ಮಂಗಳವಾರ, ಅಕ್ಟೋಬರ್ 25, 2011

ಭೂಮಿ-ಸ್ತ್ರೀ-ಗೋವು : ಇವರ ನಡುವಿನ ಅವಿನಾಭಾವ ಬಂಧ



Courtesy- http://www.gits4u.com/women/womenf21.htm 
ಗೋವು ಧರ್ಮದ ಸಂಕೇತ. ಇಲ್ಲಿ ಧರ್ಮ ಎಂದರೆ ಗೌರವಿಸುವುದು. ಗೋವನ್ನು ಪೂಜಿಸುವುದು, ಆದರಿಸುವುದೇ ನಿಜ ಧರ್ಮ ಹಾಗೂ ನಮ್ಮ ಕರ್ತವ್ಯ. ಧರ್ಮ ಎಂದರೆ ಜೀವನವೂ ಹೌದು. ಜೀವನಕ್ಕೆ ಆಧಾರವಾಗುರುವಂಥದ್ದೇ ನಿಜವಾದ ಧರ್ಮ. ಆ ನಿಟ್ಟಿನಲ್ಲಿ- ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ನಮ್ಮೊಡನೆ ಒಂದಾಗಿ ಸಹಜೀವಿಯಾಗಿರುವ ಗೋವು  ಸುಖಜೀವನಕ್ಕೆ ಮೂಲಾಧಾರ ಎನ್ನಬಹುದು.

ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಹೇಳಿದ್ದಾನೆ... ಸುಖದ ಮೂಲ ಧರ್ಮ-ಧರ್ಮದ ಮೂಲ ಅರ್ಥ-ಅರ್ಥದ ಮೂಲ ರಾಜ್ಯ-ರಾಜ್ಯನಿರ್ವಹಣೆ ಸಮರ್ಪಕವಾಗಿದ್ದಲ್ಲಿ ಸುಖಜೀವನ ತನ್ನಿಂದ ತಾನೇ ಪ್ರಾಪ್ತಿಯಾಗುವುದೆಂದು. ಸಹಜೀವಿಗಳೊಡನೆ ಪರಸ್ಪರ ಗೌರವದಿಂದ ಇದ್ದರೆ, ಸ್ಪಂದಿಸುವ, ಸ್ಪಂದನೆಗೆ ಪ್ರತಿಸ್ಪಂದಿಸುವ ಮಾನವೀಯತೆಯಿದ್ದರೆ ಸುಖ ತನ್ನಿಂದ ತಾನೇ ಲಭ್ಯವಾಗುತ್ತದೆ... ಅಲ್ಲಿ ಧರ್ಮ ನೆಲೆಯಾಗಿರುತ್ತದೆ.

ಗೋವು ಎಂದರೆ ಮಾತೆ. ಮಕ್ಕಳನ್ನು ಸಲಹುವವಳು. ಹುಟ್ಟಿದ ಶಿಶುವಿಗೆ ತಾಯಿಯ ಹಾಲು ಎಷ್ಟು ಪ್ರಾಮುಖ್ಯವೋ, ತಾಯಿಯ ಹಾಲಿನ ಮುಂದೆ ಬೇರೆಲ್ಲವೂ ನಗಣ್ಯವೋ ಹಾಗೇ ಬೆಳೆವ ಮಕ್ಕಳಿಗೆ ಹಸುವಿನ ಹಾಲು ಅತ್ಯವಶ್ಯಕ. ಹಸುವಿನ ಹಾಲಿನೊಳಗಿರುವ ಪೌಷ್ಟಿಕತೆಯನ್ನು ಬೇರಾವ ಕೃತಕ ಪಾನೀಯಗಳೂ ನೀಡಲಾರವು. ಹುಟ್ಟಿದ ಕಂದನಿಗೆ ಕಾರಣಾಂತರಗಳಿಂದ ತಾಯಿಯ ಹಾಲು ಲಭ್ಯವಾಗದಿದ್ದಲ್ಲಿ ಥಟ್ಟನೆ ನೆನಪಿಗೆ ಬರುವುದು ಹಸುವಿನ ಹಾಲೇ, ಕುರಿ ಅಥವಾ ಆಡಿನ ಹಾಲಲ್ಲ. ಹಾಗಾಗೇ ಪುರಾಣಕಾಲದಿಂದಲೂ ಗೋವಿಗೆ ಮಾತೆಯ ಸ್ಥಾನ ನೀಡಿದ್ದಾರೆ. 

