ಗುರುವಾರ, ಮೇ 22, 2008

ಕಥೆ



(ಅ)ಬಲೆ


ಗಣಪ ಗಣಪ ಏಕದಂತ ಪಚ್ಚೆ ಕಲ್ಲು ಪಾಣಿ ಪೀಠ,
ಮುತ್ತಿನುಂಡೆ, ಹೊನ್ನ ಗಂಟೆ,
ಒಪ್ಪುವ ಒಪ್ಪುವಶ್ರೀ ವಿಘ್ನೇಶ್ವರನಿಗೆ ಜಯವಾಗಲಿ’

- ಎಂದು ದೇವರಿಗೆ ಅಡ್ಡ ಬಿದ್ದು ಪಾಟೀ ಚೀಲವೇರಿಸಿ ಶಾಲೆಗೆ ಹೊರಡಲನುವಾದಳು ಕಮಲ. ಆಗಷ್ಟೇ ಅಡುಗೆ ಮನೆಯಿಂದ ಬಂದ ಶಾಂತಳಿಗೆ ಮಗಳು ಹೊರಟಿದ್ದು ಕಂಡು ಆಶ್ಚರ್ಯವಾಯಿತು.

"ಕಮಲಿ ನಿನ್ನೆನೇ ನಾ ಹೇಳಿದ್ನಿಲ್ಯ ನೀ ಇವತ್ತು ಶಾಲಿಗೆ ಹೋಪಲಾಗ್ತಿಲ್ಲೆ ಹೇಳಿ. ಬೇಗ ಹಿತ್ಲಿಗೆ ಹೋಗಿ ಹೂವೆಲ್ಲಾ ಕೊಯ್ಕ ಬಾ. ಬಿಸಲೇರಿದ್ರೆ ಬಾಡಿ ಹೋಗ್ತು. ಯಂಗ್ ಬೇರೆ ಏನೂ ಕೂಡ್ತಿಲ್ಲೆ, ನಿನ್ನೆ ರಾತ್ರಿಯಿಂದನೇ ದಮ್ಮು ಕಟ್ತಾ ಇದ್ದು. ತಮ್ಮಂಗೆ ಬೇರೆ ಜ್ವರ ಬಂಜು ಸಂಜೆಯಾದ್ರೂ ಔಷಧಿಗೆ ಹೋಗವು. ನಡಿ ಮೊದ್ಲು." ಅಮ್ಮನ ಮಾತು ಕೇಳಿ ಕಮಲಿಯ ಮುಖ ಚಿಕ್ಕದಾಯಿತು. “ಆಯಿ ನಾ ಇವತ್ತು ಶಾಲಿಗೆ ಹೋಗಲೇಬೇಕು. ಬಾಬಣ್ಣ ಮಾಸ್ಟ್ರು ಹೊಸ ಸಂಗೀತ ಹೇಳಿಕೊ ಡ್ತರಡ. ಇವತ್ತೊಂದಿನ ಹೂವಿನ ಮಾಲೆಗಳನ್ನ ಮಾಡ್ದೇ ಹೋದ್ರೆ ಎಂತ ಆಗ್ತು? ನಾ ಹೋಪಂವನೇಯಾ” ಎಂದು ಮುಖ ಊದಿಸಿದಳು. ಮಗಳ ಮಾತು ಕೇಳಿ ಶಾಂತಳಿಗೆ ಸಿಟ್ಟೇ ಬಂತು.

ನಿಂಗೆ ಒಂದ್ಸಲ ಹೇಳಿರೆ ಅರ್ಥ ಆಗ್ತಿಲ್ಯ? ಎಂಟು ವರ್ಷದ ಕೋಣ, ಮನೆ ಪರಿಸ್ಥಿತಿ ಗೊತ್ತಿದ್ದೂ ಹಿಂಗ್ ಮಾತಾಡ್ತೆ! ನಿನ್ನ ಅಪ್ಪ ಹೇಳಂವ ಕುಡ್ದು ಹಾಳಾಗಿ ಯಂಗಳನ್ನೆಲ್ಲಾ ಅನಾಥರ ಮಾಡಿ ಹೋದ. ಇನ್ನು ನಾನೋ ದಮ್ಮ ಹಿಡ್ಕಿ , ಹೂ ಮಾರಿ ಬಂದ್ ಹಣದಲ್ಲಿ ನಾಲ್ಕ ಕಾಸಾದ್ರೂ ಬತ್ತು. ತಮ್ಮನ ಔಷಧಿ, ನಂಗಕಗೆ ಒಂದ್ಹೊ ತ್ತಿನ ಊಟನೂ ಸಿಗ್ತು. ನಾ ಹೋಗಿ ಹೂ ಮಾರಾನ ಅಂದ್ರೆ ಇವ್ನ ಹೊತ್ಕ ಹೋಗವು. ನಿನ್ನ ಶಾಲೆಗೆ ಮಣ್ಣ ಹಾಕು. ನೀ ಕಲ್ತು ಗುಡ್ಡೆ ಹಾಕುದ್ರಲ್ಲಿ ಅಷ್ಟೇ ಇದ್ದು. ದೂಸರಾ ಮಾತು ಬೇಡ. ನಡಿ ಮೊದ್ಲು. ಎಂದು ಚೆನ್ನಾಗಿ ಗದರಿ ಬಚ್ಚಲಿಗೆ ನಡೆದಳು, ತುಂಬಿದ ಕಣ್ಣೀರು ಮಗಳಿಗೆ ಕಾಣಬಾರದೆಂದು. ತನ್ನ ಅಸಹಾಯಕತೆಗೆ ಮಗಳನ್ನು ಬಲಿ ಕೊಡುತ್ತಿರುವುದು ಶಾಂತಳಿಗೆ ತುಂಬಾ ಹಿಂಸೆಯಾಗುತ್ತಿತ್ತು. ಆದರೆ ಮನೆಯೊಡಯನಿಲ್ಲದ ಮನೆ, ದೇವನಿಲ್ಲದ ಗುಡಿಯಂತಾಗಿತ್ತು. ಕಾಯುವವ ಮೇಲಿದ್ದಾನೆಂದು ಮಾತ್ರ ಆಕೆ ನಂಬಿದ್ದಳು. ಹಂಡೆಗೆ ನೀರು ತುಂಬಿಸಿ, ಬೆಂಕಿ ಹಾಕಲು ಕುಳಿತರೆ ಹಸಿ ಕಟ್ಟಿಗೆ ಉರಿಯಲೊಲ್ಲೆ ಎನ್ನಲು, ಕಣ್ಣೀರು ಧಾರೆಯಾಗಿ ಹರಿಯಿತು..

ಇತ್ತ ಕಮಲಳ ಕಣ್ಗಳೂ ತುಂಬಿದ ಕೊಡಗಳಾದವು. ಹಾಸಿಗೆಯಲ್ಲಿದ್ದ ತಮ್ಮನು ಕಾಣಲು ಕಣ್ಣೊರೆಸಿ ಕೊಂಡು, ಭಾರವಾದ ಹೆಜ್ಜೆಗಳೊಂದಿಗೆ ಹಿತ್ತಲಿಗೆ ನಡೆದಳು. "ಹಾಳಾದ್ ಗೀತ ಶಾಪ ಹಾಕಿರವು ನಂಗೆ... ನಾ ಇವತ್ತು ಬರ್‍ಲಾಗ ಹೇಳಿ. ಅದ್ರಕ್ಕಿಂತ ಚೊಲೋ ಹಾಡ್ತಿ ನೋಡು ಅದಕೇಯಾ.. ಇರಲಿ ಒಂದ್ ದಿನ ಹೋದ್ರೆ ಏನಾತು? ನಾಳೆ ನಾನೇ ಚೊಲೋ ಹೇಳಿ ಅದ್ರ ಸೊಕ್ಕ ಮುರೀತಿ. ಅಮ್ಮಂಗೆ ಎಂತ ತೆಳೀತು? ನಾ ಕಲ್ತರೆ ದೊಡ್ಡ ಆಫೀಸರ್ ಆಗಿ ತಮ್ಮನ್ನೂ ಚೆನ್ನಾಗಿ ನೋಡ್ಕಂಬಲೆ ಆಗ್ತಿಲ್ಯ? ಆಮ್ಮನ ಹತ್ರಾ ಮಾತಾಡವು ಕಡಿಗೆ” ತನ್ನೊಳಗೇ ಹಲುಬುತ್ತಾ ಹೂ ತೋಟಕ್ಕೆ ಬಂದಳು ಕಮಲ.

ತೋಟದ ತುಂಬೆಲ್ಲಾ ಹೂವುಗಳು ಆರಳಿ ನಗುತ್ತಿದ್ದವು , ನಾಳೆಯ ಹಂಗು ನಮಗಿಲ್ಲ ಎಂಬಂತೆ. ಇನ್ನೂ ಬಿಸಿಲೇರದಿದ್ದ ಕಾರಣ ಘಟ್ಟದ ತಂಪುಗಾಳಿ ಹಿತವಾಗಿ ಬೀಸಿ ಕಮಲಿಗೆ ಸ್ವಾಗತ ಕೋರಿದವು. ಜಾಜಿ, ಗೊಂಡೆ, ಸಂಪಿಗೆ, ಕೇದಿಗೆ, ಅಬ್ಬಮಲ್ಲಿಗೆ, ಗುಲಾಬಿ, ಡೇರೆ ಹತ್ತು ಹಲವು ಬಗೆಗಳ ಹೂಗಳನ್ನು ನೋಡಿ ಹುಡುಗಿಯ ಮೊಗದಲೂ ನಗುವರಳಿತು. ‘ಛೇ ಈಗ ಮೂಲೆ ಮನೆ ಲತಾ ಇದ್ದಿದ್ರೆ ಎಷ್ಟು ಚೊಲೋ ಆಗ್ತಿತ್ತು?! ನಾನೂ ಅದು ಸೇರಿ ಮೊನ್ನೆ ಶಾಲೇಲಿ ಕಲ್ತ ಹಾಡನ್ನು ಕುಣಿಯಲಾಗ್ತಿತ್ತು...’ ಮನದಲ್ಲೇ ಅಂದುಕೊಂಡರೂ ಹಾಡು ಬಾಯಿಗೆ ಬಂದಾಗಿತ್ತು.

ಬಾ ಸಖಿ ಆಡುವಾ ಬಾಲೆಯರೆಲ್ಲಾ ಕೂಡುವಾ
ಲೇಸಿನಿಂದ ಆಡುವಾಗ ಬೇಸರವನ್ನೇ ಕಳೆಯುವಾ

ಚೊಕ್ಕ ಕೊಳದ ನೀರನ್ನು ಪುಟ್ಟ ಕೊಡಕೆ ತುಂಬುವಾ
ಅಕ್ಕರೆಯಿಂದ ತಂದು ನಾವು ಚಿಕ್ಕ ಸಸಿಗೆ ಎರೆಯುವಾ

ಹಸಿರು ವನಕೆ ಪೋಗುವಾ ಕುಸುಮಗಳನು ಕೊಯ್ಯುವಾ
ಹಸನವಾದ ಮಾಲೆ ಮಾಡಿ ಕರಿಯ ಜಡೆಗೆ ಮುಡಿಯುವಾ

ಬಾ ಸಖಿ ಆಡುವಾ ಬಾಲೆಯರೆಲ್ಲಾ ಕೂಡುವಾ
ಲೇಸಿನಿಂದ ಆಡುವಾಗ ಬೇಸರವನ್ನೇ ಕಳೆಯುವಾ..

ಹಾಡುತ್ತಾ,ಕುಣಿಯುತ್ತಾ ತನ್ನ ಮನದ ಬೇಸರವನ್ನೆಲ್ಲಾ ಕಳೆಯುತ್ತಾ ಹೂಗಳನ್ನೆಲ್ಲಾ ಕೊಯ್ದು ಬುಟ್ಟಿಯೊಳಗೆ ತುಂಬಿದಳು. ವೇಳೆಯಾಯಿತು ಅಮ್ಮ ಬೈವಳೆಂದುಕೊಳ್ಳುತ್ತಾ ಮನೆಯ ಕಡೆ ಓಡಿದಳು. ಹೊತ್ತಾದರೂ ಬರದ ಮಗಳನ್ನು ಕಾಯುತ್ತಾ ಅಲ್ಲೇ ಜಗುಲಿಯಲ್ಲಿ ಕುಳಿತಿದ್ದಳು ಶಾಂತಾ. ತೊಡೆಯಲ್ಲಿ ಮಗ ನರಳುತ್ತಿದ್ದರೆ, ದಮ್ಮಿನ ಖೆಮ್ಮು ಆಕೆಯ ಎದೆಗೂಡನ್ನು ಒತ್ತಿ ಮೇಲೇರಿ ಬರುತ್ತಿತ್ತು. “ಎಂತಕ್ಕೆ ಇಷ್ಟೊತ್ತಾತು ಕೂಸೆ? ನಿಂಗೊಚೂರು ಸಮಯದ ಬೆಲೆ ಗೊತ್ತಿಲ್ಲೆ. ಆಟ-ಕುಣಿತ ಒಂದೇಯಾ.. ಹೊತ್ತಾದ್ರೆ ಹೂ ಮಾಲೆಯೆಲ್ಲಾ ಬಾಡ್ಹೋಗ್ತಿಲ್ಯ? ಕಡಿಗೆ ಯಾರು ತಗತ್ತ ಅದ್ನ? ದೊಡ್ಡ ರಸ್ತೆಗೆ ಹೋಪಲೆ ಒಂದ್ ಮೈಲಿ ನಡ್ಕ ಬೇರೆ ಹೋಗವು.ಸರಿ ತಾ ಮಾಲೆ ಮಾಡನ” ಎಂದು ಅವಸರಿಸಿ ಬುಟ್ಟಿ ಎಳೆದು ಕೊಂಡಳು. ಕೆಲವೇ ಮಿಷಗಳಲ್ಲಿ ಕನಕಾಂಬರ, ಮಲ್ಲಿಗೆ, ಜಾಜಿ ಮುಂತಾದ ಹೂಗಳ ಸುಂದರ ಮಾಲೆ ತಯಾರಾದವೂ. ಹಿಂದಿನ ರಾತ್ರಿಯೇ ನೀರಲ್ಲಿ ನೆನಸಿಟ್ಟ ಬಾಳೆ ನಾರಿನಲ್ಲಿ ಮುತ್ತುಗಳನ್ನು ಪೋಣಿಸಿಟ್ಟಂತೆ ಹೂವುಗಳು ನಗುತ್ತಿದ್ದವು.. ಗಿಡದಲ್ಲಿದ್ದರೂ ಇಲ್ಲದಿದ್ದರೂ ನಗುವುದು ನಮ್ಮ ಸಹಜ ಧರ್ಮವೋ ಎಂಬಂತೆ. ಅಮ್ಮನ ಕೈ ಚಳಕ ನೋಡಿ ಕಮಲಿಗೆ ಹೆಮ್ಮೆಯಾಯಿತು. ಒಂದು ಮೊಳ ಹೂವನ್ನಾದರೂ ಅಮ್ಮ ಆಕೆಯ ಹಾವಿನಂತಹ ಕರಿಯ ಜಡೆಗೆ ಮುಡಿದಿರೆ ಎಷ್ಟು ಚೆನ್ನ ಎಂದೆಸಿತು. ಕೇಳಲು ಭಯ, ಒಮ್ಮೆ ಹಾಗೆ ಕೇಳಿಸಿಕೊಂಡು ಚೆನ್ನಾಗಿ ಬೈಸಿಕೊಂಡಿದ್ದಳು. ಕುಡಿದ ಮತ್ತಿನಲ್ಲಿ ಅಪ್ಪ ಬಂದು ಅಮ್ಮನ ಹೊಡೆಯುವಾಗ ಆಕೆಗೆ ಅನಿಸಿದ್ದುಂಟು ‘ಈ ಅಪ್ಪ ಹೇಳಂವ ಯಾಕಾದ್ರೂ ಇದ್ನೋ ಎಂತೋ’ ಎಂದು. ಆದರೆ ಈಗ ಅಮ್ಮ ತಾನೇ ನೆಟ್ಟು ಬೆಳಿಸಿ ಕಟ್ಟುವ ಹೂ ಮಾಲೆ ಮುಡಿಯದಂತಾಗಿರಲು ತುಂಬಾ ನೋವಾಗುತ್ತಿತ್ತು, ಅಮ್ಮ ಹೂ ಮುಡಿಲಿಕ್ಕಾದರೂ ಅಪ್ಪ ಇರಬೇಕಿತ್ತೆಂದುಕೊಳ್ಳುತ್ತಿದ್ದಳು.

ತಾಯಿ ಕೊಟ್ಟ ಗಂಜಿ ಕುಡಿದು ಬುಟ್ಟಿಯಲ್ಲಿ ಹೂಗಳನ್ನು ಹಾಕಿಕೊಂಡಳು.. ನೀರನ್ನು ಸಿಂಪಡಿಸಿಕೊಮಡು ಸವೆದ ಚಪ್ಪಲಿಗಳನ್ನೇರಿಸಿ ಹೊರಟಳು ಕಮಲ. ಹನಿ ತುಂಬಿದ ಕಣ್ಗಳಿಂದ ಮಗಳು ಹೋಗುವುದನ್ನೇ ನೋಡುತ್ತಿದ್ದಳು ಶಾಂತ. ಹೊಟ್ಟೆಯೊಳಗೆ ಎನೋ ತಳಮಳ. ಯಾರೋ ಕರುಳ ಬಳ್ಳಿಗೇ ಕತ್ತರಿ ಹಾಕಿದಂತೆ, ಒಳಗೆ ಮಗನ ನರಳುವಿಕೆ ಕೇಳಲು ಒಳನಡೆದಳು.

ಮನೆಯಿಂದ ಹೆದ್ದಾರಿ ಸುಮಾರು ಒಂದು ಮೈಲಿಯಷ್ಟು ದೂರವಿತ್ತು. ಸೂರ್ಯ ನೆತ್ತಿಯ ಕಡೆ ವಾಲುತ್ತಿದ್ದ. ಅಕ್ಕಪಕ್ಕದಲ್ಲೆಲ್ಲೂ ಮನೆಗಳಿಲ್ಲ. ಹುಲ್ಲು ಮುಳಿಗಳಿಂದ ತುಂಬಿದ ಗುಡ್ಡ. ಮಣ್ಣಿನ ದಾರಿಯಲ್ಲಿದ್ದ ಕಲ್ಲೊಂದು ಸವೆದ ಚಪ್ಪಲಿಯ ತೂರಿ ಎಡಗಾಲಿಗೆ ಬಡಿಯಲು, ಕಣ್ಣಲ್ಲಿ ನೀರು ಬಂತು ‘ಅಮ್ಮಾ..’ ಎಂದು ಕೂಗುತ್ತಾ ಅಲ್ಲೇ ಕುಳಿತಳು. ತುಸು ಸಾವರಿಸಿಕೊಂಡು ಆ ಕಲ್ಲನ್ನೇ ಕೋಪದಿಂದ ನೋಡುತ್ತಾ ಬಲಗಾಲಿನಿಂದ ತನ್ನ ಶಕಿಯನ್ನೆಲ್ಲಾ ಹಾಕಿ ಒದ್ದಳು... ತನ್ನೊಳಗಿನ ಆಸೆಗಳನ್ನೆಲ್ಲಾ ಎತ್ತಿ ಎಸೆಯುವಂತೆ. ’ಅಮ್ಮಂಗೆ ಹೇಳವು ಶಿರಸಿ ಜಾತ್ರೆಗೆ ನಂಗೆ ಹೊಸ ಅಂಗಿ ಬೇಡ, ಚಪ್ಪಲಿನೇ