ಗುರುವಾರ, ಮಾರ್ಚ್ 25, 2010

ಹರಿವ ಲಹರಿಯೊಡನೆ...

ದೂರದಾಗಸದಿಂದೆಲ್ಲೋ ಎದ್ದು ಬರುವ ಕರಿಮೋಡವ ನೋಡಿದಾಗಲೆಲ್ಲ ನಿನ್ನೊಡನೆ ನನಗಿರುವ ಮುನಿಸೇ ನೆನಪಾಗುತ್ತದೆ ನೋಡು. ಕ್ರಮೇಣ ದಟ್ಟೈಸುವ ಕಪ್ಪು ಮೋಡ ಮತ್ತಷ್ಟು ದೊಡ್ಡದಾಗಿ, ಹರವಿ, ಸೂರ್ಯನಿಗೇ ಮುಸುಕು ಹಾಕಿ ಬೀಗಿದಾಗ ನಿನ್ನೊಳಗಿನ ಅಹಂ ಕೂಡ ನೆನಪಾಗುವುದು. ತನ್ನೊಳಗೆ ತುಂಬಿರುವ ತುಂತುರು ಹನಿಗಳ ಘನ ಭಾರವೇ ತಮ್ಮ ಅಸ್ತಿತ್ವಕ್ಕೆ ಕಾರಣವೆಂದರಿಯದೆಯೇ ಮೆರೆಯುವ ಈ ಮೋಡಕ್ಕೆ ಪ್ರತಿ ಸಲವೂ ಮೋಸವೇ ಆಗುವುದು. ಹೆಚ್ಚು ಭಾರ ತಾಳಲಾಗದೇ ಸೋತು ನೀರಾಗಿ ಭುವಿಯೊಳಗೆ ಇಳಿದು ಗುಪ್ತಗಾಮಿನಿಯಾಗುವಾಗ, ಹರಿದು ತೊಳೆದುಹೋಗುವಾಗ ಎಲ್ಲಿಯ ಕರಿಮೋಡ? ಎಲ್ಲಿಯ ಅಹಂ?! ಈ ಅಹಂ ಶುರುವಾಗಿರುವುದು ಎಲ್ಲಿಂದ ಎನ್ನುವುದರ ಬಗ್ಗೆ ದೊಡ್ಡ ಸಂಶಯವಿದೆ ನನಗೆ. ಹರಿವ ತೊರೆಯನಾರಿಗೂ ಬಂಧಿಸಲಾಗದೆಂದು ಬೀಗುವ ಭುವಿಯೇ? ಆ ನೀರನ್ನೇ ಸ್ಟ್ರೋದಂತೇ ತುಸುವೇ ಹೀರಿ ಸೆಳೆದುಕೊಂಡು ಮೈ ಬೆಳೆಸಿಕೊಳ್ಳುವ ಕರಿ ಮೋಡವೇ? ಅಲ್ಲಿ ನಾ ನಿಲ್ಲಲಾರೆ, ಇಲ್ಲಿ ಹೆಚ್ಚು ಬಾಳಲಾರೆ ಎಂಬಂತೆ ಭುವಿಯಿಂದ ಬಾನಿಗೆ, ಬಾನಿಂದ ಮರಳಿ ಭುವಿಗೆ ಚಕ್ರದಂತೇ ತಿರುಗುವ ಆ ಮಳೆ ಹನಿಗೇ? ಊಹೂಂ... ಇದರ ಬಗ್ಗೆ ಉತ್ತರಿಸುವುದು ಅಸಾಧ್ಯವೇ ಸರಿ. ಆದರೆ ಮೋಡದೊಳಗೆ ಮರೆಯಾಗಿಯೂ ಮರೆಯಾಗದಂತಿದ್ದು, ನಾನಿಲ್ಲದಿದ್ದರೆ ನಿಮ್ಮಾಟಗಳೇನೂ ನಡೆಯದು ಎಂದು ಕಳ್ಳ ನಗು ಬೀರುವ ರವಿಯನ್ನು ಮಾತ್ರ ಮರೆಯುವಂತಿಲ್ಲ.

