಿಕವಾಗಿದ್ದು, ಪ್ರೀತಿ, ಸ್ನೇಹ, ಮೋಸ, ಸಾಂಸಾರಿಕ ಜಂಜಾಟ - ಇವುಗಳನ್ನು ಹೊಂದಿದ್ದು ಸಾಮಾನ್ಯ ಎಂದೆನಿಸಬಹುದು. ಆದರೆ ಅದನ್ನು ಹಣೆದ ರೀತಿ, ಹಳ್ಳಿಯ ಸೊಗಡತನವನ್ನು ಬೆಸೆದ ಪರಿ, ನಗರಜೀವನದೊಳಗಿನ ಯಾಂತ್ರಿಕತೆಯನ್ನು ತೋರುವ ಘಟನಾವಳಿಗಳು, ಕೃತಕತೆಯಿಲ್ಲದ ಹೊಸತನದಿಂದ ಕೂಡಿದ ಸುಂದರ ಸಂಭಾಷಣೆಗಳು ಕಥೆಗೆ ಒಂದು ವಿಭಿನ್ನವಾದ ಆಯಾಮವನ್ನು ನೀಡುತ್ತವೆ.

ಪ್ರಾಮಾಣಿಕ ಬರಹಗಾರನಿಗೆ ಉತ್ತಮ ಓದುಗರೇ ಪೋಷಕರು. ಹೆಚ್ಚು ಬೆಂಬಲ ಸಿಕ್ಕಿದಷ್ಟು ಬರವಣಿಗೆಯ ಪ್ರತಿ ಹೆಚ್ಚಿನ ಜವಾಬ್ದಾರಿ ಹೊಂದಿ, ಬರಹಗಾರನಿಗೆ ಮತ್ತಷ್ಟು ಉತ್ತಮ ಮಟ್ಟದ ಬರಹವನ್ನು ನೀಡಲಾಗುತ್ತದೆ. ಇದರಿಂದ ಓದುಗರಿಗೂ ಉತ್ತಮ ಬರಹಗಾರ ಹಾಗೂ ಬರವಣಿಗೆ ಸಿಕ್ಕಂತಾಗುತ್ತದೆ ಅಲ್ಲವೇ? ಮೊದಲ ಕಂತಿನಿಂದ ಓದಿದರೆ ಮಾತ್ರ ಕಾದಂಬರಿಯೊಳಗಿನ ಸತ್ವ, ಅವರ ಪ್ರತಿಭೆ, ಕಂತಿನಿಂದ ಕಂತಿಗೆ ಅವರು ಹೊಂದಿದ ಪ್ರಭುತ್ವ ಹಾಗೂ ಬೆಳವಣಿಗೆಗಳನ್ನು ತಿಳಯಬಹುದು. ಹಾಗಾಗಿ ಸಾಧ್ಯವಾದಾಗ ಮೊದಲ ಹೆಜ್ಜೆಯಿಂದಲೇ "ನೀ ಬರುವ ಹಾದಿಯಲಿ..." ಒಮ್ಮೆ ಸಾಗಿ ಬನ್ನಿ.

