ಗುರುವಾರ, ಏಪ್ರಿಲ್ 14, 2011

ನೆನಪುಗಳ ಮಾತೇ ಮಧುರ..

ಕೆಕ್ಕಾರಜ್ಜಿ

ಹೊನ್ನಾವರದಿಂದ ಅರೆಅಂಗಡಿ, ಹೆಬ್ಬಾನ್ಕೇರಿ ಬಸ್ ಹಿಡಿದು ತೇರುಬೀದಿಗೆ ಬಂದಿಳಿದರೆ ಸಾಕು... ಅಲ್ಲಿಂದ ಸರಿ ಸುಮಾರು ಅರ್ಧ ಮೈಲು ನಡೆದರೆ ಸಿಗುವುದೇ "ಕೆಕ್ಕಾರು".. ನನ್ನಜ್ಜಿಯ ಮನೆ... ಅಮ್ಮನ ಆಯಿಯ ಮನೆ. ತೇರುಬೀದಿಯಲ್ಲಿ ಕೆಂಪು ಬಸ್ಸು ನಮ್ಮನ್ನೆಲ್ಲಾ ಇಳಿಸಿದ ತಕ್ಷಣವೇ, ದಾರಿಯುದ್ದಕ್ಕೂ ಸಾಲು ಸಾಲಾಗಿರುವ ಗೇರು ಮರಗಳೆಲ್ಲಾ ತಮ್ಮ ಹಣ್ಣುಗಳ ಕಂಪನ್ನು ಬೀರುತ್ತಾ ನಮ್ಮನ್ನೆಲ್ಲಾ ಸ್ವಾಗತಿಸುತ್ತಿದ್ದವು. ಶಾಲೆ/ಕಾಲೇಜು, ಪರೀಕ್ಷೆ/ಸ್ಪರ್ಧೆ ಎಂದೆಲ್ಲಾ ವರ್ಷವಿಡೀ  ಪರದಾಡಿ ಹೈರಾಣಾಗಿರುತ್ತಿದ್ದ ನಾನೂ ಹಾಗೂ ನನ್ನ ಇಬ್ಬರು ತಂಗಿಯಂದರಿಗೆ  "ಕೆಕ್ಕಾರು" ಅತ್ಯಂತ ಪ್ರಶಸ್ತ  ವಿಶ್ರಾಂತಿಧಾಮವಾಗಿತ್ತೆಂದರೆ ಅಡ್ಡಿಯಿಲ್ಲ. ಯಾವುದೇ ಅಂಕೆ-ಅಡ್ಡಿಗಳಿಲ್ಲದೇ, ಸ್ವೇಚ್ಛವಾಗಿ ತಿರುಗಾಡಿಕೊಂಡು.. ಯತ್ಥೇಚ್ಛವಾಗಿ ಹಣ್ಣು, ಹಂಪಲುಗಳನ್ನು ಮುಕ್ಕಿಕೊಂಡು ಕಣ್ತುಂಬಾ ಹಸಿರನೇ ತುಂಬಿಕೊಂಡು ವಸಂತನಾಗಮದ ಹಬ್ಬವನ್ನು ಆಚರಿಸುತ್ತಿದ್ದೆವು. 

