ಸೋಮವಾರ, ಮಾರ್ಚ್ 29, 2010

ದಾನಿಯಾಗುವೆನು ನಾ ನನ್ನಕ್ಷರಗಳಿಗಾಗಿ...

ಅಕ್ಷರಗಳೀಗ ಅಳುತ್ತಿವೆ
ನರಳುತ್ತಿವೆ, ಕರಗುತ್ತಿವೆ
ನನ್ನೊಳು ಹುದುಗಿ ಕುದಿಯುತ್ತಿವೆ...
ತಮ್ಮ ಅಸ್ತಿತ್ವಕ್ಕೆ ಬಿದ್ದ
ಪೆಟ್ಟಿನಿಂದಾದ ನೋವಿಗೆ
ಬಿಕ್ಕುತ್ತಿವೆ, ಬೆಚ್ಚುತ್ತಿವೆ...

ಮಾನಸದಲ್ಲೇ ಹುಟ್ಟಿ
ವಿವೇಕದಲ್ಲಿ ಬೆಳೆದು
ಯೋಚನೆಯ ಮೂಲಕ
ಕಲ್ಪನೆಯೊಳು ಹೊಕ್ಕು
ಹೊರಬಂದು ಚಿಗುರಿದ್ದ
ನನ್ನ ಅಕ್ಷರಗಳೀಗ ಅಳುತ್ತಿವೆ...

ತನ್ನ ಕಂದನ ನೋಡಿ
ಅದರ ಮೆರುಗಿಗೆ ಬೆರಗಾಗಿ
ಮೈಮರೆತಿದ್ದ ತಾಯಿಯ ಮೇಲೆ,
(ಅ)ಪರಿಚಿತರೇ ಧಾಳಿಯಿಟ್ಟು,
ಮಗುವ ಕಸಿಯ ಬಂದಂತೇ,
ನನ್ನ ಅಕ್ಷರಗಳೀಗ ಅಳುತ್ತಿವೆ...

ನಿಶ್ಚಲವಾಗಿ, ಸುನೀಲವಾಗಿ
ಗಂಭೀರವಾಗಿ, ವಿಶಾಲವಾಗಿ,
ಸುನೀತದಂತಿದ್ದ ಕೊಳಕ್ಕೆ
ಕಲ್ಲುಗಳನೆಸೆದು, ರಾಡಿಯೆಬ್ಬಿಸಿ
ನೀರು ಕಣಕಾಗಿ ಕನಲಿದಂತೇ
ನನ್ನ ಅಕ್ಷರಗಳೀಗ ಅಳುತ್ತಿವೆ....

ಅಳುವ ಪದಗಳು ಸೋಲುವ ಮುನ್ನ....
ದಾನಗಳಲ್ಲೇ ಶ್ರೇಷ್ಠ ದಾನವ
ನೀಡುತ್ತಿರುವುದೇ, ನಾ ನನ್ನಕ್ಷರಗಳಿಗೆ
ಮಾಡುತ್ತಿರುವ ಸಮಾಧಾನ...
ನೋವನಿತ್ತ ಮನಸಿಗೂ, ಅದರ ರೀತಿಗೂ
ಕೊಟ್ಟುಬಿಡುವೆನು ಇಂದು ಕ್ಷಮಾದಾನವ

- ತೇಜಸ್ವಿನಿ

(ಚಿತ್ರ ಕೃಪೆ : ಗೂಗಲ್)

26 ಕಾಮೆಂಟ್‌ಗಳು:

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ,
ಓದಿದೆ.
ನಿಮ್ಮನಸಿನಾಳದ ನೋವನ್ನು ಅಕ್ಷರರೂಪದಲ್ಲಿಳಿಸಿರುವುದ ಕಂಡು ಏನೆಂದು ಹೇಳುವುದು ತಿಳಿಯದಾದೆ.
ಕೊನೆಯ ಸಾಲು... ಮಾರ್ಮಿಕವಾಗಿದೆಯೆನಿಸಿತು.

