ಸೋಮವಾರ, ಜೂನ್ 13, 2011

ಆರದಿರಲಿ ಬೆಳಕು...

Courtesy:http://en.wikipedia.org/wiki/File:Karthigai_Deepam.jpg

ಪುಟ್ಟ ಹಾಸಿಗೆಯ ಮೇಲೆ ಚೊಕ್ಕ ಬಿಳಿ ಬಟ್ಟೆ
ಹಚ್ಚಗಾಗಲು ಮೆತ್ತನೆಯ ಚಾದರ, ದಿಂಬು
ಅಕ್ಕ ಪಕ್ಕ ನಿಂತು ಪಿಳಿಗುಡಿಸುತ್ತಿರುವ
ನಾಲ್ಕು ಜೋಡಿ ಪುಟ್ಟ ಕಣ್ಗಳು
ತುಸು ದೂರ ನಿಂತು ಕೈಕಟ್ಟಿದವನ
ಕಣ್ಗಳ ತುಂಬಾ ಅವಳದೇ ನೋವು

ನಾವಿಬ್ಬರು, ನಮಗಿಬ್ಬರೆಂದವರ
ಜೊತೆಗೂಡಲು ಬಂದಿತೊಂದು ಹೆಮ್ಮಾರಿ
‘ಅರ್ಬುದದ’ ರೂಪದಲಿ ಒಳಹೊಕ್ಕು,
ಕೊರೆಯತೊಡಗಿತ್ತವಳ ಬಳಿಸಾರಿ

ಹುಟ್ಟಿದಮೇಲೆ ಸಾವಿಗೆ ಅಂಜಿದೊಡೆಂತಯ್ಯಾ-
ಎಂಬಂತೆ ಸೆಟೆದು ನಿಂತವಳ
ಜೊತೆಯಾದರು ಆ ಮೂವರು...
ವಿಧಿಗೆಲ್ಲೋ ಸಣ್ಣ ನಡುಕ, ಯಮನೂ ಅಯೋಮಯ

ಭೂತದ ಸವಿ ನೆನಪುಗಳನೆಲ್ಲಾ
ಕಟ್ಟಿ ಗಂಟ, ಗಟ್ಟಿಯಾಗಿ ತಳವೂರಲು
ಇಂದಿನ ನೋವಿಗೆ ತುಸು ಅಲ್ಪ-ವಿರಾಮ,
ಜೊತೆಯಾದವರ ಪ್ರೀತಿಯು ಭವಿಷ್ಯತ್ತಿಗಿರಲು
ಹೆಮ್ಮಾರಿಗೂ ಬೀಳಬಹುದು ಪೂರ್ಣವಿರಾಮ.
........
[ಕ್ಯಾನ್ಸರ್ ರೋಗದೊಂದಿಗೆ ಛಲದಿಂದ ಹೋರಾಡಿತ್ತಿರುವ ಸಣ್ಣವಯಸಿನ, ಇಬ್ಬರು ಪುಟ್ಟ ಮಕ್ಕಳ ತಾಯಿಯೋರ್ವಳಿಗೆ ಈ ಕವನ ಅರ್ಪಿತ. ಸಾವಿಗಂಜದೇ, ಸಾವನ್ನೇ ಬೆದರಿಸುತ್ತಿರುವ ಅವಳ ಛಲಕ್ಕೆ, ಸ್ಥೈರ್ಯಕ್ಕೆ ಮನಃಪೂರ್ವಕ ನಮನಗಳು. ಆಕೆಯ ಹಾಗೂ ಆಕೆಯ ಪುಟ್ಟ ಸಂಸಾರದ ಉತ್ತಮ ಭವಿಷ್ಯಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.]

- ತೇಜಸ್ವಿನಿ ಹೆಗಡೆ

15 ಕಾಮೆಂಟ್‌ಗಳು:

ಸುಮ ಹೇಳಿದರು...

ಛೆ! ಅಂತಹ ಪರಿಸ್ಥಿತಿಯನ್ನು ಎದುರಿಸುವ ಧೈರ್ಯ ಆ ಕುಟುಂಬಕ್ಕೆ ಬರಲಿ ಮತ್ತು ಅಮ್ಮನ ನೆರಳು ಮಕ್ಕಳಿಗೆ ತಪ್ಪದರಲಿ.

ಮನಸು ಹೇಳಿದರು...