ಸುಖಾಸುಮ್ಮನೆ ನನ್ನ ರೇಗಿಸಿ, ಒಳಗಿನ ಅರಿಷಡ್ವೈರಿಗಳಗೆಲ್ಲಾ ಹಿರಿಯಪ್ಪನಾದ ಕ್ರೋಧವನ್ನೇ ಬಡಿದೆಬ್ಬಿಸಿ, ಎಲ್ಲವನ್ನೂ ನಾ ಹೊರ ಕಾರಿದ ಮೇಲೆ ಬಿಮ್ಮನೆ ಸುಮ್ಮನಾಗುವ, ನನ್ನೊಳಗಿನ ಕೋಪವನ್ನು ಕಂಡು ಹೀಯಾಳಿಸಿ ಗೆದ್ದೆನೆಂದು ಬೀಗುವ ನಿನ್ನ ಅಹಂ ಕೂಡ ಹೀಗೇ ಅಲ್ಲವೇ? ಆದರೆ ನನ್ನೊಳಗಿನ ಭಾವಗಳು ಹಾಗೂ ಅವುಗಳನಾಳುವ ಈ ಮನಸು - ಇವು ಮಾತ್ರ ನನ್ನ ಹೆಡ್ಡುತನವನ್ನು ನೆನೆಸಿ ನೆನೆಸಿ ನಗುತ್ತವೆ ಪ್ರತಿಬಾರಿಯೂ. "ತೀರುತಿರುವ ಹರುಷದಂತೇ ಆರುತಿದ್ದ ದೀಪವು.." ಎಂಬ ಸಾಲುಗಳನ್ನು ನೆನೆದಾಗಲೆಲ್ಲಾ ಅಸಹನೆಯ ಹೊಗೆ ದಟ್ಟವಾಗುವಂತೇ....ನನ್ನ ನೆಚ್ಚಿನ ಹಾಡಾದ-
 "हम खुशी के चाह मे हर खुशी से दूर हॊगये,
डूंढने चले थे जिंदगि, जिंदगी से दूर हॊगयॆ..." ನೆನಪಾಗಿ, ರವಿಯ ಶ್ರೇಷ್ಠತೆಯೂ, ನೀರ ಹನಿಗಳ ಅಲ್ಪತೆಯೂ ಅರಿವಾಗುತ್ತದೆ. ಮನಸು ಮೃದುವಾಗುತ್ತದೆ...ಮುನಿಸು ನೀರಾಗಿ ಕರಗಿಹೋಗುತ್ತದೆ. ಎಂದೂ ಕಾಣದಂಥ ಕನಸೊಂದು ನನ್ನ ಮನದ ಮೂಲೆಯಲ್ಲೆಲ್ಲೋ ಅಡಗಿರುವ ಬರಡು ನೆಲದ ಕಡಗೆ ತಣ್ಣನೆ ಹರಿದು, ಅಲ್ಲೇ ಆಳ ಅಗಲವ ತೋಡಿ, ಹೊಸ ಕನಸುಗಳ ಬೀಜ ಬಿತ್ತಿ, ಭರವಸೆಯ ಹಸಿರು ಪೈರನ್ನು ಬಿತ್ತುವ ಆ ಕಾಣದ ಕನಸಿಕೆ ಹಂಬಲಿಸಿದೆ ನನ್ನ ಮನ. ಉದಯರವಿ ಉಷೆಗಾಗಿ ಪ್ರತಿದಿನ ಕಾದು ಹಂಬಲಿಸಿ, ಇರುಳ ಪರದೆಯ ಸೀಳಿ ಬರುವಂತೆ....ನಿಶೆಯ ಸೇರುವ ತವಕದಲಿ, ರವಿಯನ್ನೇ ಮುಳುಗಿಸಿ ತೇಲುವ ಚಂದಿರನಂತೇ, ನೀ ಬರುವಾಗ ನಾನು.... ನೀ ಬರುವ ಹಾದಿಯಲ್ಲಿ ನಗೆಹೂವ ಹಾಸಿ, ದಂಡೆ ಮೇಲೆ ನಿಂತುಕೊಂಡು, ದಂಡೆ ಹೂವ ಮುಡಿದು ಕೊಂಡು ನಿನಗಾಗಿ ಕಾದಿರುವ ನನ್ನ ಕಿವಿಯೊಳಗೆ ಸಖೀಗೀತವನೊಮ್ಮೆ ಹಾಡಿಬಿಡು ಮೆಲ್ಲನೆ.

