ಮಂಗಳವಾರ, ಮಾರ್ಚ್ 2, 2010

ಸತ್ಯಾಪಸತ್ಯಗಳ ನಡುವಿನ ಹೋರಾಟಕ್ಕೆ "ರಣ್" ಭೂಮಿಯಾಗುತ್ತಿರುವ "ಮಾಧ್ಯಮ"

"ಮೀಡಿಯಾ ಕಿಸೀಕಿ ನಹಿ ಹೋತಿ.. ನ ಪಕ್ಷ ಕೀ ನ ವಿಪಕ್ಷ ಕೀ.." (ಮೀಡಿಯಾ ಯಾರದ್ದೂ ಅಲ್ಲ. ಪಕ್ಷದ್ದೂ ಅಲ್ಲ ವಿಪಕ್ಷದ್ದೂ ಅಲ್ಲ..)- ಎಂದು ಕಡಲ ಗಂಭೀರ ಧ್ವನಿಯಲ್ಲಿ, ಕಣ್ಣಲ್ಲೇ ಎದುರಾಳಿಯನ್ನು ಇರಿಯುತ್ತಾ, ಸುನಾಮಿಯ ಶಾಂತತೆಯನ್ನು ಪ್ರದರ್ಶಿಸುತ್ತಾ, ಗ್ರೇಟ್ ಅಮಿತಾಬ್ ಬಚ್ಚನ್ ಹೇಳುವ ಈ ಒಂದು ಡಯಲಾಗ್ ಸಾಕು ಇಡೀ ರಣ್ ಚಿತ್ರದ ಜೀವಾಳವನ್ನು ನಮಗೆ ಕಾಣಿಸಲು. ಆದರೆ ಈಗ ಮಾತ್ರ ಮಾಧ್ಯಮ ಎರಡು ಬಣಗಳಲ್ಲಿ ವಿಂಗಡಿಸಿ ಹೋಗಿರುವುದು ಮಾಧ್ಯಮದೊಳಗಿನ ಸುಳ್ಳಿನಷ್ಟೇ ಸತ್ಯ! ಒಂದು ಮಾಧ್ಯಮ ಆಡಳಿತ ಪಕ್ಷದಲ್ಲಿದ್ದರೆ, ಇನ್ನೊಂದು ವಿಪಕ್ಷದಲ್ಲಿ... ಮಗದೊಂದು ಯಾರು ಹಿತವರು ಈ ಮೂವರೊಳಗೆ ಎನ್ನುವ ಮೀನಾಮೇಶದಲ್ಲಿ. ಆದರೆ ಯಾರಿಗೂ ಜನಸಾಮಾನ್ಯರು ಬೇಕಾಗಿಲ್ಲ. ಅವರೇನಿದ್ದರೂ ಬಕರಾ‍ಗಳಂತೇ ತಾವು ಕಾಣಿಸುವ ಸಿಹಿಸುಳ್ಳುಗಳ ಆಮಿಶಕ್ಕೆ ಒಳಗಾಗಿ ತಮ್ಮ ತಮ್ಮ ಟಿ.ಆರ್.ಪಿ. ಏರಿಸಿಕೊಳ್ಳಲು ಮಾತ್ರ ಬೇಕು! ಇದು ಇಂದಿನ ಮಾಧ್ಯಮ ಜಗತ್ತಿನ ಕರಾಳ ಕಟು ಸತ್ಯ. ಸುಳ್ಳೇ ತುಂಬಿ ನಾರುತ್ತಿರುವ ಇಂದಿನ ಮಾಧ್ಯಮ ಜಗತ್ತಿನ ಹುಳುಕು ಎಲ್ಲರಿಗೂ ತಿಳಿದದ್ದೇ. ಆದರೆ ಹತ್ತರಲ್ಲಿ ಹನ್ನೊಂದು ಎನ್ನುವಂತೆ, ಭ್ರಷ್ಟಾಚಾರ, ಅನ್ಯಾಯ, ಮೋಸ, ವಂಚನೆ ಎಲ್ಲವನ್ನೂ ಹೇಗೆ ನಾವು ಸುಮ್ಮನೇ ಒಪ್ಪಿಕೊಂಡು, ವ್ಯವಸ್ಥೆಯೊಳಗಿನ ಅವ್ಯವಸ್ಥೆಯನ್ನು ನೋಡಿಯೂ ನೋಡದಂತಿರುವುದನ್ನು ಹೇಗೆ ರೂಢಿಸಿಕೊಂಡೆವೋ, ಹಾಗೇ ಮೀಡಿಯಾದೊಳಗಿನ ಅವ್ಯವಹಾರಗಳನ್ನೂ, ಸುದ್ದಿ ಹಾದರಗಳನ್ನೂ ಒಪ್ಪಿಕೊಂಡೆವು. ಬರೀ ಒಪ್ಪಿಕೊಂಡಿದ್ದು ಮಾತ್ರವಲ್ಲ, ಅದೇ ಸತ್ಯ ಎಂದು ನಂಬಿಕೊಂಡೆವು. ಹಾಗಾಗಿ ಇದರೊಳಗಿನ ಸುಳ್ಳು, ಅನಾಚಾರಗಳೂ ಈಗ ಸಾಮಾನ್ಯ ಮನುಷ್ಯನಿಗೆ "Common" ಆಗಿ ಹೋಗಿವೆ ಬಿಡಿ. ಸತ್ಯ ಗೊತ್ತಿರುವುದು ಬೇರೆ, ಅದನ್ನೇ ಎಳೆ ಎಳೆಯಾಗಿ ಬಿಡಿಸಿ, ಪರಿಣಾಮಕಾರಿಯಾಗಿ ನಮ್ಮ ಮುಂದಿಡುವುದು ಬೇರೆ. ಕೇಳಿದ್ದಕ್ಕಿಂತ ಕಂಡಿದ್ದರ ಪರಿಣಾಮ ಜಾಸ್ತಿ. ಈ ಕೆಲಸವನ್ನು ರಾಮ್‌ಗೋಪಾಲ್ ವರ್ಮಾರ "ರಣ್" ಚಿತ್ರ ಯಶಸ್ವಿಯಾಗಿ ಮಾಡಿದೆ. ಇದು ನಾ ನೋಡಿದ ಉತ್ತಮ ಚಿತ್ರಗಳಲ್ಲೊಂದು ಎನ್ನಲು ಯಾವುದೇ ಸಂಶಯವಿಲ್ಲ.

