ಸೋಮವಾರ, ನವೆಂಬರ್ 17, 2008

ಆರೋಗ್ಯಕರ ಹಾಗೂ ರುಚಿಕರ ಅತ್ತಿ (Fig)

ದಟ್ಸ್‌ಕನ್ನಡದಲ್ಲಿ ಪ್ರಕಟವಾಗುತ್ತಿರುವ ನನ್ನ ಅಂಕಣವಾದ "ಶಿರಸಿ ಭವನದ"ಲ್ಲಿ ಬಂದ ಈ ವಾರದ ಪಾಕ ವಿಧಾನ
-------------------------------------
ಹಾದಿಬೀದಿಗಳಲಿ ಸಿಗುವ ಅತ್ತಿ ಗಿಡದ ಚಿಗುರೆಲೆಗಳನ್ನು ಆಯ್ದು ತಂದು ಶ್ರದ್ಧೆಯಿಂದ ಅಡುಗೆ ಮಾಡಿ ಸವಿದು ಆರೋಗ್ಯ ವೃದ್ಧಿಸಿಕೊಳ್ಳುವವರಿಗೆ ಪರಿಣತರು ಹೇಳುವ ಕಿವಿಮಾತುಗಳಿವು. ಅನೇಕ ರೋಗಗಳಿಗೆ ಏಕೈಕ ರಾಮಬಾಣ ಅತ್ತಿ ತಂಬುಳಿ.
ಅತ್ತಿ ಮರದ ಉಪಯೋಗಗಳು ಹಲವಾರು. ಹಾಗಾಗಿ ಮೊದಲಿಗೆ ಅತ್ತಿ ಮರದ ಕಿರು ಪರಿಚಯ ಮಾಡಿಕೊಳ್ಳೋಣ : 10ರಿಂದ 15 ಮೀಟರ್ ಎತ್ತರ ಬೆಳೆಯುವ, ನಿತ್ಯ ಹರಿದ್ವರ್ಣ ಮರ ಎಂದೇ ಪರಿಚಿತವಾಗಿರುವ ಸಸ್ಯಪ್ರಬೇಧ ಅತ್ತಿಮರ. ಸಂಸ್ಕೃತದಲ್ಲಿ ಉದುಂಬರ(ಔದುಂಬರ**), ಹಿಂದಿಯಲ್ಲಿ ಗುಲೇರ್, ಇಂಗ್ಲೀಷಿನಲ್ಲಿ Fig, ತೆಲುಗಿನಲ್ಲಿ ಅತ್ತಿ ಮಾನು ಹಾಗೂ ತಮಿಳಿನಲ್ಲಿ ಅತ್ತಿ ಮರಂ ಎನ್ನುತ್ತಾರೆ. ಅತ್ತಿ ಮರದ ಎಲೆಗಳನ್ನು ವಿಶೇಷವಾಗಿ ಹೋಮ ಹವನಗಳಲ್ಲಿ ಸಮಿತ್ತಾಗಿಯೂ ಉಪಯೋಗಿಸುತ್ತಾರೆ.ವೈದ್ಯ ಎ.ಅರ್.ಎಂ.ಸಾಹೇಬ್ ಅವರ 'ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು' ಎಂಬ ಪುಸ್ತಕದಲ್ಲಿ ಯಾವ ರೀತಿ ಈ ಅತ್ತಿ ಮರದ ಎಲೆ, ಕಾಯಿ, ಹಣ್ಣು, ತೊಗಟೆ, ಹಣ್ಣಿನಿಂದೊಸರುವ ಬಿಳಿ ಹಾಲು ಎಲ್ಲವೂ ಸರಳ ಚಿಕಿತ್ಸೆಗಳಿಗೆ, ಕಾಯಿಲೆಗಳಿಗೆ ಮದ್ದು ಎಂಬುದನ್ನು ಸವಿಸ್ತಾರವಾಗಿ ವಿವರಿಸಲಾಗಿದೆ. ಉರಿಮೂತ್ರ, ವಿಪರೀತ ಬಾಯಾರಿಕೆ, ಬಾವು, ಸಕ್ಕರೆ ಕಾಯಿಲೆ ಮುಂತಾದ ರೋಗಗಳ ಉಪಶಮನಕ್ಕೆ ಅತ್ತಿ ಮರದ ವಿವಿಧ ಭಾಗಗಳಿಂದ ತಯಾರಿಸಿದ ಮನೆಮದ್ದುಗಳು ತುಂಬಾ ಪರಿಣಾಮಕಾರಿ.ಅತ್ತಿ ಮರ ಸಸ್ಯಪ್ರಬೇಧದ ಕೆಲವು ವಿವರಣೆಗಳು ಇಂತಿವೆ:-

