ಬುಧವಾರ, ಜೂನ್ 29, 2011

ವಿಲಾಪ

ಕೆಲವೊಂದು ಹಾಡುಗಳೇ ಹಾಗೇ... ಮನಸೊಳಗೆ ಒಮ್ಮೆ ಹೊಕ್ಕರೆ ಅಲ್ಲೇ ಗುನುಗುತ್ತಿರುತ್ತವೆ.. ಕಣ್ಣಂಚಿನ ಹನಿಯೊಡನೆ ಜಿನುಗುತ್ತಿರುತ್ತವೆ... ಮನದಾಳವ ಹೊಕ್ಕು ಎದೆಯೊಳು ಮನೆಮಾಡಿ ಸದಾಕಾಲ ಹಾಡುತ್ತಲೇ ಇರುತ್ತವೆ. ಇಂತಹ ಒಂದು ಸುಂದರ, ಸುಶ್ರಾವ್ಯ ಹಾಡನ್ನು ಕೇಳುವ ಭಾಗ್ಯ ಎರಡು ದಿನಗಳ ಹಿಂದೆ ನನಗೊಲಿಯಿತು. ಹೀಗೇ ಚಾನಲ್‌ಗಳನ್ನು ಬದಲಾಯಿಸುತ್ತಿರುವಾಗ ಹಿಂದಿ ಧಾರಾವಾಹಿಯೊಂದರಲ್ಲಿ ಆಗಷ್ಟೇ ಆರಂಭವಾಗಿದ್ದ ಹಾಡಿನ ಪ್ರಾರಂಭ ನನ್ನ ಅಲ್ಲೇ ನಿಲ್ಲುವಂತೆ ಮಾಡಿತು. 

ಪಾತ್ರ ಚಿತ್ರಣ : ನಾಯಕಿಯ ಪತಿ ಅವಳನ್ನು ತೊರೆದು ಬೇರೋರ್ವಳನ್ನು ಮೆಚ್ಚಿ ಮದುವೆಯಾಗಿ ಅವಳ ಮುಂದೆಯೇ ಎರಡನೇ ಪತ್ನಿಯನ್ನು ಕರೆದುಕೊಂಡು ಹೊರಡುತ್ತಾನೆ. ಹಾಗೆ ಹೋಗುವಾಗ ಮುಗ್ಧ, ಸೌಮ್ಯ ನಾಯಕಿ ತನ್ನ ಮನದಳಲನ್ನು ತೋಡಿಕೊಳ್ಳುವಾಗ ಹಿನ್ನಲೆಯಾಗಿ ಬಂದ ಹಾಡಿದು. ನನ್ನ ಪ್ರಕಾರ ಈ ಹಾಡನ್ನು ನನ್ನ ಅಚ್ಚುಮೆಚ್ಚಿನ ಶ್ರೇಯಾ ಘೋಶಾಲ್ ಹಾಡಿರಬೇಕು. ಆ ಹಾಡು ನನ್ನ ಅದೆಷ್ಟು ಕಾಡಿತೆಂದರೆ ಅದೇ ಹಾಡಿನ ಸೊಲ್ಲುಗಳು ಕನಸಲೂ ಗುನುಗುನಿಸುತ್ತಿದ್ದವು.

ಬೆಳಗೆದ್ದು ಗೂಗಲ್‌ನಲ್ಲೆಲ್ಲಾ ಜಾಲಾಡಿದರೂ ಹಾಡು ಸಿಗಲಿಲ್ಲ. ಕಾರಣ ಅದು ಯಾವುದೇ ಚಲನಚಿತ್ರ ಅಥವಾ ಆಲ್ಬಮ್‌ನ ಹಾಡಾಗಿರಲಿಲ್ಲ. ಕೇವಲ ಆ ಧಾರಾವಾಹಿಗಾಗಿ ರಚಿಸಿದ್ದಾಗಿತ್ತು. ಅಂತೂ ಕೊನೆಗೆ ಯೂಟ್ಯೂಬ್‍ನಲ್ಲಿ ಧಾರಾವಾಹಿಯ ತುಣುಕು ಸಿಕ್ಕಿತು. ನನ್ನವರ ಸಹಾಯದಿಂದ ಅಲ್ಲಿನ ವಿಡಿಯೋ ತುಣುಕನ್ನು Mp3 Formateಗೆ ಭಟ್ಟಿ ಇಳಿಸಿಕೊಂಡೆ. 