Lakshmi Shashidhar Chaitanya ಹೇಳಿದರು...

:( :( :(

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿ,
ಮನದಾಳದ ನೋವನ್ನು ತೋಡಿಕೊಳ್ಳುವ ಅಕ್ಷರಗಳ ಕವನ ಸುಂದರವಾಗಿದೆ
ಅಳುತ್ತಿರುವ ಅಕ್ಷರಗಳಿಗೆ ನಗುವಿನ ಸಿಂಚನ ನೀಡಿ
ಒಳ್ಳೆಯ ಕವನ

ದಿನಕರ ಮೊಗೇರ ಹೇಳಿದರು...

ತೇಜಸ್ವಿನಿ ಮೇಡಂ,
ಜಿಗಿ ಜಿಗಿದು ಹೊರ ಬರಲಿ ಅಕ್ಷರ,
ಮೊಗೆ ಮೊಗೆದು ಬರೆಯಿರಿ ಕವನ...........

ಸುಧೇಶ್ ಶೆಟ್ಟಿ ಹೇಳಿದರು...

maarmikavaagidhe thejakka kavana.... adhara marma mattu hindiruva oLathoti artha aayithu :(

Subrahmanya ಹೇಳಿದರು...

ಹ್ಮ್...ನಾನು ಹೇಳುವುದು ಒಟ್ಟು ೩ ಸಂಗತಿಗಳು..

೧) ಬರೆಯಿರಿ..
೨) ಬರೆಯಿರಿ
೩) ಬರೆಯಿರಿ... :)

AntharangadaMaathugalu ಹೇಳಿದರು...

ತೇಜಸ್ವಿನಿಯವರೇ...
ಏನೋ ಮುಚ್ಚಿಟ್ಟ ನೋವು ಕವನದ ರೂಪದಲ್ಲಿ ಹೊರ ಬಂದಂತಿದೆ..... ಬರೆಯುವ ಲಹರಿ ಬಂದಾಗ, ’ಮಾನಸ’ದಾಳದಲ್ಲಿರುವ, ಹೆಪ್ಪುಗಟ್ಟಿದ, ನೋವು, ನಲಿವು, ಸಂತೋಷ ಎಲ್ಲವೂ ಸರಾಗವಾಗಿ ಹರಿಯಬಿಡುವುದಲ್ಲದೇ ಬೇರೆ ದಾರಿಯೇ ಇಲ್ಲ.... ಕವನ ಸೂಪರ್......

ಮನಸಿನ ಮಾತುಗಳು ಹೇಳಿದರು...

Tejakka,
Nice wordings and touching poem.
Dont worry..... Be happy...
Its all part of the game...:-)

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ಅಕ್ಷರಗಳು ಅಳುತ್ತಿವೆ ಅನ್ನುವುದು ಹೊಸ ಪ್ರಯೋಗ. ಅದಕ್ಕೆ ತಕ್ಕಂತೆ ನಿಮ್ಮ ಭಾವನೆಗಳನ್ನು ನೋವನ್ನು ಉತ್ತಮರೀತಿಯಲ್ಲಿ ಪದ್ಯದ ಮೂಲಕ ವ್ಯಕ್ತಪಡಿಸಿದ್ದೀರಿ..

ಚುಕ್ಕಿಚಿತ್ತಾರ ಹೇಳಿದರು...

ತೇಜಸ್ವಿನಿ..
ಒಳ್ಳೆಯ ನಿರ್ಧಾರ..
ಕ್ಷಮಾದಾನದಿ೦ದ ಖ೦ಡಿತಾ ಸಮಾಧಾನ ದೊರೆಯುತ್ತದೆ...

Dr.D.T.Krishna Murthy. ಹೇಳಿದರು...