ಇಂದಿನ ಮಾಧ್ಯಮ ಜಗತ್ತಿಗೆ ಕೇವಲ ಸತ್ಯ ಬೇಕಿಲ್ಲ. ಉಪ್ಪು, ಖಾರ, ಹುಳಿ, ಮಸಾಲೆಗಳಲ್ಲಿದ ಸರಳ ಸತ್ಯವನ್ನು ಕಾಣುವುದಾಗಲೀ, ಕೇಳುವುದಾಗಲೀ, ನೋಡುವುದಾಗಲೀ ಬೇಕಿಲ್ಲ. ಇದೇ (ಅ)ವ್ಯವಸ್ಥೆಗೆ ಹೊಂದಿಕೊಂಡಿರುವ ಸಾಮಾನ್ಯ ಜನರಿಗೂ ಕೇವಲ ನಿಜವನ್ನು ಮಾತ್ರ ನೋಡುವುದೂ ಪಥ್ಯವಾಗುತ್ತಿಲ್ಲ. ಕಾರಣ ಸುಳ್ಳಿಗಿರುವುಷ್ಟು ವಿಕಾರಗಳು, ಬಣ್ಣಗಳು ಸತ್ಯಕ್ಕಿರುವುದಿಲ್ಲ. ಅದಕ್ಕೆ ಬೇಕಾದಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ದಿನಬೆಳಗಾದರೆ ಕಾಣುತ್ತವೆ. ಯಾರೋ ಓರ್ವ, ಒಂದು ಚಾನೆಲ್, ಒಂದು ಪೇಪರ್ ಶುರು ಮಾಡಿಕೊಂಡ ಈ ಹುಚ್ಚಾಟವನ್ನು ಕ್ರಮೇಣ ಎಲ್ಲರೂ ಅನುಸರಿಸಿ, ಅದನ್ನೇ ನಮಗೂ ಉಣಬಡಿಸಿ, ನಮ್ಮ ಆರೋಗ್ಯಕರ ಸ್ವಾದವನ್ನೇ ಕೆಡಿಸಿಬಿಟ್ಟಿವೆ ಇಂದು. ಇದಕ್ಕೆ ಎಲ್ಲರೀತಿಯಲ್ಲೂ ಎಲ್ಲರ ಕೊಡುಗೆಯೂ ಇದೆ. ಓದುಗರ, ಪತ್ರಕರ್ತರ, ಪ್ರಾಯೋಜಕರ, ಮುಖ್ಯಸ್ಥರ, ಮಂತ್ರಿಗಳ - ಹೀಗೇ ಎಲ್ಲರೂ ವ್ಯವಸ್ಥಿತವಾಗಿ ಈ ಸಂಚಿನಲ್ಲಿ ಭಾಗಿಯಾಗುತ್ತಾರೆ. ಆದರೆ ಕೊನೆಯಲ್ಲಿ ಸತ್ಯ ಮಾತ್ರ ನರಳುತ್ತದೆ...ಸಾಯುತ್ತದೆ. ಸುಳ್ಳು, ಭ್ರಮೆ, ಅಲ್ಪ ಕಾಲದ ರೋಮಾಂಚನಗಳು ಮಾತ್ರ ವಿಜೃಂಭಿಸುತ್ತವೆ.
ಇದ್ದ ಸುದ್ದಿಯನ್ನು ಇದ್ದಹಾಗೇ ಹೇಳಿದರೆ ಅದು ಕೇವಲ ಸುದ್ದಿಯಾಗಿ ಸತ್ತು ಹೋಗುತ್ತದೆಯಂತೆ. ಆದರೆ ಅದೇ ಸುದ್ದಿಗೆ ಇಲ್ಲದ ಮಸಾಲೆ ಹಾಕಿ ಕಣ್ಮುಂದೆ ತಂದರೆ ಅದು ಕೆಲ ಕಾಲ ಜೀವಂತವಾಗಿರುತ್ತದೆಯಂತೆ...ಇದು ಕೆಲವು ಪ್ರಮುಖ ಮಾಧ್ಯಮ ದಿಗ್ಗಜರ ಅಂಬೋಣ! ಜನರ ದಡ್ಡತನ, ಮುಗ್ಧತೆ, ಅಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಸುದ್ದಿಯನ್ನೂ ಅದರೊಳಗಿನ ಸತ್ಯವನ್ನೂ ಮಾರುತ್ತಿವೆ ಮಾಧ್ಯಮಗಳು. ಸತ್ಯದ ಮೇಲೆ ಸುಳ್ಳಿನ ತಲೆಹಾಕಿ ಅದನ್ನೇ ನಮ್ಮ ಮುಂದಿಡುತ್ತವೆ. ಅದನ್ನೇ ಮತ್ತೆ ಮತ್ತೆ ಬೇರೆ ಬೇರೆ ರೀತಿಯಲ್ಲಿ ಕಾಣಿಸಿ, ನಾವು ನಂಬುವಂತೆ ಮಾಡುತ್ತವೆ. ಟಿ.ಆರ್.ಪಿ ಮುಂದೆ ಮನುಷ್ಯತ್ವವನ್ನೇ ಮರೆಯುತ್ತವೆ! ರಾಜಕೀಯ ಹಾಗೂ ಸಾಮಾನ್ಯರ ನಡುವೆ ಸುದೃಢ ಸೇತುವೆಯಂತೆ ಕೆಲಸ ನಿರ್ಮಿಸಬೇಕಿದ್ದ, ಜನಸಾಮಾನ್ಯರಿಗಾಗುವ ಅನ್ಯಾಯ, ಅತ್ಯಾಚರಕ್ಕೆ ಸ್ಪಂದಿಸಿ ಅವರ ಧ್ವನಿಯಾಗಬೇಕಿದ್ದ, ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಬೇಕಿದ್ದ ಮಾಧ್ಯಮ ಇಂದು ರಾಜಕೀಯ ಪುಢಾರಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗುವ ಹುನ್ನಾರದಲ್ಲಿದೆ ಎಂದು ನನಗನಿಸುತ್ತಿದೆ.
ಉದಾಹರಣೆಗೆ : ಇತ್ತೀಚಿಗೆ ದಾರಿ ಮಧ್ಯದಲ್ಲಿ ರೌಡಿಯೊಬ್ಬನಿಂದ ಹಲ್ಲೆಗೊಳಗಾಗಿ ಜೀವನ್ಮರಣದ ಹೋರಾಟದಲ್ಲಿದ್ದ ಪೋಲಿಸ್ ಆಫೀಸರ್ ಓರ್ವರ ನರಳಾಟವನ್ನು "LIVE" ಆಗಿ ಟೆಲಿಕಾಸ್ಟ್ ಮಾಡಿದ್ದ ಚಾನೆಲ್ ಒಂದು ಅವರನ್ನು ಆಸ್ಪತ್ರೆಗೆ ಮೊದಲು ಸೇರಿಸಿದ್ದರೆ ಇಂದು ಆ ಆಫೀಸರ್ "LIFE" ಉಳಿದಿರುತ್ತಿತ್ತೇನೋ..! ತನ್ನ ರಕ್ಷಣೆಗಾಗಿ ಮುಂದೆ ಸಾಗುತ್ತಿದ್ದ ಆ ಪೋಲೀಸ್ ಆಫಿಸರ್ ಕೆಳಗೆ ಬಿದ್ದು ಒದ್ದಾಡುತ್ತಿದ್ದರೂ ದಾಟಿ ಹೋದ ರಾಜಕಾರಣಿಗಿಂತ, ಅದನ್ನೇ ಮತ್ತೆ ಮತ್ತೆ ನಮ್ಮ ಮುಂದೆ ಕಾಣಿಸಿದ ಆ ಚಾನಲ್ ಹೆಚ್ಚು ಕ್ರೂರ ಎನಿಸಿತು ನನಗೆ. ಬೇಡ ಇತ್ತೀಚಿಗೆ ನಡೆದ ಕಾರ್ಟನ್ ಟವರ್ ಅಗ್ನಿ ದುರಂತವನ್ನೇ ನೋಡೋಣ. ಚಾನಲ್ ಒಂದು ಮಹಿಳೆಯೊಬ್ಬಳು ೭ನೇ ಮಹಡಿಯಿಂದ ಪ್ರಾಣ ಕಾಪಾಡಿಕೊಳ್ಳಲು ೬ನೆಯ ಮಹಡಿಗೆ ಜಿಗಿಯಲು ಹೋಗಿ ಆಯತಪ್ಪಿ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡದ್ದನ್ನು ಪ್ರತೀ ೨ ನಿಮಿಷಕ್ಕೊಮ್ಮೆ ಪ್ರಸಾರ ಮಾಡಿತ್ತು. ಮನೆಯೊಳಗೆ ವೀಕ್ಷಿಸುತ್ತಿದ್ದ ಆ ಮಹಿಳೆಯ ಮನೆಯವರಿಗೆ, ಮಕ್ಕಳಿಗೆ ಏನನಿಸಬಹುದು ಎನ್ನುವ ಸಾಮಾನ್ಯ ತಿಳಿವಳಿಕೆ ಹೋಗಲಿ, ಮನುಷ್ಯತ್ವವೂ ಇಲ್ಲದಂತೇ, ನಿರ್ಭಾವುಕನಾಗಿ, ವಿಕಾರವಾದ ದೊಡ್ಡ ಧ್ವನಿಯಲ್ಲಿ ಮತ್ತೆ ಮತ್ತೆ ಬೊಬ್ಬಿರಿಯುತ್ತಿದ್ದ ಆ ರಿಪೋರ್ಟರ್ "ಇದನ್ನು ಕಾಣಿಸುತ್ತಿರುವುದು ನಾವೇ ಮೊದಲು... ಯಾರೋ ಒಬ್ಬರು ತಮ್ಮ ಮೊಬೈಲ್ ಕ್ಯಾಮರಾದಿಂದ ವಿಡೀಯೋ ಮಾಡಿ ಕಳುಹಿಸಿದ್ದಾರೆ..." ಎಂದೆಲ್ಲಾ ವದರುತ್ತಿರುವುದನ್ನು ನೋಡಿ ನಿಜಕ್ಕೂ ಮನುಷ್ಯನಲ್ಲ ಎಂದೆನಿಸಿತು. ಅಂತಹ ಒಂದು ದುರಂತದಲ್ಲೂ ಮಹಿಳೆ ಮೇಲಿನಿಂದ ಬೀಳುವಾಗ ರಕ್ಷಿಸಲು ಧಾವಿಸುವುದನ್ನು ಬಿಟ್ಟು ಮೊಬೈಲ್ ಕ್ಯಾಮಾರದಿಂದ ಶೂಟ್ ಮಾಡಿ ಇವರಿಗೆ ಕಳುಹಿಸಿ ಪುಣ್ಯ ಕಟ್ಟಿಕೊಂಡ ಆ ಮಹಾನುಭಾವರ ಇಂಟರ್‌ವ್ಯೂ ಕೂಡ ಮಾಡಲು ಅದೇ ಚಾನಲ್‌ನವರು ಟೈಮ್ ಸೆಟ್ ಮಾಡಿದ್ದರು! ನಾನು ಪದೇ ಪದೇ ಆ ಅಮಾನುಷ ದೃಶ್ಯವನ್ನು ಅದೇ ಚಾನಲ್‌ನಲ್ಲಿ ನೋಡಿ ಅವರ ಟಿ.ಆರ್.ಪಿ ಹೆಚ್ಚಳಕ್ಕೆ ಕಾರಣಳಾಗಿ, ಆ ಮೂಲಕ ಆ ಪಾಪದಲ್ಲಿ ನಾನೂ ಭಾಗೀಧಾರಳಾಗದಿರಲು ನಿರ್ಧರಿಸಿ, ಚಾನಲ್ ಬದಲಾಯಿಸಿಬಿಟ್ಟೆ. ಓರ್ವ ವೀಕ್ಷಕನನ್ನು ಅವರ ಟಿ.ಆರ್.ಪಿ ಇಂದ ಕಡಿಮೆಮಾಡಿದ ಅಲ್ಪ ಸಮಾಧಾನ ನನ್ನದಾಯಿತು ಅಷ್ಟೇ.

ಇಂದು ಒಂದು ಪತ್ರಿಕೆಯಲ್ಲಿ ಓರ್ವ ಪ್ರಸಿದ್ಧ ನಟನನ್ನೋ, ಇಲ್ಲಾ ಒಂದು ಪಕ್ಷದ ರಾಜಕಾರಣಿಯನ್ನೋ ಚೆನ್ನಾಗಿ ಬೈದು ಬರೆದರೆ, ಮರುದಿನ ಇನ್ನೊಂದು ಪತ್ರಿಕೆಯಲ್ಲಿ ಅದೇ ನಟ ಹಾಗೂ ರಾಜಕಾರಣಿಯನ್ನು ಹೊಗಳಿಯೋ ಇಲ್ಲಾ ಬೈದ ಪತ್ರಿಕೆಗೆ ಸರಿಯಾದ ರೀತಿಯಲ್ಲಿ ಪ್ರತ್ಯುತ್ತರ ಕೊಡುವ ರೀತಿಯಲ್ಲೋ ಅವರ ಹೇಳಿಕೆ ಪ್ರಕಟವಾಗಿರುತ್ತದೆ. ಎರಡೂ ಪತ್ರಿಕೆಗಳು ತಮ್ಮ ತಮ್ಮ ಬೇಳೆ ಬೇಯಿಸಿಕೊಂಡಿರುತ್ತವೆ ಎನ್ನುವುದು ಮಾತ್ರ ಸತ್ಯ. ಉಳಿದದ್ದೆಲ್ಲಾ ಓದಿಗ ಮಹಾಶಯರಿಗೇ ಬಿಟ್ಟಿದ್ದು. ಜನಸಾಮಾನ್ಯರ ಪ್ರತಿನಿಧಿಯಾಗಬೇಕಾಗಿದ್ದ ಮಾಧ್ಯಮ ಅವರನ್ನಾಳುವ ಪಕ್ಷ, ವಿಪಕ್ಷಗಳ ಕೈಗೊಂಬೆಯಾಗಿರುವುದು ತುಂಬಾ ಖೇದಕರ ವಿಷಯ. ನಾನೇನೂ ಮಾಧ್ಯಮದವರೆಲ್ಲಾ ಸುದ್ದಿ ಸೃಷ್ಟಿಸುತ್ತಿರುವವರು ಎಂದು ಆರೋಪ ಮಾಡುತ್ತಿಲ್ಲ. ಆದರೆ ಕಲವೇ ಕೆಲವು ಮಾಧ್ಯಮದವರಿಂದಾಗಿ ಇಂದು ಈ ಕ್ಷೇತ್ರ ನಮ್ಮಿಂದ ಅಂದರೆ ಸಾಮಾನ್ಯ ಜನರಿಂದ ಬಹು ದೂರವಾಗುತ್ತಿದೆ... ಬಹುಪಾಲು ಆಗಿದೆ ಕೂಡ ಎಂದಷ್ಟೇ ಹೇಳುತ್ತಿದ್ದೇನೆ.