ಮನುಜನಿಗೆ, ಗೋವಿಗೆ ಸಕಲ ಜೀವಜಂತುಗಳಿಗೆ ಮೂಲಾಧಾರ "ಭೂಮಿ". ಇಳೆ, ಧರಾ - ಎಂಬೆಲ್ಲಾ ಹೆಸರನ್ನು ಹೊತ್ತಿರುವ ಭೂಮಿಯಲ್ಲೂ ಮಾತೆಯನ್ನೇ ಕಂಡಿದ್ದಾರೆ ನಮ್ಮ ಪೂರ್ವಿಕರು. ಭೂತಾಯಿಯ ಗರ್ಭದಿಂದ ಮೊಳಕೆ ಚಿಗುರೊಡದು ಫಲ ಹೊರಬಂದು ನಮ್ಮೆಲ್ಲರ ಹಸಿವು ನೀಗಲು ನೇಗಿಲೂಡಬೇಕು. ನೇಗಿಲೂಡಿ, ಪೈರು ಹೊರ ಹೊಮ್ಮಲು ಗೋಮಾತೆಯ ಪಾತ್ರವೇ ಮಹತ್ವವಾದದ್ದು. ತೆನೆಯೊಳಗಿನ ಹಾಲಿಗೆ ಸಗಣಿಯ ಗೊಬ್ಬರವೇ ಶ್ರೇಷ್ಠ. ಗೋವಿನ ಎಲ್ಲಾ ವಿಸರ್ಜನೆಗಳೂ ಅಮೂಲ್ಯವೇ. ಸಗಣಿಯಿಂದ ಹಿಡಿದು ಹಾಲಿನವರೆಗೂ, ಗೋಮೂತ್ರದಿಂದ ಹಿಡಿದು ತುಪ್ಪದವರೆಗೂ ಅತ್ಯವಶ್ಯಕ. ವೈಜ್ಞಾನಿಕವಾಗಿಯೂ ಪಂಚಗವ್ಯ ಅಂದರೆ ಗೋಮಯ (ಸಗಣಿ), ಗೋಮೂತ್ರ, ತುಪ್ಪ, ಮೊಸರು, ಹಾಲು - ಇವು ಔಷಧೀಯ ತತ್ವವನ್ನು ಒಳಗೊಂಡಿವೆ ಎಂಬುದು ಸಾಬೀತಾಗಿದೆ.

