ಭಾನುವಾರ, ಆಗಸ್ಟ್ 26, 2012

ದೇವರೇ ಅಗಾಧ ನಿನ್ನ ಕರುಣೆಯ ಕಡಲು.....

Courtesy : Vinay Ad

ಹೋಗುವುದೋ ಬೇಡವೋ ಎನ್ನುವ ಆಲೋಚನೆಗಳ ತಾಕಲಾಟ... ಹೋಗದಿರಲಿದ್ದ ನೆವ- ನಾನು ಮತ್ತು ನನ್ನ ಮಗಳು ಮಾತ್ರ. ಆದರೆ ಹೋಗಲು ಕಾರಣಗಳು ಹತ್ತು ಹಲವಾರು ಕಂಡಿದ್ದರಿಂದ ಶನಿವಾರ ನಡೆದ ೫ ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮಕ್ಕೆ ಹೋದೆ. ಈರಣ್ಣ ಅವರ ಶಾಯರಿಯ ಮಾತುಗಳು, ದಿವಾಕರ್ ಹೆಗಡೆಯವರ ಹಾಸ್ಯದ ಚಟಾಕಿ... ಕೊನೆಯಲ್ಲಿ ತೇಲಿ ಬಂದ ಬಿ.ಆರ್. ಲಕ್ಷ್ಮಣ್‌ರಾವ್ ಅವರ ಸುಂದರ, ಸರಳ, ಮನಸೆಳೆದ ಭಾವಗೀತೆ... ಹೋಗಿದ್ದಕ್ಕಾಗಿ ಖುಶಿ ಪಟ್ಟೆ. :) 

ಬಿ.ಆರ್.ಎಲ್ ಅವರ - "ಅಮ್ಮಾ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು.... ಮಿಡುಕಾಡುತಿರುವೆ ನಾನು" ಹಾಡು ಮರೆಯಲಾಗದಂಥದ್ದು. ಸರಳ ಸುಂದರ ಹಲವು ಭಾವಗಳನ್ನು ಸ್ಫುರಿಸುವ ಕವಿತೆಗಳು. ಆದರೆ ಸ್ವತಃ ಅವರೇ ಇಷ್ಟೊಂದು ಭಾವಪೂರ್ಣವಾಗಿ, ರಾಗಬದ್ಧವಾಗಿ ಹಾಡುತ್ತಾರೆಂದೂ ತಿಳಿದದ್ದು ಈ ಕಾರ್ಯಕ್ರಮದಲ್ಲೇ! ಈ ಮೊದಲೆಂದೂ ನಾನವರ ಹಾಡನ್ನು ಕೇಳಿರಲೇ ಇಲ್ಲಾ!. ಸ್ವಲ್ಪ ಹಿಂದೆ ಕುಳಿತಿದ್ದರಿಂದ ಅತಿ ಸ್ಪಷ್ಟವಾಗಿ ರೆಕಾರ್ಡ್ ಮಾಡಲಾಗಲಿಲ್ಲದಿದ್ದರೂ ತಕ್ಕಮಟ್ಟಿಕೆ ರೆಕಾರ್ಡ್ ಮಾಡಿಕೊಂಡೇ ಬಂದೆ. ನನ್ನ ಕಿವಿಗೆ ನಿಲುಕಿದಷ್ಟು.. ಸ್ಪಷ್ಟತೆ ಮೂಡಿದಷ್ಟು ಹಾಡಿನ ಸಾಹಿತ್ಯವನ್ನು ಅಕ್ಷರಕ್ಕಿಳಿಸಿ ನಿಮ್ಮ ಮುಂದಿಟ್ಟಿರುವೆ. ತುಂಬಾ ಇಷ್ಟವಾಯಿತು ಈ ಹಾಡಿನ ಭಾವಾರ್ಥ ಹಾಗೂ ರಾಗ ಸಂಯೋಜನೆ - ಎರಡೂ.

ದಿನಕ್ಕೆ ಹಲವು ಬಾರಿ ಹಾಡನ್ನು ಕೇಳಿ ಕೇಳಿ ಕಲಿಯುತ್ತಿರುವೆ. ಕೇಳಿದಷ್ಟೂ ಹೊಸ ಹೊಸ ಭಾವಗಳು, ಅರ್ಥಗಳು ಮನದಲ್ಲಿ ಮೂಡಿ, ಒಂದು ರೀತಿಯ ತಾದಾತ್ಮ್ಯತೆ ಮೂಡುತ್ತಿದೆ.

ಅನುವಾದ ಮಾಡುವಾಗ ನಡುವಿನ ಕೆಲವು ಪದಗಳು ಹೆಚ್ಚು ಸ್ಪಷ್ಟವಾಗಿ ಕೇಳಿಸದೇ ತಪ್ಪುಗಳಾಗಿರಬಹುದು... ಪದಗಳಲ್ಲಿ ತಪ್ಪಿದ್ದಲ್ಲಿ,  ಹಾಡಿನ ಸಾಹಿತ್ಯ ಸರಿಯಾಗಿ ತಿಳಿದವರು ತಿದ್ದಬೇಕಾಗಿ ಕೋರಿಕೆ.  ಯಾರ ಬಳಿಯಾದರೂ ಸ್ಪಷ್ಟ ಹಾಡು ರೆಕಾರ್ಡ್ ಆಗಿದ್ದರೆ, ದಯವಿಟ್ಟು ಕಳಿಸಬೇಕಾಗಿ ವಿನಂತಿ. 

