ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ॥
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು — ಮಂಕುತಿಮ್ಮ ॥
ತಾನು, ತನ್ನವರು, ತನ್ನ ಸುಖ, ತನ್ನವರ ಏಳಿಗೆ - ಈ ಸಂಕುಚಿತ ವರ್ತುಲದೊಳಗೇ ಸುತ್ತು ಹಾಕುವ ಮನುಷ್ಯ ನಿಃಸ್ವಾರ್ಥವಾಗಿ ಇತರರಿಗೆ ಸಹಾಯ ಮಾಡುವುದು, ಪರರ ಏಳಿಗೆಗಾಗಿ ಅವಿರತವಾಗಿ ಶ್ರಮಿಸುವುದು ತೀರಾ ಕಡಿಮೆಯೇ! ಅಂತಹ ಒಂದು ಅಪರೂಪದ ವ್ಯಕ್ತಿಯ, ಅನೂಹ್ಯ ವ್ಯಕ್ತಿತ್ವದ ಸ್ಥೂಲ ಚಿತ್ರಣವನ್ನು ಇಲ್ಲಿ ಕಾಣಿಸಲೆತ್ನಿಸಿದ್ದೇನೆ.
ಏನೇ ಆದರೂ ಏನೇ ಹೋದರೂ, ಎಷ್ಟೇ ಕಷ್ಟ ಬಂದರೂ, ದುಃಖದೊಳು ಮುಳುಗಿದರೂ, ತನ್ನ ಅಸ್ತಿತ್ವವನ್ನು ಛಾಪಿಸಿ, ಜೊತೆಗೆ ತನ್ನಂತವರ ಅಸ್ತಿತ್ವಕ್ಕಾಗಿ, ಅವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಹೋರಾಟಗಾರು, ಛಲಗಾರರು ತೀರಾ ವಿರಳ. ಹೀಗಿರುವಾಗ ತನ್ನೊಳಗಿನ ದೈಹಿಕ ಅಶಕ್ತತೆಯನ್ನು ಸಂಪೂರ್ಣ ದೂರವಿಟ್ಟು, ಆತ್ಮಶಕ್ತಿಯನ್ನು, ಮನದೊಳಗಿನ ಧೀಃಶಕ್ತಿಯನ್ನು ಕೇಂದ್ರೀಕರಿಸಿಕೊಂಡು, ಅಂತರಾಷ್ಟ್ರೀಯ ಮಟ್ಟದ ಶ್ರೇಷ್ಠ ಕೀಡಾಪಟುವೆನಿಸಿಕೊಂಡಿದ್ದಲ್ಲದೇ, ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ - ಹೀಗೆ ಇನ್ನೂ ಅನೇಕ ಪ್ರಶಸ್ತಿಗಳನ್ನು ತನ್ನ ಕೀರ್ತಿಯ ಕಿರೀಟಕ್ಕೆ ಗರಿಗಳಾಗಿಸಿಕೊಂಡು ಅದಮ್ಯ ಉತ್ಸಾಹದಿಂದ ಮುನ್ನೆಡೆಯುತ್ತಿರುವ "ಮಾಲತಿ ಹೊಳ್ಳ"
ಇವರ ಬಗ್ಗೆ ಬರೆದಷ್ಟೂ ಸಾಲದು... ಓದಿದಷ್ಟೂ ಮುಗಿಯದು. ಇವರ ಸ್ಥೂಲ ಪರಿಚಯ ಪಡೆಯಲು, ಅವರ ಯಶೋಗಾಥೆಯನ್ನು ತಿಳಿಯಲು ದಯವಿಟ್ಟು ಈ ತಾಣಗಳಿಗೆ ಭೇಟಿ ಕೊಡಿ.
