ಮಂಗಳವಾರ, ಫೆಬ್ರವರಿ 8, 2011

ಬದುಕು ಪಗಡೆಯ ಆಟ... ದಾಳ ಅದರ ಸಾಹೇಬ

ಇತ್ತೀಚಿಗೆ ಈ ಪಗಡೆಯಾಟದ ಹುಚ್ಚು ತುಸು ಜಾಸ್ತಿಯೇ ಆಗುತ್ತಿದೆ... (ಲೂಡೋ). ಹಿಂದೆ ಚಿಕ್ಕವರಿದ್ದಾಗ ಊರಿಗೆ ಹೋದಾಗ ನಾನೂ ನನ್ನ ಚಿಕ್ಕಪ್ಪನ ಮಕ್ಕಳೆಲ್ಲಾ ಸೇರಿ "ಬಳೇವೋಡಾಟ" ಆಡುತ್ತಿದ್ದೆವು. ಈ ಆಟವೂ ಪಗಡೆಯಾಟದಂಥದ್ದೇ. ಮನೆಯ ಮೇಲಂಕಣದಲ್ಲಿ ಸಗಣಿಯಿಂದ ನುಣ್ಣಗೆ ಸಾರಿಸಿದ್ದ ಮೆತ್ತಿಯ ನೆಲದ ಮೇಲೆ ಸೀಮೆಸುಣ್ಣದಲ್ಲಿ ಪಗಡೆಯ ಮನೆ ಬರೆದು (ಲೂಡೋ ಬೋರ್ಡ್ ನಕ್ಷೆ) ೬ ಪಗಡೆಗಳನ್ನೇ ದಾಳವಾಗಿ ಉಪಯೋಗಿಸಿ ಆಡುತ್ತಿದ್ದೆವು. ಮನೆಯನ್ನು ನಡೆಸಲು ಕಾಳುಗಳಾಗಿ ಒಡೆದ ಬಳೆಗಳನ್ನು ಬಳಸುತ್ತಿದ್ದೆವು. ರಂಗು ರಂಗಿನ ಪುಟ್ಟ ಪುಟ್ಟ ಬಣ್ಣದ ಬಳೆಗಳನ್ನು ಉಪಯೋಗಿಸಿ ಆಡುತ್ತಿದ್ದ ಆ ದಿನಗಳ ನೆನಪು ಮಾತ್ರ ಹಚ್ಚ ಹಸಿರು.

ಒಂದೇ ಬಣ್ಣದ ನಾಲ್ಕು ಬಳೆಚೂರುಗಳನ್ನು ಇಟ್ಟುಕೊಂಡು, "ವಚ್ಚಿ(=ಒಂದು), ದುಕ್ಕಿ(=ಎರಡು)..." ಎಂದೆಲ್ಲಾ ದಾಳ ಹಾಕುತ್ತಾ... ಮುನ್ನೆಡೆಯುತ್ತಿರುವಾಗಲೇ ಹಿಮ್ಮೆಟ್ಟಿ ಬರುವ ಬೇರೆ ಮನೆಯ ಬೇರೆ ಬಣ್ಣದ ಬಳೆ ಚೂರುಗಳು ಸಮಯ ಸಾಧಿಸಿ ನನ್ನ ಬಳೆಚೂರನ್ನು ಹೊಡೆದು ಮತ್ತೆ ಪ್ರಾರಂಭಕ್ಕೇ ತಂದು ನಿಲ್ಲಿಸಿ ಮುನ್ನೆಡೆವಾಗ ಮಾತ್ರ ಅಸಾಧ್ಯ ಕೋಪವೇ ಬಂದು ಬಿಡುತ್ತಿತ್ತು. ಆದರೂ ಮತ್ತೆ ಯತ್ನವ ಮಾಡಿ ಆರು ಬೀಳಿಸಿ ಹೊರ ಬಂದು ಹೊಡೆದವರಿಗೇ ಮತ್ತೆ ಹೊಡೆತ ಕೊಟ್ಟು ಮುನ್ನುಗ್ಗಿ ಅಂತಿಮವಾಗಿ ಮನೆ ತಲುಪಿದಾಗ "ಅಬ್ಬಾ! ಮಲಗ್ದಿ.." ಅನ್ನೋ ನಿರುಮ್ಮಳತೆಯನ್ನು ಮಾತ್ರ ಈವರೆಗೂ ಯಾವುದರಲ್ಲೂ ಪಡೆದಿಲ್ಲ!:)

ಅಂದಿನ ಬಳೆವೋಡಾಟ, ಪಗಡೆಯಾಟ, ಇಂದಿನ ಲೂಡೋ ರೂಪ... ಎಲ್ಲವೂ ಒಂದೇ. ಅದೇ ಆಟ, ಅದೇ ಕಾಳುಗಳು, ಒಂದರಿಂದ ಆರು ಚುಕ್ಕಿಗಳನ್ನೊಳಗೊಂಡ ದಾಳ... ಹಿಮ್ಮೆಟ್ಟಿ ಸಾಗುವಾಗ ನಡುವೆ ಸಿಗುವವರ ಕಾಳುಗಳನ್ನು ಹೊಡೆದು ಮುನ್ನುಗ್ಗುವಿಗೆ, ಹೊಡೆತ ತಿಂದು ಹಿಮ್ಮೆಟ್ಟುವಿಕೆ... ಎಲ್ಲವೂ ಅದೇ. ಆದರೆ ಬಾಲ್ಯದ ಆ "ಮಲಗ್ದಿ.." ಅನ್ನೋ ನಿರುಮ್ಮಳತೆಯ ಭಾವ ಮಾತ್ರ ಹೆಚ್ಚು ಕಾಲ ಬಾಳುವಂಥದ್ದಲ್ಲ.