- ತೇಜಸ್ವಿನಿ

17 ಕಾಮೆಂಟ್‌ಗಳು:

Raghu ಹೇಳಿದರು...

ತುಂಬಾ ಚೆನ್ನಾಗಿ ಬಾವನೆಗಳನ್ನು ಪದಗಳಲ್ಲಿ ಹಿಡಿದಿದ್ದೀರಿ..
ನಿಮ್ಮವ,
ರಾಘು.

ಕ್ಷಣ... ಚಿಂತನೆ... bhchandru ಹೇಳಿದರು...

ತೇಜಸ್ವಿನಿ ಮೇಡಂ, ಹರಿವ ಲಹರಿಯೊಡನೆ ಸಂಭಾಷಿಸುತ್ತಾ... ಅಹಂ ನ ಹುಟ್ಟು-ಸಾವು ವಿಶ್ಲೇಷಿಸುವ ಪ್ರಯತ್ನ ಎನ್ನಬಹುದು. ಈ ಜಗತ್ತಿನಲ್ಲಿ ಇವೆಲ್ಲವೂ ಚಕ್ರತಿರುಗಿದಂತೆಯೇ ಹೌದು. ಎಲ್ಲ ಋತುಮಾನಗಳಲ್ಲೂ ಹೀಗೆಯೇ ಸಾಗುತ್ತಿರುವಂತೆ, ಜೀವನಚಕ್ರವೂ ತಿರುಗುತ್ತಿರುವುದು. ಕೊನೆಯಲ್ಲಿನ ಹಿಂದಿ ಗೀತೆಯು ಮಾರ್ಮಿಕವಾಗಿದೆ.

ಧನ್ಯವಾದಗಳು.

ಸೀತಾರಾಮ. ಕೆ. ಹೇಳಿದರು...

ಲಹರಿ ಅದ್ಬುತವಾಗಿದೆ. ನೀರ ಹನಿಗಳ -ಅಹ೦ ಹೋಲಿಕೆ, ಅಣುಕು ಸೂರ್ಯನ ಅಸ್ತಿತ್ವ, ಅಹಮಿಕೆಯ ನುಚ್ಚಾಗಿಸುವಿಕೆ, ಇತ್ಯಾದಿ ಉಪಮೇಯಗಳ ಗದ್ಯಲಹರಿ ಮತ್ತಿನ೦ತೇ, ಎತ್ತೆತ್ತೋ ಒಯ್ದು, ಚಿತ್ತಚಿ೦ತನೆಗೆ ತಿರುಗಿಸಿತು. ಚೆ೦ದದ ಹರವಿನ ಲೇಖನ. ಯೋಚಿಸಿದಷ್ಟು ಆಳ ವಿಸ್ತಾರವ ತೆರೆದುಕೊಳ್ಳುವದಲ್ಲದೆ ಮತ್ತೇ ಮತ್ತೇ ಓದಲು ಹಚ್ಚುತ್ತದೆ. ಓದು ಮನ ಮುದಗೊಳಿಸಿತು. ಧನ್ಯವಾದಗಳು.

ಗುರು-ದೆಸೆ !! ಹೇಳಿದರು...

'ತೇಜಸ್ವಿನಿ ಹೆಗಡೆ-' ಅವ್ರೆ..,

ನಿಮ್ಮ ಲೇಖನ,ಕವನಗಳನ್ನೆಲ್ಲ ಓದ್ತಿದೀನಿ.. ನೀವು ತುಂಬಾ ಚೆನ್ನಾಗಿ ಅಕ್ಷರಜೋಡನೆ ಮಾಡ್ತೀರಿ.. ಹೊಸ ಹೊಸ ಪದಗಳನ್ನು ಬಳಕೆ ಮಾಡ್ತೀರಿ..
ಸೊಗಸಾದ ಲೇಖನ.

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com

Subrahmanya ಹೇಳಿದರು...