"ಇಲ್ಲಿ ಸುದ್ದಿ ಹುಟ್ಟುವುದಿಲ್ಲ.. ಸೃಷ್ಟಿಸಲಾಗುತ್ತದೆ" ಎನ್ನುವ ಆಘಾತಕಾರಿ ಸತ್ಯವನ್ನು ರಣ್‌ನಲ್ಲಿ ವರ್ಮಾ ಬಹು ಚೆನ್ನಾಗಿ ಕಾಣಿಸಿದ್ದಾರೆ. ಸುದ್ದಿ ಮಾಧ್ಯಮದೊಳಗಿನ ಹೊಲಸನ್ನು, ಕುರೂಪತೆಯನ್ನು ತೊಡೆದುಹಾಕಲು, ಆ ವ್ಯವಸ್ಥೆಯೊಳಗಿನ ಅವ್ಯವಹಾರಗಳನ್ನು ಬಯಲಿಗೆಳೆಯಲು ವರ್ಮಾ ಬಳಸಿಕೊಂಡ ಪಾತ್ರಗಳೂ ಅದೇ ಮಾಧ್ಯಮ ಜಗತ್ತಿನೊಳಗಿನ ವ್ಯಕ್ತಿಗಳೇ ಆಗಿದ್ದುದು ಮತ್ತೂ ವಿಶೇಷ. ಯಾವುದೇ ಒಂದು ಕ್ಷೇತ್ರದೊಳಗಿನ ಅವ್ಯವಸ್ಥೆಯನ್ನು, ಅನೀತಿಯನ್ನು ಸರಿಪಡಿಸಲು ಆ ಕ್ಷೇತ್ರದೊಳಗಿನ ಜನರಿಂದಲೂ ಸಾಧ್ಯ, ಅದಕ್ಕಾಗಿ ಬೇರೆಯವರ ಅವಲಂಬನೆ ಬೇಕಾಗಿಲ್ಲ, ಎನ್ನುವ ಉತ್ತಮ ಸಂದೇಶ ನೀಡಿದ್ದಾರೆ. ಅಂತೆಯೇ ಒಂದು ಕ್ಷೇತ್ರದೊಳಗೆ ದುಡಿಯುವ ಎಲ್ಲರೂ ಕೆಟ್ಟವರಲ್ಲ, ನಿಯತ್ತು, ನೈತಿಕತೆ, ಪ್ರಾಮಾಣಿಕತೆ ಹೊಂದಿರುವವರೂ ಇರುತ್ತಾರೆ ಎನ್ನುವುದನ್ನೂ ತೋರಿಸಿದ್ದಾರೆ. ಇನ್ನು ರಣ್ ಚಿತ್ರದ ನಟರ ಹಾಗೂ ಅವರ ನಟನೆಯ ಕುರಿತು ಹೇಳಬೇಕೆಂದರೆ.... ನಮ್ಮಲ್ಲಿ ಅಂದರೆ, ಕನ್ನಡದಲ್ಲಿ ಪ್ರತಿಭೆಗಳಿಲ್ಲ ಎನ್ನುವವರ ಬಾಯಿ ಮುಚ್ಚಿಸುವಂತೆ ನಟಿಸಿದ್ದಾರೆ ಸುದೀಪ್. ಅಮಿನಾಬ್ ಗೆ ಅಮಿತಾಬ್ ಸಾಟಿ ಎನ್ನುವಂತಿದೆ ಬಚ್ಚನ್ ಅವರ ನಟನೆ. ವಿಲಾಸ್ ರಾವ್‌ದೇಶ್‌ಮುಖ್ ಮಗ ಎನ್ನುವ ಐಡೆಂಟಿಟಿಯಿಂದ ಸಂಪೂರ್ಣ ಹೊರಬಂದು ಪರಿಪೂರ್ಣ ನಟನಾಗಿರುವುದಕ್ಕೆ ಸಾಕ್ಷಿ ನೀಡಿದ್ದಾರೆ ರಿತೇಶ್ ದೇಶ್‌ಮುಖ್. "ರಣ್‌ನಲ್ಲಿ" ಎಲ್ಲಾ ನಟರೂ ತಮಗೆ ದಕ್ಕಿದ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಚಿತ್ರದ ಕೊನೆಯಲ್ಲಿ ನಿರ್ದೇಶಕ ವರ್ಮಾ, ಚಿತ್ರದಲ್ಲಿ ನ್ಯೂಸ್‌ಚಾನಲ್ ಒಂದರ ಒಡೆಯನಾಗಿರುವ ವಿಜಯ್ ಹರ್ಷವರ್ಧನ್(ಅಮಿನಾಬ್ ಬಚ್ಚನ್) ಮೂಲಕ ಮಾಧ್ಯಮಕ್ಕೆ ಮಾಧ್ಯಮದವರಿಂದಾಗುತ್ತಿರುವ ಅನ್ಯಾಯವನ್ನು ಎತ್ತಿ ಹಿಡಿದು, ಸುಳ್ಳಿನ ಪರದೆಯೊಳಗೆ ಹುದುಗಿರುವ ಸತ್ಯವನ್ನು ಹೊರತಂದು, ಮಾಧ್ಯಮ ಜಗತ್ತಿಗೆ ನೈತಿಕತೆಯ ಪಾಠವನ್ನು ಹೇಳುವುದರ ಮೂಲಕ ಅರ್ಥವತ್ತಾದ ಅಂತ್ಯವನ್ನೂ ಕೊಟ್ಟಿದ್ದಾರೆ. ನಾನೇನೂ ವರ್ಮಾರ ದೊಡ್ಡ ಅಭಿಮಾನಿಯೂ ಅಲ್ಲ, ಅವರ ಎಲ್ಲಾ ಚಿತ್ರಗಳನ್ನೂ ನೋಡಿಲ್ಲ. ಆದರೆ ರಣ್ ಚಿತ್ರ ಬಹು ಮೆಚ್ಚುಗೆಯಾಯಿತು. ಚಿತ್ರಕಥೆಯೊಳಗಿನ ಆಶಯ ತುಂಬಾ ಚೆನ್ನಾಗಿದೆ. ಕಥೆಗಾರ ಸತ್ಯನೋ ಅಲ್ಲವೋ ಎನ್ನುವುದು ತಿಳಿಯದು. ನಿರ್ದೇಶಕನ ಸಾಚಾತನವನ್ನು ಅಳೆಯುವ ಬದಲು ಅವನ ನಿರ್ದೇಶನದೊಳಗಿನ ಪ್ರಾಮಾಣಿಕತೆಯನ್ನು ಮಾತ್ರ ನೋಡುವುದು ಉತ್ತಮ.

ಕೊನೆ ಕಹಳೆ : ಕಾಖಿ, ಖಾವಿ, ಖಾದಿ - ಈ ಮೂರರಿಂದ ಆದಷ್ಟು ದೂರವಿರಬೇಕೆಂದು ಹೆಚ್ಚಿನವರು ಹೇಳುತ್ತಾರೆ. ಅದು ಬಹುಮಟ್ಟಿಗೆ ನಿಜ ಕೂಡ. ಆದರೆ ಈಗ ಈ ಮೂರರೊಂದಿಗೆ ಮತ್ತೊಂದೂ ಸೇರುವಂತಿದೆ..... ಅದೇ "ಮಾಧ್ಯಮ"!!

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳೆಲ್ಲಾ ವೈಯಕ್ತಿಕವಾದವುಗಳು...)

-ತೇಜಸ್ವಿನಿ ಹೆಗಡೆ.

31 ಕಾಮೆಂಟ್‌ಗಳು:

ಮನಸು ಹೇಳಿದರು...

ಪತ್ರಿಕಾ ವರದಿಗಳು ಈಗ ರಾಜಕೀಯ ಮಟ್ಟಕ್ಕೆ ಇಳಿದುಬಿಟ್ಟಿದೆ ಎಂದೆನಿಸುತ್ತೆ. ಕೊನೆಯ ಕಹಳೆ ನಿಜವೇ ಸರಿ.ಬದಲಾವಣೆಯ ಹಾದಿಯಲ್ಲಿದ್ದೇವೆ ನಾವುಗಳೆಲ್ಲ ಆದರೆ ಬದಲಾವಣೆ ಎಂಬುದು ಒಳ್ಳೆಯ ಹಾದಿಯಲ್ಲಿ ನೆಡೆಸಿದರೆ ಸರಿ ಇಲ್ಲವಾದರೆ ಕೋಲಾಹಲ ಸೃಷ್ಟಿಯಾಗುತ್ತದೆ.
ಒಳ್ಳೆಯ ವಿಚಾರವನ್ನು ನಮ್ಮ ಮುಂದಿಟ್ಟಿದ್ದೀರಿ, ಧನ್ಯವಾದಗಳು

sunaath ಹೇಳಿದರು...

ನಮ್ಮ ಸಮಾಜದ ಜೀವನಾಡಿಯಾಗಬೇಕಾಗಿದ್ದ ನಮ್ಮ ಪತ್ರಿಕೆಗಳು
ಸಮಾಜವನ್ನು ಅಂದಗೆಡಿಸುತ್ತಿವೆ ಎನ್ನುವದು ಸರಿಯಾದ ಮಾತು. ನಿಮ್ಮ ವಿಶ್ಲೇಷಣೆ ಮೆಚ್ಚುವಂತಹದು.

ಚಿತ್ರಾ ಹೇಳಿದರು...

