ಸೋಮವಾರ, ಮಾರ್ಚ್ 15, 2010

ವಿಕೃತಿಯಿಲ್ಲದ ವಿಕಸನದೆಡೆಗೆ ಸಾಗೋಣ ಬನ್ನಿ....


ಹೊ ವರುಷದಾರಂಭವನ್ನು ಒಂದು ಉತ್ತಮ ಹಾಗೂ ವಿಶಾಲಾರ್ಥವನ್ನು ನೀಡುವ ಸುಂದರ ಲೇಖನದ ಮೂಲಕ ಆರಂಭಿಸುತ್ತಿದ್ದೇನೆ. ಈ ಲೇಖನವನ್ನು ಬರೆದವರು ದಿವಗಂತ ಡಾ.ದಯಾನಂದ ಶಾನಭಾಗ. ಇವರು ಧಾರವಾಡದ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ದೀರ್ಘಕಾಲದ ಅಸೌಖ್ಯದಿಂದಾಗಿ ಕಳೆದ ತಿಂಗಳಲ್ಲಿ ದಿವಗಂತರಾದರು. ಪುಟಗಳ ಈ ಒಂದು ಲೇಖನವನ್ನು ಸಂಗ್ರಹಿಸಿ ಕೇವಲ ಪ್ರಮುಖಾಂಶಗಳನ್ನಷ್ಟೇ ಇಲ್ಲಿ ಹಾಕಿದ್ದೇನೆ. ಇಡೀ ಲೇಖನವೇ ಬಹು ಅದ್ಭುತವಾಗಿ ನಮ್ಮ ಕಣ್ತೆರೆಸುವಂತಿದೆ. ಜಾತಿ, ಮತ, ಹಿಂಸೆಗಳ ವಿರುದ್ಧ ಹೊಸ ಭಾಷ್ಯವನ್ನು ಬರೆಯುವಂತಿದೆ. ಸುಮಾರು ಹದಿನೈದು ವರುಷಗಳಿಂದಲೂ, ಪ್ರತಿ ವರುಷ ನನ್ನ ತಂದೆಯವರಾದ ಡಾ.ಜಿ.ಎನ್ ಭಟ್ ಅವರು ತಮ್ಮ ಸಂಸ್ಕೃತ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ (Centre For Inter-Disciplinary Studies and Research in Sanskrit) ಮೂಲಕ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿಗಳನ್ನು(Seminar)ಏರ್ಪಡಿಸುತ್ತಿದ್ದಾರೆ. ೧೯೯೯ ರಲ್ಲಿ "ವ್ಯಕ್ತಿತ್ವ ವಿಕಸನ : ಭಾರತೀಯ ದೃಷ್ಟಿ” (Personality Development - Indian View) ಎಂಬ ವಿಷಯದಡಿ ವಿಚಾರಗೋಷ್ಠಿಯನ್ನು ಏರ್ಪಡಿಸಿದ್ದರು. ಆಸಮಯದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ನಿವೃತ್ತ ಹಾಗೂ ಕಾರ್ಯನಿರತ ಅನೇಕ ಪ್ರಾಧ್ಯಾಪಕರು ತಮ್ಮ ಪೇಪರ್ ಮಂಡಿಸಿದ್ದರು. ಅವುಗಳನ್ನೆಲ್ಲಾ ಸಂಪಾದಿಸಿ ಒಂದು ಪುಸ್ತಕವನ್ನು ಹೊರ ತರಲಾಗಿದೆ. ಅಲ್ಲಿಂದಲೇ ಆಯ್ದ ಲೇಖನವಿದು. ಅಂತೆಯೇ ಈವರೆಗೂ ಪ್ರತಿ ವರುಷ ನಡೆಸಿದ ಗೋಷ್ಠಿಗಳನ್ನೆಲ್ಲಾ ಸಂಗ್ರಹ ಮಾಡಿ ಪುಸ್ತಕರೂಪದಲ್ಲಿ ಪ್ರಕಟಿಸಲಾಗಿದೆ. ಅವುಗಳೆಲ್ಲವುಗಳ ಪಟ್ಟಿಗಳನ್ನು ಸಧ್ಯವೇ ನೀಡಲು ಯತ್ನಿಸುವೆ.
(ಚಿತ್ರ ಕೃಪೆ - ಗೂಗಲ್)

ಸರ್ವರಿಗೂ ವಿಕೃತಿನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.
 ಈ ಯುಗಾದಿ ಎಲ್ಲರ ಮನದೊಳಗಿರುವ ವಿಕೃತಿಯನ್ನು ಹೋಗಲಾಡಿಸಿ, ಸುವಿಚಾರಗಳನ್ನು ಹುಟ್ಟುಹಾಕಿ ಆ ಮೂಲಕ ಸುಕೃತಿಗಳನ್ನು ಮಾಡುವಂತೆ ಪ್ರೇರೇಪಿಸಲೆಂದು ಮನಃಪೂರ್ವಕವಾಗಿ ಹಾರೈಸುವೆ.


