ಸೋಮವಾರ, ಏಪ್ರಿಲ್ 26, 2010

ರಾಗ ಮಾಂತ್ರಿಕ

ಏಕೋ ಏನೋ ಬಯಸಿದೆ ಈ ಮನ
ನಿನ್ನಿಂದ ಬಹು ದೂರ ಸಾಗಿ,
ನಾ ಕಾಣದ ಆ ತೀರವ ಸೇರಿ,
ಬದುಕಬೇಕಿದೆ ಒಂದು ದಿನವ....

ಹರಿವ ನೀರಾಗಿ, ಜುಳು ಜುಳು ನಾದವಾಗಿ
ಉಕ್ಕಿ ಹರಿದು ರಭಸದಿ ಸಾಗ ಹೊರಟೆ ನಾನು
‘ಶುದ್ಧ ಸಾರಂಗಿ ರಾಗವ’ ಹಾಡಿ, ನನ್ನನೇ ಹೀರಿ,
ಸೆಳೆದುಕೊಂಡೆಯಲ್ಲಾ ನೀನು!

ಕರಿ ಮೋಡವಾಗಿ, ಬಾನ ತುಂಬಾ ತೇಲಿ
ಗಾಳಿವೇಗದಲ್ಲಿ ಹಾರಿ, ಸಾಗ ಹೊರಟೆ ನಾನು
‘ಮಲ್ಹಾರ ರಾಗವ’ ಹಾಡಿ, ಮಳೆಬಾಣಗಳ ಸುರಿಸಿ,
ಕುಡಿದುಬಿಟ್ಟೆಯಲ್ಲಾ ನೀನು!

ಮಲ್ಲೆ ಮೊಗ್ಗೊಳು ಹೊಕ್ಕು, ಅದರ ಕಂಪೊಳಗವಿತು,
ಬೇರ ತುದಿಯನು ಸೇರಿ, ಇಳಿಯ ಬಯಸಿದೆ ನಾನು
‘ಬಸಂತ್ ರಾಗವ’ ಹಾಡಿ, ಮೊಗ್ಗ ಹೂವಾಗಿಸಿ,
ಕಂಪಬೀರಿದೆಯಲ್ಲಾ ನೀನು!

ಎಕೋ ಏನೋ ಬಯಸಿದೆ ಈ ಮನ
ನಿನ್ನಿಂದ ಬಹು ದೂರ ಸಾಗಿ,
ಆ ತೀರವ ಸೇರಿ, ನನಗಾಗಿ...
ಬದುಕಬೇಕಿದೆ ಒಂದು ದಿನವ.

17 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ರಾಗಗಳನ್ನು ಬಿಡಿಸಿಕೊ೦ಡು ವಿರಾಗಿಯಾಗುವದು ಸುಲಭವಲ್ಲ!!!
ರಾಗಗಳ ಪರಿಚಯದೊ೦ದಿಗೆ ಹೆಣೆದ ಸು೦ದರ ಕವನ.

Kirti ಹೇಳಿದರು...

kavanad kale bahal ishtavaayitu.. dooradalliyiddaru kooda manassu preetiyind preetiyavarigaaagi ondu dinava kaliyuve endu helide nijavaaglu preeti tumba madhuravaagide.. ee raagad maantrikadalli

ಕ್ಷಣ... ಚಿಂತನೆ... ಹೇಳಿದರು...

madam, raagagala parichayadondide moodibanda kavana 'raaga maalike'yaagide. chennagide.

ಸಾಗರಿ.. ಹೇಳಿದರು...

ರಾಗಗಳ ಬಗ್ಗೆ ಜಾಸ್ತಿ ಗೊತ್ತಿಲ್ಲ ನನಗೆ, ದೀಪಕ ರಾಗ ಹಾಡಿದರೆ ದೀಪ ಹೊತ್ತಿ ಉರಿಯುತ್ತಿತ್ತಂತೆ ಒಂದು ಕಾಲದಲ್ಲಿ, ಸಂಗೀತದಲ್ಲಿ ಅಷ್ಟು ಶಕ್ತಿ ಇತ್ತಂತೆ ಅಂತ ಕೇಳಿದ್ದು. ಕೆಲವೊಂದು ರಾಗಗಳು ಬೆಳಿಗ್ಗೆ ಮಧನ್ನ ಸಾಯಂಕಾಲ ಹಾಡುವುದು ಎಂದೆಲ್ಲಾ ವಿಭಜನೆ ಇದೆಯಂತೆ ಅಲ್ಲವೇ? ನಿಮ್ಮ ಕವನದಲ್ಲಿ ರಾಗಗಳ ಮಾಹಿತಿ ಚೆನ್ನಾಗಿದೆ.

AntharangadaMaathugalu ಹೇಳಿದರು...

ತೇಜಸ್ವಿನಿ...
ಕವನ ಸಕತ್ತಾಗಿದೆ.... ಅಲ್ಲ... ನಿಮ್ಮನ್ನೇ ಹೀರಿ, ಮಳೆಬರಿಸಿ, ಮೊಗ್ಗು ಬಿರಿದು ಹೂವಾಗುವಂತೆ ಸುಂದರವಾಗಿ ಕಾವ್ಯ ಸೃಷ್ಟಿ ಮಾಡಿ, ಈ ಎಲ್ಲ ಸೊಬಗು ಬಿಟ್ಟು... ತೀರದ ಆ ಕಡೆಗೆ ಹೋಗಿ ಬದುಕ ಬೇಕು ಅನ್ತೀರಲ್ಲಾ... ನ್ಯಾಯಾನಾ.. ? ಬಸಂತ ರಾಗ ಹಾಡಿದಾಕ್ಷಣ ಆಗಲೇ ಕುಹೂ ಕುಹೂ ಕೇಳುತ್ತಿದೆ.... ಎಲ್ಲಿಯೂ ಹೋಗಲು ಬಿಡದು ಅದು ನಿಮಗೆ..... :-)

Subrahmanya ಹೇಳಿದರು...

ರಾಗಾಲಾಪ ತುಂಬಾ ಚೆನ್ನಾಗಿದೆ.

sunaath ಹೇಳಿದರು...

ರಾಗ OK,ವಿರಾಗ ಯಾಕೆ?

ಸುಧೇಶ್ ಶೆಟ್ಟಿ ಹೇಳಿದರು...

ತೇಜಕ್ಕ... ಒ೦ದು ಸಲ ಕಾಣದ ತೀರಕ್ಕೆ ಹೋಗಿ ನೋಡಿದ್ದಿದ್ದರೆ ಚೆನ್ನಾಗಿರುತ್ತಿತ್ತು. ರಾಗ ಮಾ೦ತ್ರಿಕನ ಆಕರ್ಷಣೆ ಅಷ್ಟೊಂದು ಪ್ರಬಲವಾಗಿದೆ! ಆದರೂ ಆಚೆ ತೀರಕ್ಕೆ ಹೋಗಿ ನೋಡುವ ಆಸೆ ಇನ್ನೂ ಇರುವುದು ಕವನದ ಕೊನೆಯಲ್ಲಿ ವ್ಯಕ್ತ ಆಗಿದೆ. ಆ ಆಸೆ ಆದಷ್ಟು ಬೇಗ ಈಡೇರಲಿ... ಸು೦ದರ ಕವನ :)

ಮನದಾಳದಿಂದ............ ಹೇಳಿದರು...

ಅಲ್ಲಾರೀ, ಒಳ್ಳೊಳ್ಳೆ ರಾಗದ ಉಪಮೆಯೊಂದಿಗೆ ಸುಂದರ ಕವನವನ್ನು ಬರೆದಿದ್ದೀರಾ. ಕೊನೆಯಲ್ಲಿ ಯಾಕೆ ವಿರಾಗಿಯಾಗಿದ್ದೀರಾ?
ಬೇಡ ಕಣ್ರೀ, ರಾಗದ ಅಲಾಪನೆಯಲ್ಲಿ ಶೋಕ ವಿರಹಗೀತೆ ಬೇಡ!

ಮನಸು ಹೇಳಿದರು...

ನಿಮ್ಮ ಕವನ ಚೆನ್ನಾಗಿದೆ.ನಾನು ಸಹ ಸುನಾಥ್ ಸರ್ ಪ್ರಶ್ನೆಯನ್ನೆ ಕೇಳುತ್ತೇನೆ.

PARAANJAPE K.N. ಹೇಳಿದರು...

ಸರಾಗವಾಗಿ ಓದಿಸಿಕೊ೦ಡು ಹೋಗುವ ಸು೦ದರ ಕವನ

ಮನಸಿನಮನೆಯವನು ಹೇಳಿದರು...

ತೇಜಸ್ವಿನಿ ಹೆಗಡೆ-,
ಕಣ್ಸೆಳೆವ ಚಿತ್ರದ ಜೊತೆಗೆ ರಾಗವೂ ಸೊಗಸು..

ತೇಜಸ್ವಿನಿ ಹೆಗಡೆ ಹೇಳಿದರು...

ಪ್ರತಿಕ್ರಿಯೆಗಳ ಮೂಲಕ ಸ್ಪಂದಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು.

@ಸೀತಾರಾಂ ಅವರೆ,

ಹೌದು... ವಿರಾಗಿಯಾಗುವುದು ಬಲು ಕಷ್ಟ. ಆ ರೀತಿಯಾಗಿ ಒಂದು ದಿನವನ್ನಾದರೂ ಬದುಕಬೇಕೆಂಬ ಸಣ್ಣ ಆಸೆ ಅಷ್ಟೇ :)

@ಕೀರ್ತಿ,

ನನ್ನ ಕವನದ ಭಾವಾರ್ಥ ನಿವು ಅಂದುಕೊಂಡಂತೆ ಅಲ್ಲದಿದ್ದರೂ, ಕವನ ಅವರವರ ಭಾವಕ್ಕೆ ಬಿಟ್ಟಿದ್ದರಿಂದ, ಇದೂ ಸರಿಯೇ :)

@ಚಂದ್ರು ಅವರೆ,

ರಾಗಗಳ ಕಿರು ಪರಿಚಯ ಮಾಡಿಕೊಟ್ಟ ನನ್ನ ಆತ್ಮೀಯರಿಗೆ ತುಂಬಾ ಧನ್ಯವಾದಗಳು. ಹಾಗೆ ನೋಡಿದಲ್ಲಿ ನನಗೆ ಇದರ ಕುರಿತು ಮಾಹಿತಿ ಸೊನ್ನೆಯೇ ಅನ್ನಬೇಕು...:)

@ಸಾಗರಿ,

ಚಂದ್ರು ಅವರಿಗೆ ಹೇಳಿದಂತೆ ನನಗೆ ರಾಗಗಳ ಬಗ್ಗೆ ಏನೂ ಗೊತ್ತಿಲ್ಲ. ನಿಮ್ಮಷ್ಟೂ ಕೂಡ..."ದೀಪಕ ರಾಗ" --ವ್ಹಾ... ಹೊಸ ರಾಗವೊಂದರ ಪರಿಚಯ ನಿಮ್ಮಿಂದಾಯಿತು. ಹೌದಂತೆ ಮಧ್ಯಾಹ್ನಕ್ಕೆ, ಸಂಜೆಗೆ, ಸೂರ್ಯೋದಯಕ್ಕೆ, ಬಿರುಬಿಸಿಲಿಗೆ ಎಲ್ಲಾ ಕಾಲಕ್ಕೂ ಸೂಕ್ತ ರಾಗವಿದೆಯಂತೆ. ಆಳವಾಗಿ ಹೋದರೆ ಇನ್ನೂ ಅನೇಕ ಉಪಯುಕ್ತ ಮಾಹಿತಿ ದೊರೆಯಬಹುದು ಅಲ್ಲವೇ?

@ಶ್ಯಾಮಲಾ,

ಅದೇ ಕಷ್ಟಕ್ಕೆ ಬಂದಿರುವುದು. ರಾಗ ಮಾಂತ್ರಿಕತೆಯಿಂದಾಗಿ ನನ್ನ ಕಟ್ಟಿಹಾಕಿದಂತಾಗಿದೆ :) ಎತ್ತಲೂ ಹೋಗಲಾಗುತ್ತಿಲ್ಲ ನನಗೀಗ :-p

@ಸುಬ್ರಹ್ಮಣ್ಯ ಹಾಗೂ ಕಾಕಾ,

ಧನ್ಯವಾದಗಳು. ಕಾಕಾ - ವಿರಾಗದಲ್ಲೂ ಹೊಸ ರಾಗವ ಹುಡುಕಿ ಹಾಡಿಕೊಳ್ಳುವ ಆಸೆ..... ಏನು ಮಾಡಲಿ ಹೇಳಿ? ಇದು ಹುಚ್ಚು ಮನಸಿನ ಹನ್ನೆರಡನೆಯ ಮುಖ ಎಂದರೂ ಸೈ :) :D

@ಸುಧೇಶ್,

ಅಲ್ಲವೇ? ಒಮ್ಮೆ ಹೋಗಲು ಬಿಟ್ಟಿದ್ದರೆ ಕೂಡಲೇ ಹಿಂತಿರುಗಿ ಬರುತ್ತಿದ್ದೆನೇನೋ.. ಈಗ ಹೊಗಲಾಗದಿರುವ ಕೊರಗು, ಹಾಗೂ ಆಶಯ ಮತ್ತಷ್ಟು ಎಳೆಯುತ್ತಿವೆ ನನ್ನ ಆ ಕಾಣದ ತೀರಕ್ಕೆ! :)

@ಮನದಾಳದಿಂದ,

ಬೇಡವೆನ್ನುವುದನ್ನೇ ಮನಸು ಮಾಡಬಯಸುತ್ತದೆಯಂತೆ.... ವಿರಾಗವೆಂದರೇನೆಂದು ನೋಡಿಯೇ ತಿಳಿಯಬೇಕೆಂದಿದೆ ಒಮ್ಮೆ,......

@ಮನಸು,

ಕಾಕಾ ಅವರಿಗೆ ಕೊಟ್ಟಿರುವ ಉತ್ತರವೇ ನಿಮಗೂ ಕೂಡ....:)

@ಜ್ಞಾನಾರ್ಪಣಮಸ್ತು ಹಾಗೂ ಪರಾಂಜಪೆಯವರಿಗೆ,

ತುಂಬಾ ಧನ್ಯವಾದಗಳು.

ಚಿತ್ರಕ್ರಪೆಗೆ ಕಾರಣ : ಗೂಗಲ್

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿಯವರೇ
ತುಂಬಾ ಚಂದದ ಕವನ
ಅದರಲ್ಲೂ
ಹರಿವ ನೀರಾಗಿ, ಜುಳು ಜುಳು ನಾದವಾಗಿ
ಉಕ್ಕಿ ಹರಿದು ರಭಸದಿ ಸಾಗ ಹೊರಟೆ ನಾನು
‘ಶುದ್ಧ ಸಾರಂಗವ’ ಹಾಡಿ, ನನ್ನನೇ ಹೀರಿ,
ಸೆಳೆದುಕೊಂಡೆಯಲ್ಲಾ ನೀನು!

ತುಂಬಾ ಹಿಡಿಸಿತು

umashankara bs ಹೇಳಿದರು...

ಹಾಡುತ್ತಾ ಹಾಡುತ್ತಾ ರಾಗ ನರಳುತ್ತಾ ನರಳುತ್ತ ರೋಗ ಎನ್ನುವುದನ್ನಷ್ಟೇ ಕೇಳಿದ್ದೆ, ರಾಗಗಳು ಇಷ್ಟೊಂದು ಮುದ ನೀಡುತ್ತವೆ ಎಂದು ನಿಮ್ಮ ಕವನ ಓದಿದ ನಂತರ ತಿಳಿಯಿತು

ಓ ಮನಸೇ, ನೀನೇಕೆ ಹೀಗೆ...? ಹೇಳಿದರು...

ಅದ್ಭುತವಾದ ಕವನ ತೇಜಸ್ವಿನಿ ಅವರೇ....ಎಷ್ಟು ಚೆಂದದ ಕಲ್ಪನೆ ನಿಮ್ಮದು. ಆ ಪ್ರೀತಿಯ ಬಂಧನ ಹಿತವೆನಿಸಿದರೂ , ಯಾವಾಗಲೋ ಒಮ್ಮೆ ಏಕಾಂತ ಬಯಸುತ್ತದೆ ಮನ. ಕವನ ತುಂಬಾ ಇಷ್ಟವಾಯ್ತು.

ಜಲನಯನ ಹೇಳಿದರು...

ತೇಜಸ್ವಿನಿ ಕವನದ ವನದಲ್ಲಿ ವಿಹಾರಿಸುವ ಮಜಾನೇ ಬೇರೆ..ಅದರಲ್ಲೂ ಪದಗಳ ಬಳಕೆಯ ಹಸಿರು ಉಪಮೆಗಳ ಪ್ರಯೋಗದ ಕಂಪು ಕೂಡಿದರೆ ...ಹೀಗೆ ಇರುತ್ತೆ ಕವನದ ಸೊಗಸು...ಇಲ್ಲಿನ ಸಾಲುಗಳಂತೆ...

ಕರಿ ಮೋಡವಾಗಿ, ಬಾನ ತುಂಬಾ ತೇಲಿ
ಗಾಳಿವೇಗದಲ್ಲಿ ಹಾರಿ, ಸಾಗ ಹೊರಟೆ ನಾನು
‘ಮಲ್ಹಾರ ರಾಗವ’ ಹಾಡಿ, ಮಳೆಬಾಣಗಳ ಸುರಿಸಿ,
ಕುಡಿದುಬಿಟ್ಟೆಯಲ್ಲಾ ನೀನು!