ಸೋಮವಾರ, ಜನವರಿ 31, 2011

ಮಹಾತ್ಮ

ಅಂದೊಮ್ಮೆ ಆತ ಎಲ್ಲರಿಗೂ ದೇವರಾಗಿದ್ದ
ಕ್ರಮೇಣ ಹಲವರಿಗೆ ದೇವದೂತನಾಗಿ ಕಂಡ
ಮತ್ತೆ ಕೆಲವರು ಶಾಂತಿದೂತನೆಂದು ಕರೆದರೆ...
ಖಳನಾಯಕನೇ ಆದ ಒಂದು ಗುಂಪಿಗೆ!
ಒಮ್ಮೆ ಪ್ರಶ್ನೆಯಾಗಿ, ಮಗದೊಮ್ಮೆ ಉತ್ತರವಾಗಿ,
ಒಮ್ಮೆ ಸಂಕೀರ್ಣ, ಮಗದೊಮ್ಮೆ ಅತಿ ಸರಳ
ಒಮ್ಮೆ ಅಸಹಾಯಕ, ಮಗದೊಮ್ಮೆ ಜನನಾಯಕ
ಸಾಬರಮತಿಯ ಸಂತನಾದ, ಅಹಿಂಸೆಯ ಪ್ರವಾದಿಯಾದ
ಜನ್ಮಭೂಮಿಯ ಇಬ್ಭಾಗಕೆ ಮಾತ್ರ
ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡು,
ಮೌನದ ಸಹಿ ಹಾಕಿ ಬಿಟ್ಟ!!

ಸಂತನೆಂದರೂ ಸೈ, ಧೂರ್ತನೆಂದರೂ ಸೈ
ನಾನಾರೆಂದು ನಾ ಮಾತ್ರ ಬಲ್ಲೆ ಎಂಬಂತೆ
ಅರವತ್ಮೂರು ವರುಷಗಳಿಂದಲೂ,
ಆತ ಮುಗುಳು ನಗುತಲೇ ಇರುವ-
ಹೂದೋಟದ ನಡುವೆ, ಕಟ್ಟಡಗಳ ಮುಂದೆ,
ಪೋಸ್ಟರ್‌ಗಳಲ್ಲಿ, ಆಫೀಸಿನ ಫೋಟೋದೊಳಗೆ,
ನೋಟಿನಲ್ಲಿ, ನೋಟ್ ಪುಸ್ತಕದೊಳಗೆ...
ತುಂಡು ಪಂಚೆಯನುಟ್ಟು, ಊರುಗೋಲನು ಹಿಡಿದು
ಕನ್ನಡಕದಂಚಿನಿಂದಲೇ ಎಲ್ಲಾ ಅಧರ್ಮಗಳ ಕಾಣುತ್ತಾ,
ರಘುಪತಿ, ರಾಘವ, ಈಶ್ವರ, ಅಲ್ಲಾರನ್ನು ಕರೆಯುತ್ತಿರುವ....
ಆತನೋರ್ವ ಮಹಾತ್ಮನೇ ಸರಿ!

-ತೇಜಸ್ವಿನಿ
(ಫೋಟೋ ಕೃಪೆ : http://photos.merinews.com/newPhotoLanding.jsp?imageID=12116)

ಗುರುವಾರ, ಜನವರಿ 27, 2011

ಪದ್ಮಪಾಣಿಯೂ.... ನೀಲಿ ಸೋಡಾಗೋಲಿಯೂ..