ಕಾದಂಬರಿಯ ಪ್ರಾರಂಭದಲ್ಲಿ ಸುಧೇಶ್ ಅವರೇ ಹೇಳಿಕೊಂಡ ಮನದ ಮಾತುಗಳಿವು : "ಡಿ.ಗ್ರಿ.ಯಲ್ಲಿ ಇದ್ದಾಗಿನಿ೦ದ ಕಾದ೦ಬರಿ ಬರೆಯಬೇಕು ಎ೦ಬ ಯೋಜನೆಯೊ೦ದಿತ್ತು. ಅನುಭವ, ವಿಷಯದ ಕೊರತೆಯಿ೦ದ ಮು೦ದೆ ಹಾಕುತ್ತಲೆ ಬ೦ದಿದ್ದೆ. ಈಗ ಅನುಭವ ತು೦ಬಾ ಆಗಿದೆ ಅ೦ತೇನಿಲ್ಲ… ಆದರೆ ಒ೦ದು ವಿಷಯ ತು೦ಬಾ ಸಮಯದಿ೦ದ ಕೊರೆಯುತ್ತಿದೆ. ಅದನ್ನು ಮನಸ್ಸಿನಲ್ಲಿ ಬಚ್ಚಿಟ್ಟುಕೊಳ್ಳಲಾಗುತ್ತಿಲ್ಲ. ಅದಕ್ಕೆ ಅದನ್ನೇ ಬರಹಕ್ಕೆ ಇಳಿಸಬೇಕೆ೦ದಿದ್ದೇನೆ. ಅದು ಒ೦ದು ಅಧ್ಯಾಯದ ಕಥೆ ಆಗಬಹುದು, ಸಣ್ಣ ಧಾರಾವಾಹಿ ಆಗಬಹುದು, ಇಲ್ಲವೇ ಕಾದ೦ಬರಿ ಆಗಬಹುದು. ಎಡವಿದಾಗ ನನ್ನ ನೆರವಿಗೆ ನೀವೆಲ್ಲರೂ ಇದ್ದೀರೆ೦ಬ ದೃಢ ನ೦ಬಿಕೆಯಿದೆ. ನಾನು ಬರೆದುದ್ದನ್ನೆಲ್ಲಾ ಮೆಚ್ಚಿಕೊ೦ಡು ಬೆನ್ನುತಟ್ಟಿರುವ ದೊಡ್ಡ ಮನಸಿನವರು ನೀನು. ನನ್ನ ಈ ಪ್ರಯತ್ನದಲ್ಲೂ ನನ್ನ ಹಿ೦ದೆ ಇರುತ್ತೀರಿ ಎ೦ಬ ಕಾನ್ಫಿಡೆನ್ಸ್ ನನಗಿದೆ. ಈ ಕಾದ೦ಬರಿಯ ವಿಷಯ ನಿಜವಾಗಿ ನಡೆದದ್ದು. ಅದರ ಮೇಲೆ ಮಹೇಶ್ (ಅನುಭವ್ ಎ೦ಬ ಆ೦ಗ್ಲ ಬ್ಲಾಗ್ ಬರೆಯುತ್ತಾರೆ) ಎ೦ಬ ಬ್ಲಾಗಿಗರು ಇ೦ಗ್ಲಿಷಿನಲ್ಲಿ ಕಥೆ ಬರೆದಿದ್ದರು. ಅದು ತು೦ಬಾ ಚೆನ್ನಾಗಿತ್ತು ಮತ್ತು ಎಲ್ಲರ ಮೆಚ್ಚುಗೆ ಗಳಿಸಿತ್ತು. ಕಥೆಯ ಹಿನ್ನೆಲೆ ಅವರಿಗೆ ಅಷ್ಟಾಗಿ ಗೊತ್ತಿರದಿದ್ದುರಿ೦ದ ಅವರು ಕಲ್ಪನೆಯನ್ನು ಹೆಚ್ಚು ಸೇರಿಸಬೇಕಾಯಿತು. ಈಗ ಅದನ್ನು ನನ್ನದೇ ರೀತಿಯಲ್ಲಿ ಬರೆಯಬೇಕೆ೦ದು ಮಾಡಿದ್ದೇನೆ. ಅದರ ಹೆಸರು "ನೀ ಬರುವ ಹಾದಿಯಲ್ಲಿ... - ಸುಧೇಶ್ "

ಸಹಮಾನಸಿಗರಾದ ನೀವೂ ಇವರ ಈ ಪ್ರತಿಭೆಗೆ ಸ್ಪಂದಿಸಿ, ಪ್ರೋತ್ಸಾಹಿಸಿದರೆ ಅವರ ಬರವಣಿಗೆಯ ಉತ್ಸಾಹಕ್ಕೆ ಮತ್ತಷ್ಟು ಇಂಬುಕೊಟ್ಟಂತಾಗುವುದು.


-ತೇಜಸ್ವಿನಿ ಹೆಗಡೆ.

