ಶುಕ್ರವಾರ, ನವೆಂಬರ್ 5, 2010

ಹಚ್ಚಿಡುವೆ ಸವಿ ನೆನಪುಗಳ ದೀಪ

ಹತ್ತು ವರುಷದ ಹಿಂದೆಯೂ ಹೀಗೇ ಬೆಳದಿಂಗಳಿತ್ತು. ದೀಪದ ಸಾಲುಗಳು ನಗುತ್ತಿದ್ದವು. ಗಂಟೆ ಹತ್ತಾದರೂ ನಿದ್ದೆ ಬಾರದ ಕಣ್ಗಳಿಗೆ ಸೋಲು ತರಲು ಕಿಟಿಕಿಯಿಂದ ಇಣುಕಾಡುವ ತಾರೆಗಳನ್ನು ಏಣಿಸುತ್ತಿದ್ದೆ. ಅಂತೂ ಹೊತ್ತಲ್ಲದ ಹೊತ್ತಿನಲ್ಲಿ ಸೋತು ಸೊಪ್ಪಾದ ರೆಪ್ಪೆಗಳು ಇನ್ನೇನು ಬಾಗ ಬೇಕು.... ಆಗ ಕೇಳಿತ್ತು ನಿಮ್ಮಿಬ್ಬರ ಕಿಲ ಕಿಲ ನಗು...ಪಿಸು ಪಿಸು ಮಾತು. ಇನ್ನೇನು ಸೋಲೊಪ್ಪಿಕೊಳ್ಳಲು ಬಾಗಿದ್ದ ರೆಪ್ಪೆಗಳು ಫಟ್ ಎಂದು ತೆರೆದಿದ್ದವು. ಗೆಲುವು ಅವುಗಳದ್ದಾಗಿತ್ತು. ಬಾನ ತಾರೆಗಳೆಲ್ಲಾ ಒಂದು ಕ್ಷಣ ದೀರ್ಘವಾಗಿ ಮಿಂಚಿ ನಗೆಯಾಡಿದ್ದವು.....ನಿದ್ದೆ ಬಂದಂತೆ ನಟಿಸಲು ಎಂದೋ ಕಲಿತಿದ್ದ ಕಣ್ಗಳಿಗೆ ಹೊಸತೇನೂ ಹೇಳಿಕೊಡಬೇಕಾಗಲಿಲ್ಲ. ನನ್ನ ನಿದ್ದೆಯ ನಂಬಿಯೋ ಇಲ್ಲಾ ನಂಬಿದಂತೇ ನಟಿಸಿಯೋ ನೀವಿಬ್ಬರೂ ಪಕ್ಕದಲ್ಲಿದ್ದ ಸ್ಟೂಲಿನ ಮೇಲೆ ಆ ಪೆಟ್ಟಿಗೆಯನ್ನಿಟ್ಟಿರಿ. ಆಗ ಕೇಳಿತು ಹಾಲ್‌ನಲ್ಲಿದ್ದ ಗಡಿಯಾರದ ಸದ್ದು. ಗಂಟೆ ಹನ್ನೆರಡಾದದ್ದೇ ತಡ, ಕೋಣೆಯ ಲೈಟ್ ಬೆಳಗಿ, ಎಚ್ಚರದಿಂದಲೇ ಇದ್ದ ನನ್ನ ಎಬ್ಬಿಸಿದಿರಿ. ಮುಂದಿನದೆಲ್ಲಾ ದೊಡ್ಡ ದೀಪಾವಳಿ! ನಗು, ಪಿಸು ಮಾತು, "ಶ್‌ಶ್‌ಶ್.. ಸಣ್ಣಕೆ ಮಾತಾಡು.. ಪಕ್ಕದ ಕೋಣೇಲಿಪ್ಪ ಅಪ್ಪ ಅಮ್ಮಂಗೆ ಎಚ್ಚರಾ ಆದ್ರೆ ಬೈತ್.." ಅನ್ನೋ ಸಣ್ಣ ಗದರಿಕೆಯ ನಡುವೆಯೇ ತೂರಿಕೊಳ್ಳುವ ಮುಸಿ ಮುಸಿ ನಗು. ರಟ್ಟಿನ ಪೆಟ್ಟಿಗೆಯೊಳಗಿನ ಕೇಕ್ ನಮ್ಮ ಹೊಟ್ಟೆಯ ಸೇರಿ ತುಂಬಿದ ಮೇಲೆ, ನನ್ನಪ್ಪಿ ಶುಭ ಕೋರಿದ ನೀವಿಬ್ಬರೂ ಹಾಯಾಗಿ ನಿದ್ದೆಗಿಳಿದಿರಿ. ಅಂದು ಇಪ್ಪತ್ತಕ್ಕೆ ಮತ್ತೊಂದು ವರುಷ ಸೇರಿಸಿಕೊಂಡು ನಿಮಗೆ ದೊಡ್ಡಕ್ಕನಾದ ನಾನು ಮತ್ತಷ್ಟು ಹಿರಿದಾಗಿಹೋಗಿದ್ದೆ. ಮರುದಿನ ಬೆಳಗ್ಗೆ ಸೂರ್ಯ ಕಣ್ ಚುಚ್ಚಿ ಎಬ್ಬಿಸುವಾಗಲೇ ಕೇಳಿತ್ತು ಅಮ್ಮನ ಸಿಹಿ ಧ್ವನಿ.. "ಹೇ ಎದ್ಕಳ್ರೇ.. ಅಕ್ಕಂಗೆ ವಿಶ್ ಮಾಡ್ತ್ರಿಲ್ಯ?.. ಮರ್ತೇ ಹೋಜ? ಅದು ಎದ್ಕಂಬದ್ರೊಳ್ಗೆ ನಿಂಗ ಎದ್ಕಂಡು ವಿಶ್ ಮಾಡಿ..". ಅಮ್ಮನ ಮಾತುಗಳನ್ನು ಕೇಳುತ್ತಾ ನಾನು ಮತ್ತೂ ನಿದ್ದೆಗೆ ಜಾರತೊಡಗಿದರೆ ನಿಮ್ಮಿಬ್ಬರ ದೊಡ್ಡ ನಗು ಅಲೆ ಅಲೆಯಾಗಿ ನನ್ನ ಅಪ್ಪಿ ಎಬ್ಬಿಸುತ್ತಿತ್ತು.

ಇಂದು....ಸರಿಯಾಗಿ ಹತ್ತುವರುಷಗಳಾನಂತರವೂ.....ಬಾನಲ್ಲಿ ಅದೇ  ಬಣ್ಣದ ಬೆಳಕಿನ ಚಿತ್ತಾರವಿದೆ....ದೀಪಗಳು ಸಾಲುಗಟ್ಟಲು ಸಜ್ಜಾಗಿವೆ....ಗಂಟೆ ಹನ್ನೆರಡು ಕಳೆದೇ ಹಲವು ತಾಸು ಕಳೆದಿವೆ. ಆದರೆ ನೀವಿಬ್ಬರು ಮಾತ್ರ ನನ್ನೊಂದಿಗಿಲ್ಲ. ಅಪ್ಪ ಅಮ್ಮನ ಮಮತೆಯ ಅಪ್ಪುಗೆಯೂ ಇಲ್ಲ. ನನ್ನ ಸಾಗರನೂರಿನಲ್ಲಿರುವ ನೀವೆಲ್ಲರು ಜಂಗಮ ವಾಣಿಯಿಂದ ಹೇಳಿದ ಶುಭ ಕೋರಿಕೆಗಳು ಮನಸನ್ನಾಗಲೀ ಹೊಟ್ಟೆಯನ್ನಾಗಲೀ ತುಂಬಲಿಲ್ಲ. ಆದರೆ ಕಳೆದ ಸವಿ ನೆನಪುಗಳ ಮೆರವಣಿಗೆ ಮಾತ್ರ ಮನಸೊಳಗೆ ಸಾಲು ದೀಪಗಳನ್ನು ಹಚ್ಚಿ ಸದಾ ಬೆಳಗುತ್ತಲೇ ಇದೆ. ‘ಸವಿ ನೆನಪುಗಳು ಬೇಕು ಸವಿಯಲೀ ಬದುಕು’



ಮನದ ಮೂಲೆಯ
ಕಡೆಯ ಕೊಳೆಯನೂ
ಕಳೆದು ಹಾಕುವ ಬನ್ನಿರಿ...
ಕನಸುಗಳ ರಂಗೋಲಿಯೆಳೆದು
ನಡುವೆ ದೀಪವ ಹಚ್ಚಿರಿ... 





ಸಹಮಾನಸಿಗರೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು :)



-ತೇಜಸ್ವಿನಿ ಹೆಗಡೆ.

12 ಕಾಮೆಂಟ್‌ಗಳು:

ಮಹೇಶ ಭಟ್ಟ ಹೇಳಿದರು...

ಸೊಗಸಾಗಿದೆ, ನಿಮ್ಮ ನೆನಪುಗಳನ್ನು ಚೆನ್ನಾಗಿ ವಿವರಿಸಿದ್ದೀರಿ. ದೀಪಾವಳಿಯ ಶುಭಾಶಯಗಳು

ಸೀತಾರಾಮ. ಕೆ. / SITARAM.K ಹೇಳಿದರು...

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಸಂತಸದ ದಿನ ನೂರಾರಾಗಿ ಮರಳಲಿ. ಸಂಭ್ರಮದ ಜ್ಯೋತಿ ಮನ -ಮನೆ ಬೆಳಗಲಿ.

V.R.BHAT ಹೇಳಿದರು...

ಜೀವನದಲ್ಲಿ ಎಲ್ಲರೂ ಯಾವಾಗಲೂ ಒಟ್ಟಿಗೆ ಇರಲು ಸಾಧ್ಯವೇ? ಒಂದೊಮ್ಮೆ ಸಾಧ್ಯವಿದ್ದರೂ ಪ್ರಾಯಶಃ ಅದು ಅತಿ ಸಿರಿವಂತರಿಗೆ ಮಾತ್ರ! ಪ್ರೀತಿ ಸುರಿಸಿ ಬೆಳೆಸಿದ ಅಪ್ಪ-ಅಮ್ಮನ ಹತ್ತಿರವೇ ನಾವಿರಲಾಗುವುದಿಲ್ಲ, ಅವರಿಗೆ ನಮ್ಮ ಪ್ರೀತಿಯ ಸೇವೆ ಸಲ್ಲುವುದಿಲ್ಲ ಅಂದಮೇಲೆ ಮಿಕ್ಕವರೆಲ್ಲಾ ಗೌಣವೆಂದು ನನ್ನ ಭಾವನೆ. ನಿಮಗೆ ಹುಟ್ಟಿದ ಹಬ್ಬದ ಹಾರ್ದಿಕ ಶುಭಾಶಯಗಳು,ಈ ದಿನ ನೂರಾಗಿ ಮರಳಿ ಮರಳಿ ಬರಲಿ, ಹರುಷ ಉಕ್ಕೇರಿ ಹರಿಯಲಿ, ನಿಮ್ಮಲ್ಲಿನ ’ತೇಜಸ್ವಿನಿ’ ಬೆಳಗಲಿ ಎಂದು ಹೃತ್ಪೂರ್ವಕವಾಗಿ ಶುಭಕೋರುತ್ತೇನೆ.

Shiv ಹೇಳಿದರು...

ತೇಜಸ್ವಿನಿಯವರೇ

ಹುಟ್ಟುಹಬ್ಬದ ಶುಭಾಶಯಗಳು !
ನಿಮ್ಮ ಸವಿನೆನಪು ಸೊಗಸಾಗಿತ್ತು..

ಹಾಗೇ ದೀಪಾವಳಿ ಹಬ್ಬದ ಶುಭಾಶಯಗಳು

umesh desai ಹೇಳಿದರು...

ತೇಜಸ್ವಿನಿ ಅವರೆ ಈ ಹಬ್ಬ ಹರಿದಿನಗಳಲ್ಲಿ ನಮ್ಮ ಜೊತೆ ಇಲ್ಲದವರ, ನಮಗೆ ಆತ್ಮೀಯರಾದವರ ನೆನಪು ಕಾದುವುದು ಸಹಜ.ಆ ನೋವುಗಳ ಜೊತೆ ಜೊತೆ ಗೆ ಸಾಗುವುದು ಅನಿವಾರ್ಯ. ಹುಟ್ಟಿದ ಹಬ್ಬದ ಮೇಲಾಗಿ ದೀಪಾವಳಿಯ
ಶುಭಾಶಯಗಳು.

ಮನಮುಕ್ತಾ ಹೇಳಿದರು...

ತೇಜಸ್ವಿನಿಯವರೆ,
ಜನ್ಮದಿನದ ಶುಭಾಶಯಗಳು ಮತ್ತು
ದೀಪಾವಳಿಯ ಹಾರ್ದಿಕ ಶುಭಾಶಯಗಳು.

sunaath ಹೇಳಿದರು...

ತೇಜಸ್ವಿನಿ,
ನೆನಪುಗಳ ದೀಪಗಳನ್ನು ಹಚ್ಚಿ ಮನಸ್ಸಿನಲ್ಲಿ ಬೆಳಕು ಮಾಡಿದ್ದೀರಿ.
ದೀಪಾವಳಿಯ ಶುಭಾಶಯಗಳು!

G.M. Kotresh ಹೇಳಿದರು...

ನೆನಪಿನ ಮೆರವಣಿಗೆಯ ಬರವಣಿಗೆ ತುಂಬ ಸೊಗಸಾಗಿದೆ. ಸಾಲು ದೀಪಗಳು ಸದಾ ನಗುತ್ತಿರಲಿ...

AntharangadaMaathugalu ಹೇಳಿದರು...

ತಂಗೀ ತೇಜಸ್ವಿನೀ...
ಮತ್ತೊಮ್ಮೆ ಹುಟ್ಟಿದ ಹಬ್ಬದ ಶುಭಾಶಯಗಳು. ನಮ್ಮ ಸಂತಸದ ಸಮಯದಲ್ಲಿ ನಮ್ಮನ್ನು ಅಗಲಿರುವ ನಮ್ಮ ಹಿರಿಯ ಚೇತನಗಳನ್ನು ನೆನೆವುದು ನಿಜಕ್ಕೂ ನಮಗೆ ಶ್ರೇಯಸ್ಕರ ಆದರೆ ಭಟ್ ಸಾರ್ ಹೇಳಿದಂತೆ ಎಲ್ಲರೂ ನಮ್ಮೊಡನೆ ಯಾವಾಗಲೂ ಇರಲು ಸಾಧ್ಯವಿಲ್ಲ ಅಲ್ವಾ..? ಅವರಿಲ್ಲದಿದ್ದರೇನು.. ಅವರ ಭಾವನೆಗಳು, ಆಶೀರ್ವಾದಗಳು ನಮ್ಮನ್ನು ಸದಾ ಸುತ್ತುವರೆದಿರುತ್ತವೆ... ನಿಮ್ಮ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...

ಶ್ಯಾಮಲ

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ, ಹುಟ್ಟುಹಬ್ಬದ ಶುಭಾಶಯಗಳು (ತಡವಾಗಿ ತಿಳಿಸಿದೆ). ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ತೇಜಸ್ವಿನಿ ಹೆಗಡೆ ಹೇಳಿದರು...

ಶುಭಾಶಯಗಳನ್ನು ತಿಳಿಸಿದ ಎಲ್ಲರಿಗೂ ಧನ್ಯವಾದಗಳು. ಇದು ನನ್ನ ಇಬ್ಬರು ಸಹೋದರಿಯರಿಗೆ ಅರ್ಪಿಸಿದ ಬರಹ...:)

ದೀಪಾವಳಿ ಎಲ್ಲರ ಬದುಕಿನೊಳಗಿರುವ ತಮಸ್ಸನ್ನು ತೊಲಗಿಸಿ ಸುಜ್ಞಾನದ ದೀವಿಗೆಯನ್ನು ಬೆಳಗಿಸಲೆಂದು ಹಾರೈಸುವೆ.

ಸುಧೇಶ್ ಶೆಟ್ಟಿ ಹೇಳಿದರು...

sogasaagive nenapugaLu... illi mattomme huttidha habbadha shubhaashayagaLu :)