ಮಂಗಳವಾರ, ಜನವರಿ 7, 2014

ನವಮದಲ್ಲಿ.....

ಆ ಬಲಗೈ ಬೆಸೆದಿದ್ದ ಬೆಸುಗೆಯಿಂದಲೋ
ಭಾವ ಮಂಥನದ ನಡುಕದಿಂದಲೋ
ಬೆವರಿದ ನನ್ನ ಬಲಗೈಯಿಂದೆದ್ದು,
ಹನಿಯುತ್ತಿದ್ದ ಬೆವರಿನಹನಿಗಳನ್ನೇ
ಬಾಗಿ ನೋಡುತ್ತಿದ್ದ ನೊಸಲ ಹನಿಗಳು.....
ಹೊಸ ರೇಶಿಮೆ ಸೀರೆಯ ಸರಪರದ ಸದ್ದು,
ಜೊತೆಗೆ ಮಲ್ಲೆ ಹೂವುಗಳ ಮತ್ತು,
ಅನೂಹ್ಯ ರೋಮಾಂಚನಕೆಳೆಸಿದ ಆ
‘ಸುಲಗ್ನೇ ಸಾವಧಾನ....ಸುಮುಹೂರ್ತೇ ಸಾವಧಾನ..’

ಲಾಜಹೋಮದಲ್ಲಿ ತುಸು ಬಿಸಿಯಾದ
ಕೈ ಸವರಿ ಮೆಲುನಕ್ಕಿದ ಆ ಪರಿ,
ಅರಳು ಹೊಯ್ದು ಮರಳು ಮಾಡಿ
ಕಣ್ಸೆರೆ ಹಿಡಿದು ಕೆಂಪಾಗಿಸಿದಾ ನೋಟ,
ಕೊರಳೊಳಗಿನ ಕರಿ ಮಣಿಗಳ
ಪಿಸುದನಿಗಳ ಕಚಗುಳಿಗಳು,
ಸುಖಾಸುಮ್ಮನೆ ಹೊಡೆದುಕೊಳ್ಳುತ್ತಿದ್ದ
ಎದೆಬಡಿತದ ಸದ್ದು...

ಹನಿಗಣ್ಣಾದ ಅಪ್ಪ, ಕಣ್ತಪ್ಪಿಸುತಿದ್ದ ಅಮ್ಮ
ಅರಳಿದ ತಂಗಿಯರ ಮೊಗ,
ಅಪ್ಪಿದ ಸ್ನೇಹಿತೆಯ ಗುಟ್ಟು-
ತಂದ ಅರಿಯದ ಪುಳಕದ ಹೊತ್ತು,
ಹಳೆ ಬಂಧಗಳ ಜೊತೆ ಜೊತೆಯಲಿ
ಹೊಸ ಬಂಧಗಳಡೆ ನಾ-
ನಿತ್ತ ಆ ಏಳು ಹೆಜ್ಜೆಗಳು,
ಕಿರು ಹುಬ್ಬುಗಳ ನಡುವೆ
ಕುಳಿತ ಕೆಂಪು ಚಂದಿರ ನಗಲು,
ನಡು ಹಗಲಿಗೇ ಹುಣ್ಣಿಮೆಯಾಗಿತ್ತು.

ಆ ದಿನ, ಆ ಸುಮೂಹರ್ತದಲ್ಲಿ
ಮೆಲು ನುಡಿದಿದ್ದ ಆ ದನಿ-
‘ಇದಿನ್ನು ನಿನ್ನ ಮನೆ’ ಮಾತೇ
ತುಸು ಚುಚ್ಚಿ, ತುಸು ಹೆಚ್ಚಿ
ಹಿಂತಿರುಗಿದಾಗ ಮಾತ್ರ, ನಾ-
ಬಂದಿದ್ದ ಮನೆಯೆಲ್ಲಾ ಮಸಕು ಮುಸುಕು...
ಈ ಮನೆಯಿಂದ ಆ ಮನೆಯೆಡೆ
ಪಯಣ ಸಾಗಿ ವರುಷಗಳೊಂಭತ್ತು ಕಳೆದರೂ,
‘ನಿಮ್ಮ ಮನೆ’ ನಮ್ಮ ಮನೆಯಾಗಲು
ವರುಷಗಳೇ ಬೇಕಾದವು!

ತನ್ನ ಮನೆಯಂಗಳದಿ
ಬಿರಿದಿದ್ದ ಹೂವೊಂದನ್ನು
ನಿಮ್ಮ ಮನೆಯಂಗಳಕೆ ಶೋಭಿಸಲು
ಧಾರೆಯನ್ನಿತ್ತ ಅವರಿಬ್ಬರನು ನೆನೆ-
ನೆನೆದು, ಮನಸಾರೆ ಒಪ್ಪಿದೆ
ನಮ್ಮಿಬ್ಬರ ಹೊಸ ಗೂಡನು...
ಪ್ರೀತಿ ಫಲದಲ್ಲಿ ಚಿಗುರಿಹ
ಮೊಗ್ಗೊಂದನು ಸಲಹುತ
ಬೃಂದಾವನವಾಗಿಸುತಿಹೆವು
ಮನೆ-ಮನವನು.

-ತೇಜಸ್ವಿನಿ ಹೆಗಡೆ

6 ಕಾಮೆಂಟ್‌ಗಳು:

ಸುಮ ಹೇಳಿದರು...

ಶುಭ ಹಾರೈಕೆಗಳು ತೇಜಸ್ವಿನಿ ....ಮನೆ ಮನ ಬೃಂದಾವನವಾಗಲಿ

Swarna ಹೇಳಿದರು...

ಚಂದಿರ ನಗುತ್ತಿರಲಿ , ಹಗಲು ಹುಣ್ಣಿಮೆಯಾಗಲಿ
ಮೊಗ್ಗು ಬಿರಿದು ಸಂತಸವನ್ನು ತರಲಿ
ಶುಭಾಶಯಗಳು ತೇಜಸ್ವಿನಿ

sunaath ಹೇಳಿದರು...

ಶುಭಾಶಯಗಳು. ಇನ್ನೂ ನೂರು ವರುಷ ಜೊತೆಯಾಗಿ ಬಾಳಿರಿ!

ಮನಸು ಹೇಳಿದರು...

ಶುಭಾಶಯಗಳು ತೇಜು... ಸದಾ ನಿಮ್ಮಿಬ್ಬರ ಪ್ರೀತಿ ಹೆಚ್ಚುತ್ತಲಿರಿ. ಮನೆ ನಂದನವನವಾಗಲಿ ಶಾಂತಿ, ನೆಮ್ಮದಿ ಸದಾ ಬೆಳಗುತಿರಲಿ

ಸಿಂಧು sindhu ಹೇಳಿದರು...

ತೇಜ್,
ಶುಭಾಶಯಗಳು ಇಬ್ರಿಗೂ.
ನಿನ್ನ ಕುಟುಂಬ ನೋಡಕ್ಕೆ ನಂಗೆ ತುಂಬ ಖುಶೀ. ಇದು ಯಾವತ್ತಿಗೂ ಹೀಗೇ ಇರ್ಲಿ.

ಪ್ರೀತಿಯಿಂದ,
ಸಿಂಧು

Subrahmanya ಹೇಳಿದರು...

ಸುಸಂಪನ್ನಮ್ :)