
ಕಣ್ಣನೆ ದಣಿಸುವ ಈ ಪಡುವಣ ಬಾನ್ಬಣ್ಣಗಳು
ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗಗಾನ
ಚಿನ್ನ ನೀನಿಲ್ಲದೆ ಬಿಮ್ಮೆನ್ನುತಿದೆ ರಮ್ಯೋದ್ಯಾನ....
ಮತ್ತದೇ ಬೇಸರ, ಅದೆ ಸಂಜೆ ಅದೆ ಏಕಾಂತನಿನ್ನ ಜೊತೆ ಇಲ್ಲದೆ, ಮಾತಿಲ್ಲದೆ ಮನ ವಿಭ್ರಾಂತ..
ಕಣ್ಣೆತ್ತಿ ನೋಡಿದರೆ, ‘ಹುಣ್ಣಿಮೆ ಆಗಸದ ಬಣ್ಣದ ಚುಕ್ಕಿಯು.. ಮೆಲ್ಲನೆ ತಾನಾಗೆ ಹೆಚ್ಚಿದೆ.’ ಕಾಲ ಕೆಳಗೋ, ಹೆಜ್ಜೆ ಮೂಡಿಸುವ ಮರಳ ಕಣಗಳು...ದಡವ ಬಡಿದು ಹಿಂತಿರುಗುತ ಲಾಸ್ಯವಾಡುತಿರುವ ತೆರೆಗಳಾಟ, ನೆನಪು-ಕನಸುಗಳ ಜೊತೆ ಉಯ್ಯಾಲೆಯಾಡುತಿರುವ ಈ ಮನಕೆ ಸಾಥ್ ನೀಡುವಂತಿವೆ....‘ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲಾ....’ ಎಂಬಂತೆ ನನ್ನ ಮೈ ಸೋಕಿ ಮರೆಯಾಗುತಿವೆ. ದೂರದಲ್ಲೆಲ್ಲೋ ಪುಟ್ಟ ದೋಣಿಯೊಳಗಿಂದ ಇಣುಕುವ ಕಿರು ದೀಪ, ಒಂಟಿ ದ್ವೀಪದಂತೆ ಕುಳಿರುವ ನನ್ನ ಕಂಡು ಮಬ್ಬಾಗುತಿದೆ....ಅಲೆಯೊಡನೆ ಅಲೆಯಲೆಯಾಗಿ ಬರುತಿರುವ ನಾವಿಕನ ಹಾಡು ನಿನ್ನ ನೆನಪಿನ ಕಂಪನ್ನೂ ಅಲೆಯಾಗಿ ಬಡಿಯುತಿದೆ ನನ್ನ ಮನದಡಕೆ.
"ತುಂಬಾ ಹಿತವೆನಿಸುತಿದೆ ಈ ಕಡಲ ತಡಿ, ಈ ತಂಗಾಳಿ, ಈ ತಿಳಿ ಬಾನು, ಮೋಡದೊಂದಿಗೆ ಸರವಾಡುತ ನಮ್ಮ ನೋಡಿ ನಗುವ ಶಶಿ..ಇವೆಲ್ಲವುದರ ಜೊತೆಗೆ ನಿನ್ನ ಜೊತೆಯೊಂದೇ ಭಿನ್ನವಾದ ಅನುಭೂತಿ ನೀಡುತಿದೆ...." ಎಂದು ಅಂದು ನೀ ಹೇಳಿದ್ದ ಸಾಲುಗಳು ಈ ಮನವ ಕೊರೆಕೊರೆದು ಘಾಸಿ ಮಾಡುತಿವೆ. ಕಣ್ಣೀರ ಹನಿಗಳೆಲ್ಲಾ ಮರಳನ್ನು ಸೇರಿ ಹುದುಗಿ ಇಂಗಿಹೋಗುತಿವೆ....ಉಪ್ಪುನೀರ ಜೊತೆ ಉಪ್ಪು ನೀರು ಸೇರಿ ಕಣ್ಣೀರೇ ಕಡಲಾಗುತಿದೆ. ಒಣಗಿದೆನ್ನೆದೆಗೆ ಮಳೆಯ ಸುರಿದು, ಇನ್ನೇನು ಹಸಿರು ಉಸಿರಾಡಬೇಕೆಂದಿರುವಾಗಲೇ ಮಾಯವಾಗಿರುವ ನಿನ್ನ ‘ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು..."
ಎಂದು ಕಳೆದು ಹೋದೆಯೋ ನಾ ಕಾಣೆ... ಇಂದೂ ಹುಡುಕುತಿರುವೆ ನಾ ನಿನ್ನ, ಆಗಸದ ತುಂಬೆಲ್ಲಾ ಬಿಳಿ ವಜ್ರಗಳಂತೆ ಮಿನುಗುವ ತಾರೆಗಳಲ್ಲಿ...ರಾತ್ರಿ ರಾಣಿಯ ಪರಿಮಳದಲ್ಲಿ...ನಾವಿಕನ ಹಾಡಿನಲ್ಲಿ....ಬೆರಳುಗಳ ಸಂದಿಯಿಂದ ಸದ್ದಿಲ್ಲದೇ ಸೋರಿಹೋಗುತಿರುವ ಮರಳ ಕಣ ಕಣದಲ್ಲಿ, ನಿನಗಾಗಿ ಉದುರುತಿರುವ ಕಣ್ಣೀರ ಹನಿಗಳಲ್ಲಿ... ಹುಡುಕಿ ಹುಡುಕಿ ಸೋತು ಕುಸಿದ ನನ್ನ ಕಂಡು ಹುಣ್ಣಿಮೆಯೂ ಕೂಡ ಶೋಕಗೊಂಡು, ಮೋಡದ ತೆರೆಯೊಂದರಿಂದ ತನ್ನ ಕಣ್ಣೀರ ಒರೆಸಿಕೊಳುತಿದೆ.
ಆದರೂ ಅದೇಕೋ ಏನೋ...
ಈ ಕಪ್ಪು-ಬಿಳಿ ತೆರೆಗಳ ಏರಿಳಿತಗಳಂತೇ ಆಶಾಜ್ಯೋತಿಯೊಂದು ಆಗೀಗ ಬೆಳಗುತಿದೆ ಮಾನಸವ. ನಿನ್ನಾಗಮನದ ಕಿರು ಸುಳಿವಿಗಾಗಿ ಜಾತಕ ಪಕ್ಷಿಯಂತೆ ನಾ ಮರುಳಾಗಿರುವೆ. ಮರಳೊಳು ನಿನ್ನ ಹೆಸರನೇ ಬರೆದು, ಅದಕೊಂದು ವೃತ್ತವ ಎಳೆದು ತೆರೆಗಳ ತಡೆಹಿಡಿದು ನಿಲ್ಲಿಸಿರುವೆ ಅಳಿಸದಂತೇ....ಅಳಿಸಿದರೂ ನನಗೇನು? ಈ ಮನದ ತಾವಿನಲಿ ಬೆಚ್ಚಗೆ ಕುಳಿತಿದೆಯಲ್ಲಾ ನಿನ್ನದೇ ನೆನಪು.. ಪ್ರೀತಿಗೆ ಮರೆವಿನ ಹಂಗಿಲ್ಲ ತಾನೇ? ಯಾವ ಮರೆವಿನ ತೆರೆಯೂ ಅಳಿಸದು ಆ ನಿನ್ನ ಪ್ರೀತಿಯ ನೆನಪ. ‘ನಿನ್ನೊಲುಮೆಯಿಂದಲೇ ಈ ಬಾಳು ಬೆಳಕಾಗಿರಲು’, ನಿನ್ನಾಗಮನದ ನಿರೀಕ್ಷೆಯ ನೆಪವೊಂದೇ ಸಾಕು, ಹಾಗೇ ಸುಮ್ಮನಿದ್ದು ಬಿಡುವೆ ಇಲ್ಲೇ ಹೀಗೆ... ಜೊತೆಗಿರಲು ಈ ತಂಗಾಳಿ, ಕಡಲ ಸಂಗೀತ, ಮರಳ ಹಾಸಿಗೆ, ತಿಳಿಬಾನಿಂದಿಣುಕುವ ಚಂದಿರ. ನವಿರಾದ ನಿನ್ನೊಲವಿನ ಸವಿ ನೆನಪೇ ಸಾಕೆನಗೆ ಕಿರು ನಗುವೊಂದ ಬೀರುತ್ತಾ ನಗುವಿನಲೆಗಳ ಹಂಚಲು.... ಆದರೂ ಸಣ್ಣ ಅಳುಕೊಂದು ಎದೆಯ ಮೂಲೆಯಿಂದೆದ್ದು ಬರುವುದು ಛಳ್ಳೆನ್ನುವ ನೋವಿನಂತೆ... ನರಳುವ ಮನದೊಂದಿಗೆ, ನಗುಮೊಗವ ಹೊತ್ತು, ಮೌನವಾಗಿ ಪ್ರಾರ್ಥಿಸುತಿರುವೆ ಅನುದಿನ ನಾ ಆ ದೇವನ-
ದೀಪವು ನಿನ್ನದೇ ಗಾಳಿಯೂ ನಿನ್ನದೇ
ಆರದಿರಲಿ ಬೆಳಕು
ಕಡಲೂ ನಿನ್ನದೇ ಹಡಗೂ ನಿನ್ನದೇ
ಮುಳುಗದಿರಲಿ ಬದುಕು....
ನಿನ್ನೊಲವಿನ,
*****
(ಹಿಂಸೆ ಎಂದೂ ಸುಖ ನೆಮ್ಮದಿಯ ತರದು. ಕೆಲವು ಪಾತಕಿಗಳ ಕ್ರೌರ್ಯದಿಂದಾಗಿ ಅದೆಷ್ಟೋ ಅಮಾಯಕರು ಬಲಿಯಾಗಿದ್ದಾರೆ..ಆಗುತ್ತಲೂ ಇದ್ದಾರೆ. ಆದರೆ ಹಾಗೆ ಚಿರ ನಿದ್ರೆಯಲ್ಲಿ ಹೋದವರು, ದೂರ ದಿಗಂತದಲ್ಲೆಲ್ಲೋ ಕಳೆದು ಚುಕ್ಕಿಯಾದವರು, ತಮ್ಮ ಹಿಂದೆ ನೂರಾರು ಸ್ನೇಹಿತರನ್ನು, ಆತ್ಮೀಯರನ್ನು, ಪ್ರೀತಿಪಾತ್ರರನ್ನು ಶೋಕಸಾಗರದಲ್ಲೇ ಮುಳುಗಿಸಿ ಬಿಡುತ್ತಾರೆ. ಅಕಾಲದಲ್ಲಿ ಅಗಲಿತ ಬಾಳಸಂಗಾತಿಯ ನೆನಪಲೇ ಕೊರಗುವ, ಕಾರಣವಿಲ್ಲದೇ ದೂರ ಮರೆಯಾಗಿ..ಬದುಕಿರುವನೋ ಇಲ್ಲವೋ ಎಂಬ ಸಂದೇಹದಲ್ಲೇ ತಪಿಸುವ ವಿರಹಿಣಿಯರ ಮಾನಸಿಕ ತುಮುಲಗಳನ್ನು ಕಲ್ಪಿಸಲೂ ಅಸಾಧ್ಯ. ಎದೆಯೊಳಗೆ ನೋವುಗಳ ಮೂಟೆಯನ್ನೇ ಹೊತ್ತು, ಮೊಗದಲ್ಲಿ ಮಾತ್ರ ನಗುವ ಲೇಪನ ಹಚ್ಚಿ ಬದುಕ ಜೀವಿಸುತಿರುವ ಅಂತಹ ಸಾವಿರಾರು ತಪಸ್ವಿನಿಯರಿಗಾಗಿ ನನ್ನೀ ಬರಹವನ್ನು ಅರ್ಪಿಸುತ್ತಿದ್ದೇನೆ. )
- ತೇಜಸ್ವಿನಿ
19 ಕಾಮೆಂಟ್ಗಳು:
ತುಮ್ ಹೋ ಎಕ್ ಜೀತೀ ಜಾಗ್ತೀ ಹಸೀನ್ ಘಜಲ್ ಎಂದು ತನ್ನ ಪ್ರೇಯಸಿಯನ್ನೊಬ್ಬ ಕವಿ ತನ್ನೆದೇ ರೀತಿಯಲ್ಲಿ ವರ್ಣಿಸಿದ...ಅಲ್ಲಿ ಅವನ ವರ್ಣನೆ ಅವನ ಸೃಜನಶೀಲತೆಯ ಹೊದಿಕೆಯನ್ನು ಹೊದ್ದು ಬಂದಿತ್ತು, ಇದೇ ಅನುಭವವಾಯ್ತು..ಚಿಕ್ಕ ಚೊಕ್ಕ ನಿಮ್ಮ ಲೇಖನ...
ರವಿಯಾಡುವ ಕಣ್ಣಾಮುಚ್ಚಾಲೆ ಕಡಲೊಂದಿಗೆ ಮತ್ತು ಕಡಲ ಅಗಾಧತೆ ಮನದಲ್ಲೆಬ್ಬಿಸುವ ಭಾವನೆಗಳ ಬೃಹದಲೆಗಳು...ಎಲ್ಲಾ ಸುಂದರ ಕಥನ ರೂಪೀ ಕವನವಾಗಿ ಮೂಡಿ ಬಂದಿದೆ...ಅಭಿನಂದನೆಗಳು ತೇಜಸ್ವಿನಿ.
ನೈಸ್ ನೈಸ್ ನೈಸ್ ಅಕ್ಸ್!
ಆ ಹಾಡೆಲ್ಲ ಒಂದ್ಸಲ ಗುನುಗಿಕೊಂಡೆ. ಥ್ಯಾಂಕ್ಯೂ..
ಪ್ರಿಯ ತೇಜೂ,
ಓದುತ್ತಾ ಓದುತ್ತಾ, ಮನದಲ್ಲೇನೋ ತಳಮಳ ! ವರುಷವೇ ಕಳೆದರೂ , ಮನದಲ್ಲಿ ಮಾಸದೆ ನಿಂತ ದಿನವಿದು. ನಿನ್ನ ಭಾವಾಂಜಲಿ ಅತ್ಯಂತ ಅರ್ಥ ಪೂರ್ಣ !
ಕಣ್ಣಂಚಿನಲ್ಲಿ ಮೂಡಿದ ಅಶ್ರು ಬಿಂದು ಕೆನ್ನೆಯ ಮೇಲೆ ಹರಿದಿದ್ದು ಗೊತ್ತಾಗಲೇ ಇಲ್ಲ , ಅದನ್ನು ಒರೆಸಿಕೊಂಡು ಮುಚ್ಚಿಡುವ ಮನಸೂ ಇಲ್ಲ !
ತೇಜಸ್ವಿನಿ ಮೇಡಂ,
ಓದುತ್ತ ಓದುತ್ತಾ, ಕಳೆದ ವರ್ಷದ ಬಾಂಬ್ ಸ್ಫೋಟದ ಚಿತ್ರಣ ಕಣ್ಣೆದುರಿಗೆ ಬಂತು.
ವರುಷ ಕಳೆದರೂ ಕಸಾಬ್ ನಗುತ್ತಿದ್ದಾನೆ ಎಂಬುದು ಇನ್ನು ಸೋಜಿಗದ ಸಂಗತಿ ಇಲ್ಲ ಬೇಸರದ ಸಂಗತಿ
ಅಂದು ಹುತಾತ್ಮರಾದ ಎಲ್ಲ ಸೈನಿಕರಿಗೆ, ಆತ್ಮೀಯರಿಗೆ ಒಂದು ಭಾವ ಶ್ರದ್ದಾಂಜಲಿ
ಬರಹ ಬಹಳ ಆಪ್ತವಾಗಿದೆ
ನೆನಪಿನ ದೀಪವನ್ನು ಎದೆಯಲ್ಲಿಯೇ ಇಟ್ಟುಕೊಂಡವರಿಗೂ ನನ್ನ ಪ್ರಣಾಮಗಳು.
ತೇಜಸ್ವಿನಿ, ಭಾವಪೂರ್ಣ ಲೇಖನ . ಆ ದಿನದ ನೆನಪಿಂದ ಮನಸ್ಸೆಲ್ಲ ಭಾರವಾಯಿತು. ಇದು ಎಷ್ಟೊಂದು ಜನರ ಮನದಳಲೊ ಅಲ್ಲವೆ.
ನೆನಪು ಹಂಗ ಮೇಡಮ್ ಅವು ಸಾಯೂದಿಲ್ಲ ಅವು ಸತ್ರ ನಾವು ಬದುಕಿಯೂ ಏನು ಉಪಯೋಗ
ನನ್ನ ಹೊಸಬ್ಲಾಗು usdesaihubkiwala.blogspot.com ಈ "ನೆನಪಿನ ದೋಣಿ" ಬಗ್ಗೆ ಹೇಳತದ ಬಿಡುವು ಇದ್ದಾಗ ಬರ್ರಿ
theme chennagide. lekhana tumbaa ishta aaytu.
ತೇಜಸ್ವಿನಿ ಮೇಡಮ್,
ಭಾವಪೂರ್ಣವಾಗಿ ಬರೆದಿರುವುದರಿಂದ ಓದಿ ಮನ ಕಲಕಿದಂತಾಯಿತು. ಆ ದಿನವನ್ನು ನಾವು ಮರೆಯುವುದುಂಟೇ. ಹುತಾತ್ಮರಿಗೆ ಗೌರವ ಪೂರ್ವಕ ಶ್ರದ್ಧಾಂಜಲಿಗಳು.
ತೆಜಶ್ವಿನಿ ಮೇಡಂ,
ಮೊನ್ನೆ T . V . ಯಲ್ಲಿ ನೋಡ್ತಾ ಇದ್ದೆ..... ನಮ್ಮ ದೇಶದಲೀ ಯಾರೂ ಸುರಕ್ಷಿತರಲ್ಲ ..... ಒಬ್ಬ ಕಸಬ್ ನನ್ನು ಬಿಟ್ಟು..... ಎಂತಾ ನಾಚಿಕೆಯಲ್ಲವಾ ಮೇಡಂ...... ನಿಮ್ಮ ಲೇಖನದ , ಕಾವ್ಯದ ತಿರುಳು ಓದಿ ಇದೆಲ್ಲಾ ನೆನಪಾಯಿತು.....
ಭಾವಪೂರ್ಣ ಬರಹ, ಚೆನ್ನಾಗಿದೆ.
ತು೦ಬಾ ಅರ್ಥಪೂರ್ಣ ಶ್ರದ್ದಾ೦ಜಲಿ ತೇಜಕ್ಕ... ಭಾವಗೀತೆಗಳ ಸಾಲಿನೊ೦ದಿಗೆ ಮೂಡಿಬ೦ದ ನುಡಿನಮನ ತು೦ಬಾ ಭಾವಪೂರ್ಣವಾಗಿ ಬ೦ದಿದೆ..
ಮೊದಲು ಪ್ರೇಮ ಪತ್ರದಂತೆ ಭಾಸವಾಯಿತು. ನಂತರ ಓದಿದಾಗ ಗೊತ್ತಾಯಿತು ಇದೊಂದು ಪ್ರೀತಿಯ ಮಹತ್ವವನ್ನು ಸಾರುವ ಹಿಂಸಿಯ ವಿರುದ್ಧ ಅಹಿಂಸಾ ಮಂತ್ರವನ್ನು ಸಾರುವ ಲೇಖನ ಅಂತ ಗೊತ್ತಾಯಿತು. ಚನ್ನಾಗಿ ಮೂಡಿ ಬಂದಿದೆ. ನೀವು ಕೋಟ ಮಾಡಿರುವ ಸಾಲುಗಳು ನನಗಿಷ್ಟವಾದವು ಸಹ
ಮೆಚ್ಚಿ ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿದ ಸಹಮಾನಸಿಗರೆಲ್ಲರಿಗೂ ತುಂಬಾ ಧನ್ಯವಾದಗಳು.
ನಮ್ಮ ವ್ಯವಸ್ಥೆ ಯ ಬಗ್ಗೆ ಮಾತೆತ್ತಿದರೆ .
ಎಲ್ಲರನ್ನು ಟಿಕಿಸೋದು ಬಿಟ್ರೆ ಬೇರೆ ಮಾತಿಲ್ಲ .
ಅದಕ್ಕೇ ನನಗನಿಸೋದು
ಸುಮ್ಮನೆ ಇರೋದೇ
ನಮ್ಮ ಆರೋಗ್ಯಕ್ಕೆ
ಒಳ್ಳೇದು.
ಎಷ್ಟ್ ಚೆನ್ನಾಗ್ ಬರ್ದಿದ್ದೀರಾ...ಅರ್ಥಪೂರ್ಣವಾಗಿದೆ.
ತೇಜಸ್ವಿನಿಯವರೆ, ಹಿಂಸೆಯಿಂದ ನೊಂದವರ ಬದುಕಿನ ಕಲ್ಪನೆಯನ್ನು ಈ ಬರಹದಲ್ಲಿ ಒಡಮೂಡಿಸಿದ್ದೀರಿ. ಓದುತ್ತಾ ಭಾವುಕತೆಯಲ್ಲಿ ನಾವೂ ಭಾಗಿಯಾಗುತ್ತೇವೆ. ನೊಂದವರ ಬಾಳಿನಲ್ಲಿ ಹೊಸ ಬೆಳಕು ಬರಲಿ ಎಂದಷ್ಟೇ ಆಶಿಸಬಹುದು.
ತೇಜಸ್ವಿನಿಯವರೇ..
ಆ ದಿನವೇ ನಿಮ್ಮ ಬರಹ ನೋಡಿದರೂ ನನಗೆ ಪ್ರತಿಕ್ರಿಯಿಸಲು ಶಬ್ಧಗಳೆ ಸಿಗದೆ ಒದ್ದಾಡಿದೆ. ಕ೦ಬನಿಯಲ್ಲದೆ ಇನ್ನೆನು ಕೊಡಲಿ ಆ ನನ್ನ ಬ೦ಧುಗಳಿಗೆ....????
ಕಮೆಂಟ್ ಮೊಡರೇಷನ್ ಎಲೋವ್ ಮಾಡುವಾಗ ಅಚಾನಕ್ ಆಗಿ ಇವರುಗಳ ಅಮೂಲ್ಯ ಪ್ರತಿಕ್ರಿಯೆಗಳು ಅಳಿಸಿಹೋದವು. ಅದಕ್ಕಾಗಿ ಇವರೊಡನೆ ಕ್ಷಮೆಕೋರುತ್ತಾ ಇಲ್ಲಿ ಮತ್ತೆ ಪೇಸ್ಟ್ ಮಾಡುತ್ತಿದ್ದೇನೆ.
Venkatakrishna.K.K.puttur ಹೇಳುತ್ತಾರೆ...
ಮನಮುಟ್ಟುವ
ಮನತಟ್ಟುವ
ಭಾವಪೂರ್ಣ ಬರೆಹ.
ತುಂಭ ಚೆನ್ನಾಗಿದೆ.
ಇಸ್ಟವಾಯಿತು.
AntharangadaMaathugalu ಹೇಳುತ್ತಾರೆ...
ತೇಜಸ್ವಿನಿ...
ನಿಮ್ಮ ಭಾವಪೂರ್ಣ ಶ್ರದ್ಧಾಂಜಲಿ ತುಂಬಾ ಅರ್ಥಪೂರ್ಣವಾಗಿದೆ. ಹಾಡುಗಳಂತೂ ಮನದ ಆಳಕ್ಕೆ ಇಳಿದು ಕಾಡುವಂತಹುವು.... ಎಲ್ಲಾ ಹಾಡುಗಳನ್ನೂ ನಾನೂ ಗುನುಗಿಕೊಂಡೆ. ನನಗೆ ಬಹು ಇಷ್ಟವಾದ, ನನ್ನ ಮನದ ಲಹರಿಯನ್ನೇ ಬದಲಿಸಬಲ್ಲಂತಹ ಹಾಡುಗಳು... ಹಿಂದಿನ ವರ್ಷದ ಈ ದಿನ ಯಾರು ತಾನೆ ಮರೆಯಲು ಸಾಧ್ಯ? ಧನ್ಯವಾದಗಳು.
----
ಮೆಚ್ಚುಗೆ ಭರಿತ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.
ತೇಜಸ್ವಿನಿ ಹೆಗಡೆ
ಕಾಮೆಂಟ್ ಪೋಸ್ಟ್ ಮಾಡಿ