ಬುಧವಾರ, ಆಗಸ್ಟ್ 14, 2013

ಹೀಗೊಬ್ಬ ಕ್ರಾಂತಿಕಾರಿ ಸ್ವಾತಂತ್ರ್ಯಯೋಧನ ಕಥೆ...

ನನ್ನಜ್ಜನ ಹೆಸರು ಶ್ರೀಯುತ ನಾರಾಯಣ ಭಟ್. ಮೂಲ ಹೋಬಳಿ ಗ್ರಾಮದ, ನೆಲಮಾವು ಎಂಬ ಊರು. ಹುಟ್ಟಿದ್ದು ೧೪-೦೩-೧೯೦೧ರಂದು. ಶತಾಯುಷಿಯಾಗಿದ್ದ ಇವರು ಗತಿಸಿದ್ದು ೨೮-೦೪-೨೦೦೩ರಂದು. ಬಾಲ್ಯದಿಂದಲೂ ನಾನು ಸ್ವಾತಂತ್ರ್ಯ ಹೋರಾಟದ ಮೈನವಿರೇಳಿಸುವ ಕಥೆಗಳನ್ನು ಅಜ್ಜನಿಂದ ಕೇಳುತ್ತಾ ಬೆಳೆದವಳು. ನನ್ನಜ್ಜ ಉಗ್ರ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಕ್ರಾಂತಿಕರಿ ಯೋಧರಾಗಿದ್ದ ಅವರು, ಸೌಮ್ಯ ಕಾಂಗ್ರೆಸ್ಸ್ ಅನ್ನು ಅಷ್ಟು ಮೆಚ್ಚುತ್ತಿರಲಿಲ್ಲ. ಗಾಂಧೀಜಿಯವರ ಕರೆಗೆ ಸ್ಪಂದಿಸಿ ಸಮರಕ್ಕೆ ಧುಮುಕಿದ್ದರೂ, ಅವರ ಆದರ್ಶ ಭಗತ್ ಸಿಂಗ್ ಆಗಿದ್ದ. ೧೯೩೦-೪೦ರ ಆಸುಪಾಸಿರಬೇಕು.... ಅಜ್ಜನ ಮೇಲೆ ಕಣ್ಣಿಟ್ಟಿದ್ದ ಬ್ರಿಟೀಷರು, ಅರೆಸ್ಟ್ ಮಾಡಿ ಮಹಾರಾಷ್ಟ್ರದ ಬಿಸಾಪುರ ಜೈಲಿನಲ್ಲಿ ೧ ವರುಷದವರೆಗೆ ಕಠಿಣ ಶಿಕ್ಷೆಯಲ್ಲಿಟ್ಟಿದ್ದರು. ಆ ಸಮಯದಲ್ಲಿ ಅವರು ತಿಂದ ಪೆಟ್ಟು, ನೋವು, ಯಾತನೆಯನ್ನು ಕೇಳುವಾಗ, ನನಗೇ ಅಪಾರ ನೋವು, ಆಕ್ರೋಶವುಂಟಾಗುತ್ತಿತ್ತು. ಆದರೆ ಅವರ ಮುಖದಲ್ಲೋ ಅಪೂರ್ವ ಕಳೆ, ಹುಮ್ಮಸ್ಸು. 

