ತಂಗಾಳಿಯ ಬೆನ್ನೇರಿ,
ಹೊರಟಿದ್ದೆ ನಾ,
ನನ್ನಕನಸಿನೂರ ಕಡೆಗೆ,
ಮನ ಬಯಸಿದೆಡೆಗೆ....
ತಲುಪಿದೆ ಶರವೇಗದಲ್ಲಿ
ಸುಂದರ ನಗರಿಯೊಂದ,
ಹೆಬ್ಬಾಗಿಲ ಬಡಿಯಲೊಮ್ಮೆ,
ಮೆಲ್ಲನದು ತೆರೆದುಕೊಳಲು,
ನಾನಿದ್ದಲ್ಲೇ ಶಿಲೆಯಾದೆ....
ಪಟ್ಟಿಗಳಿಲ್ಲ, ಮೆಟ್ಟಿಲುಗಳಿಲ್ಲ,
ಮಹಡಿಗಳಿಲ್ಲ, ಏರುಗಳಿಲ್ಲ!!
ಗುಡ್ಡಗಾಡು, ಬೆಟ್ಟ, ನದಿ,
ಎತ್ತ ಹೋದರತ್ತ ನೋಡು,
ಏರಿಳಿತಗಳಿರದ ದಾರಿ!!
ಇಲ್ಲಿ ಯಾರ ಹಂಗಿಲ್ಲ,
ನೆರವಿನ ಯಾಚನೆಯಿಲ್ಲ,
ಇತರರ ನಿರೀಕ್ಷೆಯಿಲ್ಲ,
ಇಲ್ಲದುದರ ದುಃಖವಿಲ್ಲ,
ಹತ್ತು, ಇಳಿ ಪರದಾಟವಿಲ್ಲ,
ಮರುಕ ಪಡುವ ಜೀವಿಯಿಲ್ಲ.
ಅವರೂ ಇಲ್ಲಿ ಎಲ್ಲರಂತೆ
ಅವರಿಗಿಲ್ಲ ಯಾವ ಚಿಂತೆ
ಹೋದಲ್ಲಿ, ಬಂದಲ್ಲಿ....
ಬೇಕಿಲ್ಲ ಯಾರ ಜೊತೆ,
ಬದುಕಿಲ್ಲಿ ನವಿರಾಗಿದೆ.
ಹಾಯಾಗಿ ನಗುವಾಗಲೇ,
ಮುಸ್ಸಂಜೆಯು ಕವಿಯಿತು.
ತಂಗಾಳಿಯು ಬಿರುಸಾಗಲು,,
ಕನಸಿನೂರು ಕರಗಿಹೋಗಿ,
ಮನ ವಾಸ್ತವಕೆ ಮರಳಿತು.
ಮತ್ತದೇ ಏರು, ತಗ್ಗು,
ಅಡ್ಡ ತಿಡ್ಡಿ ಮೆಟ್ಟಿಲ್ಹತ್ತು...
ಯಾಚನೆಯ ಕಣ್ಣೋಟ,
ಅಸಹನೆಯ ಪರೆದಾಟ....
ನಮಗಿಲ್ಲಿ ಬದುಕೇ ವಿಕಲ!
[ಕಟ್ಟೋಣವೇ ಇಂತಹ ಕನಸಿನೂರೊಂದ? ಕಟ್ಟಬೇಕಿದೆ ನಾವೆಲ್ಲ ಸೇರಿ ಇಂತಹ ಸುಂದರ ಸಮಾಜವೊಂದ, ನಗರವೊಂದ. ಮನಸ್ಸನ್ನು ವಿಕಲಗೊಳಿಸದೇ, ಅಂತಹವರ ಬದುಕನ್ನೂ ಸಹನೀಯಗೊಳಿಸಿದರೆ ಸಾಕು, ಅವರ ಚೇತನ ರಹಿತ ಅಂಗವೂ ಚೈತನ್ಯದ ಚಿಲುಮೆಯಾಗುವುದು. ನಿಮ್ಮಂತೆ, ಅವರಿಗೂ ಬದುಕಲು ಭವಿಷ್ಯವ ಕಟ್ಟಬೇಕಿದೆ. ಮಾಸಿದ ಕಟ್ಟಡಗಳಿಗೆ ಯಾವುದೇ ಅಡೆತಡೆಗಳಿಲ್ಲದ ಹೊಸ ರಂಗನ್ನು ತುಂಬಬೇಕಾಗಿದೆ. ಎಲ್ಲರ ಮನಸೂ ಇದನ್ನು ಸಾಕಾರಗೊಳಿಸುವ ಸಂಕಲ್ಪವನ್ನು ಮಾಡಬೇಕಿದೆ. ಒಂದು ಕ್ಷಣ ನಿರ್ಧರಿಸುವ ಮನಸು, ಮರುಕ್ಷಣ ಮರುಕದಲ್ಲಿ ಅಂತ್ಯಗೊಂಡರೆ, ಸಮಾನತೆಯ ಬದುಕಿನ ಕನಸು ಕನ್ನಡಿಯೊಳಗಿನ ಗಂಟೇ ಸರಿ! ಆಗ ಭವಿಷ್ಯದಲ್ಲೂ ನಮ್ಮ ಬದುಕು ವಿಕಲವಾಗಿರುತ್ತದೆ...ನಾವು ಎಷ್ಟೇ ಸಚೇತನರಾಗಿದ್ದರೂ!!]
-ತೇಜಸ್ವಿನಿ
31 ಕಾಮೆಂಟ್ಗಳು:
ಮೇಡಂ, ಕನಸಿನೂರಿನಲ್ಲಿನ ಚಂದ ನಿಜ ಜೀವನದಲ್ಲಿ ಏರುತಗ್ಗುಗಳಿರುವ ಊರೇ ಹೌದು.ಕವನ ಮನಸ್ಸನ್ನು ಕಲಕುವಂತಿದೆ.
ತೇಜಸ್ವಿನಿಯವರೆ ನಿಮ್ಮ ಕವನ ತುಂಬಾ ಇಷ್ಟವಾಯಿತು. ನಿಮ್ಮ ಮಾತಿನಂತೆ ಕನಸಿನೂರಲಿ ಕಂಡಂತೆ ಹೊಸ ನಾಡನ್ನು ಕಟ್ಟೋಣ, ವಿಕಲತೆ ಇರದೆ ಸ್ವಚ್ಚತೆಯ ಕಾಪಾಡೋಣ. ಮೊದಲು ನಮ್ಮ ಸುತ್ತಮುತ್ತ ನಂತರ ಅದರಾಚೆಗೆ ದಾಟೋಣ. ಸುಂದರ ಸಮಾಜ ಕಟ್ಟುವುದು ಕನ್ನಡಿಯೊಳಗಿನ ಗಂಟಾಗದಿರಲಿ ಅಲ್ಲವೆ.
nice one ...
ಚೆ೦ದದ ಆಶಯ. ಆದರೇ ಇದು ಸಾಧ್ಯವೇ? ಕನ್ನಡಿ ಗ೦ಟೇ ಸರಿ. ಆದರೆ ಏರಿಳಿತವಿಲ್ಲದ ಬದುಕಿನಲ್ಲಿ ಸಾಗುವ ಪಯಣ ಮಾನವನಿಗೇ ರುಚಿತವೇ? ನೀರಸವೆನಿಸದೇ? ಎ೦ಬ ಪ್ರಶ್ನೇಗಳು ಕಾಡದೇ ಇರಲಾರದು ಅಲ್ಲವೇ!. ಚೆ೦ದ ಆಶಯದ ಕವನ ಮನ ತಟ್ಟಿತು.
@ ಚಂದ್ರಶೇಖರ್, ಮನಸು, ಸುಬ್ರಹ್ಮಣ್ಯ ಭಟ್,
ಮೆಚ್ಚುಗೆ ಭರಿತ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.
@ ಸೀತಾರಾಮ್ ಅವರೆ,
ಜೀವನದಲ್ಲಿ ಏರಿಳಿತಗಳು ಬೇಕು ನಿಜ. ಆದರೆ ಅದು ಬಾಹ್ಯರೂಪದಲ್ಲಿದ್ದರೆ ಒಂದು ವರ್ಗದ ಜನರಿಗೇ ಬದುಕಲಾಗದು. ಇಲ್ಲಿ ಈ ಪ್ರಸ್ತುತ ಕವನದಲ್ಲಿ ನಾನು ಅಂಗವಿಕಲರ ಸಮಸ್ಯೆಗಳ ಚಿತ್ರಣವನ್ನು ನೀಡಲೆತ್ನಿಸಿದ್ದೇನೆ. ಅನೇಕ ಮೆಟ್ಟಿಲುಗಳು, ಲಿಫ್ಟ್ ಇಲ್ಲದ ಮಹಡಿಗಳು, ಉಬ್ಬು ತಗ್ಗುಗಳಿಂದ ಕೂಡಿರುವ ರಸ್ತೆಗಳು ದಿಣ್ಣೆಗಳು, ಹತ್ತಲಾಗದ ವಾಹನಗಳು- ಇತ್ಯಾದಿ ಸಮಸ್ಯೆಗಳು ಅವರ ಸರಾಗ ನಡಿಗೆಗೆ ಮತ್ತೂ ಅಡ್ಡಿಯಾಗಿತ್ತವೆ. ಎಲ್ಲೆಂದರಲ್ಲಿ ಹೋಗಲು ಆಗದಂತೆ ನಿರ್ಮಿಸಿರುವ ಈ ವ್ಯವಸ್ಥೆಗಳಿಂದ ಅವರ ಬದುಕು, ದಿನಚರ ಅಸ್ತವ್ಯಸ್ಥವಾಗುತ್ತಿದೆ. ಇದರ ಸ್ಥೂಲ ಚಿತ್ರಣವನ್ನಷ್ಟೇ ಕಟ್ಟಿಕೊಟ್ಟಿದ್ದೇನೆ. ಅಂತಹವರಿಗಾಗಿ ಏರಿಳಿತಗಳಿಲ್ಲದ ದಾರಿಯನ್ನು ನಿರ್ಮಿಸಿದರೆ ಅವರು ಸಾಗುವ ಶ್ರಮ ಅಲ್ಪವಾದರೂ ಕಡಿಮೆಯಾಗುವುದು ಅಲ್ಲವೇ? ಇದಕ್ಕಾಗಿ ಇಬ್ಬಿಬ್ಬರಲ್ಲ... ಆದಷ್ಟು ಸಹೃದಯರು ಬದಲಾವಣೆಗಾಗಿ ಶ್ರಮಿಸಬೇಕಾಗಿದೆ. ಅದನ್ನೇ ಇಲ್ಲಿ ಹೇಳುತ್ತಿದ್ದೇನಷ್ಟೇ!
ತುಂಬಾ ಧನ್ಯವಾದಗಳು.
ತೇಜಸ್ವಿನಿ ಮೇಡಂ,
ವಿಕಲತೆ ಮನಸ್ಸಲ್ಲಿದೆ ಮೇಡಂ, ನೋಡುವ ಕಣ್ಣಲ್ಲಿದೆ...... ನಿಮ್ಮ ಕನಸು ಹಾಗೆ ಮುಂದುವರಿದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಆಲ್ವಾ..... ಆದರೆ ಅದು '' ಕನ್ನಡಿಯೊಳಗಿನ ಕನಸು ''
ಕವನ ಚೆನ್ನಾಗಿದೆ... ಕನ್ನಡಿಯೊಳಗಿನ ಕನಸಿನೂರಿಗೆ ಸ್ವರ್ಗಲೋಕದ ಸಾಮ್ಯವಿದೆ.
ತೇಜಸ್ವಿನಿ ಮೇಡಂ,
''ಹೊಸನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ .....
ಕಟ್ಟುವೆವು ನಾವು ಹೊಸ ನಾಡೊಂದನು'' ನೆನಪಿಗೆ ಬಂತು
ತುಂಬಾ ಚೆಂದದ ಪದ್ಯ
ಹಾಗೆಯೇ ನಮ್ಮ ನಾದದರೆ ಎಷ್ಟು ಚಂದ ಅಲ್ಲವೇ
ತೇಜಸ್ವಿನಿಯವರೇ..
ಕವನ ಓದಿದೊಡನೆ ಮನಸ್ಸಿಗೆ ನಾಟಿ ಬಿಡತ್ತೆ. ಹೌದು ನಿಮ್ಮ ಮಾತು ಎಷ್ಟು ನಿಜವಾಗಿದೆ. ಒಂದು ಕ್ಷಣ ನಿರ್ಧರಿಸುವ ಮನಸ್ಸು ಮರುಕ್ಷಣ ಮರುಕಗೊಂಡು ಬಿಡತ್ತೆ...ಅದಕ್ಕೆಡೆ ಕೊಡದೆ, ಮನಸ್ಸು ಗಟ್ಟಿಮಾಡಿ, ಸ್ವಚ್ಛ ಸಮಾಜ ರಚಿಸಲು ನಾವೆಲ್ಲರೂ ಖಂಡಿತಾ ಶ್ರಮಿಸೋಣ. ನನಗೆ ಕವನ, ಅದರ ಕೆಳಗಿನ ನಿಮ್ಮ ಪುಟ್ಟ ವಿವರಣೆ ಎರಡೂ ಇಷ್ಟವಾಯಿತು....
ಶ್ಯಾಮಲ
modala pyara raashi cholo iddu.beredu adrashtu entakko oadisikondu hoglille:) but totally kavana cholo iddu:)
ಕವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಕ್ಕ .
ಉತ್ತಮ ಕವಿತೆ.
Nice one.
ಚೆನ್ನಾಗಿದೆ
ತೇಜಸ್ವಿನಿ...
ಚ೦ದದ ಕನಸು....
ಚ೦ದದ ಕವಿತೆ...
ಪ್ರತಿಯೊಬ್ಬರೂ ತಮ್ಮ ಪರಿಧಿಯಲ್ಲಿಯೆ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಿದೆ...
ಕನ್ನಡಿಯ ಮೇಲೆ ಧೂಳು ಕೂತಿದೆ...
ಒರೆಸುವುದಷ್ಟೇ ಬಾಕಿಯಿದೆ...
ತೇಜಕ್ಕ ಕವನದ ಆಶಯ ತುಂಬಾ ಖುಷಿ ನೀಡಿತು. ಈ ಕವನಕ್ಕೆ ಪ್ರೇರಣೆ ಏನು? ವಾಸ್ತವದ ಜಗತ್ತಿನಿ೦ದ ಕನಸಿನ ಲೋಕಕ್ಕೆ ಹೊರತು ಬಿಟ್ಟಿದ್ದೀರ? ಇವೆಲ್ಲವನ್ನೂ ಕನಸಿನಲ್ಲಿ ಮಾತ್ರ ಊಹಿಸಲು ಸಾದ್ಯ!
ನಿಮ್ಮ ಎ೦ದಿನ ಶೈಲಿಗಿಂತ ವಿಭಿನ್ನವಾಗಿದೆ ಈ ಕವನದ ಶೈಲಿ... ಕವನದ ಗೇಯತೆ ಇಷ್ಟ ಆಯಿತು.
ಮೇಡಂ ಆಶಾಭಾವದಿಂದ ಕೂಡಿದ ನಿಮ್ಮ ಕವಿತೆ ಇಷ್ಟ ಆತು...
ನಿಜ ತೇಜಸ್ವಿನಿ . ಅಂಗವಿಕಲರ ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಾಗಿರುವುದು ಎಲ್ಲ ನಾಗರೀಕ ಸಮಾಜದ ಜವಾಬ್ದಾರಿ. ಕವನದ ಆಶಯ ಚೆನ್ನಾಗಿದೆ.
ಇದು ಸಜ್ಜನರ ಕನಸಿನ ಲೋಕ. ಸಾಧ್ಯವಾಗುವದಾದರೆ ಚೆನ್ನ!
ಬದುಕಲ್ಲ ತೇಜೂ, ವಿಕಲವಾಗಿರುವುದು ಸಮಾಜದ ಮನಸ್ಸು !
ದ್ವೇಷ , ಅಸೂಯೆ, ಅಸಹನೆ, ಕೀಳು ನೋಟ , ಅಸಮಾನತೆ, .... ಒಂದೇ ಎರಡೇ ತಿದ್ದಬೇಕಾಗಿರುವುದು?
ನೀ ಕಂಡ ಕನಸು ವಾಸ್ತವದಲ್ಲಿ ಕೈಗೆ ಸಿಕ್ಕದೆ ಕರಗಿ ಹೋಗದಂತೆ ಕಾಯುವ ಮನಸು ಬೇಕಾಗಿದೆ !
ಇನ್ನು , ಯಾರಿಗೂ ಅಸಹಾಯಕತೆ ಬಾಧಿಸದಂತೆ , ವಿಕಲಾಂಗರಿಗಷ್ಟೇ ಅಲ್ಲಾ , ಸಕಲಾಂಗರಿಗೂ ಸುಲಭವಾಗುವಂತೆ ಕಟ್ಟಡಗಳನ್ನು ಕಟ್ಟುವ , ರಸ್ತೆಗಳನ್ನು ನಿರ್ಮಿಸುವ ಕನಸು ಸಾಕಾರವಾಗುವುದು ಎಂದೋ ! ಅಂತಹ ಸುಂದರ ಊರನ್ನು , ಒಂದು ಓರೆ ಏಕೆ, ಎಲ್ಲಾ ಊರುಗಳನ್ನೂ ಹಾಗೇ ಸುಂದರವಾಗಿಸುವಲ್ಲಿ ನಮ್ಮೆಲ್ಲರ ಪ್ರಯತ್ನ ಅಗತ್ಯವಿದೆ ಅಲ್ಲವೇ? ಆ ದಿಶೆಯಲ್ಲಿ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ !
ನಮಸ್ತೆ,
ಚೆಂದದ ಕನಸಿನೂರು ನನಸಾಗಲಿ.....
ಇಂತಹ ಕನಸಿನೂರೊಂದನ್ನು ಎಲ್ಲ ಸೇರಿ ಕಟ್ಟೋಣ....
ಸುಂದರ ಸಮಾಜ ಕನ್ನಡಿಯೊಳಗಿನ ಗಂಟಾಗದಿರಲಿ.....
ಚೆಂದದ ಸಾಲುಗಳು.....
ಕನಸು ಮತ್ತು ವಾಸ್ತವಗಳ ನಡುವಿನ ಅಂತರ ತಿಳಿಸುವ ನಿಮ್ಮ ಕವನ ತುಂಬಾ ಚನ್ನಾಗಿದೆ. ಕನಸಿನಲ್ಲಿ ಕಂಡ ಊರೊಂದು ಇದ್ದರೆ ಎಷ್ಟು ಚೆನ್ನ ಅಲ್ಲವೆ?
ನಿಮ್ಮ ಇ೦ದಿನ ಕನಸು ಮು೦ದೊ೦ದು ದಿನ ನನಸಾಗಬಹುದು.
ನಿಮ್ಮ ಆಶಾವಾದಿ ಮನಸ್ಸು ಇನ್ನೂ ಸು೦ದರ ಕನಸುಗಳನ್ನು ಕಾಣಲಿ.ಮತ್ತೆ ನನಸೂ ಆಗಲಿ.
ಕವಿತೆ ಹಿಡಿಸಿತು.
ಕವಿತೆ ಚೆನ್ನಾಗಿ ಮೂಡಿಬಂದಿದೆ!
ಚನಾಗಿದ್ದು ಕವಿತೆ
ಚನಾಗಿದ್ದು ಕವಿತೆ
ತೇಜಸ್ವಿನಿ, ರಾಶಿ ಬಿದ್ದಿವೆ ಆಗಲೇ ಪ್ರತಿಕ್ರಿಯೆಗಳು...!!! ಇಲ್ಲಿ ನನಗೆ ಶಾರೀರಿಕ ವಿಕಲತೆ ಮತ್ತು ಮಾನಸಿಕ ವಿಕಲತೆ ಎರಡರ ಹೋಲಿಕೆ ಕಾಣುತ್ತಿದೆ...ಎರಡಕ್ಕೂ ಸಮತಟ್ಟು, ಸೀದಾ-ಸಾದಾ ಮನಸು ಪ್ರಮುಖ easy-going (ಸರಾಗೀ ಜೀವನ)ಗೆ ಅನುಕೂಲ ಮತ್ತು ವಾಂಛಿತ ಸಹಾ ಅನಿಸುತ್ತೆ. ಒಳಗೊಂದು ಹೊರಗೊಂದು ಮನಸ್ಸು..ಭೌತಿಕ ಏರು-ತಗ್ಗುಗಳಂತೆ...ಮುನ್ನಡೆಯಲು ಸಾಮಾನ್ಯರಿಗೇ ತೊಂದರೆ...ಇನ್ನು ವಿಕಲಿಗಳಿಗೆ (ಬೌದ್ಧಿಕ, ಶಾರೀರಿಕ) ಹೇಗೆ?...ಚನ್ನಾಗಿವೆ ಸಾಲುಗಳು...
'ತೇಜಸ್ವಿನಿ ಹೆಗಡೆ ' ಅವರೇ..,
ಸೊಗಸಾದ ಕಲ್ಪನೆ..
ನನ್ನ 'ಮನಸಿನಮನೆ'ಗೆ...:http//manasinamane.blogspot.com
Nice one..
ತು೦ಬ ಚೆನ್ನಾಗಿದೆ ಕವನ. ಏರುತಗ್ಗುಗಳ, ಹಳ್ಳದಿಣ್ಣೆ ಗಳ ದಾರಿಯಲ್ಲಿ ಕನಸಿನೂರಿಗೆ ತಲುಪುವುದೇ ಜೀವನ
ಕವನವನ್ನು ಮೆಚ್ಚಿ, ಪ್ರತಿಕ್ರಿಯೆಗಳ ಮೂಲಕ ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಪ್ರೇರಣೆ ನನ್ನ ಬರಹಗಳಿಗೆ ಹೀಗೇ ಸ್ಪೂರ್ತಿ ತುಂಬುತ್ತಿರಲೆಂದು ಆಶಿಸುವೆ.
-ತೇಜಸ್ವಿನಿ.
ಕಾಮೆಂಟ್ ಪೋಸ್ಟ್ ಮಾಡಿ