ಭಾನುವಾರ, ಮಾರ್ಚ್ 27, 2011

ನಿವೇದನೆ

 ಕೃಪೆ : ಉದಯವಾಣಿ ಸಾಪ್ತಾಹಿಕ ಸಂಪದ
ಟಿ.ವಿ. ಪರದೆಯ ಮೇಲಿಂದ ಹೊರ ಹೊಮ್ಮುತ್ತಿದ್ದ ನೀಲಿ ಬೆಳಕಿನ ಕೋಲುಗಳು ಆ ಕೋಣೆಯ ಕತ್ತಲೆಯನ್ನು ಸೀಳಿ ಅವರಿಬ್ಬರ ಮುಖದ ಮೇಲೆ ಬಿದ್ದು ಲಾಸ್ಯವಾಡುತ್ತಿದ್ದವು. ಚಿತ್ರ ಆರಂಭವಾಗಿ ಕೇವಲ ಹದಿನೈದಿ ನಿಮಿಷಗಳಷ್ಟೇ ಆಗಿದ್ದವೇನೋ.... ಆರಂಭದಲ್ಲೇ ಬಂದ ಆ ಪಾತ್ರದ ಕರುಣಾಜನಕ ಸ್ಥಿತಿ, ನಾಯಕನ ಅವಸ್ಥೆ - ಎಲ್ಲವನ್ನೂ ಕಾಣುತ್ತಿದ್ದಂತೇ ಮೊದಲ ಬಾರಿಗೆ ಅವಳಿಗೆ ಅನಿಸಿದ್ದು...‘ತಾನು ಮೀರಾಳ ಮಾತು ಕೇಳಿ ಈ ಚಿತ್ರದ ಸಿ.ಡಿ. ತಂದು ಇವನಿಗೆ ಹಾಕಿದ್ದು ತಪ್ಪೇನೋ..’ ಎಂದು. ಅವಳೇನೋ ಗೆಳತಿಯ ಹೊಗಳಿಕೆಯನ್ನು ನಂಬಿಯೇ ಹೊಸದಾಗಿ ಬಿಡುಗಡೆ ಆಗಿದ್ದ ಈ ಚಲನಚಿತ್ರವನ್ನು ತಂದಿದ್ದಳು. ಆದರೆ ಚಿತ್ರ ಪ್ರಾರಂಭವಾಗುತ್ತಿದ್ದ ಕೆಲವೇ ನಿಮಿಷಗಳಲ್ಲೇ ಆಕಾಶ್‌ನ ಮುಖದಲ್ಲಾದ ಸಣ್ಣ ಬದಲಾವಣೆಯನ್ನ ಆ ನೀಲಿ ಬೆಳಕಿನ ಕೋಲಿನೊಳಗೇ ಕಂಡುಬಿಟ್ಟಿದ್ದಳು ನಿವೇದಿತ. ಮತ್ತೊಮ್ಮೆ ಮನದಲ್ಲೇ ಮೀರಾಳನ್ನು ಹಳಿದುಕೊಳ್ಳುತ್ತಾ ಏನನ್ನೋ ಹೇಳಲು ಹೊರಟವಳನ್ನು ತಡೆದದ್ದು ನಾಯಕನ ಆ ಮಾತು....."ಮುಝೆ ಕೋರ್ಟ್ ಮೆ ಏಕ್ ಪಿಟಿಷನ್ ಫೈಲ್ ಕರನೀ ಹೈ...ಮೆರೆ ಮರ್ನೆ ಕಿ ಪಿಟಿಷನ್...." ಅಷ್ಟೇ... ಮತ್ತೊಂದು ವಾಕ್ಯವನ್ನೂ ಕೇಳಲಾಗದಂತೇ ಸ್ವಿಚ್ ಆಫ್ ಮಾಡಿಬಿಟ್ಟಳು. ಮೊದಲಬಾರಿ ಅವಳಿಗೆ ಸ್ನೇಹಿತೆಯ ಮೇಲೆ ಅಸಾಧ್ಯ ಕೋಪ ಬಂದಿತ್ತು! ಆದರೆ ಆಕಾಶ್ ಮಾತ್ರ ಹಠ ಹೊತ್ತು ಅವಳಿಗೆ ದೂಸರಾ ಮಾತಾಡಲು ಅವಕಾಶ ಕೊಡದೇ ಮತ್ತೆ ಟಿ.ವಿ. ಹಾಕಿ, ಪೂರ್ತಿ ಚಿತ್ರ ನೋಡಿದ್ದ. ಚಿತ್ರ ಮುಗಿವಷ್ಟೂ ಹೊತ್ತು ಅವಳು ಮಾತ್ರ ಅಸಹನೆಯಿಂದ ಕುದ್ದು ಹೋಗಿದ್ದಳು. ಕೊನೆಯಲ್ಲಿ ನಾಯಕನಿಗೆ ಕಾನೂನು ದಯಾಮರಣ ನೀಡಲು ಒಪ್ಪಿಗೆ ನೀಡದಿದ್ದರೂ, ಅವನ ಪ್ರೇಯಸಿ ತಾನೇ ಅವನಿಗೆ ಯಾತನೆಯಿಂದ ವಿಮೋಚನೆ ನೀಡುವುದಾಗಿ ಮಾತುಕೊಡುವುದರೊಂದಿಗೆ ಚಿತ್ರ ಕೊನೆಗೊಂಡಿತ್ತು. ಇದರಿಂದ ನಿವೇದಿತ ಸಂಪೂರ್ಣ ಕಂಗಾಲಾಗಿಹೋದರೆ, ಆಕಾಶ್ ಮಾತ್ರ ಏನೋ ಚಿಂತಿಸುತಿರುವವನಂತೆ ಕಂಡ.

"ಯಾಕೆ ನಿವಿ ಆಫ್ ಮಾಡಿದ್ದೆ? ತುಂಬಾ ಚೆನ್ನಾಗಿತ್ತು ಪಿಕ್ಚರ್...ನಾಯಕಿ ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ಲು ನಾಯಕನ ಅಸಹಾಯಕತೆಯನ್ನು ಅಲ್ವಾ? ಅದಕ್ಕೇ ಅವನ ನೋವಿಗೆ ಮುಕ್ತಿ ಕೊಡೋಕೆ ಮುಂದಾದ್ಲು. ಹೌದು....ನಿಂಗೆ ಬೇಜಾರಾಗಿದ್ದು ಯಾವುದ್ರಿಂದ? ಆ ನಾಯಕನ ದೈಹಿಕ ವಿಕಲತೆಯ ಪರಮಾವಧಿಯಿಂದಲೋ ಇಲ್ಲಾ ಅವನು ತನ್ನ ಅವಸ್ಥೆಗೆ ಒಂದು ನ್ಯಾಯಯುತವಾದ ಮರಣವನ್ನು... ಅಂದ್ರೆ...ಯೂಥನೇಷಿಯಾ ಕೇಳಿದ್ದರಿಂದಲೋ..?" ಎಂದು ಕಿರುನಗುತ್ತಾ ಅವಳನ್ನು ಕೆಣಕಿದ್ದೇ, ಆವರೆಗೆ ಅದುಮಿಟ್ಟಿದ್ದ ಅವಳ ಅಸಹನೆ, ಸಿಟ್ಟು ಹೊರದಬ್ಬಿ ಬಂತು. 

