ಮಂಗಳವಾರ, ಅಕ್ಟೋಬರ್ 20, 2020

ಮಧ್ಯಘಟ್ಟ

ಕಾಡನ್ನು ಬಹಳ ಪ್ರೀತಿಸುವ, ಹಸಿರನ್ನು ಧ್ಯಾನಿಸುವ, ವನ್ಯಜೀವಿಗಳ ಕುರಿತು, ಅಲ್ಲಿಯ ಸಸ್ಯಸಂಕುಲಗಳ ಕುರಿತು ಅಪಾರ ಆಸಕ್ತಿಯುಳ್ಳ, ಅಧ್ಯಯನ ಮಾಡುತ್ತಿರುವ/ಮಾಡಬೇಕೆಂದಿರುವ, ದೂರದ ನಗರಗಳಲ್ಲಿದ್ದೂ ತಮ್ಮ ಹುಟ್ಟೂರಿನಲ್ಲಿ(ಹಳ್ಳಿಗಳಲ್ಲಿ) ಅದರ ಸುತ್ತಲಿನ (ಅಳಿದುಳಿದ) ಕಾಡುಗಳಲ್ಲಿ, ಪರಿಸರದಲ್ಲಿ ಮನಸ್ಸನ್ನು ನೆಟ್ಟಿರುವ, ಕನವರಿಸುತ್ತಿರುವ – ಇವರೆಲ್ಲರೂ ಮುದ್ದಾಂ ಓದಲೇಬೇಕಾದ ಸತ್ಯಘಟನೆಯಾಧಾರಿತ ಅಪರೂಪದ ಕಾದಂಬರಿಯಿದು! ಈ ಕಾದಂಬರಿಯ ಲೇಖಕರು ಶ್ರೀಯುತ ಶಿವಾನಂದ ಕಳವೆಯವರು.
ಕಾಡನ್ನು ಅರಿಯಲು, ಅದರ ನಿಗೂಢತೆಯನ್ನು, ಜೀನಾಡಿಯನ್ನು ಅಭ್ಯಸಿಸಲು ಪರಿಸರಪ್ರೇಮ, ಅಪಾರ ತಾಳ್ಮೆ, ಪರಿಶ್ರಮ, ಕುತೂಹಲಭರಿತ ಆಸಕ್ತಿ ಅತ್ಯಗತ್ಯ ಎಂದು ಹಿರಿಯರು ಹೇಳಿದ್ದು ಕೇಳಿದ್ದೇನೆ. ಇದೆಲ್ಲವೂ ಈ ಕಾದಂಬರಿಯ ಓದಿಗೂ ಅತ್ಯಗತ್ಯ.
ಕಾಡನ್ನು ಅದರ ಗರ್ಭದೊಳು ಹೊಕ್ಕಿಯಲ್ಲದಿದ್ದರೂ, ಕನಿಷ್ಟ ಅಂಚನ್ನಾದರೂ ಸವರಿಯೋ ಒಳಗೆಳೆದುಕೊಳ್ಳುವ ಅದಮ್ಯ ಆಶಯ ನನ್ನೊಳಗಿದ್ದರೂ ಸದ್ಯಕ್ಕಂತೂ ಅದು ನೆರವೇರುವ ಲಕ್ಷಣ ಕಾಣದಿದ್ದಾಗ ಮಧ್ಯಘಟ್ಟ, ಪುನರ್ವಸು, ತಲೆಗಳಿ - ಇಂತಹ ಹಸಿರೇ ಉಸಿರಾಗಿರುವ, ಹಸಿರಿನೊಡನೆ ಸಮಸ್ತ ಜೀವಿಗಳನ್ನು ಬೆಸೆದಿರುವ ಅಪೂರ್ವ ಪುಸ್ತಕಗಳ ಓದು ದಟ್ಟ ಕಾನಿನೊಳಗೆ ಹೊಕ್ಕಂತಹ ಅನುಭವವನ್ನೇ ನೀಡಿದೆ. ಇದಕ್ಕಾಗಿ ನಾನು ಈ ಎಲ್ಲಾ ಪುಸ್ತಕಗಳ ಲೇಖಕರಿಗೆ ಕೃತಜ್ಞಳಾಗಿದ್ದೇನೆ. ನನ್ನದಲ್ಲದ, ನಾ ಕಾಣಲಾಗದ ಆ ಅದ್ಭುತ ಜಗತ್ತನ್ನು ನನ್ನೊಳಗೆ ಸಶಕ್ತವಾಗಿ ತುಂಬಿಕೊಟ್ಟಿವೆ ಈ ಎಲ್ಲಾ ಪುಸ್ತಕಗಳು.
