ಭೈರಪ್ಪನವರ ಕಾದಂಬರಿಗಳನ್ನು ಕುತೂಹಲದಿಂದ, ಆಸ್ಥೆಯಿಂದ, ಆಸಕ್ತಿಯಿಂದ ಓದುವ ಅಸಂಖ್ಯಾತರಲ್ಲಿ ನಾನೂ ಓರ್ವಳು. ಅವರ ಗೃಹಭಂಗ, ಪರ್ವ, ಆವರಣ, ದಾಟು, ವಂಶವೃಕ್ಷ - ಈ ಕಾದಂಬರಿಗಳು ಈಗಲೂ ನನಗೆ ಬಲು ಮೆಚ್ಚು. ಮೊದ ಮೊದಲು ಅಂದರೆ ಕಾಲೇಜು ದಿನಗಳಲ್ಲಿ ಇವರ ಕಾದಂಬರಿಗಳಲ್ಲಿನ ಸ್ತ್ರೀ ಪಾತ್ರಗಳೆಲ್ಲಾ ಬಲು ಗಟ್ಟಿಯಾಗಿ, ಗೆಲ್ಲುವ ಪಾತ್ರಗಳೆಂದೇ ಅನಿಸಿತ್ತು ಮತ್ತು ಇದು ಸ್ವಲ್ಪ ಮಟ್ಟಿಗೆ ನಿಜವೂ ಹೌದು. ಆದರೆ ಕ್ರಮೇಣ ಮತ್ತೆ ಮತ್ತೆ ಚಿಂತಿಸಿದಾಗ ಪರ್ವದ ದ್ರೌಪದಿ, ಕುಂತಿಯರಾಗಲೀ, ದಾಟುವಿನ ಸತ್ಯಳಾಗಲೀ, ದಿಟ್ಟೆಯರಾಗಿಯೂ, ಆ ಕಾಲದ ಸಾಮಾಜಿಕ ಚೌಕಟ್ಟನ್ನು ಮೀರಿ ಸ್ವಂತಿಕೆ ಕಂಡುಕೊಳ್ಳಲು ಹೋರಾಡಿದವರಾಗಿಯೂ ಅಂತಿಮದಲ್ಲಿ ಸೋಲಿನ ನೋವುಂಡವರಂತೇ ಕಂಡು ಬಂದರು. ಇನ್ನು ಕವಲು, ಮತ್ತು ಯಾನದ ವಿಷಯವೇ ಬೇಡ. ಪ್ರಸ್ತುತ ನಾನು ಎರಡು ದಿವಸಗಳಲ್ಲಿ ಓದಿ ಮುಗಿಸಿದ ‘ಉತ್ತರಕಾಂಡ’ದ ಕುರಿತು ನನ್ನ ನೇರ, ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ಉತ್ತರಕಾಂಡಕ್ಕೂ ಪರ್ವಕ್ಕೂ ಅಜಗಜಾಂತರವಿದೆ. ಅದನ್ನು ಹೋಲಿಸಲೂ ಹೋಗಬಾರದು.. ಹೋಸಲಿಸಲಾಗದು ಕೂಡ. ಆದ್ರೆ ಪರ್ವವನ್ನು ಓದುವಾಗ ನನ್ನೊಳಗೆ ಅನೇಕಾನೇಕ ಭಾವನೆಗಳ ಸಮ್ಮಿಶ್ರಣ ಹುಟ್ಟಿತ್ತು. (ಈವರೆಗೆ ಎರಡು ಬಾರಿ ಓದಿರುವೆ ಪರ್ವವನ್ನು.. ಎರಡೂ ಬಾರಿಯೂ ಹೊಸ ಹೊಸ ಹೊಳಹುಗಳು ಹೊಳೆದಿವೆ). ಆದರೆ ಉತ್ತರಕಾಂಡ ಹಾಗಲ್ಲ.. ಇದು ಕೇವಲ ‘ಸೀತೆ, ಸೀತೆ ಮತ್ತು ಸೀತೆಯೋರ್ವಳ’ ಕಥೆ ಮಾತ್ರ! ಇಲ್ಲೆಲ್ಲಿಯೂ ಬೇರೊಬ್ಬ ಪಾತ್ರದ ಅಂತರಂಗವು ತುಸುವೂ ಬಿಚ್ಚಿಕೊಳ್ಳದು (ತಕ್ಕ ಮಟ್ಟಿಗೆ ಉರ್ಮಿಳೆಯನ್ನು ಬಿಟ್ಟು). ನೀವೇ ಸೀತೆಯಾಗಿ, ಬಸಿರುಗಟ್ಟಿ, ಲವ-ಕುಶರ ಹೆತ್ತು, ಭೂತಕಾಲದ ಬೆನ್ನೇರಿ ಹೊರಟರೆ ಮಾತ್ರ ಬೇರಾವ ಪಾತ್ರದ ಗೊಡವೆಯೂ ನೆನಪಿಗೆ ಬಾರದು. ಅಷ್ಟರಮಟ್ಟಿಗೆ ಉತ್ತರಕಾಂಡ ಯಶಸ್ವಿಯಾಗಿದೆ. ಇಡೀ ಕಾದಂಬರಿಯುದ್ದಕ್ಕೂ ನನಗೆಲ್ಲೂ ರಾಮನ ಅಂತರಂಗವೇನಿದ್ದಿರಬಹುದು? ಏನಾಗಿತ್ತೋ? ಲಕ್ಷ್ಮಣ, ಭರತರ ಸ್ವಗತ ಏಕಿಲ್ಲ? ಎಂಬಿತ್ಯಾದಿ ಯಾವ ಚಿಂತೆನೆಯೂ ಮೂಡಲೇ ಇಲ್ಲಾ. ಆದಿಯಿಂದ ಅಂತ್ಯದವರೆಗೂ ಇದು ಸೀತೆ ಬರೆದ ರಾಮಾಯಣ. ನಿರಾಸೆಯೆಂದರೆ ಭೈರಪ್ಪನವರ ಉತ್ತರಕಾಂಡದ ಸೀತೆಗೂ ಕೊನೆಯಲ್ಲಿ ತನ್ನ (ನನ್ನಂಥ ಸ್ತ್ರೀಯರ ಮನದೊಳಗಿನದ್ದೂ ಕೂಡ..) ಅನೇಕ ಪ್ರಶ್ನೆಗಳಿಗೆ ಸೂಕ್ತ ಉತ್ತರವೇ ಸಿಗದ್ದು! ಉತ್ತರದ ಬೆನ್ನೇರಿ ಹೊರಟ ಸೀತೆಯ ಬದುಕಿಡೀ ಹಲವು ಹಲವಂಡಗಳು, ಕಾಂಡಗಳು ಎದುರಾಗಿ, ಆಕೆ ಅವನ್ನೆಲ್ಲಾ ತನ್ನದೇ ದಿಟ್ಟತನದ ನೇಗಿಲಿನ ಮೂಲಕ ಸೀಳಿಕೊಂಡು ಮುನ್ನೆಡೆದು, ಮಣ್ಣಲ್ಲಿ ಹುಟ್ಟಿ, ಕೊನೆಗೆ ಅದೇ ಮಣ್ಣೊಳಗೆ ಒಂದಾಗುವ ಕಥನ ವಿಶಾದವನ್ನೂ ಮೀರಿದ ಅನೂಹ್ಯ ಭಾವವೊಂದನ್ನು ನನ್ನೊಳಗೆ ತುಂಬಿಬಿಟ್ಟಿತು.