ವ್ಯಕ್ತಿತ್ವ ವಿಕಸನ : ಭಾರತೀಯ ದೃಷ್ಟಿ
(Personality Development - Indian View)

ಸಂಪಾದಕ : ಡಾ.ಜಿ.ಎನ್.ಭಟ್
ಪ್ರಸ್ತುತ ಲೇಖನದ ಲೇಖಕ : ದಿ. ಡಾ.ದಯಾನಂದ ಶಾನಭಾಗ
(ಈ ಲೇಖನದ ಒಟ್ಟು ಸಾರವನ್ನು ಬರೆದವರು : ತೇಜಸ್ವಿನಿ ಹೆಗಡೆ)

(ಚಿತ್ರ ಕೃಪೆ - ಗೂಗಲ್)

‘ವ್ಯಕ್ತಿತ್ವ-ವಿಕಸನ’ ಎಂಬ ವಿಷಯದ ಬಗ್ಗೆ ಮನುಷ್ಯರಾದ ನಾವು ಯೋಚಿಸುವಂತೆ ಪಶು-ಪಕ್ಷಿಗಳಾಗಲೀ ಹುಳ-ಹುಪ್ಪಡಿಗಳಾಗಲೀ ಯೋಚಿಸುವುದೂ ಇಲ್ಲ, ಚಿಂತಿಸುವುದೂ ಇಲ್ಲ. ಏಕೆಂದರೆ ಅವುಗಳಿಗೆ ಅದರ ಅಗತ್ಯವಿಲ್ಲ. ಅವುಗಳ ವಿಕಾಸ(ಬೆಳವಣಿಗೆ) ಅನಾಯಾಸವಾಗಿ ಆಗುತ್ತಲೇ ಇರುತ್ತದೆ. ಆದರೆ ಮನುಷ್ಯನ ಬದುಕಿನ ರೀತಿಯೇ ಬೇರೆ. ಅವನು ನೆಲದಲ್ಲಿ ನೆಲೆಸುವಂತೆ ನೀರಿನಲ್ಲೂ ಬದುಕಬಲ್ಲ. ಆಕಾಶದಲ್ಲೂ ಹಾರಾಡಬಲ್ಲ. ಮಾಂಸ ತಿಂದು ಅರಗಿಸಬಲ್ಲ. ಹುಲ್ಲು ತಿಂದೂ ಬದುಕಬಲ್ಲ. ಈತ ತ್ಯಾಗಿಯೂ ಆಗ ಬಲ್ಲ, ಭೋಗಿಯೂ ಆಗಬಲ್ಲ. ಪ್ರಾಣ ಕೊಡಬಲ್ಲ, ಪ್ರಾಣ ಕೊಳ್ಳಬಲ್ಲ. ತನ್ನ ಜೀವನವನ್ನು ರೂಪಿಸಬಲ್ಲನಷ್ಟೇ ಅಲ್ಲ ತನಗೆ ಬೇಕಾದ ಜಗತ್ತನ್ನೂ ನಿರ್ಮಿಸಬಲ್ಲ, ಕಟ್ಟಬಲ್ಲ, ಕೆಡವಬಲ್ಲ. ಇದು ಮನುಷ್ಯಜೀವನಕ್ಕೆ ಸಂಬಂಧಿಸಿದ ಸತ್ಯಸಂಗತಿ. ಇದನ್ನು ಭಾರತೀಯ ಋಷಿ-ಮುನಿಗಳು ಸಾವಿರಾರು ವರುಷಗಳ ಹಿಂದೆಯೇ ಕಂಡುಕೊಂಡರು. ಈ ಸತ್ಯವನ್ನಲ್ಲದೇ ನಮ್ಮ ಪೂರ್ವಜರು ಇನ್ನೊಂದು ಐತಿಹಾಸಿಕ ಸತ್ಯವನ್ನೂ ಅರಿತಿಕೊಂಡರು. ಅದೆಂದರೆ ವಿಶ್ವದ ಆರಂಭದಿಂದಲೂ ಇಡಿಯ ಜಗತ್ತಿನ ಆಗುಹೋಗುಗಳಿಗೆ ಮನುಷ್ಯನೇ ಕಾರಣ. ಜಗತ್ತಿನಲ್ಲಿ ಹಿಂದೆ ಆಗಿಹೋದ, ಇಂದಾಗುತ್ತಿರುವ, ಮುಂದೆ ಆಗಬಹುದಾದ ಉನ್ನತಿ-ಅವನತಿಗಳಿಗೆಲ್ಲಾ ಮನುಷ್ಯನೇ ಕಾರಣ. ಅದಕ್ಕಾಗಿಯೇ ಪೂರ್ವಜರು-ಭಾರತೀಯರು-ಮಾನವರು ದಾನವತ್ವದ ಕಡೆ ಹೊರಳದೇ ದೇವತ್ವದ ಕಡೆ ಮುನ್ನಡೆಯುವಂತೆ ಅವನ ಬೆಳವಣಿಗೆಯ ಅಂದರೆ ‘ವ್ಯಕ್ತಿತ್ವ ವಿಕಸನ’ದ ರಾಜಮಾರ್ಗ ಕಂಡುಹಿಡಿದರು.