http://archives.chennaionline.com/health/hopeislife/07life08.asp
http://www.blog.sourishdey.com/2009/07/malathi-holla-a-story-of-will-power/
AND
http://webcache.googleusercontent.com/search?q=cache:Xm0m1mfCgzIJ:www.indiatogether.org/2003/sep/hlt-padmashri.htm+Malathi+Krishnamurthy+Holla&hl=en&ct=clnk&cd=1&gl=nz
ಆ ಕ್ಷಣ... ಆ ದಿನ... - ಅಗಸ್ಟ್ ತಿಂಗಳಲ್ಲಿ ನನಗೊಂದು ಅಚ್ಚರಿ ಕಾದಿತ್ತು. ಕನ್ನಡ ವಾಹಿನಿಯೊಂದು ತನ್ನ ವಿಶೇಷ ಕಾರ್ಯಕ್ರಮಕ್ಕಾಗಿ ನನ್ನ ಸಂದರ್ಶನವನ್ನು ಕೇಳಿತ್ತು. ನಾನು ಒಪ್ಪಿ ಹೋದಾಗ ನನಗೆ ಕಾದಿದ್ದು ಮತ್ತೊಂದು ಬಹು ದೊಡ್ಡ ಅಚ್ಚರಿ. ಅದೇ ಕಾರ್ಯಕ್ರಮದ ಇನ್ನೊಂದು ಸಂಚಿಕೆಗಾಗಿ "ಮಾಲತಿ ಹೊಳ್ಳರನ್ನೂ" ಕರೆಸಿದ್ದರು. ಅಂದೇ, ಆ ದಿನವೇ, ಆ ಹೊತ್ತೇ ನಾನು ಅವರನ್ನು ಪ್ರಥಮ ಬಾರಿ ನೋಡಿದ್ದು. ಎಲ್ಲರನ್ನೂ ಮಾತನಾಡಿಸುತ್ತಾ, ನಗು ನಗುತ್ತಾ, ಒಳ ಬಂದ ಅವರನ್ನು ಕಂಡಾಗ ಒಳಗೊಳಗೇ ನಾನು ಅಧೀರಳಾಗಿದ್ದೆ. ಕಾರಣ ಅವರ ಅನುಪಮ ವ್ಯಕ್ತಿತ್ವ ಹಾಗೂ ಅಪ್ರತಿಮ ಸಾಧನೆ! ನನ್ನೊಡನೆ ತುಂಬಾ ಸಹಜವಾಗಿ, ಹಲವು ವರುಷಗಳ ಪರಿಚಯವಿದ್ದಂತೇ ಓರ್ವ ಸ್ನೇಹಿತೆಯಂತೇ, ಹಿರಿಯಕ್ಕನಂತೇ ಹರಟಿದ ಅವರ ಸರಳತೆಗೆ, ವಿನಮ್ರತೆಗೆ ಮಾತ್ರ ನಾನು ಮಾರು ಹೋದೆ. ಶೂಟಿಂಗ್ನಲ್ಲಿದ್ದ ಲೈಟ್ ಬಾಯ್ನಿಂದ ಹಿಡಿದು, ಸಂದರ್ಶಕಿಯವರೆಗೂ ಅವರು ತೋರಿದ ಸ್ನೇಹ, ಸರಳತೆ, ಸಹಜತೆ ತುಂಬಾ ಸಂತೋಷವನ್ನುಂಟುಮಾಡಿತ್ತು. ಅಲ್ಲಿಂದ ಶುರುವಾದ ನಮ್ಮಿಬ್ಬರ ಸ್ನೇಹ, ಪರಿಚಯ ನನ್ನನ್ನು ಅವರ
"ಮಾತೃ ಪ್ರತಿಷ್ಠಾನಕ್ಕೂ" ಎಳೆದೊಯ್ದಿತು.
ಏನಿದು ಮಾತೃಪ್ರತಿಷ್ಠಾನ? (Matru Foundation)
ಮಾತೃ ಪ್ರತಿಷ್ಠಾನದ ವೆಬ್ಸೈಟ್ನಲ್ಲಿರುವಂತೇ - "Paraplegic brave heart, Arjuna Awardee and Padmasree Malathi K. Holla, afflicted by polio at infancy, stands tall in the world of paraplegic sports in India by sheer grit and determination and has won medals around the world
The 45 year old Bank Manager has launched the "Mathru Foundation" to serve the physically challenged with motherly care
Lending her a helping hand are the former International sprinter Ashwini Nachappa, International Cricketer Venkatesh Prasad, Krishna Reddy H.T, and Dr.Sridhar. M.K., both physically challenged and Anantha Bhat M, a leading advocate"
 |
Malathi Holla |
ಮೊದಲ ಭೇಟಿಯಲ್ಲೇ ಅವರು ಅವರ ಈ ಸಂಸ್ಥೆಯ ಬಗ್ಗೆ ಕಿರು ಪರಿಚಯ ತಿಳಿಸಿದ್ದರೂ ನನಗೆ ಭೇಟಿಕೊಡಲಾಗಿರಲಿಲ್ಲ. ಅಂತೂ ಇಂತೂ ಅದಕ್ಕೆ ಕಾಲ ನಿನ್ನೆ ಕೂಡಿ ಬಂತು. "ನನ್ಗೆ ಬರೋಬ್ಬರಿ ೧೭ ಮಕ್ಕಳು.. ಬನ್ನಿ ನನ್ನ ಮಕ್ಕಳನ್ನ ನೋಡಲು.." ಎಂದು ಆಹ್ವಾನಿಸಿದ್ದ ಆ ಪ್ರೀತಿಯ ಕರೆಯೇ ನನ್ನೊಳಗೆ ಸದಾ ರಿಂಗುಣಿಸುತ್ತಿತ್ತು. ಅವರ ಮಕ್ಕಳನ್ನು ನೋಡಲು, ನನ್ನ ಮಗಳಾದ ಅದಿತಿ ಹಾಗೂ ನನ್ನ ತಂಗಿ, ಅವಳ ಮಗನಾದ ಆದಿತ್ಯನೊಡಗೂಡಿ ನನ್ನವರೊಂದಿಗೆ ಭೇಟಿಕೊಟ್ಟೆ. ಅಲ್ಲಿಗೆ ಹೋದ ಮೇಲೆಯೇ ತಿಳಿದಿದ್ದು.. ಮಾಲತಿಯವರ ಸಾಧನೆ, ಛಲ, ಪ್ರೇರಣಾ ಶಕ್ತಿ, ಹೋರಾಟ - ಇವೆಲ್ಲಾ ಯಾವುದೇ ಪರಿಮಿತಿಗೆ ಒಳಪಡದಂಥವು ಎಂದು! ಹಿಮಾಲಯದ ಕೆಳಗೆ ನಿಂತು, ಅದರ ತುತ್ತತುದಿಯನ್ನು ವೀಕ್ಷಿಸಲು ಹೆಣಗಾಡುವ ಮನುಷ್ಯನ ಪಾಡು ನನ್ನದಾಯಿತು.