ನೊಂದ ಅಕ್ಷರಗಳು ಉಳಿಯ ಪೆಟ್ಟು ಬಿದ್ದು ಸುಂದರ ಶಿಲ್ಪಗಳಾಗಿ ಮೂಡಲಿ.ನೋವಿನ ಮೊಟ್ಟೆ ಒಡೆದು ಪದಗಳು ರಂಗು ರಂಗಿನ ಹಕ್ಕಿಗಳಾಗಿ ಕಾವ್ಯದ ಆಗಸಕ್ಕೆರಲಿ.!

ಸಾಗರಿ.. ಹೇಳಿದರು...

ಕವನ ತುಂಬಾ ಸುಂದರವಾಗಿದೆ

ಸುಮ ಹೇಳಿದರು...

ಕವನ ಮನತಟ್ಟುವಂತಿದೆ. ನಮಗೆ ನೋವುಂಟುಮಾಡುವವರನ್ನು ಕ್ಷಮಿಸಿಬಿಡುವುದು , ನಮ್ಮ ಮನಸ್ಸಿನ ನೋವನ್ನು ಶಮನಗೊಳಿಸುವ ಉತ್ತಮ ಉಪಾಯ.
ಬರೆಯುತ್ತಿರಿ...

PARAANJAPE K.N. ಹೇಳಿದರು...

ಅಳುವ, ಅರಳುವ, ಕರಗುವ ಅಕ್ಷರಗಳನ್ನು ಹಿಡಿದಿಟ್ಟು, ಸು೦ದರ ಕವನವಾಗಿಸಿದ್ದೀರಿ. ಕವನ ವಿನೂತನವಾಗಿದೆ, ಇನ್ನಷ್ಟು ಬರೆಯಿರಿ. ನಿಮ್ಮ ಇನ್ನೊ೦ದು ಕವನ ಸ೦ಕಲನ ಹೊರ ಬರುವ೦ತಾಗಲಿ.

sunaath ಹೇಳಿದರು...

ತೇಜಸ್ವಿನಿ,
ನೋವಿನಿಂದ ಹೊರ ಬರಬೇಕು. ಮತ್ತಷ್ಟು ಗೆಲವಾಗಬೇಕು. ಇದೇ ಜೀವನ. Forgive and forget.

ಸವಿಗನಸು ಹೇಳಿದರು...

ಅಳುವ ಅಕ್ಷರ ನಗುವಿನಿಂದ ಅರಳಲಿ....
ಸುಂದರ ಕವನ....

ಬಿಸಿಲ ಹನಿ ಹೇಳಿದರು...

ಅಕ್ಷರಗಳ ಅಳುವೆಂದು ಹೇಳಿ ನಿಮ್ಮ ಮನದ ಅಳಲುಗಳನ್ನು ಹಿಡಿಟ್ಟಿರುವಿರಿ. ಇನ್ನೂ ಸ್ವಲ್ಪ ಪ್ರಯತ್ನಿಸಿದ್ದರೆ ಚೆಂದದ ಕವನವಾಗಿಸಬದಿತ್ತು.

ಸೀತಾರಾಮ. ಕೆ. / SITARAM.K ಹೇಳಿದರು...

