ಧುಮ್ಮಿಕ್ಕಿ ಹರಿಯುವ ಜಲಧಾರೆಯೊಂದು
ಥಟ್ಟನೆ ನಿಂತು ತಣ್ಣಗೆ ಹರಿವ ಹೊಳೆಯಾದಂತೆ
ನಿಶೆಯ ಗರ್ಭವನೇ ಸೀಳಲು ಹೊರಟ ಕೋಲ್ಮಿಂಚು
ತನ್ನ ಬೆಳಕಿಗೆ ತಾನೇ ಉರಿದು ಮತ್ತೆ ಕಪ್ಪಾಗುವಂತೆ.
ಇಂದು ಬದುಕಿರುವಂತೆ ಕಾಣುವಾತ,
ನಾಳೆ ಭೂತವಾಗಿ ಕಾಡುವಂತೆ!
ಕೆಲವು ಭಾವಗಳು ಹೀಗೂ-
ಕಲಾವಿದನೋರ್ವ ತನ್ನ ಸುಂದರ ಚಿತ್ರಕೆ
ಅರೆಬರೆ ಬಣ್ಣವ ಬಳಿದು ಬಿಟ್ಟಂತೆ
ತಾಯ ಗರ್ಭದೊಳು ನೀರಾಡುವ ಶಿಶುವಿಗೆ
ಇಳೆ ಗರ್ಭದಿಂದುಕ್ಕಿದ ನೀರು ಚಳಿಯಾಗುವಂತೆ.
ಚಿಕ್ಕ ಸವತೆ ಮಿಡಿಯಂತಹ ಪುಗ್ಗವೊಂದು ಉಬ್ಬಿ,
ಸೂಜಿಮೊನೆಯೊಂದರ ಮುತ್ತಿಗೆ ಠುಸ್ ಎನ್ನುವಂತೆ.
ಕೆಲವೊಂದು ಭಾವಗಳು ಹೀಗೆಲ್ಲಾ-
ಉಷಾಕಾಲದೊಳು ತಲೆಯ ಹೊಕ್ಕಿ,
ಮಟ ಮಧ್ಯಾಹ್ನದೊಳು ಕಕ್ಕಾಬಿಕ್ಕಿಯಾಗಿ
ಸಧ್ಯಾರಾಗದಲ್ಲೇ ಕಣ್ಮುಚ್ಚಿ ಅಂತ್ಯವಾಗುವ,
ಈ ಹುಚ್ಚು ಯೋಚನೆಗಳೆಲ್ಲಾ ಹೀಗೇ....
-ತೇಜಸ್ವಿನಿ ಹೆಗಡೆ.
1 ಕಾಮೆಂಟ್:
ಸುಮಧುರ ಸಂಚಾರೀ ಭಾವಗಳ ಗೀತವನ್ನು ನೆಯ್ದ ನಿಮಗೆ ಹೇಳಬಹುದಾದದ್ದು: ವಾಹ್!ಖೂಬ್!
ಕಾಮೆಂಟ್ ಪೋಸ್ಟ್ ಮಾಡಿ