19 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ನಿಜ, ಕಾದ೦ಬರಿ ಬರೆಯುವುದು ಸುಲಭದ ಮಾತಲ್ಲ, ಪಾತ್ರ ಪೋಷಣೆ, ಕಥಾ ಹ೦ದರ ಇದರ ಸು೦ದರ ನೇಯ್ಗೆ ಮಾಡುವ ಕಲೆ ಇದ್ದವರಿಗೆ ಮಾತ್ರ ಅದು ಸಾಧ್ಯ. ಸುಧೇಶ್ ಚಿಕ್ಕ ವಯಸ್ಸಿ ನಲ್ಲಿಯೇ ಇದಕ್ಕೆ ಒಗ್ಗಿಕೊ೦ಡಿರುವುದು ಮತ್ತು ಯಶಸ್ವಿ ಯಾಗಿ, ಎಲ್ಲೂ ಬೋರ್ ಹೊಡೆಸದೇ ಬರೆಯುತ್ತಿರುವುದು ಸ೦ತಸದ ವಿಚಾರ, ನಾನು ಅವರು ಬ್ಲಾಗ್ ನಲ್ಲಿ ಕ೦ತು ರೂಪದಲ್ಲಿ ಬ೦ದಿದ್ದನ್ನು ಓದಿದ್ದೇನೆ, ಸದ್ಯ ಬೆ೦ಗಳೂರಿನಿ೦ದ ಮು೦ಬೈ ಗೆ ಹೋಗಿ ನೆಲೆಸಿರುವ ಮಿತ್ರ ಸುಧೇಶ್ ಅವರು ಹೀಗೇ ಬರೆಯು ತ್ತಿರಲಿ, ಅವರ ಸೃಜನಶೀಲತೆ ಮತ್ತು ಬರಹದಲ್ಲಿನ ಆಸಕ್ತಿ ಕು೦ದದಿರಲಿ ಎ೦ದು ಆಶಿಸುವೆ. ಅವರನ್ನು ನಿಮ್ಮ ಬ್ಲಾಗ್ ಮೂಲಕ ಪರಿಚಯಿಸಿ ಉತ್ತಮ ಕೆಲಸ ಮಾಡಿದ್ದೀರಿ.

ಬಿಸಿಲ ಹನಿ ಹೇಳಿದರು...

ಯುವ ಕಾದಂಬರಿಕಾರ ಸುಧೇಶ್ ಶೆಟ್ಟಿಯವರ ಕಾದಂಬರಿಯ ಬಗ್ಗೆ ಒಳ್ಲೆ ವಿಮರ್ಶೆಯನ್ನು ಬರೆದಿರುವಿರಿ. ಬಿಡುವಾದಾಗ ಅದನ್ನು ಓದುವೆ.

ದಿನಕರ ಮೊಗೇರ ಹೇಳಿದರು...

ತೇಜಸ್ವಿನಿ ಮೇಡಂ,
ನಾನೂ ಅವರ ಬ್ಲಾಗ್ ನಿರಂತರ ಓದುಗ...... ಅವರ ಕಾದಂಬರಿಯ ಸಂಭಾಷಣೆ ತುಂಬಾ ನವ ನವೀನ ...... ಕೆಲವೊಮ್ಮೆ ನನ್ನ ಹೊಟ್ಟೆ ಕಿಚ್ಚನ್ನೂ ತೋಡಿಕೊಂಡಿದ್ದೇನೆ ಅವರಲ್ಲಿ..... ಕಾಲೆಳೆಯುವ ಜನರೇ ಹೆಚ್ಚಿರುವಾಗ , ನೀವು ಅವರ ಪ್ರತಿಭೆಗೆ ಸಾಣೆ ಹಿಡಿದಿದ್ದೀರಾ ಮೇಡಂ......

