Courtesy : http://www.healthheap.com |
"ಅಮ್ಮಾ.. ಪಾರ್ಕಿಗೆ ಹೋಪನ.... ಪೀಜ್.... ಎಷ್ಟು ದಿನ ಆತು ಜೋಜೋ ಮಾಕಂಡು... ನಾನು ಹಠ ಮಾತಿಲ್ಲ... ಹೋಪನ..." ಎಂದು ಒಂದೇ ಸಮನ ಪಿಟೀಲು ಬಾರಿಸುತ್ತಿದ್ದವಳಿಗಾಗಿಯೇ ಅಂದು ಮನೆ ಹತ್ತಿರದ ಉದ್ಯಾನವನಕ್ಕೆ ಹೋಗಿದ್ದು. ನನ್ನ ತಂಗಿಯ ಮನೆಯವರೂ ನಮ್ಮೊಂದಿಗೆ ಸೇರಿಕೊಳ್ಳಲು..ಎಲ್ಲಾ ಒಟ್ಟಿಗೆ ಪುಟ್ಟಿಯ ಪಾರ್ಕಿಗೆ ಧಾಳಿ ಇಟ್ಟೆವು. ಜೋಜೋ... ಜಾರುಬಂಡಿ ಎಲ್ಲಾ ಆಗಿ ಮಣ್ಣಾಟ ಆಡುತ್ತಿರುವ ಚಿಣ್ಣರನ್ನು ಕಣ್ತುಂಬಿಕೊಂಡು ಹಾಗೇ ಒಂದು ಸುತ್ತು ಹಾಕಲು ನಾನೂ ನನ್ನ ತಂಗಿ ಹೊರಟಾಗಲೇ ಆಕೆ ನಮ್ಮ ಬಳಿ ಬಂದಿದ್ದು.
"ಕೈಸೆ ಹೋ ಆಪ್? ಯೆ ಮೇರಿ ದೀದಿ ಹೈ..." ಎಂದು ನನ್ನನ್ನು ಆಕೆಗೂ... "ಇವ್ರು ನನ್ನ ಮನೆ ಹತ್ತಿರದಲ್ಲೇ ಇಪ್ಪದು... ಚೆನ್ನೈ ಕಡೆಯವು... ಉತ್ತರಭಾರತದಲ್ಲಿ ಮೊದ್ಲು ಇದ್ದಿದ್ದು.. ಈಗ ಇಲ್ಲಿಗೆ ಟ್ರನ್ಸ್ಫರ್ ಆಜೋ..."ಎಂದು ಆಕೆಯನ್ನು ನನಗೂ ಪರಿಚಯಿಸಿದಳು ತಂಗಿ. ಆಕೆಯ ಹೆಸರು... ಊಹೂಂ.. ಎಷ್ಟು ನೆನಪಿಸಿಕೊಂಡರೂ ನೆನಪಿಗೇ ಬರುತ್ತಿಲ್ಲ ಈಗ... ಆದರೆ ಆಕೆಯ ಕಂಕುಳಲ್ಲಿದ್ದ ಎರಡೂವರೆ ವರುಷದ ಹುಡುಗ ಮಾತ್ರ ದಿನಕ್ಕೊಂದು ಹತ್ತಾರು ಸಲವಾದರೂ ನೆನಪಾಗುತ್ತಿರುತ್ತಾನೆ!
ಮೂರು ಜನ ತಾಯಂದಿರು ಸೇರಿದರೆ ಸಹಜವಾಗಿಯೇ ಅವರ ಬಹು ಪಾಲು ಮಾತು ತಮ್ಮ ಮನೆ, ಮಕ್ಕಳ ಸುತ್ತಲೇ ಸುತ್ತುತ್ತದೆ. ಅದರಲ್ಲೂ ಅವರ ಶಾಲೆ, ಆಟ, ತುಂಟಾಟಗಳತ್ತಲೇ ಹೊರಳುತ್ತಿರುತ್ತದೆ. ಅಂತೆಯೇ ಅಂದು ಆಕೆ ಭೇಟಿ ಆದಾಗ ನಾವು ಮೂವರೂ ನಮ್ಮ ನಮ್ಮ ಮಕ್ಕಳ ತುಂಟಾಟ, ಪಾಠ, ಮುಂದಿನ ಕಲಿಕೆ, ಸ್ಕೂಲ್ ಅಡ್ಮಿಷನ್ ಎಲ್ಲದರ ಬಗ್ಗೆ ಮಾತಾಡುತ್ತಿದ್ದೆವು. ಅವರಿಗೆ ಒಂದನೇ ತರಗತಿಯಲ್ಲಿ ಓದುತ್ತಿರುವ ಒಂದು ಹುಡುಗಿ ಹಾಗೂ ಆಕೆ ಕಂಕುಳಲ್ಲೆತ್ತಿಕೊಂಡುರುವ ಎರಡೂವರೆ ವರುಷದ ಹುಡುಗ ಎಂದು ತಿಳಿಯಿತು. ಅಲ್ಲೇ ಹತ್ತಿರ ಆಡುತ್ತಿದ್ದ ಹುಡುಗಿಯ ಚುರುಕುತನ ಮನಸೆಳೆಯುವಂತಿತ್ತು. ಆದರೆ ಹುಡುಗ.....!!!
