ಗುರುವಾರ, ಮಾರ್ಚ್ 17, 2011

ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ...

ಪ್ರಿಯ ಗೆಳೆಯ,

Courtesy : http://www.flickr.com/photos/ 
ಹೇಗಿದ್ದೀಯಾ? ಈಗ ನಿನ್ನ ಅದೇ ಹಳೆಯ ಪ್ರಶಾಂತ ಶುಭ್ರ ನಗೆ ಚೆಲ್ಲುತ್ತಾ ಆರಾಮಾಗೇ ಇದ್ದೀಯೆಂದು ಗೊತ್ತು. ಹಾಗಾಗಿಯೇ ಈ ಪತ್ರ ಬರೆಯುವ ಧೈರ್ಯ ನಾನು ಮಾಡ್ತಿರೋದು. ಅಂದ ಹಾಗೆ ಅದೆಂಥಾ ಕೋಪವಯ್ಯ ನಿಂದು?!! ಅಲ್ಲ... ಇದೇ ಮೊದಲ ಸಲವೇನಲ್ಲಾ ನಾನು ನಿನ್ನ ಈ ರೂಪ ನೋಡ್ತಿರೋದು ಬಿಡು....ನಂಗೆ ನಿನ್ನ ಕೋಪದ, ಅದರ ಆರ್ಭಟದ ಅರಿವು ಈ ಹಿಂದೆಯೂ ಆಗಿತ್ತು. ಅದೇ ....ಆರು ವರುಷದ ಹಿಂದೆ ನಾನು ನನ್ನವನ ಕೈ ಹಿಡಿವ ಸಮಯದಲ್ಲೇ ನಿಂಗೆ ಉಕ್ಕಿತ್ತು ಭಯಂಕರ ಸಿಟ್ಟು. ಆದರೆ ಆವಾಗೇನೋ ನಿಂಗೆ ಕೋಪ ಬಂದಿದ್ದು ನಂಗೆ ಅಲ್ಪ ಸ್ವಲ್ಪ ಅರ್ಥವಾಗಿತ್ತು... ಈಗೇನಾಯ್ತಾಪ್ಪಾ?!! ಕಳೆದವಾರ ನನ್ನ ಮಂಗಳೂರಿನ ಗೆಳತಿ ಫೋನ್ ಮಾಡಿ "ನೋಡಿದೆಯೋ ನಿನ್ನ ಪ್ರಿಯ ಗೆಳೆಯನ ಮಂಗಾಟವ? ಎಂತಾ ಮಂಡೆ ಬೆಚ್ಚ ಆಗುವಂತಿದೆ ಮಾರಾಯ್ತಿ... ಇನ್ನೂ ಅವನ ಮೋಹ ನೀನು ಬಿಟ್ಟಿಲ್ಲವೆಂದರೆ ನಿಂಗೂ ಅದೇ ಗತಿ ಆಗುವುದುಂಟು ನೋಡು...ಮತ್ತೆ ನೀನು ಇಲ್ಲಿಗೆ ಬಂದಾಗ ಅವನನು ಕಾಣಲು ಹೋಗುತ್ತೇನೆ ಎಂದರೆ ಎಲ್ಲರೂ ನಿನ್ನ ಅಟ್ಟಿಸಿಕೊಂಡು ಬಂದು ಹೊಡೆದಾರು ಮಾರಾಯ್ತಿ...ಆಮೇಲೆ ನಾನು ಹೇಳಲಿಲ್ಲವೆಂದು ಹೇಳಬೇಡ..." ಎಂದು ಕಿಚಾಯಿಸಿದಾಗ ತುಂಬಾ ಬೇಸರವಾಗಿತ್ತು.. ಜೊತೆ ನಿನ್ನ ಮೇಲೆ ಅತಿ ಕೋಪ ಕೂಡ ಬಂದಿತ್ತು.

