ಬುಧವಾರ, ಮಾರ್ಚ್ 23, 2011

ಗಾಢ ನೀಲಿಯ ಮುಂದಿನ ಬಿಳಿನೊರೆಗಳಂತೆ.....

Courtesy : http://www.deceptivemedia.co.uk

"ವಿಷಾದದ ಬಗ್ಗೆ ಬರಿ ಅಕ್ಕ... ವಿಷಾದದ ಜೊತೆ ವಿಡಂಬನೆನೂ ಸೇರ್ಸಿ ಬರದ್ರೆ ಮತ್ತೂ ಚೊಲೋವಾ.... ಸ್ವಲ್ಪ ಡಿಫರೆಂಟ್ ಆಗಿರ್ಲಿ..." ಎಂದು ಮಧು ಹೇಳಿದಾಗಲೇ ನಾನು ಯೋಚಿಸಿದ್ದು.... ವಿಷಾದ ಅಂದರೆ ಏನು?! ಹಾಗೆ ನೋಡ ಹೋದರೆ ಪ್ರತಿಯೊಬ್ಬರ ಬಾಳಲ್ಲೂ ಎಲ್ಲೆಂದರೆಲ್ಲಿ.. ಸಂದಿಗೊಂದಿಯಲ್ಲಿ... ಸಮಯದ ಹೊತ್ತೂ ಗೊತ್ತೂ ಇಲ್ಲದೇ... ಒಂದಿನಿತು ಸುಳಿವನ್ನೂ ನೀಡದೇ ತಣ್ಣನೆ ಒಳ ಬಂದು, ಬಿರುಗಾಳಿ ಎಬ್ಬಿಸಿ, ಬಹು ಕಾಲ ಇದ್ದು... ಒಮ್ಮೊಮ್ಮೆ ಎಂದೂ ಮರೆಯಲಾಗದ... ಮಗದೊಮ್ಮೆ ಮಗ್ಗುಲು ಬದಲಿಸಿ ಒಮ್ಮೆ ಬೆನ್ನನ್ನೂ, ಮತ್ತೊಮ್ಮೆ ಮುಖವನ್ನೂ ಕಾಣಿಸುವ ಈ "ವಿಷಾದ"- ಒಂದು ಅರಿಯಲಾಗದ..... ವಿಚಿತ್ರ ಭಾವವೇ ಸರಿ ಎಂದೆನಿಸುತ್ತದೆ ನನಗೆ. ಆದರೆ ಸಂತಸದ ಕತೆಯೇ ಬೇರೆ. ಅದು ಬರುವಾಗ ತನ್ನ ಸುಳಿವನ್ನು ಕೊಟ್ಟು ಬರುವುದೇ ಹೆಚ್ಚು. ಹಾಗಾಗಿ ಮನ ಅದರ ಆಗಮನಕ್ಕಾಗಿ ಕಾತುರವಾಗಿದ್ದು ತುದಿಗಾಲಲ್ಲಿ ನಿಂತಿರುತ್ತದೆ. ಇನ್ನೇನು ಬಲಗಾಲಿಡಬೇಕೆನ್ನುವ ಹೊತ್ತಿನಲ್ಲೇ ಕೆಲವೊಮ್ಮೆ ಅಲ್ಲೇ ಮರೆಯಲ್ಲಡಿಗಿ ಹೊಂಚುಹಾಕುತ್ತಿರುವ ದುಃಖ ಸಂತಸವನ್ನು ನೂಕಿ ಕೆಡವಿ ನಿರಾಸೆಯೊಂದಿಗೆ ಎಡಗಾಲನ್ನಿಟ್ಟು ಪ್ರವೇಶ ಮಾಡಿಯಾಗಿರುತ್ತದೆ. ಆಗ ಮನಕೆ ಬಡಿಯುವ ವಿಷಾದದ ಹೊಡೆತ ಯಾವ ಸುನಾಮಿ ಅಲೆಗಿಂತಲೂ ಕಡಿಮೆಯದ್ದಾಗಿರದು.

