ಮಂಗಳವಾರ, ಅಕ್ಟೋಬರ್ 15, 2013

ಕಲ್ಲೆಂದು ಒಗೆಯದೇ..... ಕಾಪಿಟ್ಟೆ ಕನಸೊಂದ

ಸರಿಸುಮಾರು ಅರ್ಧ ರಾತ್ರಿ ಕಳೆದ ಮೇಲೇ ಇರಬೇಕು.. ಇಂಥದ್ದೊಂದು ಲಹರಿಯೋ, ಕಥೆಯೋ, ಚಿಂತನೆಯೋ, ಆಲೋಚನೆಯೋ, ಹುಚ್ಚು ಕಲ್ಪನೆಯೋ.. ಏನೋ ಒಂದು ತಲೆಯೊಳಗೆ ಮಿಣ ಮಿಣಗೆ ಹೊಳೆದು ಅರೆ ಎಚ್ಚರವಾಗಿದ್ದು. ತಲೆಯ ಮೂಲೆ ಮೂಲೆಯನ್ನೂ ಕೊರೆದು.. ಕೆರೆದು ಬೆಳೆಯ ತೊಡಗಿದಂತೇ... ಇನ್ನು ಅಸಾಧ್ಯ ಎಂದೆನಿಸಿ, ಆ ಅದನ್ನು ಬರೆದೇ ಬಿಡುವುದೆಂದು ನಿರ್ಧರಿಸಿದ್ದು.

ಅದು ಹೀಗಿತ್ತು....

ಇಬ್ಬರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ಆ ಇಬ್ಬರು ಗಂಡಸರೋ, ಹೆಂಗಸರೋ, ಒಂದು ಗಂಡು, ಒಂದು ಹೆಣ್ಣೋ.. ಸಂಬಂಧಿಗಳೋ, ಸ್ನೇಹಿತರೂ... ಎನ್ನುವುದೂ ಮೊದಲು ತೀರಾ ಅಸ್ಪಷ್ಟವಾಗಿತ್ತು... ಅರೆ ಎಚ್ಚರಗೊಂಡು ಹೊಳೆದದ್ದನ್ನು ಮತ್ತೆ ಮೆಲುಕುಹಾಕತೊಡಗಿದಂತೇ ಆ ಅವರಿಬ್ಬರು ಪರಸ್ಪರ ಪರಿಚಿತ ಗಂಡೇ ಇರಬೇಕೆಂದು ಕಲ್ಪಿಸಿಕೊಂಡೆ. ಹಾಗೇ ಆ ಗಂಡಸರಿಬ್ಬರು ದಾರಿಯಲ್ಲಿ ಸಾಗುತ್ತಿರುವಾಗಲೇ ಅವರಿಗೆ ಕಂಡಿದ್ದು ದೂರ‍ದಲ್ಲೆರಡು ಹೊಳೆವ ಕಲ್ಲುಗಳು(?). ಮುಖ್ಯವಾಗಿ ಅವೆರಡೂ ಕಲ್ಲುಗಳೋ, ಇಲ್ಲಾ ವಜ್ರದ ಹರಳುಗಳೋ, ಇಲ್ಲಾ ಒಂದು ಕಲ್ಲು, ಇನ್ನೊಂದು ವಜ್ರವೋ ಎಂದು ತಿಳಿಯದ ಸಂದಿಗ್ಧತೆ ಅವರಿಬ್ಬರೊಳಗೂ. ಆದರೆ ಸಾಣೆ ಹಿಡಿದು ನೋಡಲು ಅವರು ಜೊಹರಿಗಳಂತೂ ಆಗಿರಲಿಲ್ಲ ಅನ್ನುವುದು ಮಾತ್ರ ನನ್ನೊಳಗೆ ಸುಸ್ಪಷ್ಟ. ಸರಿ... ಹೊಳೆದದ್ದೆಲ್ಲಾ ಚಿನ್ನವಲ್ಲಾ ಎನ್ನುವುದು ಇಲ್ಲಿ ತಾಗಿಸಲಾಗದು. ಕಾರಣ ಅದು ಚಿನ್ನವಂತೂ ಅಲ್ಲವೇ ಅಲ್ಲಾ ಎನ್ನುವುದು ಅವರಿಬ್ಬರಿಗೂ ಗೊತ್ತು. ಕಣ್ಣು ಕೋರೈಸುತ್ತಾ ಹೊಳೆಯುತ್ತಿದ್ದ ಆ ಹರಳುಗಳಲ್ಲಿ ವಜ್ರ ಯಾವುದು? ಬಿಳಿ ಹರಳು ಯಾವುದು? ಇಲ್ಲಾ ಎರಡೂ ವಜ್ರಗಳೋ, ಹರಳುಗಳೋ ಇರಬೇಕೆಂದು ಬಗೆದು.. ಇರಲಿ.. ವಜ್ರಗಳೇ ಆಗಿರಬಾರದೇಕೆ ಎಂದು ಆಶಿಸುತ್ತಾ ಒಂದು ತನಗೆ, ಇನ್ನೊಂದು ನಿನಗೆ ಎಂದು ಎತ್ತಿಕೊಂಡು ಹೊರಟವರು ಮನೆಯ ಪಿಠಾರಿಯೊಳಗಿರುವ ವೆಲ್ವೆಟ್ ಬಟ್ಟೆಯೊಳಗಿಟ್ಟು ಭದ್ರವಾಗಿ ಬೀಗ ಜಡಿದಿದ್ದಾರೆ. 

ಹೊತ್ತು ತಂದಿದ್ದು ಏನೆಂದು ಮೊದಲು ಅರಿಯುವ ತವಕ ಇಬ್ಬರಿಗೂ. ಹಾಗೆ ಅರಿಯಲು ಅವರಿಗಿರುವುದೂ ಎರಡೇ ಎರಡು ದಾರಿ. ಒಂದೋ ವಜ್ರದ ವ್ಯಾಪಾರಿಗೆ ಕೊಡುವುದು... ಆದರೆ ಹಾಗೆ ಕೊಡುವಾತ ತುಂಬಾ ನಂಬಿಗಸ್ಥನಾಗಿದ್ದಿರಬೇಕು. ಇಲ್ಲಾ ಅಂದರೆ ಇವೆರಡನ್ನೂ ಅವನು ಸುಳ್ಳೇ ಪುಳ್ಳೇ ಬಿಳಿಯ ಹರಳೆಂದು ಶರಾ ಬರೆದು, ತಾವು ಬೇಸೆತ್ತು ಹೊರ ಬಿಸುಟಮೇಲೆ, ಕಾದು ಹೊತ್ತೊಯ್ಯಬಾರದೆಂದಿಲ್ಲ! ಎರಡರಲ್ಲಿ ಒಂದು ವಜ್ರವಾದರೂ ಮಾಲು ಅವನ ಜೇಬಿಗೇ ತಾನೆ? ಒಂದೊಮ್ಮೆ ಆತ ಸಾಚಾ ಆಗಿ ಒಂದು ವಜ್ರವೆಂದು ಹೇಳಿದರೂ ಕಷ್ಟವೇ! ಇಬ್ಬರಲ್ಲಿ ಒಬ್ಬರ ಹೆಣ ಯಾರಿಂದಲೂ ಬೀಳಬಹುದು.. ಇಲ್ಲಾ ಬದುಕು ಹೆಣಕ್ಕಿಂತ ಕಡೆಯಾಗಲೂ ಬಹುದು. ಹೀಗಾಗಿ ಮೊದಲ ಸಾಧ್ಯತೆಯೆಡೆ ಸಾಗುವುದು ಅವರಿಬ್ಬರಿಗೂ ಸರಿ ಬರಲಿಲ್ಲ.

ಇನ್ನು ಎರಡನೆಯ ಸಾಧ್ಯತೆ, ಎರಡೂ ಕಲ್ಲುಗಳನ್ನು ಪ್ರಾಣಿಗೋ, ಆಗದ ಹೋಗದ ಯಾರ ಕೈ, ಮೈ, ಕಾಲಿಗಾದರೂ, ಯಾವುದೀ ಮಾಯದಲ್ಲಿ ಗೀರಿಯೋ.. ಇಲ್ಲಾ ಅರೆದು ಕುಡಿಸಿಯೋ ನೋಡುವುದು. ಅದೂ ಕಷ್ಟವೇ.... ತುಸು ಪುಡಿಮಾಡಿದರೂ, ಅದು ವಜ್ರವೇ ಆಗಿಬಿಟ್ಟಲ್ಲಿ ಅಷ್ಟೇ ಚೂರು ಲುಕ್ಸಾನು ಆಗಿಬಿಡುವ ಭಯ! 