‘ವ್ಯಕ್ತಿತ್ವ-ವಿಕಸನ’ ಎಂಬುದನ್ನು ತಿಳಿಯಬೇಕಾದರೆ ‘ವ್ಯಕ್ತಿತ್ವ’ ಎಂಬುದರ ಅರ್ಥ ತಿಳಿಯಬೇಕಾಗುತ್ತದೆ. ಮನುಷ್ಯನ ವ್ಯಕ್ತಿತ್ವದಲ್ಲಿ ಪ್ರಮುಖವಾಗಿ ಮೂರು ಅಂಗಗಳು ಕೂಡಿಕೊಂಡಿವೆ. ಅವುಗಳೆಂದರೆ ಬುದ್ಧಿ, ಮನಸ್ಸು ಮತ್ತು ಇಂದ್ರಿಯಗಳುಳ್ಳ ದೇಹ. ಇವುಗಳಲ್ಲಿ ಬುದ್ಧಿ ಒಂದೆಡೆಯಿದ್ದರೆ ಇಂದ್ರಿಯಗಳು ಇನ್ನೊಂದು ಕಡೆ ಇವೆ. ಬುದ್ಧಿಯಲ್ಲಿ ಅರಿವು ತುಂಬಿ ಅದು ಪ್ರಬಲವಾದರೆ ಅದರಂತೆ ಮನಸ್ಸು-ಇಂದ್ರಿಯಗಳು ಕಾರ್ಯಪ್ರವೃತ್ತವಾಗುತ್ತವೆ. ಹೀಗಾದಾಗಲೇ ಮಾನವನು ದೇವನಾಗುವ ಸಾಧ್ಯತೆ ಅಧಿಕವಾಗುತ್ತದೆ. ತದ್ವಿರುದ್ಧವಾಗಿ, ಇಂದ್ರಿಯಗಳು ಬಲಶಾಲಿಯಾಗಿ ಅವುಗಳ ಇಚ್ಛೆಯಂತೆ ಮನಸ್ಸು-ಬುದ್ಧಿಗಳೆರಡೂ ಕೆಲಸ ಮಾಡತೊಡಗಿದರೆ ಮಾನವನು ದಾನವನಾಗುವ ಸಂಭವ ಬಲಿಯುತ್ತದೆ. ಶಾರೀರಿಕ ಅಂಗವೈಕಲ್ಯದಿಂದ ಮನುಷ್ಯನು ವಿಕಲಾಂಗನಾಗುವುದಿಲ್ಲ. ಆದರೆ ಬೌದ್ಧಿಕ ವೈಕಲ್ಯದಿಂದ ಸಂಪೂರ್ಣ ವಿಕಲಾಂಗನಾಗಿ ಪಶುವೇ ಆಗಿಬಿಡುತ್ತಾನೆ. ಆದುದರಿಂದ ಹಿತಕಾರಕ ವ್ಯಕ್ತಿತ್ವ ವಿಕಸನವಾಗಬೇಕಾದರೆ ಬುದ್ಧಿ ಬಲಶಾಲಿಯಾಗುವಂತೆ ಪ್ರಯತ್ನವಾಗಬೇಕು. ಒಳಿತು-ಕೆಡುಕುಗಳ ಅರಿವನ್ನು ತುಂಬಿದ ಬುದ್ಧಿಗೇ ‘ವಿವೇಕ’ವೆನ್ನುವರು. ಇಂತಹ ಬುದ್ಧಿಯೇ ಬಲಶಾಲಿ.

ಹಾಗಾದರೆ ಬುದ್ಧಿಯಲ್ಲಿ ಎಂತಹ ಅರಿವನ್ನು ತುಂಬಬೇಕೆಂಬುದನ್ನು ಯೋಚಿಸಬೇಕಾಗಿದೆ.
೧. ಮೊದಲನೆಯದಾಗಿ : ಮನುಷ್ಯನಾಗಿ ಜನ್ಮ ಪಡೆದ ಪ್ರತಿಯೊಬ್ಬ ಜೀವಿಯು ತಾನು ಸಂಪೂರ್ಣ ಮಾನವ ಸಮಜದ ಒಂದು ಅವಿಭಾಜ್ಯ ಅಂಗವೆಂಬುದರ ಅರಿವನ್ನು ಬುದ್ಧಿಯಲ್ಲಿ ತುಂಬಿಕೊಳ್ಳಬೇಕು. ನಮ್ಮ ಹಿರಿಯರು ಸಾರಿ ಸಾರಿ ಹೇಳಿದ್ದೂ ಇದನ್ನೇ ‘ವಸುಧೈವ ಕುಟುಂಬಕಮ್’.

೨. ಎರಡನೆಯದಾಗಿ : ಮನುಷ್ಯನನ್ನು ‘ಸಾಮಾಜಿಕ ಪ್ರಾಣಿ’ (Social Animal) ಎಂದು ಗುರುತಿಸಲಾಗಿದೆ. ಅಂದರೆ ಸಮಾಜದಲ್ಲಿದ್ದು, ಸಮಾಜದ ಸಹಾಯದಿಂದ, ಸಮಾಜದೊಡನೆ ಬದುಕುವ, ಬದುಕಬೇಕಾದ ಪ್ರಾಣಿಯು. ಸಮಾಜವನ್ನು ಬಿಟ್ಟು ಬದುಕುವುದು ಅಸಾಧ್ಯ,ಅವನ ಜೀವನದ ಬಹುಪಾಲು ಸಂಗತಿಗಳು ಅವನಿರುವ ಸಮಾಜದಿಂದಲೇ ನಿರ್ಧರಿಸಲ್ಪಡುತ್ತವೆ.

