ಶುಕ್ರವಾರ, ಜನವರಿ 7, 2011

ಸಪ್ತಮದಲ್ಲಿ.....

http://www.guardian.co.uk

ಆ ಬಲಗೈ ಬೆಸೆದಿದ್ದ ಬೆಸುಗೆಯಿಂದಲೋ
ಭಾವ ಮಂಥನದ ನಡುಕದಿಂದಲೋ
ಬೆವರಿದ ನನ್ನ ಬಲಗೈಯಿಂದೆದ್ದು,
ಹನಿಯುತ್ತಿದ್ದ ಬೆವರಿನಹನಿಗಳನ್ನೇ
ಬಾಗಿ ನೋಡುತ್ತಿದ್ದ ನೊಸಲ ಹನಿಗಳು.....
ಹೊಸ ರೇಶಿಮೆ ಸೀರೆಯ ಸರಪರದ ಸದ್ದು,
ಜೊತೆಗೆ ಮಲ್ಲೆ ಹೂವುಗಳ ಮತ್ತು,
ಅನೂಹ್ಯ ರೋಮಾಂಚನಕೆಳೆಸಿದ ಆ
‘ಸುಲಗ್ನೇ ಸಾವಧಾನ....ಸುಮುಹೂರ್ತೇ ಸಾವಧಾನ..’

ಲಾಜಹೋಮದಲ್ಲಿ ತುಸು ಬಿಸಿಯಾದ
ಕೈ ಸವರಿ ಮೆಲುನಕ್ಕಿದ ಆ ಪರಿ,
ಅರಳು ಹೊಯ್ದು ಮರಳು ಮಾಡಿ
ಕಣ್ಸೆರೆ ಹಿಡಿದು ಕೆಂಪಾಗಿಸಿದಾ ನೋಟ,
ಕೊರಳೊಳಗಿನ ಕರಿ ಮಣಿಗಳ
ಪಿಸುದನಿಗಳ ಕಚಗುಳಿಗಳು,
ಸುಖಾಸುಮ್ಮನೆ ಹೊಡೆದುಕೊಳ್ಳುತ್ತಿದ್ದ
ಎದೆಬಡಿತದ ಸದ್ದು...

ಹನಿಗಣ್ಣಾದ ಅಪ್ಪ, ಕಣ್ತಪ್ಪಿಸುತಿದ್ದ ಅಮ್ಮ
ಅರಳಿದ ತಂಗಿಯರ ಮೊಗ,
ಅಪ್ಪಿದ ಸ್ನೇಹಿತೆಯ ಗುಟ್ಟು-
ತಂದ ಅರಿಯದ ಪುಳಕದ ಹೊತ್ತು,
ಹಳೆ ಬಂಧಗಳ ಜೊತೆ ಜೊತೆಯಲಿ
ಹೊಸ ಬಂಧಗಳಡೆ ನಾ-
ನಿತ್ತ ಆ ಏಳು ಹೆಜ್ಜೆಗಳು,
ಕಿರು ಹುಬ್ಬುಗಳ ನಡುವೆ
ಕುಳಿತ ಕೆಂಪು ಚಂದಿರ ನಗಲು,
ನಡು ಹಗಲಿಗೇ ಹುಣ್ಣಿಮೆಯಾಗಿತ್ತು.

ಈ ಮನೆಯಿಂದ ಆ ಮನೆಯೆಡೆ
ಪಯಣ ಸಾಗಿ ವರುಷಗಳಾರು ಕಳೆದರೂ
‘ನಿಮ್ಮ ಮನೆ’ ನಮ್ಮ ಮನೆಯಾಗಲು
ಅದೆಷ್ಟು ದಶಕಗಳು ಬೇಕೋ!
ಆ ದಿನ, ಆ ಸುಮೂಹರ್ತದಲ್ಲಿ
ಮೆಲು ನುಡಿದಿದ್ದ ಆ ದನಿ-
‘ಇದಿನ್ನು ನಿನ್ನ ಮನೆ’ ಮಾತೇ
ತುಸು ಚುಚ್ಚಿ, ತುಸು ಹೆಚ್ಚಿ
ಹಿಂತಿರುಗಿದಾಗ ಮಾತ್ರ, ನಾ-
ಬಂದಿದ್ದ ಮನೆಯೆಲ್ಲಾ ಮಸಕು ಮುಸುಕು