"ಸುಮ್ನಿರು ಆಕಾಶ್....ನಂಗೆ ನೀನು ಹೀಗೆಲ್ಲಾ ಮಾತಾಡೋದೇ ಇಷ್ಟ ಆಗೊಲ್ಲ.....ನನ್ನ ಹತ್ರ ಇಂಥ ಹುಚ್ಚು ಚಿತ್ರವನ್ನ ನೋಡೋಕೆ ಆಗೊಲ್ಲ...ಅದ್ಕೆ ಕಾರಣ ನೀನು ಕೇಳಿದ ಎರಡು ಪ್ರಶ್ನೆನೂ ಅಲ್ಲ. ಮೊದ್ಲನೇದಾಗಿ.....ಹದಿನಾಲ್ಕು ವರ್ಷ ತನ್ನ ನ್ಯೂನ್ಯತೆಯ ವಿರುದ್ಧ ಹೋರಾಡಿದವನು ಇದ್ದಕ್ಕಿದ್ದಂತೇ ಹತಾಶನಾಗೋದು.....ಅದನ್ನೇ ಸರಿ ಅಂತ ನಿರ್ದೇಶಕ ಸಾಬೀತು ಪಡಿಸಲು ಹೋಗೋದು....ಈ ಕಥೆಯೇ ಇಷ್ಟವಾಗ್ಲಿಲ್ಲ. ಎರಡನೇದಾಗಿ ನಾನು ಯೂಥನೇಷಿಯಾವನ್ನು ಬೆಂಬಲಿಸೊಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ನೀನು ತಿಳ್ಕೊ.....ನಾನು ನಿವೇದಿತ....ಆ ತಲೆಕೆಟ್ಟ ನಾಯಕಿಯಲ್ಲ. ಈಗ ಈ ವಿಷ್ಯವನ್ನ ಇಲ್ಲೇ ಬಿಟ್ಬಿಡೋಣ.....ದಯವಿಟ್ಟು ಬೇರೇನಾದ್ರೂ ಮಾತಾಡೋಣ..." ಎಂದವಳನ್ನು ಒಂದು ಕ್ಷಣ ನೇರವಾಗಿ ನೋಡಿದ ಆಕಾಶ್. ಆರು ವರುಷಗಳಿಂದ ಗಾಢವಾಗಿ ಪ್ರೀತಿಸುತಿರುವ ತನ್ನವನ ಪ್ರತಿಯೊಂದು ಭಾವವನ್ನೂ ಸುಲಭವಾಗಿ ಗ್ರಹಿಸಬಲ್ಲವಳಾಗಿದ್ದಳು ನಿವೇದಿತ.

"ಸರಿಯಪ್ಪಾ...ನಿನ್ನ ಮನಸಲ್ಲಿರೋದ್ನ ಹೇಳು... ಕೇಳುವಂತವಳಾಗ್ತೀನಿ...ನಿಮ್ಮ ಮನದಲ್ಲೇನಡಗಿದೆ ಡಾ. ಆಕಾಶ್" ಎಂದು ನಾಟಕೀಯವಾಗಿ ಕೇಳಿದ ಆ ವೈಖರಿಗೆ ನಕ್ಕು ಅವಳ ಮುಂಗುರುಳನ್ನು ಸವರಿದ ಆಕಾಶ್.

"ನಿವಿ... ನನ್ನ ಮಾತನ್ನ ಪೂರ್ತಿಯಾಗಿ ಕೇಳು.....ಮಧ್ಯದಲ್ಲೇ ತಡಿಬೇಡ. ನಾನು ಇದನ್ನೆಲ್ಲಾ ಹೇಳ್ತಿರೋದು ಈ ಚಿತ್ರದೊಳಗಿನ ಕಲ್ಪನೆಯಿಂದಲ್ಲಾ.... ಹಲವು ದಿನಗಳಿಂದಲೂ ನನ್ನ ಕೊರೀತಿದೆ ಈ ವಿಷ್ಯ. ನಿನ್ನ ಹತ್ರ ಹೇಳ್ಕೋಬೇಕು ಅಂತ ಒದ್ದಾಡ್ತಾ ಇದ್ದೆ.....ಆದ್ರೆ ಈ ಚಿತ್ರದಲ್ಲಿ ಈ ವಿಷ್ಯ ಬಂದಿದ್ದು ನಂಗೆ ಹೆಲ್ಪ್ ಆಯ್ತು ಅಷ್ಟೇ. ನಿವೇದಿತ ನಾನೂ ಯೋಚಿಸ್ತಾನೇ ಇದ್ದಿನಿ.... ನಾನು....ನಾನೂ ದಯಾಮರಣಕ್ಕೆ ಯಾಕೆ ಪ್ರಯತ್ನ ಮಾಡ್ಬಾರ್ದು ಅಂತ... ಈಗ್ಲೇ ಏನೂ ಹೇಳ್ಬೇಡ...ಮೊದ್ಲು ನಾನು ಹೇಳೊದನ್ನ ಕೇಳು... ಈಗಿರೋ ಸ್ಥಿತಿಯನ್ನೇ ಸಹಿಸೋಕೆ ಆಗ್ತಾ ಇಲ್ಲಾ.... ಇನ್ನು ದಿನ ಹೋದಂತೇ ಏನಾಗೊತ್ತೆ ಅನ್ನೋದು ನಿನಗಿಂತ ನನಗೇ ಚೆನ್ನಾಗಿ ಗೊತ್ತು. ವರವೋ ಶಾಪವೋ ನಾನೂ ಓರ್ವ ಡಾಕ್ಟರ್. ಇದಕ್ಕಿಂತ ನಂಗೇನೂ ಗೊತ್ತಿಲ್ದೇ ಇರೋದೆ ಚೆನ್ನಾಗಿತ್ತೆನೋ ಅನ್ಸೊತ್ತೆ ನಿವಿ.  ನನಗೆ ಆಗಿದ್ದು, ಆಗ್ತಿರೋದು ಎಲ್ಲವೂ ಚೆನ್ನಾಗಿ ಅರ್ಥ ಆಗ್ತಿದೆ....ಈ  ಸತ್ಯ ನನ್ನ ದಿನೇ ದಿನೇ ಕೊಲ್ತಾ ಇದೆ. ದಯವಿಟ್ಟು ನನ್ನ ಅರ್ಥ ಮಾಡ್ಕೋತೀಯಾ....?" ಎಂದವನ ದನಿಯೊಳಗಿದ್ದ ಆರ್ದ್ರತೆ ಅವಳನ್ನು ಸಂಪೂರ್ಣ ತೊಯ್ದು ಹಾಕಿತು. ಅರೆಕ್ಷಣ ಅವಳಿಗೇನೋ ಅರಿವೇ ಆಗಲಿಲ್ಲ. ಅರ್ಥವಾದ ಮೇಲೆ ಅಲ್ಲಿ ನಿಲ್ಲಲಾಗದೇ ಒಂದಕ್ಷರ ನುಡಿಯದೇ ಹೊರಟು ಬಿಟ್ಟಳು. 

