ಶುಕ್ರವಾರ, ಡಿಸೆಂಬರ್ 12, 2008

ಹೋರಾಟಕ್ಕೆ ಸ್ಫೂರ್ತಿ ತುಂಬಿದ "ಉದಯವಾಣಿ"

ಈ ಮೊದಲೇ ನನ್ನ ಬದುಕಿನ ಪಯಣ ಹೋರಾಟದ ಜೊತೆಗೆ.. ಲೇಖನದಲ್ಲಿ ನನ್ನೊಂದಿಗಾದ ಅನುಭವವನ್ನು ಎಲ್ಲಾ ಪ್ರಮುಖ ಪತ್ರಿಕೆಗಳಿಗೆ ಕಳುಹಿಸಿರುವೆ ಎಂದೂ, ಅವುಗಳಲ್ಲಿ ಒಂದಾದರೂ ಪತ್ರಿಕೆಯಲ್ಲಿ ವರದಿ ಬಂದರೂ ನಾನು ಆ ಪುಟವನ್ನು ಆ ವೈದ್ಯ ಮಹಾಶಯನಿಗೆ ಪೋಸ್ಟ್ ಮಾಡುವೆನೆಂದೂ ಹೇಳಿದ್ದೆ. ಆದರೆ ಮೈಲ್ ಕಳುಹಿಸಿ ಹದಿನೈದು ದಿನ ಕಳೆದರೂ ಯಾವ ಪೇಪರ್‌ನವರೂ ನನ್ನ ಈ ಸ್ವಾರಸ್ಯ ರಹಿತ ಸುದ್ದಿಯನ್ನು ಪ್ರಕಟಸಿದಿದ್ದುದನ್ನು ನೋಡಿ ಬಹುಶಃ Trash Folderಗೆ ಹಾಕಿದರೇನೋ ಎಂದು ಅನಿಸಿತು. ಇದನ್ನು ನಾನು ಮೊದಲೇ ನಿರೀಕ್ಷಿಸಿಯೂ ಇದ್ದೆ. ಕಾರಣ ಯಾವುದೇ ರೀತಿಯ ಅಪೇಕ್ಷೆಯಿಲ್ಲದೇ ಮೈಲ್ ಮಾಡಿದ್ದೆ.