ತೇಜೂ,
ಈ ಸಿನೆಮಾ ನಾನು ನೋಡಿಲ್ಲ ಆದ್ರೆ ಅದರ ಬಗ್ಗೆ ಬಹುವಾಗಿ ಕೇಳಿದ್ದೇನೆ. ನಿಜ , ಇಂದು ಮಾಧ್ಯಮಗಳು ಕೇವಲ ತಮ್ಮ ಜನಪ್ರಿಯತೆಗಾಗಿ ಏನೆಲ್ಲಾ ಸರ್ಕಸ್ ಮಾಡುತ್ತಾರೆಂದು ನೋಡಿದಾಗ ಅವುಗಳ ಬಗ್ಗೆ ಇರುವ ಗೌರವ ಹೊರಟೇ ಹೋಗುತ್ತದೆ . ನೀನು ಹೇಳಿದ ಕೆಲ ಸಂದರ್ಭಗಳಂತೂ ಅಮಾನವೀಯತೆಯ ಪರಾಕಾಷ್ಟೆಗೆ ಕನ್ನಡಿ ಹಿಡಿದಂತಿವೆ. ಪೋಲೀಸ್ ಅಧಿಕಾರಿಯ ವಿಡಿಯೋವನ್ನು ನಾನೂ ನೋಡಿದ್ದೆ . ಆಕ್ಷಣಕ್ಕೆ ಆ ವರದಿಗಾರನ ಕುತ್ತಿಗೆಯನ್ನೇ ಒತ್ತಿ ಅವನ ಮುಖಕ್ಕೆ ಕ್ಯಾಮೆರಾ ಹಿಡಿದು ಅದನ್ನು 'ನೇರ ಪ್ರಸಾರ ' ಮಾಡಿದರೆ ಹೇಗೆ ಎಂಬಷ್ಟು ಸಿಟ್ಟು ಬಂದಿತ್ತು . ಒದ್ದಾಡುತ್ತಿರುವ ಅಧಿಕಾರಿಯ ವಿಡಿಯೋ ಮಾಡುವ ಬದಲು ಆಸ್ಪತ್ರೆಗೆ ಸೇರಿಸುವುದಿರಲಿ , ಆತನ ಮೇಲೆ ಹಲ್ಲೆ ನಡೆಸಿದವರ ಫೋಟೋ ತೆಗೆದಿದ್ದರೂ ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತಿತ್ತೇನೋ !
ಮೀಡಿಯಾ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳುವ ಕಾಲ ಯಾವಾಗ ಬರುವುದೋ ! ಎಲ್ಲಿಯವರೆಗೆ ನಾವುಗಳು ಮೂರ್ಖರಾಗಿರುತ್ತೆವೋ ಇವು ನಮ್ಮನ್ನು ಇನ್ನಷ್ಟು ಮೂರ್ಖರಾಗಿಸುವಲ್ಲಿ ಪೈಪೋಟಿ ನಡೆಸುತ್ತವೆ !

ಸೀತಾರಾಮ. ಕೆ. / SITARAM.K ಹೇಳಿದರು...

ಸಮಾಜದ ನಾಲ್ಕನೇ ಕಣ್ಣು-ಆಯಾಮ ಇತ್ಯಾದಿ ಇತ್ಯಾದಿ ಎ೦ದು ಕರೆದುಕೊಳ್ಳುವ ಸುಧ್ಧಿ ಮಾಧ್ಯಮಗಳು, ರಾಜಕೀಯದವರ ಮುಖವಾಣಿಯಾಗಿಯೋ ಅಥವಾ ದುಡ್ಡು ಮಾಡುವ ಹಮ್ಮಿನಲ್ಲೋ ಅಥವಾ ಪ್ರಾಯೋಜಕರ ಲಾಭಕ್ಕಾಗಿಯೋ, ಸುಧ್ಧಿಗಳನ್ನು ಸೃಷ್ಟಿ ಮಾಡಿ ಅಥವಾ ಜನರ ಕುತೂಹಲಕ್ಕಾಗಿ ಸುಧ್ಧಿಗಳಿಗೆ ಮಸಾಲೇ ಬೆರೆಸಿ, ಸಮಾಜ ಸ್ವಾಸ್ಥ್ಯ ಬೆಳೆಸೋ ಮತ್ತು ಉಳಿಸೋ ತಮ್ಮ ತತ್ವಗಳಿ೦ದ ದೂರವಾಗಿದ್ದು ನಮ್ಮ ವ್ಯವಸ್ಥೆಯ ಚೋದ್ಯವೇ!!
"ರಣ್" ಚಿತ್ರ ರಾಮಗೋಪಾಲ ವರ್ಮಾ ಮು೦ಬೈ ಧಾಳಿಯ ವೇಳೆ ಅವನ ತಾಜ್ ಹೋಟೆಲ್-ನ ಮುಖ್ಯಮ೦ತ್ರಿಯೊ೦ದಿಗಿನ ಪ್ರವೇಶವನ್ನು ಪದೇ ಪದೇ ತೋರಿಸಿ, ರಾಮಗೋಪಲನನ್ನು "ಖಳ"ನನ್ನಾಗಿಸಿ, ತಮ್ಮ ಟಿ-ಆರ್-ಪಿ ಹೆಚ್ಚು ಮಾಡಿಕೊ೦ಡಿದ್ದ ಮಾಧ್ಯಮಗಳ ಮೇಲಿನ ಅಸಮಧಾನದಲ್ಲಿ, ಸೇಡು ತೀರಿಸಿಕೊಳ್ಳಲು ತೆಗೆದ ಚಿತ್ರವಾದರೂ ಅವನು ಹೇಳಿದ್ದರಲ್ಲಿ ಸುಳ್ಳೇನೂ ಇಲ್ಲ. ಚಿತ್ರ ನಮ್ಮ ಮಾಧ್ಯಮದ ಗೋಸು೦ಬೆ ಮುಖವನ್ನ ಬಿಚ್ಚಿಟ್ಟಿದೆ. ಚಿತ್ರದ ಕತ ಬಗ್ಗೆ ಮಾಹಿತಿ ಇದ್ದರೂ ನೋಡಲಾಗಿಲ್ಲ.
ತಮ್ಮ ಮಾಹಿತಿಗೆ ಧನ್ಯವಾದಗಳು.

ಶ್ರೀನಿಧಿ.ಡಿ.ಎಸ್ ಹೇಳಿದರು...

ಒಂದು- ರೌಡಿ ಹಲ್ಲೆಯಾದಾಗ ಯಾವ ಟೀವಿ ಚಾನಲ್ ಕೂಡ ಅದನ್ನು ಲೈವ್ ಆಗಿ ತೋರಿಸಿಲ್ಲ. ಆ ವಿಡೀಯೋ ಮಾಡಿದ ವ್ಯಕ್ತಿ ಒಬ್ಬ ಖಾಸಗಿ ವೀಡಿಯೋಗ್ರಾಫರ್. ನಂತರ ಆತ ಅದನ್ನು ಮಾಧ್ಯಮಗಳಿಗೆ ಕೊಟ್ಟಿದ್ದ. ಘಟನೆ ನಡೆದ ಮಾರನೇ ದಿನವಷ್ಟೇ ಆ ಚಿತ್ರಿಕೆ ಮಾಧ್ಯಮಗಳಲ್ಲಿ ಪ್ರಸಾರವಾಯಿತು.
ಆತ ಸಾಯುತ್ತಿದ್ದುದನ್ನು ಅಲ್ಲಿದ್ದ ರಾಜಕಾರಣಿ ಮಹಾಶಯರೊಬ್ಬರು ನೋಡುತ್ತ ನಿಂತಿದ್ದರು.ಅವರ ಎರಡು-ಮೂರು ಎಸ್ಕಾರ್ಟ್ ವಾಹನಗಳೂ ಅಲ್ಲಿದ್ದವು.

ಎರಡು- ಟಿಆರ್ ಪಿ ಕುಚ್ ಅಲಗ್ ಸಾ ಮಾಮ್ಲಾ ಹೈ.. ನಿಮ್ ಮನೆ ಟಿವಿಗೆ ಟಿಆರ್ ಪಿ ವ್ಯವಸ್ಥೆಯ ತಂತ್ರಜ್ಞಾನ ಸೇರಿಕೊಂಡಿರದೇ ಇರಬಹುದು.

ಅಂದ ಹಾಗೆ, ರಣ್ ಚಿತ್ರ ಚೆನ್ನಾಗಿದೆ.

ಶ್ರೀನಿಧಿ.ಡಿ.ಎಸ್ ಹೇಳಿದರು...

ಒಂದು-

ರೌಡಿಯಿಂದ ಹಲ್ಲೆಗೊಳಗಾಗಿ ಪೋಲಿಸ್ ಸತ್ತ ಘಟನೆಯನ್ನು ಯಾವ ಚಾನಲ್ ಕೂಡ ಲೈವ್ ಆಗಿ ತೋರಿಸಲಿಲ್ಲ.ಘಟನೆ ನಡೆದ ಮಾರನೇ ದಿನವಷ್ಟೇ ಆ ವೀಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಆ ಘಟನೆಯನ್ನು ದಾರಿಯಲ್ಲಿ ಸಾಗುತ್ತಿದ್ದ ಯಾರೋ ವೀಡಿಯೋಗ್ರಾಫರ್ ಚಿತ್ರೀಕರಿಸಿಕೊಂಡಿದ್ದ.ನಂತರ ಅದನ್ನೇ ಚಾನಲ್ ಗಳಿಗೆ ನೀಡಿದ್ದ.ಅಷ್ಟಕ್ಕೂ ಮಾಧ್ಯಮಗಳು ಅಲ್ಲಿನ ರಾಜಕಾರಣಿಯ ನಿಷ್ಕಾರುಣ್ಯದ ಬಗ್ಗೆ ಮಾತನಾಡಿದ್ದವು- ಪೋಲಿಸರ ಬಗ್ಗೆ ಕಳಕಳಿ ತೋರಿಸಿದ್ದವು.


ಎರಡು-ಟಿಆರ್ ಪಿ ಬೇರೆಯೇ ತರಹದ ವಿಚಾರ. ನಿಮ್ ಮನೆ ಟಿವಿ, ಟಿಆರ್ ಪಿ ವ್ಯವಸ್ಥೆಗೆ ಕನೆಕ್ಟೆಡ್ ಆಗಿರದೇ ಇರಬಹುದು.

ಮೂರು- ರಣ್ ಚೆನ್ನಾಗಿದೆ:)

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) ಹೇಳಿದರು...

ತೇಜಸ್ವಿನಿಯವರೆ,
ಮಾದ್ಯಮಗಳು ಮನಸಾಕ್ಷಿಗೆ ಸರಿಯಾಗಿ ನದೆದುಕೊಳ್ಳದೆ ಇರುವುದೇ ಇ೦ದಿನ ದುರ೦ತ.ಚಿತ್ರವೂ ಮುಖವಾಡವನ್ನು ಕಳಚಿದೆ ಅಷ್ಟೆ.
ಸಕಾಲಿಕ ಲೇಖನ.ಅಭಿನ೦ದನೆಗಳು.