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ಸುಧೇಶ್ ಒಳ್ಳೆಯ ಬರಹಗಾರ. ಅವರ ವಯಸ್ಸಿಗೆ ತಕ್ಕಂತೆ ಪಾತ್ರಗಳಲ್ಲಿ ಬರುವ ಚೆಲ್ಲುತನ, ತುಂಟಾಟ, ಕುತೂಹಲ, ಸಾಮಾಜಿಕ ಕಳಕಳಿ, ಇತ್ಯಾದಿಗಳು ಚೆನ್ನಾಗಿ ಮೂಡಿಬರುತ್ತಿವೆ. ವಯಸ್ಸಾದವರು ಬರೆಯುವ ಕಾದಂಬರಿಗಿಂತ ಯುವಕರು ಬರೆಯುವ ಕಾದಂಬರಿ ಹೇಗಿರುತ್ತದೆ ಅನ್ನುವುದಕ್ಕೆ ಸುಧೇಶ್ ಅವರ ನೀ ಬರುವ ದಾರಿಯಲ್ಲಿ ಸಾಕ್ಷಿ...ಅವರಿಗೆ ನನ್ನ ಕಡೆಯಿಂದ ಸಂಫೂರ್ಣ ಬೆಂಬಲವಿದೆ. ಒಳ್ಳೆಯದಾಗಿಲಿ..

ಒಳ್ಳೆಯನತನವನ್ನು ಗುರುತಿಸುವುದು ಪ್ರೋತ್ಸಾಹಿಸುವುದು ನಾವೆಲ್ಲರೂ ಮಾಡಬೇಕಾದ ಕೆಲಸ. ನಿಮ್ಮ ಪ್ರೋತ್ಸಾಹ ಹೀಗೆ..ಇರಲಿ...

ಜಲನಯನ ಹೇಳಿದರು...

ಹೌದು, ತೇಜಸ್ವಿನಿಯವರೇ....ನನ್ನದೂ ಸಹಮತ...ಸುಧೇಶ್...ಒಳ್ಲೆಯ ಕಥಾ ಲೇಖಕ ಎನ್ನುವುದನ್ನು ಅವರ ಬ್ಲಾಗಿನ ಮೂಲಕ ತಿಳಿದಿದ್ದೇನೆ...ಅವರ ಈ ಪ್ರಯತ್ನ ಅವರಿಗೆ ಸಿದ್ಧಿ ಮತ್ತು ಯಶಸ್ಸಿನ ಜೊತೆಗೆ ಮತ್ತೂ ಬೆಳೆಯುವ ಎಲ್ಲ ಅನುಭವನೀಡಲಿ ಎಂದೇ ನನ್ನ ಹಾರೈಕೆ.

ವನಿತಾ / Vanitha ಹೇಳಿದರು...

ಅವರ ಬ್ಲಾಗ್ ಲೇಖನ ಗಳನ್ನು ಓದಿದ್ದೆ..ನೀಬರುವ ದಾರಿಯಲ್ಲಿ ಓದಿರಲಿಲ್ಲ..ಬಿಡುವು ಮಾಡಿಕೊಂಡು ಓದುತ್ತೇನೆ :)

ಮನಸಿನ ಮಾತುಗಳು ಹೇಳಿದರು...

ತೇಜಕ್ಕ,
ಸುಧೇಶ್ ಅವರ ಬ್ಲಾಗ್ ಪರ್ಚಯಿಸಿದ್ದು ಒಳ್ಳೇದಾತು ...
ನಾನಂತೂ ಅವರ ಒಂದೊಂದು ಕಂತನ್ನು ಬಿಡದೆ ಓದ್ತಾನೆ ಇರ್ತಿ...
ಇಷ್ಟ ಆಗ್ತು ನಂಗು ಕೂಡ ಅವರ ಕಾದಂಬರಿ...:-)

ಕ್ಷಣ... ಚಿಂತನೆ... ಹೇಳಿದರು...