ಬರವಣಿಗೆಯ ಲಹರಿ ಸೊಗಸಾಗಿದೆ..ಹಾಗೆಯೆ ಭಾವಗಳೂ ಕೂಡ..

PARAANJAPE K.N. ಹೇಳಿದರು...

ಲಹರಿ ಹರಿವನದಿಯ೦ತಿದೆ. ಚಿಂತನೆಗೆ ಹಚ್ಚುವ ಬರಹ

ಶಾಂತಲಾ ಭಂಡಿ ಹೇಳಿದರು...

ಪ್ರಿಯ ತೇಜು...
`ಹರಿವ ಲಹರಿ’ ‘ತುಂತುರು ಹನಿ’ಯಾಗಿ ಹರಿದ ರೀತಿ ಇಷ್ಟವಾಯ್ತು. ಒಂದೆರಡು ಬ್ಲಾಗುಗಳ ಶೀರ್ಷಿಕೆಯನ್ನು, ಆಗಲೇ ಕೆಲ ಬ್ಲಾಗುಗಳಲ್ಲಿ ಬಳಸಲಾದ ಸಾಲುಗಳನ್ನೇ ಕೊಂಚತಿರುಮುರುವಾಗಿಸಿ ನಿನ್ನದಾಗಿಸಿಕೊಂಡ ರೀತಿಯೂ ಇಷ್ಟವಾಯ್ತು. ಅರಿಯದೆಯೋ, ಅರಿತೋ ನನ್ನ ಬರಹಗಳಲ್ಲಿ ನಾನಾಗಲೇ ಬಳಸಿಕೊಂಡ ಸಾಲುಗಳನ್ನು, ನನ್ನ ಒಂದೆರಡು ಬರಹಗಳ ಶೀರ್ಷಿಕೆಯನ್ನು ನೀನು ಕೊಂಚ ಬದಲಾಯಿಸಿಕೊಂಡಾದರೂ ಬಳಸಿಕೊಂಡ ನಿನ್ನ ಪ್ರೀತಿಗೆ ಧನ್ಯವಾದ.

ಇವು ಮರೆಯಲಾಗದ ನೆನಪುಗಳಲ್ಲ ತೇಜು, ಈಗಲೂ ನನಸೇ. ಯಾವತ್ತೂ ಇಷ್ಟಪಟ್ಟಾಗೆಲ್ಲ ಬಂದು ಓದಿಕೊಳ್ಳುವ ಪ್ರೀತಿಯ ಹಕ್ಕು ಇದ್ದೇ ಇದೆ.

ಪ್ರೀತಿಯಿಂದ,
-ಶಾಂತಲಾ

ತೇಜಸ್ವಿನಿ ಹೆಗಡೆ ಹೇಳಿದರು...

ಪ್ರಿಯ ಶಾಂತಲಾ,

ನನ್ನ "ಹರಿವ ಲಹರಿಯೊಡನೆ..." ನಿನಗಿಷ್ಟವಾಗಿದ್ದಕ್ಕೆ ತುಂಬಾ ಧನ್ಯವಾದಗಳು.