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿಯವರೇ,
ಮಾದ್ಯಮಗಳು ಒಳ್ಳೆಯದರ ಬಗೆಗೆ ಗಮನ ಕೊಡುವುದೇ ಇಲ್ಲ,
ಬೆಳಗಿನ ಜಾವ ಎದ್ದರೆ ಕಾಣುವುದು ಕೊಲೆ, ಆತ್ಮಹತ್ಯೆ ಯಂಥ ಋಣಾತ್ಮಕ ಅಂಶಗಳೇ
ಮಾದ್ಯಮಗಳು ಮನಸ್ಸು ಮಾಡಿದರೆ ನೂ ಮಾಡಬಹುದು
ಜನರ ಮನಸ್ಸನ್ನು ಬದಲಿಸುವ ಶಕ್ತಿ ಮಾದ್ಯಮಗಳಿಗಿವೆ
ತೀರ ಇತ್ತೀಚಿಗೆ ಐಶ್ವರ್ಯ ರೈ ಅವರ ವ್ಯಯಕ್ತಿಕ ಬದುಕಿನ ಬಗೆಗೆ ಅಸಹ್ಯವಾಗಿ ಬರೆದ
ಮಾದ್ಯಮಗಳಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ
ಬಹುಶ: ಭಾರತೀಯ ಮಾದ್ಯಮಗಳು ಇಂಥಹ ಸುದ್ದಿಗಳಿಗೆ ಪ್ರಸಿದ್ದಿ ಎನಿಸುತ್ತದೆ
ಸ್ವೀಡನ್ನಿನ ಪತ್ರಿಕೆಗಳಲ್ಲಿ ಇಲ್ಲಿನ ತಂತ್ರಜ್ಞಾನಗಳ ಬಗೆಗೆ ಮುಖ ಪುಟ ದಲ್ಲಿ ಇರುತ್ತದೆ
ಒಳ್ಳೆಯ ಲೇಖನ ನಿಮ್ಮದು

Narayan Bhat ಹೇಳಿದರು...

ನಿಮ್ಮ ಯಾವತ್ತೂ ಲೇಖನಗಳು ನಮ್ಮನ್ನು ಎಚ್ಚರಿಸುವ ದಿಶೆಯಲ್ಲಿ ಇರುತ್ತವೆ..ಧನ್ಯವಾದಗಳು.

ಚುಕ್ಕಿಚಿತ್ತಾರ ಹೇಳಿದರು...

ತೇಜಸ್ವಿನಿ..
ಈ ಮಾಧ್ಯಮದವರಿ೦ದ ಪ್ರಸಾರಗೊಳ್ಳುವ ವಿಷಯಗಳನ್ನು ನ೦ಬಬೇಕೋ ಬೇಡವೋ ಎನ್ನುವಷ್ಟರ ಮಟ್ಟಿಗೆ ವಿಶಯವನ್ನು ವೈಭವೀ ಕರಿಸಿ ಪ್ರಸಾರ ಮಾಡುತ್ತಾರೆ.
ಲೇಖನ ಚನ್ನಾಗಿದೆ.

umesh desai ಹೇಳಿದರು...

ನಾನೂ ಮೊನ್ನೆ ಟಿವಿಯಲ್ಲಿ ನೋಡಿದೆ ಕೊನೆಯಲ್ಲಿ ಅಮಿತಾಬ್ ಭಾಷಣದ ಅಂಶ ಬಿಟ್ರೆ ಚಿತ್ರ ಚೆನ್ನಾಗಿದೆ. ಮಾಧ್ಯಮದವರು ಈಗೀಗ
ಸುದ್ದಿ ಪ್ರಸಾರಮಾಡುತ್ತಿಲ್ಲ ಬದಲು ಸುದ್ದಿ ಸೃಷ್ಟಿ ಮಾಡುತ್ತಿದ್ದಾರೆ...

ಸುಮ ಹೇಳಿದರು...

ತೇಜಸ್ವಿನಿ ನಿಮ್ಮ ವಿಚಾರ ಸರಿಯಿದೆ. ಈ ಮಾಧ್ಯಮಗಳ ಅತಿ ಉತ್ಸಾಹ , ಅತಿರಂಜನೆ ಮಿತಿಮೀರಿದೆ.ಯಾವ ಸುದ್ದಿಯನ್ನು ನಂಬಬೇಕೊ ಯಾವುದನ್ನು ಬಿಡಬೇಕೊ ಗೊತ್ತಾಗುವುದಿಲ್ಲ.

ಶರಶ್ಚಂದ್ರ ಕಲ್ಮನೆ ಹೇಳಿದರು...

ತೇಜಕ್ಕ,
ನೋ ಕಾಮೆಂಟ್ಸ್.. ನಾ ಹೇಳಕ್ಕು ಅನ್ಕಂಡಿದ್ದ ಎಲ್ಲದನ್ನು ಸಹ ಬ್ಲಾಗಿಗರು ಈಗಾಗ್ಲೇ ಹೇಳಿದ್ದ.

V.R.BHAT ಹೇಳಿದರು...

ನಿಮ್ಮ ಅನಿಸಿಕೆ ಎಲ್ಲರ ಅನಿಸಿಕೆ ! better create such awareness

Subrahmanya ಹೇಳಿದರು...

ಇಲೆಕ್ಟ್ರಾನಿಕ್ ಹಾಗೂ ಪತ್ರಿಕಾ ಮಾಧ್ಯಮಗಳೆರಡೂ ಅತಿರಂಜಿತ ಸುದ್ದಿ ಸಿಡಿಸುವುದರಲ್ಲಿ ಪೈಪೋಟಿಗೆ ಬಿದ್ದಿದೆ ಎನ್ನಿಸುತ್ತದೆ.
ಈಗಂತೂ 24x7 Breaking newsಸೇ ಬರಿ. ನಿಮ್ಮ ವಿಚಾರ ವಿಶ್ಲೇಷಣೆ ಸಕಾಲಿಕ. ಚೆನ್ನಾಗಿದೆ

ಸುಧೇಶ್ ಶೆಟ್ಟಿ ಹೇಳಿದರು...

Tejakka....

nimma vichaaragalige nanna sahamatha idhe.... manthane haagu chinthale eradu idhe nimmab barahadhali.. maadhyamagalu thamma paipotiya bharadhalli samaajadha svaasthya kedisuththidhe...

Pramod P T ಹೇಳಿದರು...

ಹಾಯ್ ತೇಜು ಮೇಡಮ್,

ನಿಮ್ಮ ಬರಹದ ಶೈಲಿ ಎಂದಿನಂತೆ ಚೂಪಾಗಿದೆ!

ರಣ್ ಮಿಸ್ ಮಾಡಲ್ಲಾ!!

ತೇಜಸ್ವಿನಿ ಹೆಗಡೆ ಹೇಳಿದರು...

ನನ್ನೀ ವಿಚಾರಧಾರೆಯನ್ನು ಮೆಚ್ಚಿ/ತಪ್ಪಿದ್ದಲ್ಲಿ ತಿದ್ದಿ ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ಮಾಧ್ಯಮದ ಬಗ್ಗೆ ನನ್ನೊಳಗೂ ಕೆಲವು ತಪ್ಪು ಗ್ರಹಿಕೆಗಳಿದ್ದಿರಬಹುದು. ಆದರೆ ನಾನು ಹೇಳಿರುವುದರಲ್ಲಿ ಬಹುತೇಕ ಸತ್ಯವಿದೆ. ಮಾಧ್ಯಮದವರೆಲ್ಲಾ ಇಂಥವರೇ ಅಥವಾ ಈ ಕ್ಷೇತ್ರ ಸಂಪೂರ್ಣ ಸರಿಯಿಲ್ಲ ಎನ್ನುವುದು ನನ್ನ ಅಭಿಪ್ರಾಯವಲ್ಲ. ಇನ್ನೂ ಆಗಿರುವ, ಆದ ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ಪರಿಣಾಮ ಓದುಗರ, ನೋಡುಗರ ಮೇಲೆ, ಸಮಾಜದ ಮೇಲೆ ಮತ್ತೂ ಕೆಟ್ಟದಾಗುತ್ತದೆ ಎನ್ನುವುದಷ್ಟೇ ನನ್ನ ಕಾಳಜಿ.

@ಶ್ರೀನಿಧಿ,

ಮೊದಲನೆಯದಾಗಿ,

ಲೈವ್ ಟೆಲಿಕಾಸ್ಟ್ ಆಗ್ತಿತ್ತು ಎನ್ನುವ ಸುಳ್ಳು ಸುದ್ದಿಯನ್ನು ಕೊಟ್ಟಿದ್ದೂ ಒಂದು ಸುದ್ದಿ ಮಾಧ್ಯಮವೇ? ಅದು ಪೇಪರ್ ಮಾಧ್ಯಮ. ಪೇಪರ್ ಒಂದರಲ್ಲಿ ಟಿ.ವಿ. ಚಾನೆಲ್ ಒಂದು ಬಿತ್ತರಿಸುತ್ತಿತ್ತು ಎಂದಿತ್ತೇ ವಿನಃ ಬೇರೇನೂ ಮಾಹಿತಿ ಇರಲಿಲ್ಲ. ಸೋ... ಆದ ತಪ್ಪಿನಲ್ಲಿ ಅವರದೂ ಪರ್ಸಂಟೇಜ್ ಇದೆ :) ಆದರೂ ನನ್ನೊಳಗಿನ ತಪ್ಪು ಗ್ರಹಿಕೆಯೊಂದನ್ನು ಸರಿಪಡಿಸಿದ್ದಕ್ಕಗಿ ತುಂಬಾ ಧ್ಯಾಂಕ್ಸ್.

ಎರಡನೆಯದಾಗಿ : ಕನೆಕ್ಟಡ್ ಆಗಿರದೇ ಇರಬಹುದು. ಆದರೆ ಯಾವ ನೂಸ್ ಚಾನಲ್ ಕೂಡಾ ಟಿ.ಆರ್.ಪಿಯನ್ನು ಗಣನೆಗೆ ತೆಗೆದುಕೊಳ್ಳದೇ ಸುದ್ದಿಯನ್ನು, ಅದರೊಳಗಿನ ಸತ್ಯವನ್ನೂ ಕಾಣಿಸ ಹೋಗದು. ಇದೂ ಸತ್ಯವೇ!

ಮೂರನೆಯದಾಗಿ : ಹೌದು ರಣ್ ಚಿತ್ರ ತುಂಬಾ ಚೆನ್ನಾಗಿದೆ :)

Sushrutha Dodderi ಹೇಳಿದರು...

ಒಂದು- ರಣ್ ಚಿತ್ರವನ್ನು ಈ ವೀಕೆಂಡ್ ನೋಡ್ತೀನಿ.

ಎರಡು- ರಣ್ ಚಿತ್ರವನ್ನು ಈ ವೀಕೆಂಡ್ ನೋಡ್ತೀನಿ.

ಮೂರು- ರಣ್ ಚಿತ್ರವನ್ನು ಈ ವೀಕೆಂಡ್ ನೋಡ್ತೀನಿ.

ವಿ.ರಾ.ಹೆ. ಹೇಳಿದರು...

1. ಅದು LIVE ಎಂದು ಯಾವುದೋ ಪತ್ರಿಕೆ ಬರೆದಿದೆ, ಅದರಿಂದ ನಿಮ್ಮದೂ ತಪ್ಪಾಗಿದೆ. so, always better to go for first hand information, i mean ನೀವು ಲೈವ್ ನೋಡಿದ್ದರೆ ಬರೆಯಬಹುದು. ಅಥವಾ ಲೈವ್ ನೋಡಿದರು ಯಾರಾದರೂ ಹೇಳಿದರೆ ಬರೆಯಬಹುದು. otherwise second hand info can be avoided.