ಅಲ್ಲಾ.. ನಿಂಗೇನು ಬಂದಿತ್ತು ರೋಗ ಅಷ್ಟು ಪ್ರತಾಪ ತೋರ್ಸೋಕೆ? ಅದೂ ಎಲ್ಲರ ಕಣ್ಣಿಗೂ ಕಿಸುರಾಗೋ ಹಾಗೆ....! ಇಷ್ಟು ದಿನ ಎಲ್ರ ಮುಂದೆ ಹೆಮ್ಮೆಯಿಂದ ನಿನ್ನ ಗುಣಗಾನ ಮಾಡ್ತಿದ್ದೆ... ಈಗ ನಾನು ಹಾಗೆ ಮಾಡಿದ್ರೆ ಸುಮ್ನಿರ್ತಾರಾ? ಹೋಗ್ಲಿ... ನಿಂಗೇನು ಅಂಥ ಕಷ್ಟ ಬಂದಿದ್ದು? ಕೋಪ ಬಂದಿದ್ರೆ ತಡ್ಕೊಳೋಕೆ...ಇಲ್ಲಾ ಹೊರ ಹಾಕೋಗೆ ನೂರು ಮಾರ್ಗವಿದೆ ನಿನ್ನ ಹತ್ರ.. ಅದೆಲ್ಲಾ ಬಿಟ್ಟು ಸಿಕ್ಕ ಸಿಕ್ಕವ್ರ ಮೇಲೆಲ್ಲಾ ಹುಚ್ಚಾಪಟ್ಟೆಯಾಗಿ ಏರಿ ಹೋಗಿ ಹೊಡ್ದು ಹಾಕ್ದೆಯಲ್ಲಾ.... ನನ್ನ ಪ್ರತಿಷ್ಠೆ ಏನಾಗ್ಬೇಡ? ಒಪ್ಕೊಂಡೆ.. ನಾನು ನಿನ್ನ ಹುಚ್ಚಿಯಾದ್ರೆ ನೀನು ಅವಳ ಮಳ್ಳ ಅಂತ. ನಾನ್ಯಾವತ್ತೂ ಅದ್ಕೆ ವಿರೋಧ ತೋರ್ಸಿದ್ದೀನಾ? ನನ್ಜೊತೆನೂ ಅನ್ಯಾಯ ತುಂಬಾ ಸಲ ಆಗಿದೆಯಪ್ಪಾ... ಹಾಗಂತಾ ನಾನ್ಯವತ್ತೂ ಅವ್ಳ ರೀತಿ ನಿಂಗೆ ಚುಚ್ಚಿ ನಿನ್ನ ಪ್ರತಾಪ ತೋರ್ಸು ಅಂದಿಲ್ಲ... ಹಾಗಿರೋವಾಗ ಆ ಇಳಾ ಹುಚ್ಚುಚ್ಚಾಗಿ ಕುಣುದ್ಲು ಅಂತ ನೀನ್ಯಾಕೆ ಎಲ್ರ ಮೇಲೇರಿ ಹೋದ್ಯೋ?!!! ನಂಗೆಷ್ಟು ಬೇಜಾರಾಯ್ತು ಗೊತ್ತಾ? ಅತ್ಲಾಗೆ ನಿನ್ನ ಸಮರ್ಥಿಸಿಕೊಳ್ಳೋಹಾಗಿಲ್ಲ.. ಇತ್ಲಾಗೆ ನಿನ್ನ ಸಿಟ್ಟಿಗೆ ಬಲಿಯಾದ ಆ ಪಾಪದ ಜನ್ರ ಗೋಳು ನೋಡೋ ಹಾಗಿಲ್ಲ. ಅಲ್ವೋ ನಿಂಗೆ ಅನ್ಯಾಯ ಆಗಿದ್ರೆ ಸರಿ.... ಅದ್ಕಾದ್ರೂ ಸಿಟ್ಟು ತೋರ್ಸು... ಅದ್ನ ಬಿಟ್ಟು ಆ ಇಳಾ ಸಿಟ್ಟಿಗೆಲ್ಲಾ ನೀನು ಉರಿದೇಳೋದು ಬೇಡ....ತಿಳೀತಾ?

