"ಸುಖವು ದುಃಖದ ಕಿರೀಟವನ್ನು ಧರಿಸಿ ಮಾನವನೆದುರು ಬಂದು ನಿಲ್ಲುವುದು. ಯಾರಿಗೆ ಸುಖ ಬೇಕೋ ಅವರು ದುಃಖವನ್ನು ಸ್ವೀಕರಿಸಬೇಕು" - ಇದು ವಿವೇಕಾನಂದರ ಅಮೂಲ್ಯ ನುಡಿಮುತ್ತು. ನನಗೂ ಬಹು ಮೆಚ್ಚುಗೆಯಾದದ್ದು. ಶ್ರುತಿ ಬಿ.ಎಸ್. ಬರೆದಿರುವ "ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ..." ಅನ್ನೋ ಆತ್ಮಚರಿತ್ರೆಯಲ್ಲಿಯೂ ಇದೇ ನುಡಿಯನ್ನು ಉದ್ಧರಿಸಲಾಗಿದೆ. ಅದೇ ರೀತಿ ಶಾನ್ ಸ್ವಾರ್ನರ್ನ ಬಡಿದೆಬ್ಬಿಸುವ ಅದ್ಭುತ ನುಡಿಗಳ ಮೋಡಿಗೆ ಒಳಗಾಗದೇ ಇರುವುದು ಅಸಾಧ್ಯ! ಅದರಲ್ಲೂ "ಭರವಸೆಯೇ ಬದುಕು... ಬದುಕು ನಿಂತಿರುವುದೇ ಆಶಾವಾದಿತನದ ಮೇಲೆ..." ಅನ್ನೋ ಅವನ ಅದಮ್ಯ ಉತ್ಸಾಹ, "ಎಲ್ಲವೂ ಸಾಧ್ಯ, ಮನಸ್ಸು ಮಾಡಬೇಕಷ್ಟೇ.." ಅನ್ನೋ ಅನುಭವದ ನುಡಿ, ಎಲ್ಲವೂ ಶ್ರುತಿಯ ಸಾಹಸಗಾಥೆಯಲ್ಲಿ ಹಾಸುಹೊಕ್ಕಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.
೨೨ರ ಹರೆಯದ ಈ ಹುಡುಗಿಯನ್ನು ನಾನೀವರೆಗೂ ನೋಡಿಲ್ಲ. ಪರಿಚಯವಾಗಿದ್ದೂ ಅವಳ ಬ್ಲಾಗ್ ಮೂಲಕವೇ! ತದನಂತರ ಮುಖಗೋಡೆಯ ಸಹಾಯದಿಂದ ಪರಿಚಯ ಸ್ನೇಹಕ್ಕೆ ತಿರುಗಿ, ಆಪ್ತತೆ ಬೆಳೆಯಿತು. ಪುಸ್ತಕದಲ್ಲೊಂದು ಕಡೆ ಶ್ರುತಿ ಹೇಳಿಕೊಂಡಿದ್ದಾರೆ. ಆಪ್ತತೆಗೆ ಮಾತುಗಳೇ ಬೇಕೆಂದಿಲ್ಲ. ಸಂವೇದನಾ ಭರಿತ ಕಣ್ಣ ನೋಟ, ಮುಗುಳ್ನಗೆ, ಸಾಂತ್ವನದ ಒಂದೇ ಒಂದು ಮಾತು ಎಲ್ಲವೂ ಆಜನ್ಮ ಮೈತ್ರಿಯನ್ನೇ ಬೆಸೆದು ಬಿಡುತ್ತವೆ ಎಂಬರ್ಥದ ಅನುಭವದ ಮಾತುಗಳನ್ನು ತುಂಬಾ ಸುಂದರವಾಗಿ ಹಂಚಿಕೊಂಡಿದ್ದಾಳೆ. ಅದು