ಗುರುವಾರ, ಜೂನ್ 27, 2013

ಎಲ್ಲಾ ಪ್ರಶ್ನೆಗಳಿಗೂ ಉತ್ತರವಾಗಿರುವ ‘ಉತ್ತರಾಖಂಡ’

ಕೆಲವು ದಿವಸಗಳಿಂದೆ ಹೀಗೇ ಆಗುತ್ತಿದೆ! ಆದಷ್ಟು ಕಡಿಮೆ ನ್ಯೂಸ್ ನೋಡುತ್ತಿದ್ದ ನಾನು ಪದೇ ಪದೇ ವಿವಿಧ ನ್ಯೂಸ್ ಚಾನಲ್‌ಗಳನ್ನು ತುಸು ಹೊತ್ತಾದರೂ ತಡಕಾಡುವ.. ಎಡತಾಕುವ ಹಪಹಪಿಗೆ ಎಳೆಯಲ್ಪುಡುತ್ತಿದ್ದೇನೆ. ಇದಕ್ಕುತ್ತರ "ಉತ್ತರಾಖಂಡ"ದಲ್ಲಿ ನಡೆದ ಮಹಾನ್‌ ಪ್ರಳಯ :( ದಿನೇ ದಿನೇ ಸಾವು ನೋವುಗಳ, ದರೋಡೆ, ಅತ್ಯಾಚಾರಗಳ ವಿವಿಧ ರೀತಿಯ ಸತ್ಯ-ಅಸತ್ಯ ಸುದ್ದಿಗಳು ಬಿತ್ತರಗೊಳ್ಳುವುದು ನೋಡಿ.... ಮನಸ್ಸೊಳಗೆ ಸುನಾಮಿಯ ನಂತರದ ಮೌನ! ನೋವಿನ ಮೇಲೆ ಬರೆ ಎಂಬಂತೇ ಸ್ವಾರ್ಥಪೂರಿತ, ಕಣ್ಣಲ್ಲಿ ನೀರು ಬಿಡಿ, ರಕ್ತವೂ ಇಲ್ಲದ ಕೆಲವು ಕೊಳಕು ರಾಜಕೀಯ ಧುರೀಣರ(?!) ಅಮಾನವೀಯ ನಡೆ-ನುಡಿಗಳು! ಅಪ್ಪ ಸದಾ ಹೇಳುತ್ತಿರುತ್ತಾರೆ.. ಮನುಷ್ಯ ಕೆಟ್ಟವನಿರಬಹುದು ಆದರೆ ಮಾನವತೆಯಲ್ಲಾ ಎಂದು. ಅದು ನಿಜ... ಅಲ್ಲಿ ನಡೆಸುತ್ತಿರುವ ದುರಾಚಾರಿಗಳಲ್ಲಿ ಮನುಷ್ಯತ್ವವಿಲ್ಲ... ಹಾಗಾಗೇ ರಾಕ್ಷಸರಾಗಿದ್ದಾರೆ ಅಷ್ಟೇ! ಎಂದು ಸಮಾಧಾನಪಟ್ಟುಕೊಂಡು ಮನುಷ್ಯಳಾಗೇ ಇರುವಂತೆ ಮಾಡೆನ್ನ ತಂದೆ ಎಂದು ಬೇಡುತ್ತಿರುತ್ತೇನೆ. 
Courtesy: http://vbnewsonline.com

ಅಲ್ಲಿಗೆ ಹೋಗಿ ಸಾಯೋ ಕರ್ಮ ಯಾಕೆ ಬೇಕಿತ್ತು? ಇಲ್ಲಿರುವ ದೇವರು ದೆವ್ವಗಳೇ?  ನಮ್ಮೊಳಗಿರುವ ದೇವ ಸಾಕಾಗನೇ? ಇತ್ಯಾದಿ ಪ್ರಶ್ನೆಗಳನ್ನು ಕೇಳಿದಾಗ ಮಾತ್ರ ಮೈಯುರಿದು ಬಿಡುತ್ತದೆ! ಆದರೆ ಅದೂ ಕ್ಷಣಿಕವೇ. ಕಾರಣ, ಅವರವರ ತಿಳಿವು-ಹರಿವು ಅವರವರದ್ದು ಎಂದು ಸಮಾಧಾನಗೊಳ್ಳುತ್ತೇನೆ. ಸ್ವತಃ ನಾನು ಯಾವ ದೇವನನ್ನೂ ಗುಡಿ  ಗೋಪುರದಲ್ಲಿ ಅಸಿದವಳಲ್ಲ.... ಜಾತ್ರೆ, ಮಹಾಪೂಜೆ, ಮಹಾಯಾಗ ಇವೆಲ್ಲಾ ನಾನಿದ್ದಲ್ಲೇ ಎಂದೇ ನಂಬಿರುವವಳು. ಪ್ರಸಿದ್ಧ ದೇವಸ್ಥಾನ, ಅಲ್ಲಿ ನೆರವ ಜನಸೋತಮ ಎಲ್ಲವೂ ನನ್ನಿಂದ ಬಹು ದೂರ. ಅಲ್ಲಿಗೆ ಹೋದರೆ ತಲೆನೋವು ಹೆಚ್ಚಾಗಿ, ಇರುವ ದೇವನೂ ಮಾಯವಾಗುವುದರಿಂದ ಭೇಟಿಕೊಡುವುದೇ ಇಲ್ಲಾ. ಕಾಡಿನ ಮಧ್ಯ ಇರುವ ಪುಟ್ಟ ಗುಡಿ, ಜನ ಸೇರಿ ಗೌಜಿಯಾಗದ ಸಾಧಾರಣ ದೇವಸ್ಥಾನ - ಇವುಗಳಿಗೆ ಎಲ್ಲಾದರೂ ಎಂದಾದರೂ ಹೀಗೇ ಭೇಟಿ ಕೊಡುತ್ತಿರುತ್ತೇನೆ ಅಷ್ಟೇ! ನನ್ನ ಮನೆಯ ಪುಟ್ಟ ಪೂಜಾಕೋಣೆಯೊಳಗಿರುವ ಪುಟ್ಟ ನಂದಾದೀಪದಲ್ಲೇ ಎಲ್ಲವೂ  ನನಗೆ ದರ್ಶಿತವಾಗುವುದು. ಆದರೆ ಅದು ನನ್ನ ದೇವನ ನಾನು ಕಂಡು ಕೊಂಡು ತೃಪ್ತಳಾಗೋ ನನ್ನ ಭಾವ...ನನ್ನ  ಭಕ್ತಿ! ಆದರೆ ಇದೇ ಎಲ್ಲರಲ್ಲೂ.. ಎಲ್ಲದರಲ್ಲೂ ಕಾಣಬೇಕೆನ್ನುವುದನ್ನು ನಾನು ಖಂಡಿತ ಇಪ್ಪುವುದಿಲ್ಲ. 

ಮುಸ್ಲಿಮ್ ಬಾಂಧವರಿಗೆ ಹೇಗೆ ಮೆಕ್ಕಾ/ಮದೀನ ಪವಿತ್ರವೂ.... ಅಲ್ಲಿಗೆ ಸಾಗರೋಪಾದಿಯಲ್ಲಿ ಸಾಗಿ ಏನೇ ಸಾವು-ನೋವು ತೊಂದರೆ ಆದರೂ ತಮ್ಮ ದೇವನನ್ನು ಕಂಡುಕೊಂಡ, ತೃಪ್ತಿ ಪಡೆಯುತ್ತಾರೋ... ಕ್ರಿಶ್ಚನ್ ಬಾಂಧವರಿಗೆ  ವೆಟಿಕನ್ ಹೇಗೋ.. ಹಾಗೇ ಬೇರೆ ಬೇರೆ ಜಾತಿ-ಧರ್ಮದವರ ಭಕ್ತಿ, ಭಾವ-ಅದಕ್ಕಾಗಿ ಅವರು ನಂಬುವ ತಾಣ, ಎಲ್ಲವೂ ಭಿನ್ನ. ಸಹೃದಯತೆಯ, ಮಾನವೀಯತೆಯ ಪರಿಧಿಯೊಳಗಿದ್ದರೆ ಎಲ್ಲಾ ಭಿನ್ನತೆಯೂ ಸಹನೀಯ... ಸುಂದರ. 

ಹೀಗಿರುವಾಗ ಭಕ್ತಾದಿಗಳು ಅನಾದಿಕಾಲದಿಂದಲೂ ನಂಬಿಕೊಂಡು ಬಂದ ತಮ್ಮ ತಮ್ಮ ಭಕ್ತಿಯ ಮೇಲೆ, ಅವರವರ ಭಾವವ ನಂಬಿ  ಚಾರ್‌ಧಾಮ್  ಯಾತ್ರೆ ಕೈಗೊಳ್ಳುತ್ತಿದ್ದಾರೆ. ಮಾನವ ನಿರ್ಮಿತ ಕಟ್ಟಡಗಳು ನದಿ ಪಾತ್ರಕ್ಕೆ ಅಡ್ಡವಾಗಿ, ಅರಣ್ಯ ಕಡಿತದ ದುಷ್ಪರಣಾಮದಿಂದ ಇಂದು ಇಂತಹ ದೊಡ್ಡ ದುರಂತ ನಮ್ಮ ಮುಂದಿದೆ  ಎನ್ನುತ್ತದೆ ವಿಜ್ಞಾನ. ಇದು ಸತ್ಯಕ್ಕೆ ಸತ್ಯವೂ ಕೂಡ. ಮುಂದಾದರೂ ಎಚ್ಚೆತ್ತ ಸರಕಾರ (ಅದು ಯಾವುದೇ ರಾಜ್ಯದ್ದಿರಲಿ....) ಪ್ರಜೆಗಳ, ತಮ್ಮ ನಾಡಿನ, ಎಲ್ಲಾ ಸಕಲ ಜೀವಿಗಳ ಹಿತ ರಕ್ಷಣೆಯನ್ನು ಚಿಂತಿಸಿ ನಿರ್ಮಾಣ ಮಾಡಬೇಕು. ಪುನರ್ನಿರ್ಮಾಣದಲ್ಲಿ ಮತ್ತಷ್ಟು ಎಚ್ಚರಿಕೆ ವಹಿಸಲೇಬೇಕು. ಅದ ಬಿಟ್ಟು  ಇದ್ದಲ್ಲೇ ಶಿವನ ಕಂಡರೆ ಆಗದೆ? ಎಂದು ಪ್ರಶ್ನಿಸುವುದು ಯಾಕೋ ಮಾನನೀಯವೆನಿಸುತ್ತಿಲ್ಲ. ಊಟ ಮಾಡಲು ನೆಂಟರ ಮನೆಗೆ ಹೋದರೂ ಅಪಘಾತವಾಗಬಹುದು. ಆಗ ಮನೆಯಲ್ಲೇ ತಿಂದು ಬಿದ್ದಿರಬಾರದೆ? ಎಂದು ಕೇಳಿದರೆ ಹೇಗಿನಿಸುವುದೋ ಹಾಗೇ ಅನಿಸುವುದು ನನಗೂ!

ಸಧ್ಯಕ್ಕೆ ಮಂದಿರ ನಿರ್ಮಾಣ, ಪೂಜಾ ವಿಧಿ-ವಿಧಾನ ಇವೆಲ್ಲವುಗಳಿಗಿಂತ ಬಹು ಮುಖ್ಯ ಅಲ್ಲಿರುವ ಮನುಷ್ಯರ ಹಾಗೂ ಮನುಷ್ಯತ್ವದ ಕಾಪಾಡುವಿಕೆ. ಸಾಯುವುದು-ಬದುಕುವುದು ಅನಿಯಂತ್ರಿತ. ಪ್ಲೇನ್ ಕ್ರಾಶ್, ಹಡಗು ದುರಂತ, ಬಸ್, ಕಾರು, ರೈಲು ದುರಂತದಲ್ಲಿ ವಿಶ್ವದಾದ್ಯಂತ ಪ್ರತಿ ದಿವಸ ಸಾವಿರಾರು ಜನ ಸಾಯುತ್ತಲೇ ಇರುತ್ತಾರೆ. ಅದಕ್ಕೆ  ಪ್ರಮುಖ ಕಾರಣ ಪತ್ತೆ ಹಚ್ಚಿ ಸಾವು-ನೋವು ಹೆಚ್ಚಾಗದಂತೆ ಎಚ್ಚರವಹಿಸುವುದು ನಿಜ ಧರ್ಮ. ಅದು ಬಿಟ್ಟು ಎಲ್ಲಿ ಹೋದ ನೀವು ನಂಬಿರುವ ನಿಮ್ಮ ದೇವರು? ಧರ್ಮ? ಕಾಪಾಡಲು  ಬಂದನೆ? ಎಂದು ಕಟಕಿ ವ್ಯಂಗ್ಯವಾಡುವುದೂ ಒಂದು ತರಹದ ವಿಕೃತಿಯೇ ಎಂದೆನಿಸುತ್ತದೆ. ಅವರವರ ನಂಬಿದ ಅವರವ ದೈವ (ಅವರವರ ಭಾವಕ್ಕೆ ಬಿಟ್ಟ....) ಅವರನ್ನು ಕಾಪಾಡಿಯೇ ಕಾಪಾಡುತ್ತದೆ. ಅದು ನಮ್ಮೊಳಗಿನ ಧೀಃಶಕ್ತಿ, ಆತ್ಮ ಶಕ್ತಿ, ವಿಶ್ವಾಸದೊಳಗೆ ಬೆಸೆದು ಉಸಿರಾಗಿ ಉಸಿರಾಡುತ್ತಲೇ ಇರುತ್ತದೆ. ಕೆಲವರಿಗೆ ಮನೆಯಲ್ಲೇ ದೊರಕಿದರೆ, ಕೆಲವರಿಗೆ ಮಂದಿರ/ಮಸ್ಜಿದ್/ಚರ್ಚ್/ಗುರುದ್ವಾರಗಳಲ್ಲಿ ಸಿಗುತ್ತದೆ ಅಷ್ಟೇ. ಕೊಲ್ಲುವ ದೆವ್ವದ ಜೊತೆಗೇ... ಅದಕ್ಕಿಂತ ಹೆಚ್ಚಿನ ಶಕ್ತಿಶಾಲಿಯಾದ ಕಾಯುವ ದೈವ ಇದ್ದೇ ಇರುತ್ತದೆ. ಅದಕ್ಕೆ ಸಾಕ್ಷಿ ಅಷ್ಟು ದೊಡ್ಡ ವಿಪತ್ತು ಧುತ್ತನೆ ಬಂದರೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಬದುಕುಳಿದವರು... ಪಾರಾದವರು.... ಹೋರಾಡಿ ಮನೆ ಸೇರಿದವರು - ಇವರೆಲ್ಲಾ ಸಾಕ್ಷಿಯೇ! ಎಲ್ಲದರಲ್ಲೂ ಧನಾತ್ಮಕತೆ, ಋಣಾತ್ಮಕತೆ ಇದ್ದೇ ಇರುತ್ತದೆ. ಕಾಣುವ ಕಣ್ಣಿಗೆ ಪೂರ್ಣ ಅಥವಾ ಅರ್ಧ ಕುರುಡುತನ ಬರದಿದ್ದರೆ ಎಲ್ಲವೂ ಸುಸ್ಪಷ್ಟ! ಸ್ವತಃ ಶರಣರೇ ಹೇಳಿದ್ದಾರೆ...

ಆವರವರ ಭಾವಕ್ಕೆ ಅವರವರ ಭಕುತಿಗೆ 
ಅವರವರ ತೆರನಾಗಿ ಇರುತಿಹನು ಶಿವಯೋಗಿ
ಹರನ ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ
ನರರೇನು ಭಾವಿಸುವರದರಂತೆ ಕಾಣುವನು  .... - ಎಲ್ಲರೂ ಅವರವರ ದೇವನನ್ನು ಕಾಣೋ ರೀತಿ, ನೀತಿ, ಆಚಾರ, ಜಾಗ.. ಎಲ್ಲವೂ ಬೇರೆ ಬೇರೆಯೇ ಆಗಿರುವುದು ಸಹಜ. ಇದು ಕೇವಲ ಜಾತಿ/ಧರ್ಮದಿಂದ ಮಾತ್ರ ಭಿನ್ನವಾಗಿರದೇ ಪ್ರತಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತಿದೆ. ಪರಸ್ಪರ ಗೌರವ, ಅರ್ಥೈಸುವಿಕೆ ಇದ್ದಾಗ ಭಿನ್ನತೆಯಲ್ಲೂ ಸಹಜತೆ, ಏಕತೆ ಕಂಡು ಬಂದೇ ಬರುತ್ತದೆ.

ಆದ ದುರಂತಕ್ಕೆ ಪ್ರತಿಯೊಬ್ಬ ‘ಮನುಷ್ಯ’ನೂ ಪರಿತಪಿಸಲೇ ಬೇಕಾಗಿದೆ. ಮನುಷ್ಯರಾದವರೆಲ್ಲಾ ಮರುಗುತ್ತಲಿದ್ದಾರೆ ಕೂಡ. ಇಂದು ಉತ್ತಾರಾಖಂಡ.. ನಾಳೆ? ಈ ಪ್ರಶ್ನೆಗೆ ಉತ್ತರವೂ ಉತ್ತರಾಖಂಡದಲ್ಲೇ ಅಡಗಿದೆ. ಒಲಿದರೆ ಖನಿಜವನ್ನೇ ಬಗೆದು ಕೊಡುವ ಪ್ರಕೃತಿ, ಮುನಿದರೆ ತೊಳೆದುಹಾಕಲೂಬಲ್ಲಳೆನ್ನುವುದನ್ನು ತೋರಿದ್ದಾಳೆ. ದುರಾಸೆಯನ್ನು ದೂರ ಮಾಡಿ ಪ್ರಕೃತಿಯ ಜೊತೆಗೆ ಸಾಗಿದರೆ ಮಾತ್ರ ಮಾನವಕುಲ ಉಳಿದೀತು. ಬೆಳೆದೀತು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಒಗ್ಗಟ್ಟಿನಲ್ಲಿ ಸಾಗಬೇಕು. ಯಾವ ದೇವರೂ ಯಾರನ್ನೂ ಕಾಪಾಡಲಾರ ಮರದ ಟೊಂಗೆಯಲ್ಲಿ ಕುಳಿತು ಆ ಮರವನ್ನೇ ಕಡಿವ ಮೂರ್ಖನನ್ನು! ಕಲವರ ನಿರ್ಲಕ್ಷ್ಯದಿಂದಾಗಿ, ಹಲವರ ನಿರ್ಲಿಪ್ತತೆಯಿಂದಾಗ, ಎಲ್ಲರ ಅಜ್ಞಾನದಿಂದಾಗಿ ಇಂತಹ ವಿಪತ್ತುಗಳು ಬರುತ್ತಿರುತ್ತವೆ. ‘ಇದ್ದಲ್ಲೇ ಬಿದ್ದಿರೋದೊಂದೇ’ ಪರಿಹಾರ... ಅನ್ನೋ ಎಡಬಿಡಂಗಿ ವಾದ ಬಿಟ್ಟು.. ಹೋದಲ್ಲಲ್ಲೇ ನಮ್ಮ ಪರಿಸರಕ್ಕೆ, ನಮಗೆ ಸರಿಯಾದ ಸುರಕ್ಷೆಯನ್ನು ನಾವೇ ನಿರ್ಮಿಸಿಕೊಳ್ಳುವತ್ತ ಗಮನ ಹರಿಸಿದರೆ ಉತ್ತಮ. 

ಮನಸು ಸದಾ ಪ್ರತಿ ದಿವಸ ಅಲ್ಲಿರುವ ಜನರೊಳಗೆ (ಎಲ್ಲರಲ್ಲೂ..) ವಿಶ್ವಾಸ, ಪ್ರೀತಿ, ಮಾನವತೆ ತುಂಬಪ್ಪಾ ತಂದೆ ಎಂದು ಕುಳಿತಲ್ಲೇ ಪ್ರಾರ್ಥಿಸುತ್ತಿರುತ್ತದೆ. ‘ತಲ್ಲಣಿಸದಿರು ಕಂಡ್ಯ ತಾಳು ಮನವೆ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ..." ಎಂಬ ಕನಕದಾಸರ ಪದ ನೆನಪಾಗುತ್ತಲೇ ಇರುತ್ತದೆ.

-ತೇಜಸ್ವಿನಿ ಹೆಗಡೆ.

5 ಕಾಮೆಂಟ್‌ಗಳು:

ಮನಸು ಹೇಳಿದರು...

ನಿಜ ನಿಮ್ಮ ಮಾತು ತೇಜು, ನಾನು ಸಹ ಒಪ್ಪುವುದಿಲ್ಲ ಕೂತಲ್ಲೇ ದೇವರನ್ನ ಪೂಜಿಸುವುದು ಬಿಡುವುದು ಅವರವರಿಗೆ ಬಿಟ್ಟಿದ್ದು. ಎಲ್ಲರ ಭಕ್ತಿ ಒಂದೇ ರೀತಿ ಇರಬೇಕು ಎಂದು ಹೇಳಲಾಗದು. ಅವರವರ ಇಚ್ಚೆ.
ನಾವುಗಳು ಈಗ ಮಾಡಬೇಕಾಗಿರುವ ಕೆಲಸ ಭಕ್ತರು ಅಲ್ಲಿಗೆ ಯಾಕೆ ಹೋದರು ಏನು, ಎತ್ತ ಎನ್ನುವುದಕ್ಕಿಂದ ಈ ವಿಕೋಪಕ್ಕೆ ಕಾರಣಗಳೇನು ಇದನ್ನು ಯಾವ ರೀತಿ ತಡೆಗಟ್ಟಬಹುದು, ನಮ್ಮೊಳಗೆ ಹಣದ ಹಾಹಾಕಾರ ತಾಂಡವಾಡುತ್ತಿದ್ದೆ ಅದಕ್ಕೆ ಪ್ರಕೃತಿಯ ನಾಶದತ್ತ ಸಾಗುತ್ತಿದ್ದೇವೆ. ಇದನ್ನು ತಡೆಗಟ್ಟಲು ಮನಸು ಮಾಡಬೇಕೇ ಹೊರತು ಬೇರಾವ ದಾರಿ ಇಲ್ಲ... ಪ್ರಕೃತಿಯ ಪ್ರತಿಯೊಂದು ಜೀವಸಂಕುಲಗಳು ತಮ್ಮದೇ ಆದ ಜೀವನ ನಡೆಸಲು ಅನುವು ಮಾಡಿಕೊಡಬೇಕಿದೆ ಅಷ್ಟೇ.

ಆದಷ್ಟು ನಮ್ಮಗಳಿಂದಲೇ, ಪುಟ್ಟ ಕೆಲಸಗಳಿಂದಲೇ ಆರಂಭವಾದರೆ ಒಳಿತು ಅಲ್ಲವೇ..? ಉದಾಹರಣೆಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಗಿಡ-ಮರ ನೆಡುವುದು, ಮಳೆನೀರು ಬಳಕೆ ಇಂತಹ ಸಣ್ಣಪುಟ್ಟವು ಪ್ರಾರಂಭಿಸಬೇಕು ಎಲ್ಲರೂ..

ಹಸಿರು ಉಳಿಸಿ ಉಸಿರು ಹೆಚ್ಚಿಸುವುದು..!!!

ಸುಮ ಹೇಳಿದರು...


ಸಹೃದಯತೆಯ, ಮಾನವೀಯತೆಯ ಪರಿಧಿಯೊಳಗಿದ್ದರೆ ಎಲ್ಲಾ ಭಿನ್ನತೆಯೂ ಸಹನೀಯ... ಸುಂದರ - ಖಂಡಿತಾ ನಿಜ ತೇಜಸ್ವಿನಿ , ನಾನೂ ಸಹ ಇದನ್ನು ಬಲವಾಗಿ ನಂಬುವವಳು. ನಾನು ಪ್ರಕೃತಿಯಲ್ಲೇ ದೇವರನ್ನು ಕಾಣುವವಳು..ಹಾಗೆಂದು ಬೇರೆಯವರೂ ಹಾಗೆಯೆ ಇರಬೇಕೆಂದು ಅಪೇಕ್ಷಿಸುವವಳಲ್ಲ. ಬೇರೆಯವರಿಗೆ ತೊಂದರೆಯಾಗದಂತೆ ತಮ್ಮ ಭಕ್ತಿಯನ್ನು ತೋರುವವರ, ಧರ್ಮವನ್ನು ನಡೆಸುವವರ ಬಗ್ಗೆ ಗೌರವವಿದೆ.

sunaath ಹೇಳಿದರು...

ಈ ದುರಂತವು ಮಾನವೀಯತೆಯ ಸಮಸ್ಯೆಯನ್ನು ತೋರಿಸುವಂತೆಯೇ, ಅದರ ಉತ್ತರಗಳನ್ನೂ ತೋರಿಸಿದೆ. ನಿಮ್ಮ ಲೇಖನವು ಬೆಳಕು ಚೆಲ್ಲುವ ಲೇಖನವಾಗಿದೆ.

veena ಹೇಳಿದರು...

ಹಿಂದಿನ ಕಾಲದಲ್ಲಿ ಭಕ್ತಿ ಮತ್ತು ಶಕ್ತಿ ಇದ್ದವರು ಇಂಥಹ ಕಠಿಣ ಯಾತ್ರೆ ಕೈಗೊಳ್ಳುತ್ತಿದ್ದರು . ಈಗ ಹಣ ಒಂದಿದ್ದರೆ ಸಾಕು ಯಾತ್ರೆ ಹೋಗಬಹುದೆಂದಾಗಿದೆ.ಭಕ್ತಿಗಿಂತ ಹೆಚ್ಚು ಕುತೂಹಲಕ್ಕಾಗಿ ಹೋಗುತ್ತಾರೆ . ಯಾರನ್ನೂ ನೋಯಿಸಲು ಬರೆದಿದ್ದಲ್ಲ, ಹಣದ ಮದದಲ್ಲಿ ಪ್ರಕೃತಿಯನ್ನ ಕಡೆಗಣಿಸುತ್ತಿದ್ದೇವಲ್ಲ ಎಂಬ ದು:ಖ ಅಷ್ಟೇ . :')

ಸುಧೇಶ್ ಶೆಟ್ಟಿ ಹೇಳಿದರು...

Barahada aashaya ishta aaytu Tejakka....