ಬುಧವಾರ, ಫೆಬ್ರವರಿ 5, 2014

ನಿರುತ್ತರ

ವಾರದ ಹಿಂದಷ್ಟೇ ತನ್ನ ಕಿರು ಬೆರಳನ್ನೇರಿ ಕುಳಿತಿದ್ದ ಚಿನ್ನದುಂಗುರದೊಳಗಿನ ಪಚ್ಚೆ ಹರಳನ್ನೇ ತದೇಕವಾಗಿ ದಿಟ್ಟಿಸುತ್ತಿದ್ದಳು ಭುವನ. "ಅಕ್ಕಾ... ಶಾಸ್ತ್ರಿಗಳು ಹೇಳಿದ್ದಾರೆ, ಪಚ್ಚೆ ಹರಳನ್ನು ಹಾಕ್ಕೊಂಡ್ರೆ ಎಲ್ಲಾ ಸರಿ ಆಗೊತ್ತಂತೆ... ನಿನ್ನ ಆರೋಗ್ಯ ಬೇಗ ಸುಧಾರಿಸಿ, ನೀನು ಆರಾಮಾಗಿ ಮನೆಗೆ ಬರ್ತೀಯಂತೇ.... ಅವ್ರು ತುಂಬಾ ದೊಡ್ಡ ಜ್ಞಾನಿಗಳು... ಖಂಡಿತ ಹೇಳಿದಾಂಗೇ ಆಗೊತ್ತೆ.. ಪ್ಲೀಸ್ ನಿಂಗೆ ನಂಬ್ಕೆ ಇಲ್ದೆ ಹೋದ್ರೆ ಹೋಗ್ಲಿ... ನಂಗೋಸ್ಕರ ಹಾಕ್ಕೊಳ್ಲೇ ಬೇಕು..." ಎಂದು ಒತ್ತಾಯದಿಂದ ತನ್ನ ಖರ್ಚಲ್ಲೇ ಉಂಗುರ ಮಾಡಿಸಿಕೊಂಡು ಬಂದು ತನ್ನ ಬೆರಳಿಗೆ ತೊಡಿಸಿದ್ದ ತಮ್ಮನ ನೆನೆದು ಅವಳ ಮನಸು ಆರ್ದ್ರವಾಯಿತು. ಅಸಾಧ್ಯ ತಲೆ ನೋವಿಂದ ಹಾಗೇ ಕಣ್ಮುಚ್ಚಿದಳು. "ಹುಚ್ಚು ಹುಡುಗ.... ನಿಯತಿಯ ಮುಂದೆ ಯಕಃಶ್ಚಿತ್ ಈ ಹರಳಿನದೇನು ನಡದೀತು? ಹ್ಮ್ಂ.. ಎಲ್ಲವೂ ಗೊತ್ತಿದ್ದದ್ದೇ... ಹೇಳಾಯ್ತಲ್ಲಾ ಡಾಕ್ಟರ್.... ಹೆಚ್ಚು ಅಂದ್ರೆ ಇನ್ನು ಆರೇ ತಿಂಗ್ಳು ಅಂತ...... ಸುಮ್ನೇ ಉಂಗುರಕ್ಕೊಂದಿಷ್ಟು ದುಡ್ಡು ದಂಡ ಮಾಡಿದ್ದಾಯ್ತು..." ಎಂದುಕೊಳ್ಳುತ್ತಿದ್ದಂತೇ ಆಕೆಗೆ ತುಂಬಾ ಅಚ್ಚರಿಯಾಯಿತು. ಅರೆ.. ತಾನೆಂದು ಇಷ್ಟು ನಿರ್ಲಿಪ್ತಳಾಗಿ ಹೋದೆ? ಅದೂ ತನ್ನ ಸ್ವಂತ ಸಾವಿನ ಸುದ್ದಿಯ ತಿಳಿದ ಮೇಲೂ?! ಬಹುಶಃ ಸಾವು ತನ್ನ ಜೊತೆ ಒಂದಿಷ್ಟು ಭಂಡ ಧೈರ್ಯವನ್ನೂ ಹೊತ್ತೇ ತರುತ್ತದೇನೋ...! ಮೊನ್ನೆಯವರೆಗೂ ಕ್ಯಾನ್ಸರ್ ಆಗಿರ್ಲಿಕ್ಕೇ ಇಲ್ಲಾ.. ಎಲ್ಲೋ ಏನೋ ತಪ್ಪಾಗಿದೆ... ರಿಪೋರ್ಟೇ ಸುಳ್ಳಿರಬೇಕು ಎಂದೆಲ್ಲಾ ಸುಳ್ಳ್‌ಸುಳ್ಳೇ ನನ್ನ ಸಮಾಧಾನಿಸಲು ಎಲ್ಲರೂ ಹೇಳಿದ್ದನ್ನೇ ತಾನೂ ಸುಳ್ಳ್‌ಸುಳ್ಳೇ ನಂಬಿದ್ದೂ ಆಗಿತ್ತು. ಹಿಂದೋಡೋದು ಸುಲಭ... ನಿಂತು ಎದುರಾಗೋದು, ಜೊತೆ ಸಾಗೋದು.. ಸಾಗುತ್ತಾ ದಾಟಿ ಮುನ್ನೆಡೆಯೋದು ಎಷ್ಟು ಕಷ್ಟ ಎಂದು ತನಗೆ ಗೊತ್ತಾಗಿದ್ದೇ ಈ ಅರ್ಬುದೆಯ ಕಪಿಮುಷ್ಟಿಗೆ ಸಿಲುಕಿದ ಮೇಲೇ!" 