ಕೆಕ್ಕಾರಿನ ಕಳೆಯೇ ನನ್ನ "ಕೆಕ್ಕಾರಜ್ಜಿ"ಯಾಗಿದ್ದಳೆಂದರೆ ಅತಿಶಯೋಕ್ತಿಯಲ್ಲ. ಕೆಲಸಕ್ಕೆ ಬರುವ ಆಳುಗಳಿಗೆ... ಅಚೆಕೇರಿ, ಅಚೆಕೆಕ್ಕಾರು, ಬಸ್ತಿಮಸ್ಕಿ - ಮುಂತಾದ ೨ ಮೈಲು ಊರಿನ ಜನರಿಗೆಲ್ಲಾ ಆಕೆ ಚಿರಪರಿಚಿತ. ಶಾಂತ ಸ್ವಭಾವದ, ಸದಾ ಒಂದೆಲ್ಲಾ ಒಂದು ಕೆಲಸದಲ್ಲೇ ಮುಳುಗಿರುತ್ತಿದ್ದ... ಬಂದು ಹೋಗುವ ಜನರನ್ನೆಲ್ಲಾ ಆದರಿಸುತ್ತಿದ್ದ "ಸರಸ್ವತಕ್ಕ" ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಅದರಲ್ಲೂ ವಿಶೇಷವಾಗಿ ಆಳುಗಳಿಗೆ ಕೆಕ್ಕಾರಜ್ಜಿ ಎಂದರೆ ಬಲು ಪ್ರೀತಿ. ಅಜ್ಜ ಸ್ವಭಾವತಃ ಮುಂಗೋಪಿ... ಆಳುಗಳು ಏನಾದರೂ ಪದೇ ಪದೇ ಕೇಳಿದರೆ ಸಿಟ್ಟೇ ಉಕ್ಕಿ ಬರುತ್ತಿದ್ದು. ಹಾಲನ್ನೋ, ಮೊಸರನ್ನೋ ಇಲ್ಲಾ ಇನ್ನಾವುದೋ ಪದಾರ್ಥವನ್ನೋ ಪದೇ ಪದೇ ಮುಂಬಾಗಿಲಲ್ಲಿ ಕೇಳಿ ನಿರಾಸೆ ಹೊಂದುತ್ತಿದ್ದವರಿಗೆಲ್ಲಾ ಹಿಂಬಾಗಿಲು ತೆರೆದಿರುತ್ತಿತ್ತು. ಅಜ್ಜನ ಕಣ್ತಪ್ಪಿಸಿ ಆಳುಗಳಿಗೆ ಹಾಲು, ಮೊಸರು, ಪದಾರ್ಥಗಳನ್ನು ಕೊಡುತ್ತಿದ್ದ ಅಜ್ಜಿಯ ವಹಿವಾಟು ಅಜ್ಜನಿಗೂ ಗೊತ್ತಿದ್ದದ್ದೇ. ಒಮ್ಮೊಮ್ಮೆ ಸಹಿಸದೇ ಅಜ್ಜ ಗದರುತ್ತಿದ್ದರಂತೆ.. "ಹೌದೇ...ಆಳ್ ಮಕ್ಕಗೆಲ್ಲಾ ನೀನು ಭಾಗ್ಯಲಕ್ಷ್ಮಿ.. ನಾನು ದರಿದ್ರ ನಾರಾಯಣ.." ಎಂದು. ಆದರೆ ಇದಾವುದೂ ಕೆಕ್ಕಾರಜ್ಜಿಯ ಸಮಾಜ ಸೇವೆಗೆ ಧಕ್ಕೆ ಆಗಲೇ ಇಲ್ಲ. "ನಾಳೆ ನಾವು ಸತ್ತೆ ಅಂದ್ರೂ ಬಪ್ಪವು ಅವೇಯಾ... ನಮ್ಗೆ ಹೇಳಿ ದುಡೀತ್ವಿಲ್ಯ? ಕುಡ್ತೆ ಹಾಲು, ಮೊಸ್ರು ಕೊಟ್ರೆ ನಮ್ಗೇನು ದರಿದ್ರ ಬತ್ತಿಲ್ಲೆ.." ಎಂದು ದಬಾಯಿಸಿದರೆ ಅಜ್ಜ ಮತ್ತೆರಡು ಹೆಚ್ಚು ಅಡಿಕೆ ಹೋಳನ್ನು ಜಗಿಯುತ್ತಿದ್ದರಷ್ಟೇ. ನಾಲ್ಕನೆಯ ಇಯತ್ತೆಯವರೆಗೆ ಮಾತ್ರ ಕಲಿತಿದ್ದ ಕೆಕ್ಕಾರಜ್ಜಿ ತನ್ನ ಹಾಲಿನ ಲೆಕ್ಕವನ್ನು ಬರೆದಿಟ್ಟುಕೊಳ್ಳುತ್ತಿದ್ದ ಚಾರ್ಟ್ ಮಾತ್ರ ನಮಗೆಲ್ಲಾ ಬಲು ಮೋಜಾಗಿತ್ತು. ಸ್ವ ಹಸ್ತಾಕ್ಷರದಲ್ಲಿ ಆಕೆ ಬರೆದಿದ್ದ "ಕಮಲಕ ಹಲು..(ಕಮಲಕ್ಕನ ಹಾಲು)" ಮಾತ್ರ ಆ ಚಾರ್ಟ್‌ನಲ್ಲಿ ಕಂಡಿದ್ದು ಇಂದಿಗೂ ಹಸಿರಾಗಿದೆ.