-೨-

ಅಪ್ಪ ಅಮ್ಮನ ಮುದ್ದಿನ ಏಕೈಕ ಮಗಳಾಗಿದ್ದ ನಿವೇದಿತಳಿಗೆ ಮೊದಲಿನಿಂದಲೂ ಸಾಹಿತ್ಯ, ಚಿತ್ರಕಲೆ, ಸಂಗೀತ ಎಂದರೆ ಎಲ್ಲಿಲ್ಲದ ಆಸಕ್ತಿ. ಹಾಗಾಗಿಯೇ ಅವಳು ಸೇರಿದ್ದು ಕಾಲಾನಿಕೇತನವನ್ನು. ವೃತ್ತಿಯಲ್ಲಿ ಮೂಳೆ ತಜ್ಞನಾಗಿದ್ದರೂ, ಸಂಗೀತದಲ್ಲಿ ಅಪಾರ ಅಸಕ್ತಿ ಹೊಂದಿದ್ದ ಆಕಾಶ್ ಬಿಡುವಾದಾಗಲೆಲ್ಲಾ ಕಲಾನಿಕೇತನಕ್ಕೆ ಭೇಟಿಕೊಡುತ್ತಿದ್ದ. ಅಲ್ಲಿಯೇ ಪರಿಚಯವಾಗಿ ಚಿಗುರಿದ ಅವರಿಬ್ಬರ ಸ್ನೇಹ ಪ್ರೇಮಕ್ಕೆ ತಿರುಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಮನೆಯವರ ಒಪ್ಪಿಗೆಯ ಜೊತೆಗೇ ನಿಶ್ಚಿತಾರ್ಥವೂ ಮುಗಿದಿತ್ತು. ಮದುವೆಗೆ ನಿವೇದಿತಳ ಕೋರ್ಸ್ ಮುಗಿಯುವುದನ್ನೇ ಕಾಯುತ್ತಿದ್ದ ಆಕಾಶನನ್ನು ವರಿಸಿದ್ದು "ನ್ಯೂರೋ ಮಸ್ಕ್ಯುಲಾರ್ ಡೈಸ್ಟ್ರೋಫಿ" ಎನ್ನುವ ನರ ಸಂಬಂಧಿತ ಕಾಯಿಲೆ! ವ್ಯಕ್ತಿಯನ್ನು ನಿಧಾನವಾಗಿ, ಹಂತ ಹಂತವಾಗಿ ಸಾವಿನತ್ತ ಎಳೆದೊಯ್ಯುವ ಈ ವಿರಳ ಕಾಯಿಲೆಯ ಸೂಚನೆ ಅವನಲ್ಲಿ ಮೊದಲು ಕಾಣಿಸಿಕೊಂಡಿದ್ದು ಈಗೊಂದು ವರುಷದ ಹಿಂದೆಯಷ್ಟೇ. ನಿವೇದಿತಾಳೊಂದಿಗೆ ಜಾಗಿಂಗ್‌ಗೆ ಹೋಗುತ್ತಿದ್ದ ಅವನ ನಡಿಗೆ ಹೆಜ್ಜೆ ತಪ್ಪಿದಾಗ, ಅತಿಯಾದ ಸುಸ್ತು, ಆಯಾಸ, ಮೂಳೆ ಸವೆತ ಕಾಣಿಸತೊಡಗಿದಂತೇ ಸಂಶಯಗೊಂಡ ಆಕಾಶ್, ತನ್ನ ಸಹೋದ್ಯೋಗಿ, ನರತಜ್ಞ ಡಾ.ಸುರೇಶ್‌ನನ್ನು ಸಂಪರ್ಕಿಸಿದ್ದ. ಎಲ್ಲಾ ಪರೀಕ್ಷೆಗಳ ನಂತರ ಹೊರ ಬಿದ್ದ ಫಲಿತಾಂಶ ಮಾತ್ರ ಅವನೊಳಗೆ ಪೂರ್ತಿ ಅಂಧಕಾರವನ್ನೇ ತುಂಬಿತು. ಆಗಲೇ ನಿವೇದಿತ ಅವನ ಬಾಳಿಗೆ ನಿಜವಾಗಿಯೂ ಸಂಗಾತಿಯಾದಳು. ಮದುವೆ ಎನ್ನುವ ಮೂರಕ್ಷರಕ್ಕೆ ಸಾವಿರ ಕನಸನ್ನು ಸುತ್ತಿದ್ದವಳು ಎಲ್ಲವನ್ನೂ ಬಿಚ್ಚೆಸೆದು,  ಅವನ ಬದುಕಲ್ಲಿ ಭರವಸೆಯನ್ನು ಮೂಡಿಸುವ ಏಕೈಕ ಕನಸೊಂದನ್ನೇ ಹೊದ್ದು ಹಿಂಬಾಲಿಸಿದಳು.

"ನಿವಿ.. ನನ್ನ ಮರ್ತು ಬಿಡು... ಬೇರೆ ಯಾರನ್ನಾದ್ರೂ ಮದ್ವೆ ಆಗಿ ಸುಖವಾಗಿರು... ಎಂದೆಲ್ಲಾ ಕೆಲಸಕ್ಕೆ ಬಾರದ ಮಾತನ್ನು ಆಡೋ ಯೋಚನೆಯೂ ಬೇಡ ಆಕಾಶ್... ಒಂದೇ ಮಾತಲ್ಲಿ ಹೇಳ್ತೀನಿ ಕೇಳು...ನೀನು ನಂಗೆ ಹೀಗೆಲ್ಲಾ ಹೇಳಿದ್ರೂ ನಾನು ನಿನ್ನ ಇಂಥ ಮಾತಿಗೆಲ್ಲಾ ಸೊಪ್ಪು ಹಾಕೋದೇ ಇಲ್ಲಾ....ನಿನ್ನ ಯಾವ ಆಣೆ, ಅಪ್ಪಣೆಗೂ ಬಗ್ಗೊಲ್ಲ...." ಎಂದು ನೇರವಾಗಿ ಹೇಳಿದವಳನ್ನು ತುಂಬುಗಣ್ಣಿನಿಂದ ನೋಡಿದ್ದ ಆಕಾಶ್. ಆದರೂ ಆಕೆ ಎಷ್ಟೇ ಹಠ ಮಾಡಿದರೂ ಒಪ್ಪದೇ ಮದುವೆಯನ್ನು ಮಾತ್ರ ನಿರಾಕರಿಸಿದ್ದ. ಅವಳ ಭವಿಷ್ಯದ ಬಾಳಿಗೆ ಬೆಳಕನ್ನು ತುಂಬಲು ಒಂದು ಕಡೆಯಿಂದಲಾದರೂ ಬಾಗಿಲನ್ನು ತೆರೆದಿಡುವ ಆಶಯ ಅವನದಾಗಿತ್ತು. 