Kingdom: Plantae
Division: Magnoliophyta
Class: Magnoliopsida
Order: Rosales
Family: Moraceae
Genus: Ficus
Species: F. racemosa


ಹೆಚ್ಚಿನ ವಿವರಣೆಗಳಲ್ಲಿ ಆಸಕ್ತಿ ಇರುವವರು ಈ ಕೆಳಗಿನ ಲಿಂಕ್‌ಗಳಿಂದ ಬಡೆಯಬಹುದಾಗಿದೆ.
http://en.wikipedia.org/wiki/Ficus_racemosa
http://www.exoticnatural.com/ficus.htm

ಅತ್ತಿ ಮರದ ಚಿಗುರೆಲೆಗಳಿಂದ ತಯಾರಿಸುವ ಈ ತಂಬುಳಿ ದೇಹಕ್ಕೆ ತುಂಬಾ ತಂಪು. ಅತ್ತಿ ಮರ ತುಂಬಾ ಎತ್ತರವಿರುವುದರಿಂದ ಚಿಗುರು(ಕುಡಿ)ಗಳನ್ನು ತೆಗೆಯಲು ತುಸು ಕಷ್ಟವಾಗಬಹುದು. ಆದರೆ ಎಲ್ಲೆಂದರಲ್ಲಿ, ದಾರಿಯಂಚಿನಲ್ಲೆಲ್ಲಾ ಬೆಳೆಯುವ ಈ ಮರದ ಸಣ್ಣ ಸಣ್ಣ ಗಿಡಗಳಿಂದ ಕುಡಿಗಳನ್ನು ಧಾರಾಳವಾಗಿ ಹೆಕ್ಕಬಹುದು.ಉತ್ತರ ಕನ್ನಡದ ಕಡೆ ವಿಶೇಷವಾಗಿ ತಯಾರಿಸುವ ಈ ಅತ್ತಿ ಕುಡಿ ತಂಬುಳಿ ಉಷ್ಣದೇಹದ ಪ್ರಕೃತಿಯವರಿಗೆ, ಬಾಯಿ ಹುಣ್ಣಿನಿಂದ ಬಳಲುತ್ತಿರುವವರೆ ತುಂಬಾ ಉಪಯುಕ್ತ. ತಯಾರಿಸಲೂ ಬಹು ಸುಲಭ ಹಾಗೂ ಸರಳ. ಕೇವಲ 15 ನಿಮಿಷಗಳ ಒಳಗೆ ತಯಾರಿಸಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
* ಅತ್ತಿ ಕುಡಿಯ ಹಸಿರಾದ ಚಿಗುರೆಲೆಗಳು, ಬಲಿತ ದೊಡ್ಡ ಎಲೆಗಳಲ್ಲ. 10-15
* ಜೀರಿಗೆ - 1/4 ಚಮಚ
* ಬಿಳೇ ಎಳ್ಳು - 1/2 ಚಮಚ
* ಚಿಟಿಕೆ ಇಂಗು
* ಕಡೆದ ಮಜ್ಜಿಗೆ - 1 ಲೋಟ
* ಹುರಿಯಲು ತುಪ್ಪ - 2 ಚಮಚ
* ತೆಂಗಿನ ತುರಿ - 1/4 ಭಾಗ
* ಬೆಲ್ಲ - ರುಚಿಗೆ ತಕ್ಕಷ್ಟು (ಬೆಲ್ಲ ಹಾಕಲು ಇಷ್ಟಪಡದವರು ಸಿಹಿ ಹಾಕದೆಯೂ ತಯಾರಿಸಬಹುದು)
* ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ:
ಮೊದಲಿಗೆ ಅತ್ತಿ ಕುಡಿಗಳನ್ನು ಚೆನ್ನಾಗಿ ತೊಳೆದು ಹೆಚ್ಚಿಟ್ಟುಕೊಳ್ಳಬೇಕು.
ಬಾಣಲೆಗೆ 2 ಚಮಚ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಜೀರಿಗೆ, ಇಂಗು ಹಾಗೂ ಬಿಳೇ ಎಳ್ಳುಗಳನ್ನು ಹಾಕಿ ಹುರಿಯಬೇಕು.
ಜೀರಿಗೆ ಹಾಗೂ ಎಳ್ಳುಗಳು ಚಟಗುಡಲು ಹೆಚ್ಚಿಟ್ಟಿರುವ ಅತ್ತಿ ಕುಡಿಗಳನ್ನು ಹಾಕಿ ಸಣ್ಣ ಉರಿಯಲ್ಲೇ ಹುರಿಯಬೇಕು.10 ನಿಮಿಷದೊಳಗೇ ಕುಡಿಗಳೆಲ್ಲಾ ಹುರಿದು ಗರಿಗರಿಯಾಗುತ್ತವೆ.
ಹುರಿದಿಟ್ಟ ಪದಾರ್ಥಗಳು ಚೆನ್ನಾಗಿ ತಣಿದ ನಂತರ ಕಾಯಿತುರಿಯನ್ನು ಸೇರಿಸಿ ನುಣ್ಣಗೆ ರುಬ್ಬಬೇಕು.
ರುಬ್ಬಿದ ಪದಾರ್ಥಕ್ಕೆ ಕಡೆದ ಮಜ್ಜಿಗೆಯನ್ನೂ, ರುಚಿಗೆ ತಕ್ಕಷ್ಟು ಉಪ್ಪನ್ನೂ, ಬೆಲ್ಲವನ್ನೂ ಹಾಕಿ ಕಲಕಿದರೆ ರುಚಿಯಾದ ಆರೋಗ್ಯಕರ ತಂಬುಳಿ ಸಿದ್ಧ. ಅತ್ತಿಕುಡಿ ತಂಬುಳಿಯನ್ನು ಅನ್ನಕ್ಕೆ ಕಲಸಿಕೊಂಡೋ ಇಲ್ಲಾ ಹಾಗೇ ಕುಡಿಯಲೂಬಹುದು.