ಸರಿಯಾಗಿ ಎಪ್ರಿಲ್, ಮೇ ತಿಂಗಳಲ್ಲಿ ರಜೆ ಆರಂಭವಾದರೆ, ಮಂಗಳೂರಿನಿಂದ ಹೊನ್ನಾವರಕ್ಕೆ ನಮ್ಮ ದೌಡೂ ಪ್ರಾರಂಭ. ಅಮ್ಮನ ಪ್ರೀತಿಯ "ಆಯಿ" ನಮಗೆಲ್ಲಾ "ಕೆಕ್ಕಾರಜ್ಜಿ"ಯಾಗಿ, ಉತ್ತಮ ಮಾರ್ಗದರ್ಶಿಯಾಗಿ, ಸ್ನೇಹಿತೆಯಾಗಿ, ಮಕ್ಕಳಜೊತೆ ಮಕ್ಕಳಾಗಿ, ಸವಿ ತಿನಸುಗಳನೀವ ಕಾಮಧೇನುವಾಗಿ, ನಮ್ಮ ಬೇಸಿಗೆ ರಜೆಯ "ಸಮ್ಮರ್ ಕ್ಯಾಂಪ್" ಆರ್ಗನೈಜರ್ ಆಗಿರುತ್ತಿದ್ದಳು. ಚಿಕ್ಕವರಿದ್ದಾಗ ನಾವೆಲ್ಲಾ ಕೆಕ್ಕಾರಜ್ಜಿ/ಅಜ್ಜರನ್ನು ಬಹಳಷ್ಟು ಕಾಡಿಸುತ್ತಿದ್ದೆವು. ನಮ್ಮ ಮೂವರಲ್ಲೇ ನನ್ನ ಕಿರಿಯ ತಂಗಿ ಸ್ವಲ್ಪ ಹೆಚ್ಚು ತುಂಟಿಯಾಗಿದ್ದಳು. ಮನೆಯ ಹಿತ್ತಲಿನಲ್ಲಿದ್ದ ಏಕೈಕ ಚಿಕ್ಕುಮರವನ್ನೇರಿ ಹೀಚುಕಾಯಿಗಳನ್ನೆಲ್ಲಾ ಕೊಯ್ದು ಹಾಕುವುದೋ... ನಾಳೆ ಹೂ ಬಿಡಬೇಕೆಂದಿರುವ ಮೊಗ್ಗುಗಳನು ತರಿದುಹಾಕುವುದೋ... ಅಜ್ಜನ ಪಂಜಿಯಯನ್ನು ಎಳೆದು ಓಡಿಹೋಗುವುದೋ - ಮುಂತಾದ ಕೀಟಲೆಗಳಿಂದಾಗಿ ಸದಾ ಕಾಲ ಅಜ್ಜಿಯ ಬೊಚ್ಚು ಬಾಯಿಯ ನಗುವಿಗೆ ಕಾರಣಳಾಗುತ್ತಿದ್ದಳು. ಆಗೆಲ್ಲಾ ಅಮ್ಮ ತಂಗಿಯನ್ನು ಅಟ್ಟಿಸಿಕೊಂಡು ಹೊರಟರೆ... ಆಕೆ ಹಿತ್ತಲಿನ ಚಿಕ್ಕು ಮರವನ್ನೇರಿ ಬೊಬ್ಬೆ ಹಾಕುತ್ತಿದ್ದಳು. "ಮರ್ಯಾದೆ ತೆಗ್ಯಡ್ದೇ ಮಾರಾಯ್ತಿ ಹೊಡೆತ್ನಿಲ್ಲೆ ಕೆಳ್ಗೆ ಇಳಿ.." ಎಂದು ಹಲ್ಕಚ್ಚಿ ಅಮ್ಮ ಗದರುತ್ತಿದ್ದರೆ... ಅಜ್ಜಿ ಬೈಯುತ್ತಿದ್ದುದು ಅಮ್ಮನನ್ನೇ. "ನೀ ಎಂತ ಮಾಡ್ತಿದ್ದೆ ಹೇಳು ಜಯ? ನಾ ಎಂತಾರೂ ಬೈದ್ರೆ.. ಇಲ್ಲಾ ಇವು ಹೊಡ್ದ್ರೆ ಗೇರು ಗುಡ್ಡೆ ಹತ್ತಿ ಊರಿಡೀ ಕೇಳು ಹಾಂಗೆ ಕೂಗ್ತಿದ್ದಿಲ್ಯ.. ನಿಂದೇ ಕೂಸು.. ಚಿಕ್ಕು ಮರವಾದ್ರೂ ಹತ್ತಿದ್ದು.. ನಿನ್ನ್ ಹಾಂಗೆ ಗುಡ್ಡೆ ಹತ್ತಿದ್ದೆಲ್ಲೆ..." ಎಂದು ದೊಡ್ಡದಾಗಿ ನಕ್ಕಾಗ....ಅಳುತ್ತಿದ್ದ ತಂಗಿಯೂ ಗೊಳ್ಳೆಂದು ನಕ್ಕಿದ್ದಳು.... ಅಮ್ಮನ ಕೋಪವೂ ನಗುವಾಗಿ ಹೊರಬಂದಿತ್ತು.

ಹೀಗೇ ಒಮ್ಮೆ ತಂಗಿಯನ್ನು ಗದರುತ್ತಿದ್ದ ಅಮ್ಮನನ್ನು ತಡೆದ ಕೆಕ್ಕಾರಜ್ಜಿ "ನೀ ಎಂತ ಕಡ್ಮೆ ಫಟಿಂಗ ಆಗಿಯಿದ್ಯನೇ? ಸಣ್ಣಿರ್ಬೇಕಿದ್ರೆ ನೀ ಮಾಡಿದ್ದ್ ಕೆಲ್ಸ ಒಂದೋ ಎರ್ಡೋ ಅಂಬೆ... ನೆನ್ಪಿಲ್ಯಾ ರಾಮಚಂದ್ರಂಗೆ ಕಾಟ ಕೊಟ್ಟಿದ್ದು ನೀನು ನಿನ್ ಗೆಳ್ತಿ ಸೇರ್ಕಂಡು?" ಎಂದು ಗದರಲು... ಅಮ್ಮನೂ ಮುಸಿ ಮುಸಿ ನಗತೊಡಗಿದಳು. ನಮಗೆಲ್ಲಾ ಕೆಟ್ಟ ಕುತೂಹಲ. ನಮ್ಮ ಕಿರಿಯಮಾವನಿಗೆ(ಅಮ್ಮನ ತಮ್ಮ) ನಮ್ಮಮ್ಮ ಕೊಟ್ಟ ಕಾಟದ ಪ್ರಹಸನ ಕೇಳಲು ಅಜ್ಜಿಯನ್ನು ಸುತ್ತುವರಿದು ಕುಳಿತೇಬಿಟ್ಟೆವು. "ಹೋಗೇ ಆಯಿ.. ನೀ ಅಂತುವ.. ಇವ್ಕೆಲ್ಲಾ ಎಂತಾ ಅದ್ನ ಹೇಳ್ತೆ.. ಈ ಕಿರಿ ಕೂಸು ಕೇಳ್ಕಂಡ್ರೆ ನಾಳೆ ನಂಗೇ ಉತ್ರ ಕೊಡ್ತು ಅಷ್ಟೇಯಾ.."ಎಂದು ಅಮ್ಮ ಒಳಸೇರಿದರೆ.. ಅಜ್ಜಿ ತಮ್ಮ ಕತೆಯೊಳಗೆ ನಮ್ಮನ್ನೆಳೆದೊಯ್ದರು.

ಏಳು ಮಕ್ಕಳ ದೊಡ್ಡ ಸಂಸಾರವನ್ನು ನಿಭಾಯಿಸುವ ಪರದಾಟ ನಮ್ಮಜ್ಜಿಯದಾಗಿತ್ತು. ಒಳ ಹೊರಗೆಲ್ಲಾ ಹೊರೆಯಾಗುವಷ್ಟು ಕೆಲಸ. ಹಾಗಿರುವಾಗ ಕಿರಿಯ ಮಗನನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹಿರಿಯಕ್ಕನಾದ ನಮ್ಮಮ್ಮನಿಗೇ ವಹಿಸಿದ್ದರು ಮನೆಯವರು. ಅಮ್ಮನಿಗೋ ಆಗ ೧೦-೧೨ ವಯಸ್ಸು. ಆಟವಾಡಿಕೊಂಡು.. ತಿರುಗಾಡಿಕೊಂಡಿರುವ ದಿನಗಳು. ಆದರೆ ಪುಟ್ಟ ತಮ್ಮ ಯಾವುದಕ್ಕೂ ಬಿಡಲೊಲ್ಲ... ಏನು ಮಾಡುವುದೆಂದು ಯೋಚಿಸಿ, ಚಿಂತಿಸಿ ಒಂದು ಉಪಾಯ ಹುಡುಕಿದಳಂತೆ. ಆಗಷ್ಟೇ ಕೆಳಗಿಳಿಸಿದ್ದ ಹಲಸಿನ ಕಾಯಿಯನ್ನು ಕೊರೆದು ಅದರ ಗಟ್ಟಿ ಮೇಣಗಳನ್ನೆಲ್ಲಾ ಬಗರಿ.. ತಮ್ಮನ ಕೈಗೆ ಮೆತ್ತಿದಳು... ಘನಘೋರ ಮೇಣವೆಲ್ಲಾ ಕೈಗಳೊಳಗೆ ತುಂಬಲು.. ಆ ಪುಟ್ಟ ಹುಡುಗ ಎರಡೂ ಕೈಯನ್ನು ಬೇರ್ಪಡಿಸಲು.. ಮೇಣವನ್ನು ತೆಗೆಯಲು ಪ್ರಯತ್ನಿಸ ತೊಡಗಿದ... ಅವನಿಗಿದೊಂದು ಹೊಸ ಆಟವೆನಿಸಿರ ಬೇಕು.. ಯಾರನ್ನೂ ಕೂಗದೇ.. ತನ್ನ ಕಾರ್ಯದಲ್ಲೇ ಮಗ್ನನಾದ. ಇದನ್ನು ನೋಡಿದ ಅಮ್ಮ.. ತನ್ನ ಉಪಾಯ ಫಲಿಸಿತೆಂದು ಬೀಗಿ ಗೆಳತಿಯೊಂದಿಗೆ ಬೆಟ್ಟ, ಬೇಣ ತಿರುಗಲು ಹೋದವಳು ೩-೪ ತಾಸು ಕಳೆದು ಬಂದಾಗ ತಮ್ಮ ಕಾಣದೇ ಮನೆಯೊಳಗೆ ಗಾಬರಿಯಿಂದ ಬಂದರೆ ಅಳುತ್ತಿದ್ದ ತಮ್ಮನನ್ನು ಸಮಾಧಾನಿಸುತ್ತಿದ್ದ ಮನೆಯವರ ಕೆಂಗಣ್ಣು ಅವಳನ್ನು ಸ್ವಾಗತಿಸಿತ್ತು. ಅಜ್ಜಿಯಿಂದ ಈ ಪ್ರಸಂಗ ಕೇಳಿದ ಮೇಲೆ ನಾವೆಲ್ಲಾ ಬಹು ನಕ್ಕಿದ್ದೆವು. ಅಮ್ಮನನ್ನು ರೇಗಿಸಲು ನಮಗೆ ಹೊಸತೊಂದು ಅಸ್ತ್ರ ಸಿಕ್ಕಂತಾಗಿತ್ತು. ಅದರಲ್ಲೂ ತಂಗಿಗೆ ತನ್ನ ತುಂಟತನವನ್ನು ಸಮರ್ಥಿಸಲು ಹೊಸ ಕಾರಣ ಸಿಕ್ಕಿಬಿಟ್ಟಿತ್ತು.. "ನೀ ಎಂತೆಲ್ಲಾ ಮಾಡಿದ್ದೆ ಹೇಳಿ ನಂಗೊತ್ತಾಜು.. ನನ್ನ ಬೈಯಡಾ.." ಎಂದೇ ಬೀಗಿ ತಿರುಗುತ್ತಿದ್ದಳು.

ಎರಡು ತಿಂಗಳು ಎರಡು ದಿನಗಳಂತೇ ಕಳೆದು.. ಬಾನ ತುಂಬೆಲ್ಲಾ ಮೋಡಗಳ ಸವಾರಿ ಕಾಣಿಸಿದಂತೇ ಭಾರವಾದ ಮನಸಿನೊಡನೆ ನಮ್ಮ ಪಯಣ ಮತ್ತೆ ಮಂಗಳೂರಿನ ಕಡೆ ಸಾಗುತ್ತಿತ್ತು. ಎರಡು ತಿಂಗಳಲ್ಲಿ ಒಂದು ತಿಂಗಳನ್ನು ಕೆಕ್ಕಾರಲ್ಲೂ.. ಮತ್ತೊಂದು ತಿಂಗಳನ್ನು ಶಿರಸಿಯ ಹರಿಗಾರಲ್ಲೂ (ಅಪ್ಪನ ಮನೆ) ಕಳೆದು.. ಎಲ್ಲಾ ಸವಿ ನೆನಪುಗಳನ್ನೂ ಹೊತ್ತು ಮತ್ತೊಂದು ವರುಷದ ರಜೆಗಾಗಿ ಕಾಯುವ ಚಾತಕ ಪಕ್ಷಿಯಂತಾಗುತ್ತಿದ್ದೆವು ನಾವು.

ಮಾವಿನ ಹಣ್ಣಿನ, ಹಲಸಿನ ಹಣ್ಣಿನ "ಹಣ್ಣೇವು", ಹಸಿ ಗೇರುಬೀಜದ ಪಲ್ಯ, ಒಣಗಿದ ಗೇರು ಬೀಜವನ್ನು ಒಲೆಯಲ್ಲಿ ಸುಟ್ಟು ಗುದ್ದಿ ಒಂದೊಂದನ್ನೇ ಬಾಯಳಿಟ್ಟು ಕರಗಿಸಿದ ಆ ಕ್ಷಣ, ನಮಗಾಗಿ ಅಜ್ಜ ಕುಮಟೆಯಿಂದ ತರುತ್ತಿದ್ದ ಏಕ ಮಾತ್ರ "ಲಿಮ್ಚಿ" ಬಿಸ್ಕೆಟ್, ಆಗಾಗ ಪೊದೆಯಿಂದ ಹೊರ ಬಂದು ನನ್ನ ಹೆದರಿಸುತ್ತಿದ್ದ ಕೇರೆ ಹಾವಿನ ಮೋರೆ... ದೊಡ್ಡ ಗುಡ್ಡವನ್ನೇರಿ ಅಂಚನ್ನು ತಲುಪಿದಾಗ ಕಾಣುತ್ತಿದ್ದ ಪುಟ್ಟ ಸೂರ್ಯ, ಚಿಕ್ಕು ಮರಕ್ಕೆ ನೇತಾಕಿರುತ್ತಿದ್ದ ಬಟ್ಟೆ ಜೋಕಾಲಿ... ಸದಾ ನನ್ನ ಹರಕೆಗೆ ಬೆಂಗಾವಲಾಗಿದ್ದ ಬಟ್ಟೆವಿನಾಯಕನ ದೇವಸ್ಥಾನ.. ಎಲ್ಲವೂ ನೆನಪಾಗುತ್ತಿದೆ. ಕೆಕ್ಕಾರಜ್ಜಿಯ ವಾಯಿಲ್ ಸೀರೆಯ ಮಡಿಲಿನ ಕಂಪಿನ್ನೂ ಮೂಗನ್ನು ಅರಳಿಸುತ್ತಲೇ ಇದೆ... ಅಜ್ಜಿಯ ಸೊಂಟವೇರಿ ಕುಳಿತು ಬಾಳೇ ಮರದ ಕುಂಡಿಗೆಯ ತುಪ್ಪವನ್ನು ಹೀರಿದ ಸವಿ ನಾಲಗೆಯಲ್ಲಿನ್ನೂ ಹಾಗೇ ಇದೆ.... ಬಟ್ಟೆವಿನಾಯಕನೂ ಬರಿದಾದ ದಾರಿಯನ್ನೇ ನೋಡುತ್ತಾ ಕಾಯುತ್ತಲಿದ್ದಂತೆ ಭಾಸವಾಗುತ್ತಿದೆ... ಈಗತಾನೇ ಹಣ್ಣು ಹೊತ್ತಿರುವ ಗೇರು ಮರ ಪರಿಮಳ ಬೀರಲು ಸಜ್ಜಾಗಿದೆ... ಮಾವು, ಹಲಸು, ಚಿಕ್ಕು ಎಲ್ಲವೂ ಇದ್ದಲ್ಲೇ ಇವೆ. ಆದರೆ..... ನನ್ನಜ್ಜಿ.. ಕೆಕ್ಕಾರಜ್ಜಿಯೇ ಕೆಕ್ಕಾರಿನಲ್ಲಿಲ್ಲ! ದೂರ ತೀರಯಾನಕೆ ಹೋಗಿ ಮೂರುವರುಷಗಳ ಮೇಲಾದರೂ.... ಮೂರು ನಿಮಿಷವೂ ನನ್ನ ನೆನಪಿಂದ ದೂರವಾಗದ ಆ ಅದಮ್ಯ ಚೈತನ್ಯಕ್ಕೆ ನನ್ನ ಸಹಸ್ರ ನಮನ.

-ತೇಜಸ್ವಿನಿ ಹೆಗಡೆ.   

15 ಕಾಮೆಂಟ್‌ಗಳು:

ಮನಸು ಹೇಳಿದರು...

ಅಜ್ಜಿ ಎಂದರೆ ಹಾಗೆ... ಎಷ್ಟು ಆತ್ಮೀಯಳಾಗಿಬಿಡುತ್ತಾಳೆ ಮೊಮ್ಮಕ್ಕಳಿಗೆ ಅಲ್ಲವೇ?.. ನಿಮ್ಮ ಈ ಲೇಖನ ನನ್ನ ಅಜ್ಜಿಯನ್ನು ನೆನಪು ಮಾಡಿಸಿತು.. ಧನ್ಯವಾದಗಳು

ashokkodlady ಹೇಳಿದರು...

Tejakka,

maneyalli ajja, ajji iddare estu chennagirutte alva....Sundara lekhana...

ಜಲನಯನ ಹೇಳಿದರು...

ತೇಜಸ್ವಿನಿ, ಊರಲ್ಲಿ, ಮನೆಯಲ್ಲಿ ಅಜ್ಜ ಅಜ್ಜಿಯರ ಜೊತೆಗಿನ ಏನೋ ಮಧುರ ಸಂಬಂಧ, ವಯೋ ವೃದ್ಧರು ಮಕ್ಕಳಿಗೆ ಹೆಚ್ಚು ಹತ್ರಾನಂತೆ ಅದು ಸುಳ್ಲಲ್ಲ ಅಲ್ವಾ..?? ಅದೊಂದು ಸುಮಧುರ ನೆನಪು ಹಳತು..ಅಜ್ಜ ಅಜ್ಜಿ..ಊರ ದಾರಿ, ಕೆರೆ..ತೋಟ ಹೊಲ ಗದ್ದೆ..ಓಹ್...ನಾನೂ ನನ್ನ ಬಾಲ್ಯಕ್ಕೆ ಹೋಗಿಬಿಟ್ತೆ ನಿಮ್ಮ ಲೇಖನ ಓದ್ತಾ...

ಶಾಲ್ಮಲಿ ಹೇಳಿದರು...

ನನಗೆ ಮತ್ತೆ ಅಸೂಯೆ ಮಾಡ್ತಾ ಇದ್ದಿರಿ.... :-(
ನನಗೆ ಅಜ್ಜನ ಮನೆ ಇಲ್ಲ.( ಅಮ್ಮನಿಗೆ ಸಹೋದರರಿಲ್ಲ.. ಅಜ್ಜ ಅಜ್ಜಿ ಮೊದಲೇ ಇಲ್ಲ). ಸಣ್ಣವಳಿದ್ದಾಗ ನನ್ನ ಗೆಳತಿಯರ ’ಅಜ್ಜನ ಮನೆ’ ಯ ಬಗ್ಗೆ ಕೇಳಿ ಬೇಜಾರಾಗುತ್ತಿತ್ತು... ನೀವು ಮತ್ತೆ ನೆನಪಿಸಿದಿರಿ.. ಆದರೂ ನಿಮ್ಮ ಬರಹ ಓದುತ್ತಾ ನಾನೇ ಅಜ್ಜನ ಮನೆಯ ಸುಖವನ್ನು ಅನುಭವಿಸಿದೆ.

tumkurs.prasd ಹೇಳಿದರು...

ಅಜ್ಜಿ ಗೊತ್ತಿಲ್ಲದ ನನಗೆ , ಅಜ್ಜಿಯನ್ನ ಜೀವ೦ತ ಕ೦ಡ ಹಾಗೆ ಆಯಿತು.

PARAANJAPE K.N. ಹೇಳಿದರು...

ತು೦ಬಾ ಆಪ್ತ ಬರಹ. ನನ್ನ ಬಾಲ್ಯಕಾಲದ ನೆನಪುಗಳು ಮರುಕಳಿಸಿದವು. ಬೇಸಿಗೆ ರಜೆ ಸಿಕ್ಕೊಡನೆ ನಾವೆಲ್ಲಾ ಹೋಗಿ ಸ೦ತಸದಿ೦ದ ಇರುತ್ತಿದ್ದ ಅಜ್ಜಿಮನೆ ಇ೦ದಿನ ಬಹುತೇಕ ಮಕ್ಕಳಿಗೆ ಇಲ್ಲವಾಗಿದೆ. ಇದ್ದರೂ ಈಗಿನ ಅಜ್ಜಿಯರು modernise ಆಗಿದ್ದಾರೆ. ಈಗಿನ ಮಕ್ಕಳು ಅಜ್ಜಿಮನೆ ರಜಾ ಸ೦ಭ್ರಮದಿ೦ದ ವ೦ಚಿತರಾಗಿ ಬೇಸಿಗೆ ಶಿಬಿರಗಳಲ್ಲಿ ವ್ಯಸ್ತರಾಗುತ್ತಿದ್ದಾರೆ. ಬೇಸಿಗೆ ರಜೆಯಲ್ಲಾದರು ಹತ್ತಿರದ ಸ೦ಬ೦ಧಿಕರ ಮನೆಗೆ ಹೋಗಿ ಸ೦ಬ೦ಧಗಳನ್ನು ರಿನ್ಯೂ ಮಾಡಿ ಕೊಳ್ಳುವ ಅವಕಾಶಗಳನ್ನೂ ತಪ್ಪಿಸಿಕೊಳ್ಳುತ್ತಿದ್ದಾರೆ.

ವಿ.ಆರ್.ಭಟ್ ಹೇಳಿದರು...

ಊರಿನ ನೆನಪು ಸದಾ ಹಸಿರು, ಈಗೀಗ ಹಳ್ಳಿಗಳ ವಾತಾವರಣ ಬದಲಾಗುತ್ತಿರುವುದು ಬೇಸರ ಮೂಡಿಸುತ್ತಿದೆ, ಅಂತೂ ನಿಮ್ಮ ಅಜ್ಜಿಯ ಮನೆಯನ್ನು ನಮಗೂ ಪರಿಚಯಿಸಿದಿರಿ, ಕೆಲವೊಮ್ಮೆ ಲಿಂಕು ತಪ್ಪಿ ಹೋಗುತ್ತದೆ, ಹುಡುಕಿ ಬಂದಿದ್ದೇನೆ-ಬಂದದ್ದಕೆ ಓದಲು ಊರ ಕಡೆಯ ವಿಷಯ ಸಿಕ್ಕಿದ್ದು ಸಂತೋಷ !

sunaath ಹೇಳಿದರು...

ತೇಜಸ್ವಿನಿ,
ನಿಮ್ಮ ಅಜ್ಜಿಯ ಆತ್ಮೀಯ ನೆನಪನ್ನು ನಮಗೆಲ್ಲ ಚಿಮುಕಿಸಿ, ಸಂತೋಷವನ್ನು ಕೊಟ್ಟಿರಿ.
ಧನ್ಯವಾದಗಳು.

Digwas hegde ಹೇಳಿದರು...

liked..

ಚಿತ್ರಾ ಹೇಳಿದರು...

ತೇಜೂ ,
ಆವತ್ತೇ ಓದಿದರೂ , ಅಭಿಪ್ರಾಯ ಬರೆಯಲು ತಡ ಮಾಡಿದೆ.
ಕೆಕ್ಕಾರು ಅತ್ತೆಯ ಬಗ್ಗೆ ತುಂಬಾ ಚಂದದ ಬರಹ . ನಾನೂ ಆಕೆಯನ್ನು ಭೇಟಿಯಾಗಿದ್ದು ಲೆಕ್ಕವಿದಬಹುದಾದಷ್ಟು ಸಲ ಮಾತ್ರ . ಆದರೆ , ಆ ಕೆಲವೇ ಭೇಟಿಗಳಲ್ಲು ಆಕೆ ನನಗೆ ತುಂಬಾ ಇಷ್ಟವಾದರು. ಜೋಯಿಸ ಮಾವನ ಗತ್ತು -ದರ್ಪಗಳಿಗೆ ಪೂರ್ಣ ವಿರುದ್ಧ ಸ್ವಭಾವ ಆಕೆಯದು .ದೀಪಾವಳಿಯ ಹೊತ್ತಿನಲ್ಲಿ ಒಮ್ಮೆ ಕೆಕ್ಕಾರಿಗೆ ಹೋದಾಗ :" ನಿಂಗ ಎಳೆ ಪ್ರಾಯದವೆಲ್ಲ ಸಮಾ ತಿನ್ನವು . ಎಂಥದೂ ಆಗ್ತಿಲ್ಲೆ . " ಎಂದು ಪ್ರೀತಿಯಿಂದ ಗದರುತ್ತಾ ಹೋಳಿಗೆಯ ಮೇಲೆ ತುಪ್ಪ ಸುರಿದು ತಿನ್ನಿಸಿದ ಅತ್ತೆ ನೆನಪಾದರು. ನಾನೂ ಕೊನೆಯ ಬಾರಿ ಕೆಕ್ಕಾರಿಗೆ ಹೋದಾಗ ತೆಗೆದ ಮಾವ-ಅತ್ತೆ ಇಬ್ಬರ ಫೋಟೋಗಳು ನನ್ನಲ್ಲಿ ಜೋಪಾನವಾಗಿವೆ. ಅದಾದ ಕೆಲ ಸಮಯದಲ್ಲೇ ಅತ್ತೆಯ ಅನಾರೋಗ್ಯದ ಸುದ್ದಿ ತಿಳಿದು ಬೇಸರವಾಗಿತ್ತು. ಅಂಥಾ ಒಳ್ಳೆಯ ಹೆಂಗಸಿಗೆ , ಆ ಇಳಿವಯಸ್ಸಿನಲ್ಲಿ ದೇವರು ಕ್ಯಾನ್ಸರ್ ನಂಥಾ ರೋಗದಿಂದ ನೋಯುವಂತೆ ಮಾಡಿದ್ದು ವಿಪರ್ಯಾಸ ಅಲ್ಲವೇ?

ವಿಚಲಿತ... ಹೇಳಿದರು...

Nenapugalu madhurave sari..

vishwanatha ಹೇಳಿದರು...

sariede

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ನಿಮ್ಮ ಬಾಲ್ಯದ ಕೆಕ್ಕಾರು ನೆನಪುಗಳು ಅಜ್ಜಿಯ ಜೊತೆಗಿನ ಒಡನಾಟಗಳನ್ನು ಓದಿ ತುಂಬಾ ಖುಷಿಯಾಯ್ತು..ಲೇಖನ ಪೂರ್ತಿ ಆಪ್ತವಾಗಿದೆ. ನಾನು ಬೇಸಿಗೆಯಲ್ಲಿ ಹಳ್ಳಿಗೆ ಹೋಗಿದ್ದು ಕಡಿಮೆ. ತುಂಬಾ ಚಿಕ್ಕವನಿದ್ದಾಗ ಹೋಗಿದ್ದು ಮರೆತುಹೋಗಿದೆ..ಏನೇ ಆದರೂ ಹಳ್ಳಿಗಳ ನೆನಪು ಮಧುರವಲ್ಲವೇ..

ತೇಜಸ್ವಿನಿ ಹೆಗಡೆ ಹೇಳಿದರು...

ನನ್ನೊಳಗಿನ ಕತೆಗಳಿಗೆ.. ಕವಿತೆಗಳಿಗೆ... ಭಾವಗಳ ಸ್ಫುರಣೆಗೆ ಪ್ರೇರಣೆಯಾಗಿದ್ದವರು.. ಪ್ರೇರಣೆಯಾಗಿರುವವರು... ನನ್ನ ಕೆಕ್ಕಾರಜ್ಜಿ... ಅವರಿಂದ ನಾನು ಕಲಿತದ್ದು ಬಹಳ. ಇದೇ ರೀತಿ ನನ್ನ ಅಲ್ಪ ಏಳಿಗೆಗೆ ಕಾರಣೀಕರ್ತಳಾದ ಮತ್ತೋರ್ವ ಅಜ್ಜಿಯ ಬಗ್ಗೆ ಇನ್ನೊಮ್ಮೆ ಬರೆಯುವೆ.

ನನ್ನ ಕೆಕ್ಕಾರಜ್ಜಿಯನ್ನು ಮೆಚ್ಚಿ ನನ್ನ ಅನುಭೂತಿಗೆ ಸಾಥ್ ನೀಡಿದ ಎಲ್ಲಾ ಸಹಮಾನಸಿಗರಿಗೂ ತುಂಬಾ ತುಂಬಾ ಧನ್ಯವಾದಗಳು :)

-ತೇಜಸ್ವಿನಿ.

ಸುಧೇಶ್ ಶೆಟ್ಟಿ ಹೇಳಿದರು...

thumba chennaagi.....nimma apthavaadha shaili thumba hidisitu :)