ಶ್ರೀ ಸುಧೇಶ್ ಶೆಟ್ಟಿಯವರ ಬ್ಲಾಗು ಹಾಗೂ ಅವರು ಬರೆಯುತ್ತಿರುವ ಕಾದಂಬರಿಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

ಒಂದು ಸಣ್ಣ ಕಥೆಯನ್ನು ಬರೆಯಬೇಕಾದರೇ ಹಲವಾರು ಬಾರಿ ಯೋಚಿಸಿ ಬರೆಯಬೇಕಿರುವಾಗ, ಕಾದಂಬರಿಯಂತಹದನ್ನು ಬರೆಯುವುದು ಬಹಳ ಕಷ್ಟದ್ದು. ಪಾತ್ರಗಳು, ಸಂಭಾಷಣೆ, ಕಥೆಯಲ್ಲಿನ ಓಘ ಇವಕ್ಕೆಲ್ಲ ಬಹಳ ತಾಳ್ಮೆ, ಶ್ರದ್ಧೆ ಎಲ್ಲ ಬೇಕಾಗುತ್ತದೆ. ಅಂತಹದನ್ನು ಸುಧೇಶ್ ಶೆಟ್ಟಿಯವರು ಬರೆಯುತ್ತಿರುವುದು ಸಂತಸದ ವಿಷಯ. ಅವರ ಕಾದಂಬರಿ ಯಶಸ್ವಿಯಾಗಲಿ. ಅವರಿಗೆ ಅಭಿನಂದನೆಗಳು ಹಾಗೂ ತೇಜಸ್ವಿನಿಯವರಿಗೆ ಇಂತಹ ಯುವಬರಹಗಾರರನ್ನು ತಮ್ಮ ಬ್ಲಾಗ ಮೂಲಕ ಪರಿಚಯಿಸಿದ್ದಕ್ಕೆ ಧನ್ಯವಾದಗಳು.

ಸ್ನೇಹದಿಂದ,

ಸಾಗರಿ.. ಹೇಳಿದರು...

ತೆಜಸ್ವಿನಿಯವರೆ,
ಬ್ಲಾಗಿನ ಲೋಕ ನನಗೆ ಇತ್ತೀಚಿನದ್ದಾಗಿದ್ದರಿಂದ ನನಗೆ ಸುಧೇಶ್ ಬಗ್ಗೆ ಜಾಸ್ತಿ ತಿಳಿದಿಲ್ಲ, ಅವರ ಕಾದಂಬರಿಯನ್ನು ನಾನೂ ಓದುವೆ. ನಿಮ್ಮ ಲೇಖನದಿಂದ ಒಬ್ಬ ಒಳ್ಳೆಯ ಕಕಾದಂಬರಿಕಾರನ ಬಗ್ಗೆ ಮತ್ತು ಅವರ ಕಾದಂಬರಿ ಬಗ್ಗೆ ತಿಳಿವಂತಾಯ್ತು. ಧನ್ಯವಾದಗಳು.

ಸಾಗರದಾಚೆಯ ಇಂಚರ ಹೇಳಿದರು...

ಕಾದಂಬರಿ ಬರೆಯುವ ಸಾಹಸಕ್ಕೆ ಕೈ ಹಾಕಿ ಯಶಸ್ವೀ ಹಾದಿಯಲ್ಲಿರುವ ಸುಧೇಶ ಅವರಿಗೆ ಅಭಿನಂದನೆಗಳು
ಯುವ ಬರಹಗಾರರು ಬರೆಯಬೇಕು, ಬೆಳೆಯಬೇಕು
ಅವರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮೆಲ್ಲರದು
ಅವರಿಗೆ ಶುಭವಾಗಲಿ

Subrahmanya ಹೇಳಿದರು...

ಸುಧೇಶರ ಕಾದಂಬರಿಯನ್ನು ನಾನು ಓದುತ್ತಲೇ ಇದ್ದೇನೆ. ಬರಹಗಾರರ ತುಡಿತಕ್ಕೆ ನೀವೀಯುವ ಪ್ರೋತ್ಸಾಹ, ಸ್ಮರಣಿಯ.

ಮನಸಿನಮನೆಯವನು ಹೇಳಿದರು...

ರೀ ತೇಜಸ್ವಿನಿ ಹೆಗಡೆ-..,

ಹೌದೌದು.. ನಾನೂ ಅದನ್ನು ಓದುತ್ತಿದ್ದೇನೆ.
ನನಗೂ ಒಂದು ವಿಡಂಬನಾತ್ಮಕ ಕಾದಂಬರಿ ಬರೆಯಬೇಕೆಂಬ ಆಸೆ ಇದೆ.. ನೋಡೋಣ.

sunaath ಹೇಳಿದರು...