ಹೊರ ಬಂದ ಮೇಲೂ ಸುಮ್ಮನಿರದ ಅಜ್ಜ, ಹೋರಾಟವನ್ನು ಮುಂದುವರಿಸಿದ್ದರಂತೆ. ಬ್ರಿಟೀಷರ, ಅವರ ಅನುಯಾಯಿಗಳ ಕಣ್ತಪ್ಪಿಸಿ, ಆದಷ್ಟು ತಲೆಮರೆಸಿಕೊಂಡೇ ಮತ್ತೊಂದು ವರುಷ ಕಳೆದಿದ್ದರಂತೆ. ಮನೆಯ ಹಂಚು ತೆಗೆದು, ಒಳಬರುವುದು, ಅಂತೆಯೇ ಹೊರ ಹೋಗುವುದು ಅವರ ಪರಿಪಾಠವಾಗಿ ಹೋಗಿತ್ತು.. ಕಾರಣ, ಬ್ರಿಟೀಷರ ಅನುಯಾಯಿಗಳು ಮನೆಯ ಆಸು ಪಾಸಿನಲ್ಲೇ ಗಸ್ತು ತಿರುಗುತ್ತಿದ್ದರಂತೆ. ಆದರೂ, ಅವರ ಮೇಲಿನ ವೈಷಮ್ಯದಿಂದಲೋ, ಇಲ್ಲಾ ಬ್ರಿಟೀಷರ ಆದೇಶದಿಂದಲೋ, ಅವರ ಮನೆ, ಆಸ್ತಿ, ಗದ್ದೆ, ತೋಟ ಎಲ್ಲವನ್ನೂ ಸುಟ್ಟು ಹಾಕಿದ್ದರಂತೆ. ಕುಗ್ಗದೇ, ಸೋಲದೇ, ಹಠದಿಂದ ಹೊಸತಾಗಿ ಜೀವನ ಆರಂಭಿಸಿ, ಕಲ್ಲೇ ತುಂಬಿದ್ದ ನೆಲವನ್ನು ಕೊಂಡು, ಗುಡ್ಡ ಕಡಿದು, ಕೃಷಿ ಮಾಡಿ ಮೇಲೆ ಬಂದವರು. ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಬೇಕೆಂದು ಹೇಳುತ್ತಿದ್ದರು. ಅಂತೆಯೇ ಅವರು ನಡೆದುಕೊಂಡಿದ್ದರು ಕೂಡ. ಅವರ ಪತ್ನಿ, ನನ್ನಜ್ಜಿ ಶ್ರೀಮತಿ ಸುಬ್ಬಲಕ್ಷ್ಮೀ ಅವರೂ ನನ್ನಜ್ಜನ ಪಥವನ್ನೇ ಹಿಂಬಾಲಿಸಿದವರು.... ಮಹಿಳೆಯರ ಜೊತೆ ಸೇರಿ ಹೋರಾಟ ಮಾಡಿ ಜೈಲುವಾಸ ಅನುಭವಿಸಿದ್ದರು.

ಭಗತ್ ಸಿಂಗ್, ಸುಖದೇವ, ರಾಜಗುರು - ಈ ಮೂವರನ್ನು ಅದೆಷ್ಟು ಹಚ್ಚಿಕೊಂಡಿದ್ದರೆಂದರೆ, ಅವರನ್ನು ಅನ್ಯಾಯವಾಗಿ ಗಲ್ಲಿಗೇರಿಸಿದ ನೋವು, ಸಿಟ್ಟು ಕೊನೆಯವರೆಗೂ ಅವರ ಮಾತಲ್ಲಿ, ಮುಖದಲ್ಲಿ ಸ್ಪಷ್ಟವಾಗಿ ಕಾಣಬಹುದಿತ್ತು. ಈ ಮೂವರನ್ನು ಗಲ್ಲಿಗೇರಿಸಿದಾಗ, ಇವರ ಮೇಲೆ ಲಾವಣಿಗಳನ್ನು ಕಟ್ಟಿ ಊರಲ್ಲಿ ಹಾಡುತ್ತಿದ್ದರಂತೆ. ಊರಿಂದೂರಿಗೆ ಹಾಡುತ್ತಾ ಜನರನ್ನು ಎಬ್ಬಿಸುವ, ದೇಶಕ್ಕಾಗಿ ಹೋರಾಡುಲು ಕರೆಕೊಡುವ ಕೆಲಸವನ್ನೂ ಮಾಡುತ್ತಿದ್ದರಂತೆ. ಅಂತಹ ಒಂದು ಲಾವಣಿಯನ್ನು ಅಜ್ಜ ಆಗಾಗ ಹೇಳುತ್ತಿದ್ದರು. ಹಾಡಿಕೊಳ್ಳುತ್ತಲೇ, ನೆನಪಿನ ಲೋಕಕ್ಕೆ ತೆರಳುತ್ತಿದ್ದರು. ನಡುವೆ ಗದ್ಗದಿತರಾಗಿ ಅವರ ಕಣ್ಗಳು ಒದ್ದೆಯಾಗುತ್ತಿದ್ದವು. ಇದನ್ನೆಲ್ಲಾ ನಾನೇ ಸ್ವತಃ ನೋಡಿದ್ದೇನೆ. ಅವರು ದುಃಖಿತರಾಗಿದ್ದಾಗೆಲ್ಲಾ ಅತೀವ ನೋವು ನನಗೂ ಆಗುತ್ತಿತ್ತು. ಈಗಲೂ ಈ ಹಾಡನ್ನು ನೆನಪಿಸಿಕೊಂಡಾಗೆಲ್ಲಾ... ಹಾಡುತ್ತಾ ಮೈಮರೆತು, ಸಂಕಟಪಡುತ್ತಿದ್ದ ಅಜ್ಜನ ನೆನಪಾಗುತ್ತದೆ.. ನಗು ನಗುತ್ತಾ ಪ್ರಾಣತೆತ್ತ ಆ ಮೂವರು ಮಹಾತ್ಮರೂ ನೆನಪಾಗುತ್ತಾರೆ. ಓರ್ವ ಅಪ್ಪಟ ದೇಶಭಕ್ತ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರನ ಮೊಮ್ಮಗಳು ನಾನೆನ್ನಲು ನನಗೆ ಅಪಾರ ಹೆಮ್ಮೆಯಿದೆ. 

