ಶುಕ್ರವಾರ, ನವೆಂಬರ್ 2, 2012

ನಿರಂತರ

ಎದೆಯೊಳಗೆ ನೆನಪುಗಳ ಘನ ಮೋಡಗಳ ಢೀಗೆ
ಆಗಾಗೀಗ ಕೋರೈಸುವ ಯಾತನೆಗಳ ಛಳಕು
ಕೇಳಲಾರರು ಯಾರೂ ಎದೆಯಲ್ಲಾಡಿಸುತಿಹ
ಸಿಡಿಲಿನಾ ಸದ್ದು....

ತುಂಬಿಹ ಕಣ್ಗಳೊಳಗೆ ಬಡಿದಾಡುವ-
ರೆಪ್ಪೆಗಳೇಳಿಸೋ ತರಂಗಗಳು....
ಹನಿಯುತಿವೆ ಹನಿ ಬಿಂದುಗಳ ಸದ್ದಿಲ್ಲದೇ,
ತೋಯುವ ಕೆನ್ನೆಗಳಿಗೆ ತಡೆಯೊಡ್ಡಿ ಚಿಮ್ಮಲು
ಒಲುಮೆಯ ಸ್ಪರ್ಶವಿರದೇ, ನೋಯುತಿದೆ ಮನಸು.

ರವಿಯ ಸ್ಪರ್ಶವಿಲ್ಲದೇ, ಹರಿವ ನೀರು ಕಟ್ಟಿ,
ಹಸಿರು, ಹೂವ ಹೊತ್ತು ಬಸಿರಾಗದು ಧರೆ!
ಅಂಬಿಗನಾಸರೆಯಿಂದಲೇ ದೋಣಿ,
ದಡ ಸೇರುವುದು ಮುಳುಗದೇ...
ಬರಿಯ ನೆನಪುಗಳ ಜೊತೆಗೂಡಿ,
ಬಾಳುವುದೆಂತು ಹೇಳೋ ನರ-ಹರಿಯೆ?

ದಿನಕರನ ಪ್ರಭೆಯಿಂದಲೇ
ಬೆಳ್ಳಿಯ ಕಿರಣ ಸೂಸುವ ಶಶಿ,
ಹಾಯಿ ಹೋಣಿಗಿದ್ದರೊಂದು ಹುಟ್ಟು
ಸೇರಬಲ್ಲೆವು ನಾವೆ ದೂರ ತೀರ!
ನಿನ್ನೆ-ನಾಳೆಗಳ ನಡುವಿರುವ ಇಂದು,
ಸಾಗಲೇ ಬೇಕಿದೆ ಭೂತಕ್ಕೆ ಬೆನ್ನಾಗಿ,
ಭವಿತವ್ಯಕೆ ಮೊಗಮಾಡಿ.

-ತೇಜಸ್ವಿನಿ ಹೆಗಡೆ

ಸೋಮವಾರ, ಅಕ್ಟೋಬರ್ 8, 2012

ಅನುರೂಪ

ಕೊಡಲೇನು ನಿನಗೆ ಉಡುಗೊರೆಯ?
ಎಣಿಸ ಹೊರಟರೆ ಎಲ್ಲವೂ ಪೂರ್ಣ!

ಕಣ್ಗಳ ಹನಿ ಮುತ್ತುಗಳನೇ ಪೋಣಿಸಿ ಕೊಡ ಹೊರಟರೆ,
ನಿನ್ನ ತೋರ್ಬೆರಳುಗಳು ಅಣೆಕಟ್ಟು ಕಟ್ಟಿ,
ಚಿಮ್ಮಿಬಿಟ್ಟವು ಬಾನಂಗಳಕೆ.

ಹೂನಗುವನರಳಿಸಿ ನಿನ್ನಡಿಗಳಿಗಿಡ ಹೊರಟರೆ,
ನಗೆ ಮೊಗ್ಗೊಂದು ನಿನ್ನ ತುಟಿಯಂಚಲರಳಿ,
ನನ್ನೆದೆಯೊಳಿಹ ನಿನ್ನದೇ ಚಿತ್ರವನ್ನೇರಿತು!.

ನಿನ್ನ ನನಸಾಗದ ಕನಸುಗಳ ಕನವರಿಕೆಯಾಲಿಸಲು,
ತಲೆದಿಂಬಿಗೆ ನಾ ಕಿವಿಯಾಗಿ ಕುಳಿತರೆ,
ನಿನ್ನೊಂದೊಂದು ಕನಸೊಳಗೂ 
ನನ್ನಾಶಯಗಳನೇ ಕಂಡೆ.

ನಿನ್ನ ತಡವಿದಲೆಲ್ಲಾ ನನ್ನ ಮೈಯ ರೋಮಗಳು, ರಂಧ್ರಗಳು.
ನನ್ನ ಉಚ್ಛ್ವಾಸದೊಳಗಿನ ಬಿಸಿಯುಸಿರ ತಂಪಾಗಿಸೂ ನಿನ್ನ ನಿಶ್ವಾಸ.
ಒಳಗಿನ ಜೀವ ಸಂಚಲನದೊಳಗೆಲ್ಲಾ ನಿನ್ನದೇ ಪ್ರತಿಫಲನ.
ನಾ-ನೀ 
ಅರ್ಧನಾರೀಶ್ವರ!

~ತೇಜಸ್ವಿನಿ ಹೆಗಡೆ