ಅದೇಕೋ ಎಂತೋ ಹಾಡಿನ ರಾಗ, ಸ್ವರ, ಲಯ ಬಹು ಇಷ್ಟವಾಯಿತು. ಸಾಹಿತ್ಯವೂ ತುಂಬಾ ಚೆನ್ನಾಗಿದೆ. ಹಾಡು ಸ್ವಲ್ಪ ಕನ್ನಡದ "ನೀನಿಲ್ಲದೇ ನನಗೇನಿದೆ.." ಹಾಡಿನ ಭಾವವನೇ ಸ್ಪುರಿಸುತ್ತದೆ.

ಮೂಲ ಹಾಡನ್ನು ಮೈಲ್ ಮಾಡಲಾಗದು. ಕಾರಣ ಅದು 10MB ಗಿಂತ ಜಾಸ್ತಿ ಇದೆ. ಮೊದಲು ಬರುವ ಮಾತುಗಳನ್ನು ಕತ್ತರಿಸಿ ಕೇವಲ ಹಾಡಿನ ತುಣುಕನ್ನಷ್ಟೇ ತಯಾರಿಸುತ್ತಿದ್ದೇನೆ. Editing ಆದ ಮೇಲಷ್ಟೇ ಎಲ್ಲರಿಗೂ ಕೇಳಿಸಬಹುದು. 

 ಕನ್ನಡಕ್ಕೆ ಅನುವಾದಿಸಬೇಕೆಂದು ಅನ್ನಿಸಿತು. ಪ್ರತಿ ಪದಗಳನ್ನೂ ಇದ್ದ ಹಾಗೇ ಅನುವಾದಿಸಲಾಗದು. ಆದಷ್ಟು ಹಾಡು ಇದ್ದಹಾಗೇ, ಮೂಲ ಹಿಂದಿ ಹಾಡಿನ ರಾಗದಲ್ಲೇ ಹಾಡಿಕೊಳ್ಳಲು ಅನುಕೂಲವಾಗುವಂತೇ ಅನುವಾದಿಸಲು ಯತ್ನಿಸಿದ್ದೇನೆ. 

ಆ ಹಿಂದಿ ಹಾಡಿನ ಕನ್ನಡಾನುವಾದ ಹೀಗಿದೆ :

ಇನಿಯಾ ಹೇಗೆ ಕಳೆಯಲಿ ನೀನಿರದ ನಿಶೆಯ.. 
ಈ ನಿಶೆ ತಂದಿದೆ ಶೂನ್ಯ ಭಾವ...
ಹೇಗೆಂದು ಹೇಳಲಿ ಈ ನೋವ...
ಇನಿಯಾ ಹೇಗೆ ಕಳೆಯಲಿ ನೀನಿರದ ನಿಶೆಯ..

ಯುಗವೊಂದು ಕಳೆಯಿತು ಪ್ರತಿ ಕ್ಷಣ ವಿರಹದಿ, ನೀ ಬರದೆ ಬಳಿ ನೋಡ...
ಯಾವ ಮೋಹಿನಿಯೋ, ಕಾಮಿನಿಯೋ ನಿನ್ನ, ಸೆಳೆದಿಹಳೋ ಬಲು ದೂರ..
ಇನಿಯಾ ಹೇಗೆ ಕಳೆಯಲಿ ನೀನಿರದ ನಿಶೆಯ..

ನೀನಿರದೇ ಬಳಿ ಸುಳಿಯದಯ್ಯ ನಿದಿರೆಯ ಸುಳಿವೂ ಸನಿಹ
http://enchantingkerala.org
ಕಾಲದ ಕೈಯೊಳು ಘಮಘಮಿಸುವುದು ನಿನ್ನದೇ ಕನಸಿನ ಮೋಹ
ಇನಿಯಾ ಹೇಗೆಕಳೆಯಲಿ ನೀನಿರದ ನಿಶೆಯ
ಈ ನಿಶೆ ತಂದಿದೆ ಶೂನ್ಯ ಭಾವ...
ಹೇಗೆಂದು ಹೇಳಲಿ ಈ ನೋವ...
ಇನಿಯಾ ಹೇಗೆಕಳೆಯಲಿ ನೀನಿರದ ನಿಶೆಯ


ಹಿಂದಿ ಹಾಡಿನ ಸಾಹಿತ್ಯ:

ಸಜನಾ ಕೈಸೆ ಕಟಿ ತೇರೆ ಬಿನ್ ರತಿಯಾ...
ಮೆರಿ ರತಿಯಾ ಹಾಯ್ ಸೂನಿ ರತಿಯಾ...
ಕಬ್ ಕಾಸೆ ಬತಿಯಾ...

ಯುಗಪೆಹೆಲೆ ಪರದೇಸಗಯಾ ತೂ ಲೌಟಕೆ ಫಿರ ನಾ ಆಯಾ
ಕಿಸ್ ಬೇರನ್ ನೆ ಕಿಸ್ ಸೌತನ್ ನೆ ಹೈ ತುಝ್ ಕೊ ಭರಮಾಯಾ
ಸಜನಾ ಕೈಸೆ ಕಟಿ ತೇರೆ ಬಿನ್ ರತಿಯಾ...

ನಾ ತೂ ಆಯಾ ನಾ ಆಯಿ ಹೈ ನಿಂದಿಯಾ ನೈನನ ದ್ವಾರೆ
ಪಲ ಪಲ ಕಿ ಗಲಿಯನ ಮೆ ಮೆಹೆಕೆ ಮೇರೆ ಖ್ವಾಬ್ ತುಮ್ಹಾರೆ..

ಸಜನಾ ಕೈಸೆ ಕಟಿ ತೇರೆ ಬಿನ್ ರತಿಯಾ...
ಮೆರಿ ರತಿಯಾ ಹಾಯ್ ಸೂನಿ ರತಿಯಾ...
ಕಬ್ ಕಾಸೆ ಬತಿಯಾ...

ಸೂಚನೆ : ಹಾಡನ್ನು ಈ ಲಿಂಕ್‌ನಲ್ಲಿ ಕೇಳಬಹುದು. ಆದರೆ ಮೊದಲ 3.2 ನಿಮಿಷ ಬರುವ ಧಾರಾವಾಹಿ ಸಂಭಾಷಣೆಗಳನ್ನು ಮುಂದೋಡಿಸಿದ ಮೇಲಷ್ಟೇ ಹಾಡು ಆರಂಭವಾಗುವುದು. 


-ತೇಜಸ್ವಿನಿ.

8 ಕಾಮೆಂಟ್‌ಗಳು:

ಮನಸು ಹೇಳಿದರು...

ತುಂಬಾ ಚೆನ್ನಾಗಿದೆ ಹಾಡು ಕೇಳಿದೆ.... ಅನುವಾದವೂ ಅಷ್ಟೇ ಚೆನ್ನಾಗಿದೆ...

http://jyothibelgibarali.blogspot.com ಹೇಳಿದರು...

ಇಷ್ಟ ಆಯ್ತು... ಚೆನ್ನಾಗಿದೆ.

ಸೀತಾರಾಮ. ಕೆ. / SITARAM.K ಹೇಳಿದರು...

anuvaada chennaagide.

ಜಲನಯನ ಹೇಳಿದರು...

ಚನ್ನಾಗಿದೆ ಪ್ರಯತ್ನ ..ತೇಜಸ್ವಿನಿ..ಹಾಡು ಕೇಳ್ಸಿ ಲಿಂಕ ಹಾಕಿ...
ಭರಮ್ ಅಂದ್ರೆ ಭ್ರಮೆ - ಮೋಹಿನಿ ಮತ್ತು ಕಾಮಿನಿ ಸಮಾನಾರ್ಥ ಪದಗಳ ಬಳಕೆಯೂ ಇಷ್ಟ ಆಯ್ತು...ಇವರಿಗೇ ಅವಳ ಇನಿಯನನ್ನು ಭ್ರಮಿಸಲು ಸಾಧ್ಯ...

AntharangadaMaathugalu ಹೇಳಿದರು...

ಹಾಡು ಹಾಗೂ ನಿಮ್ಮ ಅನುವಾದ ಎರಡೂ ಚೆನ್ನಾಗಿವೆ ತಂಗೀ...

ಶ್ಯಾಮಲ

sunaath ಹೇಳಿದರು...

ಕನ್ನಡ ಅನುವಾದವು ಸ್ವತಂತ್ರ ಗೀತೆಯಂತೆಯೇ ಭಾಸವಾಗುತ್ತದೆ. ಉತ್ತಮ ಅನುವಾದ. ಹಾಡು ಸಹ ಚೆನ್ನಾಗಿದೆ.

Subrahmanya ಹೇಳಿದರು...

ತುಂಬಾ ಚೆನ್ನಾಗಿದೆ.

ಅನಾಮಧೇಯ ಹೇಳಿದರು...

ತುಂಬಾ ಚೆನ್ನಾಗಿದೆ. ಹಿಂದಿ ಹಾಡು ಮತ್ತು ಅದರ ಭಾವಾರ್ಥ.. ಅದೇ ಸೀರಿಯಲ್ ನ ಮತ್ತೊಂದು ಹಾಡನ್ನು ನೆನಪಿಗೆ ತಂದಿತು..
ಚೋಟಿ ಸೀ ಉಮರ್.. ಈ ಹಾಡು ಕೂಡ ಅದ್ಭುತವಾಗಿದೆ.. ಕೇಳುಗರ ಕಣ್ಣು ಒದ್ದೆಯಗುವಂತೆ ಮಾಡುತ್ತದೆ..

ಶ್ವೇತಾ ಹೆಗಡೆ