೩. ಮೂರನೆಯದಾಗಿ : ಮನುಷ್ಯನು "ತಾನು ಇತರರೊಡನೆ ಬದುಕಬೇಕು" ಅಂದರೆ "ತಾನೂ ಬದುಕಬೇಕು, ಇತರರನ್ನೂ ಬದುಕಬಿಡಬೇಕು" ಎಂಬ ನೀತಿಯನ್ನು ಬುದ್ಧಿಯಲ್ಲಿ ತುಂಬಿಕೊಂಡು ಅದನ್ನು ಕೃತಿಯಲ್ಲಿಳಿಸಬೇಕು. ಇದೆಲ್ಲ ದೇವರ ದೇಣಿಗೆ. ಮನುಷ್ಯರೆಲ್ಲ ಹಂಚಿಕೊಂಡು ತಿನ್ನಬೇಕು. ದೇವರು ನೀಡಿದ್ದನ್ನು ಇತರರಿಗೆ ಕೊಡದೇ ತಿನ್ನುವವನು ಕಳ್ಳ ಎನ್ನುವ ಅರಿವನ್ನು ಬುದ್ಧಿಯಲ್ಲಿ ತುಂಬಿಕೊಳ್ಳಬೇಕು. ಇದಕ್ಕೆ ಪೂರಕವಾಗಿದೆ ಬೇಂದ್ರೆಯವರ ಸೂತ್ರವಾಕ್ಯವೊಂದು - "ಸಮರಸವೇ ಜೀವನ".

ಈ ಸತ್ಯ ಪ್ರತಿಯೊಬ್ಬನ ಬುದ್ಧಿಯಲ್ಲಿ ಆಳವಾಗಿ ಬೇರೂರಿದಾಗಲೇ ಅವನ ಸಮರ್ಪಕ ಹಾಗೂ ಹಿತಕಾರಕ ವ್ಯಕ್ತಿತ್ವ-ವಿಕಸನ ಸಾಧ್ಯ. ಈ ಸತ್ಯಗಳಿಂದ ನಮ್ಮನ್ನು ವಿಮುಖಗೊಳಿಸುವ, ಮಾನವನಿಗೆ ಕೇಡುಂಟುಮಾಡುವ ಶಕ್ತಿಗಳು ಅಥವಾ ಶತ್ರುಗಳು ಅವನ ದೇಹದಲ್ಲೇ ಮನಮಾಡಿಕೊಂಡಿವೆ. ಅವೇ ಅರಿಷಡ್ವೈರಿಗಳು. (ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರ) ಈ ಒಳವೈರಿಗಳಿಗೆ ಸೋತ ಬುದ್ಧಿಯಿಂದಾಗಿ ಮನುಷ್ಯನು ಇಂದ್ರಿಯಗಳಿಗೆ ಗುಲಾಮನಾಗುತ್ತಾನೆ. ಅವನ ಅಧಃಪತನ ನಿಶ್ಚಿತವಾಗುತ್ತದೆ. ಜಿತೇಂದ್ರಿಯನು ಎಲ್ಲ ಗಳಿಸಿದರೆ, ಅಜಿತೇಂದ್ರಿಯನು ಎಲ್ಲ ಕಳಕೊಳ್ಳುತ್ತಾನೆ. ಹಾಗಾಗಿ ಇಂದ್ರಿಯ ನಿಗ್ರಹವು ವ್ಯಕ್ತಿತ್ವ-ವಿಕಸನದ ಒಂದು ಭಾಗವೇ ಆಗಿದೆ. ಹೀಗೆ ಸಕಲರ ಹಿತಕ್ಕಾಗಿ, ಎಲ್ಲರೊಡನೆ ಬಾಳುವ ಅಗತ್ಯವಿರುವ ಮನುಷ್ಯನು ಸಫಲ ಸುಖೀಜೀವನಕ್ಕಾಗಿ ಅನುಸರಿಸಬೇಕಾದ ಸೂತ್ರವೊಂದನ್ನು ನಮ್ಮ ಹಿರಿಯರು ದಯಪಾಲಿಸಿದ್ದಾರೆ. ಅದೆಂದರೆ, "ತನ್ನಂತೆ ಪರರ ಬಗೆ". ಈ ರೀತಿಯ ಬೌದ್ಧಿಕ ವಿಕಾಸಕ್ಕೆ, ವ್ಯಕ್ತಿತ್ವ-ವಿಕಸನಕ್ಕೆ ಅನುಕೂಲವಾಗುವಂತೆ ನಮ್ಮ ಹಿರಿಯರು ‘ಧರ್ಮದ’ ಬೋಧೆ ಮಾಡಿದರು. ಈ ಸಂದರ್ಭದಲ್ಲಿ ‘ಧರ್ಮದ’ ನಿಜವಾದ ಅರ್ಥ ತಿಳಿದುಕೊಳ್ಳಲೇಬೇಕು. ಇಂದು ಧರ್ಮವೆಂದರೆ ಕೇವಲ ‘religion’ ಅಂದರೆ ‘ದೇವರಲ್ಲಿ ನಂಬಿಕೆ’ ‘ಸಾಂಪ್ರದಾಯಿಕ ಪೂಜಾ-ಪಾಠ’ ಎಂದು ಮುಂತಾಗಿ ತಪ್ಪಾಗಿ ಅರ್ಥ ಮಾಡಿಕೊಂಡು ಧರ್ಮದ ಬಗೆಗೆ ಅಸಂಬದ್ಧ ಪ್ರಲಾಪ ಮಾಡುವವರು ಇದ್ದಾರೆ, ಹಿಂದೆಯೂ ಅಂತವರಿದ್ದರು; ಮುಂದೆಯೂ ಇರಬಹುದು. ಆದರೆ ನಮ್ಮ ಪೂರ್ವಿಕರ ಪ್ರಕಾರ ಧರ್ಮವೆಂದರೆ ಮನುಷ್ಯನಿಗೆ ‘ಮನುಷ್ಯತ್ವ’ ನೀಡುವುದು. ನಿಜವಾದ ಧರ್ಮದ ಅರ್ಥ ವಿಶಾಲವಾದುದು. ಮಾನವ ಜೀವನದ ಎಲ್ಲ ಅಂಗಗಳನ್ನೂ ಧರ್ಮವು ವ್ಯಾಮಿಸಿಕೊಂಡಿದೆ. ಅದು ಸರ್ವಾಧಾರ, ಸರ್ವವ್ಯಾಪಿ, ಸರ್ವಸುಖಪ್ರದ, ಸರ್ವತ್ರ ಶಾಂತಿಪ್ರಸಾರಕ. ಅದುವೇ ಮಾನವಧರ್ಮ, ವಿಶ್ವಧರ್ಮ, ಸನಾತನ ಧರ್ಮ, ಚಿರಂತನಧರ್ಮ, ಭಾರತೀಯಧರ್ಮ. ಅಂತಹ ಧರ್ಮದ ನಿಯಮಗಳು ಇಂತಿವೆ - ಅಹಿಂಸೆ, ಸತ್ಯ, ಕಳ್ಳತನವನ್ನು ಮಾಡದಿರುವುದು, ಶುದ್ಧಿ (ಮಾತು, ಶರೀರ, ಮನಸ್ಸು ಮತ್ತು ಕರ್ಮ), ಇಂದ್ರಿಯ ನಿಗ್ರಹ. ಮಾನವಧರ್ಮದ ಈ ನಿಯಮಗಳನ್ನು ಅರ್ಧೈಸಿ ಕೃತಿಯಲ್ಲಿಳಿಸಬೇಕು. ಆಗಲೇ ಸಂಪೂರ್ಣ ವ್ಯಕ್ತಿತ್ವ-ವಿಕಸನ ಸಾಧ್ಯ.