ಹ್ಮ್ಂ.... ನಿನ್ನೊಳಿದೆ ನನ್ನ ಮನಸು... ಎಂದೆಲ್ಲಾ ಹಾಡಿದ್ದೆ... ಹೊಗಳಿದ್ದೆ. ಈಗ ನೋಡಿದ್ರೆ ಎಲ್ರ ಮನಸೂ ನಿನ್ನೊಳಿದೆ. ಆದ್ರೆ ಅವ್ರು ಯಾರೂ ನಿನ್ನ ಕೊಂಡಾಡ್ತಾ ಇಲ್ಲಾ ತಿಳ್ಕೊ ಪೆದ್ದ. "ಹುಟ್ಟಿದ-ಹುಟ್ಟದ ನನ್ನೊಳಗಿನ ಕವಿತೆಯೂ ನೀ..." ಎಂದೂ ತಿಳ್ಕೊಂಡಿದ್ದೆ. ಆದ್ರೆ ಮೊನ್ನೆಯ ನಿನ್ನ ಭಯಂಕರ ರೂಪ ನೋಡಿ... ಒಂದು ಹನಿ ಕವಿತೆಯೂ ಹುಟ್ತಿಲ್ಲ ನೋಡು...! ನಿಜ ಹೇಳ್ಲಾ... ಇನ್ನು ಇದ್ಕೂ ಸಿಟ್ಟು ಮಾಡ್ಕೋಬೇಡ... ಮೊದ್ಲು ನಂಗೆ ನಿನ್ನ ಕಂಡ್ರೆ ಬರೀ ಪ್ರೀತಿ, ಸ್ನೇಹವಿತ್ತು. ಆದ್ರೆ ಈಗ ಸ್ವಲ್ಪ.... ಸ್ವಲ್ಪಕ್ಕಿಂತ ತುಸು ಹೆಚ್ಚೆ ಭಯವೂ ಕಾಡ್ತಿದೆ. ನಾಳೆ ನನ್ನ ಮೇಲಿನ ಸಿಟ್ಟಿಗೋ... ನನ್ನ ಮೇಲಿನ ಹೊಟ್ಟೆಕಿಚ್ಚಿಗೆ ಆ ಇಳಾ ನಿನ್ ಕಿವಿ ಚುಚ್ಚಿಯೋ... ನೀನು ನನ್ನೂರಿನ ಜನ್ರಿಗೂ ತೊಂದ್ರೆ ಕೊಟ್ರೆ? ಆವಾಗ ಮಾತ್ರ ನಾನು ಸುಮ್ನಿರೊಲ್ಲ ನೋಡು. 

