"ನಾನು ಅದಿತಿ ನೋಡ್ಕತ್ತಿ... ನೀ ಬೇಕಿದ್ರೆ ನೋಡ್ಲಕ್ಕು ಫಿಲ್ಮ್.. ಎಂತ ಮಾಡ್ತೆ ಹೇಳು... ಮೊದಲೇ ಬುಕ್ಕಿಂಗ್ ಮಾಡಿಡವು. ಚೆನ್ನಾಗಿದ್ದಡ ರಾಶಿಯ.. ನೋಡ್ಕ ಬಾ.." ಎಂದು ನನ್ನವರು ಹೇಳಿದಾಗ ನಾನು ಬಹು ಆಶ್ಚರ್ಯಗೊಂಡಿದ್ದು ಅವರು ಆ ರೀತಿ ಹೇಳಿದ್ದಕ್ಕಲ್ಲಾ. ಬದಲು ನಾನು ಫಿಲ್ಮ್ ನೋಡಲು ಟಾಕೀಸ್ಗೆ ಹೋಗಬೇಕೆಂಬ ಮಾತು ನನ್ನೊಳಗೇ ಅರಿಯದ ಅಚ್ಚರಿ ತಂದಿದ್ದು. ಕೊನೆಯ ಬಾರಿ ನಾನು ಚಲನಚಿತ್ರವೊಂದನ್ನು ಟಾಕೀಸ್ಗೇ ಹೋಗಿ ನೋಡಿದ್ದು ಎಂಟನೆಯ ತರಗತಿಯಲ್ಲಿದ್ದಾಗ. ಅದೂ ಅಪ್ಪ, ಅಮ್ಮ, ತಂಗಿಯಂದಿರು, ಅಜ್ಜ ಹಾಗೂ ಅಜ್ಜಿಯೊಡನೆ. ಆಮೇಲೆ ಹೋಗೇ ಇಲ್ಲ. ಅದರಲ್ಲೇನೂ ದೊಡ್ಡಸ್ತಿಕೆಯೂ ಇಲ್ಲವೆನ್ನಿ. ಮೊದಲನೆಯದಾಗ ಚಿಲನಚಿತ್ರಗಳು ಕೇಬಲ್ನಲ್ಲೇ ಸುಲಭವಾಗಿ(ಸ್ವಲ್ಪ ತಡವಾಗಿಯಾದರೂ) ನೋಡಲು ಸಿಗತೊಡಗಿದವು. ಎರಡನೆಯದಾಗಿ ಅದೇಕೋ ಎಂತೋ ಹೋಗಿ ನೋಡಬೇಕೆಂಬ ಆಶಯವೇ ಹುಟ್ಟುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹೋಗಲು ಇದ್ದ ಸಮಸ್ಯೆಗಳು. ಆಗ ಮಂಗಳೂರಿನಲ್ಲಿದ್ದ ಉತ್ತಮ ಟಾಕೀಸ್ಗಳಿಗೆಲ್ಲಾ ವ್ಹೀಲ್ಚೇರ್ ಸುಲಭವಾಗಿ ಹೋಗುತ್ತಿರಲಿಲ್ಲ. Inox, PVRಗಳ ಸೌಲಭ್ಯಗಳೂ ಇರಲಿಲ್ಲ. ಹಾಗಾಗಿ ಅದೊಂದು ಅಭ್ಯಾಸವೇ ತಪ್ಪಿಹೋಗಿತ್ತು. ಈಗ ಸರಿಸುಮಾರು ೧೭ ವರುಷಗಳ ನಂತರ ನನ್ನವರು ಹೋಗು ಎಂದಾಗ ದೊಡ್ಡದಾಗಿ ನಕ್ಕು ಬಿಟ್ಟಿದ್ದೆ. ಕಾರಣ ಮದುವೆಯನಂತರವೂ ನಮಗೆ ಫಿಲ್ಮ್ಗೆ ಹೋಗ ಬೇಕೆಂದೇ ಅನಿಸಿರಲಿಲ್ಲ. ಇಲ್ಲಿ Inox, PVRಗಳು ಎಲ್ಲೆಂದರಲ್ಲಿ ಇದ್ದರೂ ಕೂಡ ಹೋಗಿರಲಿಲ್ಲ. ಕಾರಣ ಒಂದೇ...ಸುಲಭದಲ್ಲಿ ಸಿ.ಡಿ.ಗಳಲ್ಲೋ, ಅಂತರ್ಜಾಲದಲ್ಲೋ ಸಿಗುತ್ತಿರುವ ಫಿಲ್ಮ್ಗಳನ್ನು ಆರಾಮವಾಗಿ ಬೇಕಾದಾಗ, ಬೇಕಾದ ರೀತಿಯಲ್ಲಿ ವಿಶ್ರಮಿಸುತ್ತಾ ನೋಡಬಹುದು. ಆದರೆ ಅವತಾರ್ ಮಾತ್ರ ೩-ಡಿ ಆಗಿದ್ದರಿಂದ ಟಾಕೀಸ್ಗೇ ಹೋಗಿ ನೋಡಬೇಕು. ಅದಕ್ಕಾಗಿ ನನ್ನವರು ಬಹು ಒತ್ತಾಯಿಸುತ್ತಿದ್ದರು. ಆದರೆ ನಾನೇ ಒಪ್ಪಿರಲಿಲ್ಲ. ಎರಡೂವರೆ ವರ್ಷದ ಪುಟ್ಟಿಯನ್ನೊಬ್ಬಳನ್ನೇ ಬಿಟ್ಟು ೩ ತಾಸು ಹೋಗುವುದಕ್ಕೆ ಯಾಕೋ ಮನಸೊಪ್ಪುತ್ತಿರಲಿಲ್ಲ. ಆದರೂ ಎಲ್ಲೋ ಒಂದು ಕಡೆ ಬಹು ಚರ್ಚಿತ "ಅವತಾರ"ವನ್ನು ನೋಡಬೇಕೆಂಬ ಹಂಬಲ ಬೇರೆ. ಅಂತೂ ಕೊನೆಗೆ ನಾಲ್ಕುಕಣ್ಗಳಲ್ಲೂ ನೋಡಲು ನಿರ್ಧರಿಸಿಯೇಬಿಟ್ಟೆ. ಹಾಗೆನ್ನುವುದಕ್ಕಿಂತಲೂ ನನ್ನವರು ಒತ್ತಡ ಹೇರಿ ಒಪ್ಪಿಸಿದರು ಎಂದರೆ ತಪ್ಪಾಗದು. "ಅಜ್ಜಿಮುದ್ಕಿ ತನ್ನ ಕೋಳಿಯಿಂದಲೇ ಬೆಳಗಾಗ್ತು ಹೇಳಿ ತಿಳ್ಕಂಡ ಹಾಗೆ ಅಂದ್ಕಳಡ. ನಾ ನೋಡ್ಕತ್ತಿ ಅದ್ನ. ನೀ ಏನೂ ಯೋಚ್ನೆ ಮಾಡಡ. ಅದ್ಕೆ ಉಣ್ಸಿ, ಆಡಿಸ್ತಾ ಇರ್ತಿ. ನಿನ್ನ ಬಿಟ್ಟಿಕ್ಕಿ ಬಂದ್ರಾತೋ ಇಲ್ಯೋ.. ಸುಮ್ನೇ ಹೋಗು.." ಎಂದು ಆಶ್ವಾಸನೆ ಕೊಟ್ಟಾಗ ಒಪ್ಪಲೇ ಬೇಕಾಗಿತ್ತು.
ಹೋಗುವಾಗಲೂ ಅಷ್ಟೇ. ಯಾರನ್ನು ಜೊತೆಗೆ ಕರೆದೊಯ್ಯಲಿ ಎಂಬ ಯೋಚನೆ! ಇವರಂತೂ ಸಾಥ್ ಕೊಡುವ ಹಾಗಿರಲಿಲ್ಲ. ಅದಿತಿಯನ್ನು ನೋಡಿಕೊಳ್ಳಲು ಇರಲೇ ಬೇಕಿತ್ತು. ಒಬ್ಬಳೇ ನೋಡಲು...ಅದೂ ಇಷ್ಟೊಂದು ವರುಷಗಳ ನಂತರ ಇಷ್ಟವಾಗಲಿಲ್ಲ. ಹೀಗಿರುವಾಗ ಕಾರಣಾಂತರಗಳಿಂದ ಅಮ್ಮ ಊರಿನಿಂದ ಬಂದಳು. ಸರಿ ಮತ್ತೂ ನಿಶ್ಚಿಂತೆಯಾಯಿತು. ಮೊದಲು ಅಮ್ಮ, ನಾನು ಹಾಗೂ ನನ್ನ ಕಿರಿಯ ತಂಗಿ ಹೋಗುವುದೆಂದು ಮಾತಾಗಿ ಮೂರು ಟಿಕೆಟ್ ಬುಕ್ ಮಾಡಿಯಾಯಿತು. ಆದರೆ ಹಿಂದಿನ ದಿನ ಅಮ್ಮ "ಈ ವಯಸ್ಸಲ್ಲಿ ಆ ಕಪ್ಪು ಕನ್ನಡ್ಕ ಹಾಕ್ಕಂಡು ನಾ ತಲೆ ನೋವು ತರ್ಸ್ಕತ್ನಿಲ್ಲೆ. ಅದೂ ಅಲ್ದೇ ನಂಗೆ ಕತ್ಲಲ್ಲಿ ನಿದ್ದೆ ಬಂದೋಗ್ತು. ದುಡ್ಡು ದಂಡ. ಅದ್ರ ಬದ್ಲು ನೀನು ರಾಮು(ನನ್ನವರು), ತಂಗಿ ಹೋಗಿ.... ಅದಿತಿ ನನ್ನ ಹತ್ರ ಆರಮಾಗಿ ಇರ್ತು" ಅಂದು ಬಿಟ್ಲು. ಆದರೆ ನನ್ನವರಿಗೆ ಅದಿತಿಯ ಚಿಂತೆ. ಅದೂ ಮೊದಲ ಬಾರಿ ಅಷ್ಟೊತ್ತು ಅಪ್ಪ, ಅಮ್ಮ ಇಬ್ಬರನ್ನೂ ಬಿಟ್ಟು ಇರಲಾರಳೇನೋ ಎಂಬ ಮಮಕಾರದಿಂದ ನಾವಿಬ್ಬರೂ ಒಪ್ಪಲಿಲ್ಲ. ಅಂತೂ ಇಂತೂ ಯೋಚಿಸಿ ನನ್ನ ಇನ್ನೊಂದು ತಂಗಿಯನ್ನು ಬರಲೊಪ್ಪಿಸಿದೆ. ಅವಳಿಗೋ ಒಂದೂವರೆ ವರುಷದ ಮಗ. ಮತ್ತೂ ಕಷ್ಟವೇ. ಆದರೂ ಆಕೆ, ಅವಳ ಪತಿ ಹಾಗೂ ನನ್ನಮ್ಮನ ಭರವಸೆಯ ಮೇಲೆ ಬರಲೊಪ್ಪಿದಳು. ಸರಿ ಮೂವರೂ ಸಹೋದರಿಯರು ಅವತಾರಕ್ಕಾಗಿ ತಯಾರಾದೆವು. ನನ್ನೊಳಗೇನೋ ತಳಮಳ. ಅಷ್ಟೊಂದು ವರುಷಗಳ ನಂತರ ಹೊರಗೆ ಚಲನಚಿತ್ರವೊಂದನ್ನು ನೋಡುವ ಕಾತರ ಒಂದೆಡೆಯಾದರೆ, ೩-ಡಿ ಪಿಕ್ಚರ್ ಎಂಬ ವಿಶೇಷಭಾವ ಇನ್ನೊಂದೆಡೆ. ಅದಿತಿ ಎಲ್ಲಿ ಅತ್ತೂ ಕೂಗಿ ಕೊನೆಯ ಗಳಿಗೆಯಲ್ಲಿ ರಂಪಾಟ ಮಾಡುವಳೋ ಎಂಬ ಚಿಂತೆಯೂ ಒಳಗೊಳಗೇ.
ಅಂತೂ ಇಂತೂ ಆ ದಿನ ಬಂದೇ ಬಿಟ್ಟಿತು. ತಿಲಕ ನಗರದಲ್ಲಿರುವ Inoxಗೆ ನಾನು ನನ್ನವರು, ಅಮ್ಮ, ತಂಗಿಯಂದಿರು, ತಂಗಿಯ ಗಂಡ, ಇಬ್ಬರು ಪುಟಾಣಿಗಳೊಡನೆ ಧಾಳಿ ಇಟ್ಟೆವು. ಮೊದಲೇ ಬುಕ್ ಮಾಡಿಟ್ಟಿದ್ದ ಟಿಕೆಟ್ ಪಡೆದ ನನ್ನವರು ನನ್ನನ್ನು ಕೂರಿಸಿ ಬರಲು ಒಳ ಕರೆದೊಯ್ದರು. ಮುಂದಿನ ಸಾಲಿನ ಸೀಟಿನವರೆಗೂ ಆರಮವಾಗಿ ಹೋದೆವು. ಆದರೆ ನಮ್ಮ ಟಿಕೆಟ್ ದುರದೃಷ್ಟವಶಾತ್ ಮೇಲಿನ ಸಾಲಿನಲ್ಲಾಗಿತ್ತು. ನನ್ನವರ ಗಮನಕ್ಕೆ ಅದು ಬರದೇ ಅವಾಂತರ ಆಗಿಹೋಗಿತ್ತು. ವ್ಹೀಲ್ಚೇರ್ ಅಷ್ಟು ಎತ್ತರಕ್ಕೆ ಸರಾಗವಾಗಿ ಹೋಗದು. ನಾಜೂಕಿನ ಮೆಟ್ಟಿಲುಗಳು ಬೇರೆ ಎಲ್ಲಿ ಹಾಳಾಗುವವೋ ಎಂಬ ಆತಂಕ ಅಲ್ಲಿಯ ಸಿಬ್ಬಂದಿಗಳಿಗೆ. ಹಾಗಾಗಿ ಕೆಳಗಿನ ಸಾಲಿನಲ್ಲೇ ನನಗೂ ನನ್ನ ಮೊದಲನೆಯ ತಂಗಿಗೂ ಸೀಟ್ ಕೊಟ್ಟು, ನಮ್ಮ ಸೀಟ್ ಅನ್ನು ಬೇರೆಯವರಿಗೆ ಕೊಟ್ಟರು. ಕೊನೆಯ ತಂಗಿ ನಮ್ಮಿಂದ ಬೇರೆಯಾಗಿ ಮೇಲೆ ಕುಳಿತುಕೊಳ್ಳುವಂತಾಯಿತು. ಎಲ್ಲಾ ಸರಿಯಾಗಿರುವುದನ್ನು ಖಚಿತಪಡಿಸಿಕೊಂಡ ನನ್ನವರು ಅಮ್ಮ, ಮಕ್ಕಳು ಹಾಗೂ ತಂಗಿಯ ಪತಿಯೊಡನೆ ಮನೆಗೆ ತೆರಳಿದರು.
ಸರಿ ಇನ್ನೇನು ಕತ್ತಲಾವರಿಸಿ, ಬೆಳಕು ಪರದಿಯ ಮೇಲೆ ಬಿದ್ದಿದ್ದೇ ತಡ ಎಲ್ಲಿ ಪಿಕ್ಚರ್ ಶುರುವಾಯಿತೋ

ಎಂದು ಗಡಿಬಿಡಿ ಮಾಡಿಕೊಂಡು ಕನ್ನಡಕ ಏರಿಸಿಯೇ ಬಿಟ್ಟೆ. ಆದರೆ ಅಲ್ಲಿ ಕಂಡಿದ್ದು ಒಂದಿಷ್ಟು ಜಾಹೀರಾತುಗಳು. ತಂಗಿ ತಂದ ಪೊಪ್ಕಾರ್ನ್ ರುಚಿ ನಾಲಗೆಯನ್ನು ಹತ್ತುತ್ತಿರುವಾಗಲೇ
"ಅವತಾರ" ಪ್ರಾರಂಭವಾಯಿತು. ಮೊದಲ ಹತ್ತು ನಿಮಿಷ ೩-ಡಿ ಕನ್ನಡಕವನ್ನು ನಮ್ಮ ದೃಷ್ಟಿಗೆ ಹೊಂದಿಸಿಕೊಳ್ಳಲೇ ಬೇಕಾಯಿತು. ತಲೆನೋವಾದಂತೆ, ಹೊಟ್ಟೆ ತೊಳೆಸಿದಂತಹ ಅನುಭವದಿಂದ ಸ್ವಲ್ಪ ಹೊತ್ತು ಕಿರಿಕಿರಿಯಾಯಿತು. ಅಷ್ಟರೊಳಗೆ ನಮಗೆ ಫೋನ್ ಮಾಡಿದ ಅಮ್ಮ ನಮ್ಮಿಬ್ಬರ ಮಕ್ಕಳೂ ಆರಮವಾಗಿ ಇದ್ದಾರೆಂದೂ, ಆಡುತ್ತಿದ್ದಾರೆಂದೂ, ಯಾವುದೇ ವಿಷಯಕ್ಕೂ ಚಿಂತಿಸಿದೇ ಪಿಕ್ಚರ್ನ ಆನಂದಿಸಬೇಕೆಂದೂ ಹೇಳಲು ನಾವು ನಿಶ್ಚಿಂತರಾದೆವು. ಕ್ರಮೇಣ ನಾನು ಎಲ್ಲವನ್ನೂ ಮರೆತು
"ಪಂಡೋರಾದಲ್ಲೇ" ವಿಹರಿಸ ತೊಡಗಿದೆ.
ಅದೊಂದು ಮಾಯಾನಗರಿಯೇ ಸರಿ. ಎತ್ತನೋಡಿದರತ್ತ ನೀಲ ವರ್ಣ. ಚಿತ್ರವಿಚಿತ್ರ ಪ್ರಾಣಿಗಳು, ಪಕ್ಷಿಗಳು, ಅಲ್ಲಿಯ ನಾ-ವಿ ಜನಾಂಗದವರ ವಿಚಿತ್ರ ವರ್ತನೆಗಳು, ಸಂಪ್ರದಾಯಗಳು, ತೇಲುವ ಪರ್ವತಗಳಿಂದ ಧುಮುಕುವ ಜಲಪಾತಗಳು, ಬೃಹತ್ ಮರಗಳು, ಬಿಳಲುಗಳು, ಅತಿ ಸುಂದರ ಮನಮೋಹಕ ಹೂವುಗಳು, ಎಲ್ಲವೂ ನನ್ನ ಮನಸೂರೆಗೊಂಡವು. ಎಲ್ಲಕ್ಕಿಂ

ತ ಹೆಚ್ಚಾಗಿ ನನಗೆ ಇಷ್ಟವಾಗಿದ್ದು ಅಲ್ಲಿಯ ಜೀವಿಗಳ ನೀಲವರ್ಣ. ಅದು ನನ್ನಚ್ಚುಮೆಚ್ಚಿನ ಬಣ್ಣವೂ ಹೌದು. ಫೆಂಗ್ಶುಯಿ ಹಾಗೂ ವಾಸ್ತುಶಾಸ್ತ್ರದ ಪ್ರಕಾರ
ನೀಲ ಬಣ್ಣ ನಮ್ಮ ಮನಸಿನೊಳಗಿನ ನೋವನ್ನು ಶಮನಗೊಳಿಸಿ, ನೆಮ್ಮದಿಯ ಭಾವವನ್ನು ಕೊಡುತ್ತದೆಯಂತೆ. ಅಲ್ಲದೇ ನೀಲವರ್ಣ ವಿಶ್ವಾಸದ, ಶಾಂತಿಯ, ವಿಶ್ರಾಂತಿಯ ಪ್ರತೀಕ. ಇದು ನಮ್ಮ ಮನಸ್ಸನ್ನು ನಿರಾಳಗೊಳಿಸುವಂತಹದು, ಮನೋವಿಕಾಸಕ್ಕೆ ನೀಲವರ್ಣದ ಕೊಡುಗೆ ಅಪಾರ. ಹಾಗಾಗಿಯೇ ಬಹುಶಃ
"ನಾ-ವಿ" ಜನಾಂಗದವರನ್ನು ನಿರ್ದೇಶಕ
"ಜೇಮ್ಸ್ ಕೆಮರೂನ್" ಹೊಳೆವ ನೀಲಿ ಬಣ್ಣದಲ್ಲೇ ಮುಳುಗೇಳಿಸಿದ್ದು. ಅದು ಅವರ ಮನಸಿನೊಳಗಿನ ಶುದ್ಧತೆಗೆ, ಮುಗ್ಧತೆಗೆ, ಶಕ್ತಿಗೆ ಹಿಡಿದ ಕನ್ನಡಿಯಂತಿದೆ. ನೀಲ ನದಿ, ಝರಿ, ಬೆಟ್ಟ, ಹೂವು ಎಲ್ಲವೂ ೩-ಡಿಯೊಳಗೆ ನನ್ನ ಮೈ, ಕೈಗಳನ್ನು ಸವರಿ ಹೋದಾಗ ತುಂಬಾ ಪುಳಕಿತಳಾಗಿದ್ದೆ. ಒತ್ತಾಯಿಸಿ ಕಳುಹಿಸಿದ ನನ್ನವರನ್ನು ಮನದಲ್ಲೇ ಅಭಿನಂದಿಸಿದೆ.
"ಅವತಾರದ" ಜೀವಾಳ - ಅವತಾರ ಗೆದ್ದಿದ್ದು ಪ್ರಕೃತಿಯ ಮುಂದೆ ಮಾನವನನ್ನು ಸೋಲಿಸಿದ್ದರಿಂದ. ಎಲ್ಲೋ ನಮ್ಮೊಳಗೆ ಅವಿತಿರುವ ನಮ್ಮ ಪೈಶಾಚಿಕತೆಯ ಅರಿವಿದೆ ನಮಗೆ. ಹಾಗಾಗಿಯೇ ಮನುಷ್ಯನ ಸೋಲನ್ನು ಕಣ್ಮುಂದೆ ಕಂಡಾಗ ಸಮಾಧಾನಗೊಳ್ಳುತ್ತದೆ ಮನಸ್ಸು. ಪಂಡೋರದಲ್ಲಿ ನಾ-ವಿಗಳು, ಪ್ರಾಣಿಗಳು, ಡ್ರಾಗನ್ಗಳು ಮನುಷ್ಯರನ್ನು ಕಿತ್ತು ಬಿಸುಟಾಗ ನಮಗೂ ಹಾಯೆನಿಸುತ್ತದೆ. ಅದಕ್ಕೆ ಕಾರಣ ನಮ್ಮೊಳಗಿನ ಮನುಷ್ಯತ್ವ ಇನ್ನೂ ಜೀವಂತವಾಗಿರುವುದು. ಸುಂದರ ನೀಲನಗರಿ, ನೀಲಿ ಜನರು ವಿನಾಕಾರಣ ಮನುಜರ ದುರಾಸೆಗೆ ಭಸ್ಮವಾಗುವುದನ್ನು ಕಂಡಾಗ ಅದು ತೆರೆಯ ಮೇಲೆ ಎಂದು ಅರಿತಿದ್ದರೂ, ಅರಿಯದ ರೋಷ ಮಾನದೊಳಗೆ ಮನೆಮಾಡುತ್ತದೆ. ಅಂತಿಮದಲ್ಲಿ ಗೆಲ್ಲುವ ನಾ-ವಿಗಳ ಜೊತೆ ನಾವೂ ಮನಃಪೂರ್ತಿ ಪಾಲ್ಗೊಳ್ಳುವಾಗ ಎನೋ ಧನ್ಯತಾ ಭಾವ. ಒಂದು ಹಂತದಲ್ಲಿ ಅವರ ಪ್ರಕೃತಿ ದೇವತೆಯಾದ "ಏವಾ" ಪ್ರತಿಯೊಂದು ಪ್ರಾಣಿ, ಪಕ್ಷಿ, ಜೀವ ಸಂಕುಲಕ್ಕೂ ನಿರ್ದೇಶನ ಕೊಟ್ಟು ನಾ-ವಿಗಳ ಸಹಾಕ್ಕೆ ಕಳುಹಿಸುತ್ತಾಳೆ. ಹಾಗಾಗಿಯೇ ಸಬಲ ಮನುಷ್ಯನೂ ದುರ್ಬಲನಾಗಿ ಭೂಮಿಗೆ ಹಿಂತಿರುಗುತ್ತಾನೆ. (ಆದರೆ ಭೂಮಿಯ ಮೇಲೆ ನಡೆಯುವ ಅತ್ಯಾಚಾರ ಮಾತ್ರ ಎಗ್ಗಿಲ್ಲದಂತೇ ಸಾಗಿದೆ. ಪ್ರಕೃತಿಯನ್ನು ಶೋಷಿಸುತ್ತಿರುವ ನಮಗೆ ಮುಂದೊಂದು ದಿನ "ಏವಾ" ಕೊಟ್ಟ ಶಿಕ್ಷೆಯೇ ಕಾದಿರುವುದರಲ್ಲಿ ಏನೂ ಸಂಶಯವಿಲ್ಲ.) ನಾಯಕ "ಜೇಕ್" ಕೂಡ ಓರ್ವ ಮನುಷ್ಯನಾಗಿದ್ದರೂ ನಾ-ವಿಗಳ ಅಮಾಯಕತೆಗೆ ವಿಶ್ವಾಸಕ್ಕೆ, ಸತ್ಯತೆಗೆ ಮಾರುಹೋಗಿ ಅವರಂತೇ ಆದ. ಅವರಿಗಾಗಿ ಹೋರಾಡಿ ಅವರಲ್ಲೇ ಒಂದಾಗಿ ಹೋದ. ಅವನೊಳಗಿನ ಮನುಷ್ಯತ್ವಕ್ಕೆ ನೀರೆರೆದು ಪೋಷಿಸಿದ್ದು ನಾ-ವಿಜನಾಂಗದವರ ಸಾಂಗತ್ಯ ಹಾಗೂ ರಾಜಕುಮಾರು "ನೆಯ್ತಿರಿ"ಯ ನಿರ್ಮಲ ಪ್ರೀತಿ. ಅದಕ್ಕೇ ಬಹುಶಃ ಹೇಳಿದ್ದು ಹಿರಿಯರು "ಸಜ್ಜನರ ಸಂಗ ಹೆಜ್ಜೇನು ಸವಿದಂತೆ" ಎಂದು. ೩-ಡಿ ಕನ್ನಡಕ ನಾ-ವಿಗಳನ್ನು ಅವರ ಸುಂದರ ಅದ್ಭುತ ಲೋಕವನ್ನು ನಮಗೆ ಮತ್ತಷ್ಟು ಹತ್ತಿರ ತಂದು, ಮನುಷ್ಯನ ದುಷ್ಟ ಹಾಗೂ ಸುಂದರ ಎರಡೂ ಅವತಾರಗಳನ್ನು ತೋರಿಸುತ್ತದೆ. ಅತ್ಯದ್ಭುತ ತಂತ್ರಜ್ಞಾನ, ಸುಂದರ ನಿರ್ದೇಶನವನ್ನು ನೋಡುವುದಕ್ಕಾಗಿ ಒಮ್ಮೆಯಾದರೂ "ಅವತಾರ"ದೊಳಗೆ ಪ್ರವೇಶಿಸಬೇಕು. ಹೊರಬಂದ ಮೇಲೂ ಬಹುಕಾಲ ನೆನಪುಳಿಯುವುದು ಚಿತ್ರದ ಸುಂದರ ಸಂದೇಶದ "I See You". ಈ ಒಂದು ಸಾಲನ್ನು ಹೇಗೆ ಬೇಕಿದ್ದರೂ ಅರ್ಥೈಸಿಕೊಳ್ಳಬಹುದು. ಅನೇಕ ಅರ್ಥಗಳನ್ನು ಹೊಂದಿರುವ ಈ ಸಾಲು ಈಗಲೂ ನನ್ನನ್ನು ಕಾಡುತ್ತಲೇ ಇದೆ.
ಶುಭಂ : ಮನೆಗೆ ಬಂದ ಮೇಲೆ ನನ್ನವರು "ನೋಡೀದ್ಯಾ.. ಅದಿತಿ ಏನೂ ಹಟ ಮಾಡಿದ್ದೇ ಇಲ್ಲೆ. ನಿನ್ನ ಸುದ್ದಿನೂ ಹೇಳಿದ್ದಿಲ್ಲೆ. ಆರಾಮಿತ್ತು ನನ್ನಹತ್ರ. ನೀ ಮಾತ್ರ ಸುಮ್ನೇ ಹೆದ್ರಿದ್ದೆ.." ಎಂದು ಛೇಡಿಸಲು, ಪಟ್ಟು ಬಿಡದ ನಾನು "ಸರಿ ಹಾಗಿದ್ರೆ.. ಚೊಲೋನೇ ಆತು.. ಮುಂದಿನ ಸಲ "My Name Is Khan" ನೋಡಲೆ ನಾನು ಹೋಗ್ಲಕ್ಕು ಹೇಳಾತು.." ಎಂದಾಗ ಮಾತ್ರ ನನ್ನವರು ಪೆಚ್ಚು!
-ತೇಜಸ್ವಿನಿ.