ಇನ್ನು ಪ್ರಸ್ತುತ ಮಧ್ಯಘಟ್ಟ ಕಾದಂಬರಿಯ ಕುರಿತು ಹೇಳಬೇಕೆಂದರೆ…
ಸ್ವಾತಂತ್ರ್ಯ ಸಿಗುವ ಸಮಯದಲ್ಲೇ ದೂರದ ತ್ರಿಶೂಲಿನಿಂದ ಶಿರಸಿಯ ಮಧ್ಯಘಟ್ಟ (ಈಗಿನ ಮತ್ತಿಘಟ್ಟ)ದ ಕೆಳಗಿನಕೇರಿಯ ಹೊಸಕಟ್ಟಿನ 60ರ ಹರೆಯದ ವಿಧುರ ಗೋಪಯ್ಯ ಹೆಗಡೆ ಅವರಿಗೆ ಎರಡು ವರುಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದ ತನ್ನ 18ರ ಹರೆಯದ ಮಗಳು ಶ್ರೀದೇವಿಯನ್ನು ಕಾಣಲೋಸುಗ ಹನ್ನೆರಡರ ಮಗ ವಾಸುದೇವ ನಂಬೂದರಿ ಹಾಗೂ ಹಾಗೂ ಆರು ತಿಂಗಳ ಶಿಶುವನ್ನು ಹಿಡಿದು ಕಾಲ್ನಡಿಗೆಯುಲ್ಲಿ ಹೊರಟುಬರುವ ರೋಚಕ ಕಥಾನಕದೊಂದಿಗೆ ಆರಂಭವಾಗುವ ಕಥೆ ಮುಂದೆ ಭೂದೇವಿ ಹೇಗೆ ತನ್ನೂರಿನ ಕುಂಬ್ಳಕಾಯಿಯ ಬಳ್ಳಿಯನ್ನು ಹೊಸಕಟ್ಟಿನ ತುಂಬಾ ಹಬ್ಬಿಸಿ, ಅದರ ಪಾಯಸದ ಘಮದೊಳಗೆ ತನ್ನ ಮೂಲ ಅಸ್ತಿತ್ವನ್ನು ಬೆರೆಸಿ ಆ ಪರಿಸರದೊಳೊಂದಾಗಿಬೆರೆತು ಮಲೆಯಲ್ಲಿ ಹಬ್ಬಿದಳು ಎಂಬಲ್ಲಿಗೆ ಕೊನೆಯಾಗುತ್ತದೆ.
ಹಾಗೆಂದು ಇದು ಅವಳದೊಂದೇ ಕಥೆಯಲ್ಲ. ಇದೊಂದು ಇಳೆಯನ್ನೇ ಕೆಂದ್ರಬಿಂದುವಾಗಿಟ್ಟುಕೊಂಡು ಲೇಖಕರು ಆ ಕಾಲಮಾನದ ಶಿರಸಿ ಸೀಮೆ, ಅದರ ಸುತ್ತಮುತ್ತಲಿನ ಹಳ್ಳಿಗಳು, ಜನಜೀವನ ಎಲ್ಲವನ್ನೂ ತೆರೆದಿಡುತ್ತಾ... ಕಾಡಿನ ಪ್ರದೇಶಗಳ ವಿಶೇಷತೆಯ ಕುರಿತು ಅವರು ಮಾಡಿರುವ ಗಾಢ ಅಧ್ಯಯನವನ್ನು ನೇಯ್ದು ನಮಗೆ ನೀಡುತ್ತಾ ಹೋಗುತ್ತಾರೆ.