ನೂರಕ್ಕೆ ನೂರು ಸತ್ಯ. ನಮ್ಮಿಬ್ಬರ ನಡುವೆ ಮಾತುಗಳು, ಚಾಟಿಂಗ್ಗಳು ಆಗಿದ್ದೇ ಅತ್ಯಲ್ಪ. ಎರಡೇ ಸಲ ಫೋನಾಯಿಸಿದ್ದು. ಹೀಗಿದ್ದರೂ ಅದೇನೋ ಎಂತೂ ಅವಳ ಪುಟ್ಟ ಶರೀರದ ತುಂಬೆಲ್ಲಾ ಹೊರ ಹೊಮ್ಮುತ್ತಿದ್ದ ಬೆಟ್ಟದಂತಹ ಧನಾತ್ಮಕ ಪ್ರಭಾವಳಿಗಳು ನೂರಾರು ಮೈಲಿ ದೂರದಲ್ಲಿದ್ದರೂ ನನ್ನನ್ನು ಸ್ಪರ್ಶಿಸಿ ನಮ್ಮಿಬ್ಬರನ್ನೂ ಬಂಧಿಸಿದ್ದು ಮಾತ್ರ ನೂರಕ್ಕೆ ನೂರು ಸತ್ಯ. ಇದಕ್ಕೆ ಬಹುಶಃ ನನ್ನ ಹೋರಾಟದ ಬದುಕಿನ ಕೊಂಡಿಯೊಂದು ಅವಳೊಂದಿಗೆ ಅವ್ಯಕ್ತವಾಗಿ ಬೆಸೆದುಕೊಂಡಿರುವುದೂ ಆಗಿದ್ದಿರಬಹುದು! ಆಕೆ ಚಿಕಿತ್ಸೆ ಪಡೆದ ಮಣಿಪಾಲ ಆಸ್ಪತ್ರೆಗೂ ನನಗೂ ಹತ್ತಿರದ ನಂಟು, ಒಂದು ತರಹ ಅವಿನಾಭಾವ ಸಂಬಂಧ. ಇನ್ನು ಆಕೆ ಮೆಚ್ಚುವ, ಆರಾಧಿಸುವ ಅವಳ ವೈದ್ಯರಾದ ಡಾ. ಭಾಸ್ಕರಾನಂದರು ನನಗೂ ಆತ್ಮೀಯರು! ವೈದ್ಯರ ಮಾತುಗಳೊಳಗಿನ ಮಾಂತ್ರಿಕತೆಯಲ್ಲೇ ನಿಜವಾದ ಚಿಕಿತ್ಸೆ ಇರುತ್ತದೆ ಎನ್ನುವುದಕ್ಕೆ ಇಂತಹ ಅನೇಕ ವೈದ್ಯರುಗಳೇ ಸಾಕ್ಷಿ!
ಬದುಕನ್ನು ಸವಾಲಾಗಿ ಸ್ವೀಕರಿ, ಎಂತಹ ದುಃಸ್ಥರ ಸ್ಥಿತಿ ಎದುರಾದರೂ, ಪುಟಿದೆದ್ದು ಎದುರಿಸಿ ಉತ್ಕಟವಾಗಿ ಬದುಕ ಪ್ರೀತಿಸುವವರು ಯಾರೇ ಆಗಿದ್ದಿರಲಿ, ಎಲ್ಲೇ ಇದ್ದಿರಲಿ ಅವರೆಲ್ಲಾ ನನ್ನ ಅದೆಷ್ಟೋ ಜನ್ಮಗಳ ಆಪ್ತರೇನೋ ಎಂದೆನಿಸಿಬಿಡುತ್ತಾರೆ ನನಗೆ. ಮಾತು, ಕಥೆ, ಭೇಟಿ, ಒಡನಾಟ - ಇವುಗಳಿಲ್ಲದೆಯೋ ಅವರೆಲ್ಲಾ ನನ್ನ ಬಂಧುಗಳೇನೋ ಎಂದೆನಿಸಿಬಿಡುತ್ತಾರೆ! ನಿಜ.. ನೋವಿಗೆ ಸಶಕ್ತ ಬಂಧ ಕಲ್ಪಿಸುವ ಶಕ್ತಿಯಿದೆ.. ಅದು ಸಂತಸಕ್ಕೆ ಅತಿ ಕಡಿಮೆಯೇಂದೇ ಹೆಳಬಹುದು!