ಇನ್ನು ಈ ಪೋಸ್ಟ್ ನನ್ನ ಸ್ವಂತದ್ದು. ಇದರಲ್ಲಿರುವ ಪ್ರತಿ ಅಕ್ಷರಜೋಡನೆಯೂ ನನ್ನದೇ. ನನ್ನ ಬರಹಗಳಿಗೆ ಇನ್ನೊಬ್ಬರ ಪೋಸ್ಟಿನ, ಬರವಣಿಗೆಯ ಹಂಗಾಗಲಿ, ನಕಲಾಗಲೀ ಬೇಕಾಗಿಲ್ಲ. ನೇರವಾಗಿಯೋ ಇಲ್ಲಾ ತಿರುಚಿಯೋ ಯಾರ ಪೋಸ್ಟ್ ಶೀರ್ಷಿಕೆಯನ್ನಾಗಲೀ ಸಾಲುಗಳನ್ನಾಗಲೀ ನಾನು ಎರವಲು ಪಡೆದಿಲ್ಲ ಎನ್ನುವ ಆತ್ಮವಿಶ್ವಾಸ, ನಂಬಿಕೆ ನನಗೆ ನನ್ನಮೇಲೆ ಹಾಗೂ ನನ್ನ ಎಲ್ಲಾ ಬರಹಗಳ ಮೇಲೂ ಇದೆ. ಎರಡು ವರುಷಗಳಿಂದಲೂ ನನ್ನ ಬರಹಗಳನ್ನೋದುತ್ತಿರುವ ಸಹಮಾನಸಿಗರಿಗೂ ಗೊತ್ತು ಇದು. ಈ ಪೋಸ್ಟ್ ಬರೆಯುವಾಗ ನನಗೆ ಬೇರೆಯವರ ಪೋಸ್ಟಿನ ಶೀರ್ಷಿಕೆಯಾಗಲೀ, ಬರಹವಾಗಲೀ ಒಂದಿನಿತೂ ನೆನಪಿರಲಿಲ್ಲ (ನಿನ್ನ ಪೋಸ್ಟ್‌ಗಳನ್ನೂ ಸೇರಿಸಿ..). ನನಗೆ ನನ್ನ ಪೋಸ್ಟ್ ಶೀರ್ಷಿಕೆಗಳೇ ನೆನಪಿರುವುದಿಲ್ಲ. ಅದೂ ಅಲ್ಲದೇ ಬೇರೆಯವರ ಬರಹಗಳನ್ನು ಕದ್ದು, ತಿರುಚಿ ಬರೆಯುವಷ್ಟು ಕೀಳುಮಟ್ಟದಲ್ಲಿವೆಯೇ ನನ್ನ ಬರಹಗಳು?!
ನನ್ನ "ಮಾನಸ" ಇಂತಹ ಒಂದು ಕೀಳುಮಟ್ಟಕ್ಕೆ ಎಂದೂ ಇಳಿದಿಲ್ಲ... ಇಳಿಯುವುದೂ ಇಲ್ಲ... ಇಳಿಯಲೂ ಆಗದು.!

ಇನ್ನು ಬ್ಲಾಗ್ ಶೀರ್ಷಿಕೆಗಳ ಬಗ್ಗೆ - "ಹರಿವ ಲಹರಿ" ಜ್ಯೋತಿಯಕ್ಕನ ಬ್ಲಾಗ್ ಹೆಸರು. "ತುಂತುರು ಹನಿ" ಶ್ರೀನಿಧಿಯ ಬ್ಲಾಗ್. ಆದರೆ ಈ ಎರಡೂ ಪದಗಳೂ ಸಾರ್ವತ್ರಿಕವಾದವುಗಳು. ನನ್ನ ಬ್ಲಾಗ್ "ಮಾನಸ" ಎಂದಾಗಿಬಿಟ್ಟಿತೆಂದು ನಾನು ಬೇರಾರಿಗೂ ಈ ಪದವನ್ನು ಬಳಸಬಾರದೆಂದು ಹೇಳುವುದು ಶುದ್ಧ ಹಾಸ್ಯಾಸ್ಪದವಾಗುವುದು. ಅದೂ ಅಲ್ಲದೇ ನಾನು "ಹರಿವ ಲಹರಿಯೊಡನೆ.." ಶೀರ್ಷಿಕೆ ಕೊಟ್ಟಿದ್ದು ನನ್ನ ಪೋಸ್ಟ್‌ಗೆ ಪೂರಕವಾಗಿದೆ ಎಂದೇ ವಿನಃ ಈ ಹೆಸರು ಬೇರೊಬ್ಬರ ಬ್ಲಾಗಿನ ಶೀರ್ಷಿಕೆ ಎಂದು ಮಾತ್ರ ಖಂಡಿತ ಇಲ್ಲ.

ನಿನ್ನ ತಪ್ಪು ಗ್ರಹಿಕೆಗಳಿಗೆ ಉತ್ತರ ಸಿಕ್ಕಿದೆಯೆಂದು ಭಾವಿಸುವೆ.