Courtesy - http://www.flickr.com/photos/21644167@N04/4335305312/galleries/
ಆರಂಭಕ್ಕೂ ಮುನ್ನ : ಇದೇ ಜನವರಿ ೧೩ ರಂದು ನನ್ನ ಮಾನಸ, ಸ್ವತಃ ಮಾನಸದೊಡತಿಯ ಗಮನಕ್ಕೂ ಬಾರದಂತೆ, ಮೂರು ವರುಷಗಳನ್ನು ಪೂರೈಸಿಕೊಂಡು ತಣ್ಣಗೆ ನಾಲ್ಕನೆಯ ವರುಷಕ್ಕೆ ಕಾಲಿಟ್ಟಿತು. ಈ  ಸಂಭ್ರಮವನ್ನು ನಾನು, ಇತ್ತೀಚಿಗೆ ಓದಿದ ಎರಡು ಉತ್ತಮ ಪುಸ್ತಕಗಳ ಕಿರು ಪರಿಚಯ ಹಾಗೂ ಪುಟ್ಟ ವಿಮರ್ಶೆಯ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳ ಬಯಸಿದೆ. ಈ ಪುಸ್ತಕಗಳನ್ನು ನೀವೂ ಓದಿ... ಇತರರಿಗೂ ಓದಿಸಿ.

ಪದ್ಮಪಾಣಿ
(ಕಥಾ ಸಂಕಲನ)
ಲೇ : ಡಾ.ಕೆ.ಎನ್. ಗಣೇಶಯ್ಯ

Courtesy -  http://sushumnakannan.weebly.com
"ಪದ್ಮಪಾಣಿ", "ಕೆರಳಿದ ಕರುಳು", "ಮರಳ ತೆರೆಗಳೊಳಗೆ", "ಕಿತ್ತೂರ ರಂಜಿನಿ", "ಕಲೆಯ ಬಲೆಯಲ್ಲಿ", "ಉಗ್ರಬಂಧ", "ಮಲಬಾರ್" ಹಾಗೂ "ಧರ್ಮಸ್ತಂಭ" - ಒಟ್ಟೂ ೮ ಕಥೆಗಳನ್ನೊಳಗೊಂಡ ಈ ಕಥಾಸಂಕಲನ ಓದುಗರಲ್ಲಿ ಹೊಸ ಬಗೆಯ ಚಿಂತನೆಗೆ, ಆಲೋಚನೆಗೆ ಮಂಥನಕ್ಕೆ ಎಡೆಮಾಡಿಕೊಡುವುದರಲ್ಲಿ ಯಶಸ್ವಿಯಾಗಿದೆ.

ಯಶೋಧರೆ ಮೊದಲಿನಿಂದಲೂ ನನ್ನ ಬಹುವಾಗಿ ಕಾಡಿದ, ಕಾಡುತ್ತಿರುವ ಪಾತ್ರ. ಸಿದ್ಧಾರ್ಥ ನನಗೆ ಹೆಚ್ಚು ಮೆಚ್ಚುಗೆಯಾಗಿ ಹಾಗೂ ಅದಕ್ಕಿಂತ ಹೆಚ್ಚಾಗಿ ಪ್ರಶ್ನೆಯಾಗಿ ಕಾಡಿದ್ದೇ ಹೆಚ್ಚು. ಯಶೋಧರೆಯ ಮೇಲೆ ಕವನ, ಕಥೆ ಬರೆಯ ಹೋದಂತೆಲ್ಲಾ ಅವಳಿಗೆ ಸಲ್ಲಬೇಕಾದ್ದ ನ್ಯಾಯವನ್ನು ನಾನೂ ಕೊಟ್ಟಿಲ್ಲವೇನೋ ಎಂಬ ಭಾವ ತಾಗಿದಂತಾಗಿ ಅರ್ಧದಲ್ಲೇ ನಿಲ್ಲಿಸಿಬಿಟ್ಟೆ. ಆದರೆ "ಪದ್ಮಪಾಣಿ" ಕಥೆಯನ್ನು ಓದಿದ ಮೇಲೆ ಆಕೆಯ ಮೇಲೆ ಮತ್ತಷ್ಟು ವಿಷಾದ, ಅನುಕಂಪ ಮೂಡಿತು. ಹೆಣ್ಣಿನ ಭಾವನೆಗಳಿಗೆ ಮೊದಲಿನಿಂದಲೂ ಸಮಾಜ ತೋರುತ್ತಿದ್ದ ಅಸಡ್ಡೆ, ತಿರಸ್ಕಾರಗಳು ಮತ್ತಷ್ಟು ಹತ್ತಿರದಿಂದ ನೋಡುವಂತಾಯಿತು. ಈ ಕಥೆಯನ್ನೋದಿದ ಮೇಲೆ ಅಂತಿಮದಲ್ಲಿ ತನ್ನಿಂದ ತಾನೇ ಒಂದು ನಿಟ್ಟುಸಿರು ಹೊರಬರದಿರದು. ಇದೇ ರೀತಿಯ ಕಥಾವಸ್ತುವನ್ನೊಳಗೊಂಡ ಇನ್ನೊಂದು ಕಥೆ "ಧರ್ಮಸ್ತಂಭ".