ಅದೆಷ್ಟೋ ಸಲ ನಾನು ಕಡಲಂಚಿನಲ್ಲಿ ಜಾರುವ ಸೂರ್ಯನನ್ನೇ ನೋಡುತ್ತಿರುವಾಗ ಹೀಗೊಂದು ಆಲೋಚನೆ ಆಗಾಗ ಬಂದಿದ್ದಿದೆ... ‘ಪ್ರತಿದಿನ ಹೊಸ ಕಿರಣಗಳನ್ನು ಹೊತ್ತು ಮೇಲೇರುವ ಈತ, ತನ್ನೆಲ್ಲಾ ಕಿರಣಗಳ ಜಗಕೆ ತೆತ್ತು ತೆತ್ತು.. ಸುಸ್ತಾಗಿ ಸೊಪ್ಪಾಗಿ, ದಿನದ ಕೊನೆಯಲ್ಲಿ ಕಳೆದುಕೊಂಡುದರ ವಿಷಾದಕ್ಕಾಗಿ ಮುಳುಗು ಹಾಕುತ್ತಾನೇನೋ' ಎಂದು. ಹಾಗೆ ಅಂದು ಕೊಂಡಾಗಲೆಲ್ಲಾ ಬಾನಲ್ಲಿ ನಗುವ ಚಂದಿರನೂ ಹೆಚ್ಚಾಗಿ ಕಂಡಿದ್ದು ಸುಳ್ಳಲ್ಲ. ಇದೇ ಬಹುಶಃ ಆಶಾವಾದವಿರಬೇಕು. "ಒಂದ ಕೊಟ್ಟರೆ ಶಿವ ಒಂದು ಕೊಡಾ" ಎಂದು ಅಮ್ಮ ಹೇಳಿದಾಗ ನಾನು,. "ಈ ಶಿವ ಅಷ್ಟು ಚಾಲಾಕಿಲ್ಲೆ ಕಾಣ್ತು ಅಮ್ಮ.... ಒಂದು ಕೊಟ್ರೆ ಇನ್ನೊಂದು ಫ್ರೀ ಹೇಳಿ ಇಟ್ಟಿದಿದ್ರೆ ಮತ್ತೂ ಹೆಚ್ಚು ಜನ ಅವ್ನ ಹಿಂದೆ ಬೀಳ್ತಿದ್ದೋ ಅಲ್ದಾ?" ಎಂದು ನಕ್ಕು ಬಿಡುತ್ತಿದ್ದೆ. ಆದರೆ ಮನಸು ಮಾತ್ರ ಮೌನವಾಗಿ ಆ ಶಿವನಲ್ಲಿ ಬೇಡುತ್ತಿತ್ತು.. "ಕೊಟ್ಟದ್ದನ್ನಾದ್ರೂ ಕಿತ್ಕಳ್ದೇ ಇರಪ್ಪಾ ತಂದೆ..." ಎಂದು. ಹ್ಮ್ಂ... ಇದೂ ಒಂಥರ ವಿಷಾದಭರಿತ ಯಾಚನೆಯೇ ಸರಿ!