ಆದರೆ ಉದಯವಾಣಿ ಪತ್ರಿಕೆಯಲ್ಲಿ ಮಾತ್ರ ಓರ್ವ ಸಹೃದಯ ಪತ್ರಕರ್ತನ ಸ್ಪಂದನದಿಂದಾಗಿ ನನ್ನ ಹೋರಾಟದ ದನಿಗೆ ಜನತಾವಾಣಿಯಲ್ಲಿ ಸ್ಥಾನ ದೊರಕಿದೆ. ಇವತ್ತಿನ ಉದಯವಾಣಿ ಪತ್ರಿಕೆಯಲ್ಲಿ ಸುದ್ದಿಬಂದುದು ತಿಳಿದು ಬಲು ಸಂತೋಷವಾಯಿತು. ಏನೋ ಧನ್ಯತಾಭಾವ.
ಇದು ನನ್ನೊಂದಿಗಾದ ಅನ್ಯಾಯಕ್ಕೆ ನಾನು ತೀರಿಸಿಕೊಂಡ ಸೇಡೆಂದು ಇಲ್ಲಾ ಸಿಟ್ಟೆಂದು ದಯವಿಟ್ಟು ಖಂಡಿತ ಭಾವಿಸದಿರಿ. ನನಗೆ ಆ ವೈದ್ಯರ ಮೇಲೆ ಯಾವ ಸಿಟ್ಟಿಲ್ಲ. ಆತನ್ನು ಶಿಕ್ಷಿಸುವುದೂ ನನ್ನ ಉದ್ದೇಶವಲ್ಲ. ಅದೆಷ್ಟೋ ಅಸಹಾಯಕರ, ಪ್ರತಿಭಟಿಸಲು ತಿಳಿಯದ, ತಿಳಿದರೂ ಧೈರ್ಯ ಸಾಲದ ಅಂಗವಿಕಲರ ಪ್ರತೀಕವಾಗಿ ನಾನು ಈ ಹೆಜ್ಜೆಯನ್ನಿಟ್ಟಿದ್ದು. ಈ ಘಟನೆ ನನ್ನೊಂದಿಗೆ ನಡೆಯದೇ ಬೇರಾವ ಅಂಗವಿಕಲನೊಂದಿಗೆ ನಡೆದಿದ್ದರೂ(ನನ್ನ ಕಣ್ಮುಂದೆಯೇ ಇಲ್ಲಾ ನನ್ನರಿವಿಗೆ ಬರುವಂತೆ), ನಾನೂ ಇದೇ ರೀತಿ ಮಾಡುತ್ತಿದ್ದೆ. ಇದು ಸತ್ಯ. ಇವತ್ತೇ ನಾನು ಉದಯವಾಣಿ ಪತ್ರಿಕೆಯ "ಜನತಾವಾಣಿ" ಪುಟವನ್ನು ಆ ವೈದ್ಯನಿಗೆ ಪೋಸ್ಟ್‌ಮಾಡುತ್ತಿರುವೆ. ಆತನಿಗೆ ಆತ್ಮಸಾಕ್ಷಿಯಿದ್ದರೆ, ತಾನೇ ಆ ರೀತಿ ವರ್ತಿಸಿದವನು ಎಂದು ತಿಳಿದು(ಆತನ ಹೆಸರನ್ನು ಹಾಕದಿದ್ದರೂ) ಮುಂದೆ ಈ ರೀತಿಯ ತಪ್ಪನ್ನು ಮಾಡದಿರಬಹುದು. ಇದರಿಂದಾಗಿ ಅದೆಷ್ಟೋ ರೋಗಿಗಳಿಗೆ/ಅಶಕ್ತರಿಗೆ ಸಹಾಯವಾಗಬಹುದು. ಅದೂ ಅಲ್ಲದೇ ಉದಯೋನ್ಮುಖ ಪತ್ರಕರ್ತರೂ ಕೂಡಾ ಈ ನಿಟ್ಟಿನಲ್ಲಿ ಚಿಂತಿಸಿ ಇಂತಹ ಘಟನೆಗಳಾದಾಗ ಬೇಕಿದ್ದರೆ ಸತ್ಯಾಸತ್ಯತೆಗಳನ್ನು ತಿಳಿದು ತಾವೂ ಜೊತೆಗೂಡಬಹುದಲ್ಲವೇ? ಹೆಚ್ಚೇನೂ ಬೇಡ ತಮ್ಮ ಪತ್ರಿಕೆಗಳಲ್ಲಿ ಇಂತಹ ಘಟನೆಗಳ ವರದಿಗಳನ್ನು ಹಾಕುವಂತೆ ಮಾಡಬಹುದಲ್ಲವೇ? ಇದರಿಂದಲಾದರೂ ಕ್ರಮೇಣ ಜನಜಾಗೃತಿಯಾಗಬಹುದು!(ಇಲ್ಲಿ ನನ್ನ ಘಟನೆಯನ್ನು ಮಾತ್ರ ದೃಷ್ಟಿಕೋನದಲ್ಲಿಟ್ಟುಕೊಂಡು ಖಂಡಿತ ಹೇಳುತ್ತಿಲ್ಲ) ಯಾವುದೇ ಒಂದು ಗುರಿ ಸಾಧನೆಗೆ ಧನಾತ್ಮಕ ಚಿಂತನೆ, ಯೋಜನೆ ಹಾಗೂ ಉದ್ದೇಶ ಬಹು ಮುಖ್ಯ ಅಲ್ಲವೇ?

ನನ್ನಂತವರಿಗೆ ಹಾಗೂ ಮುಂದೆ ಯಾರಿಗಾದರೂ ಒಂದೊಮ್ಮೆ ಈ ಸ್ಥಿತಿ ಬಂದರೆ (ಯಾರಿಗೂ ಬರದಿರಲಿ ಎಂದೇ ಪ್ರಾರ್ಥಿಸುವೆ) ಅವರ ಶ್ರೇಯಸ್ಸಿಗಾಗಿ ನಾನು ಮೊದಲ ಬಾರಿ ಹೋರಾಟದ ದಾರಿ ಹಿಡಿದಿರುವೆ. ಇದು ಇಲ್ಲಿಗೇ ನಿಲ್ಲದು. ಇದು ಪ್ರಾರಂಭವಷ್ಟೇ.. ನಡೆಯುವ ದಾರಿ ತುಂಬಾ ಮುಂದಿದೆ. ಸಾಗುವ ಪಥ ಕಠಿಣವಾಗಿದೆ ನಿಜ. ಆದರೆ ಗುರಿ ಸ್ಪಷ್ಟವಾಗಿದೆ. ನನ್ನ ಜೊತೆ ಸ್ಪಂದಿಸಿದ, ನನ್ನ ದನಿಗೆ ಮಾರ್ದನಿಯಾದ, ಪ್ರೋತ್ಸಾಹಿಸಿ ನಾವಿದ್ದೇವೆ ಎಂದು ಹುರಿದಿಂಬಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ವಂದನೆಗಳು. ನಿಮ್ಮ ಸಹಕಾರ ಸಲಹೆಗಳು ಸದಾ ನನ್ನೊಂದಿಗಿರಲಿ ಎಂದು ಹಾರೈಸುವೆ.

ಆತ್ಮೀಯರೇ ನಿಮ್ಮಲ್ಲಿ ನನ್ನದೊಂದು ಮನವಿ. ನಿಮ್ಮ ನಡುವೆ ಇರುವ ಅಂಗವಿಕಲರಿಗೆ ಈರೀತಿಯ ಇಲ್ಲಾ ಯಾವುದೇ ರೀತಿಯ ಅನ್ಯಾಯ/ಅಪಮಾನ/ಹಕ್ಕುಚ್ಯುತಿಗಳಾಗುತ್ತಿದ್ದರೆ ದಯವಿಟ್ಟು ಪ್ರತಿಭಟಿಸಿ. ಇಲ್ಲಾ ನನಗೆ ಮಾಹಿತಿಗಳನ್ನು ಕೊಡಿ ನಾನು ಈ ನಿಟ್ಟಿನಲ್ಲಿ ನನ್ನಿಂದಾಗುವ ಸಹಾಯಗಳನ್ನು ಮಾಡುವೆ.

ನನ್ನ ಹೋರಾಟಕ್ಕೆ ಸ್ಪಂದಿಸಿ, ಜನತಾವಾಣಿಯಲ್ಲಿ ಪ್ರಕಟಿಸಿ ಪ್ರೇರಣೆಯನ್ನಿತ್ತ ಉದಯವಾಣಿಗೆ ಹಾಗೂ ಸಹೃದಯ ಪತ್ರಕರ್ತನಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು.

-ತೇಜಸ್ವಿನಿ.

30 ಕಾಮೆಂಟ್‌ಗಳು:

Sushrutha Dodderi ಹೇಳಿದರು...

ಶುಭಾಷಯ: ಸಂದ ಈ ಪುಟ್ಟ ಜಯಕ್ಕೆ. ನಡೆದ ಘಟನೆ ಸಂಘಟನೆಯಾಗಲಿ. ನಾನಂತೂ ಇದ್ದೇನೆ ಜತೆಗೆ.

Ittigecement ಹೇಳಿದರು...

ತೇಜಸ್ವಿನಿಯವರೆ....

ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ...
"ಉದಯವಾಣಿ" ಗೂ "ಬರೆದ ಪತ್ರಕರ್ತ"ರಿಗೂ ಧನ್ಯವಾದಗಳು...
ಮಾನವೀಯತೆ ಇನ್ನೂ ಬದುಕಿದೆ ಎಂದಾಯಿತು....

ಚಿತ್ರಾ ಹೇಳಿದರು...

ಅಭಿನಂದನೆಗಳು ತೇಜೂ,
ನಿನ್ನ ಹೋರಾಟದ ಹಾದಿಯಲ್ಲಿ ನಾನೂ ಇದ್ದೇನೆ ಜೊತೆಯಲ್ಲಿ.

ಆಲಾಪಿನಿ ಹೇಳಿದರು...

nanna kadeyindhaloo..

Lakshmi Shashidhar Chaitanya ಹೇಳಿದರು...

ನಿಮ್ಮ ಹೋರಾಟಕ್ಕೆ ಸಂದ ಜಯಕ್ಕೆ ಶುಭಾಶಯಗಳು. ಹೋರಾಟಕ್ಕೆ ನನ್ನ ಸಹಕಾರವೂ ಇದೆ. ಉದಯವಾಣಿಗೆ ಧನ್ಯವಾದಗಳು.

Harisha - ಹರೀಶ ಹೇಳಿದರು...

ತೇಜಕ್ಕ, ನಿನ್ನ ಹೋರಾಟದ ಮೊದಲ ಹೆಜ್ಜೆ ಸಕ್ಸಸ್! ಅಭಿನಂದನೆಗಳು! ಮುಂದಿನ ಹಾದಿಗೆ ಶುಭಾಶಯ ಕೂಡ.. :-)

ಭಾರ್ಗವಿ ಹೇಳಿದರು...

ತೇಜಸ್ವಿನಿಯವರೇ,
ಮೊದಲಿಗೆ ನಿಮ್ಮ ಹೋರಾಟದ ಗೆಲುವಿನ ಹೆಜ್ಜೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ನೀವು ಯಾಕೆ ಸ್ವಾರಸ್ಯರಹಿತ ಸುದ್ದಿ ಅಂತೀರ, ನಿಮ್ಮ ನೋವು ಹಾಗೆ ಹೇಳಿಸುತ್ತೆ. ಆದ್ರೆ ಪೇಪರ್ ನವರು ಹಾಗೆ ತಿಳಿದು ಪ್ರಕಟಿಸದಿದ್ದರೆ ಅವರಂತ ವಿಕಲಚೇತನರು ಮತ್ಯಾರೂ ಇಲ್ಲ.ನಿಮ್ಮ ಹೋರಾಟಕ್ಕೆ ನನ್ನ ಬೆಂಬಲ ಖಂಡಿತವಾಗಿಯೂ ಇದೆ.ಪ್ರಕಟಿಸಿದ ಪತ್ರಿಕೆಯವರಿಗೆ ಧನ್ಯವಾದಗಳು.

PaLa ಹೇಳಿದರು...

ತೇಜಸ್ವಿನಿ,

ನಿಮಗೆ ಸಂದ ಮೊದಲ ಜಯಕ್ಕೆ ನನ್ನ ಅಭಿನಂದನೆಗಳು. all the best for future

--
PaLa

ಅಂತರ್ವಾಣಿ ಹೇಳಿದರು...

ತೇಜು ಅಕ್ಕ,
ಶುಭಾಶಯಗಳು. ಇದು ಎಲ್ಲಾ ಪತ್ರಿಕೆಗಳಲ್ಲಿ ಬಂದಿದ್ದರೆ ಚೆನ್ನಾಗಿರುತ್ತಿತ್ತು. ಹೆಚ್ಚು ಜನರಿಗೆ ಮುಟ್ಟುತ್ತಿತ್ತು ಎಂದು ನನ್ನ ಭಾವನೆ.

ನಿಮ್ಮ ಎಲ್ಲಾ ಪ್ರಯತ್ನಗಳಿಗೆ ನಾನು ನಿಮ್ಮೊಟ್ಟಿಗಿರುತ್ತೇನೆ.

ಬಾನಾಡಿ ಹೇಳಿದರು...

ಆ ವೈದ್ಯ ಮಾತ್ರವಲ್ಲ ಬಹಳಷ್ಟು ವೈದ್ಯರು ನೀವು ಕಲಿಸಿದ ಪಾಠ ಅರ್ಥಮಾಡಲಿ ಎಂದು ಆಶಿಸುವೆ.
no words....

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ...
ಉದಯವಾಣೀ ದಿನಪತ್ರಿಕೆಗೂ ಧನ್ಯವಾದಗಳು.
ಈ ವಿಚಾರ ಉಳಿದೆಲ್ಲಾ ಪತ್ರಿಕೆಗಳಲ್ಲಿ ಬಂದಿದ್ದರೆ ಇನ್ನೂ ಚೆನ್ನಿತ್ತು. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವೂ ಇದೆ.

ಅನಾಮಧೇಯ ಹೇಳಿದರು...

ನಿಮ್ಮ ಹೋರಾಟದ ಜತೆಯಿದ್ದೇವೆ.

ಆ ಪತ್ರಕರ್ತನಿಗೆ ನನ್ನದೂ ಒಂದು ಥ್ಯಾಂಕ್ಸ್.ಬೇರೆ ಪತ್ರಿಕೆಯಲ್ಲಿ ಕೂಡ ಬರದೇ ಇದ್ದುದಕ್ಕೆ ಕೊಂಚ ಉದಾಸವಾಯ್ತು ಮನ.

ಕುಕೂಊ.. ಹೇಳಿದರು...

ಹಾರೈಕೆಗಳೊಂದಿಗೆ....:-)
ಮುಂದೆ???????...ನಾನಂತು ನಿಮ್ಮ ಜೊತೆಗೂಡುವೆ

sunaath ಹೇಳಿದರು...

ತೇಜಸ್ವಿನಿ,
ನಿನ್ನ ಹೋರಾಟ ಒಂದು ಹಂತಕ್ಕೆ ಬಂದಂತಾಯಿತು. ಜನತಾವಾಣಿಯನ್ನು ಓದಿದ ಮೇಲಾದರೂ ಆ ವೈದ್ಯಮಹಾಶಯ ಸುಧಾರಿಸಿದರೆ, ಅದೇ ನಿಜವಾದ ಗೆಲವು. ಇದನ್ನು ಓದಿದ ಇತರ ವೈದ್ಯರಿಗೂ ಇದು ನೈತಿಕ ಪಾಠವಾಗಲಿ.

ವಿನಾಯಕ ಕೆ.ಎಸ್ ಹೇಳಿದರು...

ಹೆಗಡೆಯವರೇ,
ನಾನು ವ್ಯವಸ್ಥೆಯೊಳಗೊಂದಾಗು ಅಂತಾ ನನ್ನ ಬ್ಲಾಗಿನಲ್ಲಿ ಒಂದು ಲೇಖನ ಹಾಕಿರುವೆ...ನಮ್ಮ ಪಾಡು ಅಷ್ಟೆ! ನನ್ನ ವೃತ್ತಿಯ ದೃಷ್ಟಿಯಿಂದಾಗಿ ಈ ವಿಚಾರದ ಕುರಿತು ಹೆಚ್ಚು ಮಾತಾಡಲಾರೆ. ಕ್ಷಮೆ ಇರಲಿ

ವಿ.ರಾ.ಹೆ. ಹೇಳಿದರು...

FINE .

ಇದನ್ನ ಓದಿ ಆ ವೈದ್ಯ ಸರಿಯಾಗ್ತಾನೋ ಇಲ್ವೋ ಆದ್ರೆ ಒಂದಿಷ್ಟು ಜನರ ತಿದ್ದಿಕೊಂಡ್ರೂ ಸಾಕು ಅದೇ ’ಹೋರಾಟ’ದ ನಿಜವಾದ ಸಾರ್ಥಕತೆ!

ಸುಪ್ತದೀಪ್ತಿ suptadeepti ಹೇಳಿದರು...

ತೇಜು, ಆ ವೈದ್ಯನಿಗೆ ಒಂದಿಷ್ಟು ನಾಚಿಕೆಯಾಗಿ, ಒಂದಷ್ಟು ಜವಾಬ್ದಾರಿಯ ಅರಿವು ಮೂಡಿದರೆ ನಿನ್ನ ಶ್ರಮ ಸಾರ್ಥಕ.
ಜೊತೆಗೆ, ಉಳಿದ ಜನತೆಗೂ ಇತರರನ್ನು ಮನುಷ್ಯರಂತೆಯೇ ಕಾಣುವ ಗುಣ ಬಂದರಂತೂ ಸಂತೋಷವೇ. ಹಾಗೇ ಆಗಲಿ ಎಂದು ಹಾರೈಸುತ್ತೇನೆ.

kanasu ಹೇಳಿದರು...

abhinandanegalu.. :) idu horatada modala jaya...

ತೇಜಸ್ವಿನಿ ಹೆಗಡೆ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಚಂದ್ರಕಾಂತ ಎಸ್ ಹೇಳಿದರು...

ತೇಜಸ್ವಿನಿ

ನಿಮ್ಮ ಬರವಣಿಗೆಯನ್ನು ಪ್ರಕಟಿಸಿರುವ ಉದಯವಾಣಿಯನ್ನು ನಾವು ಅಭಿನಂದಿಸಲೇ ಬೇಕು. ನೀವು ಯಾವಾಗಲೂ " ಹೋರಾಟ ಒಬ್ಬೊಬ್ಬರಿಂದಲೇ ಪ್ರಾರಂಭವಾಗಬೇಕು " ಎಂದು ಏಕೆ ಹೇಳುತ್ತಿದ್ದಿರೆಂದು ಈಗ ಸ್ಪಷ್ಟವಾಯಿತು.ಇನ್ನು ಯಾವ ರೀತಿಯಲ್ಲಿ ಇಂತಹವರಿಗೆ ರಚನಾತ್ಮಕವಾಗಿ ಸಹಾಯ ಮಾಡಲು ಸಾಧ್ಯ ಎಂಬುದನ್ನು ಗಂಭೀರವಾಗಿ ಯೋಚಿಸುತ್ತಿರುವೆ.

ತೇಜಸ್ವಿನಿ ಹೆಗಡೆ ಹೇಳಿದರು...

ನನ್ನೀ ಪುಟ್ಟ ಹೋರಾಟಕ್ಕೆ ಬೆಂಬಲವನ್ನಿತ್ತು ಪ್ರೋತ್ಸಾಹಿಸಿದ, ನನ್ನ ಜೊತೆಗೂಡಿದ ಎಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು. ಈ ಬರಹದ ಮೂಲಕ ನಾನು ಮಾಡಿಕೊಂಡಿರುವ ಮನವಿಯನ್ನು ನೀವು ಸದಾ ನೆನಪಿನಲ್ಲಿಡುವಿರೆಂದು ಆಶಿಸುವೆ. ನನಗೆ ಎರಡು ಮುಖ್ಯ ಉದ್ದೇಶಗಳಿದ್ದವು. ಒಂದು ಆ ವೈದ್ಯನ ಕಣ್ತೆರೆಸುವುದು(ಸಾಧ್ಯವಾದರೆ?) ಹಾಗೇಯೇ ಅಂತಹ ಅಮಾನವೀಯ ಯೋಚನೆಗಳಿರುವ ವೈದ್ಯರನ್ನು ಎಚ್ಚರಿಸುವುದು(ಇದು ಎಷ್ಟರಮಟ್ಟಿಗೆ ಸಾಧ್ಯವಾಗಿದೆ ಎಂದು ತಿಳಿಯೆ!!)
ಎರಡನೆಯದಾಗಿ ನನ್ನ ಸ್ನೇಹಿತರಲ್ಲಿ, ಆತ್ಮೀಯರಲ್ಲಿ, ಪರಿಚಿತರಲ್ಲಿ ಜಾಗೃತಿಮೂಡಿಸುವುದು. ತಮ್ಮ ನೆರೆಹೊರೆಯಲ್ಲೋ ಅಫೀಸಿನಲ್ಲೋ ಇಲ್ಲಾ ಸಮಾಜದಲ್ಲೋ ಎಲ್ಲಾದರೂ ಅಂಗವಿಕಲರಿಗೆ ಅನ್ಯಾಯ, ಅವಮಾನ, ದೌರ್ಜನ್ಯಗಳಾಗುತ್ತಿದ್ದರೆ ಅವರೂ ಎಚ್ಚೆತ್ತುಕೊಂಡು ಅವರ ಬೆಂಬಲಕ್ಕೆ ಬರುವಂತಾಗಲೀ, ಪ್ರತಿಭಟಿಸುವ ಜಾಗೃತಿಮೂಡುವಂತಾಗಲಿ ಎಂದು. ಈ ನಿಟ್ಟಿನಲ್ಲಿ(ಅಂದರೆ ಎರಡನೆಯ ಉದ್ದೇಶದಲ್ಲಿ) ನಾನು ಸಾಕಷ್ಟು ಯಶಸ್ವಿಯಾಗಿರುವೆನೆಂದು ತಿಳಿದಿರುವೆ.

ಮತ್ತೊಮ್ಮೆ ತಮಗೆಲ್ಲಾ ನನ್ನ ಕೃತಜ್ಞತೆಗಳು.

@ ವಿನಾಯಕ ಕೆ.ಎಸ್. ಅವರೆ,

ಎಲ್ಲರ ಪಾಡು ಒಂದೆಲ್ಲಾ ಒಂದು ರೀತಿಯಲ್ಲಿ ವ್ಯವಸ್ಥೆಯೊಳಗಣ ಅವ್ಯವಸ್ಥೆಗೆ ಗುರಿಯಾಗಿರುತ್ತದೆಯೇ. ಹಾಗೆಂದು ಅಸಹಾಯಕತೆಯನ್ನಾಗಲೀ, ಆಕ್ರೋಶವನ್ನು ಪ್ರಕಟಿಸುವುದರಿಂದಾಗಲೀ, ಇದು ಹೀಗೇ.. ಇದರಲ್ಲೇ ನಾವು ಏಗಬೇಕೆಂಬ ನಿರ್ಲಿಪ್ತತೆಯನ್ನು ಹೊಂದುವುದರಿಂದಾಗಲೀ ಯಾವ (ಅ)ವ್ಯವಸ್ಥೆಯನ್ನೂ ಸರಿಪಡಿಸಲಾಗದು. ನಮ್ಮ ಪಾಡು ಇಷ್ಟೇ, ಇದರಲ್ಲೇ ಸುಖ ನೋಡಬೇಕೆಂದುಕೊಂಡಿದ್ದರೆ ನಮಗೆ ಸ್ವಾತಂತ್ರ್ಯವೇ ದೊಕುತ್ತಿರಲಿಲ್ಲ ಅಲ್ಲವೇ? ನಾನು ಮೊದಲ ಲೇಖನದಲ್ಲೇ ಬರೆದಿರುವೆ. ಬದಲಾವಣೆ ಎಂಬುದು ಒಂದು ದಿನದಲ್ಲೋ ಇಲ್ಲಾ ಒಂದು ಭಾಷಣದ ಮೂಲಕವೋ ಇಲ್ಲಾ ಒಂದು ಬರಹದಿಂದಲೋ ಬರುವಂತಹದ್ದಲ್ಲ. ಆದರೆ ಎಲ್ಲಿಂದಲಾದರೂ ಒಂದು ಸಣ್ಣ ಆರಂಭ ಆಗಲೇ ಬೇಕು ತಾನೆ? ಆ ಆರಂಭವನ್ನಷ್ಟೇ ನಾನು ಮಾಡಿರುವುದು. ಆದರೆ ಇದು ಅಂತಿಮವಂತೂ ಖಂಡಿತ ಅಲ್ಲ. ನನಗನ್ನಿಸಿದ್ದನ್ನು ನೇರವಾಗಿ ಹೇಳಿರುವೆ. ದಯವಿಟ್ಟು ಅನ್ಯಥಾ ಭಾವಿಸದರಿ ಎಂದು ವಿನಂತಿಸುವೆ.

ಧನ್ಯವಾದಗಳು.

suragi \ ushakattemane ಹೇಳಿದರು...

ಬದಲಾವಣೆಯ ಬೀಜ ಮಹಲುಗಳಲ್ಲಿ ಹುಟ್ಟುವುದಿಲ್ಲ ತೇಜಸ್ವಿನಿ, ಅದು ಚಿಕ್ಕ ಪುಟ್ಟ ಕಾಫಿ ಹೌಸ್ ಗಳಲ್ಲಿ ಮೊಳಕೆಯೊಡೆಯುತ್ತವೆ.
ನಿಮ್ಮ ಬರಹಗಳು ಮತ್ತು ಸ್ಪಂದನೆಗಳು ಆಪ್ತವಾಗಿರುತ್ತವೆ.

Shiv ಹೇಳಿದರು...

ತೇಜಸ್ವಿನಿಯವರೇ,

ಗುರಿಯೆಡೆಗೆ ನೀವು ಇಟ್ಟ ಮೊದಲ ಹೆಜ್ಜೆಗೆ ಸಿಕ್ಕ ಜಯ ಇದು. ಅಭಿನಂದನೆಗಳು !

ನೀವು ನೆಟ್ಟ ಜಾಗೃತಿಯ ಸಸಿ ಬೆಳಯಲಿ ಹೆಮ್ಮರವಾಗಲಿ..

ಚಿತ್ರಾಕರ್ಕೇರಾ, ದೋಳ್ಪಾಡಿ ಹೇಳಿದರು...

ನಿಮ್ಮ ಬರಹ ಓದುತ್ತಿದ್ದಂತೆ ಪತ್ರಿಕೆಗಳ ಬಗ್ಗೆ ಮಾತಾಡಿ ಹಿರಿಯರೊಬ್ಬರು 'ಸಾಮಾನ್ಯರ ಅಸಾಮಾನ್ಯ ಮಾತುಗಳು' ಕೇಳಿಸುವಿದಿಲ್ಲ ಎಂದು ಹೇಳಿದ್ದು ನೆನಪಾಯಿತು. ಇಂಥ ದನಿಗಳಿಗೆ ಮಾಧ್ಯಮಗಳೇ ವೇದಿಕೆಯಾಗಬೇಕು..ಆದರೆ ಎಲ್ಲವೂ ನಾವಂದುಕೊಂಡಂತೆ ಆಗುತ್ತಿಲ್ಲ. ಉದಯವಾಣಿಗೆ ಥ್ಯಾಂಕ್ಸ್ ಹೇಳೋಣ..ಜೊತೆಗೆ ನಿಮ್ಮ ಹೋರಾಟದ ಹಾದಿಗೆ ನಮ್ಮದೂ ಸಾಥ್ ಇದೆ..ಶುಭವಾಗಲಿ ಅಕ್ಕಾ..
ತುಂಬು ಪ್ರೀತಿ,
ಚಿತ್ರಾ

Shashi Dodderi ಹೇಳಿದರು...

I am with you

ತೇಜಸ್ವಿನಿ ಹೆಗಡೆ ಹೇಳಿದರು...

ಚಿತ್ರ, ಶಶಿ, ಶಿವ್ ಹಾಗೂ ಸುರಗಿ ಅವರೆ,

ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು. ಪ್ರೋತ್ಸಾಹ ಹೀಗೇ ಇರಲೆಂದು ಹಾರೈಸುವೆ :)

ಬಿಸಿಲ ಹನಿ ಹೇಳಿದರು...

ನಿಮ್ಮ ಹೋರಾಟಕ್ಕೆ ಜಯವಾಗಲಿ.

HEARING IMPAIRED CAR DRIVING EXPERIENCE ಹೇಳಿದರು...

article is very good, some one wrote article wih big title and for a full page
but there have no meaning in it
no backgrounds available
only for publicity
but your article is good awarnes
who would like to with disabled people
i am really happy about you
article that you posted was an moral, inspiration and last one is encouragement to one and all

Kannada Kuvara ಹೇಳಿದರು...

nimma I vichara tumba mechigeyayitu.
Dhanyavaada.

Unknown ಹೇಳಿದರು...

ನಿಮ್ಮ ಎರಡೂ ಬರಹಗಳನ್ನು ನೋಡಿದೆ. ಯಕಶ್ಚಿತ್ ಡಾಕ್ಟರ್ ನ ವೈದ್ಯ ಧರ್ಮ ವಿರೋಧೀ ನಡೆವಳಿಕೆ ಬಗ್ಗೆ ನಿಮ್ಮ ಭಾವನೆಗಳು, ಹಾಗೂ ಪ್ರತಿಭಟನೆ ಮೆಚ್ಚಬೇಕಾದ್ದೇ. ಆದರೆ ನನಗೆ ಅದೆಲ್ಲಕ್ಕಿಂತ ಘಾಸಿಯಾದದ್ದು ನಿಮ್ಮ ಮೆಚ್ಚಿನ ವಿದ್ಯಾಭ್ಯಾಸ ಮಾಡಲಾಗಲಿಲ್ಲ ಎಂಬುದು. ಇದನ್ನೇ ನಾನು ಸಮಾಜದ ಅಂಗವಿಕಲತೆ ಎಂದು ಕರೆದಿರುವುದು.ನಾವು ಕರ್ನಾಟಕ ರಾಜ್ಯ ಅಂಗವಿಕಲರ ಮತ್ತು ಪಾಲಕರ ಒಕ್ಕೂಟ ಎಂಬ ಸಂಘಟನೆಯ ಮೂಲಕ ರಾಜ್ಯದಲ್ಲಿ ಮುಖ್ಯವಾಗಿ ಹಳ್ಳಿಗಾಡಿನ ಅಂಗವಿಕಲರ ನಡುವೆ ಕೆಲಸ ಮಾಡುತ್ತಿದ್ದೇವೆ.ಪ್ರತಿ ಹಳ್ಳಿ ಹಾಗೂ ಪ್ರತಿ ವಾರ್ಡ್ ನಲ್ಲಿಯೂ ಈ ಸಂಘ ಕಟ್ಟಿ ಅಖಿಲ ಭಾರತದವರೆಗೂ ಬೆಳೆಸಬೇಕೆಂಬುದು ನಮ್ಮ ಮಹತ್ವಾಕಾಂಕ್ಷೆ.ಆಗ ಮಾತ್ರ ಇಡೀ ಅಂಗವಿಕಲರ ಧ್ವನಿಗೆ ಮಾನ್ಯತೆ,ಅವರ ಸಮಸ್ಯೆಗಳಿಗೆ ಪರಿಹಾರ ಎಂದು ಕಂಡುಕೊಂಡಿದ್ದೇವೆ. ವಿವಿಧ ರಾಜ್ಯಗಳಲ್ಲಿ ಈಗಾಗಲೇ ಇಂತಹ ಸಂಘಟನೆಯನ್ನು ಬೆಳೆಸುತ್ತಾ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ರೂಪಿಸಿದ್ದೇವೆ. ನಿಮ್ಮ ಕವನ ಬಹಳ ಚೆನ್ನಾಗಿದೆ. ಈ ರೀತಿಯ ಕವನಗಳಿದ್ದರೆ ತಿಳಿಸಿ ಅವನ್ನು ಹಾಡುಗಳಾಗಿ ಬಳಸಿಕೊಳ್ಳಲು ಅನುಮತಿ ಕೊಡಿ.ವಿಳಾಸ : ಸಂಕ್ರಾಂತಿ,235,17ನೇ ಮೇನ್,ನಂದಿನಿ ಲೇ ಔಟ್,ಬೆಂಗಳೂರು 560096. ಮಿಂಚಂಚೆ : vishishtakar@gmail.com,yshaswigulur@yahoo.com facebook : GNyashaswi