ತನ್ನ ಮನೆಯಂಗಳದಿ
ಬಿರಿದಿದ್ದ ಹೂವೊಂದನ್ನು
ನಿಮ್ಮ ಮನೆಯಂಗಳಕೆ ಶೋಭಿಸಲು
ದಾನವನ್ನಿತ್ತ ಆ ದಾನಿಯ ನೆನೆ-
ನೆನೆದು, ಮನಸಾರೆ ಒಪ್ಪಿದೆ
ನಮ್ಮಿಬ್ಬರ ಹೊಸ ಗೂಡನು...
ಈಗ ತಾನೇ ಬಿಟ್ಟಿರುವ ಹೊಸ
ಮೊಗ್ಗೊಂದನು, ಅರಳಿಸಿ
ನೀಡಬೇಕಾಗಿದೆ ನಾವು ದಾನ
ಅರಿಯದ ಮನೆಯೊಂದನದು ಶೋಭಿಸಲು

-ತೇಜಸ್ವಿನಿ ಹೆಗಡೆ

17 ಕಾಮೆಂಟ್‌ಗಳು:

ಚುಕ್ಕಿಚಿತ್ತಾರ ಹೇಳಿದರು...

ಸು೦ದರ ಭಾವ..

shivu.k ಹೇಳಿದರು...

ಮದುವೆ ಮನೆ ಮತ್ತು ಹೆಣ್ಣೊಪ್ಪಿಸುವ ಕಾರ್ಯವನ್ನು ಭಾವತುಂಬಿದ ಪದಗಳಲ್ಲಿ ಬರೆದಿದ್ದೀರಿ...ಚೆನ್ನಾಗಿದೆ.

ಸುಶ್ರುತ ದೊಡ್ಡೇರಿ ಹೇಳಿದರು...

ಚಂಂಂಂದ ಬರದ್ದೆ ಅಕ್ಕಾ.. ಇಇಇಇಷ್ಟ ಆತು. :-)

ಸುಮ ಹೇಳಿದರು...

nice :)

AntharangadaMaathugalu ಹೇಳಿದರು...

ಹೆಣ್ಣಿನ ಜೀವನದ ಒಂದು ನೋಟ... ಚೆನ್ನಾಗಿದೆ. ಓದಿ "ಎಮ್ಮಮನೆಯಂಗಳದಿ..." ಹಾಡು ನೆನಪಾಯ್ತು...

ಶ್ಯಾಮಲ

ಸುಧೇಶ್ ಶೆಟ್ಟಿ ಹೇಳಿದರು...

kavanavannu saviyuththa oduvudu yennuvudu yenu antha ivattu gottaayithu... ondondu saalugaLu sphurisida bhaavagaLu thumba ishta aayithu... Thumba thumba kavanagaLannu bareyuttiddeera itteechege mattu avellavoo thumba thumba chennagi baruttive :)

Subrahmanya ಹೇಳಿದರು...

ಅಬ್ಬಾ ! ಸೂಪರ್...

sunaath ಹೇಳಿದರು...

ಹೊಸ ಬಾಳಿಗೆ ಕಾಲಿಡುವ ಹೆಣ್ಣುಮಗಳ ಸಂಕೀರ್ಣ ಭಾವಕೋಶ ಹಾಗು ಅವಳೇ ತಾಯಿಯಾಗಿ ಹೆಣ್ಣೊಪ್ಪಿಸುವ ಸಮಯದ ಭಾವನೆಯ ವರ್ಣನೆಯನ್ನು ಬಹು ಚೆನ್ನಾಗಿ ಅಭಿವ್ಯಕ್ತ ಮಾಡಿದ್ದೀರಿ.