ಬಾವನೆಗಳು ಯಾರೊಬ್ಬರ ಸ್ವತ್ತಲ್ಲ. ಭಾವನೆಗೆ ಕಾರಣವಾಗುವ ನಮ್ಮ ಸುತ್ತಲಿನ ಬೆರಗಿನ ವಿಶ್ವವೂ ಮತ್ತು ಆ ಕ್ಷಣದ ಪರಿಸರವೂ ಯಾರೊಬ್ಬರಿಗೆ ಸ್ವ೦ತವಾಗಿ ಸ೦ಭ೦ಧಿಸಿದ್ದಲ್ಲ ಮತ್ತು ಸಾರ್ವತ್ರಿಕವಾದುದು. ಈ ಬೆರಗುಗಳು ಎಲ್ಲರಲ್ಲಿಯೂ ಭಾವನೆಯ ಹುಟ್ಟಿಸಿ, ರಸಾನೂಭುತಿಯನ್ನು೦ಟು ಮಾಡುವವು. ಆದರೆ ಭಾವನೆಗಳನ್ನು ಬಾಷೆಯಲ್ಲಿ ಕಟ್ಟಿ ಹೊರಹಾಕುವ ಸಾಮರ್ಥ್ಯ ಲೇಖಕನದು. ಹೀಗಾಗಿ ಲೇಖಕನು ಅವನ ಸಾಹಿತ್ಯಕ್ಕೆ ತಾಯಿಯಾದರೂ, ಭಾವನೆಗಳ ಹುಟ್ಟಿನ ಬೆರಗುಗಳು ತ೦ದೆಯ ಸ್ಥಾನದಲ್ಲಿರುವವು. ಬೆರಗುಗಳು ಎಲ್ಲರ ಮನದಲ್ಲೂ ಭಾವನೆಯರಳಿಸುವವು. ಭಾವನೆಗಳೊಡಣೆಯ ಈ ರಸಾನುಭವ ಎಲ್ಲರದಿದ್ದರೂ, ಭಾಷಾ ಅಭಿವ್ಯಕ್ತಿ ಮಾತ್ರ- ಕೃತಿ ಎನಿಸುವದು. ಭಾವನೆಗಳನ್ನು ಅಭಿವ್ಯಕ್ತಿಸದವರು, ಅಭಿವ್ಯಕ್ತಿಸಿದವರ ಕೃತಿಯಲ್ಲಿನ ಆ ಭಾವನೆಯನ್ನು ಹೊಕ್ಕು, ಅದನ್ನು ಓದಿ, ತಮ್ಮ ಮನವನ್ನು ಬಿತ್ತರಿಸಿದ್ದಕ್ಕೆ, ಅವರನ್ನು ಸಹಸ್ಪ೦ದನೆಯೊಡನೆ, ಮೆಚ್ಚುವದರಿ೦ದ ಕೃತಿಗಾರರು ಲೇಖಕರೆನಿಸಿಕೊಳ್ಳುವದು. ಭಾವನೆಗಳನ್ನು ಭಾಷೆಯಲ್ಲಿ ಅಭಿವ್ಯಕ್ತಿಸಿ, ಲೇಖಕರಾಗಿದ್ದಕ್ಕೆ, ಅದು ನನ್ನದೊ೦ದೆ ಸ್ವತ್ತು ಎನ್ನುವದು ಮೂರ್ಖತನ. ಕೆಲವೊಮ್ಮೆ ಕಾಕತಾಳಿಯವಾಗಿ ಇಬ್ಬರ ಅಭಿವ್ಯಕ್ತಿಗಳು ಒ೦ದೇ ತೆರನಾಗಿರಲೂಬಹುದು. ಲೇಖಕ ತಾಯಿಯಾದರೇ, ತ೦ದೆಯಾಗಿ ಜಗದ ಬೆರಗು ಕಾವ್ಯಕ್ಕೆ ಭಾವನೆಗಳನ್ನು ಮಿಡಿಸುತ್ತವೆ ಮತ್ತು ಈ ಬೆರಗಿನಿ೦ದಾದ ಭಾವನೆಗಳು ಎಲ್ಲರಿಗೂ ಆಗುವದರಿ೦ದ ಭಾಷೆಯ ಮುಖಾ೦ತರ ಅಭಿವ್ಯಕ್ತಿಸಿದವ ಲೇಖನದ ಗೌರವಕ್ಕೆ ಪಾತ್ರನಾಗುತ್ತಾನೆ ಎ೦ಬ ಸತ್ಯ ಲೇಖಕರು ಮರೆಯಬಾರದು.

