ಬುಧವಾರ, ಜನವರಿ 7, 2015

ಮಿಥುನ

Tejaswini & Ramakrishna

ಆ ಬಲಗೈ ಬೆಸೆದಿದ್ದ ಬೆಸುಗೆಯಿಂದಲೋ
ಭಾವ ಮಂಥನದ ನಡುಕದಿಂದಲೋ
ಬೆವರಿದ ನನ್ನ ಬಲಗೈಯಿಂದೆದ್ದು,
ಹನಿಯುತ್ತಿದ್ದ ಬೆವರಿನಹನಿಗಳನ್ನೇ
ಬಾಗಿ ನೋಡುತ್ತಿದ್ದ ನೊಸಲ ಹನಿಗಳು.....
ಹೊಸ ರೇಶಿಮೆ ಸೀರೆಯ ಸರಪರದ ಸದ್ದು,
ಜೊತೆಗೆ ಮಲ್ಲೆ ಹೂವುಗಳ ಮತ್ತು,
ಅನೂಹ್ಯ ರೋಮಾಂಚನಕೆಳೆಸಿದ ಆ
‘ಸುಲಗ್ನೇ ಸಾವಧಾನ....ಸುಮುಹೂರ್ತೇ ಸಾವಧಾನ..’

ಲಾಜಹೋಮದಲ್ಲಿ ತುಸು ಬಿಸಿಯಾದ
ಕೈ ಸವರಿ ಮೆಲುನಕ್ಕಿದ ಆ ಪರಿ,
ಅರಳು ಹೊಯ್ದು ಮರಳು ಮಾಡಿ
ಕಣ್ಸೆರೆ ಹಿಡಿದು ಕೆಂಪಾಗಿಸಿದಾ ನೋಟ,
ಕೊರಳೊಳಗಿನ ಕರಿ ಮಣಿಗಳ
ಪಿಸುದನಿಗಳ ಕಚಗುಳಿಗಳು,
ಸುಖಾಸುಮ್ಮನೆ ಹೊಡೆದುಕೊಳ್ಳುತ್ತಿದ್ದ
ಎದೆಬಡಿತದ ಸದ್ದು...

ಎಲ್ಲವೂ ಹಸಿಯಾಗಿ ಹಸಿರಾಗಿವೆ....
ಹರುಷಕೆ ಹತ್ತು ವರುಷಗಳಾದರೂ!

ದಶಕಗಳನು ಹತ್ತೇ ನಿಮಿಷಗಳಲಿ,
ಕೂಡಿ ಕಳೆದಂತೆ.... ಕಳೆದು ಕೂಡಿದಂತೇ...
ಸಾಗಿಹುದು, ಸಾಗುತಿದೆ ಬಾಳ ಪಯಣ
ಸವಿಗನಸಿನಂತೇ....

-ತೇಜಸ್ವಿನಿ ರಾಮಕೃಷ್ಣ ಹೆಗಡೆ.



ನಾನೇ ಕಲಿತು ಮೊದಲ ಬಾರಿ ತಯಾರಿಸಿದ 2 ನಿಮಿಷಗಳಪುಟ್ಟ ಮೂವಿಯ ಲಿಂಕ್ ಇಲ್ಲಿದೆ..... :)
https://www.youtube.com/watch?v=HaoFV6hdEpc&feature=youtu.be

5 ಕಾಮೆಂಟ್‌ಗಳು:

Unknown ಹೇಳಿದರು...

ಈ ಬಂಧ ಏಳೇಳು ಜನುಮದ ಅನುಬಂಧ.ನೂರ್ಕಾಲ ಅನ್ಯೋನ್ಯವಾಗಿ ಬದುಕಿನ ಸವಿ ಸವಿಯಿರಿ.

ಮನಸು ಹೇಳಿದರು...

ಹಸಿರಾಗಿರಲಿ ನಿಮ್ಮೀರ್ವರ ಬಂಧನ
ಮನೆ ಮನ ಬೆಳಗುತಿರಲಿ
ಪ್ರೀತಿ ವಿಶ್ವಾಸದ ನಂದನ

ಶ್ರೀವತ್ಸ ಕಂಚೀಮನೆ. ಹೇಳಿದರು...

ನೂರ್ಮಡಿಸಿದ ಒಲವ ಒಳ ಸೆಳೆತ ನಿಮ್ಮಗಳ ನಾಳೆಗಳನಾಳಲಿ...
ನಲಿವು ಕಣ್ಣ ನಗುವಾಗಿ ಹಾಡುತಲಿರಲಿ...
ವಿವಾಹ ದಶಮಾನೋತ್ಸವದ ಹಾರ್ದಿಕ ಶುಭಾಶಯಗಳು...:-)

sunaath ಹೇಳಿದರು...

ದಶಕಗಳ ಬಂಧನ ಶತಕದವರೆಗಿರಲಿ. ಜೋಡಿಹಕ್ಕಿಗಳಿಗೆ ಹೃತ್ಪೂರ್ವಕ ಶುಭಾಶಯಗಳು.

ಸಿಂಧು sindhu ಹೇಳಿದರು...

ತುಂಬ ಚೆನಾಗಿದ್ದು ಕವಿತೆ.
ಖುಶೀ.. ಚೆನಾಗಿರಿ ಹೀಗೇ ಯಾವಾಗ್ಲೂ.
ಇಬ್ರಿಗೂ ಶುಭಾಶಯಗಳು.