** ಔದುಂಬರ : ತಮ್ಮ ಜೀವನದ ಒಂದು ಭಾಗವೇ ಎಂಬಂತಿದ್ದ ಅತ್ತಿ ಮರ ಅಥವಾ ಔದುಂಬರ ಮರದ ಕುರಿತು ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು 'ಔದುಂಬರ ಗಾಥೆ' ಎಂಬ ಕವನವನ್ನು ಬರೆದಿದ್ದಾರೆ. ಇದರ ಬಗ್ಗೆ ಬಲ್ಲವರು ಇನ್ನಷ್ಟು ಬೆಳಕು ಚೆಲ್ಲಬೇಕಾಗಿ ವಿನಂತಿ.

23 ಕಾಮೆಂಟ್‌ಗಳು:

ಚಂದ್ರಕಾಂತ ಎಸ್ ಹೇಳಿದರು...

ಅತ್ತಿ ತಂಬುಳಿಯ ಚಿತ್ರ ಬಾಯಲ್ಲಿ ನೀರೂರುವಷ್ಟು ಚೆನ್ನಾಗಿ ಕಾಣುತ್ತಿದೆ.ಮಾಡುವ ವಿಧಾನವನ್ನು ಚೆನ್ನಾಗಿ ಸರಳವಾಗಿ ವಿವರಿಸಿರುವಿರಿ.ಬೆಂಗಳೂರಿನಲ್ಲಿ ಅತ್ತಿ ಗಿಡ ಸಿಗುತ್ತದೆಯೇ? ಮಾರುಕಟ್ಟೆಗಳಲ್ಲಿ ಅದರ ಎಲೆಗಳು ಸಿಗುತ್ತವೆಯೇ? ನನಗೆ ತಂಬುಳಿಗಳೆಂದರೆ ಪ್ರಾಣ. ಇಷ್ತರಲ್ಲಿಯೇ
ಮಾಡುವೆ
ಅದರೊಂದಿಗೆ ನೀವು ಕೊಟ್ಟಿರುವ ವೈದ್ಯಕೀಯ ವಿವರಗಳು ಬಹಳ ಉಪಯುಕ್ತ.

shivu.k ಹೇಳಿದರು...

ಗೆಳೆಯನ ಮನೆಗೆ ಸಿರಸಿಗೆ ಹೋದಾರ ನಾನು ತಂಬುಳಿ ರುಚಿ ನೋಡಿದ್ದೆ. ನಂತರ ಅದರ ಮೇಲೆ ನನಗೆ ಈಗ ವಿಶೇಷವಾದ ಅನುರಾಗವುಂಟು. ಈಗ ನಮ್ಮ ಮನೆಯಲ್ಲೂ ಪ್ರತಿದಿನ ಇರುತ್ತದೆ. ಹತ್ತಿಕುಡಿ ತಂಬುಳಿಯನ್ನು ಒಮ್ಮೆ ನಮ್ಮ ಮನೆಯಲ್ಲಿ ಪ್ರಯತ್ನಿಸುತ್ತೇನೆ.
ರೆಸಿಪಿ ಕೊಟ್ಟದ್ದಕ್ಕೆ ಧನ್ಯ್ವವಾದಗಳು.

PaLa ಹೇಳಿದರು...

"ಗೋಳಿ" ಮರ ಅಂತ ಕರೀತಾರೆ ನಮ್ ಕಡೆ.. ಇದ್ರ ಚಿಗುರಿನ ತಂಬಳಿ ಮಾಡ್ತಾರೆ ಅಂತ ಗೊತ್ತೇ ಇರ್ಲಿಲ್ಲ..

PaLa ಹೇಳಿದರು...

ಗೋಳಿ ಮರ ಇದು: http://en.wikipedia.org/wiki/Sacred_fig

ತೇಜಸ್ವಿನಿಯವರೆ, ತಿದ್ದು ಪಡಿಗೆ ಧನ್ಯವಾದ,, ಇಲ್ಲದಿದ್ರೆ ಗೋಳಿ ಚಿಗುರಿನ ತಂಬಳಿ ಮಾಡಿ ಕಷ್ಟ ಪಡ್ತಾ ಇದ್ದೆ.. :)

ಸಮಿತ್ತಾಗಿ ಉಪಯೋಗಿಸುವುದು ಈ ಗೋಳಿ ಮರದ ಚಿಕ್ಕ ಪುಟ್ಟ ರೆಂಬೆ ಅಲ್ವ? ಅತ್ತಿ ಮರದ ಎಲೆ ಹಾಕ್ತಾರ?

sunaath ಹೇಳಿದರು...

ಇಷ್ಟು ಸೊಗಸಾದ ತಂಬುಳಿಗಾಗಿ ನಿನ್ನ ಮನೆಗೇ ಬರಬೇಕಾಗುತ್ತದೆ, ತೇಜಸ್ವಿನಿ!

’ಗೋಳಿ’ ಎಂದರೆ ’ಅತ್ತಿ’ ಎಂದು ತಿಳಿಸಿದ ಪಾಲಚಂದ್ರರಿಗೆ ಕೃತಜ್ಞತೆಗಳು.
-ಕಾಕಾ

ತೇಜಸ್ವಿನಿ ಹೆಗಡೆ ಹೇಳಿದರು...

@ಚಂದ್ರಕಾಂತ ಅವರೆ,

ಅತ್ತಿಗಿಡ ಸುಲಭವಾಗಿ ಎಲ್ಲೆಡೆ ಲಭ್ಯ. ಅತ್ತಿ ಮರದ ಬುಡದಲ್ಲೇ ಬೀಜ ಬಿದ್ದು ಸಣ್ಣ ಸಣ್ಣ ಗಿಡಗಳಾಗಿರುತ್ತವೆ. ಇಲ್ಲಾ ಆಸುಪಾಸಿನಲ್ಲಿ ಹುಡುಕಿದರೂ ಸಿಗುತ್ತವೆ. ನಿಮಗಿಷ್ಟವಾದದ್ದು ತುಂಬಾ ಸಂತೋಷ. ಶಿರಸಿ ಭವನಕ್ಕೂ ಭೇಟಿ ಕೊಡುತ್ತಿರಿ. ಫ್ರೀ ಸರ್ವೀಸ್ ಇದೆ ನೋಡಿ :)

@ಶಿವು ಅವರೆ,

ತುಂಬಾ ಸಂತೋಷ, ಆರೋಗ್ಯಕರ, ಸ್ವಾದಭರಿತ ತಂಬುಳಿಗಳನ್ನು ತಯಾರಿಸುವುದು ಬಲು ಸುಲಭ. ಶಿರಸಿ ಭವನದಲ್ಲಿ ಮತ್ತಷ್ಟು ತಂಬುಳಿಗಳು ಬರುವುದಕ್ಕಿವೆ ನೋಡಿ ಆನಂದಿಸಿ :)

@ಪಾಲಚಂದ್ರ ಅವರೆ,

ಹೌದು ಗೋಳಿ ಮರವೇ ಬೇರೆ ಅತ್ತಿ ಮರವೇ ಬೇರೆ. ದೇವರ ದಯೆ ನೀವು ಮಾಡುವ ಮೊದಲೇ ಕೇಳಿದಿರಿ, ನಾನು ಕೂಡಲೇ ತಿದ್ದಿದೆ.. ಇಲ್ಲದಿದ್ದರೆ... :)

ಹೌದು ಅತ್ತಿಯ ಎಲೆಗಳನ್ನು ಸಮಿತ್ತಾಗಿ ಉಪಯೋಗಿಸುತ್ತಾರೆಂದು ಅನ್ನ ತಂದೆಯವರು ಹೇಳಿದ್ದಾರೆ.

@ಕಾಕಾ,

ನಿಮಗೆ ಸದಾ ಸ್ವಾಗತವಿದೆ. ಖಂಡಿತ ಬನ್ನಿ. ತಂಬುಳಿಯನ್ನೇ ಮಾಡುವೆ. :) ಅಂದಹಾಗೆ ಗೋಳಿ ಅತ್ತಿಯಲ್ಲವೆಂದು ಈಗಾಗಲೇ ನಿಮಗೂ ಸ್ಪಷ್ಟಪಡಿಸಿದ್ದೇನೆಂದುಕೊಳ್ಳುವೆ. ಧನ್ಯವಾದಗಳು.