ಹದಿಹರೆಯದ ಮುಗ್ಧ, ಸ್ನಿಗ್ಧ ಚೆಲುವಿನ ಸೀತೆ, ಯೌವನದ ಅರೆಬಿರಿದ ಸೌಂದರ್ಯದ ಸೀತೆ, ವನವಾಸದಲ್ಲಿ ಕಾಡ ಚೆಲುವನ್ನು ಹೊದ್ದು ಹಸಿರಾದ ಸೀತೆ, ಅಪಹರಣದಲ್ಲಿ ಬಳಲಿ, ಬೆಂಡಾದ ಬಿದಿರಿನಂಥ ಸೀತೆ, ಪತಿಯಿಂದ ಪರಿತ್ಯಕ್ತಳಾದಾಗ ಕೆರಳಿ, ಸೆಟೆದು ನಿಂತು, ಧಿಕ್ಕರಿಸಿದ ಧೀರ ಸೀತೆ... ಅವಳ ವಿವಿಧ ರೂಪವನ್ನು ಅವಳದೇ ಮಾತು, ಚಿಂತನೆ, ಕೃತಿಯ ಮೂಲಕ ತೋರಿಸಿಕೊಟ್ಟ ಶ್ಲಾಘನೆಗಂತೂ ಲೇಖಕರು ಪಾತ್ರರಾಗುತ್ತಾರೆ. ಆದರೂ ಅದೇನೋ ಎಂತೋ.. ಕೊನೆಯಲ್ಲಿ ನನ್ನೊಳಗೆ ಯಾವುದೋ ಕೊರತೆ, ಅಪೂರ್ಣತೆಯ ಭಾವ ತುಂಬಿಕೊಂಡಿತು. ಎಲ್ಲವೂ ಓದಿದ ನಂತರವೂ ಎಲ್ಲೋ ಏನೋ ಸರಿಯಾಗಿಲ್ಲ.. ಸೀತೆಯ ಇನ್ನಾವುದೋ ಭಾವ, ಇಲ್ಲಾ ತೋರಿದ್ದ ರೂಪಗಳಲ್ಲೇ ಯಾವುದೋ ಮಾಯವಾಗಿರುವಂತೆ ಭಾಸವಾಗಿ ತುಸು ನಿರಾಸೆಯಾಗಿದ್ದಂತೂ ಹೌದು.
ಸೀತೆಯನ್ನು ನಮ್ಮಂತೇ ಓರ್ವ ಸಾಮಾನ್ಯ ಸ್ತ್ರೀಯಂತೇ ತೋರುತ್ತಲೇ, ಎಲ್ಲಾ ಸಾಮಾನ್ಯ ಸ್ತ್ರೀಯರಲ್ಲೂ ಇರುವಂಥ, ಇರಬಹುದಾದಂಥ ಒಳಗಿನ ಅಂತಃಸತ್ವ, ದಿಟ್ಟತನ, ಛಲ, ಸ್ವಾಭಿಮಾನವನ್ನೂ ತೆರೆದಿಟ್ಟ ರೀತಿಯೂ ಮೆಚ್ಚುಗೆಯಾಯಿತು.
ಬಳಸಿದ ಉಪಮೆಗಳ/ನಾಣ್ನುಡಿಗಳ ಕುರಿತು
ಆಹಾ.. ಇದರಲ್ಲಿ ಬಳಸಿದ ಕೆಲವು ಉಪಮಾಲಂಕಾರಗಳಿಗೆ, ನಾಣ್ನುಡಿಗಳಿಗೆ ಮಾತ್ರ ಸಂಪೂರ್ಣ ಶರಣಾಗಿ ಹೋದೆ.. ಹೆಚ್ಚೇನು ಹೇಳಲಿ? ತಲೆಯೊಳು ಹೊಕ್ಕಿ ಅಲ್ಲೇ ನೆಲೆ ನಿಂತಿರುವ ಕೆಲವುಗಳನ್ನು ಇಲ್ಲಿ ಉದಾಹರಿಸುತ್ತಿರುವೆ..
೧. ಸೌಮ್ಯಗುಣವಿಲ್ಲದ ಚೆಲುವು ಹಾವಿನ ಹೊಳೆವ ಸೌಂದರ್ಯದಂತೆ
೨. ಬಡ ದೇವರನ್ನು ಕಂಡರೆ ಬಿಲ್ವ ಪತ್ರೆಯೂ ಬುಸ್ ಎನ್ನುತ್ತೆ
೩. ಗಂಗೆಯು ಬಿಳಿ ಮಲ್ಲಿಗೆಯಂತೆಯೂ, ಯಮುನೆಯು ಕರಿಯ ಕಪ್ಪು ಕೂದಲಿನ ಜಡೆಯಂತೆಯೂ ನಲಿದುನಲಿಯುತ್ತಾ ಒಂದರೊಳಗೊಂದು ಬೆರೆತು ಹಾಲಿನಲ್ಲಿ ಬೆಲ್ಲವು ಕರಗಿದಂತೆ ಕಾಣುತ್ತಿತ್ತು.
೪. ಆನೆಯು ಹೊರುವ ತೂಕವನ್ನು ಎತ್ತಿನ ಮೇಲೆ ಹೇರಬಾರದು.
