ಸೋಮವಾರ, ಫೆಬ್ರವರಿ 21, 2011

ಆರದಿರಲಿ ಬೆಳಕು...

ಅವಳು ತನ್ನೊಳಗೇ ಸುತ್ತು ಹಾಕಿ ಗಿರಕಿ ಹೊಡೆದು
ಹಳೆಯ ಹೊಸ ಭಾವಗಳ ಮಸೆದು ಹೊಸೆದು
ಅಕ್ಕರೆಯ ಅಕ್ಷರಗಳೆಣ್ಣೆಯಿಂದ ದೀಪಹಚ್ಚುತ್ತಿದ್ದ ಹುಡುಗಿ


ಬೆಳಗುವ ದೀಪದಿಂದೆದ್ದು ಹೊಳೆವ ಅಕ್ಷರಗಳ ಕಿಡಿಗಳ
ಕಣ್ಗಳು ಕಂಡು, ಈ ಮನಸೊಳಗೇ ತುಂಬಿ ಕೊಂಡು ಬಂದು
ನನ್ನ ದೀಪಾಕ್ಷರಗಳ ಬೆಳಗಲು ಬಂದವಳು ನಾನು


ಬತ್ತಿ ಹೊಸೆಯಲು ಬರುತ್ತಿದ್ದರೂ, ಬತ್ತಿ ಹೋಗದ ಎಣ್ಣೆಯ ಹಿಡಿದಿಡುವ
ಆರಿ ಹೋಗುವ ಅಕ್ಷರಗಳನೆಲ್ಲಾ ಒಗ್ಗೂಡಿಸಿ ಸದಾ ಬೆಳಗುವ
ಬೆರಗಿನ ಬೆಳಕಿನ ಪರಿಯ ಕಾಣಿಸಿದಳು, ಒಟ್ಟಾಗಿ ಬೆಳಗ ಕರೆದಳು


ಅದೆಲ್ಲಿತ್ತೋ ನನ್ನ ದೀಪದೊಳು ಹುಮ್ಮಸ್ಸು, ಎಲ್ಲಿಲ್ಲದ ತೇಜಸ್ಸು!
ಬೆಳಗಿತು, ಹೊಳೆಯಿತು, ಹಾಕಿದಷ್ಟೂ ಅಕ್ಷರದೆಣ್ಣೆಯ ಹೊದ್ದು, ಹೊಯ್ದು
ಬತ್ತಿ ಸದಾ ನೆನೆಯುತ್ತಲೇ ಇತ್ತು, ಕಲಿಸಿದವಳ ನೆನೆಯುತ್ತಲೂ ಇತ್ತು...


ಹೊರಗಿನ ದೀಪ ಜಗವ ಬೆಳಗಿದರೆ, ಒಳಗಿನದೆಲ್ಲಾ ಬರೀ ಸುಡುವುದಂತೆ
ಸುಟ್ಟು ಕರಕಲಾದ ಒಡಲಿಂದೆದ್ದ ಹೊಗೆಯ ಕೆಟ್ಟ ವಾಸನೆ ನನ್ನಡರಿಗೂ ತಾಗಿತ್ತು
ನನ್ನೊಳಗಿನ ಅಕ್ಷರದೆಣ್ಣೆಗೆ ಮೊದಲಬಾರಿ ತ(ಕ)ಣ್ಣೀರಿನ ಹನಿಯೊಂದುದುರಿತ್ತು..


ಚಟ ಪಟ, ಚರ ಚರ, ಚುಂಯ್ ಚುಂಯ್ ಸದ್ದು ಮೊದಲಾಗಿ ದೀಪ ಹೆದರಿತ್ತು
ನನ್ನ ಅಂಗೈಯೊಳಗಿನ ಗೂಡೊಳಗೆ ಭದ್ರವಾಗಿದ್ದು ಉರಿಯುತ್ತಿದ್ದರೂ,
ಎಣ್ಣೆಯೊಳಗೆ ಮಾತ್ರ ಒಂದೊಂದೇ ಹನಿ ನೀರುಗಳ ಯುದ್ಧ ಸಾಗೇ ಇತ್ತು


ಬೇಡ ಸಾಕಿನ್ನು, ತಾಳಲಾರೆ ಈ ಬಿಸಿ ಸುಡುತ್ತಿದೆ ಅಂಗೈ ಗೂಡ...
ನನ್ನೊಳಗಿನ ಅಕ್ಕರೆಗಳಿಗೆ ಹಾಕಬೇಕಿದೆ ಪುಟ್ಟದೊಂದು ಬೇಲಿಯ
ಭಾವಗಳ ಬತ್ತಿ ಹೊಸೆವ ಪರಿಯ ಕಲಿಕೆಗೆ ತೆತ್ತಿರುವೆ ಸಾಕಷ್ಟು ಬೆಲೆಯ


- ತೇಜಸ್ವಿನಿ.

14 ಕಾಮೆಂಟ್‌ಗಳು:

ಜಲನಯನ ಹೇಳಿದರು...

ದೀಪದ ಸುತ್ತ ದೀಪದ ಹುತ್ತ...ಒಳಗಿನ ಭಾವನೆಗಳು ಗೂಡುಕಟ್ಟಿದಂತೆ...ಆದ್ರೆ ನನ್ನ ಅರ್ಥೈಸುಕೊಳ್ಳುವಿಕೆ ಯಾಕೋ ಕೈ ಕೊಡ್ತು ಈದಿನ ತೇಜಸ್ವಿನಿ....ದೀಪದ ಬತ್ತಿ, ಎಣ್ಣೆಗಳ ಭಾವ ಸರಿ ಆದ್ರೆ ನೀರಿನೊಡನೆ ಹೋರಾಟ ..? ತನ್ನಲ್ಲಿನ ವಿರೋಧಾಭಾಸಗಳ ತಾಕಲಾಟವೇ...?? ಏನೆನ್ನುವಿರಿ ತೇಜಸ್ವಿನಿ...?
ಚನ್ನಾಗಿದೆ ಭಾವ ಪ್ರಕಟಣೆಯ ನವೀನ ವಿಧಾನ..
........ಅಂಗೈಯೊಳಗಿನ ಗೂಡಳೊಗೆ ಭದ್ರವಾಗಿದ್ದು ....ಗೂಡೊಳಗೆ ..ಆಗ್ಬೇಕಲ್ವಾ?...

ಸೀತಾರಾಮ. ಕೆ. / SITARAM.K ಹೇಳಿದರು...

ತುಂಬಾ ಸಂಕೀರ್ಣವಾದ ಭಾವ ಮತ್ತು ಕವನ. ಮನದಲ್ಲಿನ ಸಂಕೀರ್ಣ ಭಾವವನ್ನ ಘಟನೆ ಸುತ್ತ ನೋಡಿದಾಗ ಮಾತ್ರ ಕವನದ ಆಶಯ ಓದುಗನಿಗೆ ವೆದ್ಯವಾಗುವದೆಂದು ನನ್ನ ಅನಿಸಿಕೆ. ಊಹೆಗೆ -ತೀರಾ ವೈಯುಕ್ತಿಕ ಘಟನೆ ಸುತ್ತಲಿನ ಕವನದ ಭಾವ ಓದುಗನಿಗೆ ಗೊಂದಲವುಂಟು ಮಾಡುತದೆ ಎಂಬುದು ನನ್ನ ಅನಿಸಿಕೆ.
ಅಆದರೆ ತೀವ್ರವಾದ ಭಾವವೊಂದು ಓದುಗನನ್ನು ಕೆನಕುವಲ್ಲಿ ಕವನ ಸಫಲವಾಗಿದೆ.

Ashok.V.Shetty, Kodlady ಹೇಳಿದರು...

ತೇಜಕ್ಕ,

ಅರ್ಥಪೂರ್ಣ ಕವನ, ಕವನದೊಳಗಿನ ಭಾವ ತುಂಬಾನೇ ಇಷ್ಟ ಆಯಿತು...ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ಚೆನ್ನಾಗಿದೆ..

ಮನಸು ಹೇಳಿದರು...

ಚೆನ್ನಾಗಿದೆ ನಿಮ್ಮ ಕವನ... ನೀರು ಬಿದ್ದು ಬತ್ತಿ ಚಡಪಡಿಸದೇ ಇರಲಿ... ಸದಾ ಹುಮ್ಮಸ್ಸಿನ ಲಲನೆಯಂತೆ ಅಲುಗಾಡುತಿರಲಿ ಆ ನಿಮ್ಮ ಅಕ್ಕರೆಯ ಅಕ್ಷರದೆಣ್ಣೆ ಎಂದು ಆಶಿಸುತ್ತೇನೆ.

Kirti ಹೇಳಿದರು...

superb madam.. ur always rocking star..

Pramod P T ಹೇಳಿದರು...

ಹಾಯ್ ತೇಜು ಮೇಡಂ,

ಕವನದೊಳಡಗಿದ ಭಾವನೆಗಳನ್ನ ಪೂರ್ತಿಯಾಗಿ ಅರ್ಥೈಸಿಕೊಳ್ಳಲಾಗದಿದ್ದರೂ, ’ಆರದಿರಲಿ ಬೆಳಕು’ ಎಂದು ಹಾರೈಸುತ್ತಾ...

ಪ್ರಮೋದ್

Sudhesh ಹೇಳಿದರು...

yaavudho nigooDha arthavannu kavana horahommisuvanthide.... aadare adu yenu endu nanna oohege dhakkalilla....

kavanadha Ogha ishtavaayitu tejakka...

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ಕವನದ ಭಾವನೆಗಳು ನನಗೆ ತುಂಬಾ ಇಷ್ಟವಾಯಿತು. ಅದಕ್ಕಾಗಿ ಧನ್ಯವಾದಗಳು.

Vidya ಹೇಳಿದರು...

tumba chennagide kavana... liked it a lot:)

tumkur s.prasd ಹೇಳಿದರು...

" ಆರದಿರಲಿ ಬೆಳಕು " ತನ್ನೊಳಗೆ ತೆರೆದು ಕೊಳ್ಳುತ್ತಾ ಬೆಳೆಯುವ ಪರಿ ನಿಜಕ್ಕೂ ಸೋಜಿಗ

Unknown ಹೇಳಿದರು...

kannada ne nan prana

ತೇಜಸ್ವಿನಿ ಹೆಗಡೆ ಹೇಳಿದರು...

ಕವಿತೆ ಮೆಚ್ಚಿ ಸ್ಪಂದಿಸಿದ, ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು.

-ತೇಜಸ್ವಿನಿ ಹೆಗಡೆ.

venkat.bhats ಹೇಳಿದರು...

kavana ishtavaaytu