ಕುಟುಂಬ ನಿರ್ವಹಣೆಗೆ, ಜೀವನಾಧಾರಕ್ಕೆ ಗೋವಿನ ಸಂತತಿಯ ಹೆಚ್ಚಳಿಕೆಯಾಗಬೇಕಾಗಿದೆ. ಗೋಪಾಲನೆಗೆ ಮುಖ್ಯವಾಗಿ ಬೇಕಾಗಿರುವುದು ಸಹನೆ, ಸಂಯಮ ಹಾಗೂ ವಾತ್ಸಲ್ಯ. ಸ್ತ್ರೀ ತನ್ನ ಮಗುವನ್ನು ಕಾಪಿಡುವಂತೇ ಜೋಪಾನವಾಗಿ ಗೋವನ್ನು ಸಲಹುವಳು. ಗೋವಿನೊಡನೆ ಸಂಭಾಷಣೆಯನ್ನೂ ನಡೆಸಬಲ್ಲಳು. ತನ್ನ ಕುಡಿಯ ನೋವನ್ನು ಅರಿಯುವಂತೇ ಮೂಕಪ್ರಾಣಿಯ ಮೂಕಭಾಷೆಯನ್ನೂ ತಿಳಿಯಬಲ್ಲಳು. ಹಿಂದೆ ಕೊಟ್ಟಿಗೆಯೇ ಆಕೆಗೆ ಪ್ರಧಾನವಾಗಿತ್ತು. ಮುಂಜಾನೆಯ ಆರಂಭ ಮುಸ್ಸಂಜೆಯ ಸೂರ್ಯಾಸ್ತ ಕೊಟ್ಟಿಗೆಯಲ್ಲೇ ಆಗುವುದು ಪ್ರತೀತಿ. ಆಕೆಯ ಸ್ಪರ್ಶ, ಅನುನಯಿಸುವ ಮಾತು, ವಾತ್ಸಲ್ಯದಿಂದ ನೀಡುವ ಹಿಂಡಿ, ಹುಲ್ಲು-ಇವೆಲ್ಲವುಗಳಿಗೆ ಗೋವುಗಳೂ ಸ್ಪಂದಿಸುತ್ತವೆ. ಹಾಗಾಗಿಯೇ ಪ್ರತಿನಿತ್ಯ ತಮ್ಮನ್ನು ಮುದ್ದಿಸುವ ಒಡತಿ ಒಂದು ದಿನ ಕಾಣದಾದರೂ ತಿನ್ನುವುದನ್ನೂ, ಹಾಲು ನೀಡುವುದನ್ನೂ ನಿಲ್ಲಿಸಿಬಿಡುತ್ತವೆ. ಅಪರಿಚಿತರು, ಹೆಚ್ಚು ಕೊಟ್ಟಿಗೆಯನ್ನು ಹೊಕ್ಕದವರು ಹಾಲು ಕರೆಯಲೋ, ಹಿಂಡಿ ನೀಡಲೋ ಬಂದರೆ ತಿವಿಯಲೂ ಹಿಂಜರಿಯವು. ಅಷ್ಟೊಂದು ಉತ್ಕಟ ಬಂಧ ಅವರಿಬ್ಬರ ನಡುವೆ ಉಂಟಾಗಿರುತ್ತದೆ. 

ಆಪತ್ಕಾಲದಲ್ಲಿ ಕುಟುಂಬ ನಿರ್ವಹಣೆಗೆ, ತನ್ನ ಸಣ್ಣ ಪುಟ್ಟ ಖರ್ಚು ವೆಚ್ಚಗಳಿಗೆ ಮಹಿಳೆ ಆಧರಿಸುವುದು ಗೋಮಾತೆಯ ಹಾಲನ್ನೇ. ಹಾಲು, ಮೊಸರು, ತುಪ್ಪ-ಇವುಗಳ ಮಾರಾಟವೇ ಮಹಿಳೆಯ ಧನಸಂಗ್ರಹಕ್ಕೆ ಮೂಲ ಆಧಾರ. ಹಿಂದೆ ಋಷಿ-ಮುನಿಗಳ ಕಾಲದಲ್ಲಿ ಒಂದು ಗೋವಿನಿಂದಲೇ ಅವರ ಕುಟುಂಬದ ನಿರ್ವಹಣೆಯಾಗುತ್ತಿತ್ತು. ಈಗಲೂ ಹಳ್ಳಿಯ ಅದೆಷ್ಟೋ ಕುಟುಂಬ ತಮ್ಮ ಜೀವನ ನಿರ್ವಹಿಸುವುದು ಗೋಮಾತೆಯ ಕೃಪೆಯಿಂದಲೇ. ಭೂಮಿ, ಗೋವು, ಸ್ತ್ರೀ - ಈ ಮೂವರೊಳಗಿನ ಅವಿನಾಭಾವ ಬಂಧವೇ ಜೀವಿಯ ಹುಟ್ಟಿಗೆ, ಬೆಳವಣಿಗೆಗೆ ಮೂಲಕಾರಣ ಎನ್ನಬಹುದು. 