ಕಾನನ್ನು ಗೌರವಿಸಿ, ವಿನೀತರಾಗಿ ಅದರ ಬಳಿ ಹೋದರೆ ಅದು ನನ್ನ ಒಡಲಿನಿಂದ ಏನೇನನ್ನೆಲ್ಲಾ ಮೊಗೆದು ತೆಗೆದುಕೊಡಬಲ್ಲದು ಎಂಬ ವಿಸ್ಮಯ ಇಲ್ಲಿ ಅನಾವರಣಗೊಂಡಿದೆ ಸಂತಾನಹೀನತೆಯಿಂದ ಹಿಡಿದು ಮಧುಮೇಹ ರೋಗದವರೆಗಿನ ಸಮಸ್ಯೆಗಳಿಗೆಲ್ಲಾ ಪರಿಹಾರವನ್ನು ಹೇಗೆ ನೀಡಬಲ್ಲದು… ಹಸಿವಿನಿಂದ ಸೊರಗುವ ಜೀವಿಗಳಿಗೆ ಎಷ್ಟೆಲ್ಲಾ ಪೌಷ್ಟಿಕ ಆಹಾರವನ್ನು ಒದಗಿಸಬಲ್ಲದು –ಹೀಗೆ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾ ಹೋಗುತ್ತದೆ ಮಧ್ಯಘಟ್ಟ.
ಉದಾರಣೆಗೆ:-
ಕಬ್ಬಿನಹಾಲು ಹುಳಿಯಾಗದಂತೇ ಅದಕ್ಕೆ ಎರಡು ತುಂಡು ಕಬ್ಬನ್ನು ಹಾಕಿಡುವುದು, ಮೇಯಲು ಹೋಗುವ ದನಗಳಿಗೆ ಬಾಲ ತುಂಡುಗುತ್ತಿದ್ದುದು ಹೇಗೆ, ನಾವು ಈಗ ಡಯಟ್ಟಿಗೋಸ್ಕರ ಬಾಯಿ ಕಟ್ಟುತ್ತಿರುವಾಗ ಕಾಡಿನ ಸಿಗುವ ಮಧುನಾಶಿನಿ ಎಂಬ ಅಪರೂಪದ ಎಲೆ ಹೇಗೆ ಆ ತಿನ್ನುವ ಹಪಹಪಿಯನ್ನು ತಾತ್ಕಾಲಿಕವಾಗಿ ತಡೆಯುತ್ತದೆ, ಈವರೆಗೂ ನಾನು ಕೇಳಿರದಿದ್ದ ‘ಕಳ್ಳರಕೊಳ್ಳಿ’ ಎನ್ನುವ (ಮಳೆಗಾಲದಲ್ಲಿ ಕಡಿನ ಒಣಗಿದ ಮರದ ಮೇಲೆ ಬೆಳೆದು ರಾತ್ರಿ ಬೆಳಕು ಬೀರುವ ಲೂಸಿಫೆರಿನ್ ಕಿಣ್ವದಿಂದಾಗಿ) ಟ್ಯೂಬಲೈಟಿನಂತೇ ಹೊಳೆವ ಅಪರೂಪದ ಕಟ್ಟಿಗೆ… ಹಾಗೆಯೇ,
ವನದೊಳಗೆ ಸಮೃದ್ಧವಾಗಿ ಬೆಳೆದಿರುವ ಅಪರೂಪದ ಔಷಧಗಳು ಮತ್ತು ಅವುಗಳನ್ನು ಉಪಯೋಗಿಸಲು, ಬಗೆದು ತೆಗೆಯಲು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು, ಕಾದಂಬರಿಯ ಕೊನೆಗೆ ಸವಿಸ್ತಾರವಾಗಿ ಕೊಟ್ಟಿರುವ ಅಲ್ಲಿಯ ಕೆಲವೊಂದು ಆಡುಭಾಷೆಯ ಅರ್ಥಗಳು ಹಾಗೂ ಆ ಭಾಗದ ಕೃಷಿ ಮೂಲದ ಸಸ್ಯಗಳು, ಕಾಡಿನ ಪ್ರಾಣಿಗಳ ವಿವರ, ವನ್ಯಸಸ್ಯಗಳ ಸ್ಥಳೀಯ ಹೆಸರುಗಳು – ಹೀಗೆ ಎಲ್ಲಾ ವಿಧದಲ್ಲೂ ಇದೊಂದು ಸಂಗ್ರಹಯೋಗ್ಯ ಹಾಗೂ ಅಧ್ಯಯಶೀಲ ಕಾದಂಬರಿಯಾಗಿದೆ.