ಈ ಪ್ರತಿಷ್ಠಾನವಿರುವುದು ಎಚ್.ಎ.ಎಲ್ನಲ್ಲಿ. ಎಚ್.ಎ.ಎಲ್. ಪೋಲಿಸ್ ಸ್ಟೇಷನ್ ದಾಟಿ ಎರಡನೇ ಎಡ ರಸ್ತೆಗೆ ತಿರುಗಿ (Opp. Petrol bunk), ಸುಮಾರು ೩೦೦ ಮೀಟರ್ ಸಾಗಿದ ಕೂಡಲೇ ಬಲಬದಿಗೆ ಒಂದು ದೊಡ್ಡ ಗೇಟ್ ಕಾಣುವುದು. ಗೇಟಿನ ಒಳ ಪ್ರವೇಶಿಸಿದ ಕೂಡಲೇ "ಮಾತೃ ಪ್ರತಿಷ್ಠಾನ" ಬೋರ್ಡ್ ನಿಮಗೆ ಕಾಣುವುದು. ಎಚ್.ಎ.ಎಲ್ನವರ ಕ್ವಾಟ್ರಸ್ ಒಂದನ್ನೇ ಬಾಡಿಗೆಗೆ ಪಡೆದು ಸುಮಾರು ೧೭ ವಿಶಿಷ್ಟ ಚೇತನವುಳ್ಳ ಮಕ್ಕಳನ್ನು ಸಾಕುತ್ತಿದ್ದಾರೆ. ಈ ಮಕ್ಕಳೆಲ್ಲಾ ಅನಾಥರಲ್ಲ. ದೂರದೂರುಗಳಿಂದ ಇಲ್ಲಿಗೆ ಬಂದಿದ್ದಾರೆ. ಮನೆಯಲ್ಲಿನ ಕಷ್ಟ, ಅಸೌಕರ್ಯಗಳನ್ನೆಲ್ಲಾ ಹಿಂದಿಕ್ಕಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಬಂದಿದ್ದಾರೆ. ಇಲ್ಲಿ ಅವರ ತಾಯಿ ಮಾಲತಿಯವರೇ. ಅವರೊಂದಿಗಿದ್ದು, ಅವರಿಗೆ ಎಲ್ಲಾ ರೀತಿಯಲ್ಲೂ ಸಹಕರಿಸುವ ಯಶೋದಮ್ಮನೂ ಅವರಿಗೆ ಮತ್ತೊಬ್ಬ ತಾಯಿಯೇ. ವರ್ಷಕ್ಕೊಮ್ಮೆ ಶಾಲೆಗಳಿಗೆ ರಜೆ ಸಿಕ್ಕಿದಮೇಲೆ ತಮ್ಮ ತಮ್ಮ ಮನೆಗಳಿಗೆ ತೆರಳುವ ಅವರು, ವಾರಕ್ಕೊಮ್ಮೆ ತಮ್ಮ ಮನೆಯವರೊಂದಿಗೆ ದೂರವಾಣಿಯ ಮೂಲಕ ಸಂಭಾಷಿಸುತ್ತಾರೆ.
ನಾವು ಹೋದಾಗ ಮಾಲತಿಯವರು ಇರಲಿಲ್ಲ. ಮೀಟಿಂಗ್ ಒಂದನ್ನು ನಿರ್ವಹಿಸಲು ಜಯನಗರದ ಕಡೆ ಹೋಗಿದ್ದರು. ಆದರೂ ಸತತವಾಗಿ ನಮ್ಮೊಂದಿಗೆ ಫೋನ್ ಸಂಪರ್ಕದಲ್ಲಿದ್ದರು. ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಹೋದಾಗ ಅಲ್ಲಿಯ ಮಕ್ಕಳಿಗಾಗಿ ಉಚಿತವಾಗಿ ಇಂಗ್ಲಿಷ್ ಕಲಿಸಲು "ನೀನಾ" ಅನ್ನುವವರು ಬಂದಿದ್ದರು. ಅವರ ತರಗತಿಗೆ ತೊಂದರೆ ಆಗದಂತೇ ಹುಡುಗರಿಗೆ ವಿಶ್ ಮಾಡಿ ಹೊರಗೆ ಬಂದ ನಾವು, ತುಸು ಕಾಲ ಅಲ್ಲೇ ಕಾಯ ತೊಡಗಿದೆವು.
