ಮಂಗಳವಾರ, ಫೆಬ್ರವರಿ 5, 2013

ಕಪ್ಪು-ಬಿಳುಪು

ದಿಟ್ಟಿ ಚಾಚಿದಷ್ಟೂ ಕಾಣೋ ನೋಟವನ್ನೇ ನಂಬಿ
ಅದರಾಚೆಗೂ ಹಬ್ಬಿರುವ ಸತ್ಯವ ಅಲ್ಲಗಳೆದರೆ,
ನಿಜ ಸುಳ್ಳಾಗದು, ಸುಳ್ಳೇ ಸತ್ಯವಾಗದು!

ತಮ್ಮೊಳಗಿನ ಪರಿಮಿತಿಗೆ ವೃತ್ತವನ್ನೆಳೆದು
ವ್ಯಾಸ, ಜ್ಯಾ, ತ್ರಿಜ್ಯಾಕ್ಕೂ ತಮ್ಮದೇ ಸೂತ್ರ ಗೀಚಿ,
ಕೇಂದ್ರದೊಳೇ ಕುಳಿತಾಗ, ಕಣ್ತೆರೆದಿದ್ದರೂ ಮುಚ್ಚಿದಂತೇ!

ಹಣೆಯಲಿ ಕಾಸಗಲ ಕುಂಕುಮವಿಟ್ಟರೇನಂತೇ?
ಮನದೊಳು ನಿಶೆಯ ನಶೆಯಿದ್ದರೆ, ಎಲ್ಲವೂ ಬರಿ ಬೋಳು!
ತಿಳಿವಿನ ನಂದಾದೀಪದಡಿಯಲ್ಲಿ, ಶೂನ್ಯವೂ ಪರಿಪೂರ್ಣವು.

ಮೊಸಳೆಯ ಕಣ್ಣೀರಿಗೆ ಮಿಡಿವ(?) ಹೃದಯಗಳೂ ಅಷ್ಟೇ
ಅಪಧಮನಿ, ಅಭಿಧಮನಿಗಳೆಲ್ಲಾ ಅದಲು ಬದಲು....
ಗೋಸುಂಬೆ ಬದುಕೊಳಗೇ ರಂಗೇರುತಿರುವಾಗ,
ರಕ್ತನಾಳಗಳಲ್ಲೂ ಬಣ್ಣ ಬಿಳುಪು!

ಕಲಿಯುಗದ ತುಂಬೆಲ್ಲಾ ಕರಿಯ ಕಲಿಗಳದೇ ರಾಜ್ಯ!
ಕಲ್ಲು ಹೃದಯದ ಒಳಗೆ ಮಾಟಗಾತಿಯ ಬೇಟ
ಯುಗ ಯುಗ ಕಳೆದರೂ ಯುಗವೆಷ್ಟು ಬೇಕಿಹುದೋ?
ಕಲ್ಲು ಕರಗುವ ಸಮಯಕೆ, ಕರಿಯ ಮನಸುಗಳ ಬಿಳುಪಿಗೆ!!?

-ತೇಜಸ್ವಿನಿ ಹೆಗಡೆ

5 ಕಾಮೆಂಟ್‌ಗಳು:

ಮನಸು ಹೇಳಿದರು...

ವಾಸ್ತವದ ಚಿತ್ರಣ.. ತುಂಬಾ ಚೆನ್ನಾಗಿವೆ ಸಾಲುಗಳು

Jayalaxmi ಹೇಳಿದರು...

ನಮ್ಮೊಳಗನ್ನು ಒಮ್ಮೆ ಪರೀಕ್ಷಿಸಿಕೊಳ್ಳುವಂತೆ ಮಾಡುವ ಕವನ. ಸಶಕ್ತ ಸಾಲುಗಳು.

ಸಾಕ್ಷಿ ಹೇಳಿದರು...

ಹುಮ್, ಚೆನ್ನಾಗಿದೆ....

sunaath ಹೇಳಿದರು...

ಬಿಚ್ಚಿ ಹೇಳುವುದು ಮುಜುಗರವಾದಾಗ, ಮುಚ್ಚಿ ಹೇಳುವ ಕಲೆಯನ್ನು ಆಶ್ರಯಿಸಬೇಕಾಗುತ್ತದೆ. ಪ್ರತಿಮೆಗಳನ್ನು ಬಳಸಿ, ಹೊಸ ಛಂದಸ್ಸನ್ನು ಆಶ್ರಯಿಸಿ, ಹೊಸ ರೀತಿಯ ಕವನವನ್ನು ಬರೆದಿದ್ದೀರಿ. ಮನಕ್ಕೆ ನಾಟುವ ಕವನರಚನೆಗಾಗಿ ಅಭಿನಂದನೆಗಳು.

ಅನಾಮಧೇಯ ಹೇಳಿದರು...

Super, very nice, wonderful choice of words...