ಕನ್ನಡ ಬರದ ಆಕೆ ಹಿಂದಿ-ಇಂಗ್ಲೀಷ್ ಭಾಷೆಗಳಲ್ಲೇ ಹೆಚ್ಚು ಸಂಭಾಷಿಸುತ್ತಿದ್ದಳು. ತನ್ನ ಮಗಳನ್ನು ತುಸು ದೂರವಾದರೂ ಉತ್ತಮ ಹೆಸರಿರುವ ಶಾಲೆಯೊಂದಕ್ಕೆ ಸೇರಿಸಿರುವೆನೆಂದೂ... ತಮ್ಮನೆಂಬ ಕಾರಣಕ್ಕೆ ತನ್ನ ಮಗನಿಗೂ ಪ್ರಿ-ನರ್ಸರಿಯಿಂದ ಅಲ್ಲಿಯೇ ಸೀಟು ಸಿಗಬಹುದೆಂದೂ.. ಅಲ್ಲಿಯವರೆಗೆ ಒಂದು ವರುಷ ಹತ್ತಿರದಲ್ಲಿರುವ ಪ್ರತಿಷ್ಠಿತ ಪ್ಲೇ ಹೋಂಗೆ ಹಾಕಬೇಕಿರುವೆನೆಂದೂ... ಹಾಗೆ ಮಾಡಬೇಕೆಂದಿರುವೆ.. ಇವನನ್ನು ಅಲ್ಲಿ ಓದಿಸಬೇಕೆಂದಿರುವೆ... ಅವಳನ್ನು ಆ ರೀತಿ ತಯಾರು ಮಾಡಬೇಕೆಂದಿರುವೆ.... - ಹೀಗೆ ಒಂದೇ ಸಮನೆ ಮಗಳ ಅದರಲ್ಲೂ ಮಗನ ಭವಿಷ್ಯತ್ತಿನ ಬಗ್ಗೆ ಕನಸು ಕಾಣುತ್ತಿದ್ದ... ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಆಕೆಯ ಮೇಲೆ ಮಾತ್ರ ತುಂಬಾ ಸಿಟ್ಟು, ಸ್ವಲ್ಪ ಕರುಣೆ... ಹಾಗೂ ಅತಿ ಹೆಚ್ಚು ಅನುಕಂಪವೂ ಮೂಡುತ್ತಿತ್ತು ನನಗೆ. ಸಿಟ್ಟು ಮೂಡಿದ್ದು- ಒಂದು ಮಗುವನ್ನೂ ಹೆತ್ತೂ, ಅನುಭವಸ್ಥೆಯಾಗಿಯೂ ತನ್ನ ಎರಡನೆ ಮಗುವಿನ ಬೆಳವಣಿಗೆಯ ಪ್ರತಿ ಆಕೆ ತೋರುತ್ತಿರುವ ನಿರ್ಲಕ್ಷತನಕ್ಕೆ... ಕರುಣೆ ಮೂಡಿದ್ದು- ಅವಳ ಪರಿಸ್ಥಿತಿಗೆ.... ಅನುಕಂಪ ಮೂಡಿದ್ದು- ಅವಳ ಅತಿಯಾದ ದಡ್ಡತನಕ್ಕೆ. ಅದಕ್ಕೆ ಕಾರಣ ಅವಳ ಮಗನ ಮಾನಸಿಕ ಸ್ಥಿತಿ!
ಮೊದಲ ನೋಟದಲ್ಲೇ ಅಲ್ಪವಾದರೂ ಜ್ಞಾನವಿರುವವರು ಯಾರೇ ಆಗಿದ್ದರೂ ಊಹಿಸಬಲ್ಲರು... ಆ ಹುಡುಗ ಸಾಮಾನ್ಯ ಮಕ್ಕಳಂತಿಲ್ಲ. ಆತನ ಮಾನಸಿಕ ಸ್ಥಿತಿ ಸಾಮಾನ್ಯ ಮಕ್ಕಳಂತಿಲ್ಲ... ಅವನ ಆಟೋಟ.. ಕಣ್ಣೋಟ.. ಅಷ್ಟೇ ಏಕೆ ನಡಿಗೆ ಯಾವುದೂ "ನಾರ್ಮಲ್" ಆಗಿಲ್ಲ! ದೃಷ್ಟಿ ಅಸಮರ್ಪಕವಾಗಿದೆ... ನಡಿಗೆ ತಪ್ಪಾಗುತ್ತಿದೆ... ಚುರುಕು ನೋಟವಾಗಲೀ... ಮಾತಾಗಲೀ... ಆಟೋಟವಾಗಲೀ ಇಲ್ಲ... ಮಾತೂ ಬರುತ್ತಿಲ್ಲ! "ಅಟಿಸ್ಟಿಕ್(Autistic)" ಇರುವ ಮಕ್ಕಳ ಹೆಚ್ಚಿನ ಚಿಹ್ನೆ ಆತನಲ್ಲಿ ಕಂಡು ಬಂತು. ಹೀಗೇ ಎಂದು ಹೇಳಲು ಈಗಲೇ ಸಾಧ್ಯವಿಲ್ಲ ನಿಜ.... ಆದರೆ ಆ ಪುಟ್ಟ ಹುಡುಗನಲ್ಲಿ ಅಸಮರ್ಪಕ ವರ್ತನೆ ಇರುವುದಂತೂ ಶತ ಸತ್ಯ ಎಂಬುದನ್ನು ಮಾತ್ರ ಖಂಡಿತವಾಗಿಯೂ ಹೇಳಬಲ್ಲೆ! "ವೋ ಅಭೀ.. ಸಿರ್ಫ್ ಡಾಡಾ... ಬೋಲ್ತಾ ಹೈ.. ಏಕ್ ಬಾರ್ ಸ್ಕೂಲ್ ಡಾಲೂಂಗೀ ತೋ ಸೀಕ್ಲೇಗಾ ನಾ..." ಎಂದು ಹೇಳುತ್ತಿರುವುದು ಅವಳ ಮುಚ್ಚುವಿಕೆಯೋ ಇಲ್ಲಾ ಅಜ್ಞಾನವೋ ತಿಳಿಯದು! ಅವನದೇ ವಯಸ್ಸಿನ ನನ್ನ ತಂಗಿಯ ಮಗನ ವರ್ತನೆ... ಆಟ... ಮಾತು.. ಅಷ್ಟೇ ಏಕೆ ಅವನಿಗಿಂತ ಚಿಕ್ಕ ವಯಸ್ಸಿನ ಮಕ್ಕಳ ಆಟೋಟ ಎಲ್ಲವೂ ತೂಗಿದರೂ ಸಾಕು ಆಕೆಗೆ ಅರಿವಾಗಲು... ಅವನಿಗೆ ಉತ್ತಮ ಸ್ಕೂಲಿನ ಬದಲಾಗಿ ಅತ್ಯುತ್ತಮ ವೈದ್ಯಕೀಯ ಸಲಹೆಯ ಅತ್ಯಗತ್ಯತೆ ಇದೆ ಎಂದು!