"ಕೆರಳಿದ ಕರಳು" ಕಥೆಯ ಶೀರ್ಷಿಕೆ ಸ್ವಲ್ಪ ಸಿನಿಮೀಯ ಎಂದೆನಿಸಿದರೂ ಕಥೆಯೊಳಗೆ ಹಣೆದ ಪಾತ್ರದ ಚಿತ್ರಣಗಳು ಮಾತ್ರ ವಾಸ್ತವಿಕವಾಗಿವೆ. ತನ್ನ ಮಗುವನ್ನು ಕಳೆದುಕೊಂಡರೂ ಇನ್ನೋರ್ವಳ ಮಗುವಿಗಾಗಿ ಹೋರಾಡುವ ತಾಯಿಯ ಚಿತ್ರಣ ಮನಮುಟ್ಟುವಂತಿದೆ. ಹಾಗೇ ಜನಪದದಲ್ಲಿ ಹಾಸು ಹೊಕ್ಕಾಗಿರುವ ಕೆಲವು ಕಥೆಗಳು ಕಾಲಕ್ಕೆ ತಕ್ಕಂತೇ ರೂಪಾಂತರಗೊಳ್ಳುವುದನ್ನೂ ಲೇಖಕರು ಕಾಣಿಸಿದ್ದಾರೆ. ಇದೇರೀತಿಯ ಕಥಾವಸ್ತುವನ್ನೊಳಗಂಡ ಇನ್ನೊಂದು ಕಥೆ "ಮರಳ ತೆರೆಗಳೊಳಗೆ". ಇಲ್ಲಿ ಜಾನಪದದಲ್ಲಿರುವ ಕಥೆಗೆ ಭಿನ್ನವಾದ, ವಾಸ್ತವಿಕತೆಗೆ ಹತ್ತಿರವಾದ ಕಥೆಯೊಂದನ್ನು ಅರಸಿ, ಅದನ್ನು ಪದರ ಪದರವಾಗಿ ಬಿಡಿಸಿಡುವ ಲೇಖಕರ ನಿರೂಪಣಾ ಶೈಲಿ ಮಾತ್ರ ಅದ್ಭುತ.  

ಈವರೆಗೂ ನಾನು ಕೇಳಿರದ ಕಥಾವಸ್ತುವೇ "ಕಿತ್ತೂರ ರಂಜನಿ". ರಾಣಿ ಚೆನ್ನಮ್ಮಳ ಬದುಕಿನಲ್ಲಿ ನಡೆದ ಈ ಘೋರ ಘಟನೆಯ ಸತ್ಯ ತಿಳಿದವರೇ ಅತ್ಯಲ್ಪ. ಇದನ್ನು ಕಥಾವಸ್ತುವನ್ನಾಗಿಸಿ, ಅದನ್ನು ಹಣೆದ ರೀತಿ ಮಾತ್ರ ಬಹು ಶ್ಲಾಘನೀಯ. ಅತ್ಯಂತ ಕುತೂಹಲಭರಿತ ಹಾಗೂ ಅಚ್ಚರಿಗೀಡು ಮಾಡುವಂತಹ ಕಥೆಯಿದು. ಕಲೆಯ ಆಕರ್ಷಣೆಯಿಂದ, ಮೋಹದ ಬಲೆಯಿಂದ, ಅದರೊಳಗೆ ತನ್ನನ್ನು ತಾನೇ ಬಿಂಬಿಸಿಕೊಳ್ಳುವ ಅದಮ್ಯ ಆಶೆಯ ಹುಚ್ಚಿನಿಂದ ರಾಜ, ರಾಣಿಯರೂ ಪಾರಾಗಿಲ್ಲ ಎನ್ನುವುದನ್ನು "ಕಲೆಯ ಬಲೆಯಲ್ಲಿ" ಕಥೆಯೊಳಗೆ ಕಾಣಬಹುದು. ಶಾಂತಲೆಯ ಕಲೆಯ ಮೋಹ, ಇದರಿಂದ ಪ್ರಾಣ ತೆತ್ತುವ ಕಲಾವಿದ, ಚರಿತ್ರೆಯಲ್ಲಿ ನಾವು ಕಾಣದ ರಾಜ ವಿಷ್ಣುವರ್ಧನನ ಇನ್ನೊಂದು ಮುಖ - ಎಲ್ಲವೂ ಇಲ್ಲಿ ಬಹು ಚೆನ್ನಾಗಿ ಪ್ರಕಟಿತ. 