೫. ಪರಿವರ್ತನೆಗೆ ಪಕ್ಕಾಗುವ ತತ್ತ್ವವು ಸತ್ಯವೂ ಅಲ್ಲ, ತತ್ತ್ವವೂ ಅಲ್ಲ. ನೀರು ಎಷ್ಟೇ ಹರಿಯಬಹುದು. ಆದರೆ ನದಿಯ ನಡುವೆ ಇರುವ ಬಂಡೆಯು ಸ್ಥಿರವಾಗಿರುತ್ತದೆ.
೬. ದಪ್ಪನೆಯ ಕಂಬಳಿ ಹೊದ್ದು ನನಗೆ ಚಳಿಯನ್ನು ಹೊಡೆಯುವ ಶಕ್ತಿ ಇದೆ ಎಂದರೆ ನಿಜವಾಗುತ್ತೆಯೆ?
ಉತ್ತರಕಾಂಡದ ಸೀತೆ ಮಾತ್ರ ದಾಟುವಿನ ಸತ್ಯಳಂತೇ, ಪರ್ವದ ಕುಂತಿ, ದ್ರೌಪದಿಯರಂತೇ ಸೋಲದೇ, ಗೆಲ್ಲುವಳು. ಸೀತೆಯೆಂದರೆ ಕೇವಲ ಸಾಧ್ವಿ, ಸಹನೆಶೀಲೆ, ಅಳುಬುರುಕಿ ಎಂಬಲ್ಲಾ ದುರ್ಬಲ ಚಿತ್ರಣದಿಂದ ಹೊರತಾಗಿ, ಭಿನ್ನವಾದ ಪರಿಕಲ್ಪನೆಯನ್ನು ಕಟ್ಟಿಕೊಡುವ ಕಾದಂಬರಿ. ಕೇವಲ ಸೀತೆ ಮಾತ್ರವಲ್ಲ, ಊರ್ಮಿಳೆ, ಸುರಮೆ, ಸುಕೇಶಿ, ಶೂರ್ಪನಖಿ - ಇವರೆಲ್ಲರೂ ಸಶಕ್ತರಾಗಿ ಚಿತ್ರಿತರಾಗಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಆಗುತ್ತಿರುವ ದೈಹಿಕ/ಸಾಮಾಜಿಕ ದೌರ್ಜನ್ಯಕ್ಕೆ ಹೇಗೆ ಲಿಂಗ ಬೇಧವಿಲ್ಲವೋ ಅಂತೆಯೇ ತ್ರೇತಾಯುಗದಲ್ಲೂ ಇದು ಹೊರತಾಗಿರಲಿಲ್ಲ ಎನ್ನುವುದಕ್ಕೆ ಸುಗ್ರೀವ ವಾಲಿ, ತಾರೆಯರ ತ್ರಿಕೋನ ಸಂಬಂಧ, ಶೂರ್ಪನಖಿ ರಾಮ-ಲಕ್ಷ್ಮಣರ ಮೇಲೇರಿ ಹೋಗಿ ಕಾಮಕ್ಕೆ ಒತ್ತಾಯಿಸುವುದು, ಒಪ್ಪದಿದ್ದುದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದು, ರಾವಣ ಸೀತೆಯನ್ನು ಬಂಧಿಸಿಟ್ಟಾಗ, ತನ್ನ ಮೇಲೆ ಆತ ಅತ್ಯಾಚಾರವೆಸಗಿದರೆ ತಾನೇಕೆ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂಬುದಕ್ಕೆ ಸೀತೆ ಕೊಟ್ಟುಕೊಳ್ಳುವ ದಿಟ್ಟ ಸಮಝಾಯಿಷಿ.. ಇದಂತೂ ಇಂದಿನ ಸಮಾಜಕ್ಕೇ ಒಂದು ಒಳ್ಳೆಯ ಸಂದೇಶವೆನ್ನಬಹುದು. ಒಂದೆಡೆ ಸೀತೆ ಹೇಳಿಕೊಳ್ಳುತ್ತಾಳೆ ಹೀಗೆ.. “ದೇಹ ಶುದ್ಧಿಯು ನಷ್ಟವಾದರೆ ಯಾಕೆ ಹೆಂಗಸಿಗೆ ಸರ್ವನಾಶದ ಭಾವ ಬರುತ್ತೆ? ದೇಹವು ಆತ್ಮ ಜೀವ ಬುದ್ಧಿ ಮನಸ್ಸುಗಳಿಗಿಂತ ಜಡವಾದದ್ದಲ್ಲವೆ? ಜಡವು ಅಶುದ್ಧವಾಗಿಯೂ ಆತ್ಮ ಜೀವ ಮನಸ್ಸುಗಳು ಶುದ್ಧವಾಗಿರಲು ಸಾಧವಿಲ್ಲವೆ? ಅತ್ಯಾಚಾರ ಪಾಪವು ಅತ್ಯಾಚಾರಿಗೆ ಮಾತ್ರ ಮೆತ್ತಿಕೊಳ್ಳಬೇಕೇ ಹೊರತು ಬಲಿಯಾದವಳಿಗೆ ಯಾಕೆ ತಗುಲಬೇಕು? ಅವಳೇಕೆ ಆ ದೇಹವನ್ನು ತ್ಯಜಿಸಬೇಕು?” ಸೀತೆಯ ತಲೆಯೊಳಗೆ ಇಂತಹ ಉತ್ತಮ, ಧನಾತ್ಮಕ, ಸ್ವಾಗತಾರ್ಹ ಚಿಂತನೆಗಳನ್ನು ಬಿತ್ತಿ, ಹೊರ ಹಾಕಿಸಿದ್ದಕ್ಕೆ ಲೇಖಕರಿಗೆ ಹೃತ್ಪೂರ್ವಕ ವಂದನೆಗಳು. “ಗಂಡನಿಂದ ತ್ಯಾಜ್ಯಳಾದ ಹೆಂಡತಿ ಈಸಬಹುದು. ಹೆಂಡತಿಯಿಂದ ತ್ಯಾಜ್ಯನಾದ ಗಂಡನ ಬದುಕು ದುರ್ಬರ” - ಈ ಮಾತೊಳಗೆ ಪುರುಷಾಹಂಕಾರವೆಷ್ಟು ದುರ್ಬಲವೆನ್ನುವ ಸಂಜ್ಞೆಯನ್ನು ಕೊಡುತ್ತಿಹರೇ(?) ಎಂದೂ ಅನಿಸಿತು.
ಕೊನೆಯಲ್ಲಿ : ಶೂದ್ರತಪಸ್ವಿಯ ಕೊಲೆ, ಅಹಲ್ಯೆಯ ಅನೈತಿಕತೆಯನ್ನೂ ಕ್ಷಮಿಸಿ ಗೌತಮರು ಅವಳನ್ನು ಸ್ವೀಕರಿಸುವಂತೆ ಮಾಡಿದವ, ಯಾರದೋ ಅಸಂಬದ್ಧ ಮಾತಿಗೆ ನಿಷ್ಪಾಪಿ ಪತ್ನಿಯನ್ನು, ಅದೂ ತುಂಬು ಗರ್ಭಿಣಿಯಾಗಿದ್ದಾಗ ತ್ಯಜಿಸಿದ್ದು, ರಾವಣನ ದಾಸ್ಯದಿಂದ ಹೊರ ಬಂದಾಗ ನಡೆದುಕೊಂಡು ರೂಕ್ಷ ನೀತಿ, ಕಟು ಮಾತುಗಳು, ಶಂಕೆಯ ಭರ್ತ್ಸನೆ.. ಜೀವಮಾನವಿಡೀ ಹಲವಾರು ಪ್ರಶ್ನೆಗಳ ತುಮುಲದಲ್ಲೇ ಭೂಮಿಭಾರವನ್ನು ಹೊತ್ತು, ಧರ್ಮಸಭೆಯಲ್ಲೂ ಸೂಕ್ತ ಉತ್ತರ ಸಿದಗೇ, ಕರೆದ ಪತಿಯನ್ನು ತಿರಸ್ಕರಿಸಿ ಕೊನೆಗೆ ಭೂಮಿಯೊಳೊಂದಾದ ಸೀತೆಯ ಸ್ವಾಭಿಮಾನ, ದಿಟ್ಟ ಹೆಜ್ಜೆ, ಸುಕೋಮಲತ್ವವನ್ನೂ ಮೀರಿದ ಗಟ್ಟಿತನ - ಇವೆಲ್ಲವೂ ಇಂದಿನ ಅವಳಂಥ ಅಸಂಖ್ಯಾತ ಸ್ತ್ರೀಯರ ಪ್ರತಿನಿಧಿಯಂತೇ ಕಂಡಳು. ರಾಮನಂಥ ರಾಮನೇ ಅವಳ ಇರಿವ ಪ್ರಶ್ನೆಗಳಿಗೆ ಉತ್ತರ ಕೊಡದೇ ನಿರುತ್ತರನಾಗಿದ್ದಕ್ಕೇ ಇಂದು ಈ ಕಲಿಯುಗದ ಸಮಾಜ ಉತ್ತರವಿಲ್ಲದೇ ಬರಿಯ ಕರ್ಮ ಕಾಂಡಗಳನ್ನಷ್ಟೇ ಸೃಷ್ಟಿಸುತ್ತಿದೆಯೇನೋ ಎಂದೆನಿಸುತ್ತಿದೆ!