ನೀನಂದಿದ್ದರಲ್ಲಿ ಒಂದು ಮಾತ್ರ ನಿಜ... ಇವು ಮರೆಯಲಾಗದ ನೆನಪುಗಳಲ್ಲ. ಸದಾ ಕಾಡುವಂತವುಗಳು. ಆದರೆ ನನಗೆ ಮಾತ್ರ ಇನ್ನೂ ಕನಸಂತೇ ಅನಿಸುತ್ತಿದೆ ಅಷ್ಟೇ. ನನ್ನ ಬರಹಗಳನ್ನು ಇಷ್ಟಪಟ್ಟು ಓದುವ ಹಕ್ಕು ಎಲ್ಲರದ್ದೂ.... ನಿನ್ನದೂ ಕೂಡ. ಸದಾ ಸ್ವಾಗತವಿದೆ ನಿನಗೆ ನನ್ನ ತಿಳಿ ಮಾನಸಕ್ಕೆ. :)

ವಿಶ್ವಾಸವಿರಲಿ,
ತೇಜಸ್ವಿನಿ.

sunaath ಹೇಳಿದರು...

ಈ ಲೇಖನದ ಶೈಲಿ ಸರಾಗವಾಗಿದ್ದರೂ ಸಹ ಭಾವ ಸಂಕೀರ್ಣವಾಗಿದೆ. ಉತ್ತಮ ಬರಹಕ್ಕಾಗಿ ಅಭಿನಂದನೆಗಳು.

ಚುಕ್ಕಿಚಿತ್ತಾರ ಹೇಳಿದರು...

ಸು೦ದರವಾದ ಭಾವ...ಮನಸ್ಸಿಗೆ ಹತ್ತಿರವಾಗುವ ಪದಜೋಡಣೆ...
ಇಷ್ಟವಾಯ್ತು..

ಜಲನಯನ ಹೇಳಿದರು...

ತೇಜಸ್ವಿನಿ..ನೀವು, ಮೋಡ, ಕರಿಮೋಡ, ಹನಿ, ತೊರೆ, ಗುಪ್ತಗಾಮಿನಿ, ಭುವಿ ಇವೆಲ್ಲಾ ಬೀಗುತವೆ...ಆದ್ರೆ ಸೂರ್ಯ..ಎಲ್ಲದಕೂ ಉಗಮಕಾರಕ....
ಈ ವಿಷಯಗಳನ್ನು ಪೋಣಿಸಿ ವಿಶ್ಲೇಷಿಸಿದ್ದೀರ...ಚನ್ನಾಗಿದೆ...ಪದಗಳ ಬಳಕೆ ಯಾರೊಬ್ಬರ ಸೊತ್ತಲ್ಲ ಎಂದು ನನ್ನ ಅನಿಸಿಕೆ, ಮನಸಿಗೆ ಧಾಳಿಯಿಡುವ ಎಲ್ಲ ಪದಗಳೂ ಪ್ರಯೋಗಾರ್ಹ ಅಲ್ಲವೇ..?

ಮನದಾಳದಿಂದ ಹೇಳಿದರು...

ಹರಿವ ಲಹರಿಯೊಂದಿಗೆ ಮಾತನಾಡುತ್ತ ಕೆಲವು ಸತ್ಯಗಳನ್ನು ತಿಳಿಸಿದ್ದೀರಾ. ಉದಾ: ಅಹಂಕಾರ! ( ಹೆಚ್ಚು ಭಾರ ತಾಳಲಾಗದೇ ಸೋತು ನೀರಾಗಿ ಭುವಿಯೊಳಗೆ ಇಳಿದು ಗುಪ್ತಗಾಮಿನಿಯಾಗುವಾಗ, ಹರಿದು ತೊಳೆದುಹೋಗುವಾಗ ಎಲ್ಲಿಯ ಕರಿಮೋಡ? ಎಲ್ಲಿಯ ಅಹಂ?!)

ಅರ್ಥಮಾಡಿ ಕೊಳ್ಳುವವರಿಗೆ ಉತ್ತಮ ಪಾಠ.
ಹೀಗೆ ಬರೀತಾ ಇರಿ. ನಮ್ಮನೆ ಕಡೆನೂ ಆಗಾಗ ಬಂದು ಬುದ್ಧಿ ಹೇಳ್ತಾ ಇರಿ!

ಚಿತ್ರಾ ಸಂತೋಷ್ ಹೇಳಿದರು...