ಈ ನಿಟ್ಟಿನಲ್ಲಿ ಅಕ್ಷರಗಳೂ-ಅಳವುದಿಲ್ಲ, ನರಳುವದಿಲ್ಲ, ಕರಗುವದಿಲ್ಲ, ಅವು ಯಾವಾಗಲೂ ಭಾವನೆಗಳ ಸ್ಪ೦ದನಕ್ಕೆ ಚಿತ್ತಾರ ಮೂಡಿಸಿ ಅದೇ ಭಾವನೆಗಳ ಮೂಲಕ ಹಾಯ್ದ ಓದುಗನ ಸಹಸ್ಪ೦ದನೆ ಹೊ೦ದಿ ಹುಟ್ಟಿನ ಸಾರ್ಥಕತೆಯಲ್ಲಿ ಸದಾ ನಲಿಯುವವು. ಅಕ್ಷರಗಳು ನಲಿವಿನವೇ ಇರಲಿ -ನೋವಿನವೇ ಇರಲಿ ಸಹಸ್ಪ೦ದನದ ಓದುಗರಿಗೆ ಸ್ಪ೦ದಿಸಿ ಸದಾ ನಲಿಯುತ್ತವೆ ಮತ್ತು ಉಲಿಯುತ್ತವೆ.
ಸಾಹಿತ್ಯ ಹೊರಹೊಮ್ಮಲಿ.
ಜಗತ್ತಿನಲ್ಲಿ ಒಳ್ಳೇಯದೂ ಇದೆ ಕೆಟ್ಟದ್ದೂ ಇದೆ. ಮನ ತಾತ್ಕಾಲಿಕವಾಗಿ ಇವುಗಳಿಗೆ ಹಿಗ್ಗಿ-ಕುಗ್ಗಿದರೂ, ಒಗ್ಗಿಕೊ೦ಡು ಕಾಯಕ ಮು೦ದುವರೆಸುವದೇ ಕರ್ಮಯೋಗ ಸಿಧ್ಧಾ೦ತ.
ಮಾನಸದೊಡತಿ ಎಲ್ಲ ಕಹಿಯನ್ನು ಮರೆತು, ತನ್ನ ಭಾವನೆಗಳನ್ನು ಆ ಭಾಷೆಯಲ್ಲಿ ಅಭಿವ್ಯಕ್ತಿಸುವ ತನ್ನ ವಿಶಿಷ್ಟ ಶಕ್ತಿಯನ್ನು ಸದಾ ಉಪಯೋಗಿಸುತ್ತಾ ಸಹೃದಯ ಓದುಗರಿಗೆ ಉಣಬಡಿಸಲೆ೦ದು ಹಾರೈಸುವೆ. ಈ ಕವನದ ಮೂಲಕ ಮನದ ಕ್ಲೀಷೆ ಸಮರ್ಪಕವಾಗಿ ಹೊರಹೋಗಿದೆ೦ದು ಭಾವಿಸುತ್ತೆನೆ. ಈ ದಿಶೆಯಲ್ಲಿ ಕವನದ ಪಾತ್ರ ಮಹತ್ತರದು.

sapna ಹೇಳಿದರು...

ನೀವು ಅಕ್ಷರಗಳ ಬಗ್ಗೆ ಬರೆದಿರೋದು ಎಷ್ಟು ಚೆನ್ನಾಗಿದೆ. ಓದಿದರೆ ನಾನರ್ಥಗಳು. ಯಾಕೋ ನನಗೆ ನಮ್ಮ ಸುದ್ದಿಮಾಧ್ಯಮ ಲೋಕದಲ್ಲಿ ಪಾರದರ್ಶಕತೆ ಮಾಯವಾಗಿರುವುದೇ ಕಣ್ಣ ಮುಂದೆ ಬರ್ತಿದೆ.

sapna ಹೇಳಿದರು...