ತೇಜಸ್ವಿನಿ,
blogನಲ್ಲಿ ಕನ್ನಡ ಕಾದಂಬರಿಯೊಂದು ಬರುತ್ತಾ ಇದೆ ಎಂದು ಗೊತ್ತೇ ಇರಲಿಲ್ಲ. ಕಾದಂಬರಿಯ ಬಗೆಗೆ, ಕಾದಂಬರಿಕಾರರ ಬಗೆಗೆ ಒಳ್ಳೆಯ ಮಾಹಿತಿ ನೀಡಿದ್ದೀರಿ. ಥ್ಯಾಂಕ್ಸ್!

Shweta ಹೇಳಿದರು...

ತೇಜಕ್ಕಾ,ಸಿಕ್ಕಾಪಟ್ಟೆ ಥ್ಯಾಂಕ್ಸ್....ನಿಮ್ಮ ಲೇಖನಗಳನ್ನುಯಾವಾಗಲೂ ಓದುತ್ತೇನೆ ,ಇವತ್ಯಾಕೋ ಕೊಮೆಂಟಿಸುವ ಮನಸ್ಸಾಯಿತು...ಸುಧೇಷ್ ರ 'ನೀ ಬರುವ ಹಾದಿಯಲ್ಲಿ' ಓದುತ್ತಿದ್ದೇನೆ...

ಚಿತ್ರಾ ಹೇಳಿದರು...

ತೇಜೂ,
ಉತ್ತಮ ಪರಿಚಯ .
ನಾನೂ ಸಹ ಸುಧೇಶ್ ರ ಅಭಿಮಾನಿ. ಸರಳ , ಸುಂದರ ಹಾಗೂ ಸಹಜವಾದ ಬರವಣಿಗೆ , ಸದಾ ಕುತೂಹಲ ಕೆರಳಿಸುವ ತಿರುವುಗಳು , ಆಕರ್ಷಣೀಯ ಶೈಲಿ
ಅತಿ ಸಹಜವಾದ ಸಂಭಾಷಣೆಗಳಿಂದ ಮನಸೆಳೆಯುತ್ತಿದೆ ಸುಧೇಶ್ ರ " ನೀ ಬರುವ ದಾರಿಯಲ್ಲಿ " . ಮುಂದಿನ ಕಂತು ಎಂದು ಬರುವುದೋ ಎಂದು ಕಾಯುವಂತೆ ಮಾಡುತ್ತದೆ .

ಸೀತಾರಾಮ. ಕೆ. / SITARAM.K ಹೇಳಿದರು...

ಅ೦ತರ್ಜಾಲದಲ್ಲಿ ಕಾದ೦ಬರಿ ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.
ಚೆ೦ದದ ಪರಿಚಯದ ಲೇಖನ.
ಅ೦ದ ಹಾಗೆ ತಮಗೆ ನನ್ನ ಬ್ಲೊಗ್-ಪೋಸ್ಟಗಳ ಮಾಹಿತಿ ಬರುತ್ತಿದೆಯೆ? ಬಹುದಿನಗಳಿ೦ದ ತಮ್ಮ ಭೇಟಿಯಿಲ್ಲ. ಬಹಳ ಜನರಿಗೆ ನನ್ನ ಬ್ಲೊಗ್ update ಮಾಹಿತಿ ಲಭ್ಯವಾಗುತ್ತಿಲ್ಲವೆ೦ದು ತಿಳಿಯಿತು.please send your feed back.

ಮನಸು ಹೇಳಿದರು...

nija maanasa avare,

kaadambari bareyuvudu yarigu baruvudila aadare sudesh istu chikka vayassinalli antha olle prathibhe ide nijakku santasa tandide........

sudeshge oLLeyadaagali...

ಸುಧೇಶ್ ಶೆಟ್ಟಿ ಹೇಳಿದರು...