ಹಿಂದೆ ಬಿಡುವಿಲ್ಲದ ಕೆಲಸಗಳಲ್ಲೇ ಮುಳುಗಿಹೋಗುತ್ತಿದ್ದ ಆಕಾಶನ ದಿನಚರಿಯೇ ಈಗ ಬದಲಾಗಿ ಹೋಗಿತ್ತು. ಮುಂಜಾನೆ ಮೂಡುವ ಬಾಲ ರವಿ ಘಳಿಗೆ ಕಳೆದಂತೇ ಹಿರಿದಾಗಿ, ಉರಿದುರಿದು, ಮತ್ತೆ ತಂಪಾಗಿ, ಕುಗ್ಗಿ ಮುಳುಗುವ ಪರಿಯನ್ನೇ ಗಂಟೆಗಟ್ಟಲೆ ನೋಡುತ್ತಿದ್ದ. ದಿನಕರನಂತೇ ತನ್ನ ಬದುಕೂ ಬಹು ಬೇಗ ಕರಗಿ ಹೋಗುತ್ತಿರುವುದರ ಅರಿವು ಅವನಿಗೂ ಪ್ರತಿಕ್ಷಣ ನೆನಪಾಗುತ್ತಿತ್ತು. ಆ ಹಿಂಸೆಯ ತಾಪದಲ್ಲಿ ದಿನವೂ ಬೇಯುತ್ತಿದ್ದ ಅವನ ಬದುಕಿಗೆ ತುಸು ನೆಮ್ಮದಿಯನ್ನು ಕೊಡುತ್ತಿದ್ದುದು ಅವಳ ಪ್ರೀತಿಯ ಹುಣ್ಣಿಮೆಯೇ. ಆಕಾಶ್ ಹೆತ್ತವರಂತೂ ಎಲ್ಲವುದಕ್ಕೂ ನಿವೇದಿತಳನ್ನೇ ಕೇಳುತ್ತಿದ್ದರು. ತಮ್ಮ ಒಬ್ಬನೇ ಮಗನ ಸಾವಿನ ದಿನಗಳು ಹತ್ತಿರ ಬರುತ್ತಿರುವುದನ್ನು ಅರಿತೂ ಅವನಿಗಾಗಿ ನಗುವಿನ ಮುಖವಾಡ ಹಾಕಿರುತ್ತಿದ್ದರು. ದಿನೇ ದಿನೇ ಹದಗೆಡುತ್ತಿದ್ದ ಆಕಾಶನ ದೇಹ ಸ್ಥಿತಿ ಒಳಗೊಳಗೇ ಅವಳನ್ನೂ ಕುಗ್ಗಿಸುತ್ತಿತ್ತು. ಆದರೂ ಧೈರ್ಯಗೆಡದ ಆಕೆ ಅವನ ಪ್ರತಿ ನಗುವಿನಲ್ಲೂ ಭರವಸೆಯನ್ನು ತುಂಬಿಕೊಳ್ಳುತ್ತಿದ್ದಳು. ಮನೆಯ ಮುಂದಿದ್ದ ಪುಟ್ಟ ಹೂದೋಟದಲ್ಲಿ ಕುಳಿತು ನಿವೇದಿತ ಅವನಿಷ್ಟದ `ನೀನಿಲ್ಲದೇ ನನಗೇನಿದೆ... ಮನಸೆಲ್ಲಾ ನಿನ್ನಲ್ಲಿ ನೆಲೆಯಾಗಿದೆ...ಕನಸೆಲ್ಲಾ ಕಣ್ಣಲ್ಲಿ ಸೆರೆಯಾಗಿದೆ..' - ಎಂದು ಭಾವಪೂರ್ಣವಾಗಿ ಹಾಡುತ್ತಿದ್ದರೆ ಆತ ಅಲ್ಲೇ ಅವಳ ಭುಜಕ್ಕೆ ತಲೆಯಾನಿಸಿ ಕಳೆದುಹೋಗುತ್ತಿದ್ದ.... ಕಳೆಗುಂದುತ್ತಿದ್ದ ತನ್ನ ದೇಹ ಶಕ್ತಿಯನ್ನೂ ಮರೆತು! ವಿಷಾದ ಭಾವದಿಂದ ಮೇಲೆದ್ದು ಕೊನೆಯಲ್ಲಿ ಆಶಾಭಾವದೊಂದಿಗೆ ಲೀನವಾಗುವ ಹಾಡಿನ ಪ್ರತಿಯೊಂದೂ ಸೊಲ್ಲಿನಲ್ಲೂ ಅವರಿಗೆ ತಮ್ಮ ಬದುಕಿನ ಕಥೆಯೇ ತುಂಬಿರುವಂತೆ ಭಾಸವಾಗುತ್ತಿತ್ತು. 

ಕೆಲತಿಂಗಳಿನಿಂದ ಆಕಾಶ್ ಸಂಪೂರ್ಣ ಗಾಲಿ ಕುರ್ಚಿಗೇ ಸೀಮಿತನಾಗಿಬಿಟ್ಟಿದ್ದ. ಮೂಳೆ ಸವೆತ ಹೆಚ್ಚಾಗಿ ಹೋಗಿ, ನರಗಳೂ ದೌರ್ಬಲಗೊಳ್ಳತೊಡಗಿದ್ದವು. ಈಗಾತ ಕೇವಲ ತನ್ನ ಕೈಗಳೆರಡನ್ನಷ್ಟೇ ಉಪಯೋಗಿಸಬಲ್ಲನಾಗಿದ್ದ. ಇದರಿಂದಾಗಿ ಆತನೊಳಗಿದ್ದ ಅಲ್ಪ ಆತ್ಮವಿಶ್ವಸವೂ ಅಲುಗಾಡತೊಡಗಿತ್ತು. ಇದ್ದೊಬ್ಬ ಮಗನ ಈ ಸ್ಥಿತಿಗೆ ಒಳಗೊಳಗೇ ಕೊರಗುತ್ತಿದ್ದ ಅವನ ಹೆತ್ತವರ ಗೋಳಿನ ಜೊತೆ, ಮಗಳ ಬದುಕಿನ ಅತಂತ್ರತೆಯ ಆತಂಕದಲ್ಲಿ ಕೊರಗುತ್ತಿರುವ ತನ್ನ ತಂದೆ ತಾಯಿಯರನ್ನೂ ಸಂಭಾಳಿಸಬೇಕಿತ್ತು ನಿವೇದಿತ. ಆದರೂ ಅವಳ ಮನದ ತುಂಬೆಲ್ಲಾ ಆಕಾಶನ ಬದುಕೇ ತುಂಬಿತ್ತು. ಆದರೆ ಅವಳ ಪ್ರೀತಿಯ ನಡುವೆಯೂ ಆಕಾಶನಿಗೆ ಇಂತಹ ಒಂದು ಆಲೋಚನೆ ಅದು ಹೇಗೋ ಮನೆಮಾಡಿಕೊಂಡು ಬಿಟ್ಟಿತು. ಅದು ಈಗ ಈ ಚಿತ್ರವನ್ನು ನೋಡುತ್ತಿದ್ದಂತೇ ಮತ್ತಷ್ಟು ಗಟ್ಟಿಯಾಗಿದ್ದೇ ತಡ ಸುಮ್ಮನಿರಲಾಗದೇ ಆಕೆಯಲ್ಲಿ ಹೇಳಿಯೂಬಿಟ್ಟ.

-೩-

ಮನೆಗೆ ಬಂದವಳೇ ಮನಃಪೂರ್ತಿ ಅತ್ತು ಸಮಾಧಾನಮಾಡಿಕೊಂಡ ನಿವೇದಿತ ಕೊನೆಗೆ ತನ್ನೊಳಗೇ ಒಂದು ನಿರ್ಧಾರಕ್ಕೆ ಬಂದಳು. ಬೆಳಿಗ್ಗೆ ಬೇಗ ಹೊರಟು ಆಕಾಶ್ ಮನೆಗೆ ಬಂದವಳಿಗೊಂದು ಆಶ್ವರ್ಯ ಕಾದಿತ್ತು. ಆಕಾಶ್ ತನ್ನ ವ್ಹೀಲ್ ಚೇರ್ ಮೇಲೆ ಕೂತು ಬಾಲ್ಕನಿಯಿಂದ ಕೆಳಗೆ ಇಣುಕಿ ನೋಡುತ್ತಿದ್ದ.