ಹೆಣ್ಣು ಹುಟ್ಟಿದಾಗಿನಿಂದ ಅಂತ್ಯದವರೆಗೂ ಪರರಿಗಾಗಿ ಬದುಕುವುದನ್ನು ಕಲಿಯುತ್ತಾ ಬೆಳೆವಳು. ಹೊಸ ಜೀವಿಗೆ ಜನ್ಮವನಿತ್ತು, ತನ್ನೊಳಗಿನ ಸತ್ವವನ್ನು ಉಣಿಸಿ ಸಲಹಿ ಪೋಷಿಸುವಳು. ಹಳೆ ಸಂಬಂಧದ ಜೊತೆ ಹೊಸ ಬಂಧವ ಬೆಸೆವ ಕೊಂಡಿಯಾಗುವಳು. ತನ್ನ ಅಸ್ತಿತ್ವನ್ನೇ ಅಳಿಸಿಹಾಕಿ ಸಿಕ್ಕ ಪಾತ್ರದೊಳಗೆ ಒಂದಾಗುವಳು. ಅಂತೆಯೇ ಗೋವು ತನಗಾಗಿ ಮಾತ್ರ ಏನನ್ನೂ ಉಳಿಸಿಕೊಳ್ಳದೇ ಎಲ್ಲವನ್ನೂ ತನ್ನ ಸಲಹುವವರಿಗೆ ನೀಡುವುದು. ಹಾಗಾಗಿಯೇ ಅದನ್ನು "ಕಾಮಧೇನು", "ಪುಣ್ಯಕೋಟಿ" ಎಂದೆಲ್ಲಾ ಹಾಡಿ ಹೊಗಳಿರುವುದು. ಅಲ್ಲದೇ ನಮ್ಮ ಪೂರ್ವಿಕರು ಪಂಚ ಮಹಾ ಪಾತಕಗಳಲ್ಲಿ, ಗೋ ಹತ್ಯೆ ಹಾಗೂ ಸ್ತ್ರೀ ಹತ್ಯೆಯನ್ನು ಸೇರಿಸಿ ಇವರಿಬ್ಬರಿಗೂ ಸಲ್ಲಬೇಕಾಗಿರುವ ಆದ್ಯತೆ, ಗೌರವವನ್ನು ಎತ್ತಿಹಿಡಿದಿದ್ದಾರೆ.

"ಅಂಬಾ..." ಎನ್ನುವ ಪದಕ್ಕೂ "ಅಮ್ಮಾ..." ಎನ್ನುವ ಪದಕ್ಕೂ ತುಂಬಾ ಸಾಮಿಪ್ಯವಿದೆ. ಸ್ತ್ರೀ-ಗೋವಿನ ನಡುವಿನ ಅವಿನಾಭಾವ ಬಂಧಕ್ಕೆ ಮುಗಿಯದ ನಂಟು ನಮ್ಮ ಅರಿವಿನಾಚೆಯಿಂದ ಅಂಟಿ ಬಂದಿದೆ ಎನ್ನುವುದನ್ನು ಸೂಚಿಸುತ್ತದೆ. ಪ್ರಸಿದ್ಧ ಗೋವಿನ ಹಾಡಾದ "ಧರಣಿ ಮಂಡಲ ಮಧ್ಯದೊಳಗೆ.." ಪದ್ಯದಲ್ಲಿ ಬರುವ ಗೋಮಾತೆಯ ತಳಮಳ, ಸಂಕಟ ಮಾನವೀಯತೆಯುಳ್ಳವರ ಹೃದಯವನ್ನು ತಟ್ಟದೇ ಬಿಡದು. ಹುಲಿರಾಯನಲ್ಲಿ ಕಾಡಿ ಬೇಡಿ, ತನ್ನ ಮಗುವಿಗೆ ಹಾಲೂಡಲು ಓಡಿಬಂದು, ತದನಂತರ ಕೊಟ್ಟ ಮಾತಿನಂತೇ ಸಾಯಲು ಹೊರಟ ಸತ್ಯವಂತ ಗೋವಿನೊಳಗಿನ ಸ್ತ್ರೀ ಪಾತ್ರ ನಮ್ಮ ನಡುವೆಯೂ ಅಡಗಿದೆ. ತನ್ನ ಕುಡಿಗಾಗಿ ತನ್ನನ್ನೇ ಮಾರಿಕೊಳ್ಳುವ, ತನ್ನವರಿಗಾಗಿ ತನ್ನ ಪ್ರಾಣವನ್ನೇ ಪಣವಾಗಿಡುವ ತ್ಯಾಗಶೀಲೆ ಹಿಂದಿನಿಂದ ಇಂದಿನವರೆಗೂ ಇದ್ದಾಳೆ. ಗೋವಿನ ಹಾಡಿನಲ್ಲಿ ಗೋವು ಸಾಂಕೇತಿಕ. ಅದರೊಳಗಿನ ಸ್ತ್ರೀತ್ವ ಸಾರ್ವತ್ರಿಕ. ಹೆಣ್ಣಿನೊಳಗಿನ ಸಹನೆ, ತ್ಯಾಗ, ವಾತ್ಸಲ್ಯ, ದೃಢತೆಯ ಪ್ರತೀಕವಾಗಿ ಗೋವನ್ನು ಕಂಡಿದ್ದಾರೆ ಪುಣ್ಯಕೋಟಿ ಹಾಡನ್ನು ಹೊಸೆದ ನಮ್ಮ ಜನಪದರು.