‘ಉತ್ತರಕಾಂಡ’ ಕಾದಂಬರಿ ನಿಜಕ್ಕೂ ಒಂದು ವಿಶಿಷ್ಟ ಪ್ರಯತ್ನವೇ. ಆದರೆ ಉತ್ತರ ಹುಡುಕಿದವರಿಗೆ, ನಿರೀಕ್ಷಿಸಿದವರಿಗೆ ಮಾತ್ರ ನಿರುತ್ತರನಾದ ರಾಮನ ನಿಟ್ಟುಸಿರ ಭಾರಕ್ಕಿಂತ ಸೀತೆಯ ನಿರಾಸೆಯ ಬಿಸಿಯುಸಿರು, ಕೆಚ್ಚಿನ ಪ್ರತ್ಯುತ್ತರವೇ ಹೆಚ್ಚು ತಾಗುವುದು ನಿಶ್ಚಿತ.
ಕೊನೆಯದಾಗಿ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದು ಸೀತಾರಾಮಾಯಣ.. ಇನ್ನೂ ಚುಟುಕಾಗಿ ಹೇಳ ಹೋದರೆ ಇದು ‘ಸೀತಾಯಣ’ ಮತ್ತು ನಮಗೆ ರಾಮನಿಗಿಂತಲೂ ಹೆಚ್ಚು ಆಪ್ತ, ಮೆಚ್ಚುಗೆಯಾಗುವುದು ಸೀತೆಯ ದೃಷ್ಟಿಕೋನದಲ್ಲಿ ಕಾಣಿಸಿಕೊಳ್ಳುವ ಲಕ್ಷ್ಮಣನ ಮೇಲೆ!
~ತೇಜಸ್ವಿನಿ ಹೆಗಡೆ.
6 ಕಾಮೆಂಟ್ಗಳು:
ಚೆನ್ನಾಗಿ ವಿಮರ್ಶೆ ಮಾಡಿದ್್್ದೀ್ದೀ ರಾ ☺
ನಿಮ್ಮ ಲೇಖನವು ಕಾದಂಬರಿಯ ಬಗೆಗೆ ಕುತೂಹಲವನ್ನು ಹುಟ್ಟಿಸುತ್ತಿದೆ.
ODALEEBEKU.
Nanagannisida adare nimmante vyaktha padisalaga vicharagalu channagive
ನಿಜವಾಗಿಯೂ ನಿಮ್ಮ ವಿಮರ್ಶೆಯನ್ನು ಓದಿದ ಮೇಲೆ ಕಾದಂಬರಿಯನ್ನು ಆದಷ್ಟು ಬೇಗ ಕೊಂಡು ಓದಬೇಕೆಂಬ ಕುತೂಹಲ ಹೆಚ್ಚುತ್ತದೆ
ನಿಮ್ಮ ವಿಮರ್ಶೆ ಬಹಳವೇ ಅರ್ಥಗರ್ಭಿತವಾಗಿದೆ. ಮೊದಲ ಬಾರಿ ಓದಿದಾಗ ಭೈರಪ್ಪನವರ ಯಾವುದೇ ಕೃತಿ ಇರಲಿ, ಅದು ಗಹನವಾದ ಚಿಂತನೆಗೆಡೆಮಾಡುತ್ತದೆ. ಆದರೆ ಬಾರಿ ಬಾರಿ ಓದಿದಂತೆ ಅವರ ವಿಚಾರ ಮತ್ತು ತರ್ಕಗಳನ್ನು ಮೆಚ್ಚದಿರಲಾಗೂದಿಲ್ಲ.
ಕಾಮೆಂಟ್ ಪೋಸ್ಟ್ ಮಾಡಿ