"ಏನು ಸಾಹೇಬ್ರು.... ನಿನ್ನೆ ಹೇಳಿದ ಮಾತನ್ನ ಈ ರೀತಿ ನೆರವೇರಿಸ್ಕೊಳ್ತಾ ಇರೋ ಹಾಂಗಿದೆ... ಆತ್ಮಹತ್ಯೆ ಮಹಾಪಾಪ ಗೊತ್ತಲ್ಲಾ..." ಎಂದು ತಲೆಯಮೇಲೊಂದು ಮೊಟಕಿದಳು.

"ಗೊತ್ತಮ್ಮಾ..ಗೊತ್ತು...ಅದ್ಕೇ ನಾನು ಯೋಚಿಸ್ತಿರೋದು ಯುಥನೇಷಿಯಾಕ್ಕೆ ಗೊತ್ತಾಯ್ತಾ?" ಎಂದು ಪ್ರತಿಯೇಟುಕೊಡಲು ಆಕೆ ವಿಷಯವನ್ನು ತಿರುಗಿಸಿಬಿಟ್ಟಳು.

"ಏನು ನೋಡ್ತಿದ್ದೀಯಾ? ಕೆಳಗೆ ಏನಿದೆ..?" ಎನ್ನುತ್ತಾ ತಾನೂ ಬಗ್ಗಿ ನೋಡಲು ಅಲ್ಲಿ ಅವಳಿಗೆ ಕಂಡಿದ್ದು ಪಾರಿವಾಳದ ಒಂದು ಗೂಡು.

"ನಿವೇದಿತ.. ಈ ಪಾರಿವಾಳದಷ್ಟು ದಡ್ಡ ಜೀವಿ ಈ ಜಗತ್ತಲ್ಲೇ ಇಲ್ಲಾ ಕಣೆ... ನಿಂಗೊತ್ತಾ....ಮೂರುತಿಂಗ್ಳಿಂದ ಇಲ್ಲೇ ಅದು ಗೂಡು ಕಟ್ತಿದೆ, ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿ ಮಾಡೋಕೆ ನೋಡ್ತಿದೆ. ಆದ್ರೆ ಪಾಪದ ಆ ಹಕ್ಕಿಯ ಮೊಟ್ಟೆಗಳನ್ನು ಹದ್ದು ಬಂದು ಎತ್ಕೊಂಡು ಹೋಗುತ್ತೆ. ಹೋದ ತಿಂಗ್ಳಂತೂ ಒಂದು ಮೊಟ್ಟೆ ಒಡೆದು ಹೊರ ಬಂದ ಮರಿ ಇನ್ನೇನು ಹಾರ್ಬೇಕು ಅಂತಿದ್ದಾಗ್ಲೇ ಅದನ್ನ ಎತ್ಕೊಂಡು ಹೋಗಿತ್ತು ಆ ಹಾಳು ಹದ್ದು! ಇದನ್ನೆಲ್ಲಾ ನೋಡಿ ಬೇಜಾರಾಗಿ ನಾನೇ ನಮ್ಮ ಕೆಲ್ಸದವ್ಳಿಗೆ ಹೇಳಿ ಗೂಡನ್ನೇ ತೆಗ್ಸಿದ್ದೆ....ಆದ್ರೂ ಈ ಹುಚ್ಚು ಪಾರಿವಾಳ ಇಲ್ಲೇ ಮತ್ತೆ ಗೂಡು ಕಟ್ಟಿ ಮೊಟ್ಟೆ ಇಟ್ಟಿದೆ. ಹೋದ ವಾರವಷ್ಟೇ ಮರಿ ಹೊರ ಬಂತು...ಈಗ ಹಾರೋಕೆ ನೋಡ್ತಿದೆ...ಸ್ವಲ್ಪ ಹೊತ್ತಿಗೇ ಆ ಹದ್ದು ಬರ್ದೇ ಹೋದ್ರೆ ಹೇಳು..ಏನು ಬಡ್ಡು ತಲೇದೋ....ಇಷ್ಟು ಮೊಟ್ಟೆ, ಮರಿ, ಗೂಡನ್ನೇ ಕಳ್ಕೊಂಡ್ರೂ ಇಲ್ಲೇ ಇರ್ತೀನಿ ಅಂತಿರೊತ್ತೆ ಈ ಹಕ್ಕಿ.." ಎಂದವನನ್ನೇ ಅರಳುಗಣ್ಣುಗಳಿಂದ ನೋಡಿದಳು ನಿವೇದಿತ. ಅವಳ ತಲೆಯೊಳಗೊಂದು ಯೋಚನೆ ಮಿಂಚಿ....ತುಟಿಯಂಚಿನಲ್ಲಿ ಕಿರುನಗೆ ಮೂಡಿತು.

"ಹ್ಮ್ಂ....ಹೌದು ಆಕಾಶ್.....ಇದೊಂದು ಪೆದ್ದು ಹಕ್ಕಿನೇ.... ಗೊತ್ತಿದ್ದೂ ಗೊತ್ತಿದ್ದೂ ಇಲ್ಲೇ ಗೂಡಿಟ್ಟು ಸಾಕ್ತಿದೆ. ಆ ಹದ್ದು, ತಾಯಿ ಹಕ್ಕಿಯನ್ನು ಕುಕ್ಕಿ ಕೊಂದ್ರೂ ಆಶ್ಚರ್ಯ ಇಲ್ಲಾ......ಇಷ್ಟೇಲ್ಲಾ ಕಳ್ಕೊಂಡ್ರೂ, ಕಳ್ಕೊತ್ತಾ ಇದ್ರೂ ಅದು ಮಾತ್ರ ದಯಾಮರಣಕ್ಕೆ ಅಪ್ಲೈ ಮಾಡೊಲ್ವಾಂತಾ? ಕೇಳ್ಬೇಕು ಒಮ್ಮೆ......" ಎಂದವಳನ್ನೇ ಅವಕ್ಕಾಗಿ ನೋಡಿದ ಆಕಾಶ್. ಕ್ರಮೇಣ ಅವನ ಮೊಗ ಕೆಂಪಡರತೊಡಗಿತು. ಅದು ಅವಮಾನದಿಂದಲೋ ಕೋಪದಿಂದಲೋ ಎಂದು ಮಾತ್ರ ಅವಳಿಗೆ ತಿಳಿಯಲಿಲ್ಲ. ಮೆಲ್ಲನ ಅವನ ಕಾಲ್ಗಳ ಬಳಿ ಬಗ್ಗಿ ಕುಳಿತ ಆಕೆ ಅವನ ಕೈಗಳನ್ನು ತನ್ನ ತುಟಿಗಳಿಗೆ ಸೋಕಿಸಿದಳು.