ಕೆಲ ದಿನಗಳಿಂದ ನಾವೂ ಈ ಲೂಡೋ(ಪಗಡೆಯಾಟ) ಆಟವನ್ನು ದಿನವೂ ಆಡುತ್ತಿದ್ದೇವೆ. ಪುಟ್ಟಿಗಂತೂ ಒಂದು ಬಿದ್ದರೂ, ನಾಲ್ಕು ಬಿದ್ದರೂ ಆರೇ ಬೇಕೆಂಬ ಹಠ. ಅದಕ್ಕಾಗಿ ಚೆನ್ನಾಗಿ ಆರನ್ನೇ ಆರಿಸಿ ಇಟ್ಟು ಬಿಡುತ್ತಾಳೆ. ಒಪ್ಪಿಕೊಳ್ಳುವ ಅನಿವಾರ್ಯತೆ ನಮ್ಮದು...:) ಅವಳಿಗೆ ಸೋಲಿನ ಪರಿಭಾಷೆ ಗೊತ್ತಿಲ್ಲ... (ಸದ್ಯ ಗೊತ್ತಾಗುವುದೂ ಬೇಡ)... ಹಾಗಾಗಿ ಎಲ್ಲಾ ಆಟದಲ್ಲೂ ಗೆಲುವು ಅವಳದೇ.

ಬದುಕೂ ಇದೇ ತರಹ ಪ್ರತಿ ಸೋಲಿನಲ್ಲೂ ಗೆಲುವನ್ನೇ ಕಾಣುಸಿವಂತಿದ್ದರೆ.... ಎಲ್ಲಾ ಸಲವೂ ದಾಳದಲ್ಲಿ ಆರೇ ಬೀಳುವಂತಿದ್ದರೆ.... ನಾಲ್ಕೂ ಕಾಳುಗಳೂ ಸರಾಗವಾಗಿ, ಹೊಡೆತವನ್ನೇ ತಿನ್ನದೇ ಸಾಗಿ, ಮನೆಯನ್ನು ಮುಟ್ಟಿ ಮಲಗುವಂತಿದ್ದರೆ.... - ಊಹೂಂ... ಇಲ್ಲಿ ಮಾತ್ರ ಈ ‘ರೆ’ಗಳು ಇಷ್ಟವಾಗವು. ಆಟದ ಮಜವಿರುವುದು ಸೋಲಿನಲ್ಲಿ.. ಸೋತು ಗೆಲ್ಲುವುದರಲ್ಲಿ.... ಹೊಡೆತ ತಿನ್ನುವುದರಲ್ಲಿ.. ತಿಂದು ಮತ್ತೆ ತಿರುಗಿ ಬರುವುದರಲ್ಲಿ. ಎಲ್ಲವನ್ನೂ ಜಯಸಿ ಆಮೇಲೆ ಮನೆ ಸೇರುವುದರಲ್ಲಿರುವ ಸಂತೋಷ ಆ ‘ರೆ’ಗಳಲ್ಲಿಲ್ಲ.

ಪಗಡೆಯಾಟದಂತೇ ಇಲ್ಲೂ... ಅಂದರೆ ಬದುಕಲ್ಲೂ ಯಾರೂ ಮಿತ್ರರಲ್ಲ.. ಯಾರೂ ಶತ್ರುವಲ್ಲ. ಆ ಕ್ಷಣಕ್ಕೆ ನಮ್ಮನ್ನು ಹೊಡೆಯದವ.. ನಮ್ಮನ್ನು ಸುಮ್ಮನೇ ಬಿಟ್ಟು ದಾಟಿದವ ಮಿತ್ರ... ಹೊಡೆದವ... ಹೊಡೆಯಲೆಂದೇ ಹಿಂದೆ ಬಿದ್ದವ ಮಾತ್ರ ಶತ್ರು. ಎಲ್ಲಾ ಭಾವಗಳ ಮೇಲಾಟ. ಆರಂಭದಿಂದ ಅಂತ್ಯದವರೆಗೂ ಅನಿಶ್ಚಿತತೆಯ, ಅನುಮಾನದ, ಅದೃಷ್ಟದ ಆಟ. ಕೇವಲ ದಾಳ ಮಾತ್ರ ಅದರ ಗತಿಯನ್ನು, ಗೆಲುವಿನ ರೂಪವನ್ನು ಕಾಣಿಸಬಹುದು. ಒಂದು ಬಿದ್ದರೆ ಮನೆಯನ್ನೂ ಸೇರಬಹುದು.. ಮುಂದಿದ್ದವರನ್ನೂ ಹೊಡೆಯಬಹುದು ಹಾಗೇ ನಮಗೂ ಹೊಡೆತ ನೀಡಬಹುದು. ಆದರೆ ಆರು ಮಾತ್ರ ಸದಾ ಮುನ್ನೆಡೆಸುತ್ತಲೇ ಇರುತ್ತದೆ.. ಹೊಡೆತ ಕೊಟ್ಟರೂ ಮತ್ತೆ ಹೊರ ಬರಲೂ ಕಾರಣವಾಗಿರುತ್ತದೆ. ಅಂತಹ ಆರು ಚುಕ್ಕೆಯ ಬೀಳುವಿಕೆಗಾಗಿ ಆ ದಾಳದ ಮೊರೆ ಹೋಗುವುದು ಮಾತ್ರ ನಮ್ಮ ಕೈಲಿದೆ. ಬಿದ್ದರೆ ಮುಂದೆ.. ಬೀಳದಿದ್ದರೆ ಇನ್ನೊಂದು ಅವಕಾಶಕ್ಕಾಗಿ ನಿರೀಕ್ಷೆ ಅಷ್ಟೇ!

ಒಮ್ಮೆ ಮುಂದಿದ್ದವ ಸಂಪೂರ್ಣವಾಗಿ ಪುನರಾರಂಭ ಮಾಡುವಂತಾಗಬಹುದು. ತೀರಾ ಹಿಂದೆ ಬಿದ್ದವ ಒಮ್ಮೆಲೇ ಮುನ್ನುಗ್ಗಿ ಮನೆ ಸೇರುವಂತಾಗಲೂ ಬಹುದು. ಎಲ್ಲವೂ ಆ ಸೂತ್ರಧಾರನ ಕೈಲಿದೆ. ಆತನೇ ದಾಳ... ನಾವೆಲ್ಲಾ ಕಾಳುಗಳು(ಬಳೆವೋಡುಗಳು), ಈ ನಮ್ಮ ಬದುಕೇ ಪಗಡೆಯ ಮನೆ.... ಪಯಣ ಮನೆಯ ಕಡೆಗೆ... ವಚ್ಚಿ, ದುಕ್ಕಿ, ಮೂರು, ಆರು... ಎನ್ನುತ್ತಾ ಸಾಗುವುದೇ ಜೀವನ.

-ತೇಜಸ್ವಿನಿ ಹೆಗಡೆ

Pics Courtesy : 1. http://www.bombayharbor.com/Product/28920/M_Folding_Ludo_Game.html
                 2. http://www.alibaba.com
                 3. http://www.grand-illusions.com 

22 ಕಾಮೆಂಟ್‌ಗಳು:

ವಾಣಿಶ್ರೀ ಭಟ್ ಹೇಳಿದರು...

ಪಗಡೆ ಆಟವನ್ನು ಬದುಕಿಗೆ ಹೊಲಿಸಿ ಬರೆದ ರೀತಿ ಚೆನ್ನಾಗಿದೆ.ಕೆಲವೊಂದು ಸಾಲುಗಳು ಮನಸ್ಸಿಗೆ ನಾಟಿದವು.

ಮನಸು ಹೇಳಿದರು...

ಚೆನ್ನಾಗಿದೆ ಲೇಖನ. ಜೀವನವೇ ಒಂದು ಪಗಡೆಯಾಟ ಅಲ್ಲಿ ಏಳುಬೀಳುಗಳು ಇರುತ್ತೆ... ಸೋತು ಗೆಲ್ಲುವುದರ ಹಿಂದೆ ಸಂತಸ ಹೆಚ್ಚಿರುತ್ತೆ... ಬದುಕನ್ನು ಆಟಕ್ಕೆ ಹೋಲಿಸಿದ ರೀತಿ ಚೆಂದವೆನಿಸಿತು...

ಸುಶ್ರುತ ದೊಡ್ಡೇರಿ ಹೇಳಿದರು...

ಹ್ಮ್.. ಪಗಡೆ ಒಳ್ಳೇ ನೆನಪು.

ನಾನು ರಜೆಗೆ ಅಜ್ಜನಮನೆಗೆ ಹೋದಾಗ್ಲೆಲ್ಲ ಹೊಸೊಕ್ಲೋರ ಮನೆ ಪ್ರಶಾಂತನ ಜೊತೆ ಪಗಡೆ ಆಡ್ತಿದ್ದದ್ದು. ಅವನ ಚಿಕ್ಕಪ್ಪ ಮತ್ತು ಅಜ್ಜಿ ಸಹ ಸೇರ್ಕೋತಿದ್ರು. ಅವರ ಮನೆ ಚೌಕಿಯ ಕೆಂಪುಗಾರೆ ನೆಲದಲ್ಲಿ ಪರ್ಮನೆಂಟ್ ಪಗಡೆಮನೆ ಪಟ ಇತ್ತು (ಅಂದ್ರೆ ಗಾರೆ ಮಾಡಿಸ್ಬೇಕಾದ್ರೇ ಗುರುತು ಮಾಡಿಸಿದ್ದು). ಸೌಭದ್ರಜ್ಜಿದಂತೂ ಅದೇನ್ ಕೈಗುಣವೇನೋ, ಬರೀ ಚಿತ್ತ (6 count) ಭಾರ (12 count)ವೇ ಬೀಳ್ತಿದ್ದದ್ದು! ಅದೂ ಬೇಕಬೇಕಾದಂಗೆ! ವಚ್ಚಿ ಬೇಕು ಅಂದ್ರೆ ವಚ್ಚಿ, ದುಕ್ಕಿ ಬೇಕು ಅಂದ್ರೆ ದುಕ್ಕಿ! ನಮಗೆಲ್ಲ ಸಿಕ್ಕಾಪಟ್ಟೆ ಹೊಟ್ಟೆಉರಿ. "ಅದು ಹೆಂಗ್ ಹಾಕ್ತೆ ಹೇಳ್ಕೊಡು" ಅಂತ ಒಂದೇ ಸಮನೆ ಕಾಟ. "ಅಯ್ಯೋ ಯಂದ್ ಎಂತೂ ಇಲ್ಯಾ ಹುಡ್ರಾ, ಆನು ಹಾಕ್ತಿ ಅಷ್ಟೇ, ಅದು ಬೀಳ್ತು" ಅಂತ ತಪ್ಪಿಸಿಕೊಳ್ತಿದ್ಲು! ನಾವು ಹೊಡೆಸ್ಕೊಂಡ್ ಹೊಡೆಸ್ಕೊಂಡ್ ವಾಪಸ್ ಮನೆಗೆ ಹೋಗೋದು, ಇವರು ಮಾತ್ರ ಮುಂದೆ ಮುಂದೆ ಹೋಗೋದು!

ಆದ್ರೆ ಅವರ ಮನೇಲಿ ಇದ್ದ ಪಗಡೆಗಳಲ್ಲಿ ಸುಮಾರು ಒಡೆದು ಹೋಗಿ ಆಮೇಲೆ ಕೆಲವು ಕಳೆದೂ ಹೋದ್ವು. ಆಮೇಲೆ ನಾವು ಕರವೀರದ ಗಿಡದಲ್ಲಿ ಕಾಯಿ ಬಿಡುತ್ತಲ್ಲ, ಅದನ್ನ ಒಡದ್ರೆ ಅದರೊಳಗೆ ಪಗಡೆ ಥರದ್ದೇ ಬೀಜಗಳು ಇರ್ತಾವೆ. ಅದನ್ನ ಪಗಡೆಯ ಹಾಗೆ ಬಳಸ್ತಿದ್ದದ್ದು. ಪ್ರತಿ ಸಲದ ರಜೆಗೆ ಹೋದಾಗ್ಲೂ ನಾಗಂದಿಗೆ ಮೇಲೆಲ್ಲೋ ಇರ್ತಿದ್ದ ಪಗಡೆಕಾಯಿಗಳನ್ನ ಹುಡುಕಿ ತೆಗೆದು, ಆಮೇಲೆ ಹಿತ್ಲಿಗೆ ಹೋಗಿ ಕರವೀರದ ಗಿಡದ ಕಾಯಿ ಕೊಯ್ದು, ಒಡೆದು, ಅದರ ಹಯನ ಎಲ್ಲಾ ಮೈಕೈಗೆ ಹಚ್ಕೊಂಡು, ಚೊಕ್ಕ ಮಾಡಿ ತಂದು, ಚಿಕ್ಕಪ್ಪ-ಅಜ್ಜಿಯರನ್ನು "ಕೆಲ್ಸಿದ್ದೋ ಬರದಿಲ್ಲೆ" ಅಂದ್ರೂ ಕೇಳದೇ ಎಳಕೊಂಡು ಬಂದು ಕೂರಿಸಿ -ಅಷ್ಟೆಲ್ಲಾ ಸಂಭ್ರಮ ಮಾಡಿ ಪಗಡೆಯಾಡುವುದರಲ್ಲಿ ಸಖತ್ ಮಜಾ ಇತ್ತು.

ಈಗ ನಾನು ಅಜ್ಜನಮನೆಗೆ ಹೋಗುವುದು ವರ್ಷಕ್ಕೊಮ್ಮೆ, ಹೊಸೊಕ್ಲೋರ ಮನೆಯ ಚೌಕಿಯನ್ನ ರಿನೋವೇಷನ್ ಮಾಡ್ಸಿ ನೆಲಕ್ಕೆ ಟೈಲ್ಸ್ ಹಾಕಿಸಿದ್ದಾರೆ, ಪ್ರಶಾಂತ ಓದಲಿಕ್ಕೆಂದು ಹೊರಗಡೆಯೆಲ್ಲೋ ಇದ್ದಾನೆ, ಪಗಡೆಯ ಕಾಯಿಗಳು ಎಲ್ಲಿವೆಯೋ ಗೊತ್ತಿಲ್ಲ... ಕರವೀರದ ಗಿಡ ಮಾತ್ರ ಇನ್ನೂ ಕಾಯಿಬಿಡುತ್ತಾ ನಾವು ಬಂದೇವೇನೋ ಅಂತ ಕಾಯ್ತಿದೆ..

Dileep Hegde ಹೇಳಿದರು...

ಪಗಡೆಯಾಟವನ್ನ ಜೀವನದೊಂದಿಗೆ ತುಲನೆ ಮಾಡ್ತಾ ಮಾಡ್ತಾ ನಮ್ಮನ್ನೂ ಬಾಲ್ಯದ ನೆನಪಿನಲೆಗಳಲ್ಲಿ ತೇಲಿಸಿಬಿಟ್ರಿ..!ಹಾವು ಏಣಿ ಆಟ, ಪಗಡೆಯಾಟ ಇವೆಲ್ಲ ಜೀವನದಲ್ಲಿ ಮುಂದೆ ಎದುರಾಗಬಹುದಾದ ಏರಿಳಿತಗಳನ್ನ ಬಾಲ್ಯದಲ್ಲೇ ನಮ್ಮ ಅರಿವಿಗೆ ಬರುವಂತೆ ಮಾಡುವ ಆಟಗಳು..

ಸುಶ್ರುತ ಅವರು ಹೇಳಿದ ಹಾಗೆ ಅಲ್ಲೆಲ್ಲೋ ನನ್ನ ಅಜ್ಜನ ಊರಿನಲ್ಲೂ ಕರವೀರದ ಗಿಡಗಳು ನಮ್ಮ ಬರವನ್ನು ಕಾಯುತ್ತಿವೆ..
ಚೆಂದದ ಬರಹಕ್ಕೆ ಧನ್ಯವಾದಗಳು...

ವನಿತಾ / Vanitha ಹೇಳಿದರು...

ಚೆಂದ ಬರದ್ದೆ ತೇಜು:)..ನಮ್ಮನೇಲೂ ಅಷ್ಟೇ!! ಮಗಳಿಂಗೆ
ಯಾವಗ್ಲ್ಲೂ ಆರೇ ಬಿದ್ದದು ಹೇಳಿ ಹಠ,ಮತ್ತೆ ಹಾವು-ಏಣಿ ಆಟದಲ್ಲಿ ಯಾವತ್ತೂ ಅವಳಿಗೆ ಹಾವೇ ಸಿಗಲ್ಲ!!:D

ಮಧು ಹೇಳಿದರು...

ಸೂಪರ್! ಬಳೆ ವೋಡು ಆಟ ನೆನಪಾತು. ಸುಶ್ರುತಾ ಹೇಳ್ದಾಂಗೆ ಕರವೀರದ ಬೀಜಾನೂ ನೆನಪಾತು.
ಚೆನ್ನಾಗಿದ್ದು.

ಸುಮ ಹೇಳಿದರು...

ಚಂದದ ಲೇಖನ ತೇಜಸ್ವಿನಿ . ನನಗೂ ಪಗಡೆಯಾಟ ಫೆವರೇಟ್. ನನ್ನ ತವರುಮನೆಲಿ ದಿನಾ ಅಪ್ಪ, ಚಿಕ್ಕಪ್ಪರ ಜೊತೆ ಆಡ್ತಿದ್ದಿ. ಈಗಲೂ ಊರಿಗೆ ಹೋದಾಗ ಆಡ್ತಿ. ಅದ್ಯಾಕೊ ಮಗಳ ಲೂಡೊ ನಂಗೆ ಇಷ್ಟನೆ ಆಗಲ್ಲೆ.

sunaath ಹೇಳಿದರು...

ತೇಜಸ್ವಿನಿ,
ಬಾಲ್ಯದ ಆಟಗಳನ್ನು ನೆನೆಪಿಸಿದಿರಿ. ಮನಸ್ಸು ಕನಸಿನಲ್ಲಿ ತೇಲಿತು.

Subrahmanya ಹೇಳಿದರು...

ಮನಸನ್ನು ಹಗುರಾಗಿಸುವ, ಹೊಸಮಳೆ ಬಂದಾಗ ಹರಡುವ ಮಣ್ಣಿನ ಘಮದ ತೆರನಾದ ಲೇಖನ. ಇಂತಹ ನವಿರಾದ ಬರಹಗಳು ಮನಸ್ಸನ್ನು ಪ್ರಶಾಂತವಾಗಿರಿಸುತ್ತವೆ.

Harisha - ಹರೀಶ ಹೇಳಿದರು...

ತೇಜಕ್ಕಾ, ಪಗಡೆಯಾಟದ ಹೆಸರು ಹೇಳಿ ನನ್ನ ಅಮ್ಮಮ್ಮನ ನೆನಪು ಮಾಡಿದೆ.. ಅಮ್ಮಮ್ಮ ಇದ್ದಾಗ ಕೈ ನೋಯ್ತು ಹೇಳಿರೂ ಕೇಳದೆ ಎಳ್ಕ ಬಂದು ಕೂರ್ಸಿ ಆಡ್ತಿದ್ದಿ.. ಅಮ್ಮಮ್ಮ ಹೋಗಿ ಇದೇ ತಿಂಗಳ ೧೩ಕ್ಕೆ ೧೦ ವರ್ಷ ಆತು.. ಪಗಡೆಯಾಟದಲ್ಲಿ ಉಪಯೋಗಿಸ್ತಿದ್ದ "ವಚ್ಚಿ", "ಪೂಳ್ಯ", "ಚಿತ್ತ", "ದಸ್ತು", "ಜೂಗ" - ಈ ಪದಗಳು ಮರ್ತೇ ಹೋದಾಂಗಾಗಿತ್ತು.. ಮತ್ತೆ ನೆನಪು ಮರುಕಳಿಸುವಂತೆ ಮಾಡಿಕೊಟ್ಟಿದ್ದಕ್ದೆ ಧನ್ಯವಾದ. ಬದುಕಿಗೆ ಹೋಲ್ಸಿರದು ಚೆನ್ನಾಗಿದ್ದು..

ಶಾಂತಲಾ ಭಂಡಿ ಹೇಳಿದರು...

ತೇಜು...
ತುಂಬ ಚೆನಾಗಿದ್ದು, ಆ ಬಾಲ್ಯವೇ ಅಂಥದ್ದು, ಬಾಲ್ಯದ ನೆನಪೇ ಚಂದದ್ದು. ಅದನ್ನೆಲ್ಲ ಹೀಗೆ ಚಂದವಾಗಿ ಕಟ್ಟಿಕೊಡೋರು ಬೇಕಷ್ಟೇ.

ಪ್ರೀತಿಯಿಂದ,
-ಶಾಂತಲಾ ಭಂಡಿ

ಸುಧೇಶ್ ಶೆಟ್ಟಿ ಹೇಳಿದರು...

nangoo ishta e aata... baalyadalli aata aadutiddudu, jagala maaduttiddu yellavoo nenapaayitu... idhe tharaha ishta aaguttidda innondu aata channe maNe :)

PARAANJAPE K.N. ಹೇಳಿದರು...

ನಾನು ಸಣ್ಣವನಿದ್ದಾಗ ಚೆನ್ನಮಣೆ ಆಟ ಆಡುತ್ತಿದ್ದೆವು. ಅದಕ್ಕೆ ಗುಲಗು೦ಜಿ ಕಾಯಿ ಉಪಯೋಗಿಸುತ್ತಿದ್ದರು. ನಿಮ್ಮ ಪಗಡೆ ಆಟದ ಕಥೆ ಓದಿದಾಗ ಹಳೆಯ ನೆನಪು ಮರುಕಳಿಸಿತು.

ಚುಕ್ಕಿಚಿತ್ತಾರ ಹೇಳಿದರು...

ತೇಜಸ್ವಿನಿ
ಬರಹ ತು೦ಬಾ ಸು೦ದರವಾಗಿದೆ..
ಜೀವನವೆ೦ಬ ಪಗಡೆಯಾಟದಲ್ಲಿ ಭಾರ, ಚಿತ್ತ ಬೀಳಿಸಿ ಜೂಗ ಕಟ್ಟುವುದೂ ಸ೦ಸ್ಕಾರದ ಪಟದಲ್ಲಿ ಕಾಯಿ ನಡೆಸುವುದೂ ಒ೦ದು ಕಲೆಯಲ್ಲವೇ..
ಯಾರ ಜೂಗ ಮು೦ದೆ ಸಾಗಿ ಗೆಲ್ಲುವುದೊ ದಾಳಕ್ಕೆ ಗೊತ್ತು..!!

manju ಹೇಳಿದರು...

ನಮ್ಮ ಬದುಕನ್ನು ಪಗಡೆ ಆಟಕೆ ಹೋಲಿಸಿ ಬರೆದಿರುವ ಲೇಖನ ತುಂಬಾ ಚೆನ್ನಾಗಿದೆ. ಜೀವನದಲ್ಲಿ ಏರು- ಇಳಿತ ಇರಲೇಬೇಕು ಅಲ್ವೇ? ಆಗಲೇ ನಮ್ಮ ಜೀವನದ ಅನುಭವ ಗೊತ್ತು ಆಗೋದು :)

ದಿವ್ಯಾ ಹೇಳಿದರು...

ಈ ಭೂಮಿ ಬಣ್ಣದ ಬುಗುರಿ..ಆ ಶಿವನೇ ಚಾಟಿ...ಅನ್ನುವ ಹಾಡು ನೆನಪಾಯಿತು. ತಲೆ ಬರಹ ಚನಾಗಿದ್ದು....ಇಷ್ಟ ಆತು ಲೇಖನ ತೇಜಕ್ಕ ..:-)

ತೇಜಸ್ವಿನಿ ಹೆಗಡೆ ಹೇಳಿದರು...

@ವಾಣಿಶ್ರೀ,

ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದ.

@ಮನಸು ಮೇಡಂ,

ನಿಜ... ಸೋತ ಸೋಲಿನ ಕಹಿಯಾನಂತರದ ಗೆಲುವಿನ ಸಿಹಿ ಮಾತ್ರ ಅಪರಿಮಿತ! ತುಂಬಾ ಧನ್ಯವಾದ

@ಸುಶ್ರುತ,

ಹ್ಮ್ಂ.... ಎಂತಾ ಹೇಳ್ಲಿ? ಚಿತ್ತ, ಭಾರ - ಈ ಪದಗಳು ಮರ್ತೇ ಹೋಗಿದ್ವು.. ಊರಿಗೆಲ್ಲಾ ನನ್ನ ಚಿಕ್ಕಪ್ಪನ ಮಕ್ಕಗೆ ಫೋನ್ ಮಾಡಿ ಕೇಳ್ದಿ.. ಅವ್ಕೂ ಮರ್ತು ಹೋಗಿತ್ತು.. ವಚ್ಚಿ, ದುಕ್ಕಿ ಮಾತ್ರ ನೆನ್ಪಿತ್ತು ನಂಗೆ... ನೆನ್ಪಿಸಿದ್ದಕ್ಕೆ ತುಂಬಾ ಥಾಂಕು.... :)

ಕರವೀರದ ಕಾಯಿ ಬಗ್ಗೆ ಗೊತ್ತಿತ್ತಿಲ್ಲೆ... ನಾವು ಆಡಿದ್ದೆಲ್ಲಾ ಬಣ್ಣ ಬಣ್ಣದ ಬಳೆ ಚೂರುಗಳ ಬಳೆವೋಡಾಟ! ಆಹಾ.. ಆ ಆಟದ ಸೊಬಗು, ರಂಗಿನ ಮುಂದೆ.. ಈಗೈನ ಕಲರ್ ಫುಲ್ ಲೂಡೋ ತೀರಾ ಸಪ್ಪೆ!

ಬಳೆ ಚೂರುಗಳನ್ನ ಆರಿಸುವಾಗ, "ನಂಗೆ ಪಚ್ಚೆ,... ಯಂಗಂತೂ ಕೆಂಪು ಬೇಡ್ದಪ್ಪಾ... ಕೆಂಪಿಟ್ಕಾಂಡಾಗೆಲ್ಲಾ ಹೊಡ್ತ ತಿಂಜಿ... ಯಂಗಂತೂ ನೌಲ್ ಬಣ್ಣದಡ್ಡಿಲ್ಲೆ... ಮೂರ್ಸಾರಿ ಗೆಜ್ಜಿ...." ಹೀಗೆಲ್ಲಾ ಸಂಭ್ರಮದಿಂದ ಆರಂಭವಾಗುತ್ತಿದ್ದ ಆಟ... ಕೊನೆಯಿಲ್ಲದ ನಗು, ಮುನಿಸು ರಮಿಸುವಿಕೆ... ಒಂದ್ಸಲನಾದ್ರೂ ಆ ಲೋಕಕ್ಕೆ ಹೋಪಲೆ ಸಾಧ್ಯವಿದ್ದಿದ್ರೆ.......ಹ್ಮ್ಂ...:(

ಒಂದ್ಸಲನಾದ್ರೂ ಅದಿತಿನ ಕರ್ಕಂಡು ಹೋಗಿ ಅದೇ ಮೆತ್ತಿಲಿ ಮನೆ ಬರ್ದು.. ಬಳೆಚೂರು ಕೊಟ್ಟೂ ಆಡ್ಸವು ಹೇಳಿದ್ದು.. ನೋಡವು.. ಎಷ್ಟೇಂದ್ರೂ ಈಗಿನವು ಲೂಡೋ ಕಾಲ್ದವು!

ತುಂಬಾ ಧನ್ಯವಾದ.

@ದಿಲೀಪ್,

ಇವೆಲ್ಲ ಜೀವನದಲ್ಲಿ ಮುಂದೆ ಎದುರಾಗಬಹುದಾದ ಏರಿಳಿತಗಳನ್ನ ಬಾಲ್ಯದಲ್ಲೇ ನಮ್ಮ ಅರಿವಿಗೆ ಬರುವಂತೆ ಮಾಡುವ ಆಟಗಳು..>>

ನೂರಕ್ಕೆ ನೂರು ಸತ್ಯ. ತುಂಬಾ ಇಷ್ಟಾತು ನಿಮ್ಮ ಈ ಮಾತು. ಅಂದಿನ ಆಟದೊಳಗಿನ ಪಾಠಗಳೆಲ್ಲಾ ಬದುಕನ್ನು ಕಟ್ಟಿಕೊಡಲು ನೆರವಾಗುವಂತವಾಗಿದ್ದವು. ಇಂತಹ ಆಟಗಳೆಲ್ಲಾ ಈಗ ಕನಸೊಳಗೆ ಸೇರುತ್ತಿರುವುದೊಂದು ವಿಷಾದವೇ ಸರಿ.

ತುಂಬಾ ಧನ್ಯವಾದ.

@ವನಿತ,

:) :) ಹ್ಮ್ಂ... ಈ ಮಕ್ಕಗೆ ಸೋಲುದು ಅಂದ್ರೆ ಅದೆಷ್ಟು ಬೇಜಾರು ಅಲ್ದಾ? ಹಾವು ಅಂದ್ರೆ ಬೀಳದು ಅಂತ ಅದೆಷ್ಟು ಬೇಗ ಅರ್ಥ ಮಾಡಿಕೊಂಡಿರ್ತ! ಅದಿತಿನೂ ಅಷ್ಟೇ ಅದ್ಕೆ ಆರು ಬೀಳ್ದೇ ಹೋದ್ರೆ ಎಲ್ಲಾ ಕಾಳುಗಳನ್ನೂ ಬೀಳಿಸಿ ಹೋಗ್ತು :)

ತುಂಬಾ ಧನ್ಯವಾದ ಸ್ಪಂದನೆಗೆ.

@ಮಧು,

ಹ್ಮ್ಂ... ಇಂತಹ ನೆನಪುಗಳೇ ಹಾಂಗೆ.. ಜಾಜಿ ಮೊಗ್ಗು ಸಂಜೆ ತುಸುವೇ ಅರಳಿದಾಗ ಹರಡುವ ಕಂಪಿನಂತೇ... ಸದಾ ಘಮ ಘಮ...:)

ತುಂಬಾ ಧನ್ಯವಾದ.

@ಸುಮ,

ಮೆಚ್ಚುಗೆಗೆ ತುಂಬಾ ಧನ್ಯವಾದ. ಹೌದು ನೋಡಿ.. ನಂಗೂ ಈ ಲೂಡೋ ಅಷ್ಟು ಇಷ್ಟ ಆಗದಿಲ್ಲೆ... ಬನ್ನಿ ಒಂದ್ಸಲ ಪಗಡೆ ಅಥವಾ ಬಳೆವೋಡಾಟ ಆಡನ :)

@ಕಾಕಾ,

ತುಂಬಾ ಧನ್ಯವಾದಗಳು. ಬಾಲ್ಯದಾಟಗಳೆಲ್ಲಾ ಇನ್ನು ಕನಸೇ ಸರಿ!

@ಸುಬ್ರಹ್ಮಣ್ಯ,

ತುಂಬಾ ಧನ್ಯವಾದಗಳು ನಿಮ್ಮ ಈ ಸುಂದರ ಪ್ರತಿಕ್ರಿಯೆಗೆ :) ನಿಮ್ಮ ಮನಸ್ಸನ್ನು ನನ್ನ ಲೇಖನ ಪ್ರಶಾಂತವಾಗಿಸಿದ್ದರೆ ಅದೇ ದೊಡ್ಡ ಮೆಚ್ಚುಗೆ.

@ಹರೀಶ್,

ಹೌದು.. ಈ ಆಟ ಅದೆಷ್ಟೋ ನಮ್ಮ ಬಾಲ್ಯದ ಆಟೋಟಗಳನ್ನೆಲ್ಲಾ ನೆನಪಿಗೆ ತತ್ತು. ಆಟಕ್ಕಿಂತ ಆಟದ ಜೊತೆಯಲ್ಲಿರ್ತಿದ್ದ ಗೆಳೆಯರ ಒಡನಾಟ, ಮನೆಯವರ ಜೊತೆ ಹಠಮಾಡಿ ತಾನೇ ಗೆದ್ದಿ ಹೇಳಿ ಬೀಗದು... ಎಲ್ಲಾ ನೆನ್ಪಾಗಿ ಮತ್ತಷ್ಟು ಆಪ್ತ ಅನಿಸ್ತು ನಮ್ಗೆ.

ತುಂಬಾ ಧನ್ಯವಾದ.

@ಶಾಂತಲ,

ತುಂಬಾ ಧನ್ಯವಾದ ಪ್ರೀತಿಯ ಸ್ಪಂದನೆಗೆ... ಲೇಖನದೊಳಗಿನ ಅಂದವನ್ನು ಗುರುತಿಸಿದ್ದಕ್ಕೆ.

@ಸುಧೇಶ್ ಹಾಗೂ @ಪರಾಂಜಪೆ ಸರ್,

ಹೂಂ... ತುಂಬಾ ಚಿಕ್ಕವಳಿದ್ದಾಗ ಚೆನ್ನೆಮಣೆ ನೋಡಿದ್ದ ನೆನಪು. ಆದರೆ ಹೆಚ್ಚಾಗಿ ಆಡಿಲ್ಲ.. ಹಾಗಾಗಿ ಮಸಕು ಮಸಕಾಗಿ ನೆನಪಿದೆ ಅಷ್ಟೇ! ತುಂಬಾ ಧನ್ಯವಾದಗಳು ನಿಮಗಿಬ್ಬರಿಗೂ.

@ವಿಜಯಶ್ರೀ,

ಹೂಂ... ಆ ಕಲೆಯ ಬಲೆಯೊಳಗೆ ಬಿದ್ದು.. ಅನು ದಿನ ಚಿತ್ತ, ಭಾರಕ್ಕಾಗಿಯೇ ಹಣಗಾಡುವ ಕಾಯಿಗಳು ನಾವು ಅಲ್ವೇ? ತುಂಬಾ ಧನ್ಯವಾದ.

@ಮಂಜು ಹಾಗೂ @ದಿವ್ಯ,

ಲೇಖನ ಮೆಚ್ಚಿದ್ದಕ್ಕೆ, ಪ್ರತಿಕ್ರಿಯೆಯ ಮೂಲಕ ಸ್ಪಂದಿಸಿದ್ದಕ್ಕೆ ತುಂಬಾ ಧನ್ಯವಾದಗಳು ನಿಮಗೆ.

---
ಪ್ರೀತ್ಯಾದರಗಳಿಂದ,
ತೇಜಸ್ವಿನಿ ಹೆಗಡೆ.

ವಿಚಲಿತ... ಹೇಳಿದರು...

ಜೀವನವನ್ನು ಪಗಡೆ ಆಟಕ್ಕೆ ಹೋಲಿಸಿದ ಪರಿ ಚೆನ್ನಾಗಿದೆ..
ನಮ್ಮ ಶಿಕ್ಷಕರೊಬ್ಬರು ಹೀಗೆ 'ರೆ' ಬಗ್ಗೆ ಮತ್ತೆ ಮತ್ತೆ ಹೇಳುತ್ತಿದ್ದರು..
'ಸ್ಕೂಲಿಗೆ ಬಂದರೆ','ಓದಿದರೆ','ಪಾಸಾದರೆ',.. ಹೀಗೆ.

ಸಾಗರದಾಚೆಯ ಇಂಚರ ಹೇಳಿದರು...

ಪಗಡೆ ಆಟಕ್ಕೂ ಬದುಕಿಗೂ ಹಿಂದಿನಿಂದಲೂ ಒಂದು ಅವಿನಾಭಾವ ಸಂಬಂಧವಿದೆ

ತುಂಬಾ ಸುಂದರವಾಗಿ ಇದರ ಎಲೆ ಬಿಡಿಸಿದ್ದಿರಾ

ನನಗೂ ಪಗಡೆ ಆಟ ತುಂಬಾ ಇಷ್ಟ

Anju ಹೇಳಿದರು...

nangu thumba ishta athu... bareda reethi chennagittu ... :)

nimmolagobba ಹೇಳಿದರು...

ನಿಮ್ಮ ಲೇಖನ ನನ್ನ ಹಳ್ಳಿ ಜೀವನದಲ್ಲಿ ಬಾಲ್ಯದ ನೆನಪು ಮೂಡಿಸಿತು. ಒಳ್ಳೆಯ ಲೇಖನಕ್ಕೆ ನಿಮಗೆ ಧನ್ಯವಾದಗಳು.

--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

ತೇಜಸ್ವಿನಿ ಹೆಗಡೆ ಹೇಳಿದರು...

@ವಿಚಲಿತ,

ನಿಮ್ಮ ಸ್ಕೂಲ್ ಪೇಸ್ಟ್ರ ‘ರೆ’ಗಳಿಗೂ ನಾನು ಹೇಳಿರುವ ‘ರೆ’ಗಳಿಗೂ ತುಂಬಾ ವ್ಯತ್ಯಾಸವಿದೆ. ನಿಮ್ಮ ಮೇಸ್ಟ್ರ ‘ರೆ’ಗಳು ಹೆಚ್ಚು ವಾಸ್ತವಿಕತೆಯಿಂದ ಕೂಡಿದ್ದು ಧನಾತ್ಮಕವಾಗಿವೆ :)

ಧನ್ಯವಾದಗಳು.

@ಸಾಗರದಾಚೆಯ ಇಂಚರ, ಅಂಜು, ಬಾಲು ಅವರೆ,

ಮೆಚ್ಚುಗೆಭರಿತ ಸ್ಪಂದನೆಗೆ ತುಂಬಾ ಧನ್ಯವಾದಗಳು.