ಅಕ್ಷರಗಳ ಬಗ್ಗೆ ನಿಮ್ಮ ಚಿಂತನೆ ಎಷ್ಟು ಆಳ ಮತ್ತು ಸುಂದರ!ಓದಿದರೆ ನಾನರ್ಥಗಳು.

umesh desai ಹೇಳಿದರು...

ತೇಜಸ್ವಿನಿ ಅವರಿಗೆ ಅಳುತ್ತಿರುವ ಅಕ್ಷರಗಳೂ ಹೀಗೆ ಚೆಂದಾದ ಕವನಗಳಾಗಿ ಹೊರಬಂದಿವೆ...ಅಭಿನಂದನೆಗಳು.

ಮನಸಿನಮನೆಯವನು ಹೇಳಿದರು...

ತೇಜಸ್ವಿನಿ ಹೆಗಡೆ-

ಶಿವೂ ಅವರು ಹೇಳಿದಂತೆ ಅಕ್ಷರಗಳು ಅಳುತ್ತಿವೆ.. ಹೊಸ ಪ್ರಯೋಗವೇ ಸರಿ..
ಸುಂದರವಾದ ಭಾವನಾತ್ಮಕ ಕವನ..

ನಿಮ್ಮದೇ ನಿರೀಕ್ಷೆಯಲ್ಲಿ..: http://manasinamane.blogspot.com/

kanasu ಹೇಳಿದರು...

Awesome personification. Expresses multiple meanings. nimma barahada plagiarism agi adara bagge heluttiruvire?

ತೇಜಸ್ವಿನಿ ಹೆಗಡೆ ಹೇಳಿದರು...

ನಿಮ್ಮೆಲ್ಲರ ಪ್ರೀತ್ಯಾದರಗಳಿಗೆ ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಬರಹದ ಮೇಲಿಟ್ಟಿರುವ ವಿಶ್ವಾಸಕ್ಕೆ ನಾನು ತುಂಬಾ ಆಭಾರಿ. ಧನ್ಯವಾದಗಳು. ಖಂಡಿತ ಮಾನಸದಲ್ಲಿ ಬರಹಗಳ ಮೆರವಣಿಗೆ ನಡೆಯುತ್ತಿರುವುದು. ನೋವು ಇದ್ದಲ್ಲಿ ನಲಿವು ಇದ್ದೇ ಇರುವುದು. ಒಂದು ಕಳೆದರೆ ಹತ್ತು ಸೇರಿಸಿ ಮುನ್ನಡೆಯುವ ಛಲ, ಧೈರ್ಯ ಜೊತೆಗಿದ್ದರೆ ಎಲ್ಲವೂ ಸುಗಮ. :)

@ಉದಯ್ ಅವರೆ,

ನಿಮ್ಮ ನೇರ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು. ಪ್ರಾಮಾಣಿಕವಾಗಿಯೇ ಹೇಳಿದ್ದೀರಿ. ನನಗೂ ಹಾಗೇ ಅನಿಸಿತ್ತು ಬರೆದ ಮೇಲೂ.. ಆದರೆ ಇನ್ನೂ ಇಟ್ಟುಕೊಂಡರೆ ಅಕ್ಷರಗಳು ಮತ್ತಷ್ಟು ರಚ್ಚೆ ಹಿಡಿದಾವು ಎಂದು ಹಾಕಿಯೇ ಬಿಟ್ಟೆ ಇದ್ದ ಹಾಗೆಯೇ :) ಖಂಡಿತ ಮತ್ತೂ ಉತ್ತಮ ಕವನಕ್ಕಾಗಿ ಪ್ರಯತ್ನಿಸುವೆ. ಪ್ರೋತ್ಸಾಹ ಹೀಗೇ ಇರಲಿ.

@ಸೀತಾರಾಮ್ ಅವರೆ,

ಸುಂದರ ಹಾಗೂ ಬೆಂಬಲಪೂರಿತ ಪ್ರತಿಕ್ರಿಯೆಗಾಗಿ ತುಂಬಾ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಮಾನಸದ ಜೊತೆ ಸದಾ ಹೀಗೇ ಇರಲಿ.