ಆ ಲಾವಣಿ ಹೀಗಿದೆ... (ಇನ್ನೂ ಅದೆಷ್ಟೋ ಸೊಲ್ಲುಗಳಿದ್ದವು... ನನ್ನಲ್ಲಿ ಉಳಿದುಕೊಂಡಿದ್ದು ಇವಿಷ್ಟೇ :( )

ಭಗತ್ ಸಿಂಗ, ಸುಖದೇವ,
ರಾಜಗುರು ಮೂವರ ಮರಣ
ಹೇಳಲಾರೆನು ಮಾ ರಮಣ
ಹಿಂದುಸ್ಥಾನದ ಮಾರಣ ದಿನ
ಗೋಳಾಡಿತು ಹಿಂದುಸ್ಥಾನ
ಆಳರಸರ ದಬ್ಬಾಳಿಕೆಯೊಳಗೆ
ಪ್ರಾಣಾಘಾತವೆಷ್ಟಣ್ಣ

ಎಲ್ಲಿ ನೋಡಿದಲ್ಲಿ ನಾಡನೊಳಗ 
ಚಳವಳಿ ಸಂಪ್ರದಾನ
ತಾರೀಕು ಇಪ್ಪತ್ತಮೂರಣ್ಣ
ಗಲ್ಲಾಯಿತು ಸೋಮವಾರ ದಿನ ||ಭಗತ್ ಸಿಂಗ, ಸುಖದೇವ,||


ಹೋದರು ಮೂವರು ಭಾರತ ವೀರರು
ಸ್ವತಂತ್ರದಾ ದೇವಿಯನ 
ಅಗಲಿ ದುಃಖಕ್ಕೀಡು ಮಾಡಿದರು
ಈ ನಮ್ಮ ದೇಶವನ  ||ಭಗತ್ ಸಿಂಗ, ಸುಖದೇವ,||

-----
೧೯೪೭ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಅಜ್ಜನಿಗೆ ಅದೆಷ್ಟು ಸಂತಸವಾಗಿತ್ತೋ ಅಷ್ಟೇ ಆಘಾತ ದೇಶ ಇಬ್ಭಾಗವಾದಾಗ ಉಂಟಾಗಿತ್ತಂತೆ. ಅದಕ್ಕಾಗಿ ಅವರು ಎಂದೂ ಗಾಂಧೀಜಿ, ನೆಹರೂರನ್ನು ಕ್ಷಮಿಸಲೇ ಇಲ್ಲಾ! ತದನಂತರ ಮತ್ತೊಂದು ಆಘಾತವಾಗಿದ್ದು ಎಮರ್ಜೆನ್ಸಿ ಘೋಷಣೆಯಾದಾಗ. ಯಾವ ದೇಶದ, ಜನತೆಯ, ಬಿಡುಗಡೆಗಾಗಿ ಎಲ್ಲರೂ ಹೋರಾಡಿ ಮಡಿದಿದ್ದರೋ, ಆ ದೇಶವನ್ನು, ಅಲ್ಲಿಯ ಪ್ರಜೆಗಳನ್ನು ಮತ್ತೆ ದಬ್ಬಾಳಿಕೆಗೆ ಒಳಪಡಿಸಿದ್ದು ಅಕ್ಷಮ್ಯವಾಗಿತ್ತು ಅವರಂತಹ ಹಿರಿಯರಿಗೆಲ್ಲಾ.