ಇಡೀ ಕಥಾ ಸಂಕಲನದಲ್ಲಿ ನನಗೆ ಅಷ್ಟು ಇಷ್ಟವಾಗದಿದ್ದ ಕಥೆಯೆಂದರೆ "ಉಗ್ರಬಂಧ". ಇದಕ್ಕೆ ಕಾರಣ ಮುಖ್ಯವಾಗಿ ಎರಡು. ಕೇವಲ ಮುಖ್ಯ ಕಥೆಯನ್ನು ತಿಳಿಸಲೋಸುಗ ಮಾತ್ರ, ಕಥೆಯಾರಂಭ ಹಾಗೂ ಅಂತ್ಯದಲ್ಲಿ ಹಣೆದಿರುವ ಅವಾಸ್ತವಿಕ ಪಾತ್ರಗಳು ಹಾಗೂ ಕಥೆಯೊಳಗೆ ಅಲ್ಲಲ್ಲಿ ಕಾಣುವ ದಂದ್ವ. ತನ್ನ ಮಗಳನ್ನೇ ಕೊಂದವನ ಮಗಳನ್ನು ಯಾವುದೇ ಹಿಂಜರಿಕೆ ಇಲ್ಲದೇ ಒಪ್ಪಿಕೊಳ್ಳುವ ಓರ್ವ ಆದರ್ಶವಾದಿ, ತನ್ನ ಅಪ್ಪ ಕಟ್ಟಾ ಉಗ್ರಗಾಮಿಯಾಗಿದ್ದರೂ ಆತನ ಮಗಳು ಮಾತ್ರ ಅಪ್ಪಟ ದೇಶಪ್ರೇಮಿಯಾಗುವುದು ಅಲ್ಲದೇ ಆತ ಕೊಂದ ಮನೆಯವರನ್ನೇ ತನ್ನವರೆಂದು ಪರಿಗಣಿಸುವುದು... ಈ ಎಲ್ಲಾ ಅಂಶಗಳಿಂದ ಈ ಕಥೆ ಮಾತ್ರ ನನಗೆ ಅಷ್ಟು ಹಿತ ನೀಡಲಿಲ್ಲ. ಆದರೆ ಅದನ್ನು ಮರೆಸುವಂತೆ ನಂತರ ಬರುವ "ಮಲಬಾರ್" ಹಾಗೂ "ಧರ್ಮಸ್ತಂಭ" ಕಥೆಗಳು ನಮ್ಮನ್ನು ಮತ್ತೆ ಮೈಮರೆಸುತ್ತವೆ.

ಗಣೇಶಯ್ಯನವರ "ಶಾಲಭಂಜಿಕೆ, "ಕನಕ ಮುಸುಕು" "ಕರಿಸಿರಿಯಾನ" - ಮುಂತಾದ ಪುಸ್ತಕಗಳನ್ನು ಮೊದಲೇ ಓದಿದ್ದೇನೆ. ಅವರ ಶೈಲಿಯೊಳಗಿನ ಹಿಡಿತ, ಒಂದು ತರಹದ ಹೊಸತನ, ಹೊಸ ಹೊಸ ವಿಷಯಗಳನ್ನು ಪ್ರಸ್ತುತಪಡಿಸುವ ಪರಿ, ವಾಸ್ತವಿಕತೆಗೆಳನ್ನು ತೆರೆದಿಡುವ ರೀತಿ ಎಲ್ಲವೂ ತುಂಬಾ ಇಷ್ಟವಾಗುತ್ತವೆ.ಹೀಗಾಗಿರಲು ಸಾಧ್ಯವಿಲ್ಲ ಎಂಬಲ್ಲಿಂದ ಆರಂಭಿಸಿ, ಹೀಗೂ ಆಗಿರಬಹುದಲ್ಲವೇ ಎಂದು ತೋರಿಸುತ್ತಲೇ..... ಹೀಗೇ ಆಗಿರಬೇಕು ಎಂಬಲ್ಲಿಗೆ ನಮ್ಮನ್ನು ಮುಟ್ಟಿಸುವ ಅವರ ನಿರೂಪಣಾ ಶೈಲಿ ಬಹು ಅಚ್ಚರಿ ಮೂಡಿಸುತ್ತದೆ. ಐತಿಹಾಸಿಕ ಪಾತ್ರ, ವಸ್ತು, ವಿಷಯಗಳ ಹಿಂದಿನ ಕಹಿ, ಕಟು ಸತ್ಯಗಳನ್ನು ಬಿಡಿಸಿಡುವ ಅವರ "ಪದ್ಮಪಾಣಿ" ಒಂದು ಉತ್ತಮ ಕಥಾಸಂಕಲನ ಎನ್ನುವುದರಲ್ಲಿ ಸಂದೇಹವಿಲ್ಲ.
-------&&&-------

ಮಿಥುನ
(ಐದು ಅನನ್ಯ ತೆಲುಗು ಕತೆಗಳು)
ಮೂಲ : ಶ್ರೀರಮಣ
ಕನ್ನಡಕ್ಕೆ : ವಸುಧೇಂದ್ರ


"ಮಿಥುನ", "ಬಂಗಾರದ ಕಡಗ", "ಮದುವೆ", "ಧನಲಕ್ಷ್ಮಿ", "ಸೋಡಾಗೋಲಿ" - ಈ ಐದು ಸುಂದರ ಕಥೆಗಳನ್ನೊಳಗೊಂಡ "ಮಿಥುನ", ಹಲವು ಕಾರಣಗಳಿಂದಾಗಿ ನನಗೆ ಬಹು ಮೆಚ್ಚುಗೆಯಾಯಿತು.

ಈ ಐದು ಕಥೆಗಳಲ್ಲಿ ನನಗೆ ಅತ್ಯಂತ ಇಷ್ಟವಾದವುಗಳೆಂದರೆ - "ಮಿಥುನ", "ಬಂಗಾರದ ಕಡಗ" ಹಾಗೂ "ಸೋಡಾಗೋಲಿ".

ದಾಂಪತ್ಯದ ಚೆಲುವು, ಸವಿ ವರುಷಗಳೆದಂತೇ ಹೆಚ್ಚಾಗುವುದೆನ್ನುತ್ತಾರೆ ಹಲವರು.. ತಿಳಿದವರು. ಆದರೆ ಅದು ಹಾಗಾಗುವುದಾರೆ ಹೇಗಾಗಬಹುದೆನ್ನುವುದನ್ನು ಲೇಖಕರು "ಮಿಥುನದಲ್ಲಿ" ಬಹು ಸುಂದರವಾಗಿ ಕಾಣಿಸಿದ್ದಾರೆ. ಬುಚ್ಚಿಲಕ್ಷ್ಮಿ ಹಾಗೂ ಅಪ್ಪದಾಸು ವೃದ್ಧ ದಂಪತಿಗಳ ನಡುವಿನ ನವನವೀನ ಪ್ರೇಮವನ್ನು, ದಾಂಪತ್ಯ ಸಾರವನ್ನು, ಅದರೊಳಗಿನ ಸ್ವಾರಸ್ಯವನ್ನು- ನವಿರಾದ ಹಾಸ್ಯ, ಕಣ್ಣಂಚು ಒದ್ದೆಮಾಡುವಂತಹ ಭಾವ ಹಾಗೂ ಇಲ್ಲೇ ಪಕ್ಕದಲ್ಲೇ ಎಲ್ಲೋ ಇವರು ಇರಬಹುದೇನೋ ಎಂಬಷ್ಟು ಆಪ್ತತೆಯನ್ನು ತುಂಬುವುದರ ಮೂಲಕ ಕಾಣಿಸಿದ್ದಾರೆ. ಈ ದಂಪತಿಗಳೊಳಗಿನ ಪ್ರೀತಿ ತುಂಬಿದ ಜಗಳಾಟ, ಕಟಿಪಿಟಿ, ಹಸಿಮುನಿಸು, ಸಾಂಗತ್ಯ ಎಲ್ಲವನ್ನೂ ಅವರ ದೂರದ ಸಂಬಂಧಿಯೋರ್ವ ಅಡಗಿಕೊಂಡು, ಒಮ್ಮೊಮ್ಮೆ ಎದುರು ಬಂದು ನೋಡಿ ಸವಿಯುವಾಗ ಒಳಗೆಲ್ಲೋ ಸಣ್ಣ ಹೊಟ್ಟೆಯುರಿ ನಮ್ಮೊಳಗೆ ಉಂಟಾಗದಿದ್ದರೆ ಹೇಳಿ. ನಾನೇ ಅಲ್ಲಿರಬಾರದಿತ್ತೆ... ಆ ಪರಿಸರದಲ್ಲಿ, ಆ ಮನೆಯಲ್ಲಿ, ಆ ದಂಪತಿಗಳ ಸರಸ-ವಿರಸಗಳನ್ನು ಸವಿಯುತ್ತಾ ನಾನೇ ಅಲ್ಲಿರಬಾರದಿತ್ತೆ.... ಎಂದು ಕಥೆಯನ್ನು ಓದುತ್ತಿರುವಾಗ/ಓದಿದ ಮೇಲೂ ಹಲವು ಬಾರಿ ನನ್ನ ಮನ ಬಯಸಿತ್ತು. ಅಷ್ಟರ ಮಟ್ಟಿಗೆ ತಾದಾತ್ಮ್ಯತೆಯನ್ನು ಸಾಧಿಸಿದ್ದಾರೆ ಲೇಖಕರು. ವಿಶಿಷ್ಟ ರೀತಿಯ ಶೈಲಿ ಹಾಗೂ ನಿರೂಪಣೆಯನ್ನೊಳಗೊಂಡ ಕಥೆ ಬಹುಕಾಲ ನಮ್ಮನ್ನು ಕಾಡದಿರದು.

"ಬಂಗಾರದ ಕಡಗ"  ಕಥೆಯನ್ನು ಬಹು ಹಾಸ್ಯಮಯವಾಗಿ ಬರೆದಿದ್ದರೂ ಅದರೊಳಗಿನ ವಾಸ್ತವಿಕತೆ ಮಾತ್ರ ಇಂದಿಗೂ ಪ್ರಸ್ತುತ. ಅಜ್ಜಿ, ಮೊಮ್ಮಗನ ಪ್ರೇಮ, ಕುರುಡು ಆಚಾರ-ವಿಚಾರಗಳನ್ನು... ಮೂಢನಂಬಿಕೆಗಳನ್ನು ತಿರಸ್ಕರಿಸುವ ಆ ಹಳೆ ತಲೆಮಾರು.. ಎಲ್ಲವನ್ನೂ ಹಾಸ್ಯದಹೊನಲಿನಲ್ಲೇ ಚಿತ್ರಿಸಿದ್ದಾರೆ. ಓದುತ್ತಿದ್ದಂತೇ ನಗು ತನ್ನಿಂದ ತಾನೇ ಉಕ್ಕಿಬರದಿರದು. ಹಾಗೇ ಅಂತಹ ಓರ್ವ ಅಜ್ಜಿಯ ಕೊರತೆಯನ್ನೂ ಮನಸು ನೆನೆದು ಒದ್ದೆಯಾಗುವುದೂ ಸಹಜ.

"ಸೋಡಾಗೋಲಿ" - ಇದು ಮಾತ್ರ ನನಗೆ ಬಹು ಅಪೂರ್ವ, ಹಾಗೂ ಅನೂಹ್ಯ ಅನುಭವವನಿತ್ತ ಕಥೆ. ಇದಕ್ಕೆ ಕಾರಣ ನನ್ನ ಬಾಲ್ಯ. ಮೊದಲಿನಿಂದಲೂ ನನಗೆ ಈ ಮಣಿಗಳನ್ನು ಒಟ್ಟು ಹಾಕುವ ಹುಚ್ಚು. ಅದಕ್ಕಾಗಿ ಹಿಂದೆ ನಾನು ಪಟ್ಟ ಪರಿಪಾಟಲು ನನ್ನ ಅಪ್ಪನಿಗೆ ಹಾಗೂ ಆ ದೇವರಿಗೆ ಮಾತ್ರ ಗೊತ್ತು :) ಅದರಲ್ಲೂ ನನಗೆ ನೀಲಿ ಸೋಡಾಗೋಲಿಯ ಹುಚ್ಚು ತುಂಬಾ ಇತ್ತು (ಸ್ವಲ್ಪ ಈಗಲೂ ಇದೆ...:)). ಅವರಿವರನ್ನು ಕಾಡಿ ಬೇಡಿ... ಅಪ್ಪನಿಗೂ ಇದರ ಬಗ್ಗೆ ಕೊರೆದೂ ಕಾಡಿ, ಎಲ್ಲಿಂದಲೋ ಒಂದೇ ಒಂದು ನೀಲಿ ಸೋಡಾಗೋಲಿ ಸಂಪಾದಿಸಿದ್ದನ್ನು ಅದು ಹೇಗೋ ಕಳೆದುಕೊಂಡು ಬಿಟ್ಟಿದ್ದೆ. ಅದಕ್ಕಾಗಿ ತುಂಬಾ ಪರಿತಪಿಸಿದ್ದೆ. ಅದೇಕೋ ಏನೋ ಆಮೇಲೆ ನನಗೆ ಬೇರೆ ನೀಲಿ ಸೋಡಾಗೋಲಿ ಸಿಗಲೇ ಇಲ್ಲ. ನನ್ನ ಆ ಅನುಭವವೇ ಈ ಕಥೆಯೊಳಗಿನ ಹುಡುಗನೊಂದಿಗೆ ಎದ್ದು ಬಂದಂತೆ ಆಯಿತು. ಒಂದು ರೀತಿಯ ಕುತೂಹಲ, ಭಾವೋದ್ವೇಗ ಉಂಟಾದದ್ದೂ ಸತ್ಯ. ಅಂತಿಮದಲ್ಲಿ ಆತನಿಗೆ ಹಲವು ನೀಲಿ ಗೋಲಿಗಳು ಸಿಕ್ಕಾಗ, ನನಗೇ ಅವು ಸಿಕ್ಕಷ್ಟು ಆನಂದ ಹಾಗೂ ತೃಪ್ತಿ ಮೂಡಿತ್ತು. ಸದಾ ಕಾಡುವ ಈ ಕಥೆಯ ನೀಲಿ ಪ್ರಿಂಟ್ ಮನದೊಳಗೆ ಚೆನ್ನಾಗಿ ಅಚ್ಚಾಗಿದೆ.

"ಧನಲಕ್ಷ್ಮಿ", "ಮದುವೆ" - ಈ ಕಥೆಗಳೂ ಚೆನ್ನಾಗಿವೆ. ವಿಡಂಬನಾತ್ಮಕವಾಗಿದ್ದು ಹೆಚ್ಚು ವಾಸ್ತವಿಕತೆಯಿಂದ ಕೂಡಿವೆ. ಒಟ್ಟಿನಲ್ಲಿ "ಮಿಥುನ" ಬದುಕಿನ ಸುಮಧುರ ಕ್ಷಣಗಳನ್ನು, ಅವಗಳೊಳಗೆ ಬೆಸೆದಿರುವ ನೆನಪಿನ ಹಂದರಗಳನ್ನು ತೆರೆದಿಡುವ ಜೊತೆಗೆ ನಮ್ಮ ಹಳೆಯ ನೆನಪುಗಳನ್ನು ಹೊರಗೆಳೆವ ಕಥಾಸಂಕಲನ. ಮೂಲ ನಾನು ಓದಿಲ್ಲ. ಆದರೆ ಅನುವಾದ ತುಂಬಾ ಇಷ್ಟವಾಯಿತು.

ಕೊನೆಯಲ್ಲಿ :  "ತೇಜಕ್ಕ ಈ ಪುಸ್ತಕ ಓದಿ.. ಮೂಡ್ ಫ್ರೆಶ್ ಆಗೊತ್ತೆ ನೋಡಿ.." ಎಂದು, "ಮಿಥುನ" ಪುಸ್ತಕವನ್ನು ಓದಲು ಕೊಟ್ಟು, ಆ ಮೂಲಕ ನನ್ನೊಳಗೆ "ನೀಲಿ ಸೋಡಾಗೋಲಿ"ಯ ಕನಸನ್ನು ಮತ್ತೆ ಎಚ್ಚರಿಸಲು ಹಾಗೂ ಇದರೊಂದಿಗೆ ಬೆಸೆದಿರುವ ಸವಿ ನೆನಪುಗಳನ್ನು ಮರುಕಳಿಸಲು ಕಾರಣಳಾದ ಮಾನಸ ಸಹೋದರಿ "ಲಕ್ಷ್ಮಿ"ಗೆ ತುಂಬಾ ಧನ್ಯವಾದಗಳು :)


ನೀಲಿ ಸೋಡಾಗೋಲಿಗಾಗಿ ನಾನು ಇನ್ನೂ ಪ್ರಯತ್ನಿಸುತ್ತಲೇ ಇದ್ದೇನೆ. ತಾಯಿಯಂತೇ ಮಗಳು ಎಂಬಂತೆ "ಅದಿತಿಗೂ" ಈ ಗೀಳು ಹತ್ತಿದೆ. ಎಲ್ಲಿ ಸೋಡಾ ಬಾಟ್ಲಿ ಕಂಡರೂ ಒಂದನ್ನಾದರೂ ಒಡೆದು ನೀಲಿಗೋಲಿ ತೆಗೆದು ಒಮ್ಮೆ ಸವರಿ ಅವಳ ಪುಟ್ಟ ಕೈಗಳೊಳಗೆ ಇಡುವ ಹುಚ್ಚು ಆಸೆ ಆಗಾಗ ಕಾಡುತ್ತಿರುವುದು ಮಾತ್ರ ಈ ನೀಲಿ ಸೋಡಾಗೋಲಿಯಾಣೆಗೂ ಸತ್ಯ! (ನೀಲಿ ಸೋಡಾಗೋಲಿ ಇದ್ದವರು ಕೊಟ್ಟರೆ ತುಂಬಾ ಸಂತೋಷ..:))

----

ನಿಮ್ಮೆಲ್ಲರ ಹಾರೈಕೆ, ಪ್ರೋತ್ಸಾಹ, ಬೆಂಬಲ ಹೀಗೇ ಸದಾ ಮಾನಸದೊಂದಿಗಿರಲೆಂದು ಹಾರೈಸುತ್ತಾ...

- ತೇಜಸ್ವಿನಿ ಹೆಗಡೆ.