ನಮಗೋರ್ವ ಅತ್ಯುತ್ತಮ ಫಿಸಿಕ್ಸ್ ಪ್ರೊಫೆಸರ್ ಸಿಕ್ಕಿದ್ದರು (ಪಿ.ಯು.ಸಿ ಟ್ಯೂಷನ್‌ನಲ್ಲಿ). ಅಲೋಶಿಯಸ್ ಕಾಲೇಜಿನಲ್ಲಿ ಫಿಸಿಕ್ಸ್ ಕಲಿಸುತ್ತಿದ್ದ ಅವರ ಹೆಸರು ಪ್ರೊ. ಐ.ವಿ.ರಾವ್. ತುಂಬಾ ಚೆನ್ನಾ ಪಾಠ ಮಾಡುತ್ತಿದ್ದರು. ಈಗ ವಯಸ್ಸಿನ ಪ್ರಭಾವದಿಂದ ನಿವೃತ್ತಿ ಪಡೆದಿದ್ದಾರೆ. ಅವರು ಭೌತಶಾಸ್ತ್ರವನ್ನು ಆಧ್ಯಾತ್ಮದೊಂದಿಗೆ ಸಮೀಕರಿಸಿ ವಿವರಿಸುತ್ತಿದ್ದ ಪರಿ ನಮ್ಮನ್ನೆಲ್ಲಾ ಮಂತ್ರಮುಗ್ಧರನ್ನಾಗಿಸುತಿತ್ತು. ಕೇಸರಿ, ನೀಲಿ, ಗಾಢ ನೀಲಿ, ಗುಲಾಬಿ, ಹಳದಿ, ಬಿಳಿ, ಕಪ್ಪು - ಹೀಗೆ ಒಂದೊಂದು ಬಣ್ಣಕ್ಕೂ ಇರುವ ಮಹತ್ವವನ್ನು, ಅವು ನಮ್ಮ ಮನಸಿನ ಮೇಲೆ ಬೀರುವ ಪರಿಣಾಮವನ್ನು ವಿವಿರಿಸಿದ್ದರು. ಆಗ ತಕ್ಷಣ ನನ್ನ ಮನೆಯ ಗೋಡೆಗಳ ಬಣ್ಣಗಳನ್ನೆಲ್ಲಾ ಬದಲಿಸುವ ಆಲೋಚನೆ ಬಂದು...ಅದು ಕೊನೆಗೆ ನನ್ನ ಕೋಣೆಯೊಂದರ ಬಣ್ಣ ಬದಲಾಯಿಸುವುದರೊಂದಿಗೇ ಕೊನೆಗೊಂಡಿತ್ತು. ಗಾಢ ನೀಲ ಬಣ್ಣ ವಿಷಾದ ಭಾವಕ್ಕೆ ಹೊಂದುವುದು ಎಂದು ಹೇಳಿದಾಗ ಥಟ್ಟನೆ ನೆನಪಾಗಿದ್ದು ಸಾಗರವೇ! ಅದರ ಕಡುಗಪ್ಪು ಮೈ ನೋಡಿದ ತಕ್ಷಣವೇ ನನಗರಿಯದಂತೇ ಒಂದು ನಿಟ್ಟುಸಿರು ಪ್ರತಿ ಸಲ ಹೊರಬರುವುದಂತೂ ಆ ಸಾಗರದಾಣೆಗೂ ಸತ್ಯ! ಆದರೆ ಮರುಕ್ಷಣ ಬಿಳಿ ನೊರೆಚೆಲ್ಲುವ ಅದರ ಪರಿಗೆ ಮೋಡಿಯಾಗಿ.. ಆ ಬಿಳಿ ನೊರೆಗಳನ್ನೇ ನೋಡುತ್ತಾ ಕಿರುನಗು ಮೂಡುವುದೂ ಅಷ್ಟೇ ಸತ್ಯ. ಬಿಳಿ ಆಶಾವಾದದ, ಪ್ರಶಾಂತತೆಯ, ನಿರ್ಮಲತೆಯ ಸಂಕೇತ. ಪ್ರಕೃತಿಯೇ ತನ್ಮೂಲಕ ಎಲ್ಲಾ ಸಂಕೇತವನ್ನು ಅದೆಷ್ಟು ಸೂಕ್ಷ್ಮವಾಗಿ ಆದರೆ ನಿಖರವಾಗಿ ತೋರುತ್ತದೆ ಎಂದು ಬಹು ಅಚ್ಚರಿ ಪಡುತ್ತಿರುತ್ತೇನೆ. ಹಸಿರು ಕಂಡಾಗಲೆಲ್ಲಾ ಹುಚ್ಚೇಳುವ ಮನ... ಏನೋ ತುಂಬಿಕೊಂಡಂತಹ ಭಾವ.. ಉಲ್ಲಾಸ. ಹಾಗಾಗಿಯೇ ಹಿರಿಯರು ಗರ್ಭಿಣಿ ಸ್ತ್ರೀಯರ ಉಡಿ ತುಂಬುವಾಗ ಹಸಿರು ಬಳೆ, ಕಣ, ಸೀರೆ ಕೊಡುವ ಪ್ರತೀತಿ ಮಾಡಿದ್ದಾರೆ. ಪ್ರಕೃತಿಯ ಜೊತೆ ಜೊತೆಗೇ ಮಾನವನ ಮನಸೂ ಸ್ಪಂದಿಸುತ್ತದೆ ಎನ್ನುತ್ತಿದ್ದರು ನನ್ನ ಫಿಸಿಕ್ಸ್ ಗುರುಗಳು. ಹಂತ ಹಂತವಾಗಿ ಅದು ಎಷ್ಟು ಸತ್ಯ ಎಂದು ಇಂದಿಗೂ ನನಗೆ ಮನವರಿಕೆಯಾಗುತ್ತಲೇ ಇದೆ.