2. ಕಾರ್ಟನ್ ಟವರ್ನಲ್ಲಿ ಆ ಮಹಿಳೆ ಬೀಳುವಾಗ ನೂರಾರು ಜನ ಇದ್ದರು. ಅಲ್ಲಿ ಸ್ಥಿತಿಗತಿಗಳು ಹೇಗಿತ್ತು ಎಂಬುದು ನಮಗೆ ಗೊತ್ತಿಲ್ಲ. ಅದನ್ನು ಅವ ಶೂಟ್ ಮಾಡಿದ್ದಾನೆ ಅಷ್ಟೆ. ಬೀಳುವ ದೃಶ್ಯ ಶೂಟ್ ಮಾಡಿದವನು ಹೋಗಿ ಕ್ಯಾಚ್ ಹಿಡಿಯಬೇಕಿತ್ತು, ರಕ್ಷಣೆಗೆ ಧಾವಿಸಬೇಕಿತ್ತು ಎಂದೆಲ್ಲಾ ನಾವು ಸುಮ್ಮನೇ ಕೂತು ಹೇಳುವುದು ಯಾವಾಗಲೂ ಸರಿಯಾಗಬೇಕಿಲ್ಲ.

3. ಇಂಟರ್ಣೆಟ್ ನಲ್ಲಿ ಒಂದು ಪುಟಕ್ಕೆ ಎಷ್ಟು ಹಿಟ್ಸ್ ಬಿದ್ದಿವೆ ಎಂದು ತಿಳಿದುಕೊಳ್ಳಲಾಗುವಂತೆ ಎಷ್ಟು ಜನ ಆ ಛಾನಲ್ ನೋಡುತ್ತಿದ್ದಾರೆ ಎಂಬುದನ್ನು ನೇರವಾಗಿ ತಿಳಿದುಕೊಳ್ಳಲಾಗುವುದಿಲ್ಲ. TRP concept is different. http://en.wikipedia.org/wiki/Target_Rating_Point.

4. ರಣ್ ಚಿತ್ರ ಚೆನ್ನಾಗಿದೆ. ಆದ್ರೆ ತೋರಿಸಬೇಕಾದ್ದನ್ನು ಅಷ್ಟು ಪರಿಣಾಮಕಾರಿಯಾಗಿ ತೋರಿಸುವುದರಲ್ಲಿ ಸೋತಿದೆ ಅನ್ನಿಸಿತು. ಗೊತ್ತಿರುವ ವಿಷಯವನ್ನೇ ಬಹಳ ಸಣ್ಣ ಒಂದೇ plotನಲ್ಲಿ ತೋರಿಸಲು ಹೋಗಿದ್ದಾರೆ.

ಬರೀ criticism ಅಂದುಕೊಳ್ಳಬೇಡಿ. ಉಳಿದ ಎಲ್ಲಾ ವಿಷಯಗಳಿಗೆ, ಬರಹದ ಆಶಯಕ್ಕೆ ನನ್ನ 100% ಒಪ್ಪಿಗೆ, ಸಹಮತ ಇದೆ. well written. thank you.

ತೇಜಸ್ವಿನಿ ಹೆಗಡೆ ಹೇಳಿದರು...

@ ವಿ.ರಾ.ಹೆ,

೧. ನನ್ನದೂ ತಪ್ಪಾಗಿದೆ ಎಂದು ಮೊದಲೇ ಒಪ್ಪಿಕೊಂಡಾಗಿದೆ. ನನ್ನ ಕಮೆಂಟ್ ಫಾರ್ ನಿಧಿ ನೋಡಿದರೆ ಗೊತ್ತಾಗುತ್ತದೆ. ಇನ್ನು ಈ ಲೇಖನದ ಉದ್ದೇಶವೇನೆನ್ನುವುದನ್ನೂ ನನ್ನ ಪ್ರತಿಕ್ರಿಯೆಯಲ್ಲಿ ಹೇಳಿದ್ದೇನೆ. ತಪ್ಪುಗ್ರಹಿಕೆಗಳಿದ್ದರೆ ತಿದ್ದಿಕೊಳ್ಳುವುದು ಹಾಗೂ ಒಪ್ಪುವಂತಹ ವಿಷಯಗಳಿದ್ದರೆ ಅಳವಡಿಸಿಕೊಳ್ಳುವುದು.

೨. ಇನ್ನು ಆ ಮಹಿಳೆ ಬೀಳುವಾಗ ನಾನು ಕ್ಯಾಚ್ ಹಿಡಿಯಬೇಕೆಂದು ಹೇಳುತ್ತಿಲ್ಲ. ಹಾಗೆ ಕ್ಯಾಚ್ ಹಿಡಿಯಲು ಹೋಗಿಯೇ ಆಕೆ ಬಿದ್ದದ್ದು ಎಂದೂ ಚಾನಲ್‌ನಲ್ಲೇ ಖುದ್ದಾಗಿ ನೋಡಿದ್ದೇನೆ. (ಯಾವುದೇ ಪೇಪರ್ ಮಾಹಿತಿಯಲ್ಲ ಇದು.) ನಾನು ಹೇಳುತ್ತಿರುವುದು ಅಲ್ಲಿದ್ದ, ನೆರೆದಿದ್ದ ಜನರು ಸ್ವಲ್ಪ ಸೆನ್ಸೆಬಲ್ ಆಗಿ ವರ್ತಿಸಿದ್ದರೆ ಸಾವು ನೋವುಗಳ ಸಂಖ್ಯೆಗಳ ಪ್ರಮಾಣ ಕಡಿಮೆಯಾಗುತ್ತಿತ್ತೇನೋ ಎಂದಷ್ಟೇ! ಯಾರೂ ಮೇಲಿನಿಂದ ಅಕಸ್ಮಾತ್ ಆಗಿ ಕೆಳಗೆ ಬೀಳುವುದನ್ನು ನೋಡಿದಾಗ ಮೊದಲು ಮನಸಿಗೆ ಅದನ್ನು ಶೂಟ್ ಮಾಡಬೇಕೆಂದು ಅನಿಸಿದರೆ ಆ ಮನಃಸ್ಥಿತಿ ಸರಿಯಾದುದಲ್ಲ ಎಂದೇ ಅರ್ಥ!

೩. Internet‌ಗೂ, T.R.Pಗೂ ಇರುವ ವ್ಯತ್ಯಾಸ ತಕ್ಕಮಟ್ಟಿಗಾದರೂ ಬಲ್ಲೆ. ಆದರೆ ನಿಧಿಗೆ ಹೇಳಿರುವಂತೆ ಚಾನಲ್‌ಗಳು ಯಾವುದೋ ಲಾಭಕ್ಕಾಗಿಯೇ ಈ ರೀತಿ ವೈಪರೀತ್ಯಕ್ಕೆ ಹೊಟಿವೆ ಎಂಬುದು ಸ್ಪಷ್ಟ. ಅದರಲ್ಲಿ ಬಹು ದೊಡ್ಡ ಲಾಭ ಟಿ.ಆರ್.ಪಿಯದ್ದೇ ಎನ್ನುವುದು ನನ್ನ ಅಭಿಮತ.

೪. ಒಂದು ಚಲಚನಚಿತ್ರಾವಧಿಯಲ್ಲಿ ಯಾವ ವಿಷಯವನ್ನು ಎಷ್ಟು ಪರಿಣಾಮಕಾರಿಯಾಗಿ ತೋರಿಸಬಹುದೋ ಅಷ್ಟನ್ನು ಚೆನ್ನಾಗಿ ಕಾಣಿಸಿದ್ದಾರೆ ಎಂದೆನ್ನಿಸಿತು ನನಗೆ. ಇನ್ನು ರಣ ಚಿತ್ರದ ಪ್ರಚಾರಕ್ಕಾಗಿ ನಾನಿದನ್ನು ಬರೆದಿಲ್ಲ. ಅವರವರ ಇಷ್ಟ-ಕಷ್ಟಗಳನ್ನು ನೋಡಿ ಮೆಚ್ಚಬಹುದಷ್ಟೇ. Plot ದೊಡ್ಡದೋ ಸಣ್ಣದೋ ಎನ್ನುವುದಕ್ಕಿಂತ ಅದರೊಳಗೆ ಕಾಣಿಸಿದ ವಿಷಯ ಎಷ್ಟರಮಟ್ಟಿಗೆ ದೊಡ್ಡದು ಎನ್ನುವುದು ಮುಖ್ಯ ಅನಿಸುತ್ತದೆ ನನಗೆ.

ಇಂತಹದನ್ನು just "criticism" ಎಂದು ಅರ್ಥೈಸಿಕೊಳ್ಳುವಷ್ಟು ಸಣ್ಣ "ಮಾನಸ" ನನ್ನದಲ್ಲ :) ಟೀಕೆ ಸಕಾರಾತ್ಮದಲ್ಲಿದ್ದರೆ ಮುಂದಿನ ಬರವಣಿಗೆಯ ಬೆಳವಣಿಗೆಗೆ ಪೂರಕವೇ ಆಗಿರುತ್ತದೆ ಎನ್ನುವುದ ಬಲ್ಲೆ. ಹೊಗಳಿಕೆಗೇ ಬರೆಯುವ ಹುಚ್ಚುತನ ನನ್ನದಲ್ಲ. ಅದು ನನಗೆ ಬೇಕೂ ಆಗಿಲ್ಲ. "ಉಳಿದೆಲ್ಲಾ ವಿಷಯಗಳಿಗೆ"(ಉಳಿದ ಯಾವ ವಿಷಯಗಳಿಗೆ ಎಂದು ಸ್ವಲ್ಪ ಅರ್ಥವಾಗಿಲ್ಲ :-p) ಪೂರ್ಣ ಸಹಮತವನ್ನಿತ್ತಿದ್ದಕ್ಕೆ ತುಂಬಾ ತುಂಬಾ Thanksuuu

@ ಸುಶ್ರುತ,

ಒಂದು, ಎರಡು, ಮೂರೂ ಸೇರಿಸಿ - ಖಂಡಿತ ನೋಡು. ಇಷ್ಟವಾದರೆ ಹೇಳು. ಇಲ್ಲದಿದ್ದರೆ ಬೈಕಂಡಿಕಡ ಮತ್ತೆ...:-P

ವಿ.ರಾ.ಹೆ. ಹೇಳಿದರು...