ಬದುಕಲ್ಲಿ ತಾನಿನ್ನು ಐದಾರು ತಿಂಗಳ ಅತಿಥಿಯಷ್ಟೇ ಅನ್ನೋದು ಸುಸ್ಪಷ್ಟವಾದ ಮೇಲೆ ಭುವನವಳಲ್ಲಿ ಮಹತ್ತರ ಬದಲಾವಣೆಗಳಾಗಿದ್ದವು.  ಇಷ್ಟೇ.. ಹೀಗೇ... ಇದೇ ಪರಮ ಸತ್ಯ ಅನ್ನೋದನ್ನ ತಾನು ಸ್ವೀಕರಿಸಿದ ತಕ್ಷಣ ಗಂಡ, ಮಗ, ಅತ್ತೆ, ಮಾವ, ಒಡಹುಟ್ಟಿದವರನ್ನೆಲ್ಲಾ ಕರೆದು ಹೇಳಿ ಬಿಟ್ಟಿದ್ದಳು... "ನಗ್ತಾನೇ ಇರೋದು ಸಾಧ್ಯವಿಲ್ದೇ ಹೋಗ್ಬಹುದು.. ಅಳೋದಂತೂ ಬೇಡ..... ಹಾಗೆ ಬೇಕು ಅಂದ್ರೆ ಒಂದು ಟೈಮ್ ಫಿಕ್ಸ್ ಮಾಡ್ಕೊಂಡು ಎಲ್ರೂ ಒಟ್ಟಿಗೆ ಅತ್ತು, ಕೋಟಾ ಮುಗ್ಸಿ, ಎದ್ದು ಹೊರಡೋಣ..." ಅಂದವಳ ಮಾತಿಗೆ ಅಕ್ಷರಶಃ ಎಲ್ಲರೂ ಮನಸಾರೆ ಅತ್ತು ನಕ್ಕಿದ್ದರು. ತನ್ನ ನೋಡಲು ಬರುವವರ ಕಣ್ಣಲ್ಲಿ, ಮಾತಲ್ಲಿ  ಮತ್ತೆ ಮತ್ತೆ ಅನುಕಂಪ, ಅದೇ ಗೋಳು, ಕೆಟ್ಟ ಕುತೂಹಲಕ್ಕೆ ಸಿಲುಕಿ, ಪ್ರತಿ ಕ್ಷಣ ಸಾಯಬಾರದೆಂದೇ "ಟ್ರೀಟ್ಮೆಂಟ್ ಮಾಡಿಸಿಕೊಳ್ಳಲೇ ಬೇಕಂದ್ರೆ ಈ ಊರನ್ನು ಬಿಟ್ಟು ಬೇರೆ ಕಡೆ ಕರ್ಕೊಂಡು ಹೋಗಿ...." ಎಂದು ಹಠ ಮಾಡಿ ದೂರದ ಪುಣೆಯಲ್ಲಿರುವ ಗೋಘಲೆ ಆಸ್ಪತ್ರೆಯನ್ನು ಸೇರಿದ್ದಳು. ಎರಡು ದಿನದ ಹಿಂದಷ್ಟೇ ಮೂರನೆಯ ಕೀಮೋ ಥೆರಪಿಯಾಗಿತ್ತು. ವಿಪರೀತ ಸುಸ್ತು, ಆಯಾಸ, ವಾಂತಿ, ಯಾತನೆಯಿಂದ ಸೋತು ಹೋಗಿದ್ದರೂ, ಪದೇ ಪದೇ ಮಾಯಾಳ ನೆನಪು ಕಾಡುತ್ತಿತ್ತು. ಜೊತೆಗೇ ಮಾಯಾಳಲ್ಲಿ ತಾನು ಮುಂದೆಂದಾದರೂ ಕೇಳಲೇಬೇಕೆಂದು ಕಾದಿರಿಸಿಕೊಂಡಿದ್ದ ಪ್ರಶ್ನೆಯೊಂದು ಮನದೊಳಗೆ ಅತ್ತಿಂದಿತ್ತ ಅಡ್ಡಾಡುತಲಿತ್ತು. ಸಮಯ ಕೈಮೀರುತ್ತಿದೆ...... ಕಾಲ ಸ್ತಬ್ಧವಾಗುವ ಮುನ್ನ ಆ ಪ್ರಶ್ನೆ ಕೇಳಿ, ಅವಳಲ್ಲಿ ಉತ್ತರ ಪಡೆಯಲೇಬೇಕೆಂಬ ತುಡಿತ ದಿನೇ ದಿನೇ ಅವಳಲ್ಲಿ ಹೆಚ್ಚಿ, ಬದುಕನ್ನು ಕಚ್ಚಿ ಹಿಡಿವ ವಿಚಿತ್ರ ಶಕ್ತಿಯನ್ನೂ ಅದೆಲ್ಲಿಂದಲೋ ತುಂಬತೊಡಗಿತ್ತು.