@ಸಪ್ನಾ,

ಒಮ್ಮೊಮ್ಮೆ ಪಾರದರ್ಶಕತೆ ಇದ್ದರೂ ಮನದೊಳಗೆ ಆವರಿಸಿರುವ ಮುಸುಕು ಅದನ್ನು ಕಾಣದಂತಾಗಿಸುವುದು. ಆಗ ಪ್ರಾಮಾಣಿಕ ಅಕ್ಷರಗಳು ನೋವಿನಿಂದ ಹೀಗೇ ಅಳುತ್ತವೆ. ನಿಜ... ಮಾಧ್ಯಮ ಜಗತ್ತಿನಿಂದ ಈ ಪಾರದರ್ಶಕತೆಯೇ ಹೊರಟುಹೋಗುತ್ತಿದೆ. ತುಂಬಾ ಧನ್ಯವಾದಗಳು.

@ಕನಸು,

ನೀವು ಹೇಗೆ ಬೇಕಿದ್ದರೂ ಇದನ್ನು ಅರ್ಥೈಸಿಕೊಳ್ಳಬಹುದು. ಕವನ ಅವರವರ ಭಾವಕ್ಕೆ ಬಿಟ್ಟಿದ್ದು. ಆದರೆ ಇಲ್ಲಿ ನೋವಿಗೊಳಗಾರುವುದು ಸತ್ಯತೆಯಲ್ಲಿರುವ ನನ್ನಕ್ಷರಗಳು ಎಂದು ಮಾತ್ರ ಹೇಳಬಲ್ಲೆ :) ತುಂಬಾ ಧನ್ಯವಾದಗಳು.

ಸಿಂಧು sindhu ಹೇಳಿದರು...

ತೇಜಸ್ವಿನಿ,

ಇದು ಮನದ ತಲ್ಲಣ ಗಳನ್ನ ಮತ್ತು ಕಹಿಯನ್ನ ಹೊರದಬ್ಬುವ ಒಳ್ಳೆಯ ದಾರಿ ಅಂತ ಅನ್ನಿಸಿತು ನಂಗೆ. ಬಹಳ ಉತ್ತಮವಾದ ಸನ್ನಿವೇಶ ನಿಭಾವಣೆ ಮಾಡಿದ್ದೀ ನೀನು. ನಂಗೆ ಮೆಚ್ಚಾಯಿತು.
ಹಿಂದೆ ಯಾವುದೋ ಈ ಬಗೆಯ ಸನ್ನಿವೇಶವೊಂದರಲ್ಲಿ ನಾನು ಭಾವುಕಳಾಗಿ ಪ್ರತಿಕ್ರಿಯಿಸಿಬಿಟ್ಟಿದ್ದೆ.
ನೀನು ಭಾವುಕತೆಯನ್ನ ಸಮರ್ಥವಾಗಿ ನಿಭಾಯಿಸಿದ್ದಿ.

ಕಹಿಯೆಲ್ಲ ಕರಗಲಿ ಬಿಡು. ಒಳಿತು ನಿನ್ನನ್ನು ಆವರಿಸುತ್ತದೆ.

Apart from the context:
ಕವಿತೆ ಚೆನ್ನಾಗಿದೆ.

ಪ್ರೀತಿಯಿಂದ
ಸಿಂಧು

ರಾಘವೇಂದ್ರ ಹೆಗಡೆ ಹೇಳಿದರು...

ತೇಜಸ್ವಿನಿಯವರೇ.. ,
ನೋವಿನೊಡನೆ ಬೆರೆತುಬಂದ ಅಕ್ಷರಗಳ ಸುಂದರ ಮಾಲೆಯಾಗಿ ತುಂಬಾ ಚೆನ್ನಾಗಿ ಈ ಕವನ ಮೂಡಿಬಂದಿದೆ..