"ಆಕಾಶ್...ದಯವಿಟ್ಟು ನನ್ನ ತಪ್ಪು ತಿಳ್ಕೋಬೇಡ. ನಾನು ನಿನ್ನ ತಮಾಷೆ ಮಾಡ್ತಿಲ್ಲಾ....ಆಥವಾ ನಿನ್ನ ನೋವು, ಯಾತನೆಗಳನ್ನ ಕಡಿಮೆಯಾಗಿಯೂ ನೊಡ್ತಿಲ್ಲಾ. ಆದ್ರೆ ನೀನೇ ಯೋಚ್ಸು....ಈ ಹಕ್ಕಿ ಎಷ್ಟೇ ಕಷ್ಟ ಬಂದ್ರೂ, ಏನನ್ನೇ ಕಳ್ಕೊಂಡ್ರೂ ಇಲ್ಲೇ ಇದೆ....ಇದ್ದು ಬದುಕು ಕೊಡಲು ಪ್ರಯತ್ನ ಪಡ್ತಿದೆ. ಅದ್ಕೆ ನಮ್ಮಷ್ಟು ಬುದ್ಧಿ ಇಲ್ಲ.....ಆದರೆ ನೋವಿನ ಅನುಭೂತಿ ಇದ್ದೇ ಇರುತ್ತದೆ ಅಲ್ವೇ? ಅದ್ಕೂ ದುಃಖ ಆಗಿರ್ಬಹುದು, ಮರಿ ಹೋಗಿದ್ದಕ್ಕೆ, ಗೂಡು ಬಿದ್ದಿದ್ದಕ್ಕೆ... ಆದ್ರೂ ಅದು ಸೋತು ಗೂಡು ಕಟ್ಟೋದನ್ನು, ಮೊಟ್ಟೆ ಇಡೋದ್ನ ಬಿಟ್ಟಿಲ್ಲ..... ಹಾಗಿರ್ವಾಗ ನೀನು ನಾನು ಯಾಕೆ ಬದುಕುವ ಅಸೆ ಬಿಡ್ಬೇಕು? ನೀನು ಇರ್ರೋವಷ್ಟು ದಿವ್ಸ ನನ್ಜೊತೆ, ನಿನ್ನ ಬದುಕನ್ನೇ ಆಶಿಸುತ್ತಿರೋ ಅಪ್ಪ, ಅಮ್ಮನ ಜೊತೆ ಇರ್ತೀಯಾ ಅನ್ನೋ ಸಂತೋಷವನ್ನ ಈಗ್ಲೇ ಯಾಕೆ ಸಾಯಿಸೋಕೆ ಹೋರ್ಟಿದ್ದೀಯಾ? ಅಲ್ಲಾ.....ನೀನೇ ಹೇಳ್ತಿದ್ದೆ... ನಂಗೆ ದಯೆ, ಅನುಕಂಪ ಬೇಡ ಅಂತೆಲ್ಲಾ.....ಹಾಗಿರ್ಬೇಕಾದ್ರೆ ಸಾವಿಗೆ ಮಾತ್ರ ಕಾನೂನಿನದ್ದೇ ಆದ್ರೂ ದಯೆಯ ಭೀಕ್ಷೆ ಯಾಕೆ ಬೇಕು? ಈವರೆಗೂ ಸ್ವಾಭಿಮಾನಿಯಾಗಿ ಬದ್ಕಿದ್ದೀಯಾ....ಸಾವನ್ನೂ ಸ್ವಾಭಿಮಾನದಿಂದಲೇ ಸ್ವಾಗತಿಸು. ನಂಗೊತ್ತು....ನೀನು ಅನುಭವಿಸ್ತಾ ಇರೋದು ನನ್ನ ಊಹೆಗೂ ಮೀರಿದ್ದು ಅಂತ....ಆದ್ರೆ ಬದ್ಕೋದು ಎಲ್ಲದಕ್ಕೊಂತಲೂ ದೊಡ್ಡದು ಆಕಾಶ್. ನನ್ನ ಬದುಕಿಗೆ ನೀನೇ ಪ್ರೇರಣೆ. ನಾಳೆ ನೀನಿಲ್ಲದಿದ್ರೂ ನಾನು ಬದ್ಕೋಕೆ ನಿನ್ನ ಆತ್ಮವಿಶ್ವಾಸದ ಆಸರೆ ಬೇಕು... ನನ್ನ ಬದುಕಿನ ದಾರಿ ನಿನ್ನ ಬದುಕಿನ ಮಾದರಿಯನ್ನು ಅನುಸರಿಸ್ಬೇಕು. ಪ್ಲೀಸ್ ಆಕಾಶ್ ನಿನಗಾಗಿ ಬದುಕೋದಕ್ಕಿಂತ ನಿನ್ನವರಿಗಾಗಿ ಬದುಕು. ಈ ಹುಚ್ಚು ಆಲೋಚನೆಗಳಿಗೆಲ್ಲಾ ಇಂದೇ, ಇಲ್ಲೇ, ಇವತ್ತೇ ಕೊನೆ ಹಾಕ್ಬಿಡು....ನಿನ್ನ ನಿವಿಗೋಸ್ಕರ, ನಿನ್ನ ಅಪ್ಪ, ಅಮ್ಮನಿಗೋಸ್ಕರ, ನಮ್ಮಿಬ್ಬರ ಪ್ರೀತಿಗೋಸ್ಕರ...." ಎನ್ನುತ್ತಾ ಅವನ ಅಂಗೈಗಳ ಮೇಲೆ ತನ್ನ ಮುಖವನ್ನು ಹುದುಗಿಸಿದಳು. ಅವನ ಬೊಗಸೆ ತುಂಬಾ ಅವಳ ಪ್ರೀತಿಯ ಮಳೆಯ ನೀರು ತುಂಬತೊಡಗಿತು.

ಮಳೆ ನೀರಿನಲ್ಲಿ ತನ್ನ ಕೆಸರನ್ನೆಲ್ಲಾ ತೊಡೆದು ಹಗುರಾದ ಪ್ರಕೃತಿಯಂತೇ ಅವರಿಬ್ಬರು ಕುಳಿತಿದ್ದರು ತಮ್ಮದೇ ಮೌನ ಸಾಮ್ರಾಜ್ಯದಲ್ಲಿ. ಹೊತ್ತಿನ ಪರಿವೆಯೇ ಇರಲಿಲ್ಲ. ಅವಳ ಕೈಯೊಳಗೆ ತನ್ನ ಕೈಯನ್ನು ಭದ್ರವಾಗಿ ಬೆಸೆದ ಆಕಾಶ್ "ನಿವಿ...ನಂಗಾಗಿ ನನ್ನಿಷ್ಟದ ಆ ಹಾಡಿನ ಕೊನೆಯ ಪ್ಯಾರಾ ಮಾತ್ರ ಹಾಡು...." ಎಂದಾಗ ಅವಳ ಮುಖದಲ್ಲಿ ಪೌರ್ಣಿಮೆಯ ಬೆಳಕು. ತನ್ನೊಳಗಿನ ಎಲ್ಲಾ ಭಾವಗಳನ್ನೂ ತುಂಬಿ ಸುರಿವಂತೇ ಸುಶ್ರಾವ್ಯವಾಗಿ ಹಾಡತೊಡಗಿದಳು ನಿವೇದಿತ....
ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ
ಒಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದ ನಾ ತಾಳುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ

@ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ.

-ತೇಜಸ್ವಿನಿ ಹೆಗಡೆ.

15 ಕಾಮೆಂಟ್‌ಗಳು:

sunaath ಹೇಳಿದರು...