ಹೆಣ್ಣು ಹೊತ್ತಾಗ, ಹೆತ್ತಾಗ, ಆಧರಿಸಿದಾಗ, ಪೋಷಿಸಿದಾಗ ತಾಯಾಗುತ್ತಾಳೆ... ಪೂಜನೀಯಳೆನಿಸುತ್ತಾಳೆ. ಅದೇ ರೀತಿ ಗೋಮಾತೆ ತನ್ನವರಿಗಾಗಿ ಹಾಲನಿತ್ತು, ತನ್ನೆಲ್ಲಾ ವಿಸರ್ಜನೆಯನ್ನೂ ಕೊಟ್ಟು, ಇಳೆಯ ಸಮೃದ್ಧಿಗೆ ನೇಗಿಲಾಗಿ, ಗೊಬ್ಬರವಾಗಿ ಹಸಿವನ್ನು ತಣಿಸುತ್ತಾಳೆ, ಮನುಕುಲವನ್ನೇ ಪೋಷಿಸುತ್ತಾಳೆ. ಮಕ್ಕಳಿಂದ ವೃದ್ಧರವರೆಗೂ ನೈಸರ್ಗಿಕ ಪೌಷ್ಟಿಕತೆಯನ್ನು ತುಂಬಿ ಸಲಹುವ ಗೋಮಾತೆ ಸದಾ ಪೂಜನೀಯಳು, ಮಾನನೀಯಳು. ಅವಳ ಪ್ರಾಣ ರಕ್ಷಣೆ, ಪೋಷಣೆ ಸರ್ವರ ಕರ್ತವ್ಯವೂ ಹೌದು. ಅವಳೊಳಗಿನ ನಿಃಸ್ವಾರ್ಥತೆಯನ್ನು ಅರಿತು ನಡೆದರೆ ಬತ್ತಿದ ಗೋವಿನ ಸಗಟು ಮಾರಾಟವನ್ನು ನಿಶ್ಚಲವಾಗಿ ತಡೆಯಬಹುದು.

("ಬೋಧಿ ವೃಕ್ಷ"  ಪತ್ರಿಕೆಯಲ್ಲಿ ಪ್ರಕಟಿತ)

Copy right : Tejaswini Hegde


ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಕಾಮನೆಗಳು. ಮನ-ಮನದೊಳಗೆ ಹೊಸ ಜ್ಞಾನ ದೀವಿಗೆಯನ್ನು ಹಚ್ಚಿ ಎಲ್ಲೆಡೆ ಸುವಿಚಾರಗಳನ್ನು ಬೆಳಗುವ ಸಂಕಲ್ಪ ನಮ್ಮೊಳಗೆ ತುಂಬಲೆಂದು ಹಾರೈಸುವೆ.