ಅದ್ಯಾರೋ ಮೊನ್ನೆ ಹಾಡ್ಕೊತ್ತಿದ್ರಪ್ಪಾ "ಕಡಲ ಮೆಲೆ ಸಾವಿರರು ಮೈಲಿ ಸಾಗಿಯೂ, ನೀರಿನಾಳ ತಿಳಿಯಿತೇನೆ ಹಾಯಿದೋಣಿಗೆ...." ಎಂದು. ಅದು ಈಗ ನಿನ್ನ ನೋಡಿದ್ರೆ ಹೌದು ಅನ್ಸೊತ್ತೆ. ನಿನ್ನ ಅರ್ಥ ಮಾಡ್ಕೊಳೋಕೆ ನಂಗಿನ್ನೂ ಆಗಿಲ್ಲ ಅಂತ ದುಃಖ ಆಗ್ತಿದೆ. ಆದ್ರೂ ಅರ್ಥ ಮಾಡ್ಕೊಳೋಕೆ ಪ್ರಯತ್ನಿಸ್ತೀನಿ... ಹೇಗಿದ್ರೂ ಮುಂದಿನ ತಿಂಗ್ಳು ಬರ್ತಿದ್ದೀನಿ ಅಲ್ಲಿಗೆ... ಅಲ್ಲೀವರೆಗೆ ಹಾಯಾಗಿರು. ಆಮೆಲೆ ನಾ ತಗೋಳೋ ಕ್ಲಾಸ್‌ಗೆ ನೀನು ತಯಾರಾಗ್ಬೇಕಾಗೊತ್ತೆ! ಆದ್ರೆ ಮಾರಾಯಾ ಮೊದ್ಲೇ ಹೇಳ್ಬಿಡು.. ನಿನ್ನ ಗೆಳತಿ ಇಳೆ ಏನಾದ್ರೂ ಕಾರಾಮತಿನೋ ಭಾನಮತಿನೋ ಮಾಡೋರೀತಿಲಿ ಇದ್ದಾಳ ಅಂತ.. ಯಾವ್ದಕ್ಕೂ ಆಕೆ ಜೊತೆಯೂ ಒಂದು ಒಪ್ಪಂದ ಮಾಡ್ಕೊಂಡೇ ಬರೋದು ಲೇಸೇನೋ... ನನ್ನವ್ರಿಗೂ ಹೇಳಿ ಹೇಳಿ ಸಾಕಾಗಿದೆ... ನಿನ್ನ ಗೆಳತಿಗೆ ತುಂಬಾ ತೊಂದ್ರೆ ಕೊಡ್ಬೇಡಿ.. ಆಕೆಗೆ ಸಿಟ್ಟು ಬಂದ್ರೆ ನಿನ್ನ ಚುಚ್ಚಿ ಎಬ್ಬಿಸ್ತಾಳೆ ಅಂತ... ಕೇಳೋದೇ ಇಲ್ಲಾ ನೋಡು... ನಂಗೋ ಗೊಂದಲ.... ಅತ್ತ ಅವ್ರನ್ನ ಬಿಡ್ಲಾರೆ.. ಇತ್ತ ನಿನ್ನ ಮೋಹನೂ ಬಿಡ್ಲಾರೆ... ಹ್ಮ್ಂ.. ಅವ್ರೆಲ್ಲಾ ನಿನ್ಮುಂದೆ ಚಿಕ್ಕೋರಪ್ಪಾ.. ನೀನೇ ಸ್ವಲ್ಪ ಸುಧಾರಿಸ್ಕೊಂಡು ಹೋಗು. ಹೇಗಿದ್ರೂ ಈಗ ಸ್ವಲ್ಪ ಬುದ್ಧಿ ಕಲ್ಸಿದೀಯಾ ಅಂದ್ಕೋತೀನಿ.... ತಿದ್ಕೊಳೋರಾದ್ರೆ ತಿದ್ಕೊತಾರೆ. ಆದ್ರೆ ಅಲ್ಲಿವರೆಗಾದ್ರೂ ಸ್ವಲ್ಪ ಸಮಯ ಕೊಟ್ಟು ನೋಡು. ನಿನ್ಮೇಲೆ ನಾನಿಟ್ಟಿರೋ ಪ್ರೀತಿ ಮೇಲಾಣೆ... ಸ್ವಲ್ಪ ತಾಳ್ಮೆ ತಂದ್ಕೊ. ಹೆಚ್ಚು ಕಾಯ್ಸೊಲ್ಲ.. ಒಂದೇ ತಿಂಗ್ಳು.... ಬೇಗ ಬರ್ತೀನಿ... ನಿನ್ನ ಅಹವಾಲನ್ನೆಲ್ಲಾ ಖುದ್ದಾಗಿ ಕೇಳಿ ತಿಳ್ಕೊತೀನಿ. ನನ್ನ ಮೇಲಿನ ಪ್ರೀತಿಗಾದ್ರೂ ನೀನು, ನೀನಿದ್ದಲ್ಲೇ ಶಾಂತವಾಗಿ ಕಾಯ್ತಿರ್ತೀಯಾ ಅಂತ ಆಶಿಸುತ್ತಾ...