ಹಠ, ಛಲ, ಹೋರಾಟ, ಸ್ಥೈರ್ಯದ ಪ್ರತಿರೂಪವಾಗಿದ್ದರು ನನ್ನಜ್ಜ. ೧೦೦ ವರುಷಗಳಾಗಿದ್ದರೂ ತಮ್ಮ ಕೆಲಸ ತಾವೇ ಮಾಡಿಕೊಳ್ಳಬೇಕೆನ್ನುವ ಹಠ. ಎಂತೆಂತಹ ಸಂಕಷ್ಟಗಳನ್ನು, ವಿರೋಧಗಳನ್ನು, ದಬ್ಬಾಳಿಕೆಗಳನ್ನು ಎದುರಿಸಿ, ಹೋರಾಡಿ, ಸಾಧಿಸಿ ತೋರಿದ ನನ್ನಜ್ಜ, ಹಾಗೂ ಅವರ ದಾರಿಯಲ್ಲೇ ನಡೆದು ಪ್ರಾಮಾಣಿಕತೆ, ಸತ್ಯ, ಸ್ಥೈರ್ಯ, ಧೈರ್ಯಕ್ಕಿರುವ ಶಕ್ತಿ ಎಂತಹುದು ಎಂದು ಮತ್ತೂ ಚೆನ್ನಾಗಿ ತೋರಿಸಿಕೊಟ್ಟ ಅವರ ಹಿರಿಯ ಮಗ ಹಾಗೂ ನನ್ನ ತಂದೆಯಾದ ಗೋಪಾಲಕೃಷ್ಣ ಭಟ್- ಇವರುಗಳು ನನ್ನಲ್ಲಿ ಪ್ರೇರಣೆ ತುಂಬಿದವರು. ನನ್ನ ಬದುಕಿನದ್ದುಕ್ಕೂ ಛಲಕ್ಕೆ, ಆದರ್ಶಕ್ಕೆ, ಸತ್ಯಕ್ಕೆ, ನ್ಯಾಯಯುತ ಹೋರಾಟಕ್ಕೆ ತಡವಾದರೂ ಗೆಲುವು ನಿಶ್ಚಿತ ಎಂದೂ ತೋರಿಸಿಕೊಟ್ಟು ಸ್ಫೂರ್ತಿ ತುಂಬಿದವರು.