ಹ್ಮ್ಂ... ಎಷ್ಟು ಪ್ರಯತ್ನಿಸಿದರೂ ಪೂರ್ತಿ ವಿಷಾದವನ್ನು.. ವಿಷಾದವಾಗಿಯೇ ಕಾಣಿಸಲು ಸಾಧ್ಯವಾಗುತ್ತಿಲ್ಲ!:-/ ಬಹುಶಃ ನನ್ನೊಳಗಿನ ಆಶಾವಾದ ಅದನ್ನು ತಡೆಹಿಡಿದಿರಬಹುದು. ಅದೇನೇ ಇರಲಿ... ಡಿಫರೆಂಟ್ ಕೊಡಲು ಯತ್ನಿಸಿದ್ದೇನೆ. ವಿಷಾದದ ಮೂಲಕ ಆಶಾವದದ ಹೊಂಗಿರಣವನ್ನು ಹೊಮ್ಮಿಸುವುದೂ ಅತಿ ಪ್ರಯಾಸದ ಆದರೆ ಅಷ್ಟೇ ವಿಭಿನ್ನ ಹಾಗೂ ವಿಶಿಷ್ಟವಾದ ಕಾರ್ಯ ಎಂದು ಭಾವಿಸಿರುವೆ ನಾನು. ತಮಸ್ಸನ್ನೊಂದೇ ಕಾಣಲು ಹೋದರೆ ಏಣೋ ಕಾಣದು.. ಬರೀ ಅಂಧಕಾರವೇ ತುಂಬಿಕೊಂಡು ಎಲ್ಲವೂ ಶೂನ್ಯವೇ ಆಗುವುದು. ಒಂದು ಬೆಳಕಿನ ಕಿರಣವನ್ನಿಟ್ಟುಕೊಂಡರೆ ತಮಸ್ಸನ್ನೂ ಕಾಣಬಹುದು... ಹಾಗೇ ಅದನ್ನು ಹೊಡೆದೋಡಿಸಲು ಕೇವಲ ಒಂದು ಕಿರಣದ ಅವಶ್ಯಕತೆ ಮಾತ್ರ ಇರುವುದೆನ್ನುವದರ ಅರಿವೂ ನಮ್ಮದಾಗುವುದು...

* ಈ ಬರಹವನ್ನು ಬರೆಯಲು ಪ್ರೇರೇಪಿಸಿದ ನನ್ನ ಆತ್ಮೀಯ ಮಾನಸ ಸಹೋದರ ಮಧುಸೂದನ್‌ಗೆ ಧನ್ಯವಾದಗಳು :)

-ತೇಜಸ್ವಿನಿ ಹೆಗಡೆ.

16 ಕಾಮೆಂಟ್‌ಗಳು:

Santhosh Rao ಹೇಳಿದರು...