ಕಾರ್ಯಕ್ರಮದಲ್ಲಿ ಮತ್ತೊಂದು ಅಂಶ ಬಹು ಇಷ್ಟವಾಗಿದ್ದು ಎಂದರೆ ವಸಂತಲಕ್ಷ್ಮಿ ಅವರ ಸೊಗಸಾದ ನಿರೂಪಣೆ. ತುಂಬಾ ಸ್ಪಷ್ಟವಾಗಿ, ಸ್ವಲ್ಪವೂ ತಪ್ಪಿಲ್ಲದೇ, ತಡವರಿಸಿದೇ, ಹೃದ್ಯವಾಗಿ ನಿರೂಪಿಸಿದ ಅವರ ನಿರೂಪಣಾ ಶೈಲಿಗೆ ಮಾರುಹೋದೆ. ಅದಿತಿಯ ಕೀಟಲೆ, ಕಿರಿ ಕಿರಿ ನಡುವೆಯೇ ಕೊನೆಯವರೆಗೂ ಕೂತದ್ದಕ್ಕೆ ಒಂದು ಉತ್ತಮ ಹಾಡು, ಸಾಹಿತ್ಯ ಸಿಕ್ಕಿದ್ದು ಬಹು ತೃಪ್ತಿಯಾಯಿತು. ಕಾರ್ಯಕ್ರಮ ನಡೆಸಿಕೊಟ್ಟವರಿಗೆಲ್ಲಾ ಧನ್ಯವಾದಗಳು.

ತನ್ನನ್ನೇ ಅಲ್ಲಗಳೆಯಲು ಬುದ್ಧಿ ಕೊಟ್ಟ ದೇವರ ಕರುಣೆಯ ಅಗಾಧತೆಯ ಪರಿಕಲ್ಪನೆಯನ್ನು ಸರಳವಾಗಿ ಒಂದು ಸುಂದರ ಕವನದಲ್ಲಿ ಕಾಣಿಸಿದ, ಅಷ್ಟೇ ಸುಂದರವಾಗಿ... ಭಾವಪೂರ್ಣವಾಗಿ ಹಾಡಿದ, ಬಿ.ಆರ್.ಲಕ್ಷ್ಮಣರಾವ್ ಅವರ ಹಾಡಿನ ಸಾಹಿತ್ಯ ಹೀಗಿದೆ :- 
(ಸೂಚನೆ : ಹಾಡು ಬೇಕಿದ್ದವರಿಗೆ ಕಳುಹಿಸಲಾಗುವುದು.. ಆದರೆ ಅದಕ್ಕೆ ಪ್ರತಿಯಾಗಿ ಒಂದು ಸುಂದರ ಕವಿತೆಯ ವಿನಿಮಯತೆಯಿದ್ದಲ್ಲಿ ಮತ್ತೂ ಸಂತೋಷ :))


ದೇವರೇ ಅಗಾಧ ನಿನ್ನ ಕರುಣೆಯ ಕಡಲು
ನನಗೆ ಸಾಧ್ಯವೇ ಅದರ ಆಳವಳೆಯಲು!

ತೋಳಕೊಂದು ಕುರಿಯ ಕೊಟ್ಟೆ, ಸಿಂಹಕೆಂದು ಜಿಂಕೆಯಿಟ್ಟೆ
ನರನಿಗೆ ನರನನ್ನೆ ಬಿಟ್ಟೆ ಬೇಟೆಯಾಡಲು |೨|
ತುಳಿತಕೆ ನೀ ತಿಮಿರು ಕೊಟ್ಟೆ, ದುಡಿತಕೆ ಬರಿ ಬೆಮರು ಕೊಟ್ಟೆ
ಕವಿಗೆ ನುಡಿಯ ಡಮರು ಕೊಟ್ಟೆ ಬಡಿತು ದಣಿಯಲು |೨|
ದೇವರೇ ಅಗಾಧ ನಿನ್ನ ಕರುಣೆಯ ಕಡಲು
ನನಗೆ ಸಾಧ್ಯವೇ ಅದರ ಆಳವಳೆಯಲು

ನರನಿಗೆಂದೆ ನಗೆಯ ಕೊಟ್ಟೆ, ನಗೆಯೊಳು ಹಲ ಬಗೆಯನಿಟ್ಟೆ
ನೂರು ನೋವ ಬಿಟ್ಟೆ ಒಂದು ನಗೆಯ ಕಾಡಲು |೨|
ಏರಲೊಂದು ಏಣಿ ಕೊಟ್ಟೆ, ಕಚ್ಚಲೊಂದು ಹಾವನಿಟ್ಟೆ
ನೆರಳಿನಂತೆ ಸಾವ ಬಿಟ್ಟೆ ಹೊಂಚಿ ಕೆಡವಲು |೨|
ದೇವರೇ ಅಗಾಧ ನಿನ್ನ ಕರುಣೆಯ ಕಡಲು
ನನಗೆ ಸಾಧ್ಯವೇ ಅದರ ಆಳವಳೆಯಲು