ನನ್ನಜ್ಜನಂತಹ ಅದೆಷ್ಟೋ ದೇಶಪ್ರೇಮಿಗಳು, ತ್ಯಾಗಿಗಳು ಈ ದೇಶಕ್ಕಾಗಿ ಹೋರಾಡಿದ್ದಾರೆ, ವೀರ ಮರಣವನ್ನಪ್ಪಿದ್ದಾರೆ... ಅವರೆಲ್ಲರ ಹೋರಾಟದ, ತ್ಯಾಗದ ಫಲ ನಾವಿಂದು ಅನುಭವಿಸುತ್ತಿರುವೀ ಸ್ವಾತಂತ್ರ್ಯ! ಈ ದೇಶ ನಮಗೇನು ಕೊಡುತ್ತಿದೇ ಎನ್ನುವುದನ್ನು ಯೋಚಿಸಲೂ ಹೋಗ ಕೂಡದು. ಬದಲಿಗೆ ನಾವಿದಕ್ಕೆ ಏನು ಕೊಡುತ್ತಿದ್ದೇವೆ? ಎನ್ನುವುದನ್ನಷ್ಟೇ ಪ್ರಶ್ನಿಸಿಕೊಳ್ಳಬೇಕು. ಇಂದು ಅದೆಷ್ಟೋ ವೀರ ಸೈನಿಕರು ನಮ್ಮ ಸ್ವಾತಂತ್ರ್ಯದ ಉಳಿವಿಗಾಗಿ ಹೋರಾಡುತ್ತಿದ್ದಾರೆ... ವೀರಮರಣವನ್ನಪ್ಪುತ್ತಿದ್ದಾರೆ. ಅವರ ತ್ಯಾಗದ ಮುಂದೆ ಎಲ್ಲವೂ ಗೌಣ. ನಮ್ಮ ಪ್ರಾಣಕ್ಕಾಗಿ ತಮ್ಮ ಪ್ರಾಣ ಒತ್ತೆಯಿಟ್ಟಿರುವ ಎಲ್ಲಾ ವೀರಾ ಯೋಧರಿಗೂ ಶತ ಪ್ರಣಾಮ. ಇಂದು ಮತ್ತೆ ದೇಶ ಭಯೋತ್ಪಾದಕರ ಅತ್ಯಾಚಾರದಿಂದ ನಲುಗುತ್ತಿದೆ... ಇಬ್ಭಾಗವಾದ ಭಾಗವೇ ರಣಹದ್ದಾಗಿ ಇಂಚಿಂಚು ಇರಿದು ಕೊಲ್ಲ ಬರುತ್ತಿದೆ... ಇದನ್ನು ಹತ್ತಿಕ್ಕಲು ಇನ್ನೆಷ್ಟು ಬಲಿದಾನಗಳು ಆಗಬೇಕಿದೆಯೋ...??!!! ಮನಸ್ಸು ಪದೇ ಪದೇ ದಿನಕರ ದೇಸಾಯಿಯವರ ಈ ಕವಿತೆಯನ್ನೇ ನೆನಪಿಸಿಕೊಳ್ಳುತ್ತಿರುತ್ತದೆ.

"ಕರಿಯ ಕಲ್ಲುಗಳು ಕೂಡ ಕೂಡಿದವು ಗುಡಿಯ ಕಳಸಕಾಗಿ!
ನರನ ಹೃದಯಗಳು ಒಂದುಗೂಡವೇ ಮಾತೃಭೂಮಿಗಾಗಿ?"

ಜೈ ಹಿಂದ್. ಜೈ ಭಾರತ.

ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.


-ತೇಜಸ್ವಿನಿ.

9 ಕಾಮೆಂಟ್‌ಗಳು:

ರಾಮಚಂದ್ರ ಹೆಗಡೆ ಹೇಳಿದರು...

ನಿಮ್ಮ ಅಜ್ಜ ಅಜ್ಜಿ ಸ್ವಾತಂತ್ರ್ಯ ಯೋಧರಾಗಿದ್ದರು ಅಂತ ತಿಳಿದು ತುಂಬಾ ಸಂತೋಷವಾಯಿತು. ಅದರಲ್ಲೂ ಕ್ರಾಂತಿಕಾರಿಗಳಾಗಿದ್ದರು ಅಂತ ತಿಳಿದು ಮತ್ತಷ್ಟು ಸಂತೋಷ. ನೀವು ಅಂತ ದೇಶಭಕ್ತ ಕ್ರಾಂತಿಕಾರಿ ಸ್ವಾತಂತ್ಯ ವೀರರ ಮೊಮ್ಮಗಳಾದದ್ದು ಹೆಮ್ಮೆಯ ವಿಚಾರ. ದೇಶ ಕಟ್ಟಿದ ಇಂತಹ ಅಜ್ಞಾತ ಹೋರಾಟಗಾರರಿಗೆ ಶತ ಶತ ಪ್ರಣಾಮ.

sunaath ಹೇಳಿದರು...

ಈ ಸ್ವಾತಂತ್ರ್ಯದಿನದಂದು ನಿಮ್ಮ ಅಜ್ಜ,ಅಜ್ಜಿಯರಿಗೆ ನನ್ನ ಶತಶತ ಪ್ರಣಾಮಗಳು. ಅವರು ರಚಿಸಿದ ಲಾವಣಿ ಓದಿ ರೋಮಾಂಚನವಾಯಿತು. ಅವರ ಮೊಮ್ಮಗಳಾದ ನೀವು ಧನ್ಯರು!