ಕವನ ಚೆನ್ನಾಗಿದೆ... ಈ ಕವನದ ಹಿನ್ನೆಲೆ ತಿಳಿದು ಬೇಸರವೆನಿಸಿದರೂ ಆ ತಾಯಿಯ ದಿಟ್ಟತನ ಕೇಳಿ ಸಂತಸವೆನಿಸಿತು. ಅವರ ಸಂಸಾರಕ್ಕೆ ಧೈರ್ಯ, ಸ್ಥೈರ್ಯ, ಸಂತಸದ ಜೀವನ ಎಲ್ಲವನ್ನೂ ಆ ಭಗವಂತ ಕರುಣಿಸಲಿ.ಆರದಿರಲಿ ಬೆಳಕು, ಮುಳುಗದಿರಲಿ ಬದುಕು...

ವನಿತಾ / Vanitha ಹೇಳಿದರು...

May God bless the the little sweet darlings.
You know my Ajji's Leukemia was completely cured and later she lived for 30-40 yrs!

prabhamani nagaraja ಹೇಳಿದರು...

ಆ ಪುಟ್ಟ ಮಕ್ಕಳ ತಾಯಿಯ ದಿಟ್ಟತನ ನಿಜಕ್ಕೂ ಅಭಿನ೦ದನೀಯ. ಆಕೆಗೆ ಜಯ ಲಭಿಸಿ ತನ್ನ ಮಕ್ಕಳೊ೦ದಿಗೆ ಸುಖದಿ೦ದಿರಲಿ ಎ೦ದು ಹಾರೈಸೋಣ.

http://jyothibelgibarali.blogspot.com ಹೇಳಿದರು...

ಮೇಡಂ ಕವನದ ಹಿನ್ನೆಲೆ ನಿಜಕ್ಕೂ ಮನಸ್ಸನ್ನು ಹಿಂಡಿತು. ಆ ಎರಡು ಪುಟ್ಟ ದೀಪಗಳು ಪ್ರಜ್ವಲಿಸಲಿ...ಪರಿಸ್ಥಿತಿಯನ್ನು ಎದುರಿಸುವ ಧೈರ್ಯ ಭಗವಂತ ಆ ಕುಟುಂಬಕ್ಕೆ ಕರುಣಿಸಲಿ

Racham ಹೇಳಿದರು...

ಕವನ ತುಂಬಾ ಚೆನ್ನಾಗಿದೆ ಅನ್ನುವುದಕ್ಕಿಂತ ಮನಸ್ಸನ್ನು ಆರ್ದ್ರ ಗೊಳಿಸಿತು. ಅದು ನನಗೆ ಹತ್ತಿರದ ವಿಷಯ ಆಗಿದ್ದಕ್ಕೆ ಇನ್ನಷ್ಟು ತಟ್ಟಿತು. ನಮ್ಮ ಭಾವನೆಗಳಿಗೆ ಬರಹ ರೂಪ ನೀಡಿದ್ದೀರಿ, ಧನ್ಯವಾದ.

"ಪುಟ್ಟ ಹಾಸಿಗೆಯ ಮೇಲೆ ಚೊಕ್ಕ ಬಿಳಿ ಬಟ್ಟೆ
ಹಚ್ಚಗಾಗಲು ಮೆತ್ತನೆಯ ಚಾದರ, ದಿಂಬು
ಅಕ್ಕ ಪಕ್ಕ ನಿಂತು ಪಿಳಿಗುಡಿಸುತ್ತಿರುವ
ನಾಲ್ಕು ಜೋಡಿ ಪುಟ್ಟ ಕಣ್ಗಳು
ತುಸು ದೂರ ನಿಂತು ಕೈಕಟ್ಟಿದವನ
ಕಣ್ಗಳ ತುಂಬಾ ಅವಳದೇ ನೋವು "

ಈ ಸಾಲುಗಳನ್ನು ನೆನೆಸಿಕೊಳ್ಳುವಾಗ ಮನಸಿಗೆ ಸಂಕಟವಾಗತ್ತೆ. ಇಷ್ಟು ಚಿಕ್ಕವಯಸ್ಸಿಗೆ ಅವಳು ಇಷ್ಟೊಂದು ದೊಡ್ಡ ಹೋರಾಟವನ್ನು ಎದುರಿಸಬೇಕಾಗಿದ್ದು ದುರಂತ. ಈ ಹೋರಾಟದಲ್ಲಿ ಅವಳು ಗೆದ್ದೇ ಗೆಲ್ಲುತ್ತಾಳೆ ಮತ್ತು ಗೆಲ್ಲಲಿ ಎಂಬುದು ನಮ್ಮೆಲ್ಲರ ಬಯಕೆ. ನಿಮ್ಮೆಲ್ಲರ ಹಾರೈಕೆಗಳು ಅವಳನ್ನು ಗೆಲ್ಲಿಸಲಿ, ಆ ತಂಗಿಯ ಬದುಕು ಮತ್ತೆ ಬೆಳಗಲಿ, ಅವಳ ಆ ಪುಟ್ಟ ಮಕ್ಕಳಿಗೆ ನ್ಯಾಯ ಸಿಗಲಿ. ನಮ್ಮೆಲ್ಲರ ನೋವಿಗೆ ಹೀಗೆ ಕವನದ ಮೂಲಕ ಸ್ಪಂದಿಸಿದ ನಿಮಗೆ ಆತ್ಮೀಯ ಧನ್ಯವಾದ. ವಂದನೆ. --ರಾಚಂ