Thejakka....

eegaagle nimage thanks antha hELi hELi nimma jobu thumbi bittide antha gottu :)

matthomme Thanks :)

yaavudho ondu sandarbhadhalli manassinalli koreyuthidda vishayavannu kaadhambari roopakke tharabEkendu nirdhirisiddu aakasmikavaagai. Adhu ishtu dhoora nadedhu barutte anno kalpane nanagoo iralilla. Naanu illiyavaregoo bidadhe bareyuttirabEkaadhare adhakke neevoo kooda kaaraNa. Thappiddallella thiddi, ishtavaadhallella mechchuge vyaktha padisi nanna baravaNigeyannu sudhaarisalu kaaraNaraagiddeeri. Ega bloginalloo kooda nanna kaadhambariya bagge baredhu nanna kaadhambariyannu innoo hechchina janarige muttuva haage maadiddeeri.... nanna javabdhaari kooda hechchisiddeeri.

kaaleLeyuva janaru hechchuttiruvaaga nannanthaha yuva kaadhambarikaarana bennu thattuva kelasa maadiddeeri. nimage sadhaa kruthajna :)

ತೇಜಸ್ವಿನಿ ಹೆಗಡೆ ಹೇಳಿದರು...

ನನ್ನ ಪುಟ್ಟ "ಪರಿಚಯ"ಕ್ಕೆ ಸ್ಪಂದಿಸಿ, ಸುಧೇಶ್ ಅವರನ್ನು ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು. ಅವರ ಈ ಬೊಚ್ಚಲ ಕಾದಂಬರಿಯನ್ನು ಓದಿ, ಪ್ರತಿಕ್ರಿಯಿಸಿ, ಪ್ರೋತ್ಸಾಹಿಸೋಣ. ಆ ಮೂಲಕ ಅವರಿಂದ ಮತ್ತಷ್ಟು ಉತ್ತಮ ಮಟ್ಟದ ಕಾದಂಬರಿಗಳನ್ನು ನಿರೀಕ್ಷಿಸೋಣ. :)

@ಸುಧೇಶ್,

ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರ ಜಗತ್ತಿಗೆ ಪರಿಚಯಿಸುವ ಕೆಲಸವನ್ನಷ್ಟೇ ಮಾಡಿದ್ದೇನೆ. ಈ ಪ್ರತಿಭೆಯನ್ನು ಉಳಿಸಿಕೊಂಡು ಬೆಳೆಸಿಕೊಳ್ಳುವ ಮಹತ್ಕಾರ್ಯವನ್ನು ನೀವೇ ಮಾಡಬೇಕು. ಖಂಡಿತ ನಿಮ್ಮಿಂದ ಮತ್ತೂ ಉತ್ತಮ ಕಾದಂಬರಿಗಳು ಬರೆಯಲು ಸಾಧ್ಯ. ಪ್ರಯತ್ನಿಸಿ. ಫಲವನ್ನು ಓದುಗರಿಗೆ ಬಿಟ್ಟು ಬಿಡಿ:)

ಕಾಲೆಳೆಯುವವರು ಇಲ್ಲದ ಕ್ಷೇತ್ರವಿಲ್ಲ. ಅಂತಹವಿರಿದ್ದಾಗಲೇ ನಾವು ಮತ್ತಷ್ಟು ಗಟ್ಟಿಯಾಗಿ, ಬಲವಾಗಿ ಬೇರೂರಿ ಮೇಲೆ ಬೆಳೆಯಲಾಗುವುದು ಅಲ್ಲವೇ? ಧೃತಿಗೆಡದಿದ್ದರೆ ಆಯಿತು. ನಮ್ಮ ಪ್ರಾಮಾಣಿಕ ಪ್ರಯತ್ನದೊಂದಿದೆ ಕಾಣದ ಶಕ್ತಿಯೂ ಜೊತೆಗೂಡುವುದರಲ್ಲಿ ಸಂಶಯವಿಲ್ಲ.

ಒಳಿತಾಗಲಿ.

-ತೇಜಸ್ವಿನಿ ಹೆಗಡೆ.