ಭಾರ್ಗವಿ ಹೇಳಿದರು...

ತೇಜಸ್ವಿನಿಯವರೇ,
ರುಚಿಕರವಾದ ತಂಬುಳಿ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ. ಅತ್ತಿ ಎಲೆ ಹುರಿಯಬೇಕೆಂದಿರುವಿರಿ, ಒಣಗಿಸಿಟ್ಟ ಅತ್ತಿ ಎಲೆಗಳಿಂದ ಮಾಡಬಹುದೆ? ಅತ್ತಿ ಬಗ್ಗೆ ಓದಿದ ತಕ್ಷಣ ಬಾಲ್ಯದ ನೆನಪು ಮರುಕಳಿಸಿತು. ಅತ್ತಿ ಹಣ್ಣು ಎಷ್ಟು ಚೆನ್ನಾಗಿರುತ್ತಿದ್ದವು.ಮೇಲೆ ಒಂದು ಚಿಕ್ಕ ತೂತು ಸಹ ಇರುತ್ತಿರಲಿಲ್ಲ .ಒಳಗೆ ಮಾತ್ರ ಬರಿ ಹುಳು(ಗಾಳಿ ಇರುವೆ ತರಹ ಇದ್ದ ನೆನಪು) ಎಲ್ಲಾ ಕಡೆ ಹಾಗೇನಾ ಈ ಅತ್ತಿಹಣ್ಣು? ಮತ್ತೊಮ್ಮೆ ಧನ್ಯವಾದಗಳು.

ತೇಜಸ್ವಿನಿ ಹೆಗಡೆ ಹೇಳಿದರು...

ಭಾರ್ಗವಿ ಅವರೆ,

ಸರಿಯಾಗಿ ಗುರುತಿಸಿದ್ದೀರಿ. ಹೌದು ಹಣ್ಣಿನೊಳಗೆ ಸಣ್ಣ ಸಣ್ಣ ಇರುವೆಗಳಿರುತ್ತವೆ. ಅತಿ ಕುಡಿ ಅಂದರೆ ಅತ್ತಿ ಗಿಡ/ಮರದ ಚಿಗುರೆಲೆಗಳೆಂದರ್ಥ. ಒಣಗಿಸಿದ ಎಲೆಗಳಲ್ಲಿ ಯಾವ ಸತ್ವವಾಗಲೀ ರುಚಿಯಾಗಲೀ ಇರಲಾರದು. ನಾನು ಒಣಗಿದೆಲೆಗಳನ್ನು ಮಾಡಿ ನೋಡಿಲ್ಲ ಈವರೆಗೂ. ಹಸಿರೆಲೆಗಳನ್ನೇ ಉಪಯೋಗಿಸಿದರೆ ಸೂಕ್ತವೇನೋ!

ಧನ್ಯವಾದಗಳು.

Ittigecement ಹೇಳಿದರು...

ಅತ್ತಿ ತಂಬುಳಿ ಚೆನ್ನಾಗಿ ಆಗುತ್ತದೆ, ನಮ್ಮಲ್ಲಿ ಮಾಡುತ್ತಾರೆ. ಅತ್ತಿ ಮರದ ಬೇರಿನಿಂದ ಸಿಗುವ ನೀರಿನಿಂದ "ಆಯಿ" (ಅಮ್ಮ) ಹಬ್ಬದ ದಿನಗಳಲ್ಲಿ ದೋಸೆ ಮಾದುತ್ತಿದ್ದರು. ಅದಕ್ಕೆ ಬಹಳ ಕಷ್ಟ ಪಡುತ್ತಿದ್ದರು. ಅದರ ಬೇರಿನಿಂದ ಸಿಗುವ ನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ ನಿಜವೆ?

ತೇಜಸ್ವಿನಿ ಹೆಗಡೆ ಹೇಳಿದರು...

ಪ್ರಕಾಶ್ ಅವರೆ,

ಹೌದು ಅತ್ತಿಯ ಪ್ರತಿಯೊಂದು ಭಾಗವೂ ತುಂಬಾ ಉಪಯುಕ್ತವಾದುದು. ಅತ್ತಿಯ ಬುಡದಿಂದೊಸರುವ ಹಾಲೂ ತುಂಬಾ ಆರೋಗ್ಯಕರ. ಹೆಚ್ಚಿನ ಮಾಹಿತಿಗಳನ್ನು ನೀವು ಎ.ಆರ್.ಎಂ.ಸಾಹೇಬ್‌ರವರ "ಬಾಬಬುಡನ್ ಗಿರಿ ಮತ್ತು ಸಿದ್ಧರಬೆಟ್ಟದ ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು" ಎಂಬ ಪುಸ್ತಕವನ್ನು ಓದಿ ತಿಳಿಯಬಹುದು.

