ಗೋಲಿಗಳಾಚೆ ಹೊಚ್ಚ ಹೊಸ ದಾರಿಯೊಂದು ಕಾಣಲು
ನೆಟ್ಟ ನೋಟವನೇ ಬೀರುತ್ತಾ, ದಿಟ್ಟ ಹೆಜ್ಜೆಯನಿಟ್ಟು ಮುನ್ನಡಿಯಿಟ್ಟೆ....
ಅಕ್ಕ ಪಕ್ಕ ಕಾಣಲಿಲ್ಲ, ಸುತ್ತ ಮುತ್ತ ಯಾರೂ ಇಲ್ಲ
ಕಾಲ್ಕೆಳಗಿನ ಭೂಮಿಯೂ ಬಿಳಿ ಹತ್ತಿಯ ಮೋಡದಂತಿದೆಯಲ್ಲ!
ನಿಶ್ಚಲ ತಂಗಾಳಿಯ ಕಂಪಿಗೆ ಮತ್ತೇರುತ್ತಿತ್ತು ಮೆಲ್ಲ ಮೆಲ್ಲ....
ಅತ್ತ ಪ್ರಪಾತ, ಇತ್ತ ಜಲಪಾತ, ನಡುವೆ ಮೋಡವೇರಿ ಸಾಗುತಿರೆ,
ಧುತ್ತೆಂದು ಎದುರಾದ, ಬದುಕುಗಳ ಸಗಟುಗಾರ ಯಮರಾಯ,
ಎದೆಯಲ್ಲೆನೋ ಸಣ್ಣ ಕಂಪನವಾಗಿ, ಕೈ ಮೂಗಿನೆಡೆ ಸಾಗಿತ್ತು ಅಪ್ರಯತ್ನವಾಗಿ,
ಎಮ್ಮೆಯ ಸುಳಿವಿಲ್ಲದೇ, ಗದೆಯ ಮೇಲೇರಿಸದೇ,
ಹೂಂಕಾರದ ಸೊಕ್ಕಿಲ್ಲದೇ ಬಳಿ ಸಾರಿ ಬಹು ಮೆಲ್ಲನೆಂದ
ಮಗಳೆ...‘ ಕೊಟ್ಟಿರುವೆ ನಿನಗೆ ನಾ ನಾಲ್ಕೇ ನಾಲ್ಕು ಆಯ್ಕೆಗಳ’
ಜೀವವಿತ್ತ ಹೆತ್ತವರೋ, ಜೀವ(ನ)ದ ಸಂಗಾತಿಯೋ,
ನೀ ಜನ್ಮವಿತ್ತ ಮಗುವೋ, ನಿನ್ನ ಒಡಹುಟ್ಟಿದವರೋ
ಆಯ್ದುಕೊಳ್ಳುವ ಹಕ್ಕು ನಿಂದೇ, ಬೇಕಾಗಿದೆ ಜೀವ ನನಗಿಂದೇ..
ಉರಿವ ಸೂರ್ಯ ಮಂಕಾದಂತೆ, ಹೊಳೆವ ಚಂದ್ರ ಕಪ್ಪಾದಂತೆ,
ಹಾಲಿನೊಳು ಹಾಲಾಹಲ ಬೆರೆತಂತೆ, ಅನ್ನವೆಲ್ಲಾ ಕಲ್ಲಾದಂತೆ
ಬಿದ್ದು ಬಿಟ್ಟೆ ಉರುಳಿ, ಪಾದದ ಬಳಿ ದೈನ್ಯತೆಯೇ ಮೂರ್ತವೆತ್ತಂತೆ
ನಮ್ಮಪ್ಪ, ಕೈ ಮುಗಿವೆ, ಕಾಲಿಡಿದು ಶಿರವಾಗುವೆ
ದಯಮಾಡಿ ಅನುಕರಿಸು, ನನ್ನನ್ನು ಉದ್ಧರಿಸು
ಐದನೆಯ ಆಯ್ಕೆನೂ ಸೇರಿಸಿ ಬಿಡು ಮತ್ತೆ, ಬಿಕ್ಕಿ ಬಿಕ್ಕಿ ನಾನಳುತ್ತಿದ್ದೆ
ಯಮನಂತಹ ಯಮನಿಗೂ ಕನಿಕರವುಕ್ಕಿ ಕರಗಿದ್ದ ನನಗಾಗಿ
ಐದನೆಯ ಆಯ್ಕೆಯನು ನನಗೇ ಬಿಡಲು, ನಕ್ಕಿದ್ದೆ ಮೆಲುವಾಗಿ..