ಪೂರ್ಣಿಮಾ ಭಟ್ಟ, ಸಣ್ಣಕೇರಿ ಹೇಳಿದರು...

Chandada kavithe :)

ಕಿರಣ್ ಜಯಂತ್ ಹೇಳಿದರು...

Adbuthavagi varNisiddeeri Tejaswini avare!

ವಿ.ಆರ್.ಭಟ್ ಹೇಳಿದರು...

Nice !

PARAANJAPE K.N. ಹೇಳಿದರು...

ಹೌದು, ಹೆಣ್ಣು ತನ್ನ ಪ್ರೀತಿಯ ಅಪ್ಪ-ಅಮ್ಮ ಬ೦ಧುಬಗ ಬಿಟ್ಟು ಅಪರಿಚಿತನಾದ ಗ೦ಡನ ಮನೆಗೆ ಬ೦ದು ನೆಲೆ ನಿಲ್ಲುವುದು ಆಕೆಯ ಬದುಕಿನ ಪಲ್ಲಟದ ಪ್ರಮುಖ ಭಾಗ. ಅದನ್ನು ಬಹಳ ಚೆನ್ನಾಗಿ ಕವನ ಮುಖೇನ ಚಿತ್ರಿಸಿದ್ದೀರಿ

ಪ್ರವೀಣ್ ಭಟ್ ಹೇಳಿದರು...

Wov... enta prouda kavana .. estu sundaravagi baradde.. very nice ...

ವೆಂಕಟ್ರಮಣ ಭಟ್ ಹೇಳಿದರು...

ತುಂಬ ಚಲೊ ಇದ್ದು,ಕುಶಿ,ದುಃಖ,ತಲ್ಲಣಗಳ ಪೂರ್ಣಭಾವ.ಪದಗಳಂತು ಸೊಗಸಿನವು

anu ಹೇಳಿದರು...

ಆ ಖುಷಿಯ ಘಳಿಗೆಯೊಳಗೂ ಒ೦ದು ಮೆಲ್ಲನೆ ಮೌನದಲ್ಲೇ ಮಿಡಿದ ಒ೦ದು ತಪ್ಪಿದ ಎದೆಬಡಿತ...

ತೇಜಸ್ವಿನಿ ಹೆಗಡೆ ಹೇಳಿದರು...

"ಸಪ್ತಮದಲ್ಲಿ..." - ಈ ಕವನ ಹೆಣ್ಣಿನ ಬದುಕಿನ ಪ್ರಮುಖ ಘಟ್ಟವನ್ನು ಪ್ರತಿಬಿಂಬಿಸಲೆತ್ನಿಸಿದ ನನ್ನ ಪುಟ್ಟ ಪ್ರಯತ್ನ. ಜನವರಿ ೭ ನನ್ನ ಬದುಕಿನ ಪ್ರಮುಖ ಘಟ್ಟಗಳಲ್ಲಿ ಒಂದಾದ ಪ್ರಮುಖ ದಿನ. ಹಾಗಾಗಿಯೇ ಇದು ಆ ದಿನಕ್ಕೆ, ಆ ಕ್ಷಣಕ್ಕೆ, ಆ ಸುಮುಹೂರ್ತಕ್ಕೆ ಅರ್ಪಿಸಿದ ಕವನ.

ಕವನವನು ಮೆಚ್ಚಿ, ಸ್ಪಂದಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹಗಳಿಗೆ ನಾನು ಸದಾ ಆಭಾರಿ.

-ತೇಜಸ್ವಿನಿ.

ಸೀತಾರಾಮ. ಕೆ. / SITARAM.K ಹೇಳಿದರು...

many many happy returns of the day- belated. maduve hantadalina madumagala dwandva manosthitiyanna tumbaa maarmikavaagi chitrisiddiraa...