-ತೇಜಸ್ವಿನಿ ಹೆಗಡೆ. 

11 ಕಾಮೆಂಟ್‌ಗಳು:

ಮನಸು ಹೇಳಿದರು...

ನೆನ್ನೆನೇ ಭೋದಿವೃಕ್ಷ ಪತ್ರಿಕೆಯಲ್ಲಿ ಓದಿದ್ದೆ ನಿಮ್ಮ ಲೇಖನ ಚೆನ್ನಾಗಿದೆ . ಹೆಣ್ಣು ಮತ್ತು ಗೋವು ಇಬ್ಬರಿಗೂ ಸಾಮ್ಯತೆ ಇದೆ... ನಮ್ಮಲ್ಲಿ ಗೋವನ್ನು ಅಲಂಕರಿಸಿ ಪೂಜೆ ಮಾಡುವುದು ಹೆಚ್ಚು ಸಂಕ್ರಾಂತಿ ಸಮಯದಲ್ಲಿ... ನಿಮ್ಮ ಈ ಲೇಖನ ಓದಿ ನಮ್ಮೂರಿನಲ್ಲಿ ಗೋವಿಗೆ ಪೂಜೆ ಮಾಡಿ ಮೆರವಣಿಗೆ ಮತ್ತು ಬೆಂಕಿ ಕೆಂಡಹಾಯಿಸುವುದೆಲ್ಲವೂ ನೆನಪಾಯಿತು..ಥಾಂಕ್ಯೂ
ಗೋವನ್ನು ಕೊಲ್ಲುತ್ತಾರಲ್ಲ ಅಂತ ಜನರಿಗೆ ಏನು ಹೇಳಬೇಕೋ ಗೊತ್ತಿಲ್ಲ... ತಾನಾಗೇ ಸಾವು ಬಂದರೆ ಸರಿ... ಬದುಕಿರೋ ಆ ಮೂಕಪ್ರಾಣಿಯನ್ನು ಕೊಂದು ತಿನ್ನುವುದು ಎಷ್ಟರ ಮಟ್ಟಿಗೆ ಸರಿ ಅಲ್ಲವೇ..?

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ದೀಪಾವಳಿಯ ಶುಭಾಶಯಗಳು

sunaath ಹೇಳಿದರು...

ಸಕಲ ಜೀವಿಗಳನ್ನು ಪೋಷಿಸುವ ಧರೆ, ಗೋವು ಹಾಗು ತಾಯಿ ಇವರು ನಿಜವಾಗಿಯೂ ಪೂಜ್ಯರು. ಇವರ ಅವಿನಾಭಾವ ಸಂಬಂಧವನ್ನು ಸುಂದರವಾಗಿ ನಿರೂಪಿಸಿದ್ದೀರಿ.

Shruthi B S ಹೇಳಿದರು...

nijakku hennige haagu govige bahala saamyate ide. lekhana tumba channagide.

ಜಲನಯನ ಹೇಳಿದರು...

ಗೋವಿನ ಗೀತೆ ನಮಗೆ ಸ್ಕೂಲಿನಲ್ಲಿದ್ದ ಪದ್ಯ ನೆನಪಾಯ್ತು ನಿಮ್ಮ ಈ ಲೇಖನ ನೋಡಿ ತೇಜಸ್ವಿನಿ. ಇಟ್ಟರೆ ಸಗಣಿಯಾದೆ ತಟ್ಟಿದರೆ ಬೆರಣಿ, ಒಲೆಗೆ ಉರುವಲು, ನಂತರ ವಿಭೂತಿ, ಇಲ್ಲವಾದರೆ ಹೊಲಕೆ ಗೊಬ್ಬರ ಆಮೂಲಕ ಹೂವು ಹಣ್ಣು ಅನ್ನ, ಮಗು, ಹಿರಿ ಕಿರಿಯರಿಗೆ ಅಮೃತ ಸ್ಮಾನ ಹಾಲು...ಇಳೆಯ ಬೆಳೆ-ತೆಂಗು, ಪ್ರಾಣಿ-ಬೆಲೆ ಹಸು...ಎರಡನ್ನೂ ಕಲ್ಪತರುಗಳು ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ.