ನಗುಮೊಗದ ನನ್ನನೇ ಪಿಳಿ ಪಿಳಿ ನೋಡುತ್ತಿದ್ದ ಆತ ಪೆಚ್ಚಾಗಿ
ಸೋತ ಹೆಜ್ಜೆಯನೊಡನೆ, ನನ್ನ ಗೆಲುವನೇರಿಸಿಕೊಂಡ ಯಮರಾಯ
ನಾಲ್ಕು ಆಯ್ಕೆಗಳ ಬದುಕಿಸಿ, ಐದನೆಯದರ ಜೊತೆಗೆ ಸಾಗಲು...
ಮುಚ್ಚಿದ್ದ ರೆಪ್ಪೆಗಳ ರಪ್ಪನೆ ತೆರೆದರೆ, ರವಿರಾಯ ಕಣ್ ಚುಚ್ಚುತ್ತಿದ್ದ
-ತೇಜಸ್ವಿನಿ ಹೆಗಡೆ
8 ಕಾಮೆಂಟ್ಗಳು:
ಕವಿತೆ ಚೆನ್ನಾಗಿದೆ. ಸುಷುಪ್ತಿಯಲ್ಲಿರುವಾಗ ಮನಪಟಲದಲ್ಲಿ ಮೂಡುವ ವಿಕ್ಷಿಪ್ತ ಮತ್ತು ಅಲೌಕಿಕ ತಾಕಲಾಟಗಳನ್ನು ಒ೦ದು ಉತ್ತಮ ಚೌಕಟ್ಟಿನಲ್ಲಿ ಕವಿತೆಯಾಗಿಸುವಲ್ಲಿ ಯಶಸ್ವಿಯಾಗಿದ್ದೀರಿ.
ಕವನದ ಶೈಲಿ, ಕವನವನ್ನು ಬೆಳೆಸಿದ ರೀತಿ ತು೦ಬಾ ಇಷ್ಟ ಆಯಿತು... :)ಚ೦ದದ ಕವನ :)
ಪ್ರಶಂಸನೀಯ ಆಯ್ಕೆ, ಪ್ರಶಂಸನೀಯ ಕವನ!
sundara, arthapurna, bhavnatmaka Kavana....ishta aitu..
ಕಥನದ ಶೈಲಿಯ ಕವನದ ದಾಟಿ ಇಷ್ಟವಾಯ್ತು.
ತೇಜಸ್ವಿನಿ ಮೇಡಮ್,
ಮನಸ್ಸಿನ ತಾಕಲಾಟಗಳನ್ನು ಕವನದ ಪದಗಳಲ್ಲಿ ಸೆರೆಯಿಡಿದಿರುವ ಬಗೆ ತುಂಬಾ ಚೆನ್ನಾಗಿದೆ...
manassina tolalaatada sundara kavana
late agi bandiddakke kshamisu
ಮೆಚ್ಚುಗೆಭರಿತ ಸ್ಪಂದನೆಗಳಿಗೆಲ್ಲಾ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ ಮಾನಸದ ಜೊತೆ ಹೀಗೇ ಇರಲೆಂದು ಆಶಿಸುವೆ.
-ತೇಜಸ್ವಿನಿ.
ಕಾಮೆಂಟ್ ಪೋಸ್ಟ್ ಮಾಡಿ