ಧನ್ಯವಾದಗಳು.

jomon varghese ಹೇಳಿದರು...

ಇಲ್ಲಿರುವ ಚಿತ್ರ ನೋಡಿಯೇ ಅತ್ತಿ ತುಂಬುಳಿಯ ರುಚಿ ಸವಿದಿದ್ದಾಯಿತು. ಮಾಹಿತಿಪೂರ್ಣ ಲೇಖನ. ಧನ್ಯವಾದಗಳು.
-ಜೋಮನ್

ಭಾರ್ಗವಿ ಹೇಳಿದರು...

ತೇಜಸ್ವಿನಿಯವರೇ,
ಅಂದುಕೊಂಡೆ ಹಸಿ ಚಿಗುರೆಲೆ ರುಚಿ ಒಣಗಿಸಿದ್ದಕ್ಕೆ ಎಲ್ಲಿ ಬರುತ್ತೆ ಅಂತ. ಆದ್ರೂ ನೀವೇನಾದರೂ ಟ್ರೈ ಮಾಡಿರಬಹುದಾ ಅಂತ ಕೇಳಿದೆ.(ನೀವು ಹೌದು ಅಂದ್ರೆ ಇಲ್ಲೇ ಮಾದ್ಬೋದಲ್ಲ ಅಂತ ಆಸೆಯಿಂದ)ಈಗ ಇಂಡಿಯಾಕ್ಕೆ ಬರೋವರೆಗೆ ಕಾಯಬೇಕು ನೋಡಿ:-(.ಥ್ಯಾಂಕ್ಸ್.

ಸುಧೇಶ್ ಶೆಟ್ಟಿ ಹೇಳಿದರು...

Tejaswini avare,

maanasada barahagaLa vaividyathe hechchuththide....
nimma kathe maththu kavanagaLige kaayuththidEne... thumba dinavaaythu kathe, kavana haakade:)

ಅನಾಮಧೇಯ ಹೇಳಿದರು...

ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

ಚಿತ್ರಾ ಹೇಳಿದರು...

ತೇಜಸ್ವಿನಿ,

ಅತ್ತಿ ಎಲೆ ತಂಬುಳಿ ,ಅಂದ ಕೂಡಲೆ ಅದರ ಪುಟ್ಟ ಪುಟ್ಟ ಕೆಂಪು ಹಣ್ಣುಗಳು ನೆನಪಾದವು . ನೋಡಿ ಬಾಯಲ್ಲಿ ನೀರು ಬರುತ್ತಿತ್ತು ಆದರೆ , ಅದರೊಳಗಿನ ಹುಳು , ಇರುವೆ ಇತ್ಯಾದಿಗಳಿಂದಾಗಿ ತಿನ್ನಲಾಗದ ನಿರಾಸೆ. ಹೋಗಲಿ ಬಿಡು , ಅದರ ಎಲೆಯ ತಂಬುಳಿಯನ್ನಾದರೂ ಸವಿದರಾತು. ಥ್ಯಾಂಕ್ಸ್.

ಅಂದಹಾಗೇ, ಈಗ ಇನ್ನೆಂತ ಸೊಪ್ಪು/ ಕುಡಿ ಹುಡುಕ್ಯಂಡು ಹೋದೆ ಮಾರಾಯ್ತಿ ? ಸುಮಾರು ದಿನ ಆತು ಪತ್ತೆ ಇಲ್ಲೆ ನಿಂದು ?

ಅನಾಮಧೇಯ ಹೇಳಿದರು...

thanx for supporting

ಸುಪ್ತದೀಪ್ತಿ suptadeepti ಹೇಳಿದರು...

ಹೌದು, ಅತ್ತಿ ಮತ್ತು ಗೋಳಿ- ಎರಡೂ ಬೇರೆ ಬೇರೆ... ತೇಜಸ್ವಿನಿ ಹೇಳಿದಂತೆ, ಅತ್ತಿ ಮರ ಸುಮಾರು ಹತ್ತರಿಂದ ಹದಿನೈದಿ ಮೀಟರ್ ಎತ್ತರಕ್ಕೆ ಬೆಳೆಯುವ ಮರ. ಸಣ್ಣ ಕೆಂಪು ಹಣ್ಣು ಬಿಡುತ್ತದೆ. "ಅತ್ತಿಯ ಹಣ್ಣು ನಿರರ್ಥಕ" ಅನ್ನುವುದು ಎಲ್ಲರ ಭಾವನೆ. ಆದರೆ, ಅವೇ ಹಣ್ಣುಗಳು ಹಕ್ಕಿಗಳಿಗೆ ಆಹಾರವಾಗಿ ನಮಗೆ ಮತ್ತಷ್ಟು ಅತ್ತಿಯ ಗಿಡಗಳನ್ನು ಕೊಡುತ್ತವೆ.