Subrahmanya ಹೇಳಿದರು...

ಒಳ್ಳೆಯ ಲೇಖನ. ಸಾರ್ವಕಾಲಿಕ.

ಅಮರೇಶ ಲಿಂಗಸ್ಗೂರ್ ಹೇಳಿದರು...

Nijakku govu endare maathe,
maguvige thayiya halu estu mukyavo hage govina halukuda aste mukya.
Nanage nijakku ea lekhanavannu odida nantharave panchagavya endare enu endu thilidaddu.
Ea lekhanavannu baredaddakke DHANYAVADAGALU Thejaswiniyavare.
Ellarigu Kannada Rajyothsavada SHUBHASHAYAGALU.

ಚುಕ್ಕಿಚಿತ್ತಾರ ಹೇಳಿದರು...

ಒಳ್ಳೆಯ,ಸುಂದರ ಲೇಖನ.

ಸಿರಿರಮಣ ಹೇಳಿದರು...

ಒಂದು ದೇಶೀ ತುರುಕರು ಚಿತ್ರ ಸಿಕ್ಕಿದ್ಯಿಲ್ಯಾ ಅಕ್ಕಾ ?

ತೇಜಸ್ವಿನಿ ಹೆಗಡೆ ಹೇಳಿದರು...

@ಸುಗುಣ ಮೇಡಮ್, ಕಾಕಾ, ಸುಬ್ರಹ್ಮಣ್ಯ, ಶ್ರುತಿ, ಆಝಾದ್ ಸರ್,

ಲೇಖನವನ್ನು ಮೆಚ್ಚಿ ಸ್ಪಂದಿಸಿದ್ದಕ್ಕೆ ತುಂಬಾ ಧನ್ಯವಾದಗಳು. :)

@ಅಮರೇಶ್ ಅವರೆ,
ಮಾನಸಕ್ಕೆ ಸ್ವಾಗತ. ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ಧನ್ಯವಾದ.:)

@ಸಿರಿರಮಣ,

ಅಣ್ಣಯ್ಯ,, ಗೋವಿನಲ್ಲೂ ದೇಶೀ ಪರದೇಶೀ ಹೇಳಿ ಇದ್ದಾ? ನಾನು ಚಿತ್ರ ಹುಡ್ಕಕಿದ್ರೆ ಪರದೇಶೀನೋ ದೇಶೀನೋ ಹೇಳೀ ನೋಡಿದ್ನೇ ಇಲ್ಲೆ.. ಇಷ್ಟಕ್ಕೂ ಈಗ ಹಾಕಿರದು ದೇಶೀನೋ ಪರದೇಶೀನೋ ಹೇಳಿ ಗೊತ್ತಿಲ್ಲೆ..! ತಾಯಿ ಕರು ಚಿತ್ರ ಕಂಡು ಖುಶಿಯಾಗಿ ಹಾಕ್ದಿ ಅಷ್ಟೇ. ನನ್ನ ಪ್ರಕಾರ ಗೋವು ಇಲ್ಲೇ ಇರ್ಲಿ ಪೂಜೆಗೆ ಸಮಾನ. :)

prashasti ಹೇಳಿದರು...

ಒಳ್ಳೆಯ ಲೇಖನ. ವಂದೇ ಗೋಮಾತರಂ

ಸೀತಾರಾಮ. ಕೆ. / SITARAM.K ಹೇಳಿದರು...

ಚೆಂದದ ಲೇಖನ.