ಗುರುವಾರ, ಜನವರಿ 20, 2011

ಹಳೆ ನೆನಪು.... ಹೊಸ ಕನಸು

ಒಮ್ಮೊಮ್ಮೆ ಈ ನೆನಪುಗಳೇ ಹೀಗೆ-
ನವಿರಾದ ರೇಶ್ಮೆಯ ತುಣುಕೊಂದು
courtesy - http://vi.sualize.us 
ಮೆಲುಮೆಲ್ಲನೆ ಕಿರುಬೆರಳ ಸ್ಪರ್ಶಿಸಿದಂತೆ
ಭೋರ್ಗರೆವ ಜಲಪಾತವೊಂದು ಧುಮ್ಮಿಕ್ಕಿ,
ತಣ್ಣನೆ ಹರಿದು ಜುಳು ಜುಳು ನಿನಾದಗೈವಂತೆ..
ಇಳೆಯ ಮೇಲೆ ಚಲ್ಲಿರುವ ಮಲ್ಲೆಮೊಗ್ಗುಗಳೆಲ್ಲಾ
ಆಗಸಕೆ ಚಿಮ್ಮಿ ಅಂಟಿ, ಮಿಣುಕಾಡುವಂತೆ...
ಕೊಳದೊಳಗೆ ಹರಿದಾಡುವ ಕಿರು ಮೀನುಗಳು
ಕಾಲ್ಬೆರಳುಗಳ ಕಚ್ಚಿ ಹಿತವಾದ ನೋವನೀವಂತೆ...

ಒಮ್ಮೊಮ್ಮೆ ಈ ನೆನಪುಗಳೂ ಹೀಗೆ-
ಕಾದ ಬಾಣಲೆಯೊಳಗಿನ ಎಣ್ಣೆಗೆ
ಹನಿ ನೀರು ಬಿದ್ದು ಸಿಡಿವಂತೆ...
ಮಾಗಿರುವ ಹಳೆಯ ಗಾಯದೊಳಗೆ
ಕಾಸರ್ಕದ ಮುಳ್ಳೊಂದು ಹೊಕ್ಕಂತೆ..
ಬಿಳಿಬಟ್ಟೆಯ ಮೇಲೆ ಬಿದ್ದ ಕರಿಶಾಯಿಯೊಂದು
ತೊಳೆದರೂ ಹೋಗದ ಕಲೆಯೊಂದ ಬಿಟ್ಟಂತೆ..
ನೊರೆಯುಕ್ಕಿ ಹೊರ ಚೆಲ್ಲುತಿರುವ ಹಾಲಿನೊಳು
ಹನಿ ಹುಳಿ ಹಿಂಡಿ, ಕ್ಷಣದೊಳಗೆ ಒಡೆವಂತೆ...

ಈ ನೆನಪುಗಳೊಳಗಿನ ಜೊಳ್ಳುಗಳನ್ನಾರಿಸಿ
ಉಸಿರನೀವ ಹಳೆ ನೆನಪುಗಳ ಬೀಜ ಬಿತ್ತಿ,
ಹಸಿರಾಗುವ ಹೊಸ ಕನಸುಗಳ ಸಸಿಯ ಬೆಳೆಸಿ,
ನನಸಾಗುವ ಫಲಗಳ ಸವಿಯ ಮೆಲ್ಲಲು,
ಒಮ್ಮೊಮ್ಮೆ ಮರೆವೆಂಬ ಗೊಬ್ಬರವ
ಮನದಾಳದೊಳಗೆ ಸುರಿಯಬೇಕಿದೆ...

-ತೇಜಸ್ವಿನಿ

10 ಕಾಮೆಂಟ್‌ಗಳು:

sunaath ಹೇಳಿದರು...

ತೇಜಸ್ವಿನಿ,
ಗಣಕಯಂತ್ರದ ತೊಂದರೆಯಿಂದಾಗಿ, ಒಂದು ವಾರದವರೆಗೆ ಅಂತರಜಾಲಕ್ಕೆ ಬರಲು ಆಗಿರಲಿಲ್ಲ. ಈದಿನ ನಿಮ್ಮ ಕವನವನ್ನು ಓದಿ ಖುಶಿಯಾಯಿತು. ಅಭಿನಂದನೆಗಳು.

ಅನಾಮಧೇಯ ಹೇಳಿದರು...

ನಿಮ್ಮ ಕವನ ಹಾಗು ಇದರ ಜೊತೆಗೆ ಲಗತ್ತಿಸಿರುವ ಪಾಪೆ ತುಂಬಾ ಇಷ್ಟವಾಯಿತು.

ಕಾಸರ್ಕದ ಮುಳ್ಳೊಂದು ಹೊಕ್ಕಂತೆ - ಕಾಸರ್ಕ ಎಂದರೇನು ?

PARAANJAPE K.N. ಹೇಳಿದರು...

ಕಾದ ಬಾಣಲೆಯೊಳಗಿನ ಎಣ್ಣೆಗೆ
ಹನಿ ನೀರು ಬಿದ್ದು ಸಿಡಿವಂತೆ...
ಮಾಗಿರುವ ಹಳೆಯ ಗಾಯದೊಳಗೆ
ಕಾಸರ್ಕದ ಮುಳ್ಳೊಂದು ಹೊಕ್ಕಂತೆ..
ಆಹಾ,,,,,,,ತು೦ಬಾ ಚೆನ್ನಾಗಿದೆ ತೇಜಸ್ವಿನಿಯವರೇ....

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ, ಕವನ ಹಾಗೂ ಚಿತ್ರ ಎರಡೂ ಒಂದಕ್ಕೊಂದು ಪೂರಕವೆಂಬಂತಿದೆ. ಚೆನ್ನಾಗಿದೆ. ಅಭಿನಂದನೆಗಳು.

ಸಾಗರದಾಚೆಯ ಇಂಚರ ಹೇಳಿದರು...

chitrakkagi kavanavo, kavanakkaagi chitravo,
sunda saalugalu
nenapugalu haageye allave?

shivu.k ಹೇಳಿದರು...

ತೇಜಸ್ವಿ ಮೇಡಮ್,

ಒಂದು ಉತ್ತಮ ಚಿತ್ರ ಸಿಕ್ಕಿದರೆ ಅದಕ್ಕೆ ಕವನವನ್ನು ಬರೆದುಬಿಡುತ್ತೀರಿ. ನನಗೆ ಇದನ್ನು ಹೇಗೆ ಪ್ರಯತ್ನಿಸಿದರೂ ಕೂಡ ವಿಫಲನಾಗಿಬಿಡುತ್ತೇನೆ. ಎರಡು ಒಂದಕ್ಕೊಂದು ಪೂರಕವಾಗಿವೆ..ಥ್ಯಾಂಕ್ಸ್.

soumya ಹೇಳಿದರು...

ಎಲ್ಲ ತುಂಬಾ ಸುಂದರ ಸಾಲುಗಳು ತೇಜಕ್ಕ :) ಕೊಳದೊಳಗೆ ಹರಿದಾಡುವ ಕಿರು ಮೀನುಗಳು
ಕಾಲ್ಬೆರಳುಗಳ ಕಚ್ಚಿ ಹಿತವಾದ ನೋವನೀವಂತೆ...
ತುಂಬಾ ತುಂಬಾ ಇಷ್ಟ ಆತು :)

ಮನಸಿನಮನೆಯವನು ಹೇಳಿದರು...

ಕೈಜಾರಿದ ಪಾದರಸ
ಕೈಗೆ ಸಿಗದ ಮಣಿ ಮಣಿಯಾಗಿ ಉದುರಿದಂತೆ..

ಚೆನ್ನಾಗಿದೆ.

http://jyothibelgibarali.blogspot.com ಹೇಳಿದರು...

I think its really wonderful n really have no words to express my feelings but it is amazing ....
I have read all of your writing, u r the inspiration for all of us those who start to write....
thank u

ತೇಜಸ್ವಿನಿ ಹೆಗಡೆ ಹೇಳಿದರು...

ಕವನ ಮೆಚ್ಚಿ ಸ್ಪಂದಿಸಿದ, ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು.

-ತೇಜಸ್ವಿನಿ.