ಸೀತಾರಾಮ. ಕೆ. / SITARAM.K ಹೇಳಿದರು...

avarige dhairya bhagavanta needali.

sunaath ಹೇಳಿದರು...

ಕವನದ ಹಿನ್ನೆಲೆ ತಿಳಿದು ವ್ಯಥೆಯಾಯಿತು. God be with them.

Badarinath Palavalli ಹೇಳಿದರು...

ಮನ ಕಲುಕಿದ ಕವನ.

ಚಿತ್ರಾ ಹೇಳಿದರು...

ಪ್ರಾರ್ಥಿಸುವುದಿಷ್ಟೇ , " ಆರದಿರಲಿ ಬೆಳಕು ! "

nsru ಹೇಳಿದರು...

ತೇಜಕ್ಕ,

ಬದುಕು, ಬವಣೆ, ವಿಧಿಯೊಂದಿಗೆ ಸೆಣೆಸಾಟದ ಉತ್ಕಟತೆಗೆ ಕವನ ಕನ್ನಡಿ ಹಿಡಿದಿದೆ...ಶೀರ್ಷಿಕೆ ಇಷ್ಟವಾಯಿತು..
ಕವನದ ಆಶಯ ಸಾರ್ಥಕತೆ ಕಂಡಿದೆ..
ನಿಜ, ಕಷ್ಟ ಕಾಲದಲ್ಲಿ ನಮ್ಮ ಆತ್ಮೀಯರು ನಮ್ಮ ಜೊತೆಗಿದ್ದರೆ ಎಂಥ ನೋವನ್ನೂ ಧೈರ್ಯವಾಗಿ ಎದುರಿಸಬಹುದು..
ದೇವರ ದಯೆ ಹಾಗು ನಮ್ಮೆಲ್ಲರ ಹಾರೈಕೆಯಿಂದ ಆದಷ್ಟು ಬೇಗ ಅವರು ಗುಣಮುಖರಾಗಲಿ..ಬೆಳಕು ನಂದಾ ದೀಪವಾಗಿ ಬದುಕನ್ನು ಬೆಳಗಲಿ...

Subrahmanya ಹೇಳಿದರು...

ಕವನದ ಮೂಲಕ ಪ್ರಾರ್ಥಿಸಿದ್ದೀರಿ, ಇದು ಆ ಜಗನ್ನಿಯಾಮಕನಿಗೆ ಮುಟ್ಟಲಿ ಒಳಿತಾಗಲಿ ಎನ್ನುವುದು ನನ್ನ ಆಶಯವೂ ಕೂಡ.

ಸುಧೇಶ್ ಶೆಟ್ಟಿ ಹೇಳಿದರು...

:( avarige devaru shakthi needali yennuva haaraike manasinalli....

Raghu ಹೇಳಿದರು...

ಚೆನ್ನಾಗಿದೆ ಈ ಕವನ..
very touching..
ನಿಮ್ಮವ,
ರಾಘು.

Racham ಹೇಳಿದರು...

ಆರಿತು ಬೆಳಕು....ಬರಿದಾಯಿತು ಬದುಕು.......ಆ ತಂಗಿಯನ್ನು ಉಳಿಸಿಕೊಳ್ಳಲು ನಾವು ಸೋತೆವು.....ಕೊನೆಗೂ ಕ್ಯಾನ್ಸರ್ ಎಂಬ ಹೆಮ್ಮಾರಿ ಒಂದು ಮುಗ್ಧ ಜೀವದ ಬಳಿ ಪಡೆಯಿತು......ಅವಳ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಹಾರೈಕೆ ಮಾತ್ರ ಉಳಿದದ್ದು ನಮಗೆ. ....'ಎಲ್ಲಿಗೋ ಪಯಣ, ಯಾವುದೋ ದಾರಿ...?'