ಕಾದಂಬರಿಯಲ್ಲಿ ಬಳಕೆಯಾಗಿರುವ ಭಾಷಾ ವೈಶಿಷ್ಟ್ಯ:-
ಕಾದಂಬರಿಯುದ್ದಕ್ಕೂ ಬಹಳಷ್ಟು ಕಡೆ ಬಳಸಿದ್ದು ಆ ಪ್ರದೇಶದ ಹವ್ಯಕ ಭಾಷೆ. ಹೀಗಾಗಿ ಉತ್ತರ ಕನ್ನಡದಲ್ಲೇ ಹುಟ್ಟಿ ಬೆಳೆದವರಿಗೆ ಅಷ್ಟು ಸಮಸ್ಯೆಯಾಗದಿದ್ದರೂ ತೀರಾ ಏನೂ ಗೊತ್ತಿಲ್ಲದವರಿಗೆ ಸ್ವಲ್ಪ ಕಷ್ಟವಾಗಬಹುದೇನೋ. ಆದರೆ ಅಲ್ಲಿಯ ಜನರ (ಕೇವಲ ಹವ್ಯಕರು ಮಾತ್ರವಲ್ಲ, ಕಾಡೊಳಾಗಿರುವ ಮರಾಠಿಗರು, ಕರೆವೊಕ್ಕಲಿಗರು, ಹಾಲಕ್ಕಿಗರು.. ಹಾಗೆಯೇ ಗೌಡರು, ನಾಯ್ಕರು…) ಜೀವನಕ್ರಮ, ಆಹಾರ, ವಿಹಾರ, ವ್ಯವಹಾರ, ಸಂಪ್ರದಾಯಗಳನ್ನು ತೆರೆದಿಡಲು ಆಡುಭಾಷೆಯ ಬಳಕೆ ಅತ್ಯಗತ್ಯ. ಅದು ಕಥೆಯ ಸೊಗಡನ್ನು ಹೆಚ್ಚಿಸುತ್ತದೆ. ಅದರಲ್ಲೂ ಇದು ಕೇರಳದಿಂದ ಶಿರಸಿ ಸೀಮೆಯನ್ನು ಜೋಡಿಸುವ ತಂತುವಾಗಿರುವುದರಿಂದ ಶುದ್ಧ ಕನ್ನಡವೊಂದನ್ನೇ ಬಳಸಿದ್ದರೆ ಸೂಕ್ತವೆನಿಸುತ್ತಿರಲಿಲ್ಲ.
ದೂರದ ಕೇರಳವಾಗಲೀ, ಈ ಕಡೆಯ ಮಧ್ಯಘಟ್ಟವಾಗಲೀ ಮೊದಲಿನಿಂದಲೂ ವಂಶೋದ್ಧಾರಕನೆಂದೆನಿಸಿಕೊಳ್ಳುವ ಮಗನಿಗೆ ಹೆಚ್ಚು ಪ್ರಾಶಸ್ತ್ಯ ಸಿಕ್ಕಿ ಹೆಣ್ಣು ಕೂಸುಗಳು ಹೇಗೆ ಬವಣೆಗಳನ್ನು ಪಡುತ್ತಿದ್ದರೆಂಬುದು(ಇದು ಈಗಲೂ ದೇಶದ ಹಲವು ಭಾಗಗಳಲ್ಲಿ ನಡೆಯುತ್ತಿರುವ ವಿಷಾದಕರ ಸಂಗತಿ) ಸಂಕಟವನ್ನುಕ್ಕಿಸುತ್ತದೆ. ಕೇರಳದ ಕಡೆಗೋ ಹೆಣ್ಣು ಸಂತಾನ ಹೆಚ್ಚಾಗಿತ್ತು. ಹೀಗಾಗಿ ಮದುವೆಮಾಡಲು ದುಡ್ಡಿಲ್ಲದೇ ಕಂಡು ಕೇಳರಿಯದ ದಟ್ಟ ಕಾನುಗಳೊಳಗೆ ಹುದುಗಿರುವ ಮಧ್ಯಘಟ್ಟ ಹಾಗೂ ಅದರ ಅಕ್ಕಪಕ್ಕದ ಹಳ್ಳಿಗಳಲ್ಲಿರುವ ಮದುವೆ ವಯಸ್ಸು ಮೀರಿದವರಿಗೋ ವಿಧುರರಿಗೋ ಇಲ್ಲಾ ವಯಸ್ಸಾದ ಮುದುಕರಿಗೋ ಮದುವೆ ಮಾಡಿಕೊಡುತ್ತಿದ್ದರೆ, ಇತ್ತ ಈ ಕಡೆಗೋ ಕಾಡಿನ ನಡುವೆಯಿದ್ದ ಊರುಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ರೋಗರುಜಿನಗಳಿಂದಾಗಿ ತಕ್ಷಣಕ್ಕೆ ಸೂಕ್ತ ಚಿಕಿತ್ಸೆ ಸಿಗದೆಯೋ ಇಲ್ಲಾ ಹೆಣ್ಣು ಕೂಸೆಂಬ ತಾತ್ಸಾರಕ್ಕೋ ಬಲಿಯಾಗುತ್ತಿದ್ದ ಹೆಣ್ಮಕ್ಕಳಿಂದ ಗಂಡು ಸಂತಾನಗಳೇ ಹೆಚ್ಚಾಗುತ್ತಾ ಹೋಗಿ, ಇದರಿಂದಾಗಿ ವಯಸ್ಸು ಮೀರಿದರೂ ಮದುವೆಗೆ ಹೆಣ್ಣು ಸಿಗದೇ ಪರದಾಡುತ್ತಾ ಸಾಲ ಸೋಲ ಮಾಡಿ ಭಾಷೆಯೂ ತಿಳಿಯದ ಹೆಣ್ಣುಗಳನ್ನು ದೂರದಿಂದ ವರಿಸಿ ತರುತ್ತಿದ್ದರು. ಕಥೆಯ ಆರಂಭ ಇಲ್ಲಿಂದ ಸಾಗುತ್ತಾ ಹೋಗಿ ಆಮೇಲೆ ಒಂದು ಘಟ್ಟದಲ್ಲಿ ನಿಲ್ಲುತ್ತದೆ. ಮುಖ್ಯ ಕಥೆಯ ಸುತ್ತ ಹುತ್ತಗಟ್ಟುವ ಉಪಕಥೆಗಳು…. ಕಥೆಯೊಳಗೊಂದು ಕಥೆ, ಅದರೊಳಗೊಂದು ಘಟನೆ, ಅದರ ಹಿಂದೊಂದು ಹಿನ್ನಲೆ – ಈ ರೀತಿ ಇದು ನಲ್ವತ್ತು ಪುಟ್ಟಪುಟ್ಟ ಮಣಿಗಳನ್ನು ದಾರವೊಂದರಲ್ಲಿ ಪೋಣಿಸಿರುವ ಕಾದಂಬರಿ. ಇದರ (ಸೂತ್ರ) ದಾರ ಹೊಸಕಟ್ಟಿನ ಗೋಪಯ್ಯ ಹೆಗಡೆ ಹಾಗೂ ಅವರ ಕುಟುಂಬ. ಅವರ ಸುತ್ತಲು ನಡೆಯುವ ಘಟನಾವಳಿಗಳು, ಬಂದುಹೋಗುವ, ಸಂಪರ್ಕಕ್ಕೆ ಬರುವ ಪಾತ್ರಗಳೆಲ್ಲಾ ಮಣಿಗಳು.
ಕಾದಂಬರಿಯಲ್ಲಿ ಬಹಳ ಇಷ್ಟವಾದ, ಮನಸ್ಸನ್ನು ಹೊಕ್ಕಿ ಕಾಡಿದ ಪಾತ್ರಗಳು – ಪುಡಿಯಮ್ಮ, ಶ್ರೀದೇವಿ, ಭೂದೇವಿ, ಗಣಪತಿ ಭಟ್ಟರ ಬಡತನದ ಬೇಗೆಯ ಕಥೆ, ಕಾಡನ್ನು ಪೂಜಿಸುವ, ಆರಾಧಿಸುವ ಅಲ್ಲಿಯ ಒಕ್ಕಲಿಗರು ಹಾಗೂ ದೇವಿಕಾನು ಹಾಗೂ ಮಧ್ಯಘಟ್ಟದ ಸುತ್ತಮುತ್ತಲಿನ ಅಪರೂಪದ ಜೀವವಿಸ್ಮಯಗಳು.
