ಶನಿವಾರ, ಫೆಬ್ರವರಿ 19, 2011

ನಾವೇಕೆ ಹೀಗೆ?

courtesy : http://johnyml.blogspot.com

ಈ ಆಲೋಚನೆ ಬಂದಿದ್ದು ಇತ್ತೀಚಿಗೆ ನಡೆದ ಆ ಘಟನೆಯಿಂದ ಮಾತ್ರ ಅಲ್ಲ. ಬಹು ಸಮಯದಿಂದಲೂ ಇದು ನನ್ನ ಕಾಡುತ್ತಿದ್ದ ಚಿಂತನೆ. ಸಮಾಜದಲ್ಲಿ ಆಳದಿಂದ ಬೇರೂರಿರುವ ಪಿಡುಗುಗಳಾದ ಸ್ತ್ರೀ ಶೋಷಣೆ, ಸ್ತ್ರೀ-ಪುರುಷ ತಾರತಮ್ಯ, ಆಕೆಯ ಮೇಲಿನ ಅತ್ಯಾಚಾರ - ಮುಂತಾದವುಗಳಿಗೆಲ್ಲಾ ಕಾರಣ ಯಾರು? ಅವಳ ಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವಿಕೆ, ಆಕೆಯನ್ನು ಬೆತ್ತಲಾಗಿಸಿ ಸಂತಸಪಡುವ ವಿಕೃತ ಮನಸ್ಸು, ಎಲ್ಲಾ ಕೌಟುಂಬಿಕ ಸಮಸ್ಯೆಗಳಿಗೆ ಅವಳೊಳಗಿನ ಹೊಂದಾಣಿಕೆಯ ಕೊರತೆಯೇ ಕಾರಣವೆಂದು ಆರೋಪಿಸುವಿಕೆ, ನೈತಿಕತೆಯ ಪಾಠ ಆಕೆಗೆ ಮಾತ್ರ ಎಂದು ಘೋಷಿಸುವ ಸಮಾಜ ಸುಧಾರಕರ ಧೋರಣೆ - ಇವೆಲ್ಲಾ ಕೇವಲ ಪುರುಷರಿಂದ ಮಾತ್ರ ಆಗುತ್ತಿರುವ ಅನ್ಯಾಯಗಳೇ? ಸ್ತ್ರೀ ಕೇವಲ ಪುರುಷರಿಂದ ಮಾತ್ರ ಶೋಷಿತಳೇ? ಅವಳ ಎಲ್ಲಾ ಸಮಸ್ಯೆಗಳಿಗೂ, "ಅವಳ" ಮೇಲಾಗುವ ಎಲ್ಲಾ ರೀತಿಯ ಅತ್ಯಾಚಾರ, ಅನಾಚಾರ, ದಬ್ಬಾಳಿಕೆಗಳಿಗೆ ಕೇವಲ "ಆತ" ಮಾತ್ರ ಕಾರಣನೇ? ಎಲ್ಲವುದಕ್ಕೂ ಪುರುಷ ಸಮಾಜ ಮಾತ್ರ ದೋಷಿಯೇ?!

ಈ ಮೇಲಿನ ನನ್ನ ಪ್ರಶ್ನೆಗಳಿಗೆಲ್ಲಾ ನನ್ನದೇ ಆದ ಉತ್ತರಗಳು ನಾನಿಲ್ಲಿ ಕೊಟ್ಟುಕೊಳ್ಳುವ ಮುನ್ನ, ಈ ವಿಚಾರಧಾರೆಗಳು ನನ್ನ ಮತ್ತಷ್ಟು ಕಾಡಲು ಕಾರಣವಾದ ತೀರಾ ಇತ್ತೀಚಿಗೆ ನಡೆದ ಆ ಘಟನೆಯನ್ನು ಸ್ವಲ್ಪ ಸ್ಥೂಲವಾಗಿ ನೋಡೋಣ. ಇದು ಯಾರಿಗೂ ತಿಳಿಯದ ಘಟನೆಯೇನಲ್ಲ. ಘಂಟಾಘೋಷವಾಗಿ ಎಲ್ಲಾ ಚಾನಲ್‌ಗಳು, ಪೇಪರ್‌ಗಳೂ ಕೂಗಿ ಕೂಗಿ, ಬರೆದು ಕೊರೆದು ಸುಸ್ತಾಗಿ, ಸಾಕಾಗಿ ಸುಮ್ಮನಾದ ಪ್ರಸಂಗ. ಜನಪ್ರಿಯ ಬಹುಭಾಷಾ ನಟಿಯೋರ್ವಳು ಸ್ಟಾರ್(?!) ಹೋಟೇಲ್ ಒಂದರಲ್ಲಿ, ಪ್ರತಿಷ್ಠಿತ ಸಾಪ್ಟ್‌ವೇರ್ ಕಂಪೆನಿಯೊಂದರ ಸಿ.ಇ.ಒ. ಆಗಿದ್ದವನೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿರುವಾಗ ಪೋಲೀಸರ ಕೈಗೆ ಸಿಲುಕಿ ಸುದ್ದಿಗೆ ಆಹಾರವಾದ ಘಟನೆ.

ನಾನು ಇಲ್ಲಿ ಆ ನಟಿಯನ್ನಾಗಲೀ, ಆ ವ್ಯಕ್ತಿಯನ್ನಾಗಲೀ ಖಂಡಿತ ಸಮರ್ಥಿಸುತ್ತಿಲ್ಲ. ಆದರೆ ಸುದ್ದಿ ಹೊರ ಬರುತ್ತಿದ್ದಂತೇ ಎಲ್ಲಾ ಬೇಧ ಮರೆತು ಈ ಒಂದು ಸುದ್ದಿಗೆ ಮುಗಿ ಬಿದ್ದ ಚಾನಲ್‌ಗಳು ನಡೆದುಕೊಂಡ ರೀತಿ ಮಾತ್ರ ಖಂಡನೀಯ! "ಒಡಕು ಸುದ್ದಿ"(Breaking News) ಎಂಬ ತಲೆಬರಹದಡಿಯಲ್ಲಿ ಆ ನಟಿಯ ಹೆಸರನ್ನು, ಚಿತ್ರಗಳನ್ನು, ಆಕೆ ನಟಿಸಿದ್ದ ಕನ್ನಡ ಹಾಗೂ ಇತರ ಭಾಷೆಗಳ ಚಿತ್ರಗಳಲ್ಲಿದ್ದ ಹಸಿ/ಬಿಸಿ ಚಿತ್ರಗಳ ತುಣುಕುಗಳನ್ನು ಹಾಕಿದ್ದೇ ಹಾಕಿದ್ದು. ಆ ಚಿತ್ರದಲ್ಲಿ ಗೌರಮ್ಮನಂತೆ ನಟಿಸಿದ್ದ ಇವಳೇನಾ ಅವಳು? ಎಂದು ಪ್ರಶ್ನಿಸಿದ್ದೇ ಪ್ರಶ್ನಿಸಿದ್ದು. ಎಲ್ಲಿದೆ ಸಿನಿಮಾದವರಿಗೆ ನೈತಿಕತೆ? ಎಂದು ಚರ್ಚೆ ಮಾಡಿದ್ದೇ ಮಾಡಿದ್ದು. ಒಂದು ಚಾನಲ್ ಅಂತೂ ಇದಕ್ಕಾಗಿಯೇ ವಿಶೇಷ ಪ್ರೋಗ್ರಾಂ ಮಾಡಿ ಅವಳ ಜನ್ಮ ಜಾಲಾಡಿ ಬಿಟ್ಟು ಏನೋ ಸಾಧಿಸಿದಂತೆ ಬೀಗಿತ್ತು. ಮರುದಿನ ಪತ್ರಿಕೆ ತೆಗೆದರೂ ಅಲ್ಲೂ ಇದೇ ಕತೆ-ವ್ಯಥೆ! ಆದರೆ ಯಾರೊಬ್ಬರೂ, ಯಾವ ಚಾನಲ್/ಪತ್ರಿಕೆಯೂ ಆಕೆಯೊಡನೆ ಇದೇ ಚಟುವಟಿಕೆಯಲ್ಲಿ ತೊಡಗಿದ್ದ ಆ ಮಹಾನ್ ಘನವೆತ್ತ ವ್ಯಕ್ತಿಯ ಮುಖವನ್ನಾಗಲೀ, ಆತನ ಕಿರು ಪರಿಚಯವನ್ನಾಗಲೀ, ಕನಿಷ್ಟ ಅವನ ಕಂಪೆನಿಯ ಹೆಸರನ್ನಾಗಲೀ ಹಾಕಲು ಹೋಗಲೇ ಇಲ್ಲಾ. ಕಾಟಾಚಾರಕ್ಕೆಂಬಂತೆ ಒಂದೆರಡು ಕಡೆ ಮಾತ್ರ ಅವನ ಹೆಸರನ್ನು (ನಿಜನಾಮವೋ, ಸುಳ್ಳೋ....!) ಮಾತ್ರ ಪ್ರಕಟಿಸಿತ್ತು. ಆ ಸಾಫ್ಟ್‌ವೇರ್ ಕಂಪನಿ ತನ್ನ ಪ್ರತಿಷ್ಠೆ ಉಳಿಸಿಕೊಳ್ಳಲೋ, ಇಲ್ಲಾ ಆ ವ್ಯಕ್ತಿ ತನ್ನ ಮುಖ ಮುಚ್ಚಿಕೊಳ್ಳಲೋ ದುಡ್ಡು/ಅಧಿಕಾರ ಉಪಯೋಗಿಸಿ ಆ ದೃಶ್ಯದಿಂದಲೇ ತನ್ನನ್ನು ಬೇರ್ಪಡಿಸಿಕೊಂಡುಬಿಟ್ಟ. ಕೊನೆಗೆ ಉಳಿದದ್ದು, ಸುಲಭವಾಗಿ ಎಲ್ಲರಿಗೂ ಗ್ರಾಸವಾಗಿದ್ದು ಆ ನಟಿ ಮಾತ್ರ. ಮದುವೆಯಾಗಿ ಮಕ್ಕಳಿರುವ ಆಕೆ ಯಾಕೆ ಈ ದಂಧೆಗೆ ಬಂದಳು? ಇದರ ಹಿನ್ನಲೆ ಏನು? ಯಾವುದನ್ನೂ ಅರಿಯಲು ಹೋಗಲಿಲ್ಲ. ಹೋಗಲಿ ಇದು ಅವಳ ವೈಯಕ್ತಿಕತೆ ಎಂದಾದಲ್ಲಿ ಮತ್ತೆ ಮತ್ತೆ ಅವಳ ಬಗ್ಗೆ ಯಾಕೆ ಪ್ರಕಟಿಸಬೇಕಿತ್ತು? ಆಕೆ ಮಾಡಿದ್ದು ಸರ್ವಥ ಸಮರ್ಥನೀಯವಲ್ಲ. ಕೇವಲ ದುಡ್ಡಿಗೋಸ್ಕರ, ಮೋಜಿಗೋಸ್ಕರ ಈ ಕೆಲಸಕ್ಕೆ ಇಳಿದಿದ್ದರೆ ಅಕ್ಷಮ್ಯ ಕೂಡ. ಆದರೆ ಎಷ್ಟೋ ಮಹಿಳೆಯರು ತನ್ನ ಗಂಡನ ಒತ್ತಡಕ್ಕೆ, ಮನೆಯ ಪರಿಸ್ಥಿತಿಯಿಂದಾಗಿಯೋ ಯಾವುದೋ ಒಂದು ಅಸಹಾಯಕತೆಯಿಂದಾಗಿಯೂ ಈ ಕೆಲಸಕ್ಕೆ ಇಳಿಯುತ್ತಾರೆ. ಆದರೆ ಅವರ ಹಿಂದಿನ ನಿಜ ಕಾರಣ ತಿಳಿಯದ ನಾವು ಕೇವಲ ಆಕೆಯನ್ನು ಮಾತ್ರ ದೂಷಿಸುತ್ತೇವೆ. ಹಣ ತೆತ್ತು ಆಕೆಯನ್ನು ಪ್ರಲೋಭಿಸಿದ ಆ ವ್ಯಕ್ತಿಯ ಮುಖವಾಡ ನಮಗೆ ಕಾಣಿಸೋದೇ ಇಲ್ಲ!!

ನನ್ನ ಪ್ರಕಾರ ಹೆಣ್ಣಿನಮೇಲಾಗುವ ಎಲ್ಲಾ ದೌರ್ಜನ್ಯಗಳಿಗೆ ಕೇವಲ ಪುರುಷ ಮಾತ್ರ ಖಂಡಿತ ಕಾರಣನಲ್ಲ. ಪುರುಷ ಸಮಾಜದ ಅನ್ಯಾಯದ ಹಿಂದೆ ಹೆಣ್ಣಿನ ಕೊಡುಗೆಯೂ ಸಾಕಷ್ಟಿರುತ್ತದೆ. ಹೆಣ್ಣಿಗೆ ಹೆಣ್ಣೇ ಶತ್ರುವಾಗದೇ, ಸ್ನೇಹಿತೆಯಾದಾಗ ಪುರುಷನ ದಬ್ಬಾಳಿಕೆಗೂ ಕೊನೆ ಬೀಳದಿರದು. ಸುಡುವ ಅತ್ತೆ, ತಿವಿಯುವ ನಾದಿನಿ, ಹೊರದೂಡುವ ಅತ್ತಿಗೆ, ಮೋಸಕ್ಕೆಳೆಯುವ ಗೆಳತಿ - ಇವರೆಲ್ಲರೂ ಆಕೆಯ ದುರ್ಗತಿಗೆ, ಅನ್ಯಾಯಕ್ಕೆ ಕಾರಣಕರ್ತರೇ. ಬರುವ ಸೊಸೆಯನ್ನೂ ಓರ್ವ ಹೆಣ್ಣಾಗಿ ಕಾಣುವ ಅತ್ತೆ-ನಾದಿನಿಯರಿದ್ದರೂ ಸಾಕು, ಅದೆಷ್ಟೋ ಮನೆ/ಮನಗಳು ಮುರಿಯದೇ ಸದಾ ನಗುತ್ತಿರಬಹುದು. ಮುರಿದ ಮನೆ/ಮನಗಳೂ ಒಂದಾಗಬಲ್ಲವು. ದಬ್ಬಾಳಿಕೆ ಮಾಡುವ, ಹೊಡೆದು ಹಿಂಸಿಸುವ, ಹಾದರಕ್ಕೆಳೆಸುವ, ಅನೈತಿಕತೆಯೆಡೆಗೆ ನಡೆಯುವ ತನ್ನ ಮಗನ ವಿರುದ್ಧ ಆತನ ತಾಯಿ ಎದುರುನಿತ್ತರೂ ಸಾಕು ೧೦ರಲ್ಲಿ ಒಂದಾದರೂ ಸಂಸಾರ ಸರಿ ದಾರಿಗೆ ಬರಬಲ್ಲದು. 

ಪುರುಷರ ಕಡೆಗೇ ಬೆಟ್ಟು ಮಾಡೋ ಮುಂಚೆ ಸ್ತ್ರೀಯರು ನಮ್ಮೊಳಗಿನ ಒಗ್ಗಟ್ಟನ್ನು ಮೊದಲು ಪ್ರಶ್ನಿಸಿಕೊಳ್ಳೋದು ಉತ್ತಮವೇನೊ ಎಂದೆನಿಸುತ್ತದೆ. ಅಂದು ಆ ಘಟನೆ ನಡೆದಾಗ "ಕಡ್ಡಿ"ಚಾನಲ್ ಒಂದು ಆ ನಟಿಯ ಬಗ್ಗೆ ಅದೆಷ್ಟು ಕೆಟ್ಟದಾಗಿ ಪ್ರಚಾರಕ್ಕೆ ತೊಡಗಿತೆಂದರೆ ೨ ನಿಮಿಷವೂ ಅದನ್ನು ನೋಡದೇ ನಾನು ಬೇರೆ ಚಾನಲ್‌ಗೆ ಹೋದೆ. ಆದರೆ ನನಗೆ ಅಚ್ಚರಿಯಾದದ್ದೆಂದರೆ ಅಂದು ಆ ನಟಿಯ ಬಗ್ಗೆ ಆ ರೀತಿಯ ಕಾರ್ಯಕ್ರಮ ನಡೆಸಿಕೊಟ್ಟಿದ್ದೂ ಓರ್ವ ಹೆಣ್ಣೇ ಆಗಿದ್ದು!!! ಕನಿಷ್ಟ ಗೌರವವನ್ನೂ ಕೊಡದೇ ನಿರೂಪಕಿ ನಟಿಯ ಬಗ್ಗೆ ಮಾತನಾಡುವಾಗ ಆಕೆಗೆ ಒಮ್ಮೆಯೂ ಆ ಪುರುಷನ ಬಗ್ಗೆ ನೆನಪಾಗಲಿಲ್ಲವೇ? ಆತನ ವಿವರಗಳನ್ನೂ ನೀಡಬೇಕೆಂಬ ಅರಿವೇ ಮೂಡಲಿಲ್ಲವೇ? ಅವನ ಹೆಸರಿನ ಬದಲಾಗಿ ಆಗಾಗ ಬಳಸಿದ್ದು ಸಿ.ಇ.ಒ ಎಂಬ ಘನಾಂದಾರಿ ಹುದ್ದೆಯ ಪರದೆಯನ್ನು!! ಕೇಳಿದರೆ ಹೇಳುವರೆಲ್ಲಾ... ಇದು ನಮ್ಮ ಹೊಟ್ಟೆ ಪಾಡು. ನಾಳೆ ಇವರಿಗೇ ಅನ್ಯಾಯವಾದರೆ ಕೂಗುವರು ಪುರುಷ ಸಮಾಜದ ದಬ್ಬಾಳಿಕೆ ಎಂದು!!!

ಹೆಣ್ಣಿನ ಮೇಲೆ ಪುರುಷ ದೌರ್ಜನ್ಯ ಮೊದಲಿನಿಂದಲೂ ನಡೆದು ಬಂದಿದೆ ನಿಜ. ಆದರೆ ಆಕೆಗೆ ಬಲವಾಗಿ, ಬೆಂಬಲವಾಗಿ ಒತ್ತು ನಿಲ್ಲುವ ಸ್ತ್ರೀಯರ ಸಂಖ್ಯೆ ಮಾತ್ರ ಹಿಂದೆಯೂ ವಿರಳವಾಗಿತ್ತೂ ಇಂದೂ ಅಷ್ಟೇ. ಆಶಾಷಭೂತಿತನದಿಂದ, ಹೋರಾಟದ ಸೋಗು ಹಾಕಿರುವವರೇ ಹೆಚ್ಚು. ಎಲ್ಲವೂ ಹಣ/ಅಧಿಕಾರಮಯ. ಓರ್ವ ಸ್ತ್ರೀಯನ್ನು ಇನ್ನೋರ್ವ ಸ್ತ್ರೀ ಗೌರವಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದಾಗ ಮಾತ್ರ ನಿಜವಾದ ಸುಧಾರಣೆ ಸಾಧ್ಯ... ಆಕೆಯ ಮೇಲಾಗುವ ದೌರ್ಜನ್ಯವನ್ನು ಹತ್ತಿಕ್ಕುವುದೂ ಸುಲಭ. ಅದರ ಬದಲು ಬಿದ್ದವರಿಗೇ ಮತ್ತಷ್ಟು ಗುದ್ದು ಕೊಡುತ್ತೇವೆ... ದುಡ್ಡು, ಅಧಿಕಾರ ಇದ್ದವನೇ ದೊಡ್ಡಪ್ಪ ಎಂದು ತಪ್ಪಗಾಗುತ್ತೇವೆ..... ನೈತಿಕತೆಯ ಪಾಠ ಕೇವಲ ಹೆಣ್ಣಿಗೆ ಮಾತ್ರ ಎನ್ನುವಂತೆ ವರ್ತಿಸುತ್ತೇವೆ.... ಬಿದ್ದವರಿಗೆ ಕೈ ಕೊಟ್ಟು ಮೇಲೇರಿಸುವುದ ಬಿಟ್ಟು ಕೈ ಕೊಡವಿ ಮುನ್ನೆಡೆಯುತ್ತೇವೆ.... ನಮ್ಮ ನಿನ್ನೆಗಳ, ನೋವು/ಯಾತನೆಗಳನ್ನೇ ಮರೆತು ಮತ್ತೊಬ್ಬರ ನೋವಿಗೆ ನಗುತ್ತೇವೆ... ಸ್ವಂತ ಲಾಭಕ್ಕಾಗಿ ಇನ್ನೊಬ್ಬರ ಕೆಡುಕಿಗೆ ಹೊಂಚು ಹಾಕುತ್ತೇವೆ... - ಇವನ್ನೆಲ್ಲಾ ನೋಡಿದಾಗ ನನ್ನೊಳಗೆ ಮೂಡುವ ಪ್ರಶ್ನೆ ಒಂದೇ.... ನಾವೇಕೆ ಹೀಗೆ?!!

-ತೇಜಸ್ವಿನಿ.

13 ಕಾಮೆಂಟ್‌ಗಳು:

ಮನಸು ಹೇಳಿದರು...

ನಿಜ ನಾವೇಕೆ ಹೀಗೆ ಎಂಬ ಪ್ರಶ್ನೆ ನನ್ನನ್ನೂ ತುಂಬಾ ಕಾಡುತ್ತೆ.... ಇನ್ನೊಬ್ಬರು ಬದುಕಿದರೆ ಸಹಿಸದೆ ಎಲ್ಲರೂ ಕೆಸರೆರಚಾಟದಲ್ಲಿದ್ದೇವೇನೋ ಎಂದೆನಿಸುತ್ತೆ....

ಮಹೇಶ ಹೇಳಿದರು...

ಸಾಫ್ಟವೇರ್ ಕಂಪನಿಯ ಮಾಲಿಕ ಸಿಟ್ಟಿನಿಂದ ಏನಾದರೂ ಮಾಡಬಹುದಂಬ ಹೆದರಿಕೆಯಿರಬಹುದು. ಹೆಣ್ಣು ಸಹಜವಾಗಿ ಆಕ್ರಮಣಕಾರಿಯಲ್ಲವಲ್ಲ.

sunaath ಹೇಳಿದರು...

ನಮ್ಮ ನೀಚ ಸಮಾಜವು ಪುರುಷಪ್ರಧಾನವಾಗಿದೆ ಹಾಗು ಸ್ತ್ರೀಯನ್ನು ಅನೇಕ ರೀತಿಗಳಲ್ಲಿ ಶೋಷಿಸುತ್ತಿದೆ ಎನ್ನುವದು ಸತ್ಯ. ಕೊಡಲಿಯ ಕಾವು ಕುಲಕ್ಕೆ ಮೂಲ ಎನ್ನುವಂತೆ ಕೆಲವು ಸ್ತ್ರೀಯರೂ ಸಹ ಇಂತಹ ಶೋಷಣೆಯಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನುವದು ವಾಸ್ತವದ ಮಾತಾಗಿದೆ. ಇದೆಲ್ಲಕ್ಕೆ ಯಾವಾಗ ಕೊನೆ ಬಿದ್ದೀತೊ, ದೇವರೇ ಬಲ್ಲ. ನಿಮ್ಮದು ಕಣ್ಣು ತೆರೆಯಿಸುವ ಲೇಖನ.

nimmolagobba ಹೇಳಿದರು...

ತೇಜಸ್ವಿನಿ ಮೇಡಂ, ಕಣ್ತೆರೆಸುವ ಲೇಖನ, ಇಲ್ಲಿ ಯಾರೂ ಯಾರನ್ನು ಸರಿಪಡಿಸಬೇಕು ಎನ್ನುವುದೇ ಇಂದಿನ ಜಿಜ್ಞಾಸೆಯಾಗಿದೆ. ಬಹುಷಃ ನಮ್ಮ ದೇಶದಲ್ಲಿನ ಅತಿಯಾದ ಸ್ವಾತಂತ್ರ್ಯ ನಮ್ಮನ್ನು ಈ ದುಸ್ಥಿತಿಗೆ ತಳ್ಳುತ್ತಿದೆ.ಇಲ್ಲಿ ಎಲ್ಲರೂ ಪ್ರಶ್ನಾತೀತರೆ. ಎಲ್ಲರೂ ಅವರು ಮಾಡುತ್ತಿರುವುದೇ ಸರಿ ಹೇಳುತ್ತಿರುವುದೇ ವೇದ ವಾಕ್ಯ ಎನ್ನುತ್ತಿರಲು , ಯಾರ ಹಿತ ಕಟ್ಟಿಕೊಂಡು ಯಾರಿಗೇನು ಆಗಬೇಕು ಆಲ್ವಾ!! ಈ ಎಲ್ಲಾ ಪಾಪದ ಹೊಣೆ ನಮ್ಮೆಲ್ಲರದೂ ಆಗಿದೆ. ಒಳ್ಳೆಯ ದಿನಗಳಿಗಾಗಿ ಕಾಯೋಣ.

--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

umesh desai ಹೇಳಿದರು...

ತೇಜಸ್ವಿನಿ ಅವರೆ ನಿಮ್ಮ ಲೇಖನ ಸ್ವಲ್ಪ ಸ್ತ್ರೀವಾದಿಕಡೆ ವಾಲುತ್ತೆ. ಮುಖ್ಯವಾಗಿ ಕನ್ನಡ ಚಾನೆಲ್ ಮೀಡಿಯ ಒಂಥರಾ
ಹಿಪಾಕ್ರಸಿದು. ಅನ್ಯಾಯ ನಡೀತಿದೆಅಂದ್ರೆ ಅದ್ರ ಲೈವ್ ಪ್ರಸಾರ ಮಾಡತಾರೆಹೊರತು ಅದನ್ನು ತಡೆಯೋ ಗೋಜಿಗೆ ಹೋಗೋಲ್ಲ. ಇಲ್ಲಿ ಆ ನಟಿ ಜೊತೆ ಉದ್ಯಮಿ,ರಾಜಕಾರಣಿನೂ ಇದ್ದಾರೆ ಆದ್ರೆ ಅವರು ಯಾರು ಏನು ಅಂತ ಮೀಡಿಯಾದವರಿಗೆ ಬೇಡ. ನಟಿ ಅವಳ ಚಾರಿತ್ರ್ಯವಧೆ ಇವೇ ಪ್ರಮುಖ ಯಾಕೆಂದ್ರೆ ಅವರ ಟಿಅರ್ಪಿ ಏರೋದು ಮುಖ್ಯ...!

Kanthi ಹೇಳಿದರು...

ಒಳ್ಳೆಯ ಬರಹ. ನಮ್ಮ ಜನರು ವಿದ್ಯಾವಂತರಾಗಿ ಕೂಡ ನಮ್ಮ ಸಮಾಜದ ರೂಪು ರೇಷೆಗಳು, ಬದುಕುವ ರೀತಿ, ಯೋಚನಾ ವಿಧಾನಗಳಲ್ಲಿ ಬದಲಾವಣೆ ಬಾರದೇ ಇರುವುದು ದೊಡ್ಡ ದುರಂತ.

ತೇಜಸ್ವಿನಿ ಹೆಗಡೆ ಹೇಳಿದರು...

ಲೇಖನಕ್ಕೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು.

@ಸುಗುಣ ಅವರೆ,

ನಿಜ... ತನ್ನೊಳಗೆ ಇಣುಕಿ ನೋಡದೇ ಇನ್ನೊಬ್ಬರ ಬದುಕೊಳಗೇ ಹಣಕುವ ಬುದ್ಧಿಯಿಂದಾಗಿ ಮನಸೆಲ್ಲಾ ಕಲ್ಮಶವಾಗುವುದು.

@ಮಹೇಶ್ ಅವರೆ,
ಹೆಣ್ಣು ಸಹಜವಾಗಿ ಆಕ್ರಮಣಕಾರಿಯಲ್ಲ - ಹೆಣ್ಣಿನ ಈ ಒಂದು ಸಹನಾಶಕ್ತಿಯನ್ನೇ ದೌರ್ಬಲ್ಯವೆಂದೆಣಿಸಿ, ಅದನ್ನೇ ಅಸ್ತ್ರವಾಗಿಸಿಕೊಂಡು ಸಮಾಜ ಆಕೆಯನ್ನು ಆರೋಪಣೆಗೆ, ದಬ್ಬಾಳಿಕೆಗೆ ಒಳಪಡಿಸುತ್ತದೆ. ಅತಿ ಎಲ್ಲ ಕಡೆ ವರ್ಜ್ಯವೇ....

@ಕಾಕಾ,

ಎಷ್ಟು ಬರೆದರು, ಎಷ್ಟು ಕೊರೆದರೂ ಈ ಸಮಾಜ ಕೆಲವೊಂದು ವಿಷಯಗಳಲ್ಲಿ ಹಿಂದೆಯೂ ಒಂದೇ, ಈಗಲೂ ಒಂದೇ.... ಮುಂದೆ ಮಾತ್ರ..... ಗೊತ್ತಿಲ್ಲ!

@ಬಾಲು ಅವರೆ,

ಹೌದು.. ಪ್ರಾರ್ಥನೆ ಮಾಡಬೇಕಿದೆ. ಆದರೆ ಬರೀ ಪ್ರಾರ್ಥನೆಯಿಂದ ಏನೂ ಸಾಧ್ಯವಾಗದು. ಪ್ರಾಮಾಣಿಕ ಪ್ರಯತ್ನವೂ ಸುಧಾರಣೆಗೆ ಅತ್ಯಗತ್ಯ. ಬದಲಾವಣೆ ನಿಧಾನವಾಗಿಯಾದರೂ ಸರಿ... ಸರಿಯಾದ ಕ್ರಮದಲ್ಲಿ ಆರಂಭವಾದರೆ ಮತ್ತೆ ಅದು ಮುಂದುವರಿಯುವುದರಲ್ಲಿ ಸಂಶಯವಿಲ್ಲ.

@ಉಮೇಶ್ ಸರ್,

ಹೌದೇ? ನನ್ನ ಲೇಖನ ಸ್ತ್ರೀವಾದಿಯಾಗಿ ಕಾಣಿಸಿತೇ?! ಯಾವ ವಿಧದಲ್ಲಿ ಎಂದು ತಿಳಿಸುವಿರಾ ದಯವಿಟ್ಟು? ನನ್ನ ಪ್ರಕಾರ ನಾನು ಯಾವುದೇ ವಾದವನ್ನಾಗಲೀ, ಯಾರ ಪರ/ವಿರೋಧವಾಗಿಯೂ ಬರೆದಿಲ್ಲ. ಹಾಗೆ ನೋಡಿದರೆ ನಾನಿಲ್ಲಿ ಬರೆದದ್ದು ಮಹಿಳೆಯ ಹೆಚ್ಚಿನ ಸಮಸ್ಯೆಗೆ, ಅವಳ ಮೇಲಾಗುವ ದೌರ್ಜನ್ಯಕ್ಕೆ ಇನ್ನೋರ್ವ ಹೆಣ್ಣೂ ಪ್ರಮುಖ ಕಾರಣಳಾಗಿರುತ್ತಾಳೆ ಎಂದೇ! ನಾನು ಕುರುಡು ಸ್ತ್ರೀವಾದಕ್ಕೆ ಬದ್ಧಳಾಗಿಲ್ಲ. ಹಾಗೆಂದು ಎಲ್ಲವುದಕ್ಕೂ ಸ್ತ್ರೀಯೇ ಕಾರಣ ಎನ್ನುವುದನ್ನೂ ಸಮರ್ಥಿಸುವುದಿಲ್ಲ.

ಇನ್ನು ಮೀಡಿಯಾ ಹಿಪೊಕ್ರೆಸಿ ಬಗ್ಗೆ. ಹೌದು... ಚಾನಲ್‌ನವರು ಹಾಗೇ ಇರುವುದು.. ಅವರೊಳಗೆ ಯಾವುದೇ ಮೌಲ್ಯ ಇರದೇ ಇರಬಹುದು. ಆದರೆ ವೀಕ್ಷಕರಾದ ನಮ್ಮಲ್ಲಿ? ನಾವು ಬದಲಾಗದೇ ಅವರೂ ಬದಲಾಗರು. ಜನ ಬಯಸುವುದನ್ನೇ ನಾವು ಕೊಡುತ್ತೇವೆ ಎನ್ನುತ್ತಾರೆ ಅವರು. ಜನ ಯಾಕೆ ಇಂತಹ ವಿಷಯಗಳನ್ನೇ ಬಯಸುತ್ತಿದ್ದಾರೆ ಕಾರಣ ಪ್ರಜ್ಞಾವಂತ ಜನರೆಲ್ಲಾ ಸ್ಥಿತಪ್ರಜ್ಞರಂತೇ ಇರುವುದರಿಂದ. ಆದರೆ ಆಗಲಿ.. ಹೋದರೆ ಹೋಗಲಿ.. ಇದೆಲ್ಲಾ ಮಾಮೂಲಿ... ಹೀಗೆ ಇರುವುದು.. ಮುಂದೆಯೂ ಹೀಗೇ ಹೋಗುವುದು ಎನ್ನುವ ಔದಾಸೀನ್ಯತೆಯಿಂದಾಗೇ ವ್ಯವಸ್ಥೆ ಸದಾ ಅವ್ಯವಸ್ಥೆಯಿಂದ ಕೂಡಿರುತ್ತದೆ. (ಇದು ನನ್ನ ಅನಿಸಿಕೆ..)

@ಕಾಂತಿ ಅವರೆ,

ಹೌದು.. ನಿಜ ಇದು ಖೇದಕರ. ಆದರೆ ವಿದ್ಯಾವಂತರೆಲ್ಲಾ ಪ್ರಜ್ಞಾವಂತರಾಗಿರಬೇಕೆಂದಿಲ್ಲ. ವಿದ್ಯೆ ವಿನಯತೆ ತರುತ್ತದೆ ನಿಜ.. ಆದರೆ ಒಮ್ಮೊಮ್ಮೆ ಅತಿ ವಿನಯವೂ ಒಳ್ಳೆಯದಲ್ಲ ಅಲ್ಲವೇ? ಹೆಚ್ಚಿನ ಅಪರಾಧಗಳೆಲ್ಲಾ ನಡೆಯುವುದು ವಿದ್ಯಾವಂತರ ಕ್ಷೇತ್ರಗಳಲ್ಲೇ ಎಂದು ಕೇಳಿಬರುತ್ತಿದೆ! ನಾವು ಓದಿದ್ದು.... ಓದಿತ್ತಿರುವುದು ಯಾವುದೂ ನಮ್ಮ ಬದುಕಿನಲ್ಲಿ ಮೌಲ್ಯತೆಯನ್ನು ತುಂಬಲು ಸಮರ್ಥವಾಗಿಲ್ಲ. ಇದೇ ಎಲ್ಲಾ ಸಮಸ್ಯೆಗೂ ಮೂಲ ಕಾರಣವೇನೋ ಅಲ್ಲವೇ?

-----

ಪ್ರೋತ್ಸಾಹ, ಬೆಂಬಲ ಹೀಗೇ ಸದಾ ನನ್ನ ಬರಹಗಳೊಂದಿಗಿರಲೆಂದು ಹಾರೈಸುವೆ.

ಆದರಗಳೊಂದಿಗೆ,
ತೇಜಸ್ವಿನಿ.

Subrahmanya ಹೇಳಿದರು...

ಇನ್ನೂ ೫೦ ವರುಷ ಕಳೆದರೂ ಇಂತಹ ಸ್ಥಿತಿ ಬದಲಾಗಲಿಕ್ಕಿಲ್ಲ. ನಮ್ಮ ವ್ಯವಸ್ಥೆಯೇ ಹಾಗಿದೆ. ಚಿಂತನೆಗೆ ಹಚ್ಚುವ ಲೇಖನ ನಿಮ್ಮದು, ಆದರೆ ಚಿಂತನೆ ಮಾಡಬೇಕಿರುವವರು ಯಾರು ? ಎಂಬುದೇ ಯಕ್ಷಪ್ರಶ್ನೆ !.

ashokkodlady ಹೇಳಿದರು...

ತೇಜಸ್ವಿನಿ ಅಕ್ಕ,

ತುಂಬಾ ಅರ್ಥಪೂರ್ಣ ಲೇಖನ. ಒಂದಂತು ನಿಜ, ಅನೇಕ ಸ್ತ್ರೀಯರು ಯಾವುದೋ ಒತ್ತಡಕ್ಕೆ ಒಳಗಾಗಿ ಇಂತಹ ಹೇಯ ಕೆಲಸಕ್ಕೆ ಕೈ ಹಾಕುತ್ತಾರೆ ಎನ್ನುವುದು. ವಿಷಾದದ ಸಂಗತಿಯೆಂದರೆ ಅನ್ಯಾಯ ನಡೆಯುತ್ತಿರುವುದನ್ನು ಕಣ್ಣಾರೆ ಕಂಡರೂ ಅದನ್ನು ವಿರೋಧಿಸದೆ ಕಾಣದಂತೆ ಹೋಗುವ ಜನರ ಸಂಖ್ಯೆ ಜಾಸ್ತಿ ಆಗುತ್ತಾ ಇರುವುದು.....

ಸುಮ ಹೇಳಿದರು...

ನಿಜ ತೇಜಸ್ವಿನಿ ನಮ್ಮ ಸಮಾಜ ಹೆಣ್ಣು ಮಾತ್ರ ಸಚ್ಚಾರಿತ್ರ ಹೊಂದಿರಬೇಕೆಂದು ಬಯಸುತ್ತದೆ . ಗಂಡು ಏನು ಮಾಡಿದರೂ ನಡೆಯುತ್ತದೆ ಎಂಬ ಮನೋಭಾವ ಬದಲಾಗಲು ಇನ್ನೆಷ್ಟು ಕಾಲ ಬೇಕೋ . ಇಂತಹ ಸ್ಥಿತಿಗೆ ಕೇವಲ ಗಂಡಸರು ಮಾತ್ರ ಕಾರಣರಲ್ಲ . ಹೆಂಗಸರ ಪಾಲೂ ಇದೆ.

ಚಿತ್ರಾ ಹೇಳಿದರು...

ತೇಜೂ ,

ಬರಹ ಇಷ್ಟವಾಯ್ತು . ಇದೇ ಪ್ರಶ್ನೆ ನನ್ನದೂ ಕೂಡ. ಪ್ರತಿ ಬಾರಿಯೂ ಇಂಥಾ ಯಾವುದೊ ವಿಷಯ ಬಂದಾಗ .. ಎಲ್ಲರ ಗುರಿಯೂ ಹೆಣ್ಣಿನತ್ತಲೇ . ಸಮಾಜದ ನೈತಿಕ ಜವಾಬ್ದಾರಿಯೆಲ್ಲವೂ ಹೆಣ್ಣಿನ ತಲೆಗೆ . ಇದೇಕೆ ಹೀಗೆ? ನೀ ಹೇಳಿದ ಹಾಗೆ ಬರೀ ಗಂಡು ಮಾತ್ರವಲ್ಲ , ಹೆಣ್ಣಿನ ಮೇಲೆ ದೌರ್ಜನ್ಯ ನಡೆಸುವವರಲ್ಲಿ ಹೆಂಗಸರೇ ಹೆಚ್ಚು ಅನ್ನೋ ಮಾತು ಸತ್ಯ . ಇದಕ್ಕೆ ಕೊನೆ ಹೇಗೆ ಅನ್ನೋದನ್ನು ನಾವೇ ಯೋಚಿಸಬೇಕು ! ಪರಸ್ಪರ ಗೌರವ , ಹಾಗೂ ಸ್ವಗೌರವ ಎರಡೂ ಬೇಕು . ಅಂದರೆ ಮಾತ್ರ ಸಾಧ್ಯವಾಗಬಹುದು ! ತನ್ನ ಹಾಗೂ ಬೇರೊಬ್ಬ ಹೆಣ್ಣಿನ ಮೇಲೆ ಆಗುತ್ತಿರುವ ಅನ್ಯಾಯ, ದೌರ್ಜನ್ಯಗಳನ್ನು ಪ್ರತಿಭಟಿಸುವ ಧೈರ್ಯ ನಮಗೆ ಬೇಕು

PARAANJAPE K.N. ಹೇಳಿದರು...

ನಿಮ್ಮ ಬರಹ ಅರ್ಥಪೂರ್ಣ. ಹೌದು, ತಪ್ಪು ಮಾಡಿದವರಿಬ್ಬರೂ ಆದರೂ ಹೆಣ್ಣು ಮಾತ್ರ ಅಪಪ್ರಚಾರಕ್ಕೆ ಒಳಗಾಗುವುದು, ಗ೦ಡು ತೆರೆಮರೆಯಲ್ಲಿ ತಪ್ಪಿಸಿಕೊಳ್ಳುವುದು ಅನ್ಯಾಯ. ಇದು ಖ೦ಡನೀಯ. ಇಲ್ಲಿ ತಪ್ಪು ಇಬ್ಬರದೂ ಸಮಾನವಾಗಿ ಇದೆ. ಹಾಗಿರುವುದರಿ೦ದ ಒಬ್ಬರನ್ನು ಮಾತ್ರ ತಪ್ಪುಗಾರರೆ೦ದು ಪ್ರಾಜೆಕ್ಟ್ ಮಾಡುವುದು ಸರಿಯಲ್ಲ. ನಿಮ್ಮ ವಾದಕ್ಕೆ ನನ್ನ ಸಹಮತ ಇದೆ.

ತೇಜಸ್ವಿನಿ ಹೆಗಡೆ ಹೇಳಿದರು...

@ಸುಬ್ರಹ್ಮಣ್ಯ, ಅಶೋಕ್ -

ಹೌದು... ಎಷ್ಟು ವರುಷ ಬದಲಾದರೂ ಈ ಒಂದು ನಮ್ಮ ಧೋರಣೆ ಮಾತ್ರ ಬದಲಾಗದು. ತಮಗೆ ಅನ್ಯಾಯವಾದಾಗ ಮಾತ್ರ ಎಚ್ಚೆತ್ತುಕೊಂಡು ಕೂಗಾಡಿದರೆ ಪ್ರಯೋಜನ ಆಗದು. ಸ್ಪಂದನೆ ಪ್ರಸ್ಪರವಿದ್ದಾಗ ಮಾತ್ರ ಸುಧಾರಣೆ ಸಾಧ್ಯ (ನಿಧಾನವಾಗಿಯಾದರೂ). ನಮ್ಮ ಕೈಲಾದಷ್ಟು ನಾವು ದನಿಯೆತ್ತಿ ಪ್ರತಿಭಟಿಸಿದರೆ ನೂರರಲ್ಲಿ ಒಬ್ಬರಾದರೂ ಸ್ಪಂದಿಸುತ್ತಾರೆ.

ಧನ್ಯವಾದಗಳು.

@ಸುಮ, ಚಿತ್ರಕ್ಕ,

ಹೂಂ... ಸಮಾಜ ಸುಧಾರಕರಲ್ಲಿ ಹಲವರು ಸ್ವತಃ ಸುಧಾರಿಸುವ ಅವಶ್ಯಕತೆ ಇದೆ. ಧೈರ್ಯವಿದ್ದಾಗ ಮಾತ್ರ ಛಲ ಬರುವುದು. ಛಲವಿದ್ದಾಗ ಮಾತ್ರ ಬಲ ತುಂಬುವುದು. ಮನೋಬಲದ ಮುಂದೆ ಎಲ್ಲವೂ ನಗಣ್ಯವೇ.

ಧನ್ಯವಾದಗಳು.

@ಪರಾಂಜಪೆ ಸರ್,

ಮೆಚ್ಚುಗೆಗೆ, ಬೆಂಬಲಕ್ಕೆ ತುಂಬಾ ಧನ್ಯವಾದಗಳು.