ಮಾಯಾ... ಒಂದು ಕಾಲದ ತನ್ನ ಅತ್ಯಾಪ್ತ ಗೆಳತಿ! ಈಗ ಹೇಗಿದ್ದಾಳೋ.. ಎಲ್ಲಿದ್ದಾಳೋ? ಮುಂಬಯಿಯಲ್ಲೆಲ್ಲೋ ಇದ್ದಾಳೆ ಅಂತಿದ್ದಳಪ್ಪಾ ಸೀಮಾ.... ಅವಳನ್ನು ಸಂಪರ್ಕಿಸಿ ತಾನು ಮಾಯಾಳ ವಿಳಾಸ ತೆಗೆದುಕೊಳ್ಳಲೇ ಬೇಕು... ಹೇಗೂ ಪುಣೆಗೆ ಬಂದಾಗಿದೆ.. ಅವಿನಾಶನ ಕೇಳಿದರೆ ಇಲ್ಲವೆನ್ನಲ್ಲಾರ.. ಊರಿಗೆ ತೆರಳುವ ಮುನ್ನ ಒಮ್ಮೆ ಮುಂಬಯಿಗೆ ಹೋಗಲೇಬೇಕು.... ಅವಳ ಭೇಟಿ ಮಾಡಿ ಆ ಪ್ರಶ್ನೆಯನ್ನು ಕೇಳಿ ಬಿಡಲೇಬೇಕು.. ಬಡಪಟ್ಟಿಗೆ ಉತ್ತರಿಸಲಾರಳು. ಗೊತ್ತು.. ಕೆಟ್ಟ ಹಠಮಾರಿ.. ತಾನೂ ಬಿಡಬಾರದು... "ನೋಡು ಮಾಯಾ, ಸಾವಿನ ಹೊಸ್ತಿಲಲ್ಲಿ ನಿಂತಿದ್ದೀನಿ... ಸುಳ್ಳು ಹೇಳಿದ್ರೆ ನಿನ್ನೊಳ್ಗೆ ಪಿಶಾಚಿಯಾಗಿ ಕಾಡೋದು ಗ್ಯಾರಂಟಿ! ದಯವಿಟ್ಟು ನನ್ನ ಪ್ರಶ್ನೆಗೆ ಉತ್ತರ ಕೊಟ್ಬಿಡು... ನೀನು ಕೊಟ್ಟ ನೋವು, ವಂಚನೆ, ಏಟು ಎಲ್ಲವನೂ ಮಾಫ್ ಮಾಡಿ ಹೋಗಿಬಿಡುತ್ತೇನೆ... ನೀನೂ ನಿರಾಳವಾಗಿ ಬದುಕಬಹುದು.. ನಾನೂ ಹಾಯಾಗಿ ಸಾಯಬಹುದು... ಒಂದು ಕಾಲದಲ್ಲಿ ಆಪ್ತ ಗೆಳತಿಯಾಗಿದ್ದೆ....  ಆ ಒಂದು ಋಣ ಇಟ್ಕೊಳ್ದೇ ಈ ರೀತಿ ತೀರಿಸ್ತೀಯಾ ಅಂದ್ಕೊತೀನಿ...  ಪ್ಲೀಸ್.... ಉತ್ತರ ಕೊಟ್ಬಿಡು.. ಆಮೇಲೆ ನಿನ್ನ ಏನೂ ಕೇಳೊಲ್ಲೆ.. ಒಂದೇ ಒಂದು ಪ್ರಶ್ನೆ.... "ನಮ್ಮಿಬ್ಬರ ನಡುವೆ ಬೆಳಗ್ತಾ ಇದ್ದ ಸ್ನೇಹದ ಚಂದ್ರನ ಹಿಡಿದು ಚೂರುಗಳನ್ನು ಮಾಡಿ ಉರಿದು ಬೀಳುವ ಉಲ್ಕೆಗಳನ್ನಾಗಿಸಿದೆ ಯಾಕೆ?!" ಇಷ್ಟೇ... ಮುಗೀತು... ಎಷ್ಟು ಸರಳ ಅಲ್ವಾ? ಉತ್ತರ ಕೊಟ್ಬಿಡು ಬೇಗ.. ಹೆಚ್ಚು ಸಮಯವಿಲ್ಲ ನನ್ನ ಕೈಲಿ.." ಎಂದು ಎಮೋಷನಲ್ ಬ್ಲಾಕ್‌ಮೈಲ್ ಮಾಡಿಯಾದ್ರೂ ಸತಾಯಿಸ್ಬೇಕು ಅವ್ಳನ್ನ. ಭುವನಳ ಮನಸು ಹಲವು ರೀತಿಯಲ್ಲಿ ಮಂಡಿಗೆ ತಿನ್ನುದ್ದರೆ, ಬಾಯಿ ನುಂಗುತ್ತಿದ್ದ ಮಾತ್ರೆಗಳ ಕಹಿಯೂ ಅವಳರಿವಿಗೆ ಬರದಂತಾದಗಿತ್ತು. ಈ ಹುಚ್ಚುಚ್ಚು ಆಲೋಚನೆಗಳು ಅವಳನ್ನು ಅವಳೊಳಗಿನ ಯಾತನೆಯಿಂದ ತುಸುವಾದರೂ ದೂರವಿಡಲು ಸಮರ್ಥವಾಗಿದ್ದವು. ದಿನೇ ದಿನೇ ಮಾಯಾಳನ್ನು ನೋಡುವ ಕಾತುರ ಹೆಚ್ಚುತ್ತಲೇ ಹೋಯಿತು. ಸೀಮಾಳಿಂದ ಅವಳ ವಿಳಾಸವನ್ನು ಪಡೆದಾಗಿತ್ತು. ಭುವನಳ ಹಠಕ್ಕೆ ಸೋತು, ಪತಿ ಅವಿನಾಶ ಮುಂಬಯಿಗೆ ಟಿಕೇಟನ್ನು ಬುಕ್ ಮಾಡಿಸಿದ್ದ. ಇನ್ನೆರಡು ದಿನಗಳೆದರೆ ತನ್ನೆದುರು ಮಾಯೆ! ತನ್ನ ಕಂಡು, ಈ ಸ್ಥಿತಿಕಂಡು, ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಪ್ರಶ್ನೆಯ ನಿಘಾತಕ್ಕೆ ರಾವು ಬಡಿದಂತೇ ಕುಳಿತ ಅವಳ ಮೊಗದ ಕಲ್ಪನೆಯಿಂದ ಒಳಗೊಳಗೇ ಉತ್ತೇಜಿತಳಾಗುತ್ತಿದ್ದಳು ಭುವನ. ತನಗೆ ಸಾವು ಒದಗಿದ್ದೇ ಈ ಮಹತ್ಕಾರ್ಯ ಸಾಧಿಸಲೋಸುಗವೇನೋ ಎಂಬ ಒಂದು ವಿಚಿತ್ರ ಉದ್ವೇಗ, ಉತ್ಕಟತೆ ಅವಳನ್ನಾವರಿಸಿತ್ತು.

"ಭುವಿ ಬಾ ಹಾಗೇ ವರಾಂಡಕ್ಕೆ ಹೋಗಿ ಬರೋಣ.. ನಿಂಗೆ ಸ್ವಲ್ಪ ಹಾಯೆನಿಸೊತ್ತೆ.." ಎಂದು ಎಬ್ಬಿಸಿದ ಪತಿಯನ್ನು ತುಸು ಗೆಲುವಿನಿಂದಲೇ ಹಿಂಬಾಸಿಲಿಸಿದಳು. ಜೋಲಿ ತಪ್ಪದಂತೇ ಬಳಸಿದ್ದ ಅವನ ಕೈಯನ್ನು ಭದ್ರವಾಗಿ ಹಿಡಿದು ಮುನ್ನಡೆಯುತ್ತಿದ್ದವಳಿಗೆ ತಾವು ೨೦ ವರ್ಷಗಳ ಹಿಂದೆ ಹೀಗೇ ಕೈ ಹಿಡಿದು, ಸಪ್ತಪದಿ ತುಳಿದ ನೆನಪಾಗಿ ಕಣ್ಣು ಮಂಜಾಯಿತು. ತಾನು ಮಾಡಿದ್ದ ಕರಾರಿನ ನೆನಪಾಗಿ ಉಗುಳುನುಂಗಿ ತಡೆದುಕೊಂಡಳು. ವರಾಂಡದಲ್ಲಿದ್ದ ಬೆಂಚಿನ ಮೂಲೆಯಲ್ಲಿ ಕುಳಿತು ಹಾಗೇ ನಾಳೆಯ ತನ್ನ ಪ್ರಯಾಣದ ಸಿದ್ಧತೆಗೆ ಬೇಕಾದ ವಸ್ತುಗಳನ್ನು ನೆನೆಸಿಕೊಳ್ಳುತ್ತಾ ಅತ್ತ ತಿರುಗಲು, ಹತ್ತಿಪ್ಪತ್ತು ಮಾರು ದೂರದಲ್ಲಿ ಗಾಲಿ ಕುರ್ಚಿಯಲ್ಲಿ ಕುಳಿತು ಎಲ್ಲೋ ದಿಟ್ಟಿ ನೆಟ್ಟಿದ್ದ ವ್ಯಕ್ತಿಯನ್ನು ಕಂಡು ನಿಶ್ಚೇಚಿತಳಾದಳು. ಅವಳ ಕೈ ಕಾಲೆಲ್ಲಾ ಮರಗಟ್ಟಿದಂತಾಗಿ ಬೆವರು ಕಿತ್ತು ಬರಲಾರಂಭಿಸಿತು. ಆ ವ್ಯಕ್ತಿಯ ಬೆನ್ನಿಗೆ ಆಧಾರವಾಗಿ ದಿಂಬನ್ನಿಟ್ಟು ಇವರಿಬ್ಬರನ್ನು ಹಾದು ಹೋಗುತ್ತಿದ್ದ ಸಿಸ್ಟರ್‌ಅನ್ನು ತಡೆದು, ಉಸಿರು ಬಿಗಿ ಹಿಡಿದು ಪ್ರಶ್ನಿಸಿದಳು ಭುವನ. "ಸಿಸ್ಟರ್ ಯಾರಾಕೆ? ಅವ್ಳಿಗೇನಾಗಿದೆ? ಪ್ಲೀಸ್ ಹೇಳಿ.." ಎಂದು ಪ್ರಯಾಸದಿಂದ ಉದ್ವೇಗವನ್ನು ನಿಯಂತ್ರಿಸಿಕೊಳ್ಳುತ್ತಾ ಪ್ರಶ್ನಿಸಿದಳು.  "ಯಾರು? ಓ ಅಲ್ಲಿ  ವ್ಹೀಲ್‌ಚೇರ್ ಮೇಲೆ ಕೂತಿರೋರಾ? ಮುಂಬಯಿಯಿಂದ ಬಂದು ಎರಡು ದಿನಗಳಾದವು ಅಷ್ಟೇ..... ಬಟ್ ಲೇಟಾಗಿ ಹೋಗಿದೆ... ಲಿವರ್ ಕ್ಯಾನ್ಸರ್ ಲಾಸ್ಟ್ ಸ್ಟೇಜ್‌ನಲ್ಲಿದೆ.... ಹೆಚ್ಚು ಅಂದ್ರೆ ಇನ್ನೊಂದು ತಿಂಗ್ಳು ಅಷ್ಟೇ..... ಯಾಕೆ? ಅವ್ರು ನಿಮಗೆ ಪರಿಚಯದವ್ರಾ? .." ಎಂದು ಮತ್ತೇನೇನೋ ಹೇಳ್ತಾ, ಕೇಳ್ತಾ ಇದ್ದವ್ಳನ್ನು ಸರಿಸಿಕೊಂಡು, ಇದ್ದ ಬಿದ್ದ ಕಸುವನ್ನೆಲ್ಲಾ ಒಗ್ಗೂಡಿಸಿ ತನ್ನ ಕೋಣೆಯೆಡೆ ತುಸು ಓಡುತ್ತಲೇ ಸಾಗಿದಳು. ಗಡಬಡಿಸಿ ಹಾಸಿಗೆಯನ್ನೇರಿದವಳೇ ಮುಖದವರೆಗೂ ಮುಸುಕು ಬೀರಿ ಮಲಗಿ ಬಿಟ್ಟಳು. ಅವಳ ಹಿಂದೆಯೇ ಬಂದ ಅವಿನಾಶ, ಭುವನಳನ್ನು ಮಾತನಾಡಿಸಲು ಯತ್ನಿಸಿ ಸೋತು, ಏನೊಂದೂ ಆರ್ಥವಾಗದೇ ಬೆಪ್ಪಾಗಿ ಕುಳಿತ. ಹೊದಿಕೆಯೊಳಗೆ ಗಟ್ಟಿಯಾಗಿ ಕಣ್ಮುಚ್ಚಿ ಮಲಗಿದ್ದವಳ ತಲೆಯ ತುಂಬೆಲ್ಲಾ ಹೊಸ ಪ್ರಶ್ನೆಯೊಂದು ಧಾಂಗುಡಿಯಿಡತೊಡಗಿತ್ತು.... ಮಾಯಾ ಇಂದೋ, ನಾಳೆಯೋ ತನ್ನ ಹುಡುಕಿಕೊಂಡು ಬಂದು ತಾನು ಕೇಳಬೇಕೆಂದಿದ್ದ ಅದೇ ಪ್ರಶ್ನೆಯನ್ನೇ ತನಗೆ ಕೇಳಿದರೆ ತಾನೇನು ಉತ್ತರಿಸಲಿ?! ಎಂದು.

[ಜನವರಿ ೧-೧೫ರ ಸಖಿ’ ಸಂಚಿಕೆಯಲ್ಲಿ ಪ್ರಕಟಗೊಂಡಿರುವ ಕಥೆ.]

-ತೇಜಸ್ವಿನಿ.


3 ಕಾಮೆಂಟ್‌ಗಳು:

sunaath ಹೇಳಿದರು...

ಸ್ವಾರಸ್ಯಕರವಾದ ಕಥೆ. ಕೊನೆಯಲ್ಲಿಯ ತಿರುವು ದಿಗ್ಭ್ರಮೆಗೊಳಿಸುತ್ತದೆ.

Anuradha ಹೇಳಿದರು...

ಅನಿರೀಕ್ಷಿತ ಅಂತ್ಯ .. ಭಾವಪೂರ್ಣವಾಗಿದೆ .

Swarna ಹೇಳಿದರು...

ಇಷ್ಟ ಆಯ್ತು.