ಇನ್ನು ಗೋಳಿ ಅನ್ನುವಂಥಾದ್ದು ದೊಡ್ಡ ಮರ. ಅರಳಿ, ಆಲ, ಗೋಳಿ- ಸಾಮಾನ್ಯ ಹೆಸರುಗಳು. ಬೆಂಗಳೂರಿನ ದೊಡ್ಡಾಲ ಇಂಥ ಒಂದು ಗೋಳಿ ಮರ. ಬಾಲಮುಕುಂದ ಮಲಗಿದ್ದು ಇಂಥ ದೊಡ್ಡ ಅರಳಿ/ ವಟ/ ಆಲ/ ಗೋಳಿಯ ಎಲೆಯ ಮೇಲೆ... ಇದರಲ್ಲೂ ಎಲೆ, ಕಾಂಡ, ಗೆಲ್ಲುಗಳಿಗೆ ಗಾಯವಾದರೆ ಬಿಳಿಯ ಹಾಲಿನಂಥ ದ್ರವ ಒಸರುತ್ತದೆ ಮತ್ತು ಅದು ಮನೆಮದ್ದುಗಳಲ್ಲಿ ಉಪಯೋಗವಾಗುತ್ತದೆಂದು ಕೇಳಿ ಬಲ್ಲೆ (ಮದ್ದಿನ ವಿಧಾನದ ಪರಿಚಯವಿಲ್ಲ). ಈ ಮರದ ವಿಶೇಷತೆಯೆಂದರೆ... ಗೆಲ್ಲುಗಳಿಂದಲೂ ಬೀಳಲುಗಳ ಬೇರು ಬಿಟ್ಟು ತನ್ನ ವಿಸ್ತಾರ ಹರಡಿಕೊಳ್ಳುವುದು. ಮೂಲ ಕಾಂಡಕ್ಕೆ ಗೆದ್ದಲು ಹಿಡಿದರೂ ಈ ಸಾವಿರ ಬೇರುಗಳ ಮೂಲಕ ಆಲ ಬಾಳುತ್ತದೆ. "ಆಲಕ್ಕೆ ಹೂವಿಲ್ಲ..." ಅನ್ನುವ ಗೀತೆಯಲ್ಲಿ ಇದೇ ಆಲವನ್ನು ಹೆಸರಿಸಿದ್ದು. ಬಹುಶಃ ಕಣ್ಣಿಗೆ ಕಾಣುವಂಥ ಹೂವನ್ನು ಬಿಡದೆ ಹಣ್ಣು ಕೊಡುವ ಮರ ಆಲ ಒಂದೇಯೇನೋ!?

ಗೋಳಿ, ಅತ್ತಿ- ಇವೆರಡನ್ನೂ ಸಮಿಧೆಯಾಗಿ ಹೋಮಗಳಲ್ಲಿ ಉಪಯೋಗಿಸುತ್ತಾರೆ. ಎರಡೂ Ficus ಜಾತಿಯ ಮರಗಳು. ವಿವರಣೆ ದೀರ್ಘವಾಗಿದ್ದಲ್ಲಿ ಕ್ಷಮೆಯಿರಲಿ. ನನಗೆ ತಿಳಿದಷ್ಟನ್ನು ಬೇರೆಯವರೊಡನೆ ಹಂಚಿಕೊಳ್ಳುವ ಕೆಟ್ಟಚಟಕ್ಕೆ ವಿದಾಯ ಹೇಳಲಾರೆ.

ತೇಜಸ್ವಿನಿ ಹೆಗಡೆ ಹೇಳಿದರು...

@ಜೋಮನ್ ಅವರೆ,

ಈ ತಂಬುಳಿಯನ್ನು ಮಾಡಿ ನೋಡಿ. ಆಗ ನೀವೇ ಹೇಳುವಿರಿ ಚಿತ್ರದಲ್ಲಿರುವುದಕ್ಕಿಂತಲೂ ಬಲು ರುಚಿಕರವೆಂದು :) ಧನ್ಯವಾದಗಳು.

@ಭಾರ್ಗವಿ,

ಅಮೇರಿಕಾದಲ್ಲಿ ಅತ್ತಿಮರ ಕಾಣಸಿಗದೇ? ಪ್ರಯತ್ನಿಸಿ. ಸಿಗದೇ ಹೋದರೆ ಭಾರತವೇ ಗತಿ :) ಧನ್ಯವಾದಗಳು.

@ಸುಧೇಶ್ ಅವರೆ,

ಅದೇಕೋ ಏನೋ ಬಲುದಿನಗಳಿಂದ ಯಾವ ಕಥೆ/ಕವನಗಳೂ ಹುಟ್ಟುತ್ತಿಲ್ಲ. ಪ್ರಯತ್ನಿಸುವೆ. ಪ್ರೋತ್ಸಾಹಕ್ಕೆ ಧನ್ಯವಾದಗಳು.