ಹೆಚ್ಚು ಹೊತ್ತು ನನಗೆ ಅವರೊಡನೆ ವ್ಯವಹರಿಸಲೇ ಆಗಲಿಲ್ಲ. ಅವಳ ಮಾತು, ವರ್ತನೆ... ಎಲ್ಲವೂ ಭವಿಷ್ಯತ್ತಿನೆಡೆಗೇ ಇತ್ತು... ತನ್ನ ಮಗನ ಸ್ಥಿತಿ-ಗತಿ.. ಅವನ ಮಾನಸಿಕ ಅಸಮತೋಲನತೆ ಇದಾವುದರ ಬಗೆಗೂ ಪರಿವೆಯೇ ಇದ್ದಂತಿರಲಿಲ್ಲ.. ಎಲ್ಲರೂ ಒಂದೇ ತರ ಇರರು.... ಒಪ್ಪುವೆ. ಆದರೆ ತೀರಾ ಅಸಹಜತೆ ಯಾವತ್ತೂ ಉತ್ತಮವಲ್ಲ. ತಾಯಿಯಾದವಳು ತನ್ನ ಮಗುವಿನ ಬೆಳವಣಿಗೆ, ಮನೋಗತಿ.. ಕಲಿಕೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಚಿಕ್ಕ ವಯಸ್ಸಿನಲ್ಲೇ ಸರಿಯಾದ ಸಲಹೆ, ಚಿಕಿತ್ಸೆ ಸಿಕ್ಕರೆ ದೊಡ್ಡ ಅಪಾಯ ತಪ್ಪಬಹುದು. ಕಾಲ ಕಳೆದಂತೇ ಎಲ್ಲವೂ ಕಷ್ಟಕರವೇ. ಆ ಹುಡುಗನ ಭವಿಷ್ಯತ್ತು ಆಕೆಯ ಕೈಯಲ್ಲಿದೆ... ಇನ್ನೂ ಕಾಲ ಮಿಂಚಿಲ್ಲ... ಸರಿಯಾದ ಮಾರ್ಗದರ್ಶನ ದೊರೆತರೆ.. ವೈದ್ಯರ ನೆರವು ಪಡೆದರೆ ಆತನೂ ಎಲ್ಲರಂತೇ ಬಾಳ ಬಹುದು. ಇದನ್ನೇ ನಾನು ನನ್ನ ತಂಗಿಯ ಬಳಿಯೂ ಹೇಳಿದೆ. "ನನಗೂ ಇದು ಮೊದಲ ಭೇಟಿಯಲ್ಲೇ ಅರಿವಾಗಿತ್ತು... ಆದರೆ ಹೇಗೆ ಆಕೆಗೆ ತಿಳಿಸುವುದು? ತಪ್ಪು ತಿಳಿದರೆ? ತಾಯಿ ಆದವಳು ಇನ್ನೊಬ್ಬರು ಹೇಳಿದ್ದನ್ನು ಸಹಜವಾಗಿ ತೆಗೆದುಕೊಂಡು ಪರಿಶೀಲಿಸುವುದು ತೀರಾ ಕಡಿಮೆ.. ಹಾಗಾಗಿ ಸುಮ್ಮನಾದೆ. ಅವಳಿಗೆ ಯಾಕೆ ತಿಳಿಯುತ್ತಿಲ್ಲವೋ.. ಕಲಿತವಳು.. ಲೋಕ ನೋಡಿದವಳು.. ಆದರೂ ನಿರ್ಲಕ್ಷಿಸುತ್ತಿದ್ದಾಳೆ..." ಎಂದು ಅಲವತ್ತು ಕೊಂಡಳು ನನ್ನ ತಂಗಿ ಕೂಡ...!
ಹೇಗೆ ಓರ್ವ ತಾಯಿ ತನ್ನ ಅಜ್ಞಾನ, ಅಲ್ಪಜ್ಞಾನದಿಂದಾಗಿ ತನ್ನದೇ ಮಗುವಿನ ಭವಿಷ್ಯವನ್ನು ಹಾಳುಗೆಡವಹುದು ಎನ್ನುವುದಕ್ಕೆ ಇದೊಂದು ಚಿಕ್ಕ ಉದಾಹರಣೆ ಅಷ್ಟೇ. ವಿದ್ಯೆ ಪುಸ್ತಕದ ಬದನೆಕಾಯಿಯಂತೇ ಆಗುತ್ತಿದೆ ಈಗ... ಸಾಮಾನ್ಯ ಜ್ಞಾನದ ಕೊರತೆ ಎದ್ದು ಕಾಣುತ್ತಿರುವುದು ಹೆಚ್ಚಾಗಿ ವಿದ್ಯಾವಂತರಲ್ಲೇ! ಮಗುವಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುವುದು ಆಕೆಯದೊಂದೇ ಕರ್ತವ್ಯವಲ್ಲ. ತಂದೆಯಾದವನೂ ತನ್ನ ಮಕ್ಕಳ ಪ್ರತಿ ಜವಾಬ್ದಾರಿಯುತ ಹೊಣೆ ಹೊರಬೇಕಾಗುತ್ತದೆ. ಕೇವಲ ಅವರ ಓದು, ಆಟ, ಬಟ್ಟೆ ಬರೆ, ಉತ್ತಮ ಸೌಕರ್ಯ ಕಲ್ಪಿಸುವಿಕೆ - ಇವುಗಳಷ್ಟೇ ಹೊಣೆ ಎಂದರಿಯಬಾರದು. ಆಯಾ ವಯಸ್ಸಿಗೆ ತಕ್ಕಂತೇ ಮಾನಸಿಕ, ದೈಹಿಕ ಬೆಳವಣಿಗೆ ಇದೆಯೇ? ಯಾವ ರೀತಿ ಸಾಮಾಜಿಕ ಸ್ಪಂದನೆ ಇದೆ? ಯಾವ ರೀತಿ ತನ್ನ ಭಾವನೆಗಳನ್ನು ಅಭಿವ್ಯಕ್ತಿಸುತ್ತಿದ್ದಾನೆ? ಎಂಬುದನ್ನೂ ಗಮನಿಸುತ್ತಿರಬೇಕು. ಮಗು ಹೆಚ್ಚು ಅಂಟಿಕೊಳ್ಳುವುದು, ಭಾವನಾತ್ಮಕವಾಗಿ ಬೆಸೆದುಕೊಂಡಿರುವುದು ತಾಯಿಯ ಜೊತೆಗೇ. ಹಾಗಾಗಿ ಆಕೆಯ ಹೊಣೆಯೇ ಮಹತ್ತರವಾದದ್ದು. ಹೊತ್ತು ಹೆತ್ತು ಮುದ್ದಿನಿಂದ ಸಾಕಿದರೆ ಮಾತ್ರ ತಾಯ್ತನ ಸಾರ್ಥಕವಾಗದು. ತನ್ನ ಮಗುವಿನ ಸರ್ವತೋಮುಖ ಬೆಳವಣಿಗೆಗೆ ತನ್ನೆಲ್ಲಾ ಶ್ರದ್ಧೆ, ಶ್ರಮವನ್ನು ಧಾರೆ ಎರೆಯುವುದು.. ತನ್ನ ಇಷ್ಟಾನಿಷ್ಟಗಳನ್ನೂ ಒಮ್ಮೊಮ್ಮೆ ತ್ಯಾಗ ಮಾಡಿ ಪ್ರೋತ್ಸಾಹ, ಬೆಂಬಲ ನೀಡುವುದು- ಇದರಲ್ಲೇ ನಿಜವಾದ ತಾಯ್ತನ ಅಡಗಿರುವುದು. ಇದನ್ನು ಸಾರ್ಥಕಗೊಳಿಸಿಕೊಳ್ಳಲು ಸ್ವತಃ ಹೊತ್ತು ಹೆರಬೇಕೆಂದೂ ಇಲ್ಲ. ಎಲ್ಲವುದಕ್ಕೂ ನಮ್ಮೊಳಗಿನ ಸ್ವಂತಿಕೆ, ತಿಳುವಳಿಕೆ, ಶ್ರದ್ಧೆ, ಪ್ರಾಮಾಣಿಕತೆಯೇ ಮುಖ್ಯವಾಗುತ್ತದೆ.
ಆ ತಾಯಿಯ ಮನದೊಳಗೂ ಸತ್ಯದ ಅರಿವಾಗಿ.. ಆ ಮಗುವೂ ಸರ್ವತೋಮುಖ ಬೆಳವಣಿಗೆ ಕಾಣಲೆಂದು ಮನಃಪೂರ್ವಕವಾಗಿ ಪ್ರಾರ್ಥಿಸುತ್ತಿರುವೆ. ಮತ್ತೆ ಎಂದಾದರೂ ಆಕೆ ಸಿಕ್ಕರೆ ನಾನು ಕೆಟ್ಟವಳಾದರೂ ಸರಿ.. ಮೆಲ್ಲನೆ.. ಸೂಕ್ಷ್ಮವಾಗಿ ಆಕೆಗೆ ತಿಳಿಸಿಯೇ ತೀರುತ್ತೆನೆಂದು ಪಣತೊಟ್ಟಿರುವೆ.
-ತೇಜಸ್ವಿನಿ ಹೆಗಡೆ.
14 ಕಾಮೆಂಟ್ಗಳು:
ಉತ್ತಮ ಲೇಖನ....ಆ ಮಗುವಿನ ತಾಯಿ ಮಗುವಿನ ಸಮಸ್ಯೆಯನ್ನು ಮುಚ್ಚಿಡದೆ ಬೇರೆಯವರಲ್ಲಿ ಆ ಮಗುವಿನ ಸಮಸ್ಯೆಯ ಬಗ್ಗೆ ಮಾತಾಡಿದ್ದಾರೆ ಕೆಲವು ಉತ್ತಮ ಸಲಹೆಗಳಾದರೂ ಆಕೆಗೆ ಸಿಗುತಿತ್ತು. 'ಆಟಿಸಂ' ಆದರೆ ಅಂತಹ ಮಕ್ಕಳಿಗೆ ಪ್ರತ್ಯೇಕವಾದ ಶಾಲೆ, ಮಾರ್ಗದರ್ಶನ ಮಾಡುವ ಅನೇಕ ಸಂಘ ಸಂಸ್ಥೆಗಳು ನನಗೆ ತಿಳಿದ ಮಟ್ಟಿಗೆ ದೇಶದ ಎಲ್ಲಾ ಕಡೆಯಲ್ಲಿಯೂ ಇವೆ. ಎಲ್ಲಕ್ಕಿಂತ ಮೊದಲು ಆ ಮಗುವಿನ ತಾಯಿಗೆ ಮಾರ್ಗದರ್ಶನದ ಅವಶ್ಯಕತೆಯಿದೆ ಎಂಬುದು ನನ್ನ ಅಭಿಪ್ರಾಯ...ಆ ಮಗುವಿನ ಭವಿಷ್ಯ ಉತ್ತಮವಾಗಲಿ ಎಂದೂ ಹಾರೈಸುತ್ತೇನೆ....
ತನ್ನ ಮಗು ಎಲ್ಲಾ ಮಕ್ಕಳಂತೆ ಇಲ್ಲ ಎಂದು ತಾಯಂದಿರಿಗೆ ಬೇಗನೆ ತಿಳಿದುಬಿದುತ್ತದೆ .ಆ ತಾಯಿಗೆ ಇಷ್ಟು ಸಾಮಾನ್ಯ ವಿಷಯ ಏಕೆ ತಿಳಿಯಲಿಲ್ಲವೋ ಕಾಣೆ!ಮಗುವನ್ನು ನೆನೆದು ಪಾಪ ಎನಿಸುತ್ತದೆ.
khanDitavaagi satyavaada maatugaLu.....
ellarU odabEkaada lekhana idu....
tumbaa chennaagi tiLihEluva haage barediddIri...
ತೇಜಸ್ವಿನಿ,
ನೀವು ಹೇಳುತ್ತಿರುವದು ಅತ್ಯಂತ ಸರಿಯಾದ ಮಾತಾಗಿದೆ. ತಾಯಂದಿರು ತಮ್ಮ ಮಕ್ಕಳಲ್ಲಿ ಏನಾದರೂ ನ್ಯೂನತೆ ಇದ್ದರೆ, ಅರ್ಥ ಮಾಡಿಕೊಂಡು, ಪರಿಹಾರಕ್ಕೆ ಬೇಗನೆ ಪ್ರಯತ್ನಿಸಬೇಕು.ಅದನ್ನು ಮುಚ್ಚಲು ಪ್ರಯತ್ನಿಸುವದಂತೂ ತಿಳಿಗೇಡಿತನವೇ ಸರಿ.
ನಿಜ ತೇಜಸ್ವಿನಿ ಪೋಷಕರ ಅದರಲ್ಲೂ ತಾಯಿಯಾದವಳ ಕರ್ತವ್ಯ ತುಂಬ ದೊಡ್ಡದು. ಮಕ್ಕಳ ವಯಸ್ಸಿಗೆ ತಕ್ಕಂತೆ ಸರ್ವತೋಮುಖ ಬೆಳವಣಿಗೆ ಆಗುತ್ತಿದೆಯೆ ಎಂಬುದು ತಾಯಾದವಳಿಗೆ ಅರ್ಥವಾಗಬೇಕು. "ಹೆತ್ತವರಿಗೆ ಹೆಗ್ಗಣ ಮುದ್ದು" ಎಂಬ ಗಾದೆಯಂತೆ ಮಕ್ಕಳ ಮಾನಸಿಕ ದೈಹಿಕ ಅಪಸವ್ಯಗಳನ್ನು ನಿರ್ಲಕ್ಷಿಸುವುದು ತಪ್ಪು. ವೈದ್ಯ ವಿಜ್ಞಾನ ಇಷ್ಟೆಲ್ಲ ಮುಂದುವರೆದಿರುವ ಇಂದಿನ ದಿನಗಳಲ್ಲಿ ಅನೇಕ ಮಾನಸಿಕ ದೈಹಿಕ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯ.
ತಾಯಿ ಮೊದಲಗುರು. ಮೊದಲ ವೈದ್ಯೆ - ಎಲ್ಲವೂ ನಿಜ. ಆದರೆ ಗ೦ಡ ಹೆ೦ಡಿರು ಇಬ್ಬರೂ ಹೊರಹೋಗಿ ದುಡಿಯುವ ಇ೦ದಿನ ಧಾವ೦ತದ ಯುಗದಲ್ಲಿ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಕೆಲವರಿಗೆ ಸಮಯವಿಲ್ಲ. ಯಾರೋ ಒಬ್ಬ ಕೆಲಸದಾಳುವನ್ನು ನೇಮಿಸಿದ ಮಾತ್ರಕ್ಕೆ, ಅಥವಾ ದುಬಾರಿ ಶುಲ್ಕ ತೆತ್ತು montessori ಗಳಿಗೆ ಸೇರಿಸಿದ ಮಾತ್ರಕ್ಕೆ ಮಕ್ಕಳ ಬೆಳವಣಿಗೆ ಆಗದು. ತಾಯಪ್ರೀತಿ ಅದು ಬೇರೆಯವರಿ೦ದ ಸಿಗದು. ಇನ್ನು ಮಕ್ಕಳ ಊನದ ಬಗ್ಗೆ ಬೇರೆಯವರು ಮಾತಾಡಿದರೆ ಅಮ್ಮ೦ದಿರಿಗೆ ಬರುವ ಸಿಟ್ಟು, ಅದರಿ೦ದಾಗಿ ಆಗುವ ನಿಷ್ಟುರಗಳು - ಎಲ್ಲವೂ ನಿಜ. ಮಕ್ಕಳು ಬೆಳೆಯುವ ಹಂತದಲ್ಲಿ ಅಮ್ಮ೦ದಿರು ಹೆಚ್ಚಿನ ನಿಗಾ ವಹಿಸುವುದು ಅತ್ಯವಶ್ಯ. ಕಟು ವಾಸ್ತವದ ನೆರಳಿರುವ ಉಪಯುಕ್ತ ಬರಹ.
ಮಕ್ಕಳ ಕಾಳಜಿ ವಹಿಸುವಲ್ಲಿ ತಾಯಿಗೇ ಹೆಚ್ಚು ಹೊರೆ ಇರುತ್ತೆ... ಒಳ್ಳೆಯ ಬರಹ.. ತಿಳುವಳಿಕೆಯನ್ನು ತರುವಂತಹುದೂ ಕೂಡ....
ಮಕ್ಕಳ ಕಾಳಜಿ ವಹಿಸುವಲ್ಲಿ ತಾಯಿಗೇ ಹೆಚ್ಚು ಹೊರೆ ಇರುತ್ತೆ... ಒಳ್ಳೆಯ ಬರಹ.. ತಿಳುವಳಿಕೆಯನ್ನು ತರುವಂತಹುದೂ ಕೂಡ....
ಮೇಡಂ, ಒಳ್ಳೆಯ ಬರಹ. ಶೀರ್ಷಿಕೆ ಓದುತ್ತಿದ್ದಂತೆಯೆ ಇದರಲ್ಲಿ ಏನೋ ಸಂದೇಶವಿದೆ ಎನಿಸಿತು. ಪೋಷಕರು ತಿಳಿದುಕೊಳ್ಳಬೇಕಾದ ಬರಹ.
ಧನ್ಯವಾದಗಳು.
Tumba chennagide. Its informative too
ತು೦ಬಾ ಚೆನ್ನಾಗಿ ವಿಶ್ಲೇಷಿಸಿ ಬರೆದಿದ್ದೀರಿ... ಇಲ್ಲಿ ತಾಯಿಯೊಬ್ಬಳದೇ ಮಾತ್ರ ಅಲ್ಲ, ತ೦ದೆಯದು ಕೂಡ ತಪ್ಪಿದೆ ಅನಿಸುತ್ತದೆ ನನಗೆ....
ಮು೦ದೆ ಅವರನ್ನು ಭೇಟಿ ಆದರೆ, ಖ೦ಡಿತ ಅವರಿಗೆ ತಿಳಿಸಿ ಹೇಳಿ :)
ಮಕ್ಕಳ ಬಗ್ಗೆ ತಂದೆ ತಾಯನ್ನು ನಿದ್ದೆಯಿಂದ ಎಚ್ಚೆತ್ತುಕೊಳ್ಳಲು ತಿವಿಯುವ ಲೇಖನ ಎಂದರೂ ತಪ್ಪಿಲ್ಲ. ಹೌದು ನನಗೆನಿಸಿದಂತೆ ಅರಿತವರದ್ದು ಉದಾಸೀನ ಹೆಚ್ಚು ಅನಿಸುತ್ತೆ ನಿರ್ಲಕ್ಷ್ಯಕ್ಕಿಂತಾ..ಓ ನಾವಿಬ್ಬರೂ ಕಲಿತವರು ಅವರೂ ಕಲೀತಾರೆ ಎನ್ನೋ ಅಥವಾ ಎಲ್ಲಾ ಸರಿಯಾಗೇ ಇದೆಯಲ್ಲಾ ಎನ್ನೋ ಉದಾಸೀನ... ಮಕ್ಕಳ ಊನದ ಬಗ್ಗೆ ಮಾತನಾಡಿದರೆ ತಂದೆಗಿಂತಾ ತಾಯಿ ಹೆಚ್ಚು ಸಿಡಿಯುವ ಸಾಧ್ಯತೆ ಆದ್ದರಿಂದ ನಯವಾಗಿಯೇ ಹೇಳಬೇಕು...ಅದನ್ನು ಡಾಕ್ಟರ ಕಡೆಯಿಂದ (ಅವರಿಗೆ ಎದ್ದು ಕಾಣದ ರೀತಿ) ಮಾಡಿಸಿದರೆ ಇನ್ನೂ ಉತ್ತಮ...
ವೈಚಾರಿಕತೆಯ ನಿತ್ಯೋಪಯೋಗಿ ಲೇಖನ..
ಲೇಖನ ತುಂಬಾ ಚೆನ್ನಾಗಿದೆ. ಸ್ವಂತ ಅನುಭವದಲ್ಲಿ ಲೇಖನ ಮೂಡಿ ಬರಬೇಕು ಎಂಬ ಮಾತಿದೆ. ಇದನ್ನು ಅಕ್ಷರಶಃ ನಿಜರೂಪಕ್ಕಿಳಿಸಿದಂತಿದೆ ಈ ಲೇಖನ. ಮಗುವಿಗೆ ತಾಯಿ ಅತಿ ಮುಖ್ಯ. ಮಗು ತಾಯಿಯಿಂದ ಎಲ್ಲವನ್ನು ಕಲಿಯಲು ತವಕಿಸುತ್ತದೆ. ಏನೇ ಆಗಲಿ ತಾಯಿ ಪ್ರೀತಿಯಲ್ಲಿರುವ ಆ ನಿಷ್ಕಳಂಕತೆ, ನಿಸ್ವಾರ್ಥತೆ, ಮತ್ತಾರಲ್ಲಯೂ ಇರದು, ಅದು ಬಾರದು.
ನಿನ್ನ ಉಪಯುಕ್ತ ಲೇಖನಕ್ಕೆ ಅಭಿನಂದನೆಗಳು .ತಾಯಂದಿರಿಗೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಬೆಳವಣಿಗೆಗಿಂತ ..ತಮ್ಮ ಉದ್ಯೋಗ ,ಹವ್ಯಾಸಗಳು ಹೆಚ್ಚು ಮಹತ್ವಪಡೆದು ಕೊಂಡಿವೆಯೇನೋ ...ಮಕ್ಕಳು ಕಂಪ್ಯೂಟರ್ ನಲ್ಲಿ ಗೇಮ್ಸ್ ಆಡುವುದರಲ್ಲಿ ಮುಳುಗಿರುತ್ತಾರೆ .....ನಾನು ಇತ್ತೀಚಿಗೆ ಕಂಡದ್ದು ಇದು .ನೀನು ಹೇಳಿದಂತೆ ತಾಯಿ ಮಗುವನ್ನು ಎಲ್ಲಾ ದೃಷ್ಟಿಯಿಂದಲೂ ಗಮನಿಸುತ್ತಿರಬೇಕು .
ಕಾಮೆಂಟ್ ಪೋಸ್ಟ್ ಮಾಡಿ