ತೇಜಸ್ವಿನಿಯವರೆ,

<>

ಅದೇ ಹೇಳಿದ್ದು. ಸಹಾಯ ಮಾಡುವ, ಪ್ರಾಣ ಉಳಿಸುವ ಅವಕಾಶವಿದ್ದರೆ ಅಲ್ಲಿದ್ದ ಜನ ಮಾಡಿಯೇ ಮಾಡುತ್ತಿದ್ದರು. ಅಲ್ಲಿನ ಸ್ಥಿತಿ ಗತಿಗಳನ್ನು ನಾವು ಖುದ್ದಾಗಿ ಕಂಡಿಲ್ಲ ಅಥವಾ ನಾವು ಅಲ್ಲಿ ಇರಲಿಲ್ಲ. ಆದ್ದರಿಂದ ಸುಮ್ಮನೇ ಅವರು ಹಾಗೆ ಮಾಡಬೇಕಿತ್ತು, ಹೀಗಿರಬೇಕಿತ್ತು ಎನ್ನುವುದು ಸರಿಯಾಗುವುದಿಲ್ಲ.

<>

ಅವಳು ಬೀಳಲು ತಯಾರಾಗಿರಲಿಲ್ಲ, ಹಾರಲು ತಯಾರಾಗಿದ್ದಳು ಮತ್ತು ಅವಳನ್ನು ಹಿಡಿಯಲು ಕೆಳಗೆ ಜನ ತಯಾರಾಗಿದ್ದರು. ಅದನ್ನು (ಹಾರಿ, ಲ್ಯಾಚ್ ಮಾಡುವುದನ್ನು) ಶೂಟ್ ಮಾಡಿಕೊಳ್ಳಲು ಇವ ತಯಾರಾಗಿದ್ದ. ಆದರೆ ದುರದೃಷ್ಟವಶಾತ್ ಕ್ಯಾಚ್ ಆಗಲಿಲ್ಲ. ಹಾರಿದ್ದು ಚಿತ್ರೀಕರಿಸಲ್ಪಟ್ಟಿತು. ಹಾರಿದ ಮೇಲೆ ಅದನ್ನು ನೋಡಿ ತಕ್ಷಣ ಶೂಟ್ ಮಾಡಲು ಆಗುವುದಿಲ್ಲ. ೭ ನೇ ಮಹಡಿಯಿಂದ ನೆಲಕ್ಕೆ ಅಪ್ಪಳಿಸಲು ೫ ಸೆಕೆಂಡಿಗಿಂತ ಕಡಿಮೆ ಸಾಕು. ಒಂದು ಜೀವವನ್ನು ಬಚಾಯಿಸುವ ಘಟನೆ ಶೂಟ್ ಮಾಡಲು ತಯಾರಾಗಿದ್ದ ಆತನ ಮನಃಸ್ಥಿತಿ ಬಗ್ಗೆ ತಕರಾರು ಸರಿಯಲ್ಲ. once again, ನಮ್ಮದು passing comment ಆಗಿಬಿಡುತ್ತದೆ.

<>

ನೀವು ಛಾನಲ್ ಬದಲಾಯಿಸುವುದರಿಂದ ಅವರ ಟಿ.ಆರ್.ಪಿ. ಕಡಿಮೆ ಮಾಡಿದಂತಾಗುವುದಿಲ್ಲ ಎಂಬುದನ್ನು , technically TRP ಹೇಗೆ ತಿಳಿಯಲ್ಪಡುತ್ತದೆ ಎಂದು ಹೇಳುತ್ತಿದ್ದೇನೆ ಅಷ್ಟೆ. But, in general ನೀವು OK.

<>

ಮೇಲೆ ನಾ ಹೇಳಿದ ೪ ಅಂಶಗಳನ್ನು ಬಿಟ್ಟು ಬೇರೆ ಏನೇನು ಬರೆದಿದ್ದೀರೋ ಅವೆಲ್ಲಾ ’ಉಳಿದ ವಿಷಯಗಳು’. ಸ್ವಲ್ಪವಾದರೂ ಅರ್ಥವಾಯಿತು ಅಂದುಕೊಳ್ಳುತ್ತೇನೆ:)

ಧನ್ಯವಾದಗಳು.

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್ ಅವರೇ,

>>ಅವಳು ಬೀಳಲು ತಯಾರಾಗಿರಲಿಲ್ಲ, ಹಾರಲು ತಯಾರಾಗಿದ್ದಳು ಮತ್ತು ಅವಳನ್ನು ಹಿಡಿಯಲು ಕೆಳಗೆ ಜನ ತಯಾರಾಗಿದ್ದರು. ಅದನ್ನು (ಹಾರಿ, ಲ್ಯಾಚ್ ಮಾಡುವುದನ್ನು) ಶೂಟ್ ಮಾಡಿಕೊಳ್ಳಲು ಇವ ತಯಾರಾಗಿದ್ದ. ......
.......ನಮ್ಮದು passing comment ಆಗಿಬಿಡುತ್ತದೆ. >>

ಎಂದಿದ್ದೀರಿ. ಆದರೆ ಆತನೆಲ್ಲೂ ನಾನು ಆಕೆ ಹಾರಲು ತಯಾರುಗುತ್ತಿದ್ದಾಗ, ಕೆಳಗೆ ಅವಳನ್ನು ಹಿಡಿಯಲು ಜನರು ತಯಾರಾಗುತ್ತಿರುವುದನ್ನು ನೊಡಿ ಶೂಟ್ ಮಾಡಿದೆ ಎಂದು ಹೇಳಿಲ್ಲ. ನಾನು ಖುದ್ದಾಗಿ ಟಿ.ವಿ.ಯಲ್ಲೇ ಕೇಳಿರುವೆ. ಇನ್ನು ಇದೂ ಸುಳ್ಳಾಗಿದ್ದರೆ ಖಂಡಿತ ನನ್ನ ತಪ್ಪಲ್ಲ. ನಾ ನೋಡುತ್ತಿದ್ದ ಚಾನಲ್ ತಪ್ಪು. ಇದನ್ನೇ ನಾನು ಲೇಖನದಲ್ಲಿ ಹೇಳಿದ್ದು. ಇನ್ನು ಅಲ್ಲಿ ನನಗೆ ಕಂಡಿದ್ದು, ಕೆಲವು ಜನರು ಇದ್ದ ಸ್ವಲ್ಪ ಉದ್ದದ ಬಟ್ಟೆಯನ್ನು ಎರಡು ತುದಿ ಹಿಡಿದು ಅವಳನ್ನು ಹಿಡಿಯಲು ಯತ್ನಿಸುತ್ತಿದ್ದರು ಅಷ್ಟೇ. ಹಾಂ... ನೀವಂದಂತೇ ಅಲ್ಲಿ ಅವಳ ದುರದೃಷ್ಟ ಮೇಲಾಗಿ ಕೆಳಗೆ ಬಿದ್ದು ಸಾವನ್ನಪ್ಪಿದಳು.:(

ಇನ್ನು ಜನರು ಹಾಗೆ ಮಾಡಬೇಕಿತ್ತು, ಹೀಗೆ ಮಾಡ ಬೇಕಿತ್ತು ಎಂದೆಲ್ಲಾ ಅಂದಿಲ್ಲ. ಅಸಲು ನಾನು ಮಾಧ್ಯಮದವರ ಬಗ್ಗೆ ಬರೆದದ್ದು. ಇನ್ನು ಅಲ್ಲಿ ಬ್ರಿಡ್ಜ್ ಮೇಲೆ, ಕಟ್ಟಡದ ಸುತ್ತ ಮುತ್ತ ಗುಂಪುಗೂಡಿದ್ದ ಜನರಿಂದಾಗಿ ನೆರವು ಬರಲು ತೊಂದರೆಯಾಯಿತೆಂದು ಹಲವಾರು ಕಡೆ ಓದಿರುವೆ, ಕೇಳಿರುವೆ. ಆ ರೀತಿ ಗುಂಪುಗೂಡಿ ಮತ್ತಷ್ಟು ಗೊಂದಲ ಸೃಷ್ಟಿಸುವುದನ್ನಾದರೂ ಬಿಡಬಹುದಾಗಿತ್ತು. ಇದನ್ನು ಹೇಳಲು ನೀವು, ನಾವು ಅಲ್ಲಿರಲೇಬೇಕಂದಿಲ್ಲ! :)

>>ಸ್ವಲ್ಪವಾದರೂ ಅರ್ಥವಾಯಿತು ಅಂದುಕೊಳ್ಳುತ್ತೇನೆ...>>

ಸಂಪೂರ್ಣ ಅರ್ಥವಾಯಿತು :)

ಜಲನಯನ ಹೇಳಿದರು...

ತೇಜಸ್ವಿನಿ, ಬಾತುಗಳ ವಿಲವಿಲ ಒದ್ದಾಟವನ್ನೇ ಬಂಡವಾಳವಾಗಿಸಿಕೊಳ್ಳುವ KFC ಗೂ ನಮ್ಮ ಈ ದುರ್ದರ್ಶನ ವಿಕಲಬುದ್ಧಿ ಟಿಆರ್ಪಿ ಪ್ರಿಯರಿಗೂ ಯಾವುದೇ ಅಂತರವಿಲ್ಲ ಎನ್ನುವ ಮಾತನ್ನು ಬಹಳ ವಿವರವಾಗಿ ತಿಳಿದ್ದೀರಿ...ತಮಿಳುನಾಡಿನ ಪೋಲೀಸ ಅಧಿಕಾರಿಯನ್ನ್ ರಕ್ತಶ್ರಾವದಿಂದ ಸಾಯುವಂತೆ ಮಾಡಿದ ನಮ್ಮ ಈ TV ಜನ ಯಾವಾಗ ಬುದ್ಧಿ ಕಲೀತಾರೋ ಗೊತ್ತಿಲ್ಲ....ಇನ್ನೊಂದು ಈ ಮಧ್ಯೆ ..ನೀವೂ ನೋಡಿರಬೇಕು...ಹೆಂಡತಿ-ಗಂಡ, ತಂದೆ-ಮಕ್ಕಳು..ಹೀಗೆ ಕುಟುಂಬ ವ್ಯಾಜ್ಯಗಳನ್ನು ಕಿರುಪರದೆಮೇಲೆ ಬಿಡಿಸುವಂತೆ ದರ್ಶಿಸುವ ವಿಧವೂ ನನಗೇಕೋ ಸರಿ ಕಾಣಲಿಲ್ಲ...
ಅಭಿನಂದನೆಗಳು...ನಾನಂತೂ ಪಾಂಡುರಂಗ ವಿಠಲ, ಪಾರ್ವತಿ ಪರಮೇಶ್ವರ ನೋಡೋದು ತಪ್ಸೊಲ್ಲ...ಹಹಹಹ.....ನಕ್ಕರೆ ಅದೇ ಸ್ವರ್ಗ

VENU VINOD ಹೇಳಿದರು...