ಇನ್ನು, ಪುಡಿಯಮ್ಮನ ಪಾತ್ರ ನನಗೆ ಬಹಳಷ್ಟು ರೀತಿಯಲ್ಲಿ ಎಂ.ಕೆ.ಇಂದಿರಾ ಅವರ ಕಾದಂಬರಿಯಾದ ‘ಫಣಿಯಮ್ಮ’ನನ್ನೇ ಮತ್ತೆಮತ್ತೆ ನೆನಪಿಸಿತ್ತು. ಆ ಕಾಲದಲ್ಲಿ ಇಂತಹ ಅಪರೂಪದ ಸ್ತ್ರೀರತ್ನರು ಅಂದರೆ ಒಳಗಿಂದ ಬಲಿತು ಗಟ್ಟಿಗಿತ್ತಿಯಾಗಿದ್ದವರೆಲ್ಲಾ ಜಗತ್ತಿಗೆ ಬೆಳಕಾದವರೇ ಸೈ ಅನ್ನಿಸಿತು. ದೂರದ ಕೇರಳದಿಂದ ಮಧ್ಯಘಟ್ಟಕ್ಕೆ ಬಂದು ಕಕ್ಕಾಬಿಕ್ಕಿಯಾಗಿ ನಿಂತ ಶ್ರೀದೇವಿಗೆ ಮನೆಯನ್ನು/ಮನೆಯವರನ್ನು ಪರಿಚಯಿಸುವ ಮುನ್ನ ಅಲ್ಲಿಯ ಪರಿಸರವನ್ನು, ಅದರೊಳಗಿನ ಜೀವನ ತತ್ವವನ್ನು ಅರುಹಿ ಧೈರ್ಯ ತುಂಬುತ್ತಾಳೆ ಪುಡಿಯಮ್ಮ. ಆಕೆಯೂ ಬಹಳ ಹಿಂದೆ ಕೇರಳದಿಂದಲೇ ಮಧ್ಯಘಟ್ಟಕ್ಕೆ ಬಂದವಳು… ಕಾರಣಾಂತರಗಳಿಂದ ಅಲ್ಲಿಯ ನಿವಾಸಿಗಳೇ ಆಗಿಬಿಟ್ಟಿದ್ದರಿಂದ ಆ ಪರಿಸರದ ಜೀವನಾಡಿಯನ್ನು ಚೆನ್ನಾಗಿ ಅರಿತವಳು. ಮಾತ್ರವಲ್ಲ, ತನ್ನೂರಿನಿಂದ ಕುಂಬಳಕಾಯಿಯ ಬೀಜವನ್ನು ಬರುವಾಗಲೇ ತಂದು ಅಲ್ಲಿಯವರಿಗೆಲ್ಲಾ ಹಂಚಿ ಆ ಮೂಲಕ ತನ್ನ ಮೂಲ ನೆಲೆಯನ್ನೂ ಸುತ್ತಮುತ್ತಲೆಲ್ಲಾ ಹಬ್ಬಿಸಿದವಳು. ಕಾಡನ್ನು ಆಕೆ ಶ್ರೀದೇವಿಗೆ ಪರಿಚಯಿಸುತ್ತಾ, ಆ ಮೂಲಕ ಆಕೆ ಶ್ರೀದೇವಿಗೆ ಒದಗಿರುವ ಆ ಅನಿವಾರ್ಯದ ಬದುಕನ್ನು ಎದುರಿಸುವ, ನಿಭಾಯಿಸುವ ಕಲೆಯನ್ನು ಕಲಿಸುವ ಅವಳ ಜಾಣ್ಮೆ, ತಿಳಿವು ಮನಸೂರೆಗೊಳ್ಳುತ್ತದೆ.
ಕಾದಂಬರಿಯೊಳಗಿನ ಮತ್ತೊಂದು ವಿಶೇಷತೆಯೇನೆಂದರೆ, ಇಲ್ಲಿ ನಾವು ಮನುಷ್ಯರ ನಡುವೆ ಪರಸ್ಪರ ಬಾಂಧವ್ಯವಿರುವಂತೇ ಕಾಡಿನ ಸಸ್ಯಗಳ ನಡುವೆಯೂ ಗಾಢ ನಂಟು, ಸಹಕಾರ ಹೇಗಿರುತ್ತದೆ ಎಂಬುದರ ವಿವರಗಳನ್ನು ಕಾಣುತ್ತೇವೆ. ಉದಾಹರಣೆಗೆ ಬಿದಿರಿನ ಸಸಿಗಳ ಸುತ್ತ ಕೇದಿಗೆವನ ಹಬ್ಬಿ ಅದು ಇನ್ನೇನು ಚಿಗುರುತ್ತಿರುವ ಬಿದಿರ ಸಸ್ಯಗಳಿಗೆ ವನ್ಯ ಜೀವಿಗಳ ಬಾಯಿಯಿಂದ, ಮನುಷ್ಯರಿಂದ ರಕ್ಷಣೆ ನೀಡುವುದು… ಇತ್ಯಾದಿ. “ಮಕ್ಕಳ ತೂಗೋ ತೊಟ್ಟಿಲಾಗುವ ಬಿದಿರಿಗೆ ಕೆಂದಿಗೆ ಕಂಟಿನೇ ತಾಯಿ ಆಗ್ತದೆ!” ಎನ್ನುವ ಪುಡಿಯಮ್ಮನ ಮಾತಿನೊಳಗೆ ನೂರು ಮರ್ಮ ಅಡಗಿದೆ.