ಊಹೂಂ.. ಇವ್ಯಾವುದರ ಉಸಾಬರಿಯೂ ಬೇಡ... ಮಾರದಿದ್ದರೂ ವಜ್ರಕ್ಕೆ ಅದರದ್ದೇ ಬೆಲೆ ಇದ್ದೇ ಇರುವುದು.. ಸಧ್ಯ ತಮ ತಮಗೆ ಸಿಕ್ಕಿದ್ದು ವಜ್ರವೆಂದೇ ಬಗೆದು ಜೀವನ ಪೂರ್ತಿ ವಜ್ರದ ಮಾಲೀಕನಾಗಿ ಬದುಕಿ, ಕೊನೆಗೆ ವಜ್ರವಿರುವ ಸುಳಿಹೂ ಕೊಡದೇ ಸತ್ತುಹೋಗುವುದೆಂದು ನಿರ್ಧರಿಸಿದ ಅವರಿಬ್ಬರೂ ತಮ್ಮ ತಮ್ಮ ಪಿಠಾರಿಯನ್ನು ಮನೆಯ ಹಿತ್ತಲಲ್ಲಿ ಆಳಕ್ಕೆ ಅಗೆದು ಹೂತು ಹಾಕಿ ಬಿಟ್ಟರು.

----

ಹಾಗೆ ಹೂತು ಹಾಕುವಾಗಲೇ ಪೂರ್ತಿ ಎಚ್ಚರವಾದ ನನ್ನ ಕಣ್ಗಳು ಬಿಳಿ ಹರಳಿನ ಹುಡುಕಾಟದಲ್ಲಿ ತೊಡಗಿವೆ. ವಜ್ರಗಳಿಗಿಂತ ಬಿಳಿ ಕಲ್ಲುಗಳೇ ತುಂಬಾ ಲೇಸು.... ಯಾವ ಎಡರು ತೊಡರು, ಸಾಣೆ, ಸಾಕಣೆಯ ಕಷ್ಟಗಳಲಿಲ್ಲದೇ ಹಾಗೇ ಟೇಬಲಿನ ಮೇಲಿಟ್ಟುಕೊಂಡು ಸಪ್ತವರ್ಣಗಳ ಹಾಯಿಸಿಕೊಂಡು ಹಾಯಾಗಿರಬಹುದೆಂದು.

-ತೇಜಸ್ವಿನಿ

ಮಂಗಳವಾರ, ಸೆಪ್ಟೆಂಬರ್ 10, 2013

ಹಬ್ಬ ಮತ್ತು ವ್ರತದ ನಡುವಿನ ವ್ಯತ್ಯಾಸ.

ಹಬ್ಬಕ್ಕೂ ವ್ರತಕ್ಕೂ ವ್ಯತ್ಯಾಸವಿದೆ. ಹಬ್ಬ/ಉತ್ಸವ ಸಾಮೂಹಿಕ, ಸಾರ್ವಜನಿಕ ಆಚರಣೆಯಾಗಿದೆ. ವ್ರತ ವೈಯಕ್ತಿಕ/ಕೌಟುಂಬಿಕ... ಒಮ್ಮೊಮ್ಮೆ ಒಂದು ಸಮುದಾಯಕ್ಕೆ ಸೀಮಿತ.

ಗಣೇಶ ಚತುರ್ಥಿ ಮೂಲತಃ ಶ್ರೀ ಸಿದ್ಧಿವಿನಾಯಕ ವ್ರತವೇ. ತಿಲಕರು ಸ್ವಾತಂತ್ರ್ಯ ಪೂರ್ವದಲ್ಲಿ ಸಂಘಟನೆಗಾಗಿ, ಎಲ್ಲಾ ಸಮುದಾಯಗಳ ಏಕತೆಗಾಗಿ ಇದಕ್ಕೆ ಒಂದು ಉತ್ಸವದ ಮೆರುಗುಕೊಟ್ಟು ಆಚರಿಸಲು ಕರೆಕೊಟ್ಟಿದ್ದರು. ಅದು ಈಗ ಹಬ್ಬವಾಗಿ, ಸಾಂಸ್ಕೃತಿಕ ಉತ್ಸವವಾಗಿ ಬೆಳೆದಿದೆ.