ತೇಜಸ್ವಿನಿಯವರೆ,
ರಣ್‌ ಎರಡು ವಾರ ಮೊದಲು ನೋಡಿದೆ, ಯಾಕೋ ಅಷ್ಟು ಪರಿಣಾಮಕಾರಿಯಾಗಿಲ್ಲ ಎನಿಸಿತು. ಒಂದು ಚಿಕ್ಕ ತುಣುಕಿನ ಪ್ರಸಾರದಿಂದ ಪ್ರಧಾನ ಮಂತ್ರಿ ರಾಜೀನಾಮೆ ಕೊಡುವುದು ಅಷ್ಟೊಂದು ವಾಸ್ತವಿಕ ಅಂಶವಾಗಿ ನನಗೆ ತೋರಲಿಲ್ಲ. ಮಾಧ್ಯಮಗಳೂ ಭ್ರಷ್ಟ ಆಗಿರುವುದು ನಿಜ, ಆದರೆ ಚಿತ್ರದಲ್ಲಿ ತೋರಿಸಿದ್ದು ನೋಡಿದರೆ ರಾಮ್‌ಗೋಪಾಲ್‌ ವರ್ಮ ಅಷ್ಟಾಗಿ ಮಾಧ್ಯಮ ಜಗತ್ತು ಅಧ್ಯಯನ ಮಾಡಿಲ್ಲವೇನೋ ಅನಿಸಿತು.
ಹಾಗೆ ನೋಡಿದರೆ ಮಧುರ್‌ ಭಂಡಾರ್ಕರ್‌ ಅವರು ನಾಲ್ಕಾರು ವರ್ಷ ಮೊದಲೇ ಮಾಡಿದ್ದ ಪೇ‌ಜ್‌-೩ ರಣ್‌ಗಿಂತ ಎಷ್ಟೋ ಪಾಲು ವಾಸಿ.
ಉತ್ತಮ ಕಥಾವಸ್ತು ಇದ್ದರೂ ಜಾಳಾದ ಚಿತ್ರಕಥೆಯಿಂದಾಗಿ ರಣ್‌ ನನಗೆ ಇಷ್ಟವಾಗಲಿಲ್ಲ...did not expect this from RGV Factory, despite being his fan

uday itagi ಹೇಳಿದರು...

ಮಾಧ್ಯಮಗಳು ಬರಿ ಒಂದೇ ರೀತಿಯಲ್ಲಿ ಕೆಲಸ ಮಾಡುತ್ತವೆ ಎಂದು ಹೇಳುವದು ತಪ್ಪಾಗುತ್ತದೆ. ಏಕೆಂದರೆ ಮಾಧ್ಯಮಗಳಿಂದ ಸಮಾಜಕ್ಕೆ ಕೆಟ್ಟದ್ದು ಆದಂತೆ ಒಳ್ಳೆಯದು ಆಗಿದ್ದಿದೆ. ನಿಮ್ಮ ಬರವಣಿಗೆ ಮತ್ತು ಚಿತ್ರ ವಿಮರ್ಶೆ ಚನ್ನಾಗಿ ಬಂದಿದೆ.

vanihegde blog ಹೇಳಿದರು...

I liked your articles well presented,excellent job keep it up.
visit my website:
www.vanihegde.wordpress.com

shivu.k ಹೇಳಿದರು...

ತೇಜಸ್ವಿ ಮೇಡಮ್,

ರಣ್ ಚಿತ್ರವನ್ನು ನಾನಿನ್ನು ನೋಡಿಲ್ಲ. ಆದರೂ ಮಾದ್ಯಮದ ಬಗ್ಗೆ ನೀವು ಬರೆದ ಲೇಖನ ಓದಿದ ಮೇಲೆ ನನಗಾದ ಅನುಭವವನ್ನು ಹೇಳಲೇ ಬೇಕು.

ಕಳೆದ ವಾರ ನಮ್ಮ ದಿನಪತ್ರಿಕೆ "ವೆಂಡರ್" ವಿಶ್ವನ ಬಗ್ಗೆ ನನ್ನ ಬ್ಲಾಗಿನಲ್ಲಿ ಬರೆದಿದ್ದೆನಷ್ಟೆ. ಅದಕ್ಕೂ ಮೊದಲು ಈ ವಿಚಾರವನ್ನು ಎಲ್ಲಾ ಪತ್ರಿಕೆಯವರಿಗೂ ಸುದ್ಧಿ ಮುಟ್ಟಿಸಿ ಪ್ರಕಟಿಸಿ ಸಹಾಯಕ್ಕಾಗಿ ವಿನಂತಿಸಿದ್ದೆ. ನಮ್ಮ ಬಳಿಗೆ ನಿತ್ಯ ಬರುವ ಎಲ್ಲಾ ಪತ್ರಿಕೆಯ ಪ್ರತಿನಿಧಿಗಳು ಇದನ್ನು ಕೇಳಿ ವಿಷಾದ ವ್ಯಕ್ತಪಡಿಸಿದ್ದು ಬಿಟ್ಟರೆ ಮತ್ತೇನು ಮಾಡಲಿಲ್ಲ. ಅವರಿಗೆ ತಮ್ಮ ಪತ್ರಿಕೆ circulation ಹೆಚ್ಚಾಗಲೂ ನಾವು ಬೇಕು ನಮಗಾದ ತೊಂದರೆಗಳು ಅವರಿಗೆ ಬೇಡ. ನಾನು ಯಾವುದೇ ಪತ್ರಿಕೆ ಹೆಸರನ್ನು ಹೇಳದೆ ಕೆಲವು ಉದಾಹರಣೆ ಕೊಡುತ್ತೇನೆ. ಒಂದು ದೊಡ್ಡಪತ್ರಿಕೆಯ ಕಚೇರಿಗೆ ಸುಧ್ದಿ ಮುಟ್ಟಿಸಲೋದರೆ ಒಳಗೆ ಬಿಡುವುದಿಲ್ಲ. ಒಂಥರ ಕಾರ್ಪೋರೇಟ್ ಅಫೀಸಿನಂತಿದೆ. ಮತ್ತೆ ಸುದ್ದಿಹಾಕಲು ದುಡ್ದುಕೊಡಬೇಕಂತೆ. ಮತ್ತೊಂದು ಆಫೀಸಿನಲ್ಲಿ ನನಗೆ ಎಲ್ಲರೂ ಪರಿಚಯ. ಅವರಿಗೆ ಈ ಸುದ್ಧಿಯನ್ನು ಕೊಟ್ಟಾಗ ನಗುತ್ತಾ ತೆಗೆದುಕೊಂಡರು. ಆದ್ರೆ ಅದು ಪ್ರಕಟವಾಗಲೇ ಇಲ್ಲ. ಕೆಲವು ಪ್ರತಿನಿಧಿಗಳು ಇದು ನಮ್ಮ ವಿಚಾರಕ್ಕೆ ಬರುವುದಿಲ್ಲವೆಂದು ತಪ್ಪಿಸಿಕೊಂಡು ಬಿಟ್ಟರು. ಮತ್ತೊಂದು ಪತ್ರಿಕೆಯ ಪ್ರತಿನಿಧಿಗೆ ಈ ವಿಚಾರ ತಿಳಿಸಿ ಅವನಿಗೆ ಸಹಾಯ ಮಾಡಲು ಸಹಕರಿಸಿ ಎಂದರೆ ಅವನಿಂದ ಒಂದು ಲೆಟರ್ ತನ್ನಿ ಎಂದ ಮಹಾಶಯ. ಬದುಕಿನ ಜೊತೆ ಹೋರಾಡುತ್ತಿರುವವನು ಲೆಟರ್ ಕೊಡಲು ಸಾಧ್ಯವೇ...ಇವರಿಗೆಲ್ಲಾ ದೇವೇಗೌಡ...ಖೇಣಿ...ಯ ನಿತ್ಯ ಮಸಾಲೆಗಳು, ಅಸ್ಕರ್ ಪ್ರಶಸ್ಥಿಗಳು, ನಿತ್ಯಾನಂದ ಸ್ವಾಮಿಗಳು...ಇವೇ ಬೇಕಾಗುತ್ತವೆ ವಿನಃ ಬಡವರ ನೋವು ಏಕೆ ಬೇಕು. ಕೊನೆಗೆ ನಾನು ವಿಧಿಯಿಲ್ಲದೇ ನನ್ನ ಬ್ಲಾಗಿನಲ್ಲಿ ಬರೆಯಬೇಕಾಯಿತು. ನಂತರ DNA ಪತ್ರಿಕೆ ಒಂದು ಕಾಲಂ ಹಾಕಿತ್ತು. ಇಷ್ಟು ಬಿಟ್ಟರೆ ಇನ್ಯಾವ ಪತ್ರಿಕೆಯಲ್ಲಿ ಈ ವಿಚಾರ ಬರಲಿಲ್ಲ. ಇದೇ ವಿಚಾರವನ್ನು ಹಿಡಿದು ನಾವೆಲ್ಲ [ವೆಂಡರ್ಸ್] ಒಗ್ಗಟ್ಟಿನಿಂದ ಒಂದು ದಿನ ಸ್ಟ್ರೈಕ್ ಮಾಡಿಬಿಟ್ಟರೆ ಆ ದಿನ ಇಡೀ ಬೆಂಗಳೂರಿಗೆ ದಿನಪತ್ರಿಕೆ ತಲುಪುವುದಿಲ್ಲವೆನ್ನುವುದು ಅವರಿಗಿನ್ನು ಗೊತ್ತಿಲ್ಲ. ಸದ್ಯ ಹುಡುಗ ಚೇತರಿಸಿಕೊಳ್ಳುತ್ತಿದ್ದಾನೆ..ಮಾದ್ಯಮದ ಬಗ್ಗೆ ನೀವು ಬರೆದ ಲೇಖನವನ್ನು ಓದಿ ಇಷ್ಟೇಲ್ಲಾ ಬರೆಯಬೇಕಾಯಿತು..
ಧನ್ಯವಾದಗಳು.

nenapina sanchy inda ಹೇಳಿದರು...

thank you Tejaswini for visiting my blog. will go through ur blog in my leisure
:-)
malathi S.
p.s: congrats on the second year of blogging...

Vijaykumar Gudur ಹೇಳಿದರು...

Good one.

As people told that its Ramu's anger towards the media and he has expressed this in his own way.
remember the 26/11 Taj attack, ramu visited the site with Vilasrao deshmukh and rietesh deshmukh.

I know the article doesnt need this information and its talking about a movie but i taut it would be little informative to share...

well i'd end with one more information, Aamir khan commented on Ramu that he doesnt want to work with him after rangeela... and the media is expecting that he may make a movie on that line as well... just wait n watch...

Ta
Vijay

ತೇಜಸ್ವಿನಿ ಹೆಗಡೆ ಹೇಳಿದರು...

Welcome to My blog Mr.Vijay. Thanks a lot for sharing ur thoughts... :) Keep visiting..