ಒಟ್ಟೂ ೧೭ ಮಕ್ಕಳಿರುವ ಈ ಪ್ರತಿಷ್ಠಾನದಲ್ಲಿ ಗುಲ್ಬರ್ಗಾ, ರಾಯಚೂರು, ಕಾರವಾರ - ಇತ್ಯಾದಿ ಕಡೆಗಳಿಂದ ೧೦ ವರ್ಷದಿಂದ ೨೩ ವರ್ಷದವರೆಗಿನ ವಿಶಿಷ್ಟ ಚೇತನರಿದ್ದಾರೆ. ಅವರಿಗೆ ಸರಿಯಾದ ಸೌಲಭ್ಯ, ಇಷ್ಟಪಟ್ಟ ವಿದ್ಯಾಭ್ಯಾಸ, ಕಾಲ ಕಾಲಕ್ಕೆ ವೈದ್ಯಕೀಯ ತಪಾಸಣೆ, ಓಡಾಟಕ್ಕೆ ಗಾಲಿ ಕುರ್ಚಿ, ಎಲ್ಲವನ್ನೂ ನೋಡಿಕೊಳ್ಳುವುದು "ಮಾಲತಿ ಹೊಳ್ಳರೇ"! ಇವರನ್ನು ತಮ್ಮ ಸ್ವಂತ ಮಕ್ಕಳಂತೇ ಕಾಪಾಡುತ್ತಿರುವ ಈ ಮಹಾತಾಯಿ, ಪ್ರತಿಯೊಬ್ಬರಿಗೂ ವಿದ್ಯಾಭ್ಯಾಸ ನೀಡುತ್ತಿದ್ದಾರೆ, ಅದೂ ಎಲ್ಲರೂ ಕಲಿಯುತ್ತಿರುವ ಶಾಲಿಗಳಿಗೇ ಇವರನ್ನೂ ಕಳುಹಿಸಿ ಓದಿಸುತ್ತಿದ್ದಾರೆ! ಆಮೂಲಕ ಅವರೊಳಗೆ ಸಮಾನತೆಯ ಅರಿವು ತುಂಬಿ, ಅದಮ್ಯ ಆತ್ಮವಿಶ್ವಾಸವನ್ನು ಬೆಳೆಸುತ್ತಿದ್ದಾರೆ. ಇಲ್ಲಿ ಒಂದನೇ ತರಗತಿಯಿಂದ, ಪಿ.ಯು.ಸಿವರೆಗೂ ಓದುತ್ತಿರುವ ಹುಡುಗರಿದ್ದಾರೆ. "ಅನುಕಂಪ ಕೀಳಿರಿಮೆ ತುಂಬಿದರೆ, ಸಮಾನತೆ ಆತ್ಮವಿಶ್ವಾಸವನು ತುಂಬುತ್ತದೆ" ಎನ್ನುವುದಕ್ಕೆ ಇಲ್ಲಿಯ ಮಕ್ಕಳೊಳಗಿನ ನಗು ಮುಖವೇ ಸಾಕ್ಷಿ.
ಈ ಹುಡುಗರ ಉತ್ಸಾಹ, ಧ್ಯೇಯೋದ್ದೇಶ, ಸ್ವಾವಲಂಬನೆ, ಆತ್ಮವಿಶ್ವಾಸ ಇವುಗಳನ್ನೆಲ್ಲಾ ಕಣ್ಣಾರೆ ಕಂಡೇ ಅನುಭೂತಿ ಪಡೆಯಬೇಕೇ ವಿನಃ ಕೇವಲ ಪದಗಳಲ್ಲಿ ಹಿಡಿಯಲಾಗದು!
ತಾನು ಬದುಕಿದ, ಬಾಳುತ್ತಿರುವ ಉದಾತ್ತ, ಧೀರ ಬದುಕನ್ನೇ ಇವರೊಳಗೂ ತುಂಬಿದ್ದಾರೆ, ತನ್ನದೇ ಅನುಭವಗಳ ಮೂಸೆಯಲ್ಲಿ ಇವರ ಭವಿಷ್ಯವನ್ನು ತಿದ್ದುತ್ತಿದ್ದಾರೆ. ೧೭ ಹುಡುಗರಲ್ಲಿ ಇಬ್ಬರಿಗೆ ನೌಕರಿ ಸಿಕ್ಕಿದ್ದು ಈಗ ೧೪ ಹುಡುಗರಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಆಗಿರುವ ಹೊಳ್ಳರು ಅಲ್ಲೇ ಇರಲಾಗದು. ಹಾಗಾಗಿ ಅನುಗಾಲ ಅವರೊಂದಿಗಿದ್ದು ಊಟ, ತಿಂಡಿ ಇನ್ನಿತರ ಸಹಾಯವನ್ನು ಒದಗಿಸಲು "ಯಶೋದಮ್ಮ" ಎಂಬ ಮತ್ತೋರ್ವ ತಾಯಿಯೂ ಅವರೊಂದಿಗಿದ್ದಾರೆ.