೧೮ರ ಹರೆಯದಲ್ಲೇ ಮೂಳೆ ಕ್ಯಾನ್ಸರ್ಗೆ ಒಳಗಾಗಿ ೬ ಕೀಮೋಥೆರಪಿಯ ಹಿಂಸೆಯನ್ನು ಅನುಭವಿಸಿ, ನಡು ನಡುವೆ ಹತ್ತು ಹಲವಾರು ದೈಹಿಕ, ಮಾನಸಿಕ ಯಾತನೆಗಳನ್ನು ತಡೆದುಕೊಂಡೂ, ಸಾವೇ ನಿನ್ನ ಪಾಲಿಗೆ ಸದ್ಯ ಸಾವೇ ಗತಿ ಎಂದು ಬದುಕ ಕೈ ಹಿಡಿದು ಮುನ್ನೆಡೆದ ಈ ದಿಟ್ಟ ಹುಡುಗಿ ನನ್ನ ದೈನಂದಿನ ಹೋರಾಟಕ್ಕೆ ಸ್ಪೂರ್ತಿಯಾಗಿದ್ದಾಳೆ. ಇವಳ ಬರಹದೊಳಗಿನ ಅಪ್ಪಟ ಜೀವನ ಪ್ರೀತಿ, ಪ್ರಾಮಾಣಿಕತೆ, ಜಗತ್ತನ್ನು ಅತಿ ಸಣ್ಣ ವಯಸ್ಸಿನಲ್ಲೇ ಸೂಕ್ಷ್ಮವಾಗಿ ಗ್ರಹಿಸಿ, ಬಂಧಿಸಿಕೊಡುವ ರೀತಿ, ನಿರೂಪಣಾ ಶೈಲಿ ಎಲ್ಲವೂ ಮನಸೂರೆಗೊಂಡವು..... ಮಾರುಹೋದೆ!
ನೆನಪಿಡಿ, ಈಕೆ ನಮ್ಮಂತಹ ದೊಡ್ಡ ಶಹರದಲ್ಲಿ ಹುಟ್ಟಿ, ಬೆಳೆದವಳಲ್ಲ!! ಶಿವಮೊಗ್ಗ ಜಿಲ್ಲೆಯಲ್ಲಿರುವ ಹೊಸನಗರ ತಾಲ್ಲೂಕಿನ, ಪುಟ್ಟ ಬಾಣಿ ಗ್ರಾಮ ವಾಸಿ ಈಕೆ! ಹಾಗಿದ್ದೂ ಇಂತಹ ಒಂದು ಭಯಂಕರ ವ್ಯಾಧಿ ೧೮ರ ಕನಸುಕಂಗಳಿಗೆ ಬಡಿದಾಗ ಅದೆಷ್ಟು ಆಕೆಯ ಜೀವ, ಹೆತ್ತವರು ಒದ್ದಾಡಿರಬಹುದೆಂಬುದು ಊಹೆಗೂ ನಿಲುಕದ್ದು. ಹಳ್ಳಿಯ ಜನರ ಮುಗ್ಧತೆಯಲ್ಲೇ ಒಂದು ತರಹದ ಮೊಡ್ಡುತನವೂ ಬೆರೆತಿರುವುದೂ ಹೆಚ್ಚು ಕಂಡು ಬರುತ್ತದೆ. ನಮ್ಮೂರ ಕಡೆ ಅಂದರೆ ಆ ಕಡೆ ಇಂತಹ ಖಾಯಿಲೆ ಬಂದರೆ ಬದುಕುವುದೇ ವ್ಯರ್ಥ, ಸಾವು ಅನಿವಾರ್ಯ ಅನ್ನೋ ಮನೋಭಾವ ತುಸು ಹೆಚ್ಚೇ ಕಂಡು ಬರುತ್ತದೆ. (ಪಟ್ಟಣ ವಾಸಿಗಳಲ್ಲಿ ಇಲ್ಲ ಎಂದೂ ನಾನು ಹೇಳುತ್ತಿಲ್ಲ...). ಅವರ ಇಲ್ಲ ಸಲ್ಲದ ಅವ್ಯಾಹತ ಪ್ರಶ್ನೆಗಳು, ರೋಧನಗಳು, ಕಪೋ ಕಲ್ಪಿತ ಕಥೆಗಳು, ಗಾಳಿ ಸುದ್ದಿಗಳು, ಅನಗತ್ಯದ ಅನುಕಂಪಗಳು ಎಲ್ಲವನ್ನೂ ಆಕೆ, ಅವಳ ಮನೆಯವರು ಸಹಿಸಿ, ಧಿಕ್ಕರಿಸಿ ಮುನ್ನೆಡೆಯಬೇಕಾಗಿತ್ತು. ದೂರದೂರಿಂದ ೫ ತಾಸುಗಳ ಪ್ರಯಾಣ ಮಾಡಿ ಪ್ರತಿ ಸಲ ಕೀಮೋಥೆರಪಿಗಾಗಿ ಮಣಿಪಾಲಕ್ಕೆ ಬಂದು ಚಿಕಿತ್ಸೆ ಪಡೆದು, ಹಿಂತಿರುಗಿ, ಯಾತನೆ ಅನುಭವಿಸಿ, ಪ್ರತಿ ದಿನ ಆತಂಕದ ಜೊತೆ ಜೀವಿಸುತ್ತಾ, ಹೆಚ್ಚು ಕಡಿಮೆ ಆದರೆ ಮತ್ತೆ ತಾಸುಗಟ್ಟಲೆ ಪ್ರಯಾಣಿಸಿ ಹೈರಾಣಾಗುತ್ತಾ, ಆತಂಕಗಳನ್ನು ಎದುರಿಸುತ್ತಾ, ಅತಿಯಾದ ವೆಚ್ಚಗಳನ್ನು ಹೇಗೋ ಭರಿಸುತ್ತಾ, ಎಲ್ಲವನ್ನೂ ಧೈರ್ಯದಿಂದ, ಆತ್ಮಬಲದಿಂದ ದಾಟಿ ಇಂದು ಈ ಕ್ಯಾನ್ಸರ್ಗೆ ವಿದಾಯ ಹೇಳಿ ನಳನಳಿಸುತ್ತಿರುವ ಶ್ರುತಿಯ ಬದುಕಿನ ಈ ಹೋರಾಟದ ಗಾಥೆಯನ್ನು ಓದಿದರೆ ನಮ್ಮ ಬದುಕಿನ ದಿಕ್ಕನ್ನೂ ಬದಲಿಸಿಕೊಳ್ಳಬಹುದು.
‘ಮನುಷ್ಯನ ಮನಸ್ಸಿಗೆ ಬಹಳ ಶಕ್ತಿಯಿದೆ. ಮನೋಬಲವೊಂದಿದ್ದರೆ ಏನನ್ನೂ ಸಾಧಿಸಬಹುದು. ಯಾವ ಸಮಸ್ಯೆಯನ್ನಾದರೂ ಎದುರಿಸಬಹುದು. ಒಂದು ವೇಳೆ ಮನಸು ದುರ್ಬಲವೆನಿಸಿದರೆ ಹೃದಯದ ಮೇಳೆ ಕೈ ಇಟ್ಟು- "ನೀನು ದುರ್ಬಲವಾಗಿಲ್ಲ. ನೀನಿದನ್ನು ಮಾಡಬಲ್ಲೆ" ಎಂದು ಹೇಳಿ , ಅದು ನಿಮ್ಮ ಮಾತನ್ನು ಕೇಳಿಯೇ ಕೇಳುತ್ತದೆ’. ಎನ್ನುತ್ತಾಳೆ ಶ್ರುತಿ. ಇದು ಮಾತ್ರ ಅಪ್ಪಟ ಚಿನ್ನದಂತಹ ಮಾತುಗಳು. ಇದು ನನ್ನ ಬದುಕಿನ ಪ್ರೇರಣೆಯ ಸಾಲೂ ಹೌದು! ಬಾಲ್ಯದಲ್ಲಿ ಎಲ್ಲರೂ ಹೊರ ಬಿದ್ದು ಆಡುವಾಗ, ಒಂಟಿಯಾಗಿ ಕುಳಿತು ಒಳಗೊಳಗೇ ದುಃಖಿಸುತ್ತಿದ್ದ ನನಗೆ ಅಪ್ಪ-ಅಮ್ಮ ಹೇಳಿದ್ದು -
ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ,
ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ಯೋತ್ತಿಷ್ಠ ಪರಂತಪ ”(ಸಾಂಖ್ಯಯೋಗ) (..ಹೇಡಿಯಾಗಬೇಡ, ಇದು ನಿನಗೆ ಯೋಗ್ಯವಲ್ಲ, ಅತಿ ಕ್ಷುಲ್ಲಕವಾದ ಹೃದಯ ದೌರ್ಬಲ್ಯವನ್ನು ಬಿಟ್ಟು, ಮೇಲೇಳು !) ಅದೇ ರೀತಿ "ಸುಖ ದುಃಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ (ಸುಖ-ದುಃಖ, ಲಾಭ-ನಷ್ಟ, ಜಯಾಪಜಯಗಳನ್ನು ಸಮವಾಗಿ ಸ್ವೀಕರಿಸಿ ಯುದ್ಧಕ್ಕೆ ತೊಡಗು...) ಎಂದು ಸದಾ ಹೆಳುತ್ತಲೇ ನನ್ನ ಮೇಲೆಬ್ಬಿಸಿದ್ದಾರೆ. ಬದುಕು ಒಂದು ಯುದ್ಧರಂಗವೇ ಸಮಚಿತ್ತತೆ ಇದ್ದಲ್ಲಿ ಮಾತ್ರ ಅಂತಿಮ ವಿಜಯ ನಮ್ಮದೇ... ನಿನಗೇ ನೀನೇ ಮಿತ್ರ, ಶತ್ರು, ಗೆಲುವು, ಸೋಲು ಎನ್ನುವುದನ್ನು ಮನದಟ್ಟು ಮಾಡಿಕೊಂಡರೆ ಯಾವುದೂ ಅಸಾಧ್ಯವಲ್ಲ!
ಹೋರಾಟದ ಬದುಕು ಬಹು ಬೇಗ ಹಲವನ್ನು ಕಲಿಸಿಬಿಡುತ್ತದೆ. ಕೆಲವರಿಗೆ ಬೇಗ ಕಣ್ತೆರೆದರೆ, ಇನ್ನು ಕೆಲವರಿಗೆ ತುಸು ತಡವಾಗಬಹುದೇನೋ! ಶ್ರುತಿ ಹಾಗೂ ನನ್ನಂತಹವರ ಪಾಲಿಗೆ ಬದುಕು ತುಂಬಾ ಕರುಣಾಮಯಿಯಾಗಿದೆ. ಬಹು ಬೇಗ ಅದರ ಪ್ರಾಮುಖ್ಯತೆ, ಅದರ ಕಹಿಯೊಳಡಗಿರುವ ಸವಿ, ಅದೊಡ್ಡುವ ಸವಾಲೊಳಗಿನ ರುಚಿ ಎಲ್ಲವನ್ನೂ ಕಲಿಸಿಕೊಟ್ಟಿದೆ, ಪ್ರತಿ ದಿನ ಕಲಿಸಿಕೊಡುತ್ತಲೇ ಇದೆ.
