
ಮುಂಜಾನೆಯ ಮಂಜು ಇನ್ನೂ ದಟ್ಟೈಸಿತ್ತು. ಮೈ ಕೊರೆಯುವ ಚಳಿ ಯಾರನ್ನೂ ಹೊರ ಬಿಡದಂತೆ ಒಳ ಬಂಧಿಸಿಟ್ಟಿದ್ದರೆ, ನನಗೆ ಮಾತ್ರ ಅಬಾಧಿತ. ಚಳಿಯ ಅನುಭವ ಮನಸಿಗೆ ಮೊದಲಾಗಿ, ನಂತರ ದೇಹಕ್ಕೆ ತಾನೆ? ಮರಗಟ್ಟಿದ್ದ ಮನಸು ಬಾಹ್ಯ ಅನುಭೂತಿಗೆ ಸ್ಪಂದಿಸುವುದಾದರೂ ಎಂತು? ಮೊದಲಾಗಿದ್ದರೆ ಇಂತಹ ಒಂದು ಮುಂಜಾವಿನಲ್ಲಿ ಭಾಸ್ಕರನ ತೋಳಿನ ತೆಕ್ಕೆಯೊಳಗೆ ಹಾಯಾಗಿ ಮಲಗಿರುತ್ತಿದ್ದೆ. ಚಳಿಯ ಕಚಗುಳಿಗಿಂತ ಅವನ ತುಂಟಾಟವೇ ಚಳಿ ತರಿಸುತ್ತಿತ್ತು. ಆಹಾ! ಎಂತಹ ಸುಂದರ ಬೆಳಗು ಕಾದಿರುತ್ತಿತ್ತು ನನಗಾಗಿ. ಅಂದಿಗೂ ಇಂದಿಗೂ ಹೋಲಿಕೆಯೂ ಅಸಾಧ್ಯ. ಹ್ಮ್ಂ...ಮರೆಯಲಾಗದ ನೆನಪುಗಳ ಭಾರವನ್ನು ಹೊರಹಾಕಲು ಈ ಕಣ್ಣೀರೊಂದೇ ಸಾಧನವೆಂದೆನಿಸುತ್ತಿದೆ ನನಗೆ. "ಅಲ್ಲಮ್ಮಾ.. ವಿಭಾ ಇಷ್ಟು ಬೆಳಗ್ಗೆ ಈ ಚಳಿಯಲ್ಲಿ ಜಾಗಿಂಗ್ಗೆ ಹೋಗ್ಲೇ ಬೇಕೇನಮ್ಮಾ? ಅಷ್ಟು ಹೋಗ್ಬೇಕು ಅಂದ್ರೆ ನನ್ನ ಬಾಡಿಗಾರ್ಡ್ನಾದ್ರೂ ಜೊತೆಗೆ ಬರೋಕೆ ಬಿಡು. ಇನ್ನೂ ಪೂರ್ತಿ ಬೆಳಕಾಗಿಲ್ಲ. ಅಷ್ಟು ದೂರ ಒಬ್ಳೇ ಹೋಗೋದು ಸರಿಯಲ್ಲ.." ಎಂದಾಗ, ಅಪ್ಪನ ಕಕ್ಕುಲಾತಿ ಕ್ಷಣ ಹಿಡಿದಿಟ್ಟರೂ ಯಾಕೋ ನಿಲ್ಲಲಾಗಿರಲಿಲ್ಲ. "ಅಪ್ಪಾ, ಮಂತ್ರಿಯಾಗಿರೋದು ನೀನು... ನಾನಲ್ಲ. ಅದೂ ಅಲ್ದೇ ಬಾಡಿಗಾರ್ಡ್ ಅವಶ್ಯಕತೆ ನನಗಿಲ್ಲಪ್ಪ. ಯಾರಿಗೆ ಅಂತ ಈ ಬಾಡಿನ ಕಾಪಾಡ್ಕೋ ಬೇಕು ಹೇಳು?" ಎಂದು ದೊಡ್ಡದಾಗಿ ನಕ್ಕು ಅದರೊಳಗೇ ನನ್ನ ನೋವನ್ನು ಮುಚ್ಚಿಹಾಕುವ ವ್ಯರ್ಥ ಪ್ರಯತ್ನ ಮಾಡಿದ್ದೆ. ಒಮ್ಮೆ ಹಿಂತಿರುಗಿ ನೋಡಿದ್ದರೆ ಮಾತ್ರ ಮತ್ತೆ ಮನೆಯೊಳಗೆ ಹೋಗುತ್ತಿದ್ದೆನೋ ಏನೋ? ಏಕೋ ಈ ಬಂಧನಗಳೇ ಬೇಡ ಎಂದೆನಿಸುತ್ತಿವೆ. ಇಲ್ಲಿ ಬಂದರೂ ಹಕ್ಕಿಗಳಿಂಚರ, ಮುಂಜಾವಿನ ತಂಗಾಳಿ ಯಾವುವೂ ನನ್ನರಳಿಸಲೇ ಇಲ್ಲ. ಬದಲಿಗೆ ಎಲ್ಲವೂ ಆತನ ನೆನಪನ್ನೇ ಮುಂದಿರಿಸಿ ನನ್ನಳಿಸಿದವು. ಅಳಿಸುತ್ತಲೇ ಇವೆ ಇನ್ನೂ. ಅಂತೂ ಇಂತೂ ಭಾಸ್ಕರ ತನ್ನ ಪ್ರತಾಪವನ್ನು ತೋರಿಸ ತೊಡಗಿದ. ಇಬ್ಬನಿಗಳನೆಲ್ಲಾ ಒಂದೊಂದಾಗಿ ಗುಟುಕರಿಸಿ, ತನ್ನ ಕಿರಣಗಳಿಂದ ಅವುಗಳ ಅಸ್ತಿತ್ವವೂ ಕಾಣಿಸದಂತೆ ಸಾರಿಸಿಬಿಟ್ಟ. ಕಣ್ಣು ಅಪ್ರಯತ್ನವಾಗಿ ರಾತ್ರಿಯಿಂದಲೇ ಕೈಯನ್ನು ಬೆಚ್ಚಗೆ ಸುತ್ತಿದ್ದ ವಾಚ್ ಕಡೆ ಹೊರಳಿತು. ಗಂಟೆ ಒಂಬತ್ತಾದರೂ ಯಾಕೋ ಮನೆಯ ದಾರಿ ಹಿಡಿಯಲು ಮನಸಾಗುತ್ತಿಲ್ಲ. ಯಾರ ಗೊಡವೆ ಇಲ್ಲದೇ, ಅಪರಿಚಿತರ ನಡುವೆ ಸುಮ್ಮನೆ ಕುಳಿತಿರುವ ಈ ಕಾಲವನ್ನು ಸ್ವಲ್ಪ ಹೊತ್ತು ಇನ್ನೂ ಹಿಡಿದಿಡಬೇಕೆಂದೆನಿಸುತ್ತಿದೆ. ಊಹೂಂ...ನಾ ಕಾಲನ ಹಿಂದೆ ಓಡೋದು ಬಿಟ್ಟು ಆಗಲೇ ವರುಷವಾಗುತ್ತಾ ಬಂತಲ್ಲಾ...ಇನ್ನೆಲ್ಲಿ ನನಗದರ ಪರಿವೆ?! ಓಹ್..ಮತ್ತೆ ಅಸಹನೀಯ ತಲೆನೋವು...ನರ ನರಗಳೊಳಗೆ ಸಿಡಿತ ಹೆಚ್ಚಾಗಲು, ಹಾಗೇ ಕಣ್ಮುಚ್ಚಿದೆ.
"ಲೇ ಶರ್ಮಿಷ್ಠ ನಿಲ್ಲೇ ಅಲ್ಲಿ...ನಾನೂ ಬರ್ತೀನಿ ನಿನ್ಜೊತೆ..." ಕನಸಿನಲ್ಲಿ ಕೇಳಿದಂತಿದ್ದ ಈ ಒಂದು ಮಾತು ನನ್ನೊಳಗಿನ ನನ್ನನ್ನೂ ಮರೆಯಾಗಿಸಲು ಥಟ್ಟನೆ ಕಣ್ಬಿಟ್ಟೆ. ಸುಮಾರು ೧೨-೧೩ ವರುಷದ ಇಬ್ಬರು ಹುಡುಗಿಯರು ಸ್ಕೂಲಿಗೆ ಹೊರಟಿದ್ದರು. ಓರ್ವಳು ಮುಂದೆ ಹೋಗುತ್ತಿದ್ದರೆ ಇನ್ನೊಬ್ಬಳು..ಬಹುಶಃ ಅವಳ ಸ್ನೇಹಿತೆಯಾಗಿರಬೇಕು...ಅವಳನ್ನೇ ಹಿಂಬಾಲಿಸಿ ಓಡುತ್ತಿದ್ದಳು. ನನಗೇನಾಯಿತೋ ದೇವರಾಣೆ ಗೊತ್ತಿಲ್ಲ. ದಢಕ್ಕನೆದ್ದು ಆ ಹುಡುಗಿಯರ ಬಳಿ ಓಡಿದೆ ಹುಚ್ಚಿಯಂತೆ. "ಶರ್ಮಿ ನಿಂತ್ಕೊಳೇ.." ಎಂದು ಮತ್ತೆ ಮತ್ತೆ ಕೂಗುತ್ತಿದ್ದ ಆ ಹುಡುಗಿಯ ಕೈ ರಟ್ಟೆಯನ್ನು ಹಿಡಿದು ನಿಲ್ಲಿಸಿ ನನ್ನ ಕಡೆ ತಿರುಗಿಸಿಕೊಂಡು ಬೊಬ್ಬಿರಿದೆ "ಅವಳ ಹಿಂದೆ ಹೋಗ್ಬೇಡ. ಅವಳು ಶರ್ಮಿಷ್ಠೆ. ಬೆಂಕಿಯಂತೆ ಅವಳು. ಜೊತೆ ಸೇರಿ ಮುಂದೆ ಹೋದ್ರೆ ಸುಟ್ಟು ಭಸ್ಮವಾಗೋದು ನೀನು ನಿನ್ನ ಸಂಸಾರ ತಿಳ್ಕೋ ದಡ್ಡಿ. ಅವ್ಳು ಬೇಕಿದ್ರೆ ಮುಂದೆ ಹೋಗ್ಲಿ. ನೀನು ನಿನ್ನ ಪಾಡಿಗೆ ಹೋಗು... ನೀನು ದೇವಯಾನಿ..." ಎಂದೆಲ್ಲಾ ಬಡಬಡಿಸುತ್ತಿದ್ದರೆ, ಭಯಗ್ರಸ್ಥಳಾದ ಆಕೆ ಕಿರುಚಲು ಶುರುಮಾಡಿದಳು. ಜನನಿಬಿಡ ರಸ್ತೆ ಬೇರೆ. ಜನರ ಗುಂಪಿನ ಜೊತೆ ಟ್ರಾಫಿಕ್ ಪೋಲೀಸರ ಕೈಗೂ ಸಿಕ್ಕಿಬಿದ್ದೆ. "ಏನ್ರಮ್ಮಾ, ನೋಡೋಕೆ ಒಳ್ಳೆ ಮನೆಯವ್ರ ತರಹ ಕಾಣ್ತೀರಾ... ಮಾಡೋದು ಈ ದಂಧೇನಾ? ಹುಡುಗೀನಾ ಕಿಡ್ನಾಪ್ ಮಾಡ್ತೀರಾ ಈ ವೇಷ ಹಾಕ್ಕೊಂಡು?" ಎಂದು ತಲೆಗೊಂದು ಮಾತುಗಳನ್ನು ಕೇಳುವಾಗಲೇ ನನಗೆ ನನ್ನ ಹುಚ್ಚಿನ ಪರಿಣಾಮ ಅರಿವಾಗಿದ್ದು. ಅವರೆಲ್ಲರ ಇರಿಯುವನೋಟ, ಚುಚ್ಚುಮಾತುಗಳಿಂದ ಸಂಪೂರ್ಣ ಮಂಕಾಗಿ ಹೋದೆ. ಮಾತಾಡಲು ಯತ್ನಿಸಿದರೆ ಸ್ವರವೇ ಹೊರಬರುತ್ತಿಲ್ಲ. ನನ್ನ ಪರಿಸ್ಥಿತಿ ಮತ್ತೂ ಬಿಗಡಾಯಿಸುತ್ತಿತ್ತೇನೋ......ಇನ್ನೂ ಬರದ ಮಗಳನ್ನು ಹುಡುಕಿ ತರಲು ಅಪ್ಪ ಕಳುಹಿಸಿದ ಜನರು ಅಲ್ಲಿಗೆ ಬರದಿರುತ್ತಿದ್ದರೆ.
"ಪುಟ್ಟಿ...ಯಾಕಮ್ಮಾ ನೀನು ಈ ರೀತಿ ನಿಂಗೇ ಹಿಂಸೆ ಕೊಟ್ಕೊಂಡು ನನ್ನೂ ನೋಯಿಸ್ತಿದ್ದೀಯಾ? ನಿಂಗೆ ಏನು ಕಡ್ಮೆಯಾಗಿದೆ ಇಲ್ಲಿ? ಇವತ್ತು ಆ ಜನ್ರಿಂದ ನಿಂಗೇನಾದ್ರೂ ಅಪಾಯವಾಗಿದ್ದಿದ್ರೆ ನನ್ನ್ ಗತಿಯೇನಾಗ್ತಿತ್ತು ಹೇಳು? ಹಾಳಾದ ಆ ಭಾಸ್ಕರನ ನೆನ್ಪಲ್ಲೇ ಎಷ್ಟು ಅಂತ ಕೊರಗ್ತೀಯಾ? ಅವ್ನಿಗೆ, ಆ ರಜನಿಗೆ ತಕ್ಕ ಶಾಸ್ತಿ ಮಾಡ್ತೀನಿ ಅಂದ್ರೂ ನೀ ಬಿಡ್ತಾ ಇಲ್ಲ! ನೀ ಹೂಂ..ಹೇಳಿದ್ರೆ ಸಾಕಮ್ಮಾ... ನಾಳೆ ಯಾಕೆ ಇವತ್ತೇ ಅವ್ರಿಬ್ರೂ ಬೀದಿಲಿ ಬಿದ್ದಿರ್ತಾರೆ. "ರಂಗಮಂದಿರ"ವನ್ನ ಅವ್ರು ಹಾದುಹೋಗಲೂ ಬಿಡದಂಗೆ ನಾ ವ್ಯವಸ್ಥೆ ಮಾಡ್ತೀನಿ. ನಂಗೂ ನಿನ್ನ ಬಿಟ್ರೆ ಯಾರಿದ್ದಾರೆ ಹೇಳು?" ಎಂದು ಕಣ್ಣಂಚು ಒದ್ದೆ ಮಾಡಿಕೊಂಡ ಅಪ್ಪನ ನೋಡಿ ತುಂಬಾ ಸಂಕಟವಾಗಿತ್ತು. ಬೆಳಗ್ಗೆ ಪಾರ್ಕಿನ ರಾದ್ಧಾಂತವೆಲ್ಲ ತಿಳಿದೂ ಏನೊಂದೂ ಹೇಳದೇ ಸುಮ್ಮನೇ ಹೊರ ಹೋಗಿದ್ದರು. ಮಧಾಹ್ನ ಎಂದೂ ಮನೆಗೆ ಬರದಿದ್ದವರು, ತನ್ನೆಲ್ಲಾ ಕೆಲಸಗಳನ್ನು ಬಿಟ್ಟು, ನನ್ನ ಸಾಂತ್ವನಕ್ಕೆ ನಿಂತಿದ್ದ ಅಪ್ಪನನ್ನು ನೋಡಿ ನನ್ನೆದೆ ತುಂಬಿ ಬಂದಿತ್ತು. ಆದರೆ ಆಘಾತಕ್ಕೆ ಸಿಲುಕಿದ್ದ ಮನಸ್ಸು ಶಂಕೆಯನ್ನೇ ತೋರಿದಾಗ, ಅವರ ಮಾತುಗಳಲ್ಲಿರುವುದು ಸಂಪೂರ್ಣ ಮಮಕಾರವೋ ಇಲ್ಲಾ ರೆಪ್ಯುಟೇಶನ್ ಹಾಳಾಗುವ ಭೀತಿಯೋ....ಎಂದೇ ತಿಳಿಯದಂತಾಗಿ ತುಸು ಬಿಗಿಯಾದೆ. "ಅಪ್ಪಾ ನಿಮಗೆ ನನ್ನಿಂದ ಮರ್ಯಾದೆ ಹೋಗ್ತಿದೆ ಅಂತಾದ್ರೆ ಹೇಳಿ... ಬೇರೆ ವ್ಯವಸ್ಥೆ ಮಾಡ್ಕೊಳ್ತೀನಿ. ಅದು ಬಿಟ್ಟು ಅವ್ರಿಬ್ರನ್ನ ಬೈದು, ಹೀಯಾಳ್ಸಿ, ಮತ್ತೆ ಮತ್ತೆ ನನ್ಗೆ ಅವರನ್ನೇ ನೆನಪಿಸ್ಬೇಡಿ. ಅವರೇನಾದ್ರೂ ಮಾಡ್ಕೊಳ್ಲಿ. ನನ್ನ ಪಾಡಿಗೆ ನಾನಿರ್ತೀನಿ. ಚೆನ್ನಾಗೇ ಇದ್ದೀನಿ ಕೂಡ. ಮರೆಯೋಕೆ ಸ್ವಲ್ಪ ಟೈಮ್ ಬೇಕಷ್ಟೇ. ಭಾಸ್ಕರಂಗೂ ನನಗೂ ಇನ್ಯಾವ ಸಂಬಂಧನೂ ಇಲ್ಲ. ಅವ್ನ ಜೊತೆ, ರಜನಿ ಜೊತೆ ದ್ವೇಷದ ಸಂಬಂಧನೂ ನನ್ಗೆ ಬೇಡ. ಕಾರಣ ಪ್ರೀತಿಗಿಂತ ದ್ವೇಷದ ಬಂಧ ಜಾಸ್ತಿಯಂತೆ. ಎಲ್ಲಾ ಮರ್ತು ಬಿಡ್ಬೇಕು ನಾನು. ಅದ್ಕೆ ನಿಮ್ಮ ಮಾನಸಿಕ ಬೆಂಬಲ ಬೇಕು ಅಷ್ಟೇ." ಎಂದು ನಿಷ್ಠುರವಾಡಲು ಅಪ್ಪ ಎದ್ದು ನಿಂತರು.
"ನೋಡಮ್ಮಾ... ರೆಪ್ಯುಟೇಶನ್ ಚಿಂತೆ ನನಗಿಲ್ಲ. ಆ ರೀತಿನೂ ನಾ ಹೇಳಿಲ್ಲ. ನಾನು ಹೇಳಿದ್ದನ್ನ ಸರಿಯಾಗಿ ಅರ್ಥಮಾಡ್ಕೊಳ್ತೀಯಾ ಅಂದ್ಕೋತೀನಿ. ಮೊದ್ಲಿಂದ್ಲೂ ನಿಂಗೆ ಹಠ ಜಾಸ್ತಿ. ಅದೇ ನಿನ್ನ ಎಲ್ಲಿ ನಾಶ ಮಾಡ್ಬಿಟ್ರೆ ಅನ್ನೋ ಭಯ ಅಷ್ಟೇ. ನಾಟಕ ಮಾಡ್ತೀನಿ, ರಂಗಮಂದಿರ ಸೇರ್ತೀನಿ ಅಂದೆ. ನಾನು ಹೂಂ ಅಂದೆ. ನಾಟಕದ ಹೀರೋನನ್ನೇ ನಿನ್ನ ಜೀವನದ ಹೀರೋ ಮಾಡ್ಕೋತೀನಿ ಅಂದೇ.. ನಾನೇ ನಿಂತು ಮದ್ವೆ ಮಾಡ್ದೆ. ಇಲ್ಲೇ ಇರಿ ಅಂದ್ರೂ ಕೇಳ್ದೇ ಬೇರೆ ಮನೆ ಮಾಡಿ ಉಳ್ಕೊಂಡೆ. ಅದ್ಕೂ ನಾನು ರೈಟ್ ಅಂದೆ. ಆಮೇಲೆ..........ಹ್ಮ್ಮ್.... ಎಲ್ಲಾ ಬಿಟ್ಬಂದು ಇನ್ನಿಲ್ಲೇ ಇರ್ತೀನಪ್ಪ ಅಂದಾಗಲೂ ನಾನು, ಸರಿಯಮ್ಮ ಇದೂ ನಿಂದೇ ಮನೆ ಅಂದೆ. ಅವ್ರಿಬ್ರನ್ನ ಏನೂ ಮಾಡ್ದೇ ಸುಮ್ನೇ ಬಿಟ್ಟಿದ್ದೂ ನೀನು ಬೇಡ ಅಂದಿದ್ರಿಂದ ತಿಳ್ಕೊ. ಇಲ್ದೇ ಹೋಗಿದ್ರೆ ಇಷ್ಟೋತ್ತಿಗೆ ಅವ್ರಿಬ್ರೂ.......ಸರಿ ಬಿಡು...ನೀನೇ ಒಂದ್ಸಲ ಯೋಚ್ನೆ ಮಾಡಿ ನೋಡು. ಮುಂದಿನ ನಿನ್ನ ಭವಿಷ್ಯಕ್ಕೆ ಹಿಂದಿನ ಭೂತಕಾಲನ ತರ್ಬೇಡ ಅಷ್ಟೇ! ಹೌದು ಆ ಮನುಷ್ಯಂಗೂ ನಿಂಗೂ ಸಂಬಂಧ ಇಲ್ಲ ಅಂದ್ಯಲ್ಲಾ... ಮತ್ತೆ ಇನ್ನೂ ಯಾಕೆ ಅವ್ನ ಮಾಂಗಲ್ಯನ ನಿನ್ನ ಕತ್ತಲ್ಲಿ ಇಟ್ಕೊಂಡಿದ್ದೀಯಾ? ಆ ಸೆಂಟಿಮೆಂಟಾದ್ರೂ ಇನ್ಯಾಕೆ?" ಎಂದವರೇ ನನ್ನುತ್ತರಕ್ಕೂ ಕಾಯದೇ, ಹೊರ ನಡೆದುಬಿಟ್ಟರು. ಅಪ್ಪನ ಇಂತಹ ಮಾತುಗಳಿಗೆ, ಉಪದೇಶಗಳಿಗೆಲ್ಲಾ ಮನಸು ಸ್ಪಂದಿಸದಷ್ಟು ಒರಟಾಗಿ ಹೋಗಿತ್ತು. ಆದರೆ ಇಂದು ಮಾತ್ರ ಅವರು ತುಂಬಾ ತೀಕ್ಷ್ಣವಾಗಿ ಹೇಳಿದ್ದರು. ಬಹುಶಃ ನನ್ನ ಹುಚ್ಚಾಟಗಳಿಂದ ರೋಸಿಹೋಗಿರಬೇಕು. ಅದರಲ್ಲೂ ಕೊನೆಯಲ್ಲಿ ಅವರು ಕೇಳಿದ ಆ ಒಂದು ಪ್ರಶ್ನೆ ಮಾತ್ರ ಬಿಟ್ಟೂ ಬಿಡದೇ ನನ್ನದೆಯ ಚುಚ್ಚತೊಡಗಿತು. "ಹೌದಲ್ಲಾ ನಾನ್ಯಾಕೆ ಇದನ್ನ ಗಮನಿಸ್ಲೇ ಇಲ್ಲಾ? ಇನ್ನೂ ಯಾಕೆ ನಾ ಅಂವ ಕಟ್ಟಿದ್ದ ತಾಳಿಯನ್ನ ತೆಗ್ದೇ ಇಲ್ಲಾ? ಅಥವಾ ಇದ್ರ ಇರುವಿಕೆ ನನಗೆ ಏನೂ ಅನ್ನಿಸ್ತಾನೇ ಇಲ್ವೇ? ಹಿಂದೊಮ್ಮೆ, ರಾತ್ರಿ ಮಲಗಿದಾಗ ಎದೆಯ ನಡುವೆ ಬಂದು ಚುಚ್ಚಿದ ಪದಕದಿಂದ ಕಿರಿ ಕಿರಿಯಾಗಿ ಕಿತ್ತೆಸೆದಿದ್ದೆ ಚಿನ್ನದ ಸರವನ್ನೇ. ಆದರೆ ಈಗ ಇಷ್ಟುದ್ದದ ಸರದೊಳಗಿನ ತಾಳಿಯ ಅಸ್ತಿತ್ವ ನನ್ನೆದೆಯಾಳವನ್ನೇ ಬಗೆದು ನೋಯಿಸಿ, ಹಿಂಸಿಸುತಿದ್ದರೂ ಸುಮ್ಮನೇಕಿದ್ದೇನೆ?! ಮತ್ತೆ ಅರ್ಥವಾಗದ, ಆದರೂ ಒಪ್ಪಿಕೊಳ್ಳಲಾಗದ ಮನಃಸ್ಥಿತಿಯಿಂದ ತಲೆಸಿಡಿತ ಜೋರಾಯಿತು. ಕೋಣೆಯ ತುಂಬೆಲ್ಲಾ ಅವನ ನೆನಪುಗಳ ಹೊಗೆಯೇ ಕವಿದಂತಾಗಿ, ಹೊರಬಂದು ಬಿಟ್ಟೆ. ಹೂದೋಟದ ತುಂಬೆಲ್ಲಾ ನಗುತಿದ್ದ ಬಣ್ಣಬಣ್ಣದ ಹೂಗಳು, ಕೊಳದೊಳಗೆ ಅರಳಿರುವ ಕೆಂದಾವರೆಗಳು ನಿನಗಿಂತ ನಾವೇ ಸುಖಿ ಎಂದಂತಾಗಲು, ರೊಚ್ಚಿಗೆದ್ದು ಕಲ್ಲೊಂದನೆತ್ತಿ ಎಸೆದೆ. ಕಲ್ಲು ಪ್ರಶಾಂತವಾಗಿದ್ದ ನೀರೊಳಗೆ ಬಿದ್ದು, ತರಂಗಗಳ ತಂದರೂ ಕಮಲಗಳು ಮಾತ್ರ ಅಬಾಧಿತ. ತರಂಗಗಳ ಜೊತೆಗೂಡಿ ಅವು ಮತ್ತೂ ನರ್ತಿಸತೊಡಗಿದವು. ಮೊದಲು ಸಣ್ಣದು ಆಮೇಲೆ ದೊಡ್ಡದು, ಆಮೇಲೆ ಅದಕ್ಕಿಂತ ದೊಡ್ಡದು...ಒಂದರ ಮೇಲೊಂದು ಹಬ್ಬಿದ ತರಂಗಗಳಿಂದ ಮನದೊಳಗೂ ಹಳೆಯ ನೆನಪುಗಳ ರಿಂಗಣ.
-2-
ಚಿಕ್ಕಂದಿನಿಂದಲೂ ನಾಟಕವೆಂದರೆ ಪಂಚಪ್ರಾಣ. ಮನೆಯಲ್ಲಿ ಯಾರಿಗೂ ಇಲ್ಲದ ಈ ಗೀಳು ನನಗಂಟಿಕೊಂಡಿದ್ದು ಹೇಗೋ ಎಂದು ಅಮ್ಮ ಅದೆಷ್ಟು ಬಾರಿ ಜರೆದಿಲ್ಲ! ಯಾವುದಕ್ಕೂ ಸೊಪ್ಪುಹಾಕದೇ ನನ್ನಿಚ್ಛೆಗೆ ನೀರೆದವರೇ ಅಪ್ಪ. ೧೫ ವರುಷಕ್ಕೇ ತಬ್ಬಲಿಯಾದ ನನ್ನ ಮತ್ತಷ್ಟು ಹಚ್ಚಿಕೊಂಡ ಅಪ್ಪ ಎಲ್ಲವುದಕ್ಕೂ ಸೈ ಅಂದವರು. ಮೊದಲಬಾರಿ ರಂಗಮಂದಿರದ ಮೆಟ್ಟಿಲು ಹತ್ತಿದಾಗ ಆದ ಪುಳಕ ಇನ್ನೂ ಮನದಲ್ಲಿ ಹಸಿರಾಗಿದೆ. ಅನುಭವ ಹೊಸತಾಗಿತ್ತು. ಅಲ್ಲಿ ಮೊದಲದಿನವೇ ಪರಿಚಯವಾದ ರಜನಿ ಅಲ್ಪಕಾಲದಲ್ಲೇ ನನ್ನ ಜೀವದ ಗೆಳತಿಯಾಗಲು, ಬದುಕು ಸುಂದರವೆನಿಸಿತ್ತು. ಅಪ್ಪನ ಪ್ರೀತಿಯಲ್ಲಿ, ರಜನಿಯ ನಿರ್ಮಲ ಸ್ನೇಹದಲ್ಲಿ ಒಂದಷ್ಟು ದಿನ ಅಮ್ಮನ ಮಡಿಲ ನೆನಪೂ ಮಸುಕಾಗಿದ್ದು ಸುಳ್ಳಲ್ಲ. ದಿನಗಳು ಸೆಕೆಂಡುಗಳಾಗಿದ್ದವು, ಕಾಲ ನನ್ನ ಹಿಂದಿದ್ದ. ಸಮಯ ಸರಿದಂತೇ ಅಧ್ಯಯನ ಮುಗಿದು ಅಭ್ಯಾಸ ಶುರುವಾಗಿತ್ತು. ನೋಡುತ್ತಿದ್ದಂತೇ ನಾ ರಂಗಪ್ರವೇಶ ಮಾಡುವ ದಿನ ಹತ್ತಿರ ಬರತೊಡಗಿತು. ಅದು ನಾನು ಕೊಡುವ ಮೊದಲ ದೊಡ್ಡ ಪ್ರದರ್ಶನವಾಗಿತ್ತು. ನೋಡಿದ್ದನ್ನು, ಕಲಿತದ್ದನ್ನು, ಹೊರಹಾಕಲು ವೇದಿಕೆ ಸಜ್ಜಾಗಿತ್ತು. "ವಿಭಾ ಇನ್ನು ಎರಡೇ ತಿಂಗಳಿರುವುದು ನಿಮ್ಮ ಎಕ್ಸ್ಸಾಮ್ ರಿಸಲ್ಟ್ಗೆ.. ರಿಹರ್ಸಲ್ ಸರಿಯಾಗಿ ಮಾಡ್ಕೊಳ್ಳಿ. ನಾಟಕದ ಟಾಪಿಕ್ "ಯಯಾತಿ" ಗೊತ್ತಲ್ಲಾ... ಮಾಮೂಲಿ ನಾಟಕವಲ್ಲ ಇದು." ಎಂದು ರಮೇಶ್ ಸರ್ ಹೇಳಿದಾಗ ಮೈಯೊಳಗಿನ ರೋಮಗಳೆಲ್ಲಾ ಎದ್ದು ನಿಂತಿದ್ದವು. ನಾ ಬಹು ಇಷ್ಟಪಟ್ಟು ಓದಿದ ಕಾರ್ನಾಡರ "ಯಯಾತಿ"ನಾಟಕದ ಪಾತ್ರಧಾರಿ ನಾನಾಗ ಹೊರಟಿದ್ದೆ. ಖಾಂಡೇಕರ್ ಅವರ "ಯಯಾತಿ" ಬೇರೆ ನನ್ನೊಳಗೆ ಬೆಚ್ಚಗೆ ಕುಳಿತಿದ್ದ. "ಸರ್ ನನ್ಗೆ ಯಾರ ಪಾತ್ರ ಕೊಡ್ತೀರಾ? ಯಯಾತಿ ಪಾತ್ರಕ್ಕೆ ಯಾರು ಸಿಲೆಕ್ಟ್ ಆಗಿದ್ದಾರೆ? ಮತ್ತೆ ರಜನಿಗೆ ಯಾವ ಪಾತ್ರ?" ಎಂದೆಲ್ಲಾ ಪ್ರಶ್ನೆಗಳ ಮಳೆ ಸುರಿಸಿದಾಗ ಉತ್ತರ ಸಿಕ್ಕಿದ್ದು ತೆರೆಯ ಮರೆಯಿಂದ ಇಣುಕಿದ ಭಾಸ್ಕರನಿಂದ.
"ಮೇಡಂ ಇದೋ ನೋಡಿ ಯಯಾತಿ ಇಲ್ಲಿದ್ದಾನೆ.. ನಾನೇ ಸಾಕ್ಷಾತ್ ನಿಮ್ಮ ಯಯಾತಿ.. ಸ್ಸಾರಿ ದೇವಯಾನಿ ಯಯಾತಿ. ಅಗೋ ಅಲ್ಲಿ ನೋಡಿ ನಿಮ್ಮ ಗೆಳತಿ ಶರ್ಮಿಷ್ಠೆ ಅಲ್ಲಲ್ಲಾ ರಜನಿ ಬಂದ್ಲು." ಎಂದು ತುಂಟ ನಗು ಬೀರಲು ಅವಾಕ್ಕಾಗಿದ್ದೆನಲ್ಲ! "ವಿಭಾ ಇವ್ರು ನಮ್ಮ ನಾಟಕದ ಹೀರೋ ಕಣೆ. ಮಂಗಳೂರಿನಿಂದ ಸ್ಪೆಷಲ್ ಆಗಿ ಬಂದಿದ್ದಾರೆ. ರಮೇಶ್ ಸರ್ ಈ ನಾಟಕಕ್ಕೆ ಇವ್ರೇ ಸರಿಯಾದವ್ರು ಅಂತ ಕರೆಸಿದ್ದಾರಂತೆ. ಸರಿಯಾಗಿ ವಿಚಾರ್ಸ್ಕೋ.. ಈಗಷ್ಟೇ ಹೊರ್ಗೆ ಆನಂದ್ ಸರ್ ಪರಿಚಯ ಮಾಡ್ಸಿದ್ರು. ಅಲ್ಲೇ ಸರ್ ಇವ್ರಿಗೆ ನನ್ನ, ನಿನ್ನ ಪಾತ್ರಗಳನ್ನೂ ಹೇಳಿದ್ದು. ಅದನ್ನೇ ಇಲ್ಲಿ ಉರು ಹೊಡೀತಿದ್ದಾರೆ ಅಷ್ಟೇ" ಎಂದು ರಜನಿ ಪಿಸುದನಿಯಲ್ಲಿ ಛೇಡಿಸಿದಾಗ ನನ್ನಲ್ಲೂ ನಗೆಮಿಂಚಿತ್ತು. ಆದರೂ ಅದೇನೋ...ಇಡೀ ದಿವಸ ಭಾಸ್ಕರನ ತುಟಿಯಂಚಿನಲ್ಲಿದ್ದ ತುಂಟನಗು ಮಾತ್ರ ನನ್ನ ಕಾಡುತ್ತಲೇ ಇತ್ತು.
ಯಶಸ್ವಿ ನಾಟಕ ಪ್ರದರ್ಶನದ ನಂತರ, ಹಲವಾರು ಕಡೆ ನಾವು ಯಯಾತಿಯನ್ನು ಕಾಣಿಸಿದ್ದೆವು. ಎಲ್ಲ ಕಡೆಯೂ ಆತ ಯಯಾತಿಯೇ, ನಾನು ದೇವಯಾನಿಯೇ, ರಜನಿ ಶರ್ಮಿಷ್ಠೆಯೇ. ಒಮ್ಮೆ ಪಾತ್ರದ ಏಕತಾನತೆಯಿಂದ ಬೇಸತ್ತು ನನಗೆ ಶರ್ಮಿಷ್ಠೆಯ ಪಾತ್ರವನ್ನೂ, ರಜನಿಗೆ ದೇವಯಾನಿಯ ಪಾತ್ರವನ್ನೂ ಕೊಡಲು ಕೋರಿದ್ದೆ. ಆಗ ಭಾಸ್ಕರ ಗೇಲಿ ಮಾಡಿದ್ದ "ಯಯಾತಿ ಕಥೆಯಲ್ಲಿ ಬಡಪಾಯಿ ಶರ್ಮಿಷ್ಠೆ ದೇವಯಾನಿ ಬ್ಲೌಸ್ ಹಾಕ್ಕೊಂಡ ಮಾತ್ರಕ್ಕೆ ಅವ್ಳು ದೇವಯಾನಿ ದಾಸಿಯಾಗಿ ಬರ್ಬೇಕಾಯ್ತು ಪಾಪ. ಜೀವನ ಪರ್ಯಂತ ನೋವು ಅನುಭವಿಸಿದ್ಲು, ಆಮೇಲೇನೋ ಶರ್ಮಿಷ್ಠೆ ಯಯಾತಿಯನ್ನೇ ಸೆಳಕೊಂಡ್ಲು ಅನ್ನೋದು ಬೇರೆ ಮಾತು ಬಿಡು. ಆದ್ರೆ ನೀವಿಬ್ರು ನೋಡಿದ್ರೆ ಇಲ್ಲಿ ಪಾತ್ರಗಳನ್ನೇ ಬದಲಾಯಿಸೋಕೆ ಹೊರ್ಟಿದ್ದೀರಾ....ಯಾವುದಕ್ಕೂ ಹುಶಾರು.." ಎಂದಾಗ ನಾವಿಬ್ಬರೂ ಹೊಟ್ಟೆತುಂಬಾ ನಕ್ಕಿದ್ದೆವು. ಆದರೆ ಅಸ್ತು ದೇವತೆಗಳು ಎಲ್ಲೋ ಅಡಗಿ ಕುಳಿತು ತಥಾಸ್ತು ಎಂದಿದ್ದವೋ ಏನೋ! ಭವಿತವ್ಯ ನಮ್ಮ ಹಣೆಬರಹಕ್ಕೆ ಮುನ್ನುಡಿ ಅಂದೇ ಬರೆದಿತ್ತು. ನಾಟಕದಲ್ಲೇನೋ ಪಾತ್ರಗಳು ಬದಲಾಗಲೇ ಇಲ್ಲ. ಆದರೆ ಜೀವನರಂಗದಲ್ಲಿ ಮಾತ್ರ ಎಲ್ಲಾ ಅದಲು ಬದಲಾಯಿತು!
"ದೇವಯಾನಿ ಬಲಗೈ ಹಿಡಿದ ಮಾತ್ರಕ್ಕೆ ಯಯಾತಿ ಮದ್ವೆಯಾಗ್ಬೇಕಾಯ್ತು ವಿಭಾ. ಹಾಂಗೆ ನೋಡಿದ್ರೆ ನಾಟ್ಕದಲ್ಲಿ ನಾನೆಷ್ಟು ಬಾರಿ ನಿನ್ನ ಬಲಗೈ ಹಿಡಿದಿಲ್ಲ. ಅಂದ್ರೆ ನಮ್ಮ ಮದ್ವೆಗಳ ಲೆಕ್ಕ ಇಡೋಕಾಗೊಲ್ಲ ಅಲ್ವಾ" ಎನ್ನುತ್ತಾ ಹಿತವಾಗಿ ನನ್ನ ಬಲಗೈಯನ್ನು ಅಮುಕಿದ ಅವನ ಮಾತೊಳಗೆ ಅರ್ಥವ ಹುಡುಕಿ ಸೋತಿದ್ದೆ. ಆದರೆ ಮಿನುಗುವ ಅದೇ ತುಂಟ ನಗು ಹಾಗೂ ಆರಾಧಿಸುವ ಕಣ್ಗಳು ನನ್ನ ಪ್ರಶ್ನೆಗೆ ಉತ್ತರಿಸಿದ್ದವು. ಮೊದಲೇ ಸೋತಿದ್ದ ನನ್ನ ಮನಸ್ಸು ಪ್ರತಿ ನುಡಿಯದೇ ಅಸ್ತು ಎಂದಾಯಿತು. ಮದುವೆಯ ತುಂಬೆಲ್ಲಾ ರಜನಿಯದೇ ಓಡಾಟ. ಆತ್ಮೀಯರಿಬ್ಬರ ಮಿಲನದ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿರುವುದರ ಆನಂದ ಅವಳ ಮೊಗದಲ್ಲಿ ಕಂಡು ಧನ್ಯಳಾಗಿದ್ದೆ. ನಮ್ಮ ಮೂವರ ಅನುಬಂಧವನ್ನು ಕಂಡ ಅನೇಕರು ತಮಾಷೆಮಾಡಿದ್ದರು. ವಿಭಾ ಕೊನೆಯಕ್ಷರದಿಂದ ಭಾಸ್ಕರ ಬಂದ್ರೆ, ಭಾಸ್ಕರನ ಕೊನೆಯಕ್ಷರದಿಂದ ರಜನಿ ಹುಟ್ಟಿದ್ಲು ಎಂದು. ಅರೆ! ಹೌದಲ್ಲಾ... ನಾವು ಒಬ್ಬರನ್ನೊಬ್ಬರು ನಮ್ಮ ಹೆಸರಿನ ಕೊನೆಯಾಕ್ಷರದಿಂದಲೂ ಬೆಸೆದುಕೊಂಡಿರುವೆವು ಎಂದು ಪುಳಕಗೊಂಡಿದ್ದೆ. ನಾನೆಷ್ಟು ಭಾಗ್ಯವಂತೆ!! ಎಲ್ಲಾ ನನಗಿದೆ....ಎಲ್ಲರೂ ನನಗಿದ್ದಾರೆ. ಆದರೆ ಅನಾಥೆಯಾದ ಅವಳಿಗೆ ಯಾರೂ ಇಲ್ಲ. ಛೇ...ಯಾಕಿಲ್ಲ... ನಾನಿದ್ದೇನಲ್ಲ. ಈಗ ಭಾಸ್ಕರನೂ ಜೊತೆಯಾದ. ಇವರಿಗೆ ಹೇಳಿ ಅವಳಿಗೂ ಹೊಸ ಯಯಾತಿಯನ್ನು ಹುಡುಕಿ ತರುವ ನಿರ್ಧಾರ ಮಾಡಿದ್ದೆ.
ಕಾಲ ಮತ್ತೆ ಕೈಯಾಡಿಸಿದ್ದ. ತನ್ನ ಸಖಿಯ ಬಟ್ಟೆಯನ್ನು ಹಾಕಿಕೊಂಡ ಶರ್ಮಿಷ್ಠೆಗೆ ಯಾವ ರೀತಿ ನಿರ್ದಯಿಯಾಗಿದ್ದನೋ ಆ ಕಾಲ... ಇಂದು ದೇವಯಾನಿ ಅಲ್ಲಲ್ಲಾ ನನ್ನ ಪಾಲಿಗೆ ಮೃತ್ಯುವಾದ. ಇತಿಹಾಸವನ್ನೇ ತಿದ್ದುವಂತೆ, ನನಗೆ ಶಾಪವಾದ. ನಾ ಓಡಿಸುತ್ತಿದ್ದ ಕಾರಿನೊಂದಿಗಾದ ಚಿಕ್ಕ ಅಪಘಾತ ನನ್ನ ಸುಂದರ ಬದುಕನ್ನೇ ಆಹುತಿ ಪಡೆಯಿತು. ಆಸ್ಪತ್ರೆಗಳಲ್ಲೇ ತಿಂಗಳುಗಳನ್ನು ಕಳೆದೆ. ರಜನಿ, ಭಾಸ್ಕರ ಮೊದ ಮೊದಲು ಇನ್ನಿಲ್ಲದಂತೇ ಸಂತೈಸಿ, ಧೈರ್ಯವಾದರು ನನಗೆ. ಕ್ರಮೇಣ ಅವರುಗಳಲ್ಲೇನೋ ಸಣ್ಣ ಬದಲಾವಣೆಯ ವಾಸನೆ. ಕಣ್ತಪ್ಪಿಸುವ ಭಾಸ್ಕರ, ತಿಂಗಳೊಪ್ಪತ್ತಿಗೂ ಬರದ ರಜನಿ, ಅವರಿಬ್ಬರ ಹೆಸರನ್ನೂ ಎತ್ತದ ಅಪ್ಪ, ಎಲ್ಲರೂ ನನಗೆ ಒಗಟಾದರು. ಏನೋ ಕೆಲಸದೊತ್ತಡ ಎಂದು ನನ್ನ ನಾ ಸಂತೈಸಿಕೊಂಡಿದ್ದೆ. ಮನಸೊಪ್ಪದ ಕಾರಣಕೊಟ್ಟಿದ್ದೆ. ಒಂದಲ್ಲ, ಎರಡಲ್ಲ... ಸರಿ ಸುಮಾರು ಹನ್ನೆರಡು ತಿಂಗಳುಗಳೇ ಕಳೆಯಿತಲ್ಲ! ನಾನು ಮತ್ತೆ ನಾನಾಗಲು, ಹೊರ ಜಗತ್ತಿನಲ್ಲಿ ನನ್ನ ಕಾಲೂರಲು. ಆದರೆ ಅಷ್ಟರೊಳಗೆ ನನ್ನವರೆಲ್ಲಾ ಮಾಯವಾಗಿದ್ದರು. ಕಾಲಕೆಳಗಿನ ಭೂಮಿಯೇ ಅಲುಗಾಡತೊಡಗಿತ್ತು.
"ವಿಭಾ ನನ್ನ ಕ್ಷಮಿಸಿ ಬಿಡು. ಅಚಾನಕ್ಕಾಗಿ ಅನಾಹುತವಾಯ್ತು. ಹೇಗಾಯ್ತು? ಯಾರಿಂದಾಯ್ತು? ಅಂತೆಲ್ಲಾ ಕೇಳ್ಬೇಡ ಪ್ಲೀಸ್. ಕೇಳಿದ್ರೂ ಉತ್ತರ ಹೇಳೋಕೇ ಗೊತ್ತಾಗ್ತಿಲ್ಲ. ರಜನಿದೇನೂ ತಪ್ಪಿಲ್ಲ. ಅವ್ಳಿಗೇನೂ ಅನ್ಬೇಡ. ಅವ್ಳು ಪಾಪ ನಿಂಗೆ ಮುಖ ತೋರ್ಸೋಕೂ ಹಿಂಜರಿದು ಬರ್ತಾನೇ ಇಲ್ಲ. ನಾನೇ ಇಷ್ಟು ದಿನ ನೀನು ಹುಶಾರಾಗೋದನ್ನೇ ಕಾಯ್ತಿದ್ದೆ. ಅದು..ಅದು...ಕ್ರಮೇಣ ನಾನು ಅವ್ಳು ಹೇಗೆ ಹತ್ರ ಬಂದ್ವೋ ಗೊತ್ತಿಲ್ಲ...ಈಗ ಅವ್ಳು ನಾನು ಬೇರೆಯಲ್ಲ....ಹಾಂ..ನೀನೂ ನಂಗೆ ಹತ್ತಿರದವ್ಳೇ....ಆದ್ರೆ...." ಎಂದೆಲ್ಲಾ ಹಲುಬುತ್ತಾ ಕೈ ಹೊಸೆದು ಕೊಂಡು ತಲೆ ತಗ್ಗಿಸಿದ್ದ ಭಾಸ್ಕರನ ಒಗಟಿನ ಮಾತುಗಳು ಮೊದಲು ಅರ್ಥವಾಗದಿದ್ದರೂ, ಆಮೇಲೆ ಅರಿವಿಗೆ ಬರಲು ನಿಶ್ಚೇಷ್ಟಿತಳಾಗಿದ್ದೆ. ಕರಟಿದ ವಾಸನೆಯಂತೂ ಮೊದಲೇ ಮೂಗಿಗೆ ಬಡಿದಿತ್ತಲ್ಲ! ನನ್ನಿಂದ ಆಗಬಹುದಾದ ಅನಾಹುತದ ಕಲ್ಪನೆ ಭಾಸ್ಕರನಿಗಿತ್ತು. ಅಂತೆಯೇ ಸ್ವಲ್ಪವೂ ನಾಚಿಕೆಯಿಲ್ಲದೇ ಗೋಗರೆದಿದ್ದ...."ಪ್ಲೀಸ್ ವಿಭಾ ನಮ್ಮ ಅರ್ಥಾಮಾಡ್ಕೋ.. ನಂಗೆ ನೀನೂ ಬೇಕು ಅವ್ಳೂ ಬೇಕು. ನಿನ್ನ ನಾ ಎಷ್ಟು ಹಚ್ಕೊಂಡಿದ್ದೀನಿ ಗೊತ್ತಲ್ಲ. ಈಗ ರಂಗಮಂದಿರ ಟಾಪ್ ಪೊಸಿಷನ್ನಲ್ಲಿದೆ. ನೀನೇನಾದ್ರೂ ಬೇಜಾರಾಗಿ ಅಪ್ಪಂಗೆ ಅಂದ್ರೆ...." ಎಂದು ನನ್ನ ಕೈ ಹಿಡಿದಾಗ ಮಾತ್ರ ಬೆಂಕಿಯಾದೆ. ಆತನನ್ನು ಅಕ್ಷರಶಃ ಕೆಳಗೆ ದೂಡಿದ್ದೆ. ಆದರೂ ಒಳಗೆಲ್ಲೋ ಪ್ರೀತಿಯ ಸೆಲೆ ಜೀವಗುಟುಕುತ್ತಿತ್ತು. "ಅವ್ಳನ್ನ ಬಿಡೋಕಾಗಲ್ವಾ?" ಎಂದಷ್ಟೇ ನನಗೆ ಕೇಳಲಾಗಿದ್ದು. "ಅವ್ಳಿಗೆ ಈಗ ಮೂರು ತಿಂಗ್ಳು. ಡಾಕ್ಟ್ರು ಬೇರೆ ಸ್ಟ್ರೆಸ್ ಬೇಡ ಅಂದಿದ್ದಾರೆ. ಅದೂ ಅಲ್ದೇ ಅವ್ಳು ನನ್ನೇ ನಂಬಿದ್ದಾಳೆ. ನಮ್ಮ ಬಿಟ್ರೆ ಯಾರು ಗತಿ ಅವ್ಳಿಗೆ?" ಎಂದಾಗ ಸಿಡಿದೆ. "ನಿನ್ನ ಬಿಟ್ರೆ ಅನ್ನು ಅದ್ರಲ್ಲಿ ನನ್ನ ಮಾತ್ರ ಇನ್ನು ಸೇರ್ಸ್ಬೇಡ. ನಂಗೆ ಅವ್ಳನ್ನು ನೋಡೋಕೂ ಅಸಹ್ಯ. ನಾಟ್ಕ ಆಡ್ತಾ ಆಡ್ತಾ ಇಬ್ರೂ ನನ್ನ ಬದ್ಕಲ್ಲೂ ನಾಟ್ಕ ಆಡಿದ್ರಿ. ನನ್ನ ಸ್ನೇಹಕ್ಕೆ, ಪ್ರೀತಿಗೆ, ವಿಶ್ವಾಸಕ್ಕೆ ಒಳ್ಳೇ ಬೆಲೆನೇ ಕೊಟ್ರಿ ನೀವಿಬ್ರು. ಒಂದು ವರುಷದ ದೂರ ನಮ್ಮಿಬ್ಬರ ೩ ವರುಷದ ಸಾಮಿಪ್ಯವನ್ನೇ ತಿಂದು ಹಾಕ್ತು ಅಂದ್ರೆ ನಮ್ಮ ಪ್ರೀತಿಲೇ ಕೊರ್ತೆ ಇತ್ತು ಅಂತಾಯ್ತು ಭಾಸ್ಕರ. ನಿಂಗೆ ಏನು ಹೇಳೋದು? ರಜನೀದು ನಂದು ೫ ವರುಷದ ಗೆಳೆತನ. ನೀ ಬರೋ ಮುಂಚೆ ಅವ್ಳು ನನ್ನ ಬದುಕಲ್ಲಿ ಬಂದೋಳು. ಅಂತಹವಳೇ ಕೈಕೊಟ್ಳು ಅಂದ್ರೆ!!! ಹ್ಮ್....ಆಗೋದೆಲ್ಲಾ ಒಳ್ಳೇದಕ್ಕೆ...ಈಗ ಎಟ್ಲೀಸ್ಟ್ ನಿಜ ಹೇಳಿದೆ. ಅಷ್ಟಾದ್ರೂ ನಿಯತ್ತು ಇದೆಯಂತಾಯ್ತು. ಇನ್ನೇನೂ ಬೇಡ. ನಿಂಗೆ ಅವ್ಳೇ ಸರಿ. ನಾನು ಇನ್ನಿಲ್ಲಿ ಇರೊಲ್ಲ...ಇರ್ಲೂ ಕೂಡ್ದು....ಮೊದ್ಲು ಅವ್ಳ ಕರ್ಸ್ಕೊಳ್ಳಿ..ಪಾಪ ಬೆಡ್ರೆಸ್ಟ್ ಬೇಕಾಗಿದೆ ಆಕೆಗೆ" ಎಂದು ಬೆನ್ನು ಹಾಕಿ ಹೊರಟೇ ಬಿಟ್ಟಾಗ ಪರಿ ಪರಿಯಾಗಿ ಕೋರಿದ್ದ ಭಾಸ್ಕರ. ಅವನ ಅಂಗಲಾಚುವಿಕೆಯಲ್ಲಿ, ಪಾಪಪ್ರಜ್ಞೆಗಿಂತ ನನ್ನಪ್ಪನ ಭಯವೇ ಎದ್ದು ಕಂಡು ಮತ್ತಷ್ಟು ಅಸಹ್ಯ ಮೂಡಿತ್ತು ನನಗೆ.
"ಹೆದ್ರೋದೇನೂ ಬೇಡ ಭಾಸ್ಕರ. ನಿಮ್ಮಿಬ್ರಿಗೆ..ಸ್ಸಾರಿ ನೀವ್ ಮೂವರಿಗೆ ನನ್ನಿಂದ, ನನ್ನಪ್ಪನಿಂದ ಏನೂ ಅಪಾಯವಾಗೊಲ್ಲ. ರಂಗಮಂದಿರದ ಕಡೆ ನಾವ್ಯಾರೂ ತಲೆ ಹಾಕೊಲ್ಲ. ಅದ್ರ ಮೇಲ್ವಿಚಾರಣೆ ನಿಂದೇ ಆಗಿರೊತ್ತೆ ಸರೀತಾನೇ? ಇಷ್ಟಕ್ಕೋ ಶಾಪ ಕೊಟ್ಟು ನಿಂಗೆ ವೃದ್ಧಾಪ್ಯ ಕೊಡಿಸೋಕೆ ನಾನು ದೇವಯಾನಿಯಲ್ಲ....ನನ್ನಪ್ಪ ಶುಕ್ರಾಚಾರ್ಯರಾಗೋಕೆ ರೆಡಿಯಾಗ್ಬಹುದು ಆದ್ರೆ ನಾನು ದೇವಯಾನಿಯಾಗೊಲ್ಲ.. ಇದೇ ನಿಮ್ಮಿಬ್ರಿಗೆ ನಾ ಕೊಡೋ ಶಿಕ್ಷೆ.. ರಜನಿ ನಿನಗಿಂತ ನಂಗೆ ಚೆನ್ನಾಗಿ ಗೊತ್ತು. ನಿಂಗೆ ಆತ್ಮಸಾಕ್ಷಿ ಕಾಡೊತ್ತೋ ಇಲ್ವೋ ನಾ ಕಾಣೆ.. ಆದ್ರೆ ನಾ ಹೀಗೆ ಸುಮ್ನಾಗೋದ್ರಿಂದ ಅವ್ಳಂತೂ ಸುಖವಾಗಿರೊಲ್ಲ. ಯಾವ್ದಕ್ಕೂ ಪಡ್ಕೊಂಡು ಬರ್ಬೇಕು ಅನ್ನೋದು ಸತ್ಯ. ನಾನು ಬೆಳಕಾಗಿರೋಕೆ ಬಂದಿದ್ದೆ ನಿನ್ನ ಬದುಕಿಗೆ, ನಿನ್ನ ಪ್ರಭೆಯ ಜೊತೆಯಾಗಲು. ಆದರೆ ಭಾಸ್ಕರನಿಗೆ ತಂಪಾದ ರಜನಿಯೇ ಸರಿ ಎಂದಾಯ್ತು ಬಿಡು. ಸರಿಪಡಿಸಲಾಗದ ಪರಿಸ್ಥಿತಿಗೋಸ್ಕರ ನಾನಿಲ್ಲಿದ್ದು ಪರಿತಪಿಸಲಾರೆ. ಹಾಗಾಗಿ ನನ್ನ ಹೋಗಲು ಬಿಡು. ಹ್ಮ್.. ನಾಟ್ಕದಲ್ಲಿ ನಾನು ಶರ್ಮಿಷ್ಠೆ ಪಾತ್ರಕ್ಕಾಗಿ ಹಾತೊರೆದಿದ್ದೆ ಭಾಸ್ಕರ. ಆದರೆ ಈಗ ದೇವಯಾನಿಯಾಗೋಕೂ ಇಷ್ಟವಾಗ್ತಿಲ್ಲ. ನಿನಗೂ ನಿನ್ನ ಶರ್ಮಿಷ್ಠೆಗೂ ನನ್ನ ದೊಡ್ಡ ನಮಸ್ಕಾರ. ನಿಮಗಾಗಿ ನಾನು ಅಳೋದೂ ಇಲ್ಲ, ನನ್ನ ಬದುಕನ್ನು ಕಳೆದುಕೊಳ್ಳೋದೂ ಇಲ್ಲ. ನಿಮ್ಮ ನೆನಪೂ ನನ್ನೊಂದಿಗೆ ಬೇಡ. ಎಲ್ಲವನ್ನೂ, ಎಲ್ಲರನ್ನೂ ಇಲ್ಲೇ ಬಿಟ್ಟು ಹೋಗ್ತಿದ್ದೀನಿ. ಸೋ...ಗುಡ್...ಬೈ" ಎಂದು ಬಂದವಳು ಮತ್ತೆ ಅವರಿದ್ದ ಕಡೆ ತಲೆ ಹಾಕಿರಲಿಲ್ಲ. ಆದರೆ ಸದಾ ಕಾಡುವ ಹಳೆಯ ನೆನಪುಗಳು, ಅವು ಕೊಡುವ ಯಾತನೆಗಳು ಮಾತ್ರ ನನ್ನ ಬೆನ್ನು ಬಿಡುತ್ತಿಲ್ಲ. ಆವೇಶದಲ್ಲಿ ಭಾಸ್ಕರನ ಬಳಿ ಹೇಳಿದ್ದನ್ನೆಲ್ಲಾ ಕೃತಿಯಲ್ಲಿ ತರಲು ಶತ ಪ್ರಯತ್ನ ಮಾಡಿದೆ. ಮನಸು ಕೇಳಿದರೆ ತಾನೆ?! ಅಳಬಾರದು ಎಂದೆಣಿಸಿದಾಗಲೆಲ್ಲಾ ಕಣ್ಣೀರು ಅವ್ಯಾಹತವಾಗಿ ಹರಿದುಬರುತ್ತಿತ್ತು. ಬದುಕು ಬರಡೆನಿಸತೊಡಗಿತ್ತು.
-3-
ಇಂದೇಕೋ ಅಪ್ಪನ ಪ್ರಶ್ನೆಗಳು ನನ್ನನ್ನು ಬಹುವಾಗಿ ಕಾಡತೊಡಗಿವೆ. ನಿಜ...ಮತ್ತೆ ಮತ್ತೆ ನಾನ್ಯಾಕೆ ಕೊರಗುತ್ತಿದ್ದೇನೆ? ಇದರಿಂದ ಯಾರಿಗೇನು ಲಾಭ? ವಂಚಿಸಿದ ಅವರೇ ಆರಾಮದಲ್ಲಿರುವಾಗ ನನಗೇನು ರೋಗ? ಕಾರ್ನಾಡರ ಯಯಾತಿ ನಾಟಕದಲ್ಲಿ ಸ್ವರ್ಣಲತೆ ದೇವಯಾನಿಗೆ ಹೇಳಿದ ಮಾತು ಮತ್ತೆ ಮತ್ತೆ ನೆನಪಿಗೆ ಬರುತ್ತಿದೆ..."ವೇದನೆಯೂ ಒಂದು ವ್ಯಸನ ದೇವೀ. ಒಮ್ಮೆ ರುಚಿ ಹತ್ತಿದರೆ ಅದರ ಹೊರತು ಚೇತನೆ ಅಸಹ್ಯವಾದೀತು. ಅದಕ್ಕಿಂತ ಮೃತ್ಯುವಾದರೂ ಉತ್ತಮ..." ಊಹೂಂ...ನಾನು “ವಿಭಾ”...ಬಾಳಿ ಬೆಳಕಾಗಬೇಕಾದವಳು. ಸಾಯಲು ನಾನು ಹೇಡಿಯಲ್ಲ. ಸದಾ ನನ್ನ ಕಾಡುವ ನೆನಪುಗಳಿಗೆ ಕಾಣಿಕೆಗಳ ಹಂಗೇ ಬೇಡ. ಎಲ್ಲವುದಕ್ಕೂ ಆರಂಭವಿದ್ದಂತೇ ಅಂತ್ಯವೂ ಇರಲೇ ಬೇಕು. ಇದಕ್ಕೆಲ್ಲಾ ಕೊನೆ ಇಂದೇ ಹಾಕುಬೇಕಾಗಿದೆ. ನಾಳೆ ಎಂದರೆ ಮತ್ತೆ ನೆನಪುಗಳು ಹೊಸ ಹಳೆಯ ವಸ್ತುಗಳ ಮೂಲಕ ಹಿಂಸಿಸಲು ಮುಂದಾಗುತ್ತವೆ. ಹಾಗಾಗಲು ನಾನು ಬಿಡಬಾರದು. ಈ ನಿರ್ಧಾರ ಮೂಡಿದ್ದೇ ತಡ, ಕೈ ನನ್ನ ಕೊರಳನ್ನಪ್ಪಿದ ಎರಡೆಳೆ ಕರಿಮಣಿಸರವನ್ನೊಮ್ಮೆ ಸವರಿತು. ಒಂದೊಂದು ಕಪ್ಪು ಮಣಿಯೊಳಗೂ ನನ್ನ ನೋವಿನ ನೆನಪುಗಳ ಸ್ಪರ್ಶ ಸಿಗಲು ತಡಮಾಡದೇ ಕಿತ್ತೆಸೆದು ಬಿಟ್ಟೆ.
ಕಹಿ ನೆನಪುಗಳೆಲ್ಲಾ ಒಂದೊಂದಾಗಿ ಹೊಸ ಕನಸುಗಳಡಿಯಲ್ಲಿ ಸಮಾಧಿಯಾಗುತ್ತಿರುವಂತೇ, ಕೊಳದೊಳಗೆ ನಗುವ ಕೆಂದಾವರೆಗಳು ಬಹು ಇಷ್ಟವಾಗತೊಡಗಿದವು....ಮುಂಜಾವು ಕೂಡ ಹಿತವೆನಿಸತೊಡಗಿತು....ಬದುಕು ಚಿಗುರತೊಡಗಿತು ಮತ್ತೆ.
[@ ಮಂಗಳ ವಾರಪತ್ರಿಕೆಯಲ್ಲಿ ಪ್ರಕಟವಾದ ಕಥೆ]
-ತೇಜಸ್ವಿನಿ ಹೆಗಡೆ