ಯಶೋದಮ್ಮರ ಕೆಲವು ಮನದ ಮಾತುಗಳು....
 |
Yashodamma |
"ನನ್ನ ಸ್ವಂತ ಮಕ್ಕಳು ನನ್ನ ದೂರ ಮಾಡಿದರೂ ಇವರೆಲ್ಲಾ ನನ್ನ ಮಕ್ಕಳೇ ಮೇಡಂ... ನಾನೇ ಸ್ವತಃ ಅಡುಗೆ ಮಾಡಿ ಬಡಿಸಿದರೇ ನನಗೆ ತೃಪ್ತಿ.. ಅದೇ ಕೆಲಸ ನನಗೆ ಸಿಕ್ಕಿದೆ..ಬೆಳಗ್ಗೆ ಟಿಫಿನ್ ರೆಡಿ ಮಾಡಿ, ಊಟಕ್ಕೆ ಕಟ್ಟಿಕೊಟ್ಟು ಬಿಡ್ತೀನಿ.. ಸ್ಕೂಲಿಗೆ ಹೋಗೋರನ್ನ ಮೊದ್ಲು ಬಿಟ್ಟು ಬಂದು, ಕಾಲೇಜಿಗೆ ಹೋಗೋರನ್ನು ಕರ್ಕೊಂಡು ಹೋಗ್ತಾರೆ.... ಇಲ್ಲಿ ನೆಮ್ಮದಿ ಇದೆ ಮೇಡಂ....ಮಾಲತಿ ಮೇಡಂ ನನಗೆ ಹಾಗೂ ನನ್ನ ಪತಿಗೆ ಆಶ್ರಯ ಕೊಟ್ಟಿದ್ದಲ್ಲದೇ ನಮ್ಮ ಎಲ್ಲಾ ಖರ್ಚನ್ನೂ ಇವರೇ ನೋಡಿಕೊಳ್ಳುತ್ತಿದ್ದಾರೆ.. ನನಗಾಗಿ ತಿಂಗಳು ತಿಂಗಳು ನನ್ನ ಅಕೌಂಟಿಗೆ ಕೂಡ ದುಡ್ಡು ಹಾಕ್ತಿದ್ದಾರೆ... ತುಂಬಾ ಒಳ್ಳೇವ್ರು ನಮ್ಮ ಮಾಲತಿ ಮೇಡಂ... ಈ ಮಕ್ಕಳೆಂದ್ರೆ ಅವ್ರಿಗೆ ಜೀವ..ವರ್ಷಕ್ಕೊಮ್ಮೆ ಟೂರಿಗೆ ಕರ್ಕೊಂಡು ಹೋಗ್ತಾರೆ ಎಲ್ರನ್ನೂ... ನನಗೆ ಈವರೆಗೆ ೨ ಸಲ ಓಪನ್ ಹಾರ್ಟ್ ಸರ್ಜರಿ ಆಯ್ತು.. ಅದರ ಖರ್ಚನ್ನೆಲ್ಲಾ ಇವ್ರೇ ನೋಡ್ಕೊಂಡ್ರು.." ಎಂದು ಕಣ್ತುಂಬಿಕೊಂಡ ೬೦ರ ಆಸುಪಾಸಿನ ಆ ಪ್ರೇಮಮಯಿಯನ್ನು ಕಂಡು, ಅವರ ಮಾತುಗಳನ್ನು ಕೇಳಿ ನಮ್ಮ ಮನದುಂಬಿ ಬಂದಿತ್ತು.
ಮಕ್ಕಳಿಗಾಗಿ ಒಂದು ಮಾರುತಿ ಕಾರಿದ್ದು, ಓರ್ವ ಡ್ರೈವರ್ ಕಮ್ ಹೆಲ್ಪರ್ ಸಹ ಅವರೊಂದಿಗೇ ಇರುತ್ತಾನೆ.
ನಾವು ಮಕ್ಕಳೊಂದಿಗಿದ್ದಾಗಿನ ಕೆಲವೊಂದು ಭಾವಚಿತ್ರಗಳು ಇಲ್ಲಿವೆ...