ಇತಿ,
ನಿನ್ನ ಪ್ರೀತಿಯ...

------
-ತೇಜಸ್ವಿನಿ ಹೆಗಡೆ.

12 ಕಾಮೆಂಟ್‌ಗಳು:

ಮನಸು ಹೇಳಿದರು...

ತೇಜು,
ಪತ್ರ ಚೆನ್ನಾಗಿದೆ... ಇಷ್ಟು ಕಾಲ ಒಟ್ಟಿಗಿದ್ದು ಅರಿತೆವೇನು ನಾವು ನಮ್ಮ ಅಂತರಾಳವ... ಎಂಬಂತೆ ನಮ್ಮ ಅಂತರಾಳವನ್ನೇ ನಾವು ಅರ್ಥಮಾಡಿಕೊಂಡಿರೋಲ್ಲ ಕೆಲವೊಮ್ಮೆ... ಹಹ.. ಇನ್ನು ಒಲವಿನ ಗೆಳೆಯನ್ನು ಅರ್ಥಮಾಡಿಕೊಳ್ಳೊದ್ದರಲ್ಲಿ ಸ್ವಲ್ಪ ಕಷ್ಟವಾಗಿರುತ್ತೆ ಹಹ... ಏನೇ ಆಗಲಿ ನಿಮ್ಮ ಪತ್ರ ನೋಡಿದ್ರೆ ಖಂಡಿತಾ ಶಾಂತ ಚಿತ್ತನಾಗಿರುತ್ತಾನೆ ಬಿಡಿ.... ಅದೂ ಅಲ್ಲದೆ ಕೈಮುಗಿದು ಕೇಳ್ಕೋತಾ ಇದ್ದೀರಿ ಬೇರೆ ಹಹಹ...

PARAANJAPE K.N. ಹೇಳಿದರು...

ಒಲವಿನ ಗೆಳೆಯನಿಗೆ ಬರೆದ ಪತ್ರದ ಒಕ್ಕಣಿಕೆ ಕಾವ್ಯಮಯವಾಗಿದೆ. ಚೆನ್ನಾಗಿದೆ.

ಸಿಂಧು sindhu ಹೇಳಿದರು...

ಪ್ರೀತಿಯ ತೇಜಸ್ವಿನಿ,

ವಿನೂತನ ಅಭಿವ್ಯಕ್ತಿ. ಆದ್ರೆ ಅವನ ಗೆಳತಿ ಇಳೆನ ಬಯ್ದಿದ್ದು ಸರಿ ಇಲ್ಲ. :)
ಆದ್ರೂ ಇವರಿಬ್ಬರ ಕಾದಾಟದಲ್ಲಿ ಧರೆ ಹೊತ್ತಿ ಉರಿದೊಡೆ ಅಂತ ಸೂರು/ಬದುಕು ಕಳೆದುಕೊಂಡವರ ಗತಿ ಏನು?
ಏನೆ ಇರಲಿ ನಿಮ್ ಗೆಳ್ಯಂಗೆ ನಿಮ್ ಅಹವಾಲು ಹೇಳದು ಮಾತ್ರ ಮರಿಯಡಿ.

-ಪ್ರೀತಿಯಿಂದ, ಸಿಂಧು

ತೇಜಸ್ವಿನಿ ಹೆಗಡೆ ಹೇಳಿದರು...

@ಮನಸು,

ನೋಡ್ಬೇಕು.. ಇನ್ನಾದ್ರೂ ಪ್ರಸನ್ನನಾಗಿ ಸುಮ್ನಿರ್ತಾನ ಎಂದು.... ಯಾರೆಷ್ಟು ಬಿನ್ನವಿಸಿಕೊಂಡ್ರೂ ಒಮ್ಮೊಮ್ಮೆ ಅವನ ತಡೆಯೋಗೆ ಅವನ ಗೆಳತಿ ಇಳೆಗೂ ಆಗೊಲ್ಲ!! ಧನ್ಯವಾದಗಳು ಮೆಚ್ಚುಗೆಗೆ.

