ಸೂರ್ಯನಿಂದ ಹೊರ ಹೊಮ್ಮುವ ಅಪಾಯಕಾರಿ ವಿಕಿರಣಗಳನ್ನು ತಡೆದು ನಮ್ಮನ್ನೆಲ್ಲಾ ರಕ್ಷಿಸುವ ಓಜೋನ್ ಪದರದಂತೇ, ಮನುಷ್ಯನೊಳಗಿರುವ ಮೃಗೀಯ ಭಾವನೆಗಳನ್ನೆಲ್ಲಾ ಫಿಲ್ಟರ್ ಮಾಡಿ ಕೇವಲ ಸಾತ್ವಿಕ ಭಾವಗಳನ್ನೇ ಹೈಲೈಟ್ ಮಾಡುವಂತಹ ಯಾವುದಾದರೂ ಪದರವಿದ್ದಿದ್ದರೆ, ಅದೆಷ್ಟೋ ಅರುಣಾ, ಶೃತಿ, ಅರುಶಿ, ಅರುಣಿಮಾರೆಲ್ಲಾ ಇಂದು ನಗುತ್ತಿದ್ದರು... ಬೆಳಗುತ್ತಿದ್ದರು.... ಬೆಳಕಾಗುತ್ತಿದ್ದರು.
ಮೊನ್ನೆ ಮೊನ್ನೆಯಷ್ಟೇ ದಯಾಮರಣದ ಚರ್ಚೆಗೆ ಗುರಿಯಾಗಿ ಸುದ್ದಿಯಾದ ನಿರ್ಭಾಗ್ಯೆ ಅರುಣಾ ಶಾನುಭಾಗಳ ಪ್ರಕರಣವೇ ಮರೆತಿಲ್ಲ... ಹೀಗಿರುವಾಗ ಈಗ ೨೩ ವರುಷದ ತರುಣಿ ಅರುಣಿಮಾ ಸಿನ್ಹಾ (ಸೋನು ಸಿನ್ಹಾ). ರಾಷ್ಟ್ರೀಯ ಮಟ್ಟದ ವಾಲಿಬಾಲ್ ಹಾಗೂ ಫುಡ್ಬಾಲ್ ಕ್ರೀಡಾಳುವಾಗಿದ್ದ ಈಕೆಯನ್ನು ಮುಂದೆಂದೂ ಸರಾಗವಾಗಿ ಓಡಾಡಲೂ ಆಗದಂತೇ ಮಾಡಿದ ಆ ದುರುಳರಿಗೆ ಬೇಕಾಗಿದ್ದು ಅವಳ ಕೊರಳೊಳಗಿನ ಪುಟ್ಟ ಚೈನ್ ಅಷ್ಟೇ! ಪರೀಕ್ಷೆಯೊಂದನ್ನು ಬರೆಯಲು ದೆಹಲಿಗೆ ತೆರಳಲು ಉತ್ತರಪ್ರದೇಶದ ಬರೇಲಿಯಲ್ಲಿ ಪದ್ಮಾವತ್ ಎಕ್ಸ್ಪ್ರೆಸ್ ರೈಲ್ ಅನ್ನು ಹತ್ತಿದ ಈಕೆಗೆ ತನ್ನ ಭವಿಷ್ಯದ ತುಂಬೆಲ್ಲಾ ಇನ್ನು ಪರೀಕ್ಷೆಗಳೇ ಎದುರಾಗುವುದು ತಿಳಿದಿರಲಿಲ್ಲ. ಅದೇ ಭೋಗಿಯನ್ನು ಹತ್ತಿದ್ದ ಮೂವರು ರೌಡಿಗಳು, ಅವಳ ಕೊರಳಲ್ಲಿದ್ದ ಚಿನ್ನದ ಸರಕ್ಕಾಗಿ ಕೈ ಹಾಕಿದಾಗ, ಸಹಜವಾಗಿಯೇ ಈಕೆ ಪ್ರತಿಭಟನೆ ತೋರಿದ್ದಾಳೆ. ಆದರೆ ಅದರ ಪರಿಣಾಮ ಮಾತ್ರ ಘೋರ! ಚೈನ್ ಎಳೆದಾಟದಲ್ಲಿ ರೊಚ್ಚಿಗೆದ್ದ ಆ ಪಾಪಿಗಳು ಕರುಣೆಯ ಲವಲೇಶವನ್ನೂ ತೋರದೇ ಚಲಿಸುತ್ತಿದ್ದ ರೈಲಿನಿಂದ ಆಕೆಯನ್ನು ದೂಡಿದ್ದಾರೆ. ಹೊರಬಿದ್ದ ಅರುಣಿಮಾ ಇನ್ನೇನು ಸಾವರಿಸಿಕೊಂಡು ಸರಿಯಬೇಕೆನ್ನುವಾಗಲೇ ಸಮಾನಾಂತರ ಹಳೆಯಿಂದ ಬರುತ್ತಿದ್ದ ಇನ್ನೊಂದು ರೈಲು ಅವಳ ಎಡಗಾಲನ್ನೇ ಜಜ್ಜಿಹಾಕಿದೆ.
ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವಳ ಎಡಗಾಲನ್ನು ಉಳಿಸಲಾಗಲಿಲ್ಲ. ಬಲಗಾಲು ಹಾಗೂ ತಲೆಗೆ ತೀವ್ರ ಪೆಟ್ಟಾದರೂ ಸಾವನ್ನು ಗೆದ್ದು ಬದುಕಿಗಾಗಿ ಈಗ ಹೋರಾಡುತ್ತಿದ್ದಾಳೆ. ಚಾನಲ್ ಒಂದರ ಸಂದರ್ಶನದಲ್ಲಿ ಆಕೆ "ತನಗೆ ಫುಡ್ಬಾಲ್ನಲ್ಲಿ ಹೆಸರುಮಾಡಬೇಕಿತ್ತೆಂದೂ... ತಾನು ಉತ್ತಮ ರನ್ನರ್ ಹಾಗೂ ಗೋಲ್ಕೀಪರ್ ಆಗಿದ್ದೆಯೆಂದೂ... ಈ ಕ್ಷೇತ್ರದಲ್ಲೇ ಮುಂದುವರಿದು ಗುರಿ ಮುಟ್ಟಬೇಕಿದ್ದೆಯೆಂದೂ... ಆದರೆ ಇನ್ನೆಂದೂ ಈ ನನ್ನ ಕನಸು ನನಸಾಗದೆಂದು.." ತನ್ನ ನೋವನ್ನು, ದುಗುಡವನ್ನು, ಅಸಹಾಯಕತೆಯನ್ನು ತೋಡಿಕೊಂಡಿದ್ದಾಳೆ.
ಸರಕಾರ, ಆಟಗಾರರು, ಜನತೆ ಎಲ್ಲರೂ ಅವಳಿಗೆ ಸಹಾಯ ಹಸ್ತ ಚಾಚುತ್ತಿದೆ. ಇನ್ನೂ ಸಾಕಷ್ಟು ಬೆಂಬಲದ ಅತ್ಯಗತ್ಯ ಆಕೆಗಿದೆ. ಹುಟ್ಟಿನಿಂದಲೇ ಬಂದ ಅಂಗವೈಕಲ್ಯ ಮನುಷ್ಯನ ಮನಸ್ಸನ್ನೂ ಅದರೊಂದಿಗೆ ಬೆಳೆಸಿರುತ್ತದೆ. ಆದರೆ ಜೀವನ ಪ್ರಮುಖ ಘಟದಲ್ಲಿ.. ಅದೂ ಇನ್ನೇನು ಬದುಕು ಅರಳಬೇಕೆಂದಿರುವಾಗಲೇ ಅರುಣಿಮಾಳ ಜೊತೆ ಈ ದೌರ್ಭಾಗ್ಯ ನಡೆದಿದೆ. ಈ ಆಘಾತದಿಂದ, ನೋವಿನಿಂದ, ಭರಿಸಲಾಗದ ನಷ್ಟದಿಂದ ಹೊರಬರಲು, ಆಕೆಗೆ ಮಾನಸಿಕ ಬೆಂಬಲ, ಆತ್ಮವಿಶ್ವಾಸ, ಹೆತ್ತವರ ಹಾಗೂ ಸಮಾಜದ ನೆರವು, ಸಹಾಯದ ಅತ್ಯವಶ್ಯಕತೆಯಿದೆ. ಜೈಪುರ ಕಾಲಿನ ಜೋಡನೆಯ ಪ್ರಯತ್ನವೂ ಆಗುತ್ತಿದೆಯಂತೆ. ಇವೆಲ್ಲಾ ಉತ್ತಮ ಬೆಳವಣಿಗೆಯೇ. ಇತ್ತೀಚಿನ ಸುದ್ದಿಯ ಪ್ರಕಾರ...ಅವಳ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ... ಆಕೆಗೆ ಇನ್ನೂ ಹೆಚ್ಚಿನ ಹಾಗೂ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನು ನೀಡುವ ಸಲುವಾಗಿ, ಉ.ಪ್ರ. ಸರಕಾರ ಅರುಣಿಮಾಳನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಸಾಗಿಸಿದೆ.
ಅಸಾಧ್ಯವೆಂದರೆ ಯಾವುದೂ ಸಾಧ್ಯವಲ್ಲ. ಸಾಧ್ಯತೆ ಇರುವುದು ನಮ್ಮ ಮನದೊಳಗೇ. ಕೃತಕ ಕಾಲಿನ ಜೋಡಣೆಯಿಂದ, ಈಗಾಗಲೇ ಆಕೆ ತೋರುತ್ತಿರುವ ಆತ್ಮವಿಶ್ವಾಸ, ಸ್ಥೈರ್ಯ, ಧೈರ್ಯದಿಂದ ಅವಳ ಕನಸೂ ಮುಂದೆ ನನಸಾಗಬಹುದು. ಯಾರು ಕೇವಲ ತನ್ನ ಬಗ್ಗೆ ಮಾತ್ರ ಯೋಚಿಸದೇ ತನ್ನಂತವರ ಬಗ್ಗೆಯೂ ಯೋಚಿಸುತ್ತಾರೋ ಅವರೇ ನಿಜವಾದ ಮಾನವೀಯತೆ ಉಳ್ಳವರು. ಅರುಣಿಮಾ ತನಗಾಗಿ ಹರಿದು ಬರುತ್ತಿರುವ ಧನ ಸಹಾಯದಿಂದ ಕೇವಲ ಸಂತೋಷ ಪಡುತ್ತಿಲ್ಲ.. ಬದಲಿಗೆ ಮುಂದೆ ಸಂಗ್ರಹವಾದ ದುಡ್ಡಿನಿಂದ ತನ್ನಂತವರಿಗಾಗಿ ಕ್ರೀಡಾ ಶಾಲೆಯೊಂದನ್ನು ತೆರೆಯುವ ದೊಡ್ಡ ಕನಸು ಕಂಡಿದ್ದಾಳೆ. ತನ್ನ ಹಳೆಯ ಕನಸುಗಳಿಗೆಲ್ಲಾ ಅಲ್ಪವಿರಾಮ ಹಾಕಿ... ಹತಾಶೆಯ ನಡುವೆಯೂ ಆಶಾವಾದದ ಕನಸುಗಳನ್ನು ಕಾಣುತ್ತಾ, ಅಪಾರ ನೋವಿನಲ್ಲೂ ಛಲದಿಂದ ಬದುಕಿಗಾಗಿ ಹೋರಾಡುತ್ತಿರುವ ಅರುಣಿಮಾಳ ಬದುಕಲ್ಲಿ ನಿಜವಾದ ಅರುಣೋದಯ ಬಹು ಬೇಗವಾಗಲೆಂದು ಮನದಾಳದಿಂದ ಪ್ರಾರ್ಥಿಸುತ್ತಿರುವೆ. ಚಾಂಪಿಯನ್ ಆಗಬೇಕೆಂಬ ಆಕೆಯ ಕನಸು ಮುಂದೆ ನನಸಾಗಬಹುದು... ಆದರೆ ಛಲದಿಂದ, ಇದ್ದ ಬದ್ದ ಸ್ಥೈರ್ಯವನ್ನೆಲ್ಲಾ ಒಗ್ಗೂಡಿಸಿ ಬದುಕಿಗಾಗಿ ಹೋರಾಡುತ್ತಿರುವ ಅರುಣಿಮಾ ನನ್ನ ಪ್ರಕಾರ ಈಗಾಗಲೇ ಚಾಂಪಿಯನ್ ಆಗಿದ್ದಾಳೆ.
-ತೇಜಸ್ವಿನಿ ಹೆಗಡೆ.
9 ಕಾಮೆಂಟ್ಗಳು:
ನಿಜ ನಿಮ್ಮ ಮಾತು... ಆಕೆ ಈಗಾಗಲೇ ಚಾಂಪಿಯನ್.........
ನ್ಯೂಸ್ ನೋಡಿದಾಗ ಅವಳ ಆತ್ಮಸ್ಥೈರ್ಯದ ಮಾತು, ಆಸೆ ಆಕಾಂಕ್ಷೆ ಎಲ್ಲವನ್ನು ಕೇಳಿ ನಿಜಕ್ಕೂ ಖುಷಿಯಾಯಿತು. ಅವಳ ಎಲ್ಲಾ ಆಸೆ ಆಕಾಂಕ್ಷೆಗಳು ಸದೃಢವಾಗಿ ಬೆಳೆಯಲೆಂದು ಆಶಿಸೋಣ.
ಹೌದು, ಅರುಣಿಮಾಳ ಆತ್ಮಸ್ಥೈರ್ಯ ಮೆಚ್ಚಲೇಬೇಕು. ಅವಳು ತನ್ನ ಆಸೆ-ಆಕಾಂಕ್ಷೆಗಳ ಗುರಿಮುಟ್ಟಲಿ. ಅದರ ಜೊತೆಗೆ ಅಮಾನುಷವಾಗಿ ಅವಳನ್ನು ಇಂತಹ ದುಸ್ಥಿತಿಗೆ ದೂಡಿದ ದುರುಳರಿಗೆ ಶಿಕ್ಷೆಯಾಗಲಿ.
ನಿಜ ಇದು ದಾರುಣ ಘಟನೆ.ಅವಳ ಆಸೆ ನನಸಾಗಲಿ ಎಂದು ನಾವೆಲ್ಲಾ ಹಾರೈಸುವ,
aakeya kanasu nanasaagali..
manamuttuva baraha.. tejasvini...
ಹೌದು, ಅವಳೀಗಾಗಲೇ ಚಾಂಪಿಯನ್!
ರೇಲವೇಗಳಲ್ಲಿ ಪ್ರತಿಯೊಂದು ಬೋಗಿಯಲ್ಲಿಯೂ ಓರ್ವ ಸಶಸ್ತ್ರ ಪೋಲೀಸನನ್ನು ಇಡುವದು ಅಗತ್ಯವಾಗಿದೆ.
Aakege shubhavaagali...
ತೇಜಸ್ವಿನಿ ಮೇಡಮ್,
ಅರುಣಿ ನಿಜಕ್ಕೂ ಮಾನಸಿಕ ಸ್ಥೈರ್ಯಯುಳ್ಳವಳು. ಅವಳ ಆಸೆಗಳು ಈಡೇರಲಿ. ಅವಳು ಆಟದಲ್ಲಿ ಚಾಂಪಿಯನ್ ಅಲ್ಲ ಬದುಕಿನಲ್ಲೂ ಚಾಂಪಿಯನ್..ರೌಡಿಗಳಿಗೆ ಖಂಡಿತ ಶಿಕ್ಷೆಯಾಗಬೇಕು..
haudu... arunima La sthairya mechchuvanthaddu...
ಆತ್ಮವಿಶ್ವಾಸದ, ಕೆಚ್ಚೆದೆಯ ಹೆಣ್ಣು ಅರುಣಿಮಾ,,, ಆಕೆಯೊಂದಿಗೆ ಮಾತಾಡಿದ್ದೇನೆ, ಸರಳ ಜೀವನ ಮತ್ತು ಕಠಿಣ ಮನಸ್ತಿತಿಯ ಹುಡುಗಿ,,,,, ಲೇಖನಕ್ಕೆ ಧನ್ಯವಾದಗಳು
-ಜೀ ಕೇ ನವೀನ್
ಕಾಮೆಂಟ್ ಪೋಸ್ಟ್ ಮಾಡಿ