ತುಂಬಾ ಚೆನ್ನಾಗಿದೆ....

sunaath ಹೇಳಿದರು...

ವಿಷಾದದ ಬಗೆಗೆ ಸೊಗಸಾಗಿ ಬರೆದಿದ್ದೀರಿ! ನಿಮಗೆ ಹಾಗೂ ಮಾನಸ-ಸೋದರ ಮಧುಸೂದನರಿಗೆ ಧನ್ಯವಾದಗಳು.

ಮಧು ಹೇಳಿದರು...

ಚೆನ್ನಾಗಿದೆ. ನಾನು ಕೇಳಿದ ಹಾಗೆ ಭಿನ್ನವಾಗಿಯೂ ಇದೆ. ಥ್ಯಾಂಕ್ಯೂ

ದಿನಕರ ಮೊಗೇರ ಹೇಳಿದರು...

baNNagaLa bagge barediddu odi, nanagishTada baNNa mattu nanna melina prabhaava nenapisikonDe...
houdu enisitu...

chennaagide baraha...

PARAANJAPE K.N. ಹೇಳಿದರು...

"ವಿಷಾದ" ದ ಬಗ್ಗೆ ವಿಶದವಾಗಿ ಬರೆದಿದ್ದೀರಿ. ವಿಷಾದವನ್ನು, ಆಶಾವಾದವನ್ನು, ಸೂರ್ಯ, ಚ೦ದ್ರ, ಸಾಗರ ಹೀಗೆ ಪ್ರಕೃತಿಯ ಪ್ರತೀಕಗೊ೦ದಿಗೆ ಸಮೀಕರಿಸಿದ್ದೀರಿ. ಸೊಗಸಾದ ಬರಹ.

ಮನಸು ಹೇಳಿದರು...

ತುಂಬಾ ಚೆನ್ನಾಗಿದೆ. ಭಿನ್ನ ಲೇಖನ ಕೂಡ. ಧನ್ಯವಾದಗಳು

shivu.k ಹೇಳಿದರು...

ಮೇಡಮ್,

ವಿಷಾದದ ಬಗ್ಗೆ ಬರೆಯಲು ಪ್ರಯತ್ನಿಸಿದರೆ ಅದು ಸಾಧ್ಯವೇ ಅಗುವುದಿಲ್ಲವೆನ್ನುವುದು ಎಷ್ಟು ಸತ್ಯ ಎನ್ನುವುದು ನಿಮ್ಮ ಲೇಖನವನ್ನು ಓದಿದ ಮೇಲೆ ಗೊತ್ತಾಗುತ್ತದೆ. ನಿಮ್ಮ ಬರಹದಲ್ಲಿ ಅದಕ್ಕಿಂತ ಸಂತಸ, ಅದ್ಯಾತ್ಮ ವಿಚಾರಗಳ ಬಗ್ಗೆ ಬರೆದಿರುವುದು..

ಜಲನಯನ ಹೇಳಿದರು...

ವಿಶಾದದ ವಾದ-ಪ್ರತಿವಾದ ನಿಮ್ಮಲ್ಲೇ ಹುಟ್ಟಿರುವುದು ಅದನ್ನು ವಿಶದಿಸಿರುವುದು ಎಲ್ಲದರ ಆವರಣಕ್ಕೆ ಪ್ರಕೃತಿ, ಸಮುದ್ರ, ಸೂರ್ಯಗಳ ಪ್ರಯೋಗ ಇಷ್ಟವಾಯ್ತು ತೇಜಸ್ವಿನಿ.
ಆದರೆ ನನಗೆ ಈ ವರೆಗೂ ವಿಶಾದ ಎನ್ನುವುದು ಅತಿರೇಕ ಎನ್ನುವಷ್ಟರ ಮಟ್ಟಕ್ಕೆ ತಲುಪಬಹುದೇ...? ಎನ್ನುವ ಮನವರಿಕೆ ಪ್ರಕೃತಿಯನ್ನು ಕಂಡೇ ಆಗಿದ್ದು. ಮೊದಲಿಗೆ ನನ್ನ ಸ್ನೇಹಿತನ ಕಣ್ಣ ಮುಂದೆ ಅವನ ಸಹಾಯಕ ಸುನಾಮಿ ಅಲೆಗೆ ಕೊಚ್ಚಿ ಹೋದದ್ದನ್ನು ವಿವವರಿಸಿದಾಗ ಮತ್ತು ಮೊನ್ನೆಯ ಜಪಾನ್ ಸುನಾಮಿಯ ನೇರ ದೂರದರ್ಶನ ದೃಶ್ಯ ಕಂಡು...ಚನ್ನಾಗಿದೆ ನಿಮ್ಮ ವಿಶಾದ ಸಮೀಕ್ಷೆ