@ಪರಾಂಜಪೆ ಸರ್,

ಧನ್ಯವಾದಗಳು.

@ಪ್ರಿಯ ಸಿಂಧು,

ಅವನ ಗೆಳತಿ ಇಳೆಗೆ ಬಯ್ಯೋದು ನನ್ನ ಉದ್ದೇಶ ಆಗಿರ್ಲಿಲ್ಲ... ಸವತಿ ಮಾತ್ರರ್ಯ ಇದ್ದ ಹಾಗೆ ಇದೊಂಥರ ಗೆಳತಿ ಮಾತ್ಸರ್ಯ ಅನ್ನು... :) ಮತ್ತೆ ಇದು ಅವ್ರಿಬ್ರ ತಿಕ್ಕಾಟ ಅಲ್ಲ ಅನ್ನಿಸ್ತು. ಉತ್ಕಟ ಪ್ರೀತಿ... ಇಳೆಗೆ ನೋವಾದ್ರೆ ಇವಂಗೆ ಸಿಟ್ಟು ಉಕ್ಕಿ ಬರ್ತು.... ಆಕೆ ನೋವಿಂದ ನರಳಿ "ನಡುಗಿದರೆ" ಇವಂಕೆ ಕ್ರೋಧ ಉಕ್ಕೇರಿ ಬರೊತ್ತೆ... ಹ್ಮ್.. ಹೇಳಿದ್ನಲ್ಲಾ.. ನಂಗೊಳ್ಳೆ ಇಬ್ಬಗೆ... ಆಚೀನೂ ಇಲ್ಲ.. ಈಚೆನೂ ಅಲ್ಲ... ಖಂಡಿತ.. ಹೋದಾಗ ಎಲ್ಲರ ಅಹವಾಲೂ ಹೇಳ್ತಿನಿ.

ಧನ್ಯವಾದ ತುಂಬಾ..

sunaath ಹೇಳಿದರು...

ಒಂದು ಮೂಡನ್ನು ಭಾವಪೂರ್ಣವಾಗಿ ಚಿತ್ರಿಸಿದ್ದೀರಿ.

Harisha - ಹರೀಶ ಹೇಳಿದರು...

ತೇಜಕ್ಕಾ, ಸಮುದ್ರರಾಜನ "personification" ಸಖತ್ತಾಗಿದ್ದು.. ಜಪಾನಿನ ಅಣುಸ್ಥಾವರಗಳು ೮.೨ ತೀವ್ರತೆ ತಡಕಳಷ್ಟು ಬಲಶಾಲಿ.. ಆದ್ರೆ ಆಗಿದ್ದು ೯.೦ ತೀವ್ರತೆ ಭೂಕಂಪ. ಪ್ರಕೃತಿ ಮುಂದೆ ನಾವೆಷ್ಟು ಕುಬ್ಜರು ಅಲ್ದ?

ಜಲನಯನ ಹೇಳಿದರು...

ತೇಜಸ್ವಿನಿ, ನಿಮ್ಮ ಆ ಬಹು ಹಿಂದಿನ ಗೆಳೆಯ ಹಾಗೇ ಉಳಿದಿಲ್ಲ...ಅಲ್ವಾ..? ಆದರೂ ಇಳೆ ಸುಮ್ಮನಿರುವ ಪೈಕಿ ಅಲ್ಲ ಅವನನ್ನು ಪೀಡಿಸೋದು ಹೊಸದಲ್ಲ ಅವಳಿಗೆ..
ಚನ್ನಾಗಿದೆ..ಇಳೆಯೊಡಗೂಡೆ ಸಾಗರ ಸುನಾಮಿಯಾದ ಬಗೆ ಚನ್ನಾಗಿ ನಿರೂಪಿಸಿದ್ದೀರಿ...ಸುಮ್ಮನಿರ್ತಾನಾ ನಿಮ್ಮ ಆ ಸ್ನೇಹಿತ ...ಅದೂ ಯಾವಾಗಲೂ ಚಂಚಲೆಯೆನಿಸುವ ಇಳೆಯ ಆ ಕ್ಷೇತ್ರದಲ್ಲಿ...?? ಕಾದು ನೋಡಬೇಕು...