ತದನಂತರ ಮಕ್ಕಳೊಂದಿಗೆ ತುಸು ಕಾಲ ಹರಟಿ, ಅವರ ವಿದ್ಯಾಭ್ಯಾಸ, ಆಶೋತ್ತರಗಳು, ಅವರ ಕನಸುಗಳನ್ನು ತುಸು ಹಂಚುಕೊಂಡು ಹಿಂತಿರುಗುವಾಗ ಮಾತ್ರ ಮನಸು ತುಂಬಾ ಹಗುರು, ಸ್ವಲ್ಪ ಭಾರ (ಹೆಚ್ಚು ಸಮಯ ಕಳೆಯಲಾಗದಿರುವುದಕ್ಕಾಗಿ..) "ನಮ್ಗೆಲ್ಲಾ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ ಮೇಡಂ... ಒಬ್ಬೊಬ್ರಿಗೆ ಒಂದೊಂದು ಪ್ಲೇಯರ್ಸ್ ಇಷ್ಟ.. ನಾವೆಲ್ಲಾ ನಮ್ಗೆ ಆದ ಹಾಗೆ ಕ್ರಿಕೆಟ್ ಆಡ್ತೀವಿ.. ನಮ್ಮನ್ನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕರ್ಕೊಂಡು ಹೋಗಿದ್ರು.. ಅಲ್ಲಿ ನಾವು ಆಸ್ಟ್ರೇಲಿಯಾ ಹಾಗೂ ಇಂಡಿಯನ್ ಪ್ಲೇಯರ್ಸ್ ಎಲ್ಲಾ ಮೀಟ್ ಮಾಡಿದ್ವಿ..ನಿಮ್ಮನ್ನೆಲ್ಲಾ ನೋಡಿ ತುಂಬಾ ಸಂತೋಷವಾಯ್ತು.. ಮತ್ತೆ ಬನ್ನಿ ಇಲ್ಲಿಗೆ..." - ಈ ರೀತಿ ಪ್ರತಿಯೊಬ್ಬರೂ ತಮ್ಮ ಅನುಭವಗಳನ್ನು, ಕನಸುಗಳನ್ನು, ಸವಿನೆನಪುಗಳನ್ನು ಹಂಚಿಕೊಂಡಾಗ ಅರಿಯದ ಆನಂದವುಂಟಾಗಿತ್ತು.
ಬರುವ ಮುನ್ನ ಒಬ್ಬೊಬ್ಬರನ್ನೂ ಮಾತನಾಡಿಸಿ, ಅವರ ಹೆಸರನ್ನೂ, ಓದುತ್ತಿರುವ ತರಗತಿಯನ್ನೂ ಬರೆದುಕೊಂಡು ಬಂದೆ. ನಾವು ಹೋದಾಗ ಅಲ್ಲಿ ೧೨ ಹುಡುಗರಿದ್ದರು... ಅವರ ವಿವರಗಳು ಈ ಕೆಳಗಿನಂತಿದೆ.
ಹೆಸರು ಓದುತ್ತಿರುವುದು
೧. ಕಾಲೆಬ್ - 4th Std
೨. ಪ್ರಕಾಶ್ - 9th Std
೩. ಪ್ರದೀಪ್ - 5th Std
೪. ಮಧುರಾಜ್ - 4th Std
೫. ಸಂಜಯ್ - 1st Std
೬. ನಾಗೇಶ್ - 4th Std
೭. ರಮೇಶ್ - 10th Std
೮. ಹಾವಣ್ಣ - 2nd P.U.C (Arts)
೯. ಶಶಿಕುಮಾರ್ - ITI (Fitter)
೧೦ ಶರೀಫ್ - Ist P.U.C
೧೧. ಶಿವಕುಮಾರ್ - 2nd P.U.C (Arts)
೧೨. ಬೀರಪ್ಪ - 2nd P.U.C (Commerce with Computer courses)
ಇವರಲ್ಲೋರ್ವನಾಗಿರುವ ಶಿವಕುಮಾರ್ ಎನ್ನುವವರು(ಫೋಟೋದಲ್ಲಿ ಕೇಸರಿ ಬಣ್ಣದ ಟೀ ಶರ್ಟ್ನಲ್ಲಿರುವವರು..) ಕಂಪ್ಯೂಟರ್ ಕೋರ್ಸ್ಗಳನ್ನೂ ಮಾಡಿದ್ದಾರೆ. ಡಿ.ಟಿ.ಪಿ., ಫೊಟೋಶಾಪ್ ಓದಿದ್ದಾರೆ. ಅಲ್ಲದೇ ಸುಮಾರು ೨೫ ಕವನಗಳನ್ನೂ, ಒಂದು ಕಿರು ಕಾದಂಬರಿಯನ್ನೂ ಬರೆದಿದ್ದಾರೆ! ಅವರ ಕೆಲವೊಂದು ಕವನಗಳನ್ನು ಫೋಟೋ ತೆಗೆದುಕೊಂಡು ಬಂದೆ.. ಅವುಗಳಲ್ಲಿ ಎರಡು ನಿಮಗಾಗಿ...
ಇವರ ಪ್ರತಿಭೆ ಎಲೆಮರೆಯ ಕಾಯಂತಿರದೇ ಹೊರ ಬಂದರೆ ಅವರ ಆತ್ಮವಿಶ್ವಾಸಕ್ಕೆ ಮತ್ತಷ್ಟು ಇಂಬು ದೊರಕುವುದು.
ಹೊತ್ತು ಕಳೆಯುತ್ತಿದ್ದಂತೇ ಸ್ವಲ್ಪ ಗಲಾಟೆಗೆ ತೊಡಗಿದ ಅದಿತಿ ಹಾಗೂ ಆದಿತ್ಯರಿಂದಾಗಿ ಅರೆಮನಸಿನಿಂದಲೇ ಅಲ್ಲಿಂದ ಹೊರಡಬೇಕಾಯಿತು. ಎಲ್ಲರಿಗೂ ಶುಭಕೋರಿ, ಅವರೆಲ್ಲರ ಆತ್ಮೀಯತೆ, ಪ್ರೀತಿ, ನಗುಮುಖಗಳನ್ನೇ ತುಂಬಿಕೊಂಡು ಅಲ್ಲಿಂದ ಹೊರಡುವಾಗಿ ಸಂಜೆ ಆರೂವರೆಯಾಗಿತ್ತು.
