ಸೋಮವಾರ, ಫೆಬ್ರವರಿ 8, 2010

ನಾ ಕಂಡ ‘ನೀಲಿ’ "ಅವತಾರ"

"ನಾನು ಅದಿತಿ ನೋಡ್ಕತ್ತಿ... ನೀ ಬೇಕಿದ್ರೆ ನೋಡ್ಲಕ್ಕು ಫಿಲ್ಮ್.. ಎಂತ ಮಾಡ್ತೆ ಹೇಳು... ಮೊದಲೇ ಬುಕ್ಕಿಂಗ್ ಮಾಡಿಡವು. ಚೆನ್ನಾಗಿದ್ದಡ ರಾಶಿಯ.. ನೋಡ್ಕ ಬಾ.." ಎಂದು ನನ್ನವರು ಹೇಳಿದಾಗ ನಾನು ಬಹು ಆಶ್ಚರ್ಯಗೊಂಡಿದ್ದು ಅವರು ಆ ರೀತಿ ಹೇಳಿದ್ದಕ್ಕಲ್ಲಾ. ಬದಲು ನಾನು ಫಿಲ್ಮ್ ನೋಡಲು ಟಾಕೀಸ್‌ಗೆ ಹೋಗಬೇಕೆಂಬ ಮಾತು ನನ್ನೊಳಗೇ ಅರಿಯದ ಅಚ್ಚರಿ ತಂದಿದ್ದು. ಕೊನೆಯ ಬಾರಿ ನಾನು ಚಲನಚಿತ್ರವೊಂದನ್ನು ಟಾಕೀಸ್‌ಗೇ ಹೋಗಿ ನೋಡಿದ್ದು ಎಂಟನೆಯ ತರಗತಿಯಲ್ಲಿದ್ದಾಗ. ಅದೂ ಅಪ್ಪ, ಅಮ್ಮ, ತಂಗಿಯಂದಿರು, ಅಜ್ಜ ಹಾಗೂ ಅಜ್ಜಿಯೊಡನೆ. ಆಮೇಲೆ ಹೋಗೇ ಇಲ್ಲ. ಅದರಲ್ಲೇನೂ ದೊಡ್ಡಸ್ತಿಕೆಯೂ ಇಲ್ಲವೆನ್ನಿ. ಮೊದಲನೆಯದಾಗ ಚಿಲನಚಿತ್ರಗಳು ಕೇಬಲ್‌ನಲ್ಲೇ ಸುಲಭವಾಗಿ(ಸ್ವಲ್ಪ ತಡವಾಗಿಯಾದರೂ) ನೋಡಲು ಸಿಗತೊಡಗಿದವು. ಎರಡನೆಯದಾಗಿ ಅದೇಕೋ ಎಂತೋ ಹೋಗಿ ನೋಡಬೇಕೆಂಬ ಆಶಯವೇ ಹುಟ್ಟುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹೋಗಲು ಇದ್ದ ಸಮಸ್ಯೆಗಳು. ಆಗ ಮಂಗಳೂರಿನಲ್ಲಿದ್ದ ಉತ್ತಮ ಟಾಕೀಸ್‌ಗಳಿಗೆಲ್ಲಾ ವ್ಹೀಲ್‌ಚೇರ್ ಸುಲಭವಾಗಿ ಹೋಗುತ್ತಿರಲಿಲ್ಲ. Inox, PVRಗಳ ಸೌಲಭ್ಯಗಳೂ ಇರಲಿಲ್ಲ. ಹಾಗಾಗಿ ಅದೊಂದು ಅಭ್ಯಾಸವೇ ತಪ್ಪಿಹೋಗಿತ್ತು. ಈಗ ಸರಿಸುಮಾರು ೧೭ ವರುಷಗಳ ನಂತರ ನನ್ನವರು ಹೋಗು ಎಂದಾಗ ದೊಡ್ಡದಾಗಿ ನಕ್ಕು ಬಿಟ್ಟಿದ್ದೆ. ಕಾರಣ ಮದುವೆಯನಂತರವೂ ನಮಗೆ ಫಿಲ್ಮ್‌ಗೆ ಹೋಗ ಬೇಕೆಂದೇ ಅನಿಸಿರಲಿಲ್ಲ. ಇಲ್ಲಿ Inox, PVRಗಳು ಎಲ್ಲೆಂದರಲ್ಲಿ ಇದ್ದರೂ ಕೂಡ ಹೋಗಿರಲಿಲ್ಲ. ಕಾರಣ ಒಂದೇ...ಸುಲಭದಲ್ಲಿ ಸಿ.ಡಿ.ಗಳಲ್ಲೋ, ಅಂತರ್ಜಾಲದಲ್ಲೋ ಸಿಗುತ್ತಿರುವ ಫಿಲ್ಮ್‌ಗಳನ್ನು ಆರಾಮವಾಗಿ ಬೇಕಾದಾಗ, ಬೇಕಾದ ರೀತಿಯಲ್ಲಿ ವಿಶ್ರಮಿಸುತ್ತಾ ನೋಡಬಹುದು. ಆದರೆ ಅವತಾರ್ ಮಾತ್ರ ೩-ಡಿ ಆಗಿದ್ದರಿಂದ ಟಾಕೀಸ್‌ಗೇ ಹೋಗಿ ನೋಡಬೇಕು. ಅದಕ್ಕಾಗಿ ನನ್ನವರು ಬಹು ಒತ್ತಾಯಿಸುತ್ತಿದ್ದರು. ಆದರೆ ನಾನೇ ಒಪ್ಪಿರಲಿಲ್ಲ. ಎರಡೂವರೆ ವರ್ಷದ ಪುಟ್ಟಿಯನ್ನೊಬ್ಬಳನ್ನೇ ಬಿಟ್ಟು ೩ ತಾಸು ಹೋಗುವುದಕ್ಕೆ ಯಾಕೋ ಮನಸೊಪ್ಪುತ್ತಿರಲಿಲ್ಲ. ಆದರೂ ಎಲ್ಲೋ ಒಂದು ಕಡೆ ಬಹು ಚರ್ಚಿತ "ಅವತಾರ"ವನ್ನು ನೋಡಬೇಕೆಂಬ ಹಂಬಲ ಬೇರೆ. ಅಂತೂ ಕೊನೆಗೆ ನಾಲ್ಕುಕಣ್ಗಳಲ್ಲೂ ನೋಡಲು ನಿರ್ಧರಿಸಿಯೇಬಿಟ್ಟೆ. ಹಾಗೆನ್ನುವುದಕ್ಕಿಂತಲೂ ನನ್ನವರು ಒತ್ತಡ ಹೇರಿ ಒಪ್ಪಿಸಿದರು ಎಂದರೆ ತಪ್ಪಾಗದು. "ಅಜ್ಜಿಮುದ್ಕಿ ತನ್ನ ಕೋಳಿಯಿಂದಲೇ ಬೆಳಗಾಗ್ತು ಹೇಳಿ ತಿಳ್ಕಂಡ ಹಾಗೆ ಅಂದ್ಕಳಡ. ನಾ ನೋಡ್ಕತ್ತಿ ಅದ್ನ. ನೀ ಏನೂ ಯೋಚ್ನೆ ಮಾಡಡ. ಅದ್ಕೆ ಉಣ್ಸಿ, ಆಡಿಸ್ತಾ ಇರ್ತಿ. ನಿನ್ನ ಬಿಟ್ಟಿಕ್ಕಿ ಬಂದ್ರಾತೋ ಇಲ್ಯೋ.. ಸುಮ್ನೇ ಹೋಗು.." ಎಂದು ಆಶ್ವಾಸನೆ ಕೊಟ್ಟಾಗ ಒಪ್ಪಲೇ ಬೇಕಾಗಿತ್ತು.

ಹೋಗುವಾಗಲೂ ಅಷ್ಟೇ. ಯಾರನ್ನು ಜೊತೆಗೆ ಕರೆದೊಯ್ಯಲಿ ಎಂಬ ಯೋಚನೆ! ಇವರಂತೂ ಸಾಥ್ ಕೊಡುವ ಹಾಗಿರಲಿಲ್ಲ. ಅದಿತಿಯನ್ನು ನೋಡಿಕೊಳ್ಳಲು ಇರಲೇ ಬೇಕಿತ್ತು. ಒಬ್ಬಳೇ ನೋಡಲು...ಅದೂ ಇಷ್ಟೊಂದು ವರುಷಗಳ ನಂತರ ಇಷ್ಟವಾಗಲಿಲ್ಲ. ಹೀಗಿರುವಾಗ ಕಾರಣಾಂತರಗಳಿಂದ ಅಮ್ಮ ಊರಿನಿಂದ ಬಂದಳು. ಸರಿ ಮತ್ತೂ ನಿಶ್ಚಿಂತೆಯಾಯಿತು. ಮೊದಲು ಅಮ್ಮ, ನಾನು ಹಾಗೂ ನನ್ನ ಕಿರಿಯ ತಂಗಿ ಹೋಗುವುದೆಂದು ಮಾತಾಗಿ ಮೂರು ಟಿಕೆಟ್ ಬುಕ್ ಮಾಡಿಯಾಯಿತು. ಆದರೆ ಹಿಂದಿನ ದಿನ ಅಮ್ಮ "ಈ ವಯಸ್ಸಲ್ಲಿ ಆ ಕಪ್ಪು ಕನ್ನಡ್ಕ ಹಾಕ್ಕಂಡು ನಾ ತಲೆ ನೋವು ತರ್ಸ್ಕತ್ನಿಲ್ಲೆ. ಅದೂ ಅಲ್ದೇ ನಂಗೆ ಕತ್ಲಲ್ಲಿ ನಿದ್ದೆ ಬಂದೋಗ್ತು. ದುಡ್ಡು ದಂಡ. ಅದ್ರ ಬದ್ಲು ನೀನು ರಾಮು(ನನ್ನವರು), ತಂಗಿ ಹೋಗಿ.... ಅದಿತಿ ನನ್ನ ಹತ್ರ ಆರಮಾಗಿ ಇರ್ತು" ಅಂದು ಬಿಟ್ಲು. ಆದರೆ ನನ್ನವರಿಗೆ ಅದಿತಿಯ ಚಿಂತೆ. ಅದೂ ಮೊದಲ ಬಾರಿ ಅಷ್ಟೊತ್ತು ಅಪ್ಪ, ಅಮ್ಮ ಇಬ್ಬರನ್ನೂ ಬಿಟ್ಟು ಇರಲಾರಳೇನೋ ಎಂಬ ಮಮಕಾರದಿಂದ ನಾವಿಬ್ಬರೂ ಒಪ್ಪಲಿಲ್ಲ. ಅಂತೂ ಇಂತೂ ಯೋಚಿಸಿ ನನ್ನ ಇನ್ನೊಂದು ತಂಗಿಯನ್ನು ಬರಲೊಪ್ಪಿಸಿದೆ. ಅವಳಿಗೋ ಒಂದೂವರೆ ವರುಷದ ಮಗ. ಮತ್ತೂ ಕಷ್ಟವೇ. ಆದರೂ ಆಕೆ, ಅವಳ ಪತಿ ಹಾಗೂ ನನ್ನಮ್ಮನ ಭರವಸೆಯ ಮೇಲೆ ಬರಲೊಪ್ಪಿದಳು. ಸರಿ ಮೂವರೂ ಸಹೋದರಿಯರು ಅವತಾರಕ್ಕಾಗಿ ತಯಾರಾದೆವು. ನನ್ನೊಳಗೇನೋ ತಳಮಳ. ಅಷ್ಟೊಂದು ವರುಷಗಳ ನಂತರ ಹೊರಗೆ ಚಲನಚಿತ್ರವೊಂದನ್ನು ನೋಡುವ ಕಾತರ ಒಂದೆಡೆಯಾದರೆ, ೩-ಡಿ ಪಿಕ್ಚರ್ ಎಂಬ ವಿಶೇಷಭಾವ ಇನ್ನೊಂದೆಡೆ. ಅದಿತಿ ಎಲ್ಲಿ ಅತ್ತೂ ಕೂಗಿ ಕೊನೆಯ ಗಳಿಗೆಯಲ್ಲಿ ರಂಪಾಟ ಮಾಡುವಳೋ ಎಂಬ ಚಿಂತೆಯೂ ಒಳಗೊಳಗೇ.

ಅಂತೂ ಇಂತೂ ಆ ದಿನ ಬಂದೇ ಬಿಟ್ಟಿತು. ತಿಲಕ ನಗರದಲ್ಲಿರುವ Inoxಗೆ ನಾನು ನನ್ನವರು, ಅಮ್ಮ, ತಂಗಿಯಂದಿರು, ತಂಗಿಯ ಗಂಡ, ಇಬ್ಬರು ಪುಟಾಣಿಗಳೊಡನೆ ಧಾಳಿ ಇಟ್ಟೆವು. ಮೊದಲೇ ಬುಕ್ ಮಾಡಿಟ್ಟಿದ್ದ ಟಿಕೆಟ್ ಪಡೆದ ನನ್ನವರು ನನ್ನನ್ನು ಕೂರಿಸಿ ಬರಲು ಒಳ ಕರೆದೊಯ್ದರು. ಮುಂದಿನ ಸಾಲಿನ ಸೀಟಿನವರೆಗೂ ಆರಮವಾಗಿ ಹೋದೆವು. ಆದರೆ ನಮ್ಮ ಟಿಕೆಟ್ ದುರದೃಷ್ಟವಶಾತ್ ಮೇಲಿನ ಸಾಲಿನಲ್ಲಾಗಿತ್ತು. ನನ್ನವರ ಗಮನಕ್ಕೆ ಅದು ಬರದೇ ಅವಾಂತರ ಆಗಿಹೋಗಿತ್ತು. ವ್ಹೀಲ್‌ಚೇರ್ ಅಷ್ಟು ಎತ್ತರಕ್ಕೆ ಸರಾಗವಾಗಿ ಹೋಗದು. ನಾಜೂಕಿನ ಮೆಟ್ಟಿಲುಗಳು ಬೇರೆ ಎಲ್ಲಿ ಹಾಳಾಗುವವೋ ಎಂಬ ಆತಂಕ ಅಲ್ಲಿಯ ಸಿಬ್ಬಂದಿಗಳಿಗೆ. ಹಾಗಾಗಿ ಕೆಳಗಿನ ಸಾಲಿನಲ್ಲೇ ನನಗೂ ನನ್ನ ಮೊದಲನೆಯ ತಂಗಿಗೂ ಸೀಟ್ ಕೊಟ್ಟು, ನಮ್ಮ ಸೀಟ್ ಅನ್ನು ಬೇರೆಯವರಿಗೆ ಕೊಟ್ಟರು. ಕೊನೆಯ ತಂಗಿ ನಮ್ಮಿಂದ ಬೇರೆಯಾಗಿ ಮೇಲೆ ಕುಳಿತುಕೊಳ್ಳುವಂತಾಯಿತು. ಎಲ್ಲಾ ಸರಿಯಾಗಿರುವುದನ್ನು ಖಚಿತಪಡಿಸಿಕೊಂಡ ನನ್ನವರು ಅಮ್ಮ, ಮಕ್ಕಳು ಹಾಗೂ ತಂಗಿಯ ಪತಿಯೊಡನೆ ಮನೆಗೆ ತೆರಳಿದರು.
ಸರಿ ಇನ್ನೇನು ಕತ್ತಲಾವರಿಸಿ, ಬೆಳಕು ಪರದಿಯ ಮೇಲೆ ಬಿದ್ದಿದ್ದೇ ತಡ ಎಲ್ಲಿ ಪಿಕ್ಚರ್ ಶುರುವಾಯಿತೋ ಎಂದು ಗಡಿಬಿಡಿ ಮಾಡಿಕೊಂಡು ಕನ್ನಡಕ ಏರಿಸಿಯೇ ಬಿಟ್ಟೆ. ಆದರೆ ಅಲ್ಲಿ ಕಂಡಿದ್ದು ಒಂದಿಷ್ಟು ಜಾಹೀರಾತುಗಳು. ತಂಗಿ ತಂದ ಪೊಪ್‌ಕಾರ್ನ್ ರುಚಿ ನಾಲಗೆಯನ್ನು ಹತ್ತುತ್ತಿರುವಾಗಲೇ "ಅವತಾರ" ಪ್ರಾರಂಭವಾಯಿತು. ಮೊದಲ ಹತ್ತು ನಿಮಿಷ ೩-ಡಿ ಕನ್ನಡಕವನ್ನು ನಮ್ಮ ದೃಷ್ಟಿಗೆ ಹೊಂದಿಸಿಕೊಳ್ಳಲೇ ಬೇಕಾಯಿತು. ತಲೆನೋವಾದಂತೆ, ಹೊಟ್ಟೆ ತೊಳೆಸಿದಂತಹ ಅನುಭವದಿಂದ ಸ್ವಲ್ಪ ಹೊತ್ತು ಕಿರಿಕಿರಿಯಾಯಿತು. ಅಷ್ಟರೊಳಗೆ ನಮಗೆ ಫೋನ್ ಮಾಡಿದ ಅಮ್ಮ ನಮ್ಮಿಬ್ಬರ ಮಕ್ಕಳೂ ಆರಮವಾಗಿ ಇದ್ದಾರೆಂದೂ, ಆಡುತ್ತಿದ್ದಾರೆಂದೂ, ಯಾವುದೇ ವಿಷಯಕ್ಕೂ ಚಿಂತಿಸಿದೇ ಪಿಕ್ಚರ್‌ನ ಆನಂದಿಸಬೇಕೆಂದೂ ಹೇಳಲು ನಾವು ನಿಶ್ಚಿಂತರಾದೆವು. ಕ್ರಮೇಣ ನಾನು ಎಲ್ಲವನ್ನೂ ಮರೆತು "ಪಂಡೋರಾದಲ್ಲೇ" ವಿಹರಿಸ ತೊಡಗಿದೆ.

ಅದೊಂದು ಮಾಯಾನಗರಿಯೇ ಸರಿ. ಎತ್ತನೋಡಿದರತ್ತ ನೀಲ ವರ್ಣ. ಚಿತ್ರವಿಚಿತ್ರ ಪ್ರಾಣಿಗಳು, ಪಕ್ಷಿಗಳು, ಅಲ್ಲಿಯ ನಾ-ವಿ ಜನಾಂಗದವರ ವಿಚಿತ್ರ ವರ್ತನೆಗಳು, ಸಂಪ್ರದಾಯಗಳು, ತೇಲುವ ಪರ್ವತಗಳಿಂದ ಧುಮುಕುವ ಜಲಪಾತಗಳು, ಬೃಹತ್ ಮರಗಳು, ಬಿಳಲುಗಳು, ಅತಿ ಸುಂದರ ಮನಮೋಹಕ ಹೂವುಗಳು, ಎಲ್ಲವೂ ನನ್ನ ಮನಸೂರೆಗೊಂಡವು. ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಇಷ್ಟವಾಗಿದ್ದು ಅಲ್ಲಿಯ ಜೀವಿಗಳ ನೀಲವರ್ಣ. ಅದು ನನ್ನಚ್ಚುಮೆಚ್ಚಿನ ಬಣ್ಣವೂ ಹೌದು. ಫೆಂಗ್‌ಶುಯಿ ಹಾಗೂ ವಾಸ್ತುಶಾಸ್ತ್ರದ ಪ್ರಕಾರ ನೀಲ ಬಣ್ಣ ನಮ್ಮ ಮನಸಿನೊಳಗಿನ ನೋವನ್ನು ಶಮನಗೊಳಿಸಿ, ನೆಮ್ಮದಿಯ ಭಾವವನ್ನು ಕೊಡುತ್ತದೆಯಂತೆ. ಅಲ್ಲದೇ ನೀಲವರ್ಣ ವಿಶ್ವಾಸದ, ಶಾಂತಿಯ, ವಿಶ್ರಾಂತಿಯ ಪ್ರತೀಕ. ಇದು ನಮ್ಮ ಮನಸ್ಸನ್ನು ನಿರಾಳಗೊಳಿಸುವಂತಹದು, ಮನೋವಿಕಾಸಕ್ಕೆ ನೀಲವರ್ಣದ ಕೊಡುಗೆ ಅಪಾರ. ಹಾಗಾಗಿಯೇ ಬಹುಶಃ "ನಾ-ವಿ" ಜನಾಂಗದವರನ್ನು ನಿರ್ದೇಶಕ "ಜೇಮ್ಸ್ ಕೆಮರೂನ್" ಹೊಳೆವ ನೀಲಿ ಬಣ್ಣದಲ್ಲೇ ಮುಳುಗೇಳಿಸಿದ್ದು. ಅದು ಅವರ ಮನಸಿನೊಳಗಿನ ಶುದ್ಧತೆಗೆ, ಮುಗ್ಧತೆಗೆ, ಶಕ್ತಿಗೆ ಹಿಡಿದ ಕನ್ನಡಿಯಂತಿದೆ. ನೀಲ ನದಿ, ಝರಿ, ಬೆಟ್ಟ, ಹೂವು ಎಲ್ಲವೂ ೩-ಡಿಯೊಳಗೆ ನನ್ನ ಮೈ, ಕೈಗಳನ್ನು ಸವರಿ ಹೋದಾಗ ತುಂಬಾ ಪುಳಕಿತಳಾಗಿದ್ದೆ. ಒತ್ತಾಯಿಸಿ ಕಳುಹಿಸಿದ ನನ್ನವರನ್ನು ಮನದಲ್ಲೇ ಅಭಿನಂದಿಸಿದೆ.

"ಅವತಾರದ" ಜೀವಾಳ - ಅವತಾರ ಗೆದ್ದಿದ್ದು ಪ್ರಕೃತಿಯ ಮುಂದೆ ಮಾನವನನ್ನು ಸೋಲಿಸಿದ್ದರಿಂದ. ಎಲ್ಲೋ ನಮ್ಮೊಳಗೆ ಅವಿತಿರುವ ನಮ್ಮ ಪೈಶಾಚಿಕತೆಯ ಅರಿವಿದೆ ನಮಗೆ. ಹಾಗಾಗಿಯೇ ಮನುಷ್ಯನ ಸೋಲನ್ನು ಕಣ್ಮುಂದೆ ಕಂಡಾಗ ಸಮಾಧಾನಗೊಳ್ಳುತ್ತದೆ ಮನಸ್ಸು. ಪಂಡೋರದಲ್ಲಿ ನಾ-ವಿಗಳು, ಪ್ರಾಣಿಗಳು, ಡ್ರಾಗನ್‌ಗಳು ಮನುಷ್ಯರನ್ನು ಕಿತ್ತು ಬಿಸುಟಾಗ ನಮಗೂ ಹಾಯೆನಿಸುತ್ತದೆ. ಅದಕ್ಕೆ ಕಾರಣ ನಮ್ಮೊಳಗಿನ ಮನುಷ್ಯತ್ವ ಇನ್ನೂ ಜೀವಂತವಾಗಿರುವುದು. ಸುಂದರ ನೀಲನಗರಿ, ನೀಲಿ ಜನರು ವಿನಾಕಾರಣ ಮನುಜರ ದುರಾಸೆಗೆ ಭಸ್ಮವಾಗುವುದನ್ನು ಕಂಡಾಗ ಅದು ತೆರೆಯ ಮೇಲೆ ಎಂದು ಅರಿತಿದ್ದರೂ, ಅರಿಯದ ರೋಷ ಮಾನದೊಳಗೆ ಮನೆಮಾಡುತ್ತದೆ. ಅಂತಿಮದಲ್ಲಿ ಗೆಲ್ಲುವ ನಾ-ವಿಗಳ ಜೊತೆ ನಾವೂ ಮನಃಪೂರ್ತಿ ಪಾಲ್ಗೊಳ್ಳುವಾಗ ಎನೋ ಧನ್ಯತಾ ಭಾವ. ಒಂದು ಹಂತದಲ್ಲಿ ಅವರ ಪ್ರಕೃತಿ ದೇವತೆಯಾದ "ಏವಾ" ಪ್ರತಿಯೊಂದು ಪ್ರಾಣಿ, ಪಕ್ಷಿ, ಜೀವ ಸಂಕುಲಕ್ಕೂ ನಿರ್ದೇಶನ ಕೊಟ್ಟು ನಾ-ವಿಗಳ ಸಹಾಕ್ಕೆ ಕಳುಹಿಸುತ್ತಾಳೆ. ಹಾಗಾಗಿಯೇ ಸಬಲ ಮನುಷ್ಯನೂ ದುರ್ಬಲನಾಗಿ ಭೂಮಿಗೆ ಹಿಂತಿರುಗುತ್ತಾನೆ. (ಆದರೆ ಭೂಮಿಯ ಮೇಲೆ ನಡೆಯುವ ಅತ್ಯಾಚಾರ ಮಾತ್ರ ಎಗ್ಗಿಲ್ಲದಂತೇ ಸಾಗಿದೆ. ಪ್ರಕೃತಿಯನ್ನು ಶೋಷಿಸುತ್ತಿರುವ ನಮಗೆ ಮುಂದೊಂದು ದಿನ "ಏವಾ" ಕೊಟ್ಟ ಶಿಕ್ಷೆಯೇ ಕಾದಿರುವುದರಲ್ಲಿ ಏನೂ ಸಂಶಯವಿಲ್ಲ.) ನಾಯಕ "ಜೇಕ್" ಕೂಡ ಓರ್ವ ಮನುಷ್ಯನಾಗಿದ್ದರೂ ನಾ-ವಿಗಳ ಅಮಾಯಕತೆಗೆ ವಿಶ್ವಾಸಕ್ಕೆ, ಸತ್ಯತೆಗೆ ಮಾರುಹೋಗಿ ಅವರಂತೇ ಆದ. ಅವರಿಗಾಗಿ ಹೋರಾಡಿ ಅವರಲ್ಲೇ ಒಂದಾಗಿ ಹೋದ. ಅವನೊಳಗಿನ ಮನುಷ್ಯತ್ವಕ್ಕೆ ನೀರೆರೆದು ಪೋಷಿಸಿದ್ದು ನಾ-ವಿಜನಾಂಗದವರ ಸಾಂಗತ್ಯ ಹಾಗೂ ರಾಜಕುಮಾರು "ನೆಯ್ತಿರಿ"ಯ ನಿರ್ಮಲ ಪ್ರೀತಿ. ಅದಕ್ಕೇ ಬಹುಶಃ ಹೇಳಿದ್ದು ಹಿರಿಯರು "ಸಜ್ಜನರ ಸಂಗ ಹೆಜ್ಜೇನು ಸವಿದಂತೆ" ಎಂದು. ೩-ಡಿ ಕನ್ನಡಕ ನಾ-ವಿಗಳನ್ನು ಅವರ ಸುಂದರ ಅದ್ಭುತ ಲೋಕವನ್ನು ನಮಗೆ ಮತ್ತಷ್ಟು ಹತ್ತಿರ ತಂದು, ಮನುಷ್ಯನ ದುಷ್ಟ ಹಾಗೂ ಸುಂದರ ಎರಡೂ ಅವತಾರಗಳನ್ನು ತೋರಿಸುತ್ತದೆ. ಅತ್ಯದ್ಭುತ ತಂತ್ರಜ್ಞಾನ, ಸುಂದರ ನಿರ್ದೇಶನವನ್ನು ನೋಡುವುದಕ್ಕಾಗಿ ಒಮ್ಮೆಯಾದರೂ "ಅವತಾರ"ದೊಳಗೆ ಪ್ರವೇಶಿಸಬೇಕು. ಹೊರಬಂದ ಮೇಲೂ ಬಹುಕಾಲ ನೆನಪುಳಿಯುವುದು ಚಿತ್ರದ ಸುಂದರ ಸಂದೇಶದ "I See You". ಈ ಒಂದು ಸಾಲನ್ನು ಹೇಗೆ ಬೇಕಿದ್ದರೂ ಅರ್ಥೈಸಿಕೊಳ್ಳಬಹುದು. ಅನೇಕ ಅರ್ಥಗಳನ್ನು ಹೊಂದಿರುವ ಈ ಸಾಲು ಈಗಲೂ ನನ್ನನ್ನು ಕಾಡುತ್ತಲೇ ಇದೆ.

ಶುಭಂ : ಮನೆಗೆ ಬಂದ ಮೇಲೆ ನನ್ನವರು "ನೋಡೀದ್ಯಾ.. ಅದಿತಿ ಏನೂ ಹಟ ಮಾಡಿದ್ದೇ ಇಲ್ಲೆ. ನಿನ್ನ ಸುದ್ದಿನೂ ಹೇಳಿದ್ದಿಲ್ಲೆ. ಆರಾಮಿತ್ತು ನನ್ನಹತ್ರ. ನೀ ಮಾತ್ರ ಸುಮ್ನೇ ಹೆದ್ರಿದ್ದೆ.." ಎಂದು ಛೇಡಿಸಲು, ಪಟ್ಟು ಬಿಡದ ನಾನು "ಸರಿ ಹಾಗಿದ್ರೆ.. ಚೊಲೋನೇ ಆತು.. ಮುಂದಿನ ಸಲ "My Name Is Khan" ನೋಡಲೆ ನಾನು ಹೋಗ್ಲಕ್ಕು ಹೇಳಾತು.." ಎಂದಾಗ ಮಾತ್ರ ನನ್ನವರು ಪೆಚ್ಚು!


-ತೇಜಸ್ವಿನಿ.

27 ಕಾಮೆಂಟ್‌ಗಳು:

V.R.BHAT ಹೇಳಿದರು...

ಚೆನ್ನಾಗಿದೆ ತೇಜಸ್ವಿನಿಯವರೇ, ವಿವರಣೆ ಹಿತಕರವಾಗಿದೆ, congrats on 2years completion of 'ಮಾನಸ' , ನಿಮ್ಮ ಮಾನಸ ಮಾನಸಸರೋವರದಂತೆ ಬಹಳ ವಿಸ್ತಾರವಾಗಲಿ !

ದಿನಕರ ಮೊಗೇರ ಹೇಳಿದರು...

ತೇಜಸ್ವಿನಿ ಮೇಡಂ,
ಅವತಾರ್ ಫಿಲಂ ನಾನಿನ್ನೂ ನೋಡಿಲ್ಲ...ಚೆನ್ನಾಗಿ ವಿವರಿಸಿ ಬರೆದಿದ್ದೀರಿ..... ನೀವು ಹೇಳಿದ ಮೇಲೆ ನೋಡುವ ಮನಸಾಗಿದೆ, ಶಿವೂ ಸರ್ ಸಹ ಇದೆ ವಿಷಯದ ಬಗ್ಗೆ ಬರೆದಿದ್ದಾರೆ.... ಹೋಗಲು ಸಮಯ ಸಿಗುತ್ತಿಲ್ಲ.... ..... ನಾನೂ ಸಹ ಮೈ ನೇಮ್ ಇಸ್ ಖಾನ್ ಫಿಲ್ಮ್ಗೆ ಹೋಗಬೇಕು ಎಂದುಕೊಂಡಿದ್ದೇನೆ .....

ಶ್ರೀನಿಧಿ.ಡಿ.ಎಸ್ ಹೇಳಿದರು...

my name is khan byaDde:)

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿ ಮೇಡಂ,
;ಅವತಾರ್' ನನ್ನನ್ನೂ ಬಹಳಷ್ಟು ಕಾಡಿದೆ,
ಆ ವರ್ಣ ರಂಜಿತ ಪ್ರಕ್ರತಿ ಮನ ತಟ್ಟಿದೆ
ಅದರಲ್ಲೂ ಬಾಲದ ಮೂಲಕ ಸಂಭಂಧ ಬೆಸೆಯುವ ಕೊಂಡಿ ಬಹು ಆಕರ್ಷಿಸಿತು
ಮಾನವ ದಿನೇ ದಿನೇ ಮೃಗ ಆಗುತ್ತಿದ್ದಾನೆ ಎನ್ನುವುದನ್ನು ನಿರ್ದೆಹ್ಸಕ್ ಚೆನ್ನಾಗಿ ತೋರಿಸಿದ್ದಾನೆ
ನಾ-ವಿ ಜನರು ತುಂಬಾ ಹಿಡಿಸಿದರು
ಒಟ್ಟಿನಲ್ಲಿ 'ಅವತಾರ್'' ಗೆ ಅವತಾರ್ ಸಾಕ್ಷಿ ಅಷ್ಟೇ
ನೀವು ನೋಡಿದ್ದಕ್ಕೆ ಹಾಗೂ ಸುಂದರ ಬರಹ ನೀಡಿದ್ದಕ್ಕೆ ಅಭಿನಂದನೆಗಳು

Narayan Bhat ಹೇಳಿದರು...

ನಿಮ್ಮ ಅನಿಸಿಕೆ ಓದಿದ ಮೇಲೆ ನಮಗೂ ಈ 'ಅವತಾರ'ದ ದಿವ್ಯದರ್ಶನ ಮಾಡ್ಬೇಕು ಅಂತ ಅನ್ಸ್ತಾ ಇದೆ. ಮಾಹಿತಿಗಾಗಿ ಥ್ಯಾಂಕ್ಸ್.

Subrahmanya ಹೇಳಿದರು...

ನೀಲ ವರ್ಣದ ಬಗ್ಗೆ ನೀವು ಹೇಳಿದ್ದು ಚೆನ್ನಾಗಿದೆ. My name is Khan...ಗೊತ್ತಿಲ್ಲಾಆಆಆ....:):)

ಸುಧೇಶ್ ಶೆಟ್ಟಿ ಹೇಳಿದರು...

ayyo... nivoonu nodibitra? nange innu nodokke aagilla.. nodidavarella chennagidhe chennagidhe antha heli aase huttistah idhaare... nodbeku aadhashtu bega :)

thumba chennagide thejakka neevu baredha shaili... raashi chalo iddu :)

ಮನಮುಕ್ತಾ ಹೇಳಿದರು...

ಅವತಾರ್ ಸಿನೆಮಾ ನೊಡ್ಬೇಕೂ ಅ೦ತ ಹೇಳ್ತಾ ಹೇಳ್ತಾ ಈಗ ಇಲ್ಲಿ ಅದು ಎರಡೆ ಟಾಕೀಸ್ ನಲ್ಲಿದೆ.. ಅಲ್ಲೂ ತೆಗೆದು ಬೇರೆ ಸಿನೆಮಾ ಹಾಕೋದ್ರೊಳಗೆ ನೋಡ್ಬೇಕು ಅನಿಸ್ತಾ ಇದೆ..
ನಿಮ್ಮ ಬರಹ ಓದಿ ಖುಶಿ ಆಯ್ತು..ಎಲ್ಲರ ಅಕ್ಕರೆ ಪ್ರೀತಿ ಹೀಗೆಯೆ ಸದಾ ನಿಮ್ಮ ಮೇಲಿರಲಿ.
ವ೦ದನೆಗಳು.

AntharangadaMaathugalu ಹೇಳಿದರು...

ತೇಜಸ್ವಿನಿ ಮೇಡಮ್...
ಅಭಿನಂದನೆಗಳು - ನಿಮ್ಮ ಮಾನಸ ಎರಡು ವರ್ಷ ಪೂರೈಸಿದ್ದಕ್ಕಾಗಿ. ನಿಮ್ಮ ’ಅವತಾರ’ದ ವರ್ಣನೆ ಓದಿ, ನನಗೂ ನೋಡಬೇಕೆಂದಾಸೆಯಾಗಿದೆ. ವಿವರಣೆ ಚೆನ್ನಾಗಿ ಬರೆದಿದ್ದೀರಿ...

ಶ್ಯಾಮಲ

ಸವಿಗನಸು ಹೇಳಿದರು...

ನಿಮ್ಮ ಲೇಖನ ಓದಿದ ಮೇಲೆ ಸಿನಿಮಾ ನೋಡಬೇಕು ಅಂತ ಅನ್ನಿಸುತ್ತ ಇದೆ...
ಚೆನ್ನಾಗಿದೆ ಬರಹ....

ವಿ.ರಾ.ಹೆ. ಹೇಳಿದರು...

ಆ ಖಾನ್ ಬ್ಯಾಡ. ನಮ್ just ಮಾತ್ ಮಾತಲ್ಲಿಗೆ ಹೋಗ್ಬನ್ನಿ.

Sushrutha Dodderi ಹೇಳಿದರು...

Just ಮಾತ್ ಮಾತ್ ಮಾತ್ ಮಾತ್ ಮಾತಲ್ಲಿಗೆ ನಾನೂ ಹೋಗವು.

ತೇಜಸ್ವಿನಿ ಹೆಗಡೆ ಹೇಳಿದರು...

@ಸುಧೇಶ್, ವಿ.ಆರ್.ಭಟ್, ದಿನಕರ ಮೊಗೇರ, ಸಾಗರದಾಚೆಯ ಇಂಚರ, ನಾರಾಯಣ್, ಮನಮುಕ್ತಾ, ಶ್ಯಾಮಲ, -ನಿಮ್ಮೆಲ್ಲರ ಪ್ರತಿಕ್ರಿಯೆಗಳಿಂದ ನನ್ನ ಅವತಾರದ ವರ್ಣನೆಗೆ ಹೊಸ ರಂಗು ಬಂದಿತು :) ತುಂಬಾ ಧನ್ಯವಾದಗಳು.

@ಶ್ರೀನಿಧಿ, ವಿ.ರಾ.ಹೆ.,

ಅಯ್ಯೋ ನಾ ಏನೋ ಸುಮ್ನೇ ಹೇಳಿದ್ದಪ್ಪ... ಸರ್ವಥಾ ಆ ಖಾನ್ ನೋಡಲೆ ಹೋಗೋದಿಲ್ಲಪ್ಪ... ಖಾನ್ ಓವರ್ ಆಕ್ಟಿಂಗ್ ನೋಡಿ ನೋಡೀ ಬೇಸತ್ತು ಹೋಜೆ ನಾನು :) ಖಾನ್‌ನ ಒಳಗೊಂದು ಖಾನ್‍ನ ನೋಡಲೆ ನಂಗೆಂತ ಮಳ್ಳಲ್ಲ :-p

@ಸುಬ್ರಹ್ಮಣ್ಯ ಭಟ್ ಅವರೆ,

"my name is khan " ಇದು ಈ ವಾರ ಬಿಡುಗಡೆಗೊಳ್ಳಲಿರುವ ಶಾರುಖ್ ಖಾನ್ ಹೊಸ ಚಲನ ಚಿತ್ರ. ಬಹು ಪ್ರಚಾರದಲ್ಲಿರುವ ಚಿತ್ರ ಕೂಡ. ಅದಕ್ಕೆಂದೇ ಸುಮ್ಮನೇ ಅದರ ಹೆಸರನ್ನು ಉಲ್ಲೇಖಿಸಿದ್ದು ಇಲ್ಲಿ. :)

ಧನ್ಯವಾದಗಳು.

ತೇಜಸ್ವಿನಿ ಹೆಗಡೆ ಹೇಳಿದರು...

ಸುಶ್,

ಸಖತ್ ಪಾಪ(ಪಿ)ಅನ್ನಿಸ್ಕಂಬವ್ಕೆಲ್ಲಾ just ಮಾತ್ ಮಾತ್‌ಲ್ಲೆಲ್ಲಾ ಹೇಳಿರೆ ಎಂತೂ ತಿಳ್ಯದಿಲ್ಲೆ. :-p

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿ ಮೇಡಂ,
ಚಿತ್ರ ಕುರಿತು ಬಹಳ ಸರಳವಾಗಿ ತಿಳಿಸಿದ್ದೀರಿ.

ಆಕಾಶವೂ ನೀಲಿ, ಸಮುದ್ರ ನೀಲಿ, ಹೀಗೆ ಎಲ್ಲವೂ ನೀಲಿಮಯ. ನೀಲ ವರ್ಣ ಶುಭ, ಶಾಂತಿಯ ಸಂಕೇತ!


ನನಗೂ ಈ ಚಿತ್ರವನ್ನು ನೋಡಬೇಕೆಂದು ಅನಿಸಿದೆ. ಪ್ರಯತ್ನಿಸುತ್ತೇನೆ.

ಧನ್ಯವಾದಗಳು.

ಮನಸು ಹೇಳಿದರು...

nimma vivaraNe chennagide, eradane varshavannu ee avataradalli pooraisuttaliddeera hahaha (kshamisi tamashege heege helide)

naanu avatar film nodi nimmanteye nanagu anisitu.

Santhosh Rao ಹೇಳಿದರು...

antoo cinimaa nodo abhyasa bantu anni.. :)

ಜಲನಯನ ಹೇಳಿದರು...

ತೇಜಸ್ವಿನಿ, ಚಲನಚಿತ್ರ ನೋಡೋಕೆ ಬಹಳ ದಿನ (ವರ್ಷಗಳೇ?) ನಂತರ ಚಿತ್ರ ಮಂದಿರಕ್ಕೆ ಹೋಗಿದ್ದು ಎಲ್ಲಿಯೋ ದೂರದ ಪ್ರವಾಸಕ್ಕೆ ತಯಾರಿ ನಡೆಸುವಂತೆ ತಯಾರಾದದ್ದು..ಅದಿತಿಗಾಗಿ ನಿಮ್ಮಿಬ್ಬರ ಮತ್ತೆ ನಿಮ್ಮತಾಯಿಯವರ ಪರದಾಟ...ಅಬ್ಬಬ್ಬಬ್ಬ...ಕೊನೆಗೂ ನೋಡಿ ಬಂದ್ರಲ್ಲಾ.!! ನಿಜ ಚಿತ್ರಮಮ್ದಿರದಲ್ಲಿ ಚಿತ್ರ ನೋಡಿದ್ದು ನಾನೂ 2002 ರಲ್ಲಿ ಮುಂಬಯಿ ನಗರದ ಹೊರವಲಯದಲ್ಲಿ...ಬಾಘ್ಬಾಂ....ಅಮಿತಾಭ್ ಮತ್ತು ಹೇಮರ ಮನತಟ್ಟುವ ಅಭಿನಯದ ಚಿತ್ರ...ಕಿರುಪರದೆಯಮೇಲೆ ನೋಡಿ..ಚಿತ್ರಮಂದಿರದಲ್ಲಿ...ಎಲ್ಲೋ ಕಳೆದುಹೋಗ್ತಿದ್ದೀವಿ ಎನಿಸಲಿಲ್ಲವೇ...? ಚನ್ನಾಗಿದೆ ಚಿತ್ರದ ವಿವವ್ರಣೆಯೂ.....ಒಟ್ನಲ್ಲಿ ಅಭಿನಂದನೆ ನಿಮ್ಮ ಅಭಿಯಾನಕ್ಕೆ..

Unknown ಹೇಳಿದರು...

ನಾನೂ ಅವತಾರ್ ಚಿತ್ರ ನೋಡಿಲ್ಲ.. ನೋಡ್ಬೇಕು.. ಇನ್ನು ಮೈ ನೇಮ್ ಇಸ್ ಖಾನ್.. ಉಹುಂ, ಅದನ್ನು ಖಂಡಿತಾ ನೋಡಲ್ಲ...

Eat Right ಹೇಳಿದರು...

Tumba chennagiddu tejatte...tumba chennagi tilsidde movie olage adagiruva arthana..You are the Best ..

Ittigecement ಹೇಳಿದರು...

ತೇಜಸ್ವಿನಿ...

ಅವತಾರ್ ಸಿನೇಮಾ ಒಬ್ಬ ಪ್ರತಿಭಾವಂತ ಭಾರತೀಯ ಮಾಡಿದ್ದರೆ ಹೇಗಾಗುತ್ತಿತ್ತು...?
ನಮ್ಮ ಪುರಾಣ ಕಾವ್ಯಗಳನ್ನು ಈ ರೀತಿಯಾಗಿ ತೆರೆಯಮೇಲೆ ತಂದಿದ್ದರೆ...?
ಇಂಥಹ ಬಹಳ ರೆ.. ಗಳು ನನ್ನನ್ನು ಕಾಡಿತು...

ತಂತ್ರಜ್ಞಾನದ ದೃಷ್ಟಿಯಿಂದ ಒಂದು ಅತ್ಯುತ್ತಮ ಸಿನೇಮಾ...

ಅವತಾರ್ ನಮ್ಮ ಪುರಾಣ ಕಾವ್ಯಗಳಿಂದ ಸ್ಪೂರ್ತಿ ಪಡೆದಿದ್ದಾರೆ ಎಂದೆನಿಸುತ್ತದೆ...

ಒಟ್ಟಿನಲ್ಲಿ ಹಾಲಿವುಡ್ ಜನಕ್ಕೆ ಭಾರತದಲ್ಲಿ ಹಣ ದೋಚುವದು ಹೇಗೆಂದು ಗೊತ್ತು ಅಲ್ಲವೆ...?

ಚಂದದ ಬರಹಕ್ಕೆ ಅಭಿನಂದನೆಗಳು..

Uma Bhat ಹೇಳಿದರು...

ತೇಜಸ್ವಿನಿ,
ನನಗೆ' ಅವತಾರ್ ' ಫಿಲ್ಮ್ ಗಿಂತಾ,
ಮೂರು ತಾಸು ಮಕ್ಕಳನ್ನ ಬಿಟ್ಟು ಹೋಗಲು ಹರ ಸಾಹಸ ಮಾಡಿದಂತಾ,
ತಾಯಿಯ ಫೀಲಿಂಗ್ಸಗೆ ಧನ್ಯವಾದ. ಎಲ್ಲಾ ಮಕ್ಕಳಿಗೂ ಈ ವಾತ್ಸಲ್ಯ ಸಿಗುವಂತಾಗಲಿ

ಚುಕ್ಕಿಚಿತ್ತಾರ ಹೇಳಿದರು...

ಪಟ್ಟ ಕಷ್ಟ, ಕಳೆದ ಸಮಯ ಎರಡೂ ವ್ಯರ್ಥವಾಗಲಿಲ್ಲವೆ೦ದಾಯ್ತು..
ನಾವೂ ನೋಡಬೇಕಿದೆ....ಅವತಾರ್ ನ ಅವತಾರ ಹೇಗಿದೆ ಅ೦ತ...
ವಿವರಣೆಗೆ ಧನ್ಯವಾದಗಳು.

umesh desai ಹೇಳಿದರು...

ಮೇಡಮ್ ನಾನೂ ಅವತಾರ ನೋಡಿಲ್ಲ ನಿಮ್ಮ ವಿವರಣೆ ಸೊಗಸಾಗಿತ್ತು...

ಸೀತಾರಾಮ. ಕೆ. / SITARAM.K ಹೇಳಿದರು...

Nice comments

Badarinath Palavalli ಹೇಳಿದರು...

ಮೇಡಂ,

ಸಿನಿಮಾ ನೋಡಿ ಬಂದು, ಮತ್ತೆ ಪ್ರತಿಕ್ರಯಿಸುತ್ತೇನೆ.

- ಬದರಿನಾಥ ಪಲವಳ್ಳಿ

Pl. visit my Kannada Poems blog:
www.badari-poems.blogspot.com

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ಕೆಲಸದ ಒತ್ತಡದಿಂದಾಗಿ ನಿಮ್ಮ ಅವತಾರ್ ಲೇಖನವನ್ನು ತಡವಾಗಿ ಓದುತ್ತಿದ್ದೇನೆ.ಬೇಸರಿಸಬೇಡಿ.

ಎಷ್ಟೋ ವರ್ಷಗಳ ನಂತರ ಇಂಥ ಅದ್ಭುತ ಸಿನಿಮಾ ನೋಡಲು ಮನಸ್ಸು ಮಾಡಿದ್ದೀರಿ. ಸಿನಿಮಾಕ್ಕೆ ನೀವು ತಯಾರಾದ ರೀತಿ, ಸಿನಿಮಾವನ್ನು ನಿಮ್ಮದೇ ದೃಷ್ಟಿಕೋನದಲ್ಲಿ ನೋಡಿದ ಬಗೆ ಇತ್ಯಾದಿಗಳನ್ನು ಚೆನ್ನಾಗಿ ವಿವರಿಸಿದ್ದೀರಿ. ನಾನು ನೋಡಿ ಬಂದ ಮೇಲೆ ಬೇರೆಯದೇ ರೀತಿ ಲೇಖನವನ್ನು ಬರೆದಿದ್ದೆ. ಅದನ್ನು ನೋಡಿ ನೀವು ನಿಮ್ಮ ಪ್ರತಿಕ್ರಿಯೆ ನೀಡಿದ್ದೀರಿ..
ಒಂದು ಸಿನಿಮಾ ಪ್ರತಿಯೊಬ್ಬರಿಗೂ ಒಂದೊಂದು ಗೋಚರಿಸುವುದೇ ಆಚ್ಚರಿಯಲ್ಲವೇ...

ಅವತಾರ್ ಸಿನಿಮಾ ಯಶಸ್ಸು ಮಾನವನ ಕ್ರೂರತೆ ಹಳಿಯುವುದೇ ಆಗಿರುವುದು ಸತ್ಯ.

ಧನ್ಯವಾದಗಳು.