ನವರಾತ್ರಿ, ಗಣೇಶ ಚತುರ್ಥಿ ಇವೆಲ್ಲಾ ವ್ರತಗಳೇ. ನಾಗರ ಪಂಚಮಿಯೂ ಒಂದು ವ್ರತವೇ. ಆದರೆ ನವರಾತ್ರಿ, ನಾಗರ ಪಂಚಮಿ ಈಗ ಹಬ್ಬಗಳಾಗಿ ಆಚರಿಸಲ್ಪಡುತ್ತಿವೆ. ಕೃಷ್ಣಾಷ್ಟಮಿ, ರಾಮ ನವಮಿ - ಇವು ಕೃಷ್ಣ, ರಾಮರ ಹುಟ್ಟು ಹಬ್ಬಗಳಾಗಿವೆ. ಆದರೆ ಕೆಲವು ಮತಗಳಲ್ಲಿ ಕೃಷ್ಣ ಜಯಂತಿಯನ್ನೂ ವ್ರತವನ್ನಾಗಿ ಆಚರಿಸುತ್ತಾರೆ.

ನಿಜಾರ್ಥದಲ್ಲಿ ಉತ್ಸವವೆಂದು ಪರಿಗಣಿಸಲ್ಪಡುವುದು ದೀಪಾವಳಿಯೇ. ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ಒಯ್ಯುವ ಬೆಳಕಿನಹಬ್ಬ ನಿಜವಾಗಿಯೂ ಒಂದು ಸಾಮೂಹಿಕ, ಸಾರ್ವತ್ರಿಕ ಉತ್ಸವ/ಹಬ್ಬವಾಗಿದೆ.

ಆಚರಣೆ ಹಬ್ಬದ ರೀತಿಯಲ್ಲಾಗಿರಲಿ ಅಥವಾ ವ್ರತವಾಗಿರಲಿ... ಅದರ ಆಚರಣೆಯಿಂದ, ಅವರವರು ಆಚರಿಸುವ ರೀತಿ-ನೀತಿಯಿಂದ, ಆಚರಿಸುವವರಿಗೆ ಮತ್ತು ಆ ಆಚರಣೆಯನ್ನು ಹತ್ತಿರದಿಂದಲೋ ಇಲ್ಲಾ ದೂರ ನಿಂತೋ ನೋಡುವವರಿಗೆ ಸಂತಸ, ಸಮಾಧಾನ, ನೆಮ್ಮದಿ ತರುವಂಥದ್ದಾಗಿರಬೇಕು ಅಷ್ಟೇ. ಇಷ್ಟಕ್ಕೂ ಯಾವುದೇ ಹಬ್ಬಗಳಿರಲಿ, ವ್ರತಗಳಿರಲಿ, ಯಾವುದೇ ಆಚರಣೆ, ಸಂಪ್ರದಾಯಗಳಿರಲಿ... ಎಲ್ಲವೂ ಅವರವರ ಭಾವಕ್ಕೆ ಭಕುತಿಗೆ.  ಸಾಮಾಜಿಕ ಏಕತೆಯ ಜೊತೆ, ಸಹಿಷ್ಣುತೆಯೊಂದಿದ್ದರೆ ಎಲ್ಲವೂ ರಮಣೀಯ, ಆದರಣೀಯವೇ. "ಯದ್ಭಾವಂ ತದ್ಭವತಿ" :)

ನನಗಂತೂ "ತತ್ತ್ವಮಸಿ" ಇಷ್ಟ. ಸಮುದ್ರದಲ್ಲಿ ತೆರೆಗಳಿರುವಂತೇ... ಪರಮಾತ್ಮನಲ್ಲಿ ಆತ್ಮ.... ನನ್ನ ಆತ್ಮದಲ್ಲಿ ‘ಅವನ’ ಒಂದು ಅಂಶ.... :)

-ತೇಜಸ್ವಿನಿ.