ವಿನಮ್ರ ವಿನಂತಿ :
ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ತಿಳಿಯಬಾರದಂತೆ. ಆದರೆ ಇತರರಿಗೆ ಉಪದೇಶಿಸುವ ನೀವು ಏನು ಮಾಡಿದ್ದೀರೆಂದು ಕೇಳಬಾರದಲ್ಲಾ.. ಹಾಗಾಗಿ ತಿಳಿಸುತ್ತಿದ್ದೇನೆ.
ನಾವು ಬೇಕಾದ್ದಕ್ಕೆ ಬೇಡದ್ದಕ್ಕೆ ಸಾಕಷ್ಟು ಖರ್ಚು ಮಾಡುತ್ತೇವೆ. ಹುಟ್ಟಿದ ದಿನ ಅಂದರೆ ಏನು ಎಂದೇ ತಿಳಿಯದ ವರುಷದ ಮಗುವಿನ ಬರ್ತಡೇಗಾಗಿ ಸಾವಿರಗಟ್ಟಲೇ ಸುರಿಯುತ್ತೇವೆ. ಆದರೆ ಅದೇ ಹಣದಲ್ಲಿ ಅಲ್ಪ ಉಳಿಸಿ ಇಂತಹ ಸಂಸ್ಥೆಗಳಿಗೆ ಕೊಟ್ಟರೆ ಬೆಲೆಗಟ್ಟಲಾಗದ ಹಾರೈಕೆಗಳು ನಮ್ಮೊಂದಿಗಿರುತ್ತವೆ. ಜೊತೆಗೆ ಅನೂಹ್ಯ ತೃಪ್ತಿ, ನೆಮ್ಮದಿ ಅವರೊಂದಿಗೆ ನಮಗೂ ದೊರಕುತ್ತದೆ. ಹಾಗಾಗಿಯೇ ನಾನು "ಅದಿತಿಯ" ಹುಟ್ಟು ಹಬ್ಬವನ್ನು ಪ್ರತಿವರ್ಷ ಈ ರೀತಿ ಆಚರಿಸಲು ನಿರ್ಧರಿಸಿದೆ. ಅವಳ ಮೊದಲ ಹುಟ್ಟು ಹಬ್ಬದಿಂದಲೇ ಈ ಕಾರ್ಯಕ್ಕೆ ಮುನ್ನುಡಿ ಬರೆದೆ. ಮೊದಲ ಎರಡು ವರ್ಷವೂ ಅವಳ ಹುಟ್ಟಿದ ದಿನಾನಂತರ ಬಸವನಗುಡಿಯಲ್ಲಿರುವ
"ಅನಾಥ ಶಿಶುವಿಹಾರಕ್ಕೆ" ಅದಿತಿಯೊಂದಿಗೇ ಭೇಟಿಕೊಟ್ಟು, ಮಕ್ಕಳೊಂದಿಗಿದ್ದು, ಅಲ್ಪ ಕಾಣಿಕೆ ನೀಡುವುದರ ಮೂಲಕ ನಮ್ಮ ಸಂತೋಷ ಹಂಚಿಕೊಂಡಿದ್ದೆವು. ಈ ವರ್ಷ "ಮಾತೃ ಪ್ರತಿಷ್ಠಾನಕ್ಕೆ" ಭೇಟಿ ಕೊಟ್ಟೆವು. ಮಕ್ಕಳಿಗೆ ತಮ್ಮ ಸಮಾಜದಲ್ಲಿರುವ ಅಸಮಾನತೆ, ನೋವು, ಕಷ್ಟಗಳ ಅರಿವನ್ನು ಕ್ರಮೇಣ ಮಾಡಿಸಬೇಕಾದ್ದು ಹೆತ್ತವರ ಕರ್ತವ್ಯ. ಸುಖದ ಜೊತೆ ಕಷ್ಟವಿರುವುದರ ತಿಳಿವು ಅತ್ಯಗತ್ಯ. ಪರೋಪಕಾರದ ಅರ್ಥವನ್ನು ನಾವು ಮಾಡುವುದರ ಮೂಲಕ ಅವರಿಗೆ ಅರಿವು ಮಾಡಿಸಬೇಕು. ನೆನಪಿರಲಿ ಇಂದಿನ ಮಗುವೇ ನಾಳಿನ ಪ್ರಜೆ!
ದಯವಿಟ್ಟು ನೀವು ನಿಮ್ಮಲ್ಲಾದಷ್ಟು ಅಲ್ಪ ಸಹಾಯವನ್ನು ಇಂತಹ ಪ್ರತಿಷ್ಠಾನಗಳಿಗೆ ನೀಡಿ. ಮಾತೃ ಪ್ರತಿಷ್ಠಾನಕ್ಕೆ ಸಹಾಯದ ಅಗತ್ಯತೆ ಇದೆ. ಇಷ್ಟೇ ಕೊಡಬೇಕು, ಇದನ್ನೇ ನೀಡಬೇಕೆಂದಿಲ್ಲ. ಅವರು "೧೦ರಿಂದ ೨೩ರ ವಯೋಮಿತಿಯ ಹುಡುಗರ ಹಳೆಯ ಬಟ್ಟೆಗಳನ್ನು ಕೊಟ್ಟರೆ ಉತ್ತಮ... ಅಕ್ಕಿ, ಸಕ್ಕರೆ, ತರಕಾರಿ, ಹಣ್ಣು, ಧವಸ ಧಾನ್ಯಗಳನ್ನಾದರೂ ಸರಿಯೇ.... ಹಣದ ಸಹಾಯ ಮಾಡಲಾಗದಿದ್ದರೂ ತುಸು ಕಾಲ ಅವರೊಂದಿಗೆ ಬೆರೆತು ಸಂತೋಷ ಹಂಚಿಕೊಳ್ಳಿ ಸಾಕು.." ಎಂದಷ್ಟೇ ವಿನಂತಿಸಿದ್ದಾರೆ. ಮಾಲತಿ ಹೊಳ್ಳರ ಸಾಧನೆಗೆ, ಹೋರಾಟಕ್ಕೆ, ಅವರ ಈ ಒಂದು ಅತ್ಯುತ್ತಮ ಕಾರ್ಯಕ್ಕೆ ನೆರವಾಗುವ ಹೊಣೆಗಾರಿಗೆ ಪ್ರತಿಯೊಬ್ಬರ ಹೆಗಲ ಮೇಲೂ ಇದೆ. ಅವರು ಮಾಡುತ್ತಿರುವ ಕಾರ್ಯ ಸಮಾಜಮುಖಿಯಾಗಿದ್ದು, ಆ ಮಹಾನ್ ಸಾಧನೆಗೆ ಎಲ್ಲರ ಅಲ್ಪ ಕೊಡುಗೆಯೂ ಸೇರಿದರೆ ಅವರ ಈ ಕಠಿಣ ಮಾರ್ಗ ಮತ್ತಷ್ಟು ಸುಗಮವಾಗುವುದಲ್ಲದೇ ಇನ್ನೂ ಅನೇಕ ವಿಶಿಷ್ಟ ಚೇತನರಿಗೆ ಬದುಕು ನೀಡುವುದು. ಅದೆಷ್ಟೋ ವಿಶಿಷ್ಟ ಚೇತನರು ಇಂತಹ ಮಾತೃ ಛಾಯಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸ್ಥಳದ ಅವಕಾಶವಿಲ್ಲದೇ, ಸೂಕ್ತ ದೇಣಿಗೆಗಳಿಲ್ಲದೇ ಅವರಿಗೆಲ್ಲಾ ಸ್ಥಳ ಕೊಡುವುದು ಬಹು ಕಷ್ಟಕರವೇ. ಜಾತಿ ಮತ ಬೇಧವಿಲ್ಲದೇ ನಿಃಸ್ವಾರ್ಥತೆಯಿಂದ, ತನ್ನೊಳಗಿನ ದೌರ್ಬಲ್ಯಗಳನ್ನೆಲ್ಲಾ ಮೆಟ್ಟಿ ನಿಂತು, ಅದಮ್ಯ ಶಕ್ತಿಯನ್ನು ಪ್ರದರ್ಶಿಸುತ್ತಿರುವ ಈ ಸ್ಪೂರ್ತಿಯ ಚೇತನಕ್ಕೆ ನಮಸ್ಕರಿಸುತ್ತಾ ಅವರ ಈ ಸತ್ ಕಾರ್ಯಕ್ಕೆ ಯಶಸ್ಸು ಕೋರುವೆ. ಅಲ್ಲಿರುವ ಒಬ್ಬೊಬ್ಬ ವಿಶಿಷ್ಟ ಚೇತನನೊಳಗೂ ನೂರಾರು ಜನರ ಉತ್ಸಾಹವಿದೆ, ಛಲವಿದೆ, ಗುರಿಯಿದೆ, ಸಾಧಿಸುವ ಹುಮ್ಮಸ್ಸಿದೆ. ಈ ಉತ್ಸಾಹ, ಹುಮ್ಮಸ್ಸು ಸದಾ ಅವರೊಂದಿಗೆ ಇರಲೆಂದು ಮನಃಪೂರ್ವಕವಾಗಿ ಪ್ರಾರ್ಥಿಸುವೆ, ಹಾರೈಸುವೆ.
ಇವರ ಬದುಕಿನ ಆಶಾಜ್ಯೋತಿಗಾಗಿ ಎಲ್ಲರಿಂದಲೂ ಬೆಂಬಲ ಹಾಗೂ ಸಹಾಯವನ್ನು ನಿರೀಕ್ಷಿಸುತ್ತಾ....
-ತೇಜಸ್ವಿನಿ ಹೆಗಡೆ.
[note : Please mail me if you want any other details regarding this..]