ವಾಣಿಶ್ರೀ ಭಟ್ ಹೇಳಿದರು...

ಉಕ್ಕಿ ಬಂದ ಸಮುದ್ರನ ಪ್ರೀತಿಯಿಂದ ಗದರಿದ ರೀತಿ ಚೆನ್ನಾಗಿದೆ... ಒಳ್ಳೆಯ ಲೇಖನ.ನಿಮ್ಮ ಗೆಳೆಯ ನಿಮ್ಮ ಮಾತುಗಳನ್ನು ಕೇಳಲಿ...

ಸುಧೇಶ್ ಶೆಟ್ಟಿ ಹೇಳಿದರು...

:)

ಚೆನ್ನಾಗಿ ಕ್ಲಾಸ್ ತಗೊಳ್ಳಿ ಅವನಿಗೆ :) ಅವನು ಮಾಡಿರುವ ಅವಾ೦ತರ ಅಷ್ಟಿಷ್ಟಲ್ಲ :)

Ashok.V.Shetty, Kodlady ಹೇಳಿದರು...

Nimma ee 'patra' ishta aitu...

Unknown ಹೇಳಿದರು...

super

ತೇಜಸ್ವಿನಿ ಹೆಗಡೆ ಹೇಳಿದರು...

@ಕಾಕಾ,

ಧನ್ಯವಾದಗಳು...:)

@ಹರೀಶ್,

ಮಾನವ ಎಷ್ಟೇ ತಂತ್ರಜ್ಞಾನ ಹುಡುಕಲಿ.. ಪ್ರಕೃತಿ ಮೀರಲು ಸಾಧ್ಯವೇ ಇಲ್ಲ. ಈ ಸತ್ಯ ಅರಿಯದ ಹೊರತು ಇಂತಹ ವಿಕೋಪಗಳನ್ನು ತಪ್ಪಿಸಲೂ ಸಾಧ್ಯವಿಲ್ಲ!! :(

ಧನ್ಯವಾದ.

@ಆಝಾದ್ ಸರ್,

ಇಳೆ ಚಂಚಲೆ ಅಲ್ಲ ಸರ್... ಅದನ್ನು ಅಸ್ಥಿರಗೊಳಿಸುತ್ತಿದ್ದೇವೆ ಅದರ ಮೇಲೆ ನಿಂತು ವಾಸಿಸುವ ನಾವು! ಹಾಗಾಗಿಯೇ ಅದ್ರ ಪ್ರತಿಭಟನೆ ಜಾಸ್ತಿಯಾಗುತ್ತಿದೆ ಇತ್ತೀಚಿಗೆ! ಹ್ಮ್ಂ... ಅವನು ಕೇಳ್ತಾನೋ ಇಲ್ವೋ.. ಹೇಳೋದು ನನ್ನ ಧರ್ಮ ಅದ್ಕೇ ಹೋಗ್ತಾ ಇದ್ದೀನಿ ಹೇಳಿ ಬರೋಕೆ :)

ಧನ್ಯವಾದಗಳು.

@ವಾಣಿಶ್ರೀ, @ಸುಧೇಶ್,

ಮೆಚ್ಚುಗೆಗೆ ಧನ್ಯವಾದಗಳು.

@ಅಶೋಕ್ ಅವರೆ,

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

@ಸುನೀಲ್ ಅವರೆ,

ಮಾನಸಕ್ಕೆ ಸ್ವಾಗತ. ಮೆಚ್ಚುಗೆಗೆ ಧನ್ಯವಾದ.