ತೇಜಸ್ವಿನಿ,
ದಯಾಮರಣದ ಸಮಸ್ಯೆಯನ್ನು ಆಧರಿಸಿ ಭಾವಪೂರ್ಣ ಕತೆಯನ್ನು ಹೆಣೆದಿರುವಿರಿ. ಜೊತೆಗೇ ಜೀವನದ ಒಂದು ತತ್ವದ ದರ್ಶನ ಮಾಡಿಸಿರುವಿರಿ. ಕೊನೆಯಲ್ಲಿ ಬರುವ ಈ ಸಾಲುಗಳು ಮನಸ್ಪರ್ಶಿಯಾಗಿವೆ:

ಅವನ ಬೊಗಸೆ ತುಂಬಾ ಅವಳ ಪ್ರೀತಿಯ ಮಳೆಯ ನೀರು ತುಂಬತೊಡಗಿತು.
ಮಳೆ ನೀರಿನಲ್ಲಿ ತನ್ನ ಕೆಸರನ್ನೆಲ್ಲಾ ತೊಡೆದು ಹಗುರಾದ ಪ್ರಕೃತಿಯಂತೇ ಅವರಿಬ್ಬರು ಕುಳಿತಿದ್ದರು ತಮ್ಮದೇ ಮೌನ ಸಾಮ್ರಾಜ್ಯದಲ್ಲಿ. ಹೊತ್ತಿನ ಪರಿವೆಯೇ ಇರಲಿಲ್ಲ. ಅವಳ ಕೈಯೊಳಗೆ ತನ್ನ ಕೈಯನ್ನು ಭದ್ರವಾಗಿ ಬೆಸೆದ ಆಕಾಶ್ "ನಿವಿ...ನಂಗಾಗಿ ನನ್ನಿಷ್ಟದ ಆ ಹಾಡಿನ ಕೊನೆಯ ಪ್ಯಾರಾ ಮಾತ್ರ ಹಾಡು...." ಎಂದಾಗ ಅವಳ ಮುಖದಲ್ಲಿ ಪೌರ್ಣಿಮೆಯ ಬೆಳಕು.

ಕೊನೆಯಲ್ಲಿ ಬರುವ ಕವನವೂ ಚೆನ್ನಾಗಿದೆ.
ಅಭಿನಂದನೆಗಳು.

Subrahmanya ಹೇಳಿದರು...

ತುಂಬ ಚೆನ್ನಾಗಿದೆ. ಭರವಸೆಗಳು ಮತ್ತು ಆಶಾವಾದವೇ ಜೀವನದಲ್ಲಿ ಉತ್ಸಾಹವನ್ನು ತುಂಬುತ್ತದೆ ಎನ್ನುವುದು ಸತ್ಯ. ಅಂತಹ ಮಾನವೀಯತೆಯ ಅಗತ್ಯವೂ ಇಂದು ಅವಶ್ಯಕ. positive ಕೋನದಲ್ಲಿ ಕಂಡಂತಹ ಉತ್ತಮ ಕತೆ.

ವಾಣಿಶ್ರೀ ಭಟ್ ಹೇಳಿದರು...

veru very nice story...houdu.. preetiya mukha heegu irabahudallave...

ಚುಕ್ಕಿಚಿತ್ತಾರ ಹೇಳಿದರು...

nice story..

ಸುಮ ಹೇಳಿದರು...

ಒಳ್ಳೆಯ ಕಥೆ ತೇಜಸ್ವಿನಿ ...ಯುಥನೇಷಿಯಾದ ನನಗೆ ಬಗ್ಗೆ ಅನೇಕ ಗೊಂದಲಗಳಿವೆ. ಒಮ್ಮೊಮ್ಮೆ ವಾಸಿಯಾಗಲಾರದ ಕಾಯಿಲೆಯಿಂದಾಗಿ ಸಹಿಸಲಾರದ ನೋವು ಅನಿಭವಿಸುತ್ತಿರುವವರಿಗೆ ಅದು ವರವೇನೋ ಎನ್ನಿಸುತ್ತದೆ , ಆದರೆ ಮತ್ತೊಮ್ಮೆ ಪ್ರೀತಿಸುವ ಜೀವಗಳಿಗೋಸ್ಕರವಾದರೂ ಅಂತವರು ಬದುಕಿನ ಬಗ್ಗೆ ಭರವಸೆ ಉಳಿಸಿಕೊಳ್ಳುವುದು ಒಳ್ಳೆಯದು ಎನ್ನಿಸುತ್ತದೆ .

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ದಯಾಮರಣಕ್ಕೆ ಸಂಭಂದಿಸಿದ ಈ ಕತೆಯನ್ನು ನಿನ್ನೆ ಉದಯವಾಣಿಯ ಸಾಪ್ತಾಹಿಕದಲ್ಲಿ ಓದಿದ್ದೆ...ತುಂಬಾ ಚೆನ್ನಾಗಿ ಬರೆದಿದ್ದೀರಿ...ಇಷ್ಟವಾಗುತ್ತದೆ.

krutthivaasapriya ಹೇಳಿದರು...

nice story ........ euthanasia dantaha sookshma vishayagalu halavaaru bari nammannu ibbandi tanadalli sikkisuttive ........aadru nimma kathanayakana nirdhaara sariyenisitu..

ಮನಸು ಹೇಳಿದರು...

ತುಂಬಾ ಚೆನ್ನಾಗಿದೆ ಕಥೆ... ಪ್ರೀತಿಯಿಂದ ಸಾವಿನ ಬೇಡಿಕೆಗೂ ಕಡಿವಾಣವಾಕಿದ್ದಾಳೆ ನಿವೇದಿತ... ತುಂಬ ಇಷ್ಟವಾಯ್ತು

PARAANJAPE K.N. ಹೇಳಿದರು...

ದಯಾಮರಣದ ವಿಚಾರದ ಎಳೆಯನ್ನಿಟ್ಟು ಕೊ೦ಡು ಉತ್ತಮವಾದೊ೦ದು ಕಥೆ ಹೆಣೆದಿದ್ದೀರಿ. ನಾನು ಪತ್ರಿಕೆಯಲ್ಲಿ ಓದಿರಲಿಲ್ಲ. ಬ್ಲಾಗಲ್ಲೇ ಓದಿದೆ. ಜೀವನಪ್ರೀತಿಯ ಧನಾತ್ಮಕ ಅವಲೋಕನ. ಚೆನ್ನಾಗಿದೆ.

ಜಲನಯನ ಹೇಳಿದರು...

ನನಗೆ ಡೌಟಿತ್ತು ತೇಜಸ್ವಿನಿ ಬರೆದೇ ಬರೀತಾರೆ,..ಯಾಕೆ ಇನ್ನೂ ಬರ್ಲಿಲ್ಲ ಅಂತೆಲ್ಲಾ...ಇಗೋ..ಬಂದೇ ಬಿಡ್ತು..ನಿಮ್ಮ ಛಾಪಿನ ಕಥೆ..ಬಹಳ ಸುಂದರವಾಗಿ ಭಾವನೆಗಳ ಎಳೆ ಎಳೆಗಳನ್ನು ಹೆಣೆದು ಬಾಂಧವ್ಯದ ಬಲೆ ಮಾಡಿದಿರಿ..ಬಲೆಯಲ್ಲಿ ಇರುವುದೇ ಅಥವಾ ಇರುವಷ್ಟೂ ದಿನದ ಸುಖವೇ ಪ್ರಮುಖ ಎನ್ನುವಂತೆ.... ಎರಡೂ ಪಾತ್ರಗಳಲ್ಲಿ ನನಗೆ ಆಕಾಶ್ ಸ್ವಲ್ಪ ವೀಕ್ ಅನ್ನಿಸ್ತು...ನಿವಿಯದು ತನ್ನ ನಿಲುವಿಗೆ ನಿಂತ ದೃಢಮನಸ್ಕ ಮತ್ತು ಪ್ರೌಢ ಬುದ್ಧಿಯ ಹೆಣ್ಣಿನ ಪಾತ್ರ ...ಒಟ್ಟಾರೆ ಕಥೆ ಸೂಪರ್ ಆಗಿ ಮೂಡಿ ಬಂದಿದೆ...ಅಭಿನಂದನೆಗಳು..

ವನಿತಾ / Vanitha ಹೇಳಿದರು...

ತೇಜು, ಒಳ್ಳೆಯ ಕಥೆ.
ನನ್ನ ಫ್ರೆಂಡ್ ಒಬ್ಬಂಗೆ Muscular Dystrophy ಇದ್ದು, ನಿಂಗಳ ಕಥೆ ಓದುವಾಗ ಅವನ್ನೇ ನೆನಪಾಗ್ತಿತ್ತು!ಆದರೆ MD ಇಷ್ಟೊಂದು ಸೀರಿಯಸ್ ಹೇಳಿ ಇಂದೇ ಗೊಂತಾದ್ದು.

Vidya Ramesh ಹೇಳಿದರು...

ತುಂಬಾ ಒಳ್ಳೆಯ ನಿರೂಪಣೆ , ಕಥೆ ಸೊಗಸಾಗಿದೆ. ಕೊನೆಯಲ್ಲಿನ ಕವನ ನಿಜವಾಗಿಯೂ ಅರ್ಥಪೂರ್ಣ !!

ಸೀತಾರಾಮ. ಕೆ. / SITARAM.K ಹೇಳಿದರು...

nice one!

ತೇಜಸ್ವಿನಿ ಹೆಗಡೆ ಹೇಳಿದರು...

ಕಾಕಾ,

ಮೆಚ್ಚುಗೆಗೆ ತುಂಬಾ ಧನ್ಯವಾದಗಳು. ದಯಾಮರಣ ಎನ್ನುವುದು ಬಹು ಸೂಕ್ಷ್ಮ ವಿಷಯ. ಅದನ್ನೇನಾದರೂ ಜಾರಿಗೆ ತಂದರೆ ಆಗಬಹುದಾದ ಅಪಾಯ ಬಹು ದೊಡ್ಡದೇ.. ನಿಜ.. ಒಮ್ಮೊಮ್ಮೆ ಕೆಲವೊಂದು ಪರಿಸ್ಥಿತಿಯಲ್ಲಿ ಅದರ ಅವಶ್ಯಕತೆ ಹೆಚ್ಚಾಗಿರಬಹುದು ಅಷ್ಟೇ!

ಸುಬ್ರಹ್ಮಣ್ಯ,

ಧನ್ಯವಾದಗಳು ಸ್ಪಂದನೆಗೆ. ಋಣಾತ್ಮಕತೆಯಿಂದ ಧನಾತ್ಮಕತೆಗೆ ಹೋಗುವುದೇ ಬದುಕು ಎಂದು ನಂಬಿರುವವಳು ನಾನು. ನಿರಾಸೆಯಿಂದ ಆಶಾವಾದಿದತನಕ್ಕೆ ಹೋದಾಗ ಸಿಗುವುಅ ಮಹದಾನಂದ ಅಪಾರ :)

ವಾಣಿ,

ತುಂಬಾ ತುಂಬಾ ಥ್ಯಾಂಕ್ಸ್ :) ಪ್ರೀತಿಗೆ ಹಲವು ಮುಖಗಳಿವೆ... ಇಂಥದ್ದೇ ಎಂದು ಹೇಳಲಾಗದ ಭಾವವದು. ಆದರೆ ಎಷ್ಟೇ ಮುಖವಿದ್ದರೂ ಅದು ಪ್ರೀತಿಸುವವರಿಗೆ ಬದುಕು ಕಟ್ಟಿಕೊಡುವಂತಿರಬೇಕು ಅಷ್ಟೇ ಅಲ್ವೇ? :)

ವಿಜಯಶ್ರೀ, ಸುಮ,

ಮೆಚ್ಚುಗೆಗೆ ಧನ್ಯವಾದಗಳು. ಹೌದು...ಪ್ರೀತಿ ಇದ್ದರೆ ಬದುಕು ಸಹ್ಯ. ಎಂತಹ ನೋವನ್ನೂ ಮರೆಸುವ ತಾಕತ್ತು ಇರುವುದು ಪ್ರೀತಿಗೊಂದೇ! ಅದು ಸ್ನೇಹರೂಪಿಯೋ ಇಲ್ಲಾ ಇನ್ನಾವ ಭಾವವೋ ಆಗಿರಲೂಬಹುದು.

ಶಿವು.ಕೆ, krutthivaasapriya, ಮನಸು, ಪರಾಂಜಪೆ,

ನಿಮ್ಮೆಲ್ಲರ ಪ್ರೋತ್ಸಾಹಕ್ಕೆ, ಮೆಚ್ಚುಗೆ ಭರಿತ ಸ್ಪಂದನೆಗೆ ತುಂಬಾ ಧನ್ಯವಾದಗಳು.

ಜಲನಯನ,

ಹೌದು.. ಆಕಾಶ್ ವೀಕ್ ಆಗಿದ್ದರಿಂದಲೇ ನಿವಿ ಸ್ಟ್ರೋಂಗ್ ಆಗ್ಬೇಕಾಯ್ತು... ಆತನೊಳಗಿನ ಮಾನಸಿಕ ದುರ್ಬಲತೆಗೆ ಅವಳ ಮಾನಸಿಕ ದೃಢತೆ ಔಷದೀಯವಾಗಿ ಪರಿಣಮಿಸಿತು. ಸಹಧರ್ಮಿಣಿ ಅಂದರೆ ಇದೇ ಅರ್ಥವಲ್ಲವೇ?:) ಧನ್ಯವಾದಗಳು.

ವನಿತಾ,

ಧನ್ಯವಾದಗಳು. ಹೌದು.. ಈ ರೋಗ ಬಹು ಅಪಾಯಕಾರಿ. ಸ್ಟೀಫನ್ ಹಾಕಿಂಗ್ಸ್‌ಗೂ ಇದೇ ರೋಗ ಕಾಡಿದ್ದು.. ಕಾಡ್ತಾ ಇಪ್ಪದು...!:( ನಿಮ್ಮ ಫ್ರೆಂಡ್ ಇದರಿಂದ ಚೇತರಿಸಿಕೊಂಡಿದ್ದಾರೆಂದು ಆಶಿಸುವೆ.

ವಿದ್ಯಾ ಅವರೆ,

ಸ್ವಾಗತ ಮಾನಸಕ್ಕೆ... :) ನಿಮ್ಮ ಮೆಚ್ಚುಗೆಗಳಿಗೆ ತುಂಬಾ ಧನ್ಯವಾದ.

ಸೀತಾರಾಂ ಸರ್,

ತುಂಬಾ ಧನ್ಯವಾದ.

----

ಆದರಾತ್ಮೀಯತೆಯಿಂದ,
ತೇಜಸ್ವಿನಿ ಹೆಗಡೆ.

ashokkodlady ಹೇಳಿದರು...

Uttama kathe...Dhanyavadagalu...