ಶ್ರೀವತ್ಸ ಜೋಶಿ ಹೇಳಿದರು...

ವೀರ ಅಜ್ಜನಿಗೆ ಧೀರೆ ಮೊಮ್ಮಗಳಿಂದ ಭಾವಪೂರ್ಣ ಮತ್ತು ಅರ್ಥಪೂರ್ಣ ಶ್ರದ್ಧಾಂಜಲಿ. ಓದಿ ಹೆಮ್ಮೆಯೆನಿಸಿತು. ನನಗೆ ಗೊತ್ತಿರುವ ಒಂದು ಲಾವಣಿ ಹಾಡನ್ನು ಇವತ್ತು ಫೇಸ್‌ಬುಕ್ ಗೋಡೆಗೆ ಅಂಟಿಸಿದ್ದೇನೆ. :-)

Sudarshan Bhat ಹೇಳಿದರು...

nange sumar vishya gottittille ajjana bagge... feeling proud to be his grandson :)

ರಾಜೇಶ್ ನಾಯ್ಕ ಹೇಳಿದರು...

ಉತ್ತಮ ಲೇಖನ. ಈ ಹಿರಿಯರ ಬಗ್ಗೆ ಓದಿ ಕಣ್ಣು ಒದ್ದೆಯಾದವು. ಈ ಲೇಖನಕ್ಕಾಗಿ ಧನ್ಯವಾದ.

ದಿನಕರ ಮೊಗೇರ ಹೇಳಿದರು...

nimma taatanavarige nanna shata shata praNaama...

nivu bareda reetiyu nanage spoorthi tumbitu...
thank you for sharing this...

Subrahmanya ಹೇಳಿದರು...

ಅಂದಿನ ಕಾಲಕ್ಕೆ ಅವರು ರಚಿಸಿದ್ದ ಲಾವಣಿಯನ್ನು ಓದಿ ವಿಸ್ಮಿತನಾದೆ. ಸಕಾಲಿಕ ಬರಹ.

Unknown ಹೇಳಿದರು...

ನೀವು ನಿಮ್ಮ ತಾತನ ಬಗ್ಗೆ ಬರೆದುದು ನನ್ನ ಅಜ್ಜನನ್ನು ನೆನಪಿಸುವಂತೆ ಮಾಡಿತು.ಸ್ವಾತಂತ್ರ್ಯ ಯೋಧರಾದ ನಿಮ್ಮ ತಾತನ ಬಗ್ಗೆ ಓದಿ ಹೆಮ್ಮೆಯಾಯಿತು.

ಮೌನರಾಗ ಹೇಳಿದರು...

ಓದುವಾಗಲೇ ಎಂತಹ ಪುಳಕ..
ಇನ್ನು ಸ್ವತಃ ಅಜ್ಜನ ಬಾಯಿಂದ ಹೋರಾಟದ ದಿನಗಳನ್ನು ಕೇಳಿ ತಿಳಿದುಕೊಂಡಿದ್ದಿರಿ ಇನ್ನು ನಿಮಗೆಷ್ಟು ಸಂತಸವಾಗಿರಬೇಕೆಂದು ಊಹಿಸಬಲ್ಲೆ...

ನಮ್ಮಜ್ಜನಿಗೆ ಹದಿಹರೆಯವಿದ್ದಾಗ ಭಾರತ ಸ್ವಾತಂತ್ರ್ಯವಾಗಿದ್ದು..
ಅವರ ಸ್ಕೂಲಿನ ದಿನಗಳ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಕೇಳಿದ್ದು ಅಲ್ಪ ಸ್ವಲ್ಪ ನೆನಪಿತ್ತು.. ಈಗ ಕೇಳೋಣವೆಂದರೆ ಅವರಿಲ್ಲಾ.. :(

ಇರಲಿ..
ನಿಮ್ಮ ಅಜ್ಜ ಮತ್ತು ಅಜ್ಜಿಗೆ ಶರಣು..
ದೇಶಭಕ್ತಿ ತುಂಬಿದ ಲೇಖನ ಉಣಬಡಿಸಿದ ಮೊಮ್ಮಗಳಿಗೂ ಸಹ..