@ನೀಲಾಂಜಲ,

ನಿಮ್ಮ ಸಂಘಟನೆಗೆ ನನ್ನದೊಂದು ಕೈ ಅಷ್ಟೇ. ನಾನೇ ನಿಮಗೆ ಧನ್ಯವಾದಗಳನ್ನು ಹೇಳಬೇಕು.

@ಚಿತ್ರಾ,

ಎಂತಾ ಮಾಡವು ಹೇಳು. ಕೆಲವೊಂದು ತಾಪತ್ರಯಗಳಲ್ಲಿ ನಾಪತ್ತೆ ಆಗೋಜಿ.. ಬೇಗ ಬತ್ತಿ ಅಲ್ಲಿವರೆಗೂ ನನ್ನ ಮರ್ತಿಕಡ ಮತ್ತೆ :)


@ಅಕ್ಕ,

ನಮಗೆ ತಿಳಿದ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ತುಂಬಾ ಉತ್ತಮ ಚಟ :) ದಯವಿಟ್ಟು ಈ ರೀತಿಯೇ ನಿಮ್ಮೊಳಗಿನ ಉತ್ತಮ ವಿಚಾರಧಾರೆಗಳನ್ನು ನಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿರಿ,

ತುಂಬಾ ಧನ್ಯವಾದಗಳು.

ವನಿತಾ / Vanitha ಹೇಳಿದರು...

wow:))ಇದನ್ನು ಇವತ್ತೇ ನೋಡ್ತಿದ್ದೇನೆ.ನಮ್ಮನೆಯಲ್ಲಿ 'ತಂಬುಳಿ' faourite, ನನ್ ಮಗಳು ಅಮ್ಮ 'yummy soup' ಅಂತಾಳೆ.ಆಮೇಲೆ ನಂಗೆ ಅತ್ತಿ ಹಣ್ಣು ತುಂಬಾ ಇಷ್ಟ, ನಾನು ದಿನ ತಿನ್ತೇನೆ..I think it is rich in iron and fiber content:))

Narayan Bhat ಹೇಳಿದರು...

ಇನ್ನು ಮುಂದೆ ಪ್ರತಿ ವಾರವೂ ಶಿರಸಿ ಭವನದ ಸವಿರುಚಿಯನ್ನು ಮೆಲ್ಲಬಹುದು ಅನ್ನೋದೇ ಸಂತೋಷ..

ಸೀತಾರಾಮ. ಕೆ. / SITARAM.K ಹೇಳಿದರು...

ಅತ್ತಿ ತಂಬುಳಿ ಹೊಸದಾಗಿ ಕೇಳಿದೆ! ಮನೆಯವರಿಗೆ ಹೇಳುತ್ತೇನೆ.
ಅತ್ತಿ ಬಗ್ಗೆ ಮಾಹಿತಿಗೆ ಧನ್ಯವಾದಗಳು. ಸುಪ್ತದೀಪ್ತಿಯವರಿಗೂ ಧನ್ಯವಾದಗಳು.

Anuradha ಹೇಳಿದರು...

"ಆರೋಗ್ಯಕರ ರುಚಿಕರ ಅತ್ತಿ " ಗೊತ್ತಿಲ್ಲದ ಅನೇಕ ವಿವರಗಳನ್ನು ತಿಳಿದುಕೊಂಡಂತೆ ಆಯಿತು .ನಾವು ತಂಬುಳಿ ಗೆ ಮೆಣಸಿನಕಾಳು ಹಾಕುತ್ತೇವೆ ..ಎಳ್ಳು ಹಾಕುವುದು ಗೊತ್ತಿರಲಿಲ್ಲ ...ಮಾಡಿ ನೋಡಬೇಕು .ತುಂಬಾ ಉಪಯುಕ್ತ ಬರಹ .ಅಭಿನಂದನೆಗಳು .

Anuradha ಹೇಳಿದರು...

"ಆರೋಗ್ಯಕರ ರುಚಿಕರ ಅತ್ತಿ " ಗೊತ್ತಿಲ್ಲದ ಅನೇಕ ವಿವರಗಳನ್ನು ತಿಳಿದುಕೊಂಡಂತೆ ಆಯಿತು .ನಾವು ತಂಬುಳಿ ಗೆ ಮೆಣಸಿನಕಾಳು ಹಾಕುತ್ತೇವೆ ..ಎಳ್ಳು ಹಾಕುವುದು ಗೊತ್ತಿರಲಿಲ್ಲ ...ಮಾಡಿ ನೋಡಬೇಕು .ತುಂಬಾ ಉಪಯುಕ್ತ ಬರಹ .ಅಭಿನಂದನೆಗಳು .