ಹಿಂದೆ ಜನರಲ್ಲಿ ತಂತ್ರಜ್ಞಾನವಿರಲಿಲ್ಲ.. ಅಕ್ಷರ ಜ್ಞಾನವೂ ದುರ್ಲಭವಾಗಿತ್ತು. ಆದರೆ ಅವರು ತಮ್ಮ ಪರಿಸರವನ್ನು, ಕಾಡನ್ನು ಚೆನ್ನಾಗಿ ಅಧ್ಯಯನ ಮಾಡಿದ್ದರು/ಮಾಡುತ್ತಿದ್ದರು. ಆಮೂಲಕ ಆ ಹಸಿರಿನ ಚೈತನ್ಯ ಅವರೊಳಗೆ ನಿರಂತರವಾಗಿ ಕಾನಿನ ತೊರೆಗಳೆಂತೇ ಉಕ್ಕಿ ಹರಿಯುತ್ತಿತ್ತು. ಸಿರಿವಂತಿಕೆ ಇರುತ್ತಿರಲಿಲ್ಲ, ಆದರೆ ಮನುಷ್ಯತ್ವ, ಮಾನವ ಧರ್ಮವನ್ನು ಮೈಗೂಡಿಸಿಕೊಂಡಿದ್ದರು. ಒಡೆಯ ಆಳು ಎಂಬ ಸಾಮಾಜಿಕ ಶ್ರೇಣಿಯಿದ್ದಿದ್ದರೂ ಇಬ್ಬರಲ್ಲೂ ಪರಸ್ಪರ ಪ್ರೀತಿ, ವಿಶ್ವಾಸ, ಕಾರುಣ್ಯ ಹರಿದಾಡುತ್ತಿತ್ತು. ನಿಯತ್ತು ಎನ್ನುವುದು ಅಘೋಷಿತ ಪ್ರಮಾಣವಾಗಿತ್ತು. ಆದರೆ ಕಾಲಕ್ರಮೇಣ ಸುಧಾರಣೆಯ ನೆಪದಲ್ಲೋ ಇಲ್ಲಾ ಆ ಹೆಸರಿನ ಮುಸುಕಿನೊಳಗೇ ಮೂಲ ಅಂತಃಸತ್ವವಕ್ಕೇ ಧಕ್ಕೆ ತರುವಂತೇ ಬದಲಾವಣೆಗಳಾಗುತ್ತಾ ಹೋಗಿ, ತಂತ್ರಜ್ಞಾನ ಜೀವಕ್ಕಿಂತ ಮುಂದೆ ನಡೆದು ನಿಲ್ಲದ ಅನಾಹುತಗಳು ಸಂಭವಿಸಿದವು. ನಮ್ಮ ಇಂದಿನ ಓದು, ಅಕ್ಷರ ಜ್ಞಾನ, ತಂತ್ರಜ್ಞಾನಗಳು ನಮಗೆ ಕಾಡಿನ ಕುರಿತು ಅದರ ಉಳಿಸುವಿಕೆ, ಬೆಳೆಸುವಿಕೆ ಕುರಿತು ಜಾಗೃತಿ ನೀಡುತ್ತಿವೆಯೇ? ಹಿಂದಿನಿವರು ಮಣ್ಣಿನಲ್ಲಿ/ಮಣ್ಣಿನಿಂದ ಕಲಿತಿದ್ದ ಅರಿವನ್ನು ನಾವು ಇಂದು ಸಿಕ್ಕಸಿಕ್ಕಲ್ಲಿ ಗುಡ್ಡವನ್ನು, ಪರ್ವತವನ್ನು ನಮ್ಮ ದುರಾಸೆಗಾಗಿ ಅಗೆದು ಮೊಗೆದು ತೋಡುವುದರಿಂದ ಕಲಿಯಲು ಸಾಧ್ಯವೇ? – ಓದು ಮುಗಿದರೂ ಪ್ರಶ್ನೆಗಳು, ಮಂಥನ-ಚಿಂತನೆಗಳು