ತೇಜಕ್ಕ ತುಂಬಾ ಚೆನ್ನಾಗಿ ಬರೆದಿದ್ದೀರಿ. ಬರಹದ ಹರಿವು ತುಂಬಾ ಇಷ್ಟವಾಯಿತು.
-ಚಿತ್ರಾ ಸಂತೋಷ್

ಮಧು ಹೇಳಿದರು...

ತೇಜಕ್ಕಾ,

ಸುಂದರವಾದ ಬರಹ. ಸುಮ್ಮನೆ ಓದಿಸಿಕೊಂಡು ಹೋದರೂ ಎಷ್ಟೆಲ್ಲ ಸಂಕೀರ್ಣ ಭಾವನೆಗಳನ್ನು ಪದಗಳಲ್ಲಿ ಹಿಡಿದಿಟ್ಟೀದ್ದೀರಿ.ಬಹಳ ಇಷ್ಟವಾಯಿತು.

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ಕಪ್ಪುಮೋಡ, ಆಕಾಶ, ರವಿ, ಹರಿವ ನದಿ....ಇತ್ಯಾದಿ ಉಪಮೆಗಳನ್ನು ಬಳಸುತ್ತಾ ಬದುಕಿನ ಹುಟ್ಟು-ಸಾವು ಅಹಂ....ಇತ್ಯಾದಿ ಭಾವಗಳನ್ನು ಅರ್ಥಪೂರ್ಣವಾಗಿ ಕಟ್ಟಿಕೊಡುವ ನಿಮ್ಮ ಲೇಖನ ಇಷ್ಟವಾಗುತ್ತದೆ.

ತೇಜಸ್ವಿನಿ ಹೆಗಡೆ ಹೇಳಿದರು...

@ ರಾಘು ಅವರೆ,

ತುಂಬಾ ಧನ್ಯವಾದಗಳು. :)

@ ಚಂದ್ರಶೇಖರ್ ಅವರೆ,

ಆ ಹಾಡು ನನ್ನ ನೆಚ್ಚಿನ ಹಾಡುಗಳಲ್ಲೊಂದು. ತುಂಬಾ ಆಳವಾದ ಅರ್ಥವಿದೆ ಆ ಹಾಡಿಗೆ. ನನ್ನ ಹರಿವ ಲಹರಿ ನಿಮಗಿಷ್ಟವಾಗಿದ್ದಕ್ಕೆ ತುಂಬಾ ಧನ್ಯವಾದಗಳು.

@ಸೀತಾರಾಮ್ ಅವರೆ,

ತುಂಬಾ ಧನ್ಯವಾದಗಳು. ಮನುಜನೊಳಗಿರುವ ಅಹಂ ಯಾವಮಟ್ಟಕ್ಕೆ ಬೇಕಿದ್ದರೂ ಆತನನ್ನು ಕೆಳಗಿಳಿಸಬಹುದು. ತಾನೇ ಶ್ರೇಷ್ಠ ಬೇರೆಯವರೆಲ್ಲಾ ಕನಿಷ್ಠ ಎನ್ನುವ ಅಹಂಭಾವ ಚೂರಾಗಲು ಒಂದು ಹೊಡೆತವೇ ಸಾಕಾಗುತ್ತದೆ. ಆ ಭಗವಂತನ ಮುಂದೆ, ನಮ್ಮ ಅಂತಃಶಕ್ತಿಯ ಮುಂದೆ ಎಲ್ಲಿಯ ನಮ್ಮ ಅಹಂ? ಎಲ್ಲಿಯ ನಮ್ಮ ಅಹಂಕಾರ? ನನ್ನ ಬರಹದೊಳಗೆ ಸತ್ಯತೆ ಕಂಡು ಮೆಚ್ಚಿದ್ದಕ್ಕೆ ಮಗದೊಮ್ಮೆ ಧನ್ಯವಾದಗಳು.

