ಘಮ್ಮೆನ್ನುತ್ತಿದ್ದ ಸುರಗಿ ಹೂವನ್ನೇ ಆಘ್ರಾಣಿಸುತ್ತಿದ್ದ ವಿನೇತ್ರಿಗೆ ಹೊಳೆಯ ಬದಿಯಿಂದ ವತ್ಸಲಕ್ಕ ಮತ್ತು ಪುರುಷೋತ್ತಮ ನಾಯ್ಕ ಇಬ್ಬರೂ ಒಟ್ಟಿಗೇ ಕುಲು ಕುಲು ನಗುತ್ತಾ ಬರುತ್ತಿರುವುದು ನೋಡಿ ಏನೋ ಒಂಥರವಾಯಿತು. “ತನ್ನ ಅಪ್ಪ ಮಾಡಿದ್ದು ಅನಾಚಾರ ಅಂತ ಬೊಬ್ಬೆ ಹೊಡೆದಿದ್ದೋಳು, ಈಗ ತಾನೇ ನಾಚ್ಗೆ ಬಿಟ್ಟು, ಆ ನಾಯ್ಕನ ಜೊತೆ ಸಂಬಂಧ ಇಟ್ಕೊಂಡಿದೆ ನೋಡು.....” ತೇರು ಬೀದಿಯ ಜಾತ್ರೆಯಲ್ಲಿ ಸಿಕ್ಕಿದ್ದ ಗೆಳತಿ ಪದ್ಮಾವತಿ, ದೇವಸ್ಥಾನಕ್ಕೆ ಕಾಯೊಡೆಯಿಸಲು ಬಂದಿದ್ದ ವತ್ಸಲೆಯನ್ನುದ್ದೇಶಿಸಿ ಹೇಳಿದ್ದ ಮಾತುಗಳು ನೆನಪಾಗಿ, ಅಪ್ರಯತ್ನವಾಗಿ ಅವಳಲ್ಲಿ ಹೇವರಿಕೆ ಮೂಡಿತು.
“ಅರೆರೆ ವಿನೇತ್ರಿ ಇಲ್ಲೆಂತ ಮಾಡ್ತಿದ್ದೀ? ಒಬ್ಳೇ ಬಂದ್ಯಾ?! ಏನಾದ್ರೂ ಸಹಾಯ ಬೇಕಾ ಕೂಸೆ? ಬೇಕಿದ್ರೆ ಕರೆ.. ಇಲ್ಲೇ ಏಲಕ್ಕಿ ತೋಟದಲ್ಲಿ ಏಲಕ್ಕಿ ಬೀಜ ತೆಗೀತಾ ಇರ್ತೇನೆ..” ವತ್ಸಲಕ್ಕ ಅವಳ ಮೊಗದಲ್ಲಿ ಬದಲಾಗುತ್ತಿರುವ ಬಣ್ಣಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ, ಹಾಗೆ ಹೇಳುವುದು ತನ್ನ ಕರ್ತವ್ಯವೆಂಬಂತೇ ಹೇಳಿ, ಮತ್ತದೇ ಲಹರಿಯೊಂದಿಗೆ ಪುರುಷೋತ್ತಮನ ಜೊತೆಗೂಡಿ ಪಿಸುನುಡಿಯುತ್ತಾ ಮುನ್ನೆಡೆಯಲು ಮುಷ್ಟಿ ಬಿಗಿದಳು ವಿನೇತ್ರಿ. “ಕರ್ಮ.. ಈಕೆಯೇನು ನನ್ನ ಸಂಪೂರ್ಣ ಹಾಸಿಗೆ ಹಿಡಿದವಳು ಎಂದುಕೊಂಡಿದ್ದಾಳೋ ಏನೋ?! ಮೊನ್ನೆಯಷ್ಟೇ ಇವ್ಳ ಮುಂದೆಯೇ ಜಾತ್ರೆಯನ್ನೆಲ್ಲಾ ಸುತ್ತಿದ್ದೀನಿ.. ಅಂಥದ್ರಲ್ಲಿ ಸುಮ್ ಸುಮ್ನೇ ಸಹಾಯ ಕೇಳ್ತಿದ್ದಾಳೆ.. ಛೇ.. ತಾನಾದರೂ ಯಾಕೆ ಸಮಾ ಉತ್ತರ ಕೊಡ್ಲಿಲ್ವೋ.. ಗೋಪಜ್ಜಿ ಹೇಳೋದು ಸುಳ್ಳಲ್ಲ.. ಬಸ್ಸು ಹೋದ್ಮೇಲೆ ಓಡೋ ಬುದ್ಧಿನೇ ನಂದು..” ಒಳಗಿನಿಂದ ಅಸಹಾಯಕತೆ, ಸಂಕಟ ನಗ್ಗಲು, ನಿಧಾನಕ್ಕೆ ತಲೆ ತಗ್ಗಿಸಿ ತನ್ನ ಬಲಗಾಲನ್ನೇ ದಿಟ್ಟಿಸತೊಡಗಿದಳು ವಿನೇತ್ರಿ.
“ವಿನು.. ಮದರಂಗಿ ಹಚ್ಚೋವಾಗ ನಿನ್ನ ಈ ನುಣುಪಾದ, ಹಾಲು ಬಿಳುಪಿನ ಕಾಲ್ಗಳ ಮೇಲೆ ಅಚ್ಚಗೆಂಪು ಮದರಂಗಿ ಬಣ್ಣದ ಚಿತ್ತಾರ ಬಿಡ್ಸಿ, ಈ ಬಲಗಾಲ ಪಾದದ ಮೇಲೆ ನನ್ನ ಹೆಸರಿನ ಮೊದಲ ಪದವನ್ನು ಗುಟ್ಟಾಗಿ ಬರೆದಿಟ್ಟುಕೋ.. ಮದುವೆಯ ದಿನ ಇದೇ ಕಾಲಲ್ಲಿ ಅಕ್ಕಿ ಶಿದ್ದೆಯನ್ನುರುಳಿಸಿ ನೀ ನನ್ನ ಮನೆಯ ತುಂಬಿ, ರಾತ್ರಿ ಸಿಕ್ಕಾಗ, ನಾನೇ ಆ ಅಕ್ಷರವ ಹುಡುಕಿ ತೆಗಿವೆ.. ಇದು ನನ್ನ ಎದೆಯಾಳದ ಕೋರಿಕೆ.. ಪೂರೈಸ್ತೀಯಲ್ಲಾ..” ಮೂರು ವರುಷದ ಹಿಂದೆ, ಒಂದು ಸುಂದರ ಸಂಜೆ, ಸಾಗರ ಉಷೆಯ ಸೇರಿದ್ದನ್ನು ಕಂಡ ಬಾನು ಕೆಂಪೇರಿದ್ದ ಹೊತ್ತಲ್ಲಿ, ತನ್ನ ಬಲಗಾಲಿನನ್ನು ಸವರುತ್ತಾ ನುಡಿದಿದ್ದ ಮನೋಹರನ ನೆನಪಾಯಿತು ವಿನೇತ್ರಿಗೆ.
“ಪಾಪಿಷ್ಟ.. ನನ್ನ ಬದುಕುಲ್ಲಿ, ಅವನ ಹೆಸರನ್ನು ಶಾಶ್ವತವಾಗಿ ರಕ್ತವರ್ಣದಲ್ಲೇ ಕೊರೆದು ಹೋಗ್ಬಿಟ್ಟ.. ಬೇಡ್ವೋ ಬೇಡ್ವೋ ಜಾಸ್ತಿ ಸ್ಪೀಡ್ ಬೇಡ.. ಇದು ಘಟ್ಟ.. ಕತ್ಲಾಗ್ತಿದೆ ಬೇರೆ.. ಅಂತ ಎಷ್ಟು ಬಡ್ಕೊಂಡ್ರೂ.. ಆವತ್ತು ಹುಚ್ಚು ಆವೇಶದಲ್ಲಿ ಹೋಗಿ, ತಿರುವಿನಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು.. ದಢಕ್ಕನೆ ಬಿದ್ದಿದ್ದೊಂದು ಗೊತ್ತು. ಕಣ್ಬಿಟ್ಟಾಗ ಸುತ್ತಲೂ ಕತ್ತಲೇ ತುಂಬಿತ್ತಲ್ಲ... ಪೂರ್ತಿ ಪ್ರಜ್ಞೆ ಬಂದಾಗಲೇ ಗೊತ್ತಾಗಿದ್ದು.. ಬಲಗಾಲು ಮಣ್ಣುಪಾಲಾಗಿದೆ ಎಂದು. ಅಳಲೂ ಆಗದಂಥ ಆಘಾತದ ಸ್ಥಿತಿಯಲ್ಲಿದ್ದವಳು ಪ್ರತಿ ಕ್ಷಣ ಮನೋಹರನಿಗಾಗಿ ಕಾದಿದ್ದೆ. ತನಗಾದರೂ ಎಲ್ಲಿ ಬೋಧವಿತ್ತು? ಮನುವಿನ ಬಗ್ಗೆ ಕೇಳಿದಾಗೆಲ್ಲಾ ಏನೋ ಹೇಳಿ ಹಾರಿಸುತ್ತಿದ್ದ ಮನೆಯವರ ಮನಃಸ್ಥಿತಿಯ ಅರಿವೂ ಇರಲಿಲ್ಲ. ಅಂತೂ ಎರಡುವಾರಗಳ ಮೇಲೆ ಹಣೆಗೊಂದು ಪಟ್ಟಿ ಸುತ್ತಿಕೊಂಡು ಎದುರು ಪ್ರತ್ಯಕ್ಷನಾದವ.. ದೊಪ್ಪನೆ ನನ್ನ ಎಡಗಾಲಿನ ಮೇಲೆ ಬಿದ್ದು, ಗೋಳಾಡಿಬಿಟ್ಟಿದ್ದ! ಆಗಲೇ ನಾನೂ ಒಳಗೆ ಕಟ್ಟಿಟ್ಟಿದ್ದ ದುಃಖವನ್ನೆಲ್ಲಾ ಕರಗಿಸಿ ಭೋರಿಟ್ಟಿದ್ದು. ಪಾಪ ನನಗಾಗಿ ಅಳುತ್ತಿರುವ, ಮರುಗುತ್ತಿರುವ, ಎಂದೇ ಸಂಕಟ ಪಡುತ್ತಿದ್ದರೆ.. ಆತನೋ ಮೆಲ್ಲನೆ ಕಾದ ಸೀಸವ ಹೊಯ್ದಿದ್ದ. ‘ವಿನು.. ನಾನು ಪಾಪಿ ಕಣೆ.. ನನ್ನಿಂದ ನಿನ್ನ ಕಾಲು ಹೋಗೋಯ್ತು.. ಎಂಥ ಶಿಕ್ಷೆ ಆದ್ರೂ ಕೊಡು ಅನುಭವಿಸ್ತೀನಿ.. ಆದ್ರೆ.. ಏನೂ ತಪ್ಪು ಮಾಡದ ಅಪ್ಪ, ಅಮ್ಮಂಗೆ ಹೇಗೆ ಶಿಕ್ಷೆ ಕೊಡಲೇ?’ ಎಂದುಬಿಟ್ಟ. ನನಗೋ ಎಲ್ಲಾ ಅಯೋಮಯ.. ಏನಂತ ಹೇಳಲಿ? ಅರ್ಥವಾಗದೇ ಬಿಕ್ಕುತ್ತಾ ಅವನತ್ತ ನೋಡಲು, ಕಣ್ಣೋಟವ ತಪ್ಪಿಸಿದ್ದ. ‘ಅಮ್ಮ, ಅಪ್ಪ ಹಗ್ಗ ತಗೋತಾರಂತೆ ವಿನು.. ಅಮ್ಮಂಗೆ ಹಾರ್ಟ್ ಪ್ರಾಬ್ಲೆಮ್ಮಿದೆ ಗೊತ್ತಲ್ಲ.. ಅವ್ರ ಹತ್ರ ಮನೆ ಕೆಲ್ಸ ಆಗಲ್ಲ ಬೇರೆ.. ಹೀಂಗೆಲ್ಲಾ ಆದ್ಮೇಲೆ ನೀನು ಸುಮ್ನೇ ಅವ್ರ ಚುಚ್ಚು ಮಾತುಗಳನ್ನೆಲ್ಲಾ ಕೇಳ್ಕೊಂಡು.. ಪ್ರತಿ ದಿವ್ಸ ಹಿಂಸೆ ಅನುಭವಿಸೋದನ್ನು ನನ್ನಿಂದ ನೋಡಲಾಗದು.. ಈಗಾಗ್ಲೇ ನಾ ನಿಂಗೆ ಕೊಟ್ಟಿರೋ ದುಃಖವೇ ಸಾಕು.. ಎಲ್ಲರ ದ್ವೇಷ ಕಟ್ಕೊಂಡು ಮದ್ವೆ ಆಗಿ ಮತ್ತಷ್ಟು ಕಷ್ಟವನ್ನ ನಿಂಗೆ ಕೊಡಾಲಾರೆ. ವಿನು, ಎಷ್ಟೇ ದೊಡ್ಡ ಬಿಲ್ ಆಗ್ಲಿ.. ಆಸ್ಪತ್ರೆ ಖರ್ಚೆಲ್ಲಾ ನಂದೇ ಅಂತ ಮೊದ್ಲೇ ಡಾಕ್ಟರಿಗೆ ಹೇಳಿಬಿಟ್ಟಿದ್ದೀನಿ.. ನೀನು ದೊಡ್ಡ ಮನಸ್ಸು ಮಾಡಿ ದಯವಿಟ್ಟು ನನ್ನ...’ ಉಗುಳು ನುಂಗುತ್ತಾ ಆತ ಹೇಳಿದ ಮಾತುಗಳನ್ನು ಅರಗಿಸಿಕೊಳ್ಳಲಾಗದೇ ಕಲ್ಲಿನಂತೇ ಕೂತಿದ್ದೆನಲ್ಲಾ ನಾನು. ಮತ್ತೂ ಆತ ಅದೇನೇನೋ ಹಲುಬುತ್ತಿದ್ದ.. ಅದೊಂದೂ ಈಗ ನೆನಪಿಲ್ಲ. ಕ್ರಮೇಣ ಎಲ್ಲವೂ ಸ್ಪಷ್ಟವಾಗಿ, ಅಸಹ್ಯ, ತಿರಸ್ಕಾರ ನಾಭಿಯಿಂದೆದ್ದು ಬಂದು... ನನ್ನ ತಲೆಯ ಮೇಲಿಂದ ಕೈಮುಗಿದು ದೊಡ್ಡದಾಗಿ ಗೆಟ್ ಔಟ್ ಎಂದಾಗ.. ಆ ಬೊಬ್ಬೆಗೆ ಹೊರಗೆಲ್ಲೋ ಇದ್ದ ಅಪ್ಪಯ್ಯ ಓಡಿ ಬರಲು, ಫಟ್ಟನೆ ಹೊರಗೋಡಿದ್ದನಲ್ಲ ರಣ ಹೇಡಿ. ಹೇಗೆ ಆ ದಿವಸಗಳ ಕಳೆದನೋ ಈಗಲೂ ನೆನೆದರೆ ಚಳಿ ಬೆನ್ನ ಹುರಿಯಿಂದೆದ್ದು ಬರುತ್ತದೆ. ಆದರೂ ಮತ್ತೆ ಮತ್ತೆ ಹಳೆಯದೆಲ್ಲಾ ನೆನಪಾಗಿ ನನ್ನ ಜೀವವನ್ನು ಹಿಂಡೋದು ಯಾಕೋ..! ದರಿದ್ರದವ.. ಥೂ..” ಇರಿಯುತ್ತಿದ್ದ ಅವನ ನೆನಪುಗಳ ಯಾತನೆಯನ್ನು ತಡೆಯಲಾಗದೇ, ಅತೀವ ಅಸಹ್ಯದಿಂದ ಪಕ್ಕದಲ್ಲೇ ಉಗಿದು ಬಿಟ್ಟಳು ವಿನೇತ್ರಿ. ದಳ ದಳ ಹರಿವ ನೀರಿಗೆ ತಡೆಯೊಡ್ಡಲು ಸುತ್ತ ಮುತ್ತ ಯಾರೂ ಇಲ್ಲದ್ದರಿಂದ ತೊಟ್ಟಿದ ಅವಳ ಕಾಟನ್ ಮ್ಯಾಕ್ಸಿ ಚೆನ್ನಾಗಿ ಬಾಯಾರಿಸಿಕೊಳ್ಳತೊಡಗಿತು.
“ವಿನು ಅಕ್ಕ.. ಗೋಪಜ್ಜಿ ಕಾಲಿನ ತೈಲ ಕಾಣ್ತಿಲ್ವಂತೆ.. ಹುಡುಕ್ತಾ ಇದ್ದಾಳೆ.. ನಿನ್ನೆ ನಿನ್ನ ಬೆನ್ನುನೋವಿಗೆ ಕೊಟ್ಟಿದ್ಳಂತಲ್ಲ.. ಎಲ್ಲಿಟ್ಟಿದ್ದೀ? ನಿನ್ನ ಕಪಾಟಿನಲ್ಲೆಲ್ಲೂ ಕಾಣ್ತಿಲ್ಲಪ್ಪ.. ಬೇಗ್ಬಾ...” ಚಿಕ್ಕಮ್ಮನ ಮಗಳು ಶೋಭಾ ದಣಪೆಯಾಚೆಯಿಂದ ಕೂಗಿದ್ದೇ ಎಚ್ಚೆತ್ತಳು ವಿನೇತ್ರಿ. ಮ್ಯಾಕ್ಸಿ ಮೇಲೆ ಹಾಕಿಕೊಂಡಿದ್ದ ಹಳೆಯ ಚೂಡಿದಾದರ ಶಾಲಿನಿಂದ ಕಣ್ಣು, ಮೊಗಗಳನ್ನೊರೆಸಿಕೊಂಡು ಮೆಲ್ಲನೆ ಎರಡೂ ಕಂಕುಳಲ್ಲಿ ಊರುಗೋಲುಗಳನ್ನು ಸಿಕ್ಕಿಸಿಕೊಂಡು ಮನೆಯತ್ತ ನಡೆದಳು ಮೊಗದ ಮೇಲೊಂದು ಸಣ್ಣ ನಗುವನ್ನೇರಿಸಿ.
~೨~
“ಕೂಸೆ.. ಮೊನ್ನೆ ನಡೆದ ಊರ ಜಾತ್ರೆಯಲ್ಲಿ ಮುಖವಾಡಗಳನ್ನಿಟ್ಟಿದ್ರಂತೆ.. ನೀನೂ ಒಂದು ಹಿಡ್ಕಂಡು ಬಂದಿರೋ ಹಾಗಿದೆ..?” ವಿನೇತ್ರಿಯನ್ನೇ ನೇರವಾಗಿ ದಿಟ್ಟಿಸುತ್ತಾ ಕೇಳಿದಳು ಗೋಪಜ್ಜಿ. ಜಗುಲಿಯಲ್ಲಿ ಕಾಲ್ಗಳನ್ನು ನೀಡಿ ಕುಳಿತಿದ್ದ ಅಜ್ಜಿಯ ಪಕ್ಕದಲ್ಲೀ ತಾನೂ ಕುಳಿತು, ಒತ್ತಾಯದಿಂದ ತಾನೇ ಅವಳ ಕಾಲ್ಗಳಿಗೆ ನೋವಿನ ತೈಲ ನೀವುತ್ತಿದ್ದ ವಿನೇತ್ರಿಗೆ ಫಕ್ಕನೆ ಅಜ್ಜಿಯ ಒಗಟಿನ ಮಾತು ಅರ್ಥವಾಗಲಿಲ್ಲ. “ಅಯ್ಯೋ ಯಾರಂದ್ರು ಅಜ್ಜಿ? ನಾನೆಂತಕ್ಕೆ ಆ ಮಳ್ಳು ಮುಖವಾಡ ತರ್ಲಿ? ನಂಗೆಂತ ಹುಚ್ಚೇ..?” ಕಿರುನಕ್ಕಳು ವಿನೇತ್ರಿ. “ಸರಿ ಮತ್ತೆ.. ಬಿಸಾಕು ಈ ಸುಳ್ಳು ನಗೆಯ ಮುಖವಾಡವ.. ನೀ ಬೇರೆಯವ್ರ ಮುಂದೆ ಇದ್ನ ಹಾಕ್ಕೋಬಹುದು... ಆದ್ರೆ ಈ ಅಜ್ಜಿಯ ಮುಂದೆ ನಡ್ಯಲ್ಲ ತಿಳ್ಕ. ಹೌದು, ಎಲ್ಲೋಗಿದ್ದೆ ಬೆಳ್ ಬೆಳ್ಗೆ? ದೋಸೆನೂ ತಿಂದಿಲ್ವಂತೆ... ನಿನ್ನಮ್ಮ ಸುಧಾ ಬೇಜಾರು ಮಾಡ್ಕೊಂಡು ತಾನೂ ತಿಂದಿಲ್ಲ ಗೊತ್ತಾ? ನಂಗೆ ನಿನ್ನ ಮನಸು ಗೊತ್ತಾಗತ್ತೆ ಕೂಸೆ.. ಆದ್ರೆ ನೀನೂ ಹೆತ್ತಮ್ಮನ ಸಂಕ್ಟಾನ ಅರ್ಥ ಮಾಡ್ಕೊಬೇಕು.. ಅವ್ಳ ಸಮಾಧಾನಕ್ಕಾದ್ರೂ ಸ್ವಲ್ಪ ತಿಂಡಿ ತಿನ್ಬಾರ್ದಿತ್ತಾ? ಹೌದು.. ಯಾಕೆ ಇಷ್ಟೊಂದು ಕಣ್ಣು ಊದಿಕೊಂಡಿದೆ? ಅಳ್ತಾ ಇದ್ಯಾ? ವಿಷ್ಯ ಏನು ಅಂತ ಹೇಳು ಮೊದ್ಲು..” ಕುಕ್ಕಲತೆಯಿಂದ ಮೊಮ್ಮಗಳ ತಲೆ ಸವರಲು, ಒಳಗೆಲ್ಲೋ ಕಟ್ಟಿದ್ದ ಅವಳ ದುಃಖದ ಭಾರ ಜಗ್ಗಲು, ತಲೆ ತಗ್ಗಿಸಿದಳು ವಿನೇತ್ರಿ.
“ಅತ್ತೆ ರಾತ್ರಿಗೇನು ಮಾಡ್ಲಿ? ಮಧ್ಯಾಹ್ನದ ಸಾರೊಂದು ಸರಿಯಾಗಿದೆ.. ಮಜ್ಗೆಹುಳಿ ಯಾಕೋ ಕೆಟ್ಟಿರೋ ಹಾಗಿದ್ಯಪ್ಪ..” ಚಿಕ್ಕ ಸೊಸೆ ವಿಮಲಾ ಕೇಳಲು, “ಏನಾದ್ರೊಂದು ಮಾಡೆ.. ನಾನು ವಿನು ಇಬ್ರೂ ಹೊರಗೆ ಅಂಗಳದಲ್ಲಿ ಆಲದ ಕಟ್ಟೆಯ ಮೇಲೆ ಕೂತಿರ್ತೇವೆ.. ಸದ್ಯಕ್ಕೆ ನಮ್ಮನ್ನ ಊಟಕ್ಕೆ ಕರೀಬೇಡ್ರಿ.. ಆಮೇಲೆ ವಿನೇತ್ರಿ ನಾನು ಬಡಿಸ್ಕೊಂಡು ಉಣ್ತೇವೆ..” ಎಂದ ಗೋಪಮ್ಮ ಅಂಗಳದ ಕಡೆ ಮೆಲ್ಲನೆ ಸಾಗಲು, ಅವಳನ್ನೇ ನಿಧಾನಕ್ಕೆ ಹಿಂಬಾಲಿಸಿದಳು ವಿನೇತ್ರಿ.
~~~~
ಗೋಪಜ್ಜಿಯ ಪತಿ ನಾರಾಯಣ ರಾಯರು ತಮ್ಮ ಬಾಲ್ಯದಲ್ಲಿ ನೆಟ್ಟಿದ್ದ ಆಲದ ಗಿಡ ಬೆಳೆದು, ಮರವಾಗಿ, ಅದಕ್ಕೆ ಮಗ ಶ್ರೀಹರಿಯೇ ಆಸ್ಥೆಯಿಂದ ಕಟ್ಟೆ ಕಟ್ಟಿಸಿದ್ದ. ಐದು ವರುಷದ ಹಿಂದೆ ತೊರೆದು ಹೋದ ಪತಿಯ ಸಾಂಗತ್ಯದ ಬೆಚ್ಚನೆಯ ಅನುಭವ ಕೊಡುವ ಈ ಆಲದ ಮರದ ಕಟ್ಟೆಯೆಂದರೆ ಗೋಪಮ್ಮನಿಗೆ ಬಲು ಅಕ್ಕರೆ. ಪ್ರತಿ ದಿವಸ ತಾಸೊಪ್ಪತ್ತಾದರೂ ಅಲ್ಲೇ ಕುಳಿತು, ಹಬ್ಬಿಸಿರುವ ಜಾಜಿ ಬಳ್ಳಿಯಿಂದ ನಾಲ್ಕು ಮೊಗ್ಗು ಕೊಯ್ದು ತಲೆಗೆ ಸೂಡಿಕೊಂಡು ಆಘ್ರಾಣಿಸುವುದು ಅವಳ ತಪ್ಪದ ದಿನಚರಿ. ಇವತ್ತೂ ಅಷ್ಟೇ, ನಾಲ್ಕೇ ನಾಲ್ಕು ಮೊಗ್ಗನ್ನು ತನ್ನ ಮುಡಿಗೇರಿಸಿಕೊಂಡು ಮೊಮ್ಮಗಳ ಬೆನ್ನು ಸವರಿದ್ದೇ ಅವಳ ಅಣೆಕಟ್ಟು ಸಡಿಲವಾಗಿತ್ತು.
“ಅಜ್ಜಿ ನಾನು ಯಾರಿಗೆ ಯಾವಾಗ ಅನ್ಯಾಯ ಮಾಡ್ದೆ ಅಂತ ಭಗವಂತ ಹೀಗೆ ಮಾಡ್ದ? ಅಷ್ಟೊಂದು ಪ್ರೀತಿ ತೋರಿಸ್ತಿದ್ದ ಮನೋಹರ, ತನ್ನ ನಿರ್ಲಕ್ಷ್ಯದಿಂದ್ಲೇ ನನ್ನ ಕಾಲು ಹೋಗಿದ್ರೂ, ಯಕಃಶ್ಚಿತ್ ದುಡ್ಡು ಕೊಟ್ಟು ಕೈ ತೊಳ್ಕೋಳೋವಷ್ಟು ನೀಚ ಮಟ್ಟಕ್ಕೆ ಬಂದ್ಬಿಟ್ಟ ಪಾಪಿ.. ಅವ್ನೀಗ ಆರಾಮಾಗಿರ್ಬಹುದು.. ಆದ್ರೆ ನಂಗೆ ಮಾತ್ರ ಈ ನೋವು ನಿತ್ಯ ಸತ್ಯ..” ನಿಃಶ್ಯಬ್ದವಾಗಿ ಬಿಕ್ಕಿದಳು ವಿನೇತ್ರಿ.
“ವಿನು.. ಆಗೋಗಿದ್ದಕ್ಕೆ ಹೀಗೆ ಕೊರ್ಗೋದ್ರಿಂದ ನಯಾ ಪೈಸೆ ಪ್ರಯೋಜನವಿಲ್ಲವೆಂದು ಎಷ್ಟು ಸಲ ಹೇಳ್ತೀನಿ ನಿಂಗೆ! ಆಗಿದ್ದಾಗೋಯ್ತು.. ಸರಿ.. ಮುಂದೆ? ಜೀವ್ನ ಪೂರ್ತಿ ಹೀಗೇ ಕೊರಗ್ತಾ, ಅಳ್ತಾ ಇರ್ತೀಯಾ? ಆಗ ನಿನ್ನ ಕಾಲು ಬೆಳ್ದು ಬಿಡತ್ತಾ ಹೇಳು? ಆ ಅಯೋಗ್ಯ ನಿನ್ನ ಪತಿಯಾಗೋದನ್ನ ವಿಧಿ ಹೀಗೆ ತಪ್ಪಿಸ್ತು ಅನ್ಕೊ.. ಹೌದು, ಆವತ್ತೇ ಕೇಸ್ ಹಾಕ್ತಿನಿ ಅಂದಿದ್ದ ನಿನ್ನಪ್ಪ ಶ್ರೀಧರ.. ನೀನೇ ಬೇಡ ಅಂತ ನಿಲ್ಲಿಸ್ಬಿಟ್ಟೆ..” ಊಹೂಂ.. ಇಂದೇಕೋ ಅವಳಿಗೆ ಅಜ್ಜಿಯ ಯಾವ ಮಾತೂ ಸಮಾಧಾನ ನೀಡುತ್ತಿಲ್ಲ.
“ಹೌದಜ್ಜಿ ಬೇಡ ಅಂದಿದ್ದೆ... ಕೇಸ್ ಹಾಕಿ, ಆತ ಒಂದು ದಿನ ಒಳ್ಗೆ ಹೋಗಿದ್ರೂ, ಅವನಿಗೆ ಸಮಾಧಾನ ಸಿಕ್ಬಿಡೋದು... ಅದೂ ಅಲ್ದೇ ಆಗ ಈ ಕೇಸು, ಕೋರ್ಟು ಅಂತೆಲ್ಲಾ ಓಡಾಡೋದು, ಅವ್ನ ಮುಸುಡಿಯನ್ನೇ ಪದೇ ಪದೇ ನೋಡೋದು, ಇವೆಲ್ಲಾ ನಂಗೆ ಸಾಧ್ಯವೇ ಇರ್ಲಿಲ್ಲ. ಅಜ್ಜಿ ನಾನ್ಯಾವತ್ತೂ ಯಾರಿಗೂ ನೋವು ಕೊಟ್ಟ ನೆನಪೂ ಇಲ್ಲ.. ಅನ್ಯಾಯದ ದಾರಿ ಹಿಡಿದಿಲ್ಲ.. ಆದ್ರೂ ನಂಗೆ ಹೀಗಾಯ್ತು.. ಆದ್ರೆ ನೋಡು, ಆ ವತ್ಸಲಕ್ಕ ತನ್ನ ಗಂಡನಿಗೆ ಎಂಥಾ ದೊಡ್ಡ ಮೋಸ ಮಾಡ್ತಿದ್ರೂ ಆರಾಮಾಗಿ ಖುಶಿಯಿಂದಿದ್ದಾಳೆ..” ಬೇಡವೆಂದರೂ ತಿರಸ್ಕಾರ ಅವಳ ಮುಖದಲ್ಲಿ ಸ್ಪಷ್ಟವಾಗಿ ಮೂಡಿತ್ತು. ಮೊಮ್ಮಗಳ ಕೊನೆಯ ಮಾತಿನಿಂದ ಅವಳ ಬೆನ್ನು ಸವರುತ್ತಿದ್ದ ಗೋಪಜ್ಜಿಯ ಕೈಗಳು ಗಕ್ಕನೆ ನಿಂತುಬಿಟ್ಟವು.
“ವಿನು ವತ್ಸಲೆ ಸರಿಯಿಲ್ಲ ಅಂತ ನಿಂಗ್ಯಾರಂದ್ರು? ನೀನೇ ಕಣ್ಣಾರೇ ಕಂಡ್ಯಾ? ಅವ್ಳ ಬದುಕಿನ ಬಗ್ಗೆ ನಿಂಗೇನು ಗೊತ್ತು? ಏನೂ ಅರಿವಿಲ್ದೇ ಇಂಥಾ ಕೆಟ್ಟ ಆರೋಪ ಸರಿಯಲ್ಲಮ್ಮ..” ಅಜ್ಜಿಯ ಖಡಕ್ ನೇರ ಮಾತಿಗೆ ಅಪ್ರತಿಭಳಾದಳು ವಿನೇತ್ರಿ.
“ಅಜ್ಜಿ ಎಷ್ಟೋ ವರ್ಷದಿಂದ ಅಕ್ಕ-ಪಕ್ಕದ ಎಲ್ರೂ ಮಾತಾಡ್ತಿರೋದೂ ಇದೇ ಅಲ್ವಾ? ಮೊನ್ನೆ ಜಾತ್ರೆಯಲ್ಲಿ ಸಿಕ್ಕ ಪದ್ಮಾವತಿ ಏನಂದ್ಳು ಗೊತ್ತಾ..? ‘ಕಟ್ಕೊಂಡ ಗಂಡ ಹಾಸ್ಗೆ ಹಿಡ್ದು ಮಲ್ಗಿರೋವಾಗ, ಈಕೆ ಮಾತ್ರ ಆ ನಾಯ್ಕನ ಜೊತೆ ಸೇರಿ ಲಲ್ಲೆ ಹೊಡಿತಿರ್ತಾಳೆ’ ಅಂತ. ಅದೇನೋ ಅಂದ್ಳಪ್ಪ.. ವತ್ಸಲಕ್ಕನ ಅಪ್ಪ ಏನೋ ಅಪರಾಧ ಮಾಡಿದ್ನಂತೆ.. ಅದ್ರ ಸೇಡಿಗೆ ಈ ಮದ್ವೆ ಆಗಿದ್ದಂತೆ.. ಅಲ್ಲಾ, ಪ್ರೀತಿಸಿ ಮದ್ವೆಯಾದ್ಮೇಲೆ ಸರಿಯಾಗಿ ನಿಭಾಯಿಸ್ಬೇಕಲ್ವಾ? ಪಾಪ.. ಶ್ರೀಧರಣ್ಣ ಮಲ್ಗಿದಲ್ಲೇ ಇರ್ತಾನೆ ಅಂತ ಈಕೆ ಅವನ ಅಸಹಾಯಕತೆಯನ್ನು ಉಪಯೋಗಿಸ್ಕೊಳ್ಬಹುದಾ? ಇವತ್ತೂ ತೋಟದಲ್ಲಿ ಕೂತಿದ್ದಾಗ ಹೊಳೆ ಬೇಲಿಯಿಂದ ಇಬ್ರೂ ಮಜವಾಗಿ ನಗ್ತಾ ಬರ್ತಿದ್ದನ್ನ ಕಂಡೆ. ಸ್ವಲ್ಪನೂ ಹೆದ್ರಿಕೆ, ನಾಚ್ಗೆ ಇಲ್ಲಾ ಇಬ್ರಿಗೂ.. ಅದ್ರ ಮೇಲೆ ನನ್ನ ಮೇಲೆ ಕರುಣೆ ತೋರಿಸ್ತಾಳೆ.. ಇವತ್ತು ನನ್ನ ತಲೆ ಕೆಟ್ಟೋಗಿದ್ದೇ ಅವ್ಳು ತೋರಿದ ಅನುಕಂಪದಿಂದ..” ಧ್ವನಿಯಲ್ಲಿ ಆಕ್ರೋಶ ತುಂಬಿತ್ತು.
ಗೋಪಜ್ಜಿ ಅರೆ ಕ್ಷಣ ಕಣ್ಮುಚ್ಚಿ ಕುಳಿತುಬಿಟ್ಟಳು. ಅಜ್ಜಿಯ ಈ ಮೌನದಿಂದ ತುಸು ಹೆದರಿದಳು ವಿನೇತ್ರಿ. “ತಾನೇನಾದರೂ ಆಡಬಾರದ್ದನ್ನು ಹೇಳಿದೆನೆ? ಸ್ವತಃ ನೋಡಿದ್ದನ್ನೇ ಹೇಳಿದ್ದೇನಪ್ಪಾ.. ಅಜ್ಜಿ ಯಾಕೋ ಬೇಜಾರಾಗ್ಬಿಟ್ಳು..” ಚಡಪಡಿಸಿದಳು ಒಳಗೇ. ಎರಡು ನಿಮಿಷದ ನಂತರ ಕಣ್ಬಿಟ್ಟ ಗೋಪಮ್ಮ, ನಿಟ್ಟುಸಿರ ಬಿಟ್ಟು..
“ವಿನೇತ್ರಿ.. ನೀನ್ಯಾವಾಗ ಅವರಿವರ ಮಾತಿಗೆ ಬೆಲೆ ಕೊಡೋಕೆ ಶುರು ಮಾಡ್ದೆ? ನಿನ್ನ ಒಳ ಧ್ವನಿ ಮಂಕಾಗಿ ಹೋಗಿದ್ಯಾ? ವತ್ಸಲೆ ಬಗ್ಗೆ ನಿನಗೇನೂ ಗೊತ್ತಿಲ್ಲ.. ಇಷ್ಟಕ್ಕೂ ಇವತ್ತು ನೀ ನೋಡಿದ್ದಾದ್ರೂ ಏನು? ಅವ್ರಿಬ್ರೂ ಒಟ್ಟಿಗೆ ನಗ್ತಾ ಇದ್ದಿದ್ದು.. ಅಷ್ಟೇ ತಾನೇ? ಹೌದು ಪ್ರೀತ್ಸಿ ಕಟ್ಕೊಂಡ್ಮೇಲೆ ನಿಭಾಯಿಸ್ಬೇಕು ಅಂದ್ಯಲ್ಲಾ.. ಬೇಜಾರಾಗ್ಬೇಡ.. ಈಗ, ಒಂದ್ವೇಳೆ ಆ ಮನೆಹಾಳ ಮನೋಹರ ಆಸ್ತಿಗೋಸ್ಕರ ನಾಟ್ಕದ ಪ್ರೀತಿ ತೋರ್ಸಿ ನಿನ್ನ ಮದ್ವೆಯಾಗಿ, ಆಮೇಲೆ ಬರೀ ಕಟುಕಿಯಾಡ್ತಾ, ನಿರ್ಲಕ್ಷ್ಯಮಾಡಿ ನಿನ್ನ ಮೂಲೆಗುಂಪು ಮಾಡಿದ್ದಿದ್ರೆ ನೀನು ಸುಮ್ನಿದ್ದು ನಿಭಾಯಿಸ್ತಿದ್ಯಾ? ನಾವಾದ್ರೂ ಹಾಗೆ ಮಾಡೋಕೆ ಬಿಡ್ತಿದ್ವಾ? ಬದುಕು ನಿಷ್ಕರುಣಿ ವಿನೇತ್ರಿ. ಇಲ್ಲಿ ಕಾಣದೇ ಇರೋ ಸತ್ಯ ಸಾವ್ರ ಇವೆ. ವತ್ಸಲೆಯ ಮೇಲೆ ಈ ದಡ್ಡ ಜನರು ಕಟ್ಟಿರೋ ಬಣ್ಣಕ್ಕೆ ಮೋಸ ಹೋಗ್ತಿದ್ದಿ ನೀನು. ಹ್ಮ್ಂ.. ಹೋಗ್ಲಿ ಬಿಡು.. ನಿಂಗಿವತ್ತು ವತ್ಸಲೆಯ ಕಥೆಯನ್ನೇ ಹೇಳ್ತಿನಿ ನಾನು.. ಆದ್ರೆ ಯಾವ್ದೇ ಕಾರಣಕ್ಕೂ ಇದು ನಿನ್ನಿಂದ ಹೊರ ಬೀಳ್ಕೂಡ್ದು. ಈ ಕಥೆಗೆ ರೆಕ್ಕೆ ಪುಕ್ಕ ಕಟ್ಟಿ ಬೇರೇ ರೂಪ ಸಿಗೋದು ನಂಗೆ ಸುತಾರಾಂ ಇಷ್ಟವಿಲ್ಲ. ಈ ಗಾಳಿ ಮಾತುಗಳನ್ನ ಎಂದೂ ನಂಬ ಬಾರ್ದು ವಿನೇತ್ರಿ. ನಿನ್ನಜ್ಜ ಈ ಮನೆಗೆ ಮದ್ವೆಯಾಗಿ ಕರ್ಕೊಂಡು ಬಂದಾಗ ಪಕ್ಕದಲ್ಲಿ ಕೂರಿಸ್ಕೊಂಡು ಹೇಳಿದ್ದ.. ‘ಗೋಪಿ.. ನೀನು ಇಲಿ ಕಂಡ್ರೂ ಇಲಿ ಅಂತಾನೇ ಹೇಳ್ಬೇಕು.. ಹುಲಿ ಅನ್ಬಾರ್ದು ಅಷ್ಟೇ.. ಇಷ್ಟು ಮಾಡಿದ್ರೆ, ಈ ಒಟ್ಟು ಕುಟುಂಬ ನಿನ್ನಿಂದ ಇಬ್ಭಾಗ ಆಗಲ್ಲ ಅನ್ನೋ ವಿಶ್ವಾಸ ನನ್ಗಿದೆ’ ಅಂತ. ಈ ಮಾತೊಳಗಿನ ಅರ್ಥ ಕ್ರಮೇಣ ನಂಗಾಯ್ತು.. ನೀನೂ ನೆನ್ಪಿಟ್ಕೋ. ನಿನ್ನ ಮೇಲಿನ ವಿಶ್ವಾಸದಿಂದ ಹೇಳ್ತಿದ್ದೀನಿ ಎಲ್ಲಾ...” ಎಪ್ಪತ್ತೆಂಟರ ಹಿರಿಯ ಜೀವದ ನೇರ ಮಾತಿನ ಮೊನಚಿನಿಂದ ತನ್ನ ತಪ್ಪಿನ ಅರಿವಾಗಲು, ನಾಚಿ ತಲೆ ತಗ್ಗಿಸಿದಳು ವಿನೇತ್ರಿ.
“ಸ್ಸಾರಿ ಅಜ್ಜಿ.. ಅದೇನು ಮಂಕು ಕವಿದಿತ್ತೋ ನಂಗೆ.. ಏನೇನೋ ಅಂದ್ಬಿಟ್ಟೆ.. ವತ್ಸಲಕ್ಕನ ಬಗ್ಗೆ ತುಂಬಾ ಕೆಟ್ಟದಾಗಿ ಯೋಚಿಸ್ಬಿಟ್ಟೆ... ಇಷ್ಟಕ್ಕೂ ನಂದೇ ಹಾಸಿ ಹೊದ್ಕೊಳೋವಷ್ಟಿದ್ರೂ.. ಸುಮ್ನೇ ಅವ್ಳ ಮೇಲೆ...” ಮಾತು ಮುಂದೆ ಹೊರಳದೇ ಸುಮ್ಮನಾದಳು.
“ನಿಂದೇನೂ ತಪ್ಪಿಲ್ಲ ಕೂಸೆ.. ಮನಸೊಳಗೆ ಒಬ್ರ ಮೇಲೆ ಪೂರ್ವಾಗ್ರಹವಿದ್ರೆ, ಅವರು ಸಹಜ ಕಾಳಜಿ ತೋರಿದ್ರೂ ಅದು ವ್ಯಂಗ್ಯ ಅನ್ನಿಸ್ತದೆ ನಾಮ್ಗೆ. ಈ ಜಗತ್ತಿನ ಜನ ಹೀಗೇ.. ತಾವೇ ಒಂದು ಚೌಕಟ್ಟು ಹಾಕಿ, ನಮ್ಮನ್ನು ಅದ್ರೊಳ್ಗೆ ಕೂರ್ಸಿ.. ಇಲ್ಲೇ ಇರು.. ಹೊರ ಬಂದ್ರೆ ಕಚ್ತೀವಿ, ಹೊಡೀತೀವಿ ಅಂತಾರೆ. ಆದರೆ ಇದಕ್ಕೆ ಹೆದರದೇ ಹೊರ ಬಂದ್ರೆ, ನಮ್ಮ ಕೆಚ್ಚು ಕಂಡು, ಹೆದರಿ.. ಎದುರ್ಸೋಕೆ ಆಗ್ದೆ ಹೀಗೆಲ್ಲಾ ಆಡ್ತಾರೆ. ಬಿಟ್ಬಿಡು ಇನ್ನು ಈ ವಿಷ್ಯವ.. ಈಗ ಕಥೆ ಕೇಳು..” ಸಮಾಧಾನಿಸಲು, ತುಸು ಗೆಲುವಾದಳು ವಿನೇತ್ರಿ.
“ವಿನು, ನಾನು ಈ ಮನೆಗೆ ಬಂದಾಗ ವತ್ಸಲೆಯ ಅಮ್ಮ ಸರಸ್ವತಿಗಿನ್ನೂ ಮದುವೆಯೂ ಆಗಿರಲಿಲ್ಲ ಗೊತ್ತಾ? ಗೋಧಿ ಬಣ್ಣದ ಬಡಕಲು ಶರೀರದ ಕೂಸಾಗಿತ್ತದು. ಎಳವೆಯಲ್ಲೇ ಅಪ್ಪ ತೀರಿಹೋಗಿದ್ದ. ತಮ್ಮ ಪಾಲಿಗೆ ಬಂದಿದ್ದ ಅಲ್ಪ ಸ್ವಲ್ಪ ತೋಟ, ಗದ್ದೆಯ ಅದಾಯದಿಂದ ಹೇಗೋ ಅಬ್ಬೆ ಆನಂದಿಬಾಯಿ ಮತ್ತು ಮಗಳ ಬದುಕು ನಡೀತಿತ್ತು. ನಂಗೆ ಮಾಲತಿ ಹುಟ್ಟಿದಾಗ ಅವ್ಳ ತೊಟ್ಲು ತೂಗಿ, ಲಾಲಿ ಹಾಡಿ ನಂಗೆ ತುಸು ಬಿಡುವು ಕೊಟ್ಟಿದ್ದೆಲ್ಲಾ ಈ ಸರಸ್ವತಿಯೇ. ಅದೇನು ಪ್ರೀತಿನೋ ಅವ್ಳಿಗೆ ನಮ್ಮ ಮಾಲತಿ ಮೇಲೆ... ನನ್ನನ್ನು ‘ಮಾಲ್ತಿ ಆಯಿ’ ಎಂದೇ ಕರ್ಯೋಕೆ ಶುರು ಮಾಡಿದ್ಳು. ಮುಂದೆ ಅವ್ಳ ಮಗ್ಳು ವತ್ಸಲೆಯೂ ಇದನ್ನೇ ಅಭ್ಯಾಸ ಮಾಡ್ಕೊಂಡ್ಬಿಟ್ಳು. ಹಾಗಾಗಿ ಈಗ್ಲೂ ಆಕೆ ನನ್ನ ಕರ್ಯೋದು ‘ಮಾಲ್ತಿ ಆಯಿ’ ಎಂದೇ. ಪಾಪದ ಕೂಸಾಗಿದ್ದ ಸರಸ್ವತಿಗೆ ಅದೆಲ್ಲಿಂದ ಆ ಕಚ್ಚೆ ಹರುಕ ರಾಜಾರಾಮ ಗಂಟು ಬಿದ್ನೋ...! ಪುಂಡು ಪೋಕರಿಯಂತಿದ್ದ ಆತ, ಆಸ್ತಿಯ ಮೇಲೆ ಕಟ್ಟಿಟ್ಟು ಆನಂದಿಬಾಯಿಯನ್ನು ಏಮಾರಿಸಿ, ಅವಳ ಮಗಳನ್ನು ಮದುವೆಯಾಗಿಬಿಟ್ಟ. ನಿನ್ನಜ್ಜ ಅದೇ ಸಮಯದಲ್ಲೇ ಕೆಲಸದ ನಿಮಿತ್ತ ಘಟ್ಟಕ್ಕೆ ಹೋಗಿದ್ದ. ಇಲ್ಲದಿದ್ದಲ್ಲಿ ವಿಚಾರಿಸಿ ಬೇಡಾ ಹೇಳ್ತಿದ್ರೇನೋ... ಎಲ್ಲಾ ಹಣೆಬರಹ. ಆದ್ರೆ ಮೂವತ್ತು ವರುಷಗಳ ಹಿಂದೆ, ಆ ಕರಾಳ ರಾತ್ರಿಯಲ್ಲಿ ನಡೆದ ಘೋರ ಘಟನೆ ಸರಸ್ವತಿಯ ಬದುಕನ್ನೇ ಕಸಿದುಕೊಂಡ್ರೆ, ವತ್ಸಲೆಯ ಬದುಕನ್ನೇ ಬದಲಿಸಿ ಬಿಟ್ಟಿತು...” ಗೋಪಜ್ಜಿ ಗತಕಾಲದಲ್ಲೆಲ್ಲೋ ಅರೆಕ್ಷಣ ಕಳೆದೇ ಹೋದಳು. ಆದರೆ ಇತ್ತ ವಿನೇತ್ರಿಯ ಕಾತುರತೆ ಎಲ್ಲೆ ಮೀರತೊಡಗಿತ್ತು.
“ಅಜ್ಜಿ ಹೊತ್ತಾಗ್ತಾ ಬಂತು.. ಅದೂ ಅಲ್ದೇ, ಯಾರಾದ್ರೂ ಇಲ್ಲಿಗೆ ಬಂದ್ರೆ, ನೀನು ಕಥೆ ಹೇಳೋದನ್ನ ನಿಲ್ಲಿಸ್ಬಿಡ್ತೀಯಾ... ನಂಗೆ ನಾಳೆಯವರೆಗೂ ಕಾಯೋಕಾಗಲ್ಲ.. ದಯವಿಟ್ಟು ಬೇಗ ಹೇಳಿ ಮುಗಿಸಿಬಿಡು ಪ್ಲೀಸ್..” ಅಜ್ಜಿಯ ಬಳಸಿ, ಅವಳ ಭುಜಕ್ಕೆ ತನ್ನ ತಲೆಯೊರಗಿಸಿಕೊಂಡು ವಿನಂತಿಸಿದಳು ವಿನೇತ್ರಿ.
“ಒಂದಿಡೀ ಬದುಕನ್ನೇ ಸ್ವಾಹಾ ಮಾಡಿದ ಕಥೆಯನ್ನು ಹೇಳೋಕೆ ಸ್ವಲ್ಪವಾದ್ರೂ ಸಮಯ ಬೇಡ್ವೇ ಹುಡ್ಗಿ? ಹ್ಮ್ಂ.. ಈಗ ವತ್ಸಲೆಗೆ ಮೂವತ್ತಾಲ್ಕೋ ಮೂವತ್ತೈದೋ ಆಗಿರ್ಬಹುದು.. ಹೌದು.. ನನ್ನ ಮದುವೆಯಾಗಿಯೇ ಅರವತ್ತು ವರ್ಷದ ಮೇಲಾಯ್ತಲ್ಲ. ವತ್ಸಲೆಯ ಅಪ್ಪ ರಾಜಾರಾಮ ಶುದ್ಧ ಗುಳ್ಳೆ ನರಿ ಬುದ್ಧಿಯವ ಎಂದು ಮೊದಲೇ ಅಂದೆನಲ್ಲಾ. ಸ್ವಂತ ಗಟ್ಟಿ ನೆಲೆಯಿಲ್ಲದೇ ಅವರಿವರ ಮನೆಯಲ್ಲೇ ಬಿದ್ದುಕೊಂಡಿರುತ್ತಿದವ ಮದುವೆಯಾದ ಮೇಲೆಯೇ ಒಂದು ಸೂರು ಕಂಡಿದ್ದು. ಶುರುವಿನಲ್ಲಿ ಸರಸ್ವತಿಯ ಅಬ್ಬೆ ಆನಂದಿಬಾಯಿಗೋ ಮನೆಯಳಿಯನ ರೂಪದಲ್ಲಿ ಮನೆಮಗನೇ ಸಿಕ್ಕಷ್ಟು ಖುಶಿ. ಆದರೆ ಪಾಪ ಆಗಿದ್ದೇ ಬೇರೆ. ಮದುವೆಯಾಗಿ ತಿಂಗಳಾಗುತ್ತಲೇ ಪತ್ನಿಯನ್ನು ಜರೆಯತೊಡಗಿದ್ದ. ‘ಕಪ್ಪು ತೊಗಲಿನ ಕಡ್ಡಿ ಗೂಟ ನೀನು.. ಏನು ಸುಖ ಬಂತೋ ನಂಗೆ.. ಒಟ್ನಲ್ಲಿ ಮೋಸವಾಗೋಯ್ತು.. ಆಸ್ತಿಯಾದ್ರೂ ಪಾಲಿಗೆ ಬರತ್ತ ನೋಡ್ಬೇಕು..’ ಎಂದು ಅತ್ತೆ ಆನಂದಿಯ ಮುಂದೆಯೇ ಹೀಯಾಳಿಸುತ್ತಿದ್ದನಂತೆ. ಪಾಪ ಸಂಕ್ಟ ತಡೀಲಾಗ್ದೇ ನನ್ನ ಬಳಿ ಬಂದು ಎಷ್ಟೋ ಸಲ ಹೇಳ್ಕೊಂಡು ಕಣ್ಣೀರಿಟ್ಟಿದ್ಳು ಆನಂದಿಬಾಯಿ. ಮದುವೆಯಾಗಿ ವರುಷದೊಳಗೆ ಹೆಣ್ಣು ಮಗು ಹುಟ್ಟಲು, ಬಡಪಾಯಿ ಹೆಂಡತಿಯ ಜರೆಯಲು ಹೊಸತೊಂದು ಅಸ್ತ್ರ ಸಿಕ್ಕಿತ್ತು ರಾಜಾರಾಮನಿಗೆ. ಆದರೆ ಆತ ನಿನ್ನಜ್ಜನ ಮುಂದೆ ಮಾಹನ್ ಸಭ್ಯಸ್ಥನಂತಿರುತ್ತಿದ್ದ. ಆದರೇನಂತೆ.. ಈತನ ಕಂತ್ರಿ ಬುದ್ಧಿ ಚೆನ್ನಾಗಿ ಗೊತ್ತಿತ್ತು ರಾಯರಿಗೆ. ಸುಮ್ಮನೇ ಆ ಸಾಧ್ವಿ ಸರಸ್ವತಿಗೆ ಮತ್ತೆ ಏಟು ಬೀಳಬಾರದೆಂದು ಗಟ್ಟಿ ಹೇಳದೇ ಸುಮ್ಮನಾಗುತ್ತಿದ್ದರು. ಹಾಗೂ ಒಮ್ಮೊಮ್ಮೆ ತಡಿಯದೇ ಬುದ್ಧಿ ಹೇಳುತ್ತಿದ್ದುದುಂಟು. ಆಗೆಲ್ಲಾ ಆ ದುರುಳ ಇವರ ಮುಂದೆ ತಿಪ್ಪೆ ಸಾರಿಸಿ.. ಅಂದು ಸಮಾ ಚಚ್ಚುತ್ತಿದ್ದನಂತೆ ಸರಸ್ವತಿಯ. ಹೀಗಾಗಿ ದಿನಗಳೆದಂತೇ ಅದು ಮೂಕಿಯೇ ಆಗೋಯ್ತು ಅನ್ಬೇಕು. ಅಬ್ಬೆ ಹತ್ರನೂ ಏನೂ ಹೇಳ್ಕೊಳ್ದೇ ಒಳಗೊಳಗೇ ಕುದಿಯತೊಡಗಿದ್ಳು. ಆದರೆ ಅವಳ ಮುಖದಲ್ಲಿ ತುಸು ನಗು, ಸಂತೋಷ ಕಾಣ್ತಿದ್ದುದು ವತ್ಸಲೆ ತೊಡೆಯೇರಿದಾಗಲೇ. ಅದೂ ಅವಳಪ್ಪ ಮನೆಯಲ್ಲಿದ್ದಾಗ ಮುದ್ದಾಡುವಂತಿರಲಿಲ್ಲ. ‘ಹೆಣ್ಣು ಕೂಸ್ನ ತಲೆ ಮೇಲೆ ಕೂರ್ಸಿ ಕೆಡಿಸ್ಬೇಡ..’ ಎಂದು ಕೂಗಾಡ್ತಿದ್ದ. ಇಸ್ಪೀಟು, ಜೂಜಿನಲ್ಲೆ ತೋಟದ ಆದಾಯದ ಬಹುಪಾಲನ್ನು ಪೋಲು ಮಾಡುತ್ತಿದ್ದ. ಮನೆಯೊಳಗೆ ಏನಿಲ್ಲ, ಏನುಂಟು ಎಂದು ಒಮ್ಮೆಯೂ ನೋಡಿದವನಲ್ಲ. ಇಬ್ಬರು ಹೆಂಗಸರು ಹೇಗೋ ಜಾಣ್ಮೆಯಿಂದ ಮೂರು ಹೊತ್ತು ಅನ್ನ ಬೇಯಿಸಿಕೊಳ್ಳಲು ಬೇಕಾದ್ದಷ್ಟನ್ನು ಕೂಡಿಟ್ಟುಕೊಳ್ತಿದ್ರು. ಮಜ್ಗೆ, ಮೊಸ್ರು, ತುಪ್ಪದ ಆಸೆಯಾದಾಗೆಲ್ಲಾ ಪುಟ್ಟ ಕುಸು ವತ್ಸಲೆ ನಮ್ಮನೆಗೆ ಬರ್ತಿತ್ತು. “ಮಾಲ್ತಿ ಆಯಿ ನಂಗೆ ಮಜ್ಗೆಗೆಗೆ ಚೂರು ಬೆಲ್ಲಾ ಹಾಕಿ ಕೊಡೇ” ಅಂತ ಕೇಳ್ತಿತ್ತು. ಆವಾಗೆಲ್ಲಾ ಸಂಕ್ಟ ಒದ್ದು ಬರೋದು ನಂಗೆ. ಎಷ್ಟೋ ಸಲ ಒಳ್ಳೆ ಅಡುಗೆ ಮಾಡಿ ಏನೋ ನೆಪದಲ್ಲಿ ಅವ್ರ ಮನೆಗೆ ಕಳಿಸ್ತಿದ್ದೆ. ಸ್ವಾಭಿಮಾನಿ ಸರಸ್ವತಿ ಪ್ರತಿ ವರ್ಷ ಹಪ್ಳ ಸಂಡಿಗೆ ಮಾಡೋವಾಗ್ಲೂ ಬಂದು ಎಷ್ಟು ಬೇಡ ಅಂದ್ರೂ ಕೇಳ್ದೆ, ಇಡೀ ದಿನ ಇದ್ದು ಮಾಡಿ ಕೊಟ್ಟು ಹೋಗೋಳು.
ಪಾಪ, ಬಡಪಾಯಿಯ ಗ್ರಹಚಾರ ಅಲ್ಲಿಗೇ ನಿಲ್ಲಲಿಲ್ಲ ನೋಡು.. ಗಂಡು ಬೇಕು ಅಂತ ಕುಣೀತಿದ್ದ ರಾಜಾರಾಮನ ಅವತಾರಕ್ಕೋ ಏನೋ.. ಮತ್ತೆ ಮಕ್ಕಳಾಗ್ಲೇ ಇಲ್ಲಾ ಸರಸ್ವತಿಗೆ. ಪ್ರತಿ ದಿವ್ಸ ಆಚೆ ಮನೆಯಿಂದ ಅಳು, ಕೂಗಾಟ ಮಾಮೂಲಾಯ್ತು. ತನ್ನ ನೋವನ್ನ ಹಲ್ಲು ಕಚ್ಚಿ ಸಹಿಸುವುದನ್ನು ಸರಸ್ವತಿ ಕಲಿತಿದ್ದಳು. ಆದರೆ ಅಮ್ಮನ ಸಿಟ್ಟನ್ನು ತನ್ನ ಮೇಲೆ ಅಪ್ಪ ತೋರಿದಾಗೆಲ್ಲಾ ಪುಟ್ಟ ವತ್ಸಲೆ ಸೂರು ಹಾರಿ ಹೋಗುವಂತೇ ಕೂಗುತ್ತಿದ್ದಳು. ಅದನ್ನು ಕೇಳುವಾಗೆಲ್ಲಾ ನಮಗೆ ಅವನ ತದುಕಿ ಬಿಡುವಷ್ಟು ರೋಷ ಉಕ್ಕೋದು. ಏನು ಮಾಡೋದು.. ಆನಂದಿಬಾಯಿ, ಸರಸ್ವತಿ ಸುಮ್ನಿದ್ಬಿಡಿ ಮಾವಯ್ಯ ಅಂತ ರಾಯರನ್ನು ಬೇಡ್ಕೊಳ್ಳೋರು. ಆದ್ರೂ ಒಂದಿನ ಎಳೇ ಕೂಸನ್ನ ಹೊಡೀವಾಗ, ಅದ್ರ ಕೂಗನ್ನು ಕೇಳಲಾಗ್ದೇ ಇವ್ರು ಎದ್ದು ಹೋಗಿ ಅವನಿಗೆ ಸಮಾ ಬೈದು, ಪಂಚಾಯ್ತಿಗೆ ಕರ್ಕೊಂಡು ಹೋಗ್ತೀನಿ ಅಂತ ಧಮ್ಕಿ ಹಾಕಿ ಬಂದಿದ್ರು. ಆಮೇಲೆ ಅದೇನಾಯ್ತೋ.. ಒಂದ್ವಾರ ಎಲ್ಲವೂ ಶಾಂತವಾಗಿತ್ತು. ಆದರೆ ಸರಸ್ವತಿ ಮತ್ತೂ ಮೌನವಾಗ್ಬಿಟ್ಟಿದ್ಳು. ಮಗ್ಳ ಹತ್ರಾನೂ ಅವ್ಳ ಮಾತು ತೀರಾ ಕಡ್ಮೆಯಾಗೋಯ್ತು. ಆ ದಿನದ ಕರಾಳ ರಾತ್ರಿಯ ನೆನೆದರೆ ಈಗಲೂ ಮೈ ಜುಮ್ಮಾಗುತ್ತದೆ. ಅಂದು ಬೆಳಗ್ಗಿನಿಂದಲೇ ನಿಲ್ಲದ ಮಳೆ.. ರಾತ್ರಿಯಂತೂ ರಚ್ಚೆ ಹಿಡಿದಂತೇ ಹೊಯ್ಯತೊಡಗಿತ್ತು.. ಮಿಂಚು, ಗುಡುಗಿನ ಆರ್ಭಟ ಬೇರೆ..” ಇದ್ದಕ್ಕಿದ್ದಂತೇ ಸುಮ್ಮನಾದಳು ಗೋಪಜ್ಜಿ. ಆ ಕೆಟ್ಟ ಘಟನೆಯ ಸ್ಮರಣೆಯಿಂದ ಅವಳಿಗೆ ನಿಃಶ್ಯಕ್ತಿ ಆವರಿಸಿದಂತಾಗಿತ್ತು. ಎರಡು ನಿಮಿಷ ಮೌನವಾಗಿದ್ದು, ತನ್ನ ಸಂಭಾಳಿಸಿಕೊಂಡು ಮುಂದುವರಿಸಿದಳು.
“ಆವತ್ತು ಇಲ್ಲಿಗೆ ಬಂದಿದ್ದ ವತ್ಸಲೆ, ನಮ್ಮ ಮಾಲತಿಯ ಮೂರು ತಿಂಗಳ ಶಿಶುವಿನ ಜೊತೆ ಆಡ್ಕೊಳ್ತಾ ಇಲ್ಲೇ ನಿದ್ದೆ ಮಾಡ್ಬಿಟ್ಟಿದ್ಳು. ಆನಂದಿಬಾಯಿ ಬೇರೆ ತನ್ನ ತೋಟದ ಮನೆ ಹತ್ರ ಹೋಗಿದ್ಳು. ಬೆಳ್ಗಾಗೋವಷ್ಟರಲ್ಲಿ ಸರಸ್ವತಿ ತನ್ನ ಕೋಣೆಯಲ್ಲಿ ಹೆಣವಾಗಿದ್ಳು. ಅವ್ಳ ಪಕ್ಕ ನಿಪ್ಪೋ ಬ್ಯಾಟರಿ ಶೆಲ್ ಚೂರುಗಳಿದ್ವು. ‘ಅಯ್ಯಯಪ್ರೋ.. ವಿಷ ತಿಂದು ಸತ್ತೋಗ್ಬಿಟ್ಳು ನನ್ನ ಹೆಂಡ್ತಿ.. ಇವತ್ತೇ ವಿಪರೀತ ಸೆಖೆ ಅಂತ ಹೊರ ಜಗುಲಿಯಲ್ಲಿ ಮಲ್ಗಿದ್ದೆ ನಾನು.. ಗೊತ್ತೇ ಆಗ್ಲಿಲ್ಲ..’ ಅಂತ ಬಾಯ್ಬಂಡ್ಕೊಂಡು ನಾಟ್ಕ ಮಾಡ್ದ ರಾಜಾರಾಮ. ಆವತ್ತು ಅವ್ನ ನಾಟ್ಕ ನೋಡಿದ್ಮೇಲೆ, ಊರಿನ ಯಾವ ನಾಟ್ಕನೂ ನೋಡ್ಬೇಕು ಅನ್ನಿಸ್ಲಿಲ್ಲ ನೋಡು! ಅದೇನು ಗೋಳಾಡೋದು.. ಅಳೋದು.. ಅತ್ತೆಯ ಕಾಲಿಗೆ ಬಿದ್ದು ಮೂರ್ಚೆ ಬೀಳೋ ಥರ ಮಾಡೋದು.. ಅಯ್ಯಪ್ಪಾ! ಪೋಲೀಸ್ರಿಗೆ ಏನು ಕೊಟ್ನೋ ಏನೋ.. ತಿಂಗಳೊಳಗೆ ಎಲ್ಲಾ ಥಂಡಾಗೋಯ್ತು. ಆನಂದಿಬಾಯಿಯೂ ಮೊಮ್ಮಗ್ಳ ಮುಖ ನೋಡಿ, ಅಳಿಯನ ಗೋಳಾಟವನ್ನೇ ನಂಬಿ ತೆಪ್ಪಗಾಗ್ಬಿಟ್ಳು. ಆದರೆ ವತ್ಸಲೆ ಮಾತ್ರ ಆವತ್ತಿಂದ ಗಂಭೀರಳಾಗ್ಬಿಟ್ಳು. ನಾನು, ಮಾಲತಿ, ಶ್ರೀಧರ ಎಲ್ಲಾ ಸೇರಿ ಎಷ್ಟೇ ಪ್ರಯತ್ನ ಪಟ್ರೂ ಮೊದ್ಲಿನ ಥರ ಆಗ್ಲೇ ಇಲ್ಲಾ. ಬರೋಳು.. ಕೊಟ್ಟಿದ್ದು ತಿನ್ನೋಳು, ನಿದ್ದೆ ಬಂದ್ರೆ ಇಲ್ಲೇ ನಮ್ಜೊತೆ ಮಲ್ಗಿ ಬಿಡೋಳು. ಕಲಿಕೆಯಲ್ಲೂ ಅಷ್ಟಕಷ್ಟೇ ಇದ್ದ ವತ್ಸಲೆ ಸ್ವಲ್ಪ ಸಲಿಗೆಯಿಂದ ಇರ್ತಿದ್ದುದು ನಮ್ಮ ಮಾಲತಿಯ ಜೊತೆಗೇ. ಹದಿನೆಂಟಕ್ಕೆಲ್ಲಾ ಓದು ಬಿಟ್ಟ ಅವ್ಳಿಗೊಂದು ಗಂಡು ಕಟ್ಟಲು, ಎರಡನೇ ಸಂಬಂಧದ ಭಾರೀ ಕುಳವನ್ನೇ ಆರಿಸಿ ತಂದಿದ್ದ ಅಪ್ಪ ಎನ್ನಿಸಿಕೊಂಡವ. ಆದರೆ ಅವನಿಗೆ ದೊಡ್ಡ ಆಘಾತ ಕಾದಿತ್ತು. ಮದುವೆಗೆ ಎರಡು ತಿಂಗಳಿದೆ ಎನ್ನುವಾಗ ವತ್ಸಲೆ ಶ್ರೀಧರನನ್ನು ದೇವಸ್ಥಾನದಲ್ಲಿ ವರಿಸಿ ಅಪ್ಪನ ಮುಂದೆ ನಿಂತಿದ್ದಳು. ನಮಗಂತೂ ನಂಬೋಕೇ ಆಗಿರ್ಲಿಲ್ಲ ಗೊತ್ತಾ? ಅದ್ಯಾವಾಗ ಈಕೆ ಇವನನ್ನು ಪ್ರೀತಿಸಿ, ಗುಟ್ಟಾಗಿ ತಿರುಗಿ.. ಸುಳಿವೂ ಕೊಡದೇ ಮದುವೆಯಾಗಿ ಬಿಟ್ಳಪ್ಪಾ ಅಂತ ತಲೆ ಕೆಡ್ಸಿಕೊಂಡಿದ್ವಿ. ಆದರೆ ಏನೇನೋ ಮನಸಲ್ಲೇ ಮಂಡಿಗೆ ತಿಂದಿದ್ದ ರಾಜಾರಾಮ ಮಾತ್ರ ಮಗಳ ಈ ಕ್ರಾಂತಿಯಿಂದ ಉರಿದು ಹೋಗಿದ್ದ. ಆಸ್ತಿಯಲ್ಲಿ ಚಿಕ್ಕಾಸೂ ಕೊಡಲ್ಲ ಎಂದು ಕೂಗಾಡಿ ಬಿಟ್ಟಿದ್ದ. ಆದರೆ ವತ್ಸಲಾ ಶಾಂತವಾಗಿ ಹೇಳಿದ್ದು ನಾಲ್ಕೇ ನಾಲ್ಕು ಮಾತು.. ‘ನನ್ನಮ್ಮನ ಆಸ್ತಿ ಅದು.. ಕೊಡ್ದೇ ಹೋದ್ರೆ ಲಾಯರ್ ಹಿಡ್ದು ಕೇಸ್ ಹಾಕ್ತೀನಿ.. ಅಮ್ಮನ ಸಾವಿನ ಬಗ್ಗೂ ತನಿಖೆ ಮಾಡಿಸ್ತೀನಿ.. ಹುಶಾರ್!’ ಅಷ್ಟೇ, ಥಂಡಾಗಿ ಬೆವರಿ ತೆಪ್ಪಗೆ ಕೂತು ಬಿಟ್ಟಿದ್ದ ರಾಜಾರಾಮ. ಆದರೂ ಮಗಳ ಮೇಲಿನ ಹಠಕ್ಕೆ, ಗಂಡು ಸಂತಾನ ತರ್ತೀನಿ ಅಂತ ಯಾರನ್ನೋ ಮದ್ವೆ ಮಾಡ್ಕೊಂಡು ಇಲ್ಲಿಗೆ ತಂದ. ಅವ್ಳು ಕನ್ನಡ ಶಾಲೆಯಲ್ಲಿ ಟೀಚರ್ ಆಗಿದ್ಳಂತೆ. ಸರಿ.. ಮದ್ವೆ ದಿನ ಸಂಜೆ ಗೋಧೂಳಿ ಮುಹೂರ್ತದಲ್ಲಿ ಪ್ರವೇಶವಾಗುವಾಗಲೇ, ಪ್ರಧಾನ ಜಗುಲಿಯ ಮೇಲ್ಛಾವಣಿ ಕುಸಿದು ಇಬ್ರ ಮುಂದೆಯೂ ದಢಾರನೆ ಬಿತ್ತು ನೋಡು.. ಪುಸಕ್ಕನೆ ನಕ್ಕಿದ್ಳು ವತ್ಸಲಾ. “ಅಮ್ಮನ ಉಡುಗೊರೆ ಸಿಕ್ತಪ್ಪಾ.. ಇನ್ನು ಒಳಗ್ಬನ್ನಿ.. ಯಾವ್ದಕ್ಕೂ ಹುಶಾರು ಹೇಳು ನಿನ್ನ ಹೊಸ ಹೆಂಡ್ತಿಗೆ” ಅಂತ ಹೇಳಿ ದುಡುದುಡುನೆ ತೋಟದಮನೆಗೆ ಹೋಗ್ಬಿಟ್ಟಿದ್ಳು ತನ್ನ ಗಂಡನ ಕಟ್ಕೊಂಡು. ಭಯ ಬಿದ್ದ ಅವನ ಹೊಸ ಹೆಂಡ್ತಿ, ಆವತ್ತೇ ಅಲ್ಲಿಂದ ಕಾಲ್ಕಿತ್ತವಳು, ವರುಷದೊಳಗೆ ರಾಜಾರಾಮನಿಗೆ ಸೋಡಾ ಚೀಟಿ ಕೊಟ್ಟು ಹೊರ ದೂಡಿದ್ಳು ತನ್ನ ಮನೆಯಿಂದ. ಸ್ವಂತ, ಮಗಳು, ಅಳಿಯ, ಅತ್ತೆ ಎಲ್ಲಾ ಇದ್ರೂ ಕೊನೆಗಾಲದಲ್ಲಿ ಒಂಟಿ ಪಿಶಾಚಿಯಾಗಿ ಸತ್ತ ಅಂವ. ಆವತ್ತೊಂದು ದಿನ ಬೆಳಗ್ಗೆ ಹಾಲಿನ ಶೇಷಿ ಎಷ್ಟು ಕರೆದರೂ ಆತ ಬಾಗಿಲ ತೆಗೆಯದ್ದು ನೋಡಿ, ನಿನ್ನಜ್ಜನ ಕರೆಯಲು.. ಇವರಿಗೆ ಸಂಶಯ ಬಂದು, ಬಾಗಿಲು ಒಡೆದು ನೋಡಿದಾಗಲೇ ಗೊತ್ತಾಗಿದ್ದು! ಸರಸ್ವತಿ ಸತ್ತ, ಅದೇ ಕೋಣೆಯಲ್ಲೇ ಅಂಗಾತ ಮಲಗಿ, ಎದೆಯೊಡೆದು ಸತ್ತು ಆತ ಎರಡ್ಮೂರು ದಿವಸಗಳೇ ಆಗಿದ್ದವು. ಆವತ್ತು ನಮ್ಮ ಸರಸ್ವತಿ ಆತ್ಮಕ್ಕೆ ತುಸು ಶಾಂತಿ ಸಿಕ್ಕಿರ್ಬಹುದು ನೋಡು..” ತಡೆಯಲಾಗದೇ, ಕಣ್ಣೊರೆಸಿಕೊಂಡಳು ಗೋಪಜ್ಜಿ.
ಪಶ್ಚಾತ್ತಾಪದ ದಳ್ಳುರಿಯಿಂದ ವಿನೇತ್ರಿಯ ಹೊಟ್ಟೆಯೊಳಗೆಲ್ಲಾ ಸಂಕಟವೆದ್ದಿತ್ತು. “ತಪ್ಪಾಗೋಯ್ತಜ್ಜಿ.. ವತ್ಸಲಕ್ಕನ ಬಗ್ಗೆ ತಿಳಿದೇ ಕೆಟ್ಟ ಮಾತಾಡ್ಬಿಟ್ಟೆ. ಆದರೆ ಶ್ರೀಧರಣ್ಣ ಯಾಕೆ ಹೀಗಾಗಿದ್ದು? ತಾನೇನೂ ತಪ್ಪು ಮಾಡ್ದಿರೋವಾಗ, ಊರ ಜನರ ಕೆಟ್ಟ ಮಾತಿಗೆ ಉತ್ರ ಕೊಡ್ದೇ ಸುಮ್ನಿರೋದ್ಯಾಕೆ ವತ್ಸಲಕ್ಕ?” ಈ ಸಲ ಅವಳ ಧ್ವನಿಯಲ್ಲಿ ಕಾಳಜಿಯಿತ್ತು.
“ಹ್ಮ್ಂ.. ಯಾಕೆ ಯಾರಿಗಾದ್ರೂ ಆಕೆ ತನ್ನ ಬದುಕಿನ ಬಗ್ಗೆ ಸಮಜಾಯಿಷಿ ಕೊಡ್ಬೇಕು ಹೇಳು? ಅವ್ಳಿಂದ ನಮ್ಗೇನು ನಷ್ಟವಾಗ್ತಿದೆ? ಪ್ರಶ್ನಿಸಲು ಅವ್ಳಿಗೆ ನಾವೇನಾಗ್ಬೇಕು ಹೇಳು? ನಿಜ..ಆಕೆ ತನ್ನಪ್ಪನ ಮೇಲಿನ ಸೇಡಿಗೆ ಹೈಸ್ಕೂಲಿನ ಗೆಳೆಯ ಶ್ರೀಧರನ ಮದ್ವೆಯಾಗಿದ್ದು ಹೌದು. ಆದ್ರೆ ಇಬ್ಬರಲ್ಲಿ ಪ್ರೀತಿ ಹುಟ್ಟಿತ್ತೋ ಇಲ್ವೋ ಗೊತ್ತಿಲ್ಲ. ಆದರೆ ಆತ ಗಂಡಸೇ ಅಲ್ಲಾ ಅನ್ನೋ ಘೋರ ಸತ್ಯ ಅವ್ಳಿಗೆ ಗೊತ್ತಾಗಿದ್ದು ಮದ್ವೆಯಾದ್ಮೇಲೇ. ಹೀಗಿದ್ರೂ ಆಕೆ ಗುಟ್ಟು ರಟ್ಟು ಮಾಡ್ದೇ, ಸುಮ್ನಿದ್ಳು. ಆದರೆ ಶ್ರೀಧರನೊಳಗೊಂದು ವಿಕೃತಿಯಿತ್ತು. ತನಗಿಲ್ಲದ ಗಂಡಸ್ತನದ ಅಹಂ ಎದ್ದಾಗ, ತಾನು ಕಾಣದ ಸುಖವ ತನ್ನ ಮುಂದೇ ಹೆಂಡತಿ ಸುಖಿಸಿ ತನ್ನ ಕಣ್ಣಿಗೆ ಹಬ್ಬ ಕೊಡಬೇಕೆಂಬ ಕೊಳಕು ಬಯಕೆಯದು. ಅದ್ಕಾಗಿ ಅವ್ಳ ಹಿಂದೆ ತನ್ನ ಕೆಲವು ಫಟಿಂಗ ಗೆಳೆಯರ ಛೂ ಬಿಟ್ಟು... ಇದು ಆಕೆಗೆ ಗೊತ್ತಾಗಿ ಅವರನ್ನೆಲ್ಲಾ ಉಗಿದು, ಒದ್ದು... ಒಂದು ದಿನ ಇವಳ ಮೇಲೆ ಕೈ ಮಾಡಲು ಬಂದ ಗಂಡನ ದೂಡಿ ಕೆಡವಿದ್ದೇ ನೆಪವಾಗಿ, ಪಾರ್ಶ್ವವಾಯು ಬಡಿದು ಬಿದ್ಕೊಂಡ ಶ್ರೀಧರ. ತನ್ನಿಂದಲೇ ಹೀಗಾಯಿತೇನೋ ಎಂಬ ಒಳ ಕೊರಗು ಅವಳದ್ದು.. ಅದಕ್ಕೇ ಇನ್ನೂ ಅವನ ಹೊರ ಹಾಕದೇ ಹಳ್ಳಿ ಚಿಕಿತ್ಸೆ ಕೊಡಿಸುತ್ತಿದ್ದಾಳೆ.. ಹೊತ್ತು ಹೊತ್ತಿಗೆ ಬೇಯಿಸಿ ತಿನ್ನಿಸುತ್ತಿದ್ದಾಳೆ. ಪಾಪ ತಡೆಯಲಾಗದೇ ಅಜ್ಜಿಯ ಬಳಿ ಎಲ್ಲಾ ಹೇಳಿಕೊಂಡು ಅತ್ತಿದ್ದಳಂತೆ ಒಮ್ಮೆ. ಆನಂದಿಬಾಯಿ ನನ್ನಲ್ಲಿ ಗುಟ್ಟಾಗಿ ಹೇಳಿ ತಲೆ ಚಚ್ಚಿಕೊಂಡಿದ್ದಳು. ಏಕೈಕ ಬಂಧುವಾಗಿದ್ದ ಅಜ್ಜಿಯೂ ಈಗ ಅವಳ ಜೊತೆಗಿಲ್ಲ. ಒಂಟಿನತವ ಹತ್ತಿಕ್ಕಲು ಸ್ತ್ರೀ ಶಕ್ತಿ, ಸ್ವ ಸ್ವಸಾಯ ಮುಂತಾದ ಗುಂಪುಗಳಿಗಾಗಿ ದುಡಿಯುತ್ತಿದ್ದಾಳೆ. ಇದಕ್ಕೆ ಸಾಮಾಜಿಕ ಕಾರ್ಯಕರ್ತನಾಗಿರೋ ಆ ಪುರುಷೋತ್ತಮ ಸಹಾಯ ಮಾಡ್ತಿದ್ದಾನಂತೆ... ನನ್ನ ಬಳಿ ಒಮ್ಮೆ ಖುದ್ದಾಗಿ ಹೇಳಿದ್ದಳು. ಇಷ್ಟಕ್ಕೂ ಅವರಿಬ್ಬರ ನಡುವೆ ಸಂಬಂಧ ಇದ್ದರೂ ನನಗೇನೂ ತಪ್ಪು ಕಾಣಿಸದು ಕೂಸೆ. ತಪ್ಪೆನಿಸಿಕೊಳ್ಳುವುದು ಇಲ್ಲದ್ದನ್ನು ಇದೆ ಅಂತ ನಾಟಕವಾಡಿದಾಗ. ಆದ್ರೆ ಆಕೆ ಹೇಗಿದ್ದಾಳೋ ಹಾಗೆ ಕಾಣಿಸುತ್ತಾಳೆ. ವಿನೇತ್ರಿ.. ಅವ್ಳ ಮನೆಗೆ ನಾನು ಹೋಗಿದ್ದಾಗ ಎಷ್ಟೋ ಸಲ ನೋಡಿದ್ದೇನೆ.. ತನ್ನ ಮನೆಯ ಒಳ ಜಗುಲಿಯ ಗೋಡೆಗೆ ನೇತು ಹಾಕಿರುವ, ಸರಸ್ವತಿಯ ಫೋಟೋದ ಮೇಲೊಂದು ಪುಟ್ಟ ದೀಪ ಹಚ್ಚಿಟ್ಟುಕೊಂಡು ಗಂಟೆಗಟ್ಟಲೇ ಅಮ್ಮನ ಮುಖವನ್ನೇ ನೋಡುತ್ತಾ ಕುಳಿತು ಬಿಡ್ತಾಳೆ.. ‘ದೀಪ ಕೆಳ್ಗಿಡ್ದೇ ಮೇಲ್ಯಾಕೆ ಹಚ್ಚೀಡ್ತೀಯಾ?’ ಅಂತ ಒಮ್ಮೆ ಕೇಳಿದ್ದಕ್ಕೆ.. ‘ಮಾಲ್ತಿ ಆಯಿ, ಮೇಲಿನಿಂದ ಬೀಳೋ ಕಿರು ದೀಪದಲ್ಲಿ ಅಮ್ಮನ ನಿಷ್ಕಲ್ಮಶ ಕಣ್ಗಳು ಎಷ್ಟು ಚೆಂದ ಹೊಳೀತವೆ ಅಲ್ವಾ? ಆದ್ರೆ ದೀಪ ಕೆಳ್ಗಡೆ ಇಟ್ರೆ ಯಾಕೋ ಅಷ್ಟು ಸರಿ ಕಾಣೋದೇ ಇಲ್ಲಪ್ಪಾ..” ಅಂದಿದ್ಳು. ನಮ್ಮ ವತ್ಸಲೆ ಅವಳಮ್ಮನ ಪಡಿಯಚ್ಚು... ಆ ಫೊಟೋದ ನೆತ್ತಿಯ ಮೇಲಿನ ಬೆಳಕಿನಷ್ಟೇ ಪವಿತ್ರಳಾಗಿ ಕಾಣ್ತಾಳೆ ನೋಡು ನನ್ನ ಕಣ್ಣಿಗೆ.” ಗೋಪಜ್ಜಿಯ ಮೊಗದಲ್ಲಿ ತುಂಬಿದ್ದ ವಿಶಿಷ್ಟ ಹೊಳಪನ್ನೇ ನೋಡುತ್ತಾ, ಹನಿಗಣ್ಣಾದಳು ವಿನೇತ್ರಿ.
[೨೦೧೭, ಜುಲೈ ತಿಂಗಳ ತುಷಾರದಲ್ಲಿ ಪ್ರಕಟಿತ]
******
~ತೇಜಸ್ವಿನಿ ಹೆಗಡೆ
2 ಕಾಮೆಂಟ್ಗಳು:
ಕಥೆಯನ್ನು ನೇರವಾಗಿ ಹೇಳದೆ, ಗೋಪಜ್ಜಿಯಿಂದ ಹೇಳಿಸಿದ್ದರಿಂದ, ಕಥೆಗೆ ತಾತ್ವಿಕ ಚೌಕಟ್ಟು ಸಿಗಲು ತುಂಬ ಅನುಕೂಲವಾಗಿದೆ. ನಿಮ್ಮ ಅನೇಕ ಕಥೆಗಳು ಸಂಭಾಷಣೆಯಿಂದ ಅಥವಾ ಸ್ವಗತದಿಂದ ಪ್ರಾರಂಭವಾಗಿ ಕಟ್ಟಿಕೊಳ್ಳುತ್ತ ಹೋಗುತ್ತವೆ. ಕೆಲವು ಕಥೆಗಳಲ್ಲಿ flash back ಬಳಕೆಯೂ ಸಹ ಕಥಾರಚನೆಗೆ ಸಹಾಯಕವಾಗಿದೆ. ಉತ್ತಮ ಕಥೆಯೊಂದನ್ನು ಓದುವ ಅವಕಾಶ ದೊರಕಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಹಾಗು ಉತ್ತಮ ಕಥೆಗಾಗಿ ನಿಮಗೆ ಅಭಿನಂದನೆಗಳು.
dhanyavadagaLu kaaka.. )
ಕಾಮೆಂಟ್ ಪೋಸ್ಟ್ ಮಾಡಿ