ಮಾತ್ರ ಮನದೊಳಗೆ ನಿಲ್ಲುತ್ತಿಲ್ಲ. “ಕಾಡಿನಲ್ಲಿ ಕಂಡಿದ್ದೆಲ್ಲಾ ಮುಟ್ಟಡ, ನೋಡಿದ್ದೆಲ್ಲ ಕೆದಕಡ. ಮನುಷ್ಯ ಜನ್ಮ ಈ ಭೂಮಿಗೆ ಬಂದಿದ್ದು ನಿಂತು ಕೈಮುಗಿದು ಹೋಪಲೆ ಹೊರತೂ ಎಲ್ಲದನ್ನೂ ಎತ್ತಿ ಬಾಚಿ ತಗಂಡು ಗಂಟು ಕಟ್ಟಿಕೊಂಡು ಹೋಪಲೆ ಅಲ್ಲ.”- ಎಂದು ಬುದ್ಧಿ ಹೇಳುವ ವರದಪ್ಪ ಹೆಗಡೆಯವರ ಮಾತುಗಳು ನಮಗೆಲ್ಲಾ ಎಚ್ಚರಿಕೆಯ ಗಂಟೆಯಾಗಿದೆ.
ಮನವನ್ನು ಹೊಕ್ಕಿ, ಅಲ್ಲೇ ಬೇರು ಬಿಟ್ಟ ಒಂದಿಷ್ಟು ಸಾಲುಗಳು:-
*ಪರೂರು (ಅಪರಿಚಿತ) ಹೊಳೆ, ಊರ ಸ್ಮಶಾನ ಯಾವತ್ತೂ ಹೆದರಿಸುತ್ತದೆ
*ಇವಳ ಗಂಡ ಹೀಗಂತೆ ಎಂದು ನಗುವವರು ಸಿಕ್ಕಾರೆಯೇ ಹೊರತು ಗಂಡಸನ್ನು ದಾರಿಗೆ ತರುವವರು ಎಲ್ಲಾದರೂ ಸಿಕ್ಕಾರೆಯೇ?
*ದೇವರು ಸಂಕಷ್ಟ ಮತ್ತು ಪರಿಹಾರ ಒಟ್ಟಿಗೆ ಇಟ್ಟು ಭೂಮಿಯಲ್ಲಿ ಆಟ ಆಡತ. ಹುದುಕಲೆ ಕಣ್ಣಿದ್ದರೆ ಇಲ್ಲೆ ಎಲ್ಲವೂ ಇದ್ದು.
*ಕಾಡು ಜಗತ್ತಿನಲ್ಲಿ ಕೂಡುವ ಕಾಲ ಮುಗಿದು ಇನ್ನು ಕಳೆದುಕೊಳ್ಳುವ ಕಾಲ ಶುರುವಾಯ್ತು.
*ಹಣೆಯ ಕುಂಕುಮ ಅಳಚಿ ಹೋತು ಅಂದ್ರೆ ಹಣೆಬರಹವೇ ಬದಲಾತು ಹೇಳ?
*ಸುಖ ಬಂತು ಹೇಳಿ ದುಡಿಯದು ಬಿಟ್ಟರೆ ಕಷ್ಟ ಎದುರಿಸಲೆ ಶಕ್ತಿ ಇರತಿಲ್ಲೆ ಮಾರಾಯ.

ಪುಸ್ತಕ – ಮಧ್ಯಘಟ್ಟ
ಲೇಖಕರು -
Shivanand Kalave
ಪ್ರಕಾಶಕರು – ಸಾಹಿತ್ಯ ಪ್ರಕಾಶನ
ಬೆಲೆ – ೨೫೦/-
ಪುಟಗಳು – ೨೩೧

~ತೇಜಸ್ವಿನಿ ಹೆಗಡೆ
Like
Comment
Share

ಕಾಮೆಂಟ್‌ಗಳಿಲ್ಲ: