ಸೋಮವಾರ, ಜನವರಿ 20, 2014

ಕಣ್ಣ ಹನಿಗಳೇ ಅರ್ಪಣೆ

ನೀ ಬೆಳೆದಿದ್ದ ತೊಂಡೆ, ಅಲಸಂಡೆ, ಸವತೆ
ಚಪ್ಪರಗಳ ತಂಪೆರಳಿನಲ್ಲಾಡಿದ್ದ ನನ್ನ ಬಾಲ್ಯ,
ಪಾತಕ್ಕ(ಪಾರ್ವತಿ)
ನಿನ್ನ ಬಟಾಟೆ ಹಲ್ವದ  ಸ್ವಾದದ  ಮೆಲುಕು,
ಹೊತ್ತಲ್ಲದ ಹೊತ್ತಲ್ಲೂ ನಿನ್ನ ಹೇಗಲೇರಿ,
ಗುಡ್ಡ ಬೆಟ್ಟವ ಸುತ್ತಾಡಿ ದಣಿಸಿದ್ದು,
ಮೇಲುಸಿರು ಬಿಡುತಿದ್ದ ನನ್ನ ಹೊತ್ತು
ಹತ್ತು ಮೈಲು ದೂರ ಸಾಗಿ,
ನೀನು ಏದುಸಿರುಬಿಟ್ಟಿದ್ದು....!

ನಮ್ಮ ಮದುವೆಗೆ ಹಾರೈಸಿ ನೀನಿತ್ತಿದ್ದ
ಸ್ಟೀಲಿನ ದೊಡ್ಡ ಪೀಪಾಯಿಯ ತುಂಬಾ
ತುಂಬಿವೆ ಅಕ್ಕಿಕಾಳುಗಳು!
ಒಂದೊಂದು ಕಾಳಿನೊಳಗೂ ನಿನ್ನ-ನನ್ನ
ನೆನಪುಗಳದೇ ಚಿತ್ರಗಳು...
ಪಾತಕ್ಕ, ಏನನ್ನು ನಾ ಕೊಡಲಿ ನಿನಗೆ?
ನೀ-ನನಗಿತ್ತುದರ ಬದಲಾಗಿ?
ಈ ಹನಿಗವಿತೆಯ ಅರ್ಪಣೆಯ ಜೊತೆ,
ಅಶ್ರುತರ್ಪಣವು ನಿನ್ನಾತ್ಮದ ಶಾಂತಿಗಾಗಿ.


-ಪವಾಡ ಎಲ್ಲರ ಪಾಲಿನ ಅದೃಷ್ಣವಲ್ಲ. :( ಒಳಗೆಲ್ಲೋ ಏನೋ ಒಂದು ಆಶಯ, ಹಾರೈಕೆ ಜೀವಂತವಾಗಿತ್ತು ಇಷ್ಟು ದಿನ.... ಆದರೆ ಇಂದು ಎಲ್ಲವೂ ಶೂನ್ಯ! ನಮ್ಮೆಲ್ಲರ ನೆಚ್ಚಿನ ಬಾಲ್ಯದ ಗೆಳತಿ, ಚಿಕ್ಕಮ್ಮ, ಪ್ರೀತಿಯಿಂದ ನಾವೆಲ್ಲಾ "ಪಾತಕ್ಕ" ಎಂದೇ ಕರೆಯುತ್ತಿದ್ದ, ಈಗಲೂ ಕರೆಯುವ, ಅಮ್ಮನ ಕಿರಿಯ ತಂಗಿ ಪಾರ್ವತಿ ಇಂದು ಅನಂತದಲ್ಲಿ ವಿಲೀನ. :( :( :( ಅವರ ಇಬ್ಬರು ಚಿಕ್ಕ ಮಕ್ಕಳ ಸ್ಥೈರ್ಯ ಹಾಗೂ ಮಾನಸಿಕಶಕ್ತಿಗಾಗಿ ಇನ್ನು ಅನುದಿನವೂ ನಮ್ಮ ಪ್ರಾರ್ಥನೆ. ಈ ಪುಟ್ಟ ಕವಿತೆ ನನ್ನ ಪಾತಕ್ಕನಿಗೆ ಅರ್ಪಣೆ.


-ತೇಜಸ್ವಿನಿ.

3 ಕಾಮೆಂಟ್‌ಗಳು:

ಮನಸು ಹೇಳಿದರು...

ನಾವಂದುಕೊಂಡಂತೆ ಜೀವನ ಇರುವುದಿಲ್ಲ ಅಲ್ವಾ.. ಇನ್ನು ಚಿಕ್ಕಮ್ಮನ ಮಕ್ಕಳು ಹೇಗೆ ಸಹಿಸುತ್ತಾರೋ ಈ ನೋವನ್ನು. ದೇವರು ಆ ಕುಟುಂಬಕ್ಕೆ ಮತ್ತು ನಿಮ್ಮೆಲ್ಲರಿಗೂ ದುಃಖ ಭರಿಸುವ ಶಕ್ತಿ ಕೊಡಲಿ.

Anuradha ಹೇಳಿದರು...

ಶ್ರಧ್ಧಾಂಜಲಿಗಳು .

sunaath ಹೇಳಿದರು...

ನಿಮ್ಮೊಂದಿಗೆ ನನ್ನದೂ ಒಂದು ಹನಿ ಕಣ್ಣೀರು.