ಚಿತ್ರಾ ಸಂತೋಷ್ ಹೇಳಿದರು...

akka thumba chennagide.....

Bhashe estondu gattiyagi...muddagide...
-Chitra santhosh

ಕ್ಷಣ... ಚಿಂತನೆ... bhchandru ಹೇಳಿದರು...

ನಮಸ್ತೆ.
'ವಿಷಾದ'ದ ವಿಷಯವಾಗಿ ಬರೆದ ಬರಹ ಸವಿಯಾಗಿದೆ. ಇದರಲ್ಲಿ ವಿಷಾದದ ಜೊತೆಗೆ ಆಶಾವಾದ, ಪ್ರಕೃತಿಯೊಡನೆ ಜೀವನವನ್ನು ಹೊಂದಿಸಿಕೊಂಡು ಬಾಳುವ ಬಗೆ... ಬರಹ ಚೆನ್ನಾಗಿದೆ.

ಧನ್ಯವಾದಗಳು.

ಸಾಗರದಾಚೆಯ ಇಂಚರ ಹೇಳಿದರು...

cholo baradye, olle talent, ninna bareya shaili superb

ಸುಧೇಶ್ ಶೆಟ್ಟಿ ಹೇಳಿದರು...

vishaadha yendu haNepatti iddaroo aashaavaadhadha kiraNavoo kaaNisitu barahadalli :) thumba chennagidhe different aagi :)

krutthivaasapriya ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
krutthivaasapriya ಹೇಳಿದರು...

tumba chennagide , manassige tumba aaptavenisitu

prabhamani nagaraja ಹೇಳಿದರು...

"ವಿಷಾದ" ದ ಬಗ್ಗೆ ಸೊಗಸಾದ ಬರಹ. ಅಭಿನ೦ದನೆಗಳು.

ತೇಜಸ್ವಿನಿ ಹೆಗಡೆ ಹೇಳಿದರು...

"ವಿಷಾದ" - ಅದೇನೋ ಎಂತೋ ಈ ಪದವನ್ನು ನೋಡಿದಾಗಲೆಲ್ಲಾ "ಆಶಾವಾದದ" ನೆನಪೇ ಆಗುವುದು ನನಗೆ... ಹಾಗಾಗಿಯೇ ಇರಬೇಕು ಪೂರ್ತಿ ವಿಷಾದವನ್ನು ಮುಂದಿಡಲು ಅಸಮರ್ಥಳಾದೆ.. ಆದರೆ ಇದಕ್ಕಾಗಿ ನಾನೇನೂ ವಿಷಾದಿಸುತ್ತಿಲ್ಲ :)

ವಿಷಾದದೊಳಗಿನ ಹೊಸ ಆಶಾವಾದವನ್ನು ಮೆಚ್ಚಿ ಸ್ಪಂದಿಸಿದ ಎಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲವೇ ನನ್ನ ಬರವಣಿಗೆಯ ಆಶಾದೀಪ.. :)

ಪ್ರೀತಿಯಿಂದ,
ತೇಜಸ್ವಿನಿ ಹೆಗಡೆ.