@ಗುರು-ದೆಸೆ,

ನಿಮ್ಮ ಮನಸ್ಸಿನ ಮನೆಗೂ ಬಂದಿದ್ದೆ, ಬರುತ್ತಿರುವೆ ಕೂಡ. ನಿಮ್ಮೊಳಗೆ ನೀವು ಆತ್ಮವಿಶ್ವಾಸ ಹಾಗೂ ಪ್ರಾಮಾಣಿಕತೆ ತುಂಬಿಕೊಂಡರೆ ಅದು ನಿಮ್ಮ ಬರಹದಲ್ಲೂ ಕಾಣಿಸುತ್ತದೆ ಅಷ್ಟೇ. ನನ್ನ ಬರಹದೊಳಗಿನ ಹೊಸ ಪದಜೋಡಣೆಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

@ಸುಬ್ರಹ್ಮಣ್ಯ ಅವರೆ & @ ಪರಾಂಜಪೆ ಅವರೆ,

ಮೆಚ್ಚುಗೆಗೆ ಆಭಾರಿ. ತುಂಬಾ ಧನ್ಯವಾದಗಳು.

@ವಿಜಯಶ್ರೀ,

ನನ್ನ ಭಾವಗಳು ನನ್ನ ಮಾನಸದಿಂದ ಮೂಡಿದವುಗಳು. ಲಹರಿ ಸದಾ ಎಲ್ಲರ ಮನದೊಳಗೂ ಹರಿಯುತ್ತಿರುತ್ತದೆ. ಆದರೆ ಅದು ಚಿಂತನಶೀಲವಾಗಿದ್ದರೆ ಮಾತ್ರ ಧನಾತ್ಮಕತೆಯ ರೂಪ ಪಡೆದು ಎಲ್ಲರ ಮಾನಸವನ್ನೂ ಮುಟ್ಟುತ್ತದೆ ಅಲ್ಲವೇ? ತುಂಬಾ ಧನ್ಯವಾದಗಳು.

@ಆಝಾದ್ ಅವರೆ,

ಚೆನ್ನಾಗಿ ಅರ್ಥೈಸಿಕೊಂಡಿದ್ದೀರಿ ನನ್ನ ಲಹರಿಯನ್ನು :) ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ತುಂಬಾ ಧನ್ಯವಾದಗಳು.

@ಮನದಾಳದಿಂದ,

ಅರ್ಥವಾಗದಿದ್ದರೂ ಬೇಸರವಿಲ್ಲ....ಆದರೆ ಅನರ್ಥವಾಗದಿದ್ದರೆ ಸಾಕು ಅಲ್ಲವೇ? :) ಸರಿಯಾಗಿ ಅರ್ಥಮಾಡಿಕೊಂಡಿದ್ದಕ್ಕಾಗಿ ತುಂಬಾ ಧನ್ಯವಾದಗಳು.

@ಚಿತ್ರಾ & @ ಮಧು,

ನಿಮ್ಮ ಮೆಚ್ಚುಗೆಗೆ ಹಾಗೂ ವಿಶ್ವಾಸಕ್ಕೆ ತುಂಬಾ ಧನ್ಯವಾದಗಳು. ಆತ್ಮೀಯತೆ ಹೀಗೇ ಇರಲಿ. :)

@ಶಿವು ಅವರೆ,

ನನ್ನ ಮೂರು ಪೋಸ್ಟ್‌ಗಳಿಗೂ ಒಟ್ಟಿಗೇ ಪ್ರತಿಕ್ರಿಯಿಸಿದ್ದಕ್ಕೆ ಹಾಗೂ ಪ್ರಸ್ತುತ ಲೇಖನವನ್ನು ಮೆಚ್ಚಿಕೊಂಡಿದ್ದಕ್ಕೂ ತುಂಬಾ ಧನ್ಯವಾದಗಳು.

ಸುಧೇಶ್ ಶೆಟ್ಟಿ ಹೇಳಿದರು...

Tejakka...

nimagE thilidiruva kaaranagaLinda nimma blog annu odalu aagalilla...

sanna barahavaadharu thumba chennagi barediddeeri... nimma e baraha thumba vishesha aagidhe kooda. nanaganisuttade e baraha baredhaadha mele nimage e baraha thumba santhoshavannu kottirabahudhu antha... ondu baraha sundharavaagi moodibandhare aaguva aanandha anthahudu...

bhaava, nenapu, kanavarikegaLu yaara sottu alla.... nindhanege besarisabedi... dhaasare haadillave "nindhakarirabeku jagadhoLage...." antha :)