ತಾಮಸಕ್ಕೆ ಬಲವ ಕೊಟ್ಟೆ, ರಾಜಸಕ್ಕೆ ಫಲವ ಕೊಟ್ಟೆ
ಸತ್ವಕೆ ಷಂಡತ್ವ ಕೊಟ್ಟೆ ತತ್ವ ಗೊಣಗಲು |೨|
ಕೈಯ ಕೊಟ್ಟೆ ಕೆಡವಲೆಂದು, ಕಾಲು ಕೊಟ್ಟೆ ಎಡವಲೆಂದು
ಬುದ್ಧಿ ಕೊಟ್ಟೆ ನಿನ್ನನ್ನೇ ಅಲ್ಲಗಳೆಯಲು |೨|
ದೇವರೇ ಅಗಾಧ ನಿನ್ನ ಕರುಣೆಯ ಕಡಲು
ನನಗೆ ಸಾಧ್ಯವೇ ಅದರ ಆಳವಳೆಯಲು |೨|

----------

-ತೇಜಸ್ವಿನಿ ಹೆಗಡೆ.

11 ಕಾಮೆಂಟ್‌ಗಳು:

Shashi jois ಹೇಳಿದರು...

ಬೇರೆ ಕಡೇ ಹೋಗಬೇಕಾದ್ದರಿಂದ ನಂಗೆ ಪೂರ್ಣ ಕಾರ್ಯಕ್ರಮ ವೀಕ್ಷಣೆ ಮಾಡಲು ಆಗಿಲ್ಲ ತೇಜಸ್ವಿನಿ........ಈರಣ್ಣ ಅವರ ಶಾಯರಿ ನಿಜಕ್ಕೂ ಖುಷಿ ತಂತು....
.ನಂಗೂ ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು...........

Badarinath Palavalli ಹೇಳಿದರು...

ನಾನೂ ಇದನ್ನ ಆಸ್ವಾದಿಸಿದೆ.

sunaath ಹೇಳಿದರು...

ತೇಜಸ್ವಿನಿ,
ಹಾಡಿನ ಪಾಠವನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಸೊಗಸಾದ ಕವನ.

Ashok.V.Shetty, Kodlady ಹೇಳಿದರು...

ಕಾರ್ಯಕ್ರಮ ಚೆನ್ನಾಗಿತ್ತು....ಬಿ. ಆರ್. ಎಲ್ ಅವರು ಹಾಡಿದ ಹಾಡಿನ ಸಾಹಿತ್ಯ ಹಂಚಿಕೊಂಡದ್ದಕ್ಕೆ ಧನ್ಯವಾದಗಳು...

mshebbar ಹೇಳಿದರು...

Good effort !

ಮನಸು ಹೇಳಿದರು...

thank you teju oLLe haaDanne namage koTTiddeeri...

ದಿನಕರ ಮೊಗೇರ ಹೇಳಿದರು...

haaDina saahitya koTTiddakke dhanyavaada madam....

nimmanna bheTi aagiddu khushi aaytu....

maanasa saarovra ಹೇಳಿದರು...

ತುಂಬಾ ಚಂದದ ಸಾಹಿತ್ಯವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ತೇಜಸ್ವಿನಿ ಯವರೆ... ಖುಷಿಪಟ್ಟೆವು ನಿಮ್ಮೊಂದಿಗೆ ನಾವೂ.

minchulli ಹೇಳಿದರು...

ತೇಜ್ ಅದಿತಿಯೆಂಬ ಮುದ್ದು ಗೊಂಬೆಯನ್ನು ತಂದು ನನ್ನೊಳಗೆ ನೆಲೆ ನಿಲ್ಲಿಸಿದ "ದೇವರೇ ಆಗಾಧ ನಿನ್ನ ಕರುಣೆಯ ಕಡಲು" Thanks a lot for all those moments.

ಸುಧೇಶ್ ಶೆಟ್ಟಿ ಹೇಳಿದರು...

nangoo thumba ishta aaytu :)

ಮಂಜುಳಾ ಹೇಳಿದರು...

ಹಂ... ಇಡೀ ಕಾರ್ಯಕ್ರಮದಲ್ಲಿ ನಾನು ಭಾವುಕಳಾದ ಘಳಿಗೆ, ಬಿ.ಆರ್.ಎಲ್. ಅವರು ಈ ಹಾಡು ಹೇಳಿದಾಗ.. ನಾನೂ ರೆಕಾರ್ಡ್ ಮಾಡಿಕೊಂಡಿರುವೆ.. Lyrics ಕೊಟ್ಟಿದ್ದಕ್ಕೆ ಧನ್ಯವಾದ ತೇಜು :-)