ಚಿಕಿತ್ಸೆಯಾನಂತರ ಶ್ರುತಿ ಆ ಪುಟ್ಟ ಗ್ರಾಮದಲ್ಲೇ ಕುಳಿತು, ಅಂತರ್ಜಾಲದ ಮೂಲಕ ದೇಶ, ವಿದೇಶಗಳಲ್ಲಿರುವ ತನ್ನತಂಹ ಪೀಡಿತರನ್ನು, ಗುಣಮುಖಿಗಳಾಗಿ ಜೀವನ್ಮುಖಿಯರಾದ ಹಲವು ಕ್ಯಾನ್ಸರ್ ಪೀಡಿತರನ್ನು ಸಂಪರ್ಕಿಸಿದ್ದಲ್ಲದೇ ಅವರಿಂದ ಹಲವು ಸ್ಪೂರ್ತಿಯನ್ನು ಪಡೆದು, ತನ್ನಂತೇ ನೊಂದವರಿಗೆ ಮಾರ್ಗದರ್ಶನ ನೀಡಿ, ತನ್ನ ಅನುಭವಗಳನ್ನು ಹಂಚಿಕೊಂಡವಳು. ಇವಳ ಪರಿಮಿತಿಯಲ್ಲಿ ಇಂತಹ ಸಾಧನೆ ಅಪರಿಮಿತ! ಅತ್ಯಲ್ಪದರಲ್ಲೇ ಮಹತ್ತನ್ನು ಸಾಧಿಸಿದ ಇವಳ ಬದುಕೊಂದು ಮಾದರಿ ಹಾಗೂ ಅನುಕರಣೀಯ ಎಂದು ಹೇಳುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಖಂಡಿತವೂ ಇಲ್ಲ. ಒಮ್ಮೆ ಪುಸ್ತಕವನ್ನೋದಿ... ನಿಮಗೂ ನನ್ನ ಮಾತುಗಳೆಷ್ಟು ಸತ್ಯ ಎಂದೆನಿಸುವುದರಲ್ಲಿ ನನಗೆ ಇನಿತೂ ಸಂಶಯವಿಲ್ಲ :)
ಪುಸ್ತಕದ ಹೆಸರು : ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ....
ಲೇಖಕಿ : ಶ್ರುತಿ ಬಿ.ಎಸ್.
ಪ್ರಕಾಶಕರು : ಗೋಮಿನಿ ಪ್ರಕಾಶನ
ಪುಟಗಳು : ೧೨೦
ಬೆಲೆ : ೮೦ ರೂಪಾಯಿಗಳು
( sapnaonline ನಲ್ಲೂ ಲಭ್ಯ)
-ತೇಜಸ್ವಿನಿ.
8 ಕಾಮೆಂಟ್ಗಳು:
ಉತ್ತಮ ವಿಮರ್ಶೆ.. ಪುಸ್ತಕ ಕೊಂಡು ಓದುವೆ ..
ಪುಸ್ತಕ ಓದಬೇಕು. ನಿಮ್ಮ ಮಾತುಗಳು ಇಷ್ಟವಾದವು
ಉತ್ತಮ ವಿಮರ್ಶಾ ಬರಹ.ಸಧ್ಯದಲ್ಲೇ ಪುಸ್ತಕವನ್ನು ಕೊಂಡು ಓದುವೆ.
ಉತ್ತಮ ಪುಸ್ತಕವೊಂದರ ಪರಿಚಯಕ್ಕಾಗಿ ಧನ್ಯವಾದಗಳು.
ಚೆನ್ನಾಗಿ ಮೂಡಿದೆ ನಿಮ್ಮ ವಿಮರ್ಶೆ.
ವಿಮರ್ಶೆ ಚೆನ್ನಾಗಿದೆ. ಓದುವ ಹಂಬಲ ಹೆಚ್ಚಾಗುತ್ತಿದೆ. ಕೊಂಡು ಓದುವೆ.
ವಿಮರ್ಶೆ ಮನ ಮುಟ್ಟುವಂತಿದೆ,,,, ಖಂಡಿತ ಪುಸ್ತಕ ಓದುತ್ತೇವೆ,
ವಿಮರ್ಶೆ ಮನ ಮುಟ್ಟುವಂತಿದೆ,,,, ಖಂಡಿತ ಪುಸ್ತಕ ಓದುತ್ತೇವೆ,
ಕಾಮೆಂಟ್ ಪೋಸ್ಟ್ ಮಾಡಿ