ವಿಕಸಿತ ವ್ಯಕ್ತಿತ್ವದ ಗುಣಮಟ್ಟ ಅಳೆಯುವುದು ಹೇಗೆ? ಅದು ಹಿತಕಾರಕವೋ ಅಹಿತಕಾರಕವೋ ಎಂದು ನಿರ್ಧರಿಸುವುದು ಹೇಗೆ? ಅದಕ್ಕೆ ತಕ್ಕ ಮಾನದಂಡದ ಬಗೆಗೂ ನಮ್ಮ ಹಿರಿಯರು ಯೋಚಿಸಿದ್ದಾರೆ. ಅದೇನೆಂದರೆ ‘ಬಿತಿದ್ದನ್ನು ಬೆಳೆದುಕೊ’, ’ಸತ್ಕೃತಿಯಿಂದ ಸುಖಫಲ, ಕುಕರ್ಮದಿಂದ ಕಹಿಫಲ’ - ಹೀಗೆ ನಮ್ಮ ಸುಖ-ದುಃಖಗಳಿಗೆ ನಮ್ಮ ಕೃತಿಯೇ ಕಾರಣ. ಆದುದರಿಂದ ವಿಕಸಿತ ವ್ಯಕ್ತಿತ್ವದಿಂದ ಹಿತವಾಗಬೇಕಾದರೆ ಅದು ಕೃತಿರೂಪ ಧರಿಸಿ ಪ್ರಕಟವಾಗಬೇಕು. ಹಿತಕಾರಕ ವ್ಯಕ್ತಿತ್ವ-ವಿಕಸನವಾದವನು ಸುಖಕಾರಕ ಸತ್‌ಕೃತಿ ಗೈದು ತೋರಿಸಬೇಕು. ಕೃತಿಯೇ ಒಬ್ಬನ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ಕೃತಿಯಿಂದಲೇ ವಿಕಸಿತ ವ್ಯಕ್ತಿತ್ವವನ್ನು ಅಳೆಯುವುದು ಸಾಧ್ಯ. ಹಾಗಿದ್ದರೆ ಸತ್‌ಕೃತಿಯನ್ನು ಪರೀಕ್ಷಿಸುವುದು ಹೇಗೆ? ಎನ್ನುವ ಸಂದೇಹ ತಲೆದೋರಬಹುದು. ಸತ್‌ಕೃತಿಯನ್ನು ಮೂರು ವಿಧವಾಗಿ ಪರೀಕ್ಷಿಸಿ ನಿರ್ಧರಿಸಲು ಬರುತ್ತದೆ.

೧. ಅದು ಎಲ್ಲರಿಗೂ ತಿಳಿಯಬೇಕೆಂದು ನಾವು ಬಯಸಬೇಕು
೨. ಅದನ್ನು ಮಾಡುವಾಗ ನಾವು ನಾಚಿಕೆ ಪಡಬಾರದು
೩. ಅದರಿಂದ ನಮ್ಮ ಅಂತರಾತ್ಮ ಸಂತುಷ್ಟವಾಗಬೇಕು. - ಇಂತಹ ಕೃತಿಯನ್ನೇ ಸತ್‌ಕೃತಿಯೆನ್ನುತ್ತೇವೆ.

ಅಂತಿಮವಾಗಿ : ನಮ್ಮ ಹಿರಿಯರು(ಪೂರ್ವಜರು) ಕಂಡು ಹಿಡಿದ ಇನ್ನೊಂದು ಸತ್ಯ ಹೀಗಿದೆ - ಮಾನವರೆಲ್ಲ ಪುಣ್ಯದ ಫಲವಾದ ಸುಖ ಬಯಸುತ್ತಾರೆ; ಆದರೆ ಪುಣ್ಯ ಕಾರ್ಯ ಮಾಡಬಯಸುವುದಿಲ್ಲ. ಅಂತೆಯೇ ಪಾಪದ ಫಲವಾದ ದುಃಖ ಬಯಸುವುದಿಲ್ಲ; ಆದರೆ ಪಾಪದ ಕಾರ್ಯ ಮಾಡೇ ಮಾಡುತ್ತಾರೆ. ಅಂದರೆ ಬೇವಿನ ಮರದಿಂದ ಮಾವು ಪಡೆಯ ಬಯಸುತ್ತಾರೆ. ಮನುಷ್ಯ ಜನಿಸಿದ್ದು ಸಾಯುವುದಕ್ಕಲ್ಲ, ಸಾಧಿಸಲಿಕ್ಕೆ. ಜನ್ಮ-ಮೃತ್ಯುಗಳು ಮನುಷ್ಯನ ಕೈಯಲ್ಲಿಲ್ಲವಾದರೂ ಅವುಗಳ ನಡುವಿನ ಜೀವನ-ಸಾಧನೆ ಪೂರ್ಣವಾಗಿ ಅವನ ಕೈಯಲ್ಲಿದೆ. ಅದಕ್ಕಾಗಿ ಅವನ ವ್ಯಕ್ತಿತ್ವ ಸುಯೋಗ್ಯವಾಗಿ ವಿಕಸಿತವಾಗಬೇಕು. ಅದುವೆ ನಿಜವಾದ ವ್ಯಕ್ತಿತ್ವ-ವಿಕಸನ. ಅದನ್ನು ಕುರಿತು ಭಾರತೀಯ ದೃಷ್ಟಿ ಸ್ಪಷ್ಟವಾಗಿದೆ. ವ್ಯಕ್ತಿತ್ವ-ವಿಕಸನದಿಂದಲೇ ಮಾನವ ಮಹಾಮಾನವನಾಗಬಲ್ಲ, ವಿಶ್ವಮಾನವನಾಗಬಲ್ಲ, ದೇವನಾಗಬಲ್ಲ.

---***---

ವಿಕೃತನಾಮ ಸಂವತ್ಸರ ಎಲ್ಲರೊಳಗಿನ ಕೆಡುಕನ್ನು ಹೊರಹಾಕಿ ಸುವಿಚಾರಗಳನ್ನು ತುಂಬಿ, ವಿವೇಕವನ್ನು ಕೊಟ್ಟು ಸತ್‌ಕೃತಿಗಳಿಗೆ ದೀವಿಗೆಯಾಗಲೆಂದು ಪ್ರಾರ್ಥಿಸುವೆ.

ಎಲ್ಲರಿಗೂ ಮತ್ತೊಮ್ಮೆ ಹೊಸವರುಷದ ಹಾಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.


-ತೇಜಸ್ವಿನಿ ಹೆಗಡೆ.

19 ಕಾಮೆಂಟ್‌ಗಳು:

Dr.D.T.Krishna Murthy. ಹೇಳಿದರು...

ಯುಗಾದಿಯ ಶುಭ ಸಂಧರ್ಭದಲ್ಲಿ ವ್ಯಕ್ತಿ ವಿಕಸನದ ಬಗ್ಗೆ ಅರಿವು ಮೂಡಿಸಿದಕ್ಕೆ ಧನ್ಯವಾದಗಳು.ತಮಗೆಲ್ಲಾ ಯುಗಾದಿಯು ಶುಭ ತರಲಿ .

Dr.D.T.Krishna Murthy. ಹೇಳಿದರು...

vyakti vikasanada bagge lekhana bahala chennaagi moodibandide.ee yugaadi nammalli mattastu olleya badalaavanegalannu tarali endu aashisuttaa nimmellarige yugaadiya
shubha haraikegalu.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) ಹೇಳಿದರು...

happy ugaadi

Subrahmanya ಹೇಳಿದರು...

ಎಲ್ಲರೂ ಅರಿವು ಮೂಡಿಸಿಕೊಳ್ಳಬೇಕಾಗಿರುವ ವಿಚಾರವೊಂದನ್ನು ಹೊಸವರ್ಷಕ್ಕೆ ನೀಡಿದ್ದಕ್ಕೆ ಧನ್ಯವಾದ ನಿಮಗೆ. ಮತ್ತೆ ಶುಭಾಶಯಗಳು.

umesh desai ಹೇಳಿದರು...

ಮೇಡಂ ಯುಗಾದಿ ಹಬ್ಬದ ಶುಭಾಶಯಗಳು..ಲೇಖನ ಚೆನ್ನಾಗಿದೆ.ತಿಳಿದುಕೊಳ್ಳೋ ವಿಷಯ ಬಹಳ ಇದೆ.
ನಾನೂ "ಚೈತ್ರ ಬರುವ ಕಾಲದಿ..." ಬರೆದು ಪೋಸ್ಟಮಾಡಿರುವೆ..ಓದಿ ಅಭಿಪ್ರಾಯ ತಿಳಸಿ...usdesai.blogspot.com

ಮನಸು ಹೇಳಿದರು...

Happy Ugadi!!!

ಸವಿಗನಸು ಹೇಳಿದರು...

ಸೊಗಸಾದ ಲೇಖನ...
ನಿಮಗೆಲ್ಲರಿಗೂ ಯುಗಾದಿಯ ಶುಭಹಾರೈಕೆಗಳು....
ಹೊಸ ವರುಷ ಇನ್ನಷ್ಟು ಹರುಷವನ್ನು ತರಲಿ...

sunaath ಹೇಳಿದರು...

ತೇಜಸ್ವಿನಿ,
ಶ್ರೀ ದಯಾನಂದ ಶಾನಭಾಗರ ಮೌಲಿಕ ಸಂದೇಶದ ಸಾರವನ್ನು ನಮಗೆ ತಲಿಪಿಸಿದ್ದಕ್ಕಾಗಿ ಧನ್ಯವಾದಗಳು.
ನಿಮಗೆ ಯುಗಾದಿಯ ಶುಭಾಶಯಗಳು.

ದಿನಕರ ಮೊಗೇರ ಹೇಳಿದರು...

tumbaa sundara lekhana....... dhanyavaada namma jote hanchikondiddakke.... nimagoo nimma kutumbakkoo yugaadi habbada shubhaashaya......

V.R.BHAT ಹೇಳಿದರು...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

PARAANJAPE K.N. ಹೇಳಿದರು...

ಯುಗಾದಿಯ ಸುಸ೦ದರ್ಭದಲ್ಲಿ ಅರ್ಥಪೂರ್ಣ ಲೇಖನ ಪ್ರಕಟಿಸಿದ್ದೀರಿ. ತು೦ಬ ಚೆನ್ನಾಗಿದೆ. ನಿಮಗೆ ಮತ್ತು ನಿಮ್ಮ ಕುಟು೦ಬಕ್ಕೆ ಯುಗಾದಿ ಶುಭಾಶಯ ಗಳು.

ಸೀತಾರಾಮ. ಕೆ. / SITARAM.K ಹೇಳಿದರು...

ಯುಗಾದಿ ಹಬ್ಬದ ಶುಭಾಶಯಗಳು. ಹೊಸವರ್ಷದ ಪ್ರಾರ೦ಭಕ್ಕೆ "ವ್ಯಕ್ತಿ ವಿಕಸನದ ಅತ್ಯುತ್ತಮ ಸಾರ"ವನ್ನು ಹಿಡಿದು ಕೊಟ್ಟಿದ್ದಕ್ಕೆ ಧನ್ಯವಾದಗಳು. ಉಪಯುಕ್ತ ಅರ್ಥಪೂರ್‍ಣ ಲೇಖನ."ಶಾರೀರಿಕ ಅಂಗವೈಕಲ್ಯದಿಂದ ಮನುಷ್ಯನು ವಿಕಲಾಂಗನಾಗುವುದಿಲ್ಲ. ಆದರೆ ಬೌದ್ಧಿಕ ವೈಕಲ್ಯದಿಂದ ಸಂಪೂರ್ಣ ವಿಕಲಾಂಗನಾಗಿ ಪಶುವೇ ಆಗಿಬಿಡುತ್ತಾನೆ", "ಮನುಷ್ಯ ಜನಿಸಿದ್ದು ಸಾಯುವುದಕ್ಕಲ್ಲ, ಸಾಧಿಸಲಿಕ್ಕೆ" ಸಾಲುಗಳು ತು೦ಬಾ ಇಷ್ಟವಾಯಿತು.

ಮನಸಿನಮನೆಯವನು ಹೇಳಿದರು...

'ತೇಜಸ್ವಿನಿ ಹೆಗಡೆ-' ಅವರಿಗೆ "ಉಗಾದಿಯ ಶುಭಾಶಯಗಳು.."

ಹೊಸ ವರ್ಷ ಉಗಾದಿಯಲ್ಲಿ ಹೊಸತನ್ನು ಕಾಣಬಯಸುವವರಿಗೆ ಉತ್ತಮ ಸಂದೇಶ..
ಮನವೆಂಬ ರಥದ ಅರಿಷಡ್ವರ್ಗಗಳ ಕುರಿತೂ ತಿಳಿಹೇಳಿರುವಿರಿ..


ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ..: http://manasinamane.blogspot.com (ಮಾರ್ಚ್ ೧೫ ರಂದು ನವೀಕರಿಸಲಾಗಿದೆ)

AntharangadaMaathugalu ಹೇಳಿದರು...

ತೇಜಸ್ವಿನಿಯವರೇ..
ಹೊಸ ವರ್ಷದ ಆರಂಭವನ್ನು ಒಳ್ಳೆಯ ವಿಚಾರವಂತ ಲೇಖನದೊಂದಿಗೆ ಆರಂಭಿಸಿದ್ದೀರಿ.... ನಿಮಗೂ ನಿಮ್ಮ ಕುಟುಂಬದವರಿಗೂ ಉಗಾದಿಯ ಶುಭಾಶಯಗಳು...

ಜಲನಯನ ಹೇಳಿದರು...

ತೇಜಸ್ವಿನಿ...Sur Prize...ಬಹಳ ಚನ್ನಾಗಿದೆ..ನಿಜಾರ್ಥದ SIR-PRIZE ಇದು...ಮಾನವ ಸ್ವಜಾತಿವಿಕಾಸ (humanity ಮಾತು) ದಿಂದ ತನ್ನಜಾತಿ ವಿಕಾಸದತ್ತ ಹೊರಳಿದ್ದಾನೆ (religion and caste promotion)..ಇದು ಒಂದು ಅದಃಪತನದ ಸೂಚಕವಾದರೆ..ವೈಯಕ್ತಿಕ ಬೆಳವಣಿಗೆಯ ನೆಪದ ಸ್ವಾರ್ಥಸಾಧಕ ಬೆಳವಣಿಗೆ ಇನ್ನೊಂದು...ಇದರ ಮತ್ತೂ ಸೂಕ್ಷ್ಮ ಆಯಾಮ ವೆಂದರೆ...ಬೌದ್ಧಿಕ ಬೆಳವಣಿಗೆ ಇಂದ್ರಿಯನಿಗ್ರಹದೊಡನೆ ಆಗುವುದು ಅಥವಾ ಹಾಗಾಗದೇ ಇರುವುದರ ಘೋರಪರಿಣಾಮ....ಬಹಳ ಚನ್ನಾಗಿ ವಿವರಿಸಿದ್ದೀರಿ...ಮೂಲ ಲೇಖನ ಹೇಗೋ ಗೊತ್ತಿಲ್ಲ ಆದರೆ ಉತ್ತಮ ವಿಚಾರಗಳ ಮಂಡನೆ ಅದಾಗಿರುತ್ತೆ ಎನ್ನುವುದನ್ನು ನಿಮ್ಮ ಲೇಖನ ಸಾರಿ ಹೇಳುತ್ತಿದೆ....ಅಭಿನಂದನೆ.

ಸಾಗರಿ.. ಹೇಳಿದರು...

ತೇಜಸ್ವಿನಿಯವರೇ,
ಯುಗಾದಿಯ ಶುಭಾಷಯಗಳು. ಒಳ್ಳೆಯ ಸಂದೇಶ ಸಾರುವ ಲೇಖನ, ಮೂಲ ಲೇಖಕರಿಗೂ ಮತ್ತು ನಿಮಗೂ ಧನ್ಯವಾದಗಳು

ತೇಜಸ್ವಿನಿ ಹೆಗಡೆ ಹೇಳಿದರು...

ಡಾ.ಶಾನಭಾಗರ ಸುಂದರ ಹಾಗೂ ಮೌಲಿಕ ಸಂದೇಶ ಸಾರುವ ಈ ಲೇಖನದ ಸಾರಾಂಶವನ್ನು ಮೆಚ್ಚುಕೊಂಡು ಯುಗಾದಿಯ ಶುಭಾಶಯಗಳನ್ನಿತ್ತ ಎಲ್ಲರಿಗೂ ತುಂಬಾ ಧನ್ಯವಾದಗಳು.

ವಿಕೃತಿನಾಮ ಸಂವತ್ಸರ ಎಲ್ಲರಲ್ಲೂ ಸುವಿಚಾರಗಳನ್ನು ಬಿತ್ತಿ, ಸುಕೃತಿಗಳನ್ನೇ ಮಾಡುವಂತಾಗಲಿ, ವಿಕೃತಿ ಸರ್ವನಾಶವಾಗಲೆಂದು ಹಾರೈಸುವೆ.

ಹೊಸವರ್ಷದ ಹಾರ್ದಿಕ ಶುಭಾಶಯಗಳು.

ತೇಜಸ್ವಿನಿ.

ಸಾಗರದಾಚೆಯ ಇಂಚರ ಹೇಳಿದರು...

ಹೊಸ ವರುಷದ ಆರಂಬಕ್ಕೆ ಒಳ್ಳೆಯ ಬರಹ
ವ್ಯಕ್ತಿ ವಿಕಸನದ ಬಗೆಗೆ ಅರಿವು ಮೂಡಿಸಿದ್ದಿರಿ
ಹೊಸ ವರುಷ ಸದಾ ಒಳ್ಳೆಯದನ್ನೇ ಮಾಡಲಿ

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ನಿಮ್ಮ ಬ್ಲಾಗನ್ನು ಲಿಂಕಿಸಿಕೊಂಡಿದ್ದರಿಂದ ಮತ್ತು ಸ್ವಲ್ಪ ಬಿಡುವಾದ್ದರಿಂದ ಹಳೆಯ ಲೇಖನಕ್ಕೆ ಬಂದೆ. ಯುಗಾದಿಗೆ ಬರೆದ ಲೇಖನವನ್ನು ತಡವಾಗಿ ಓದಿದಂತಾಯಿತು...
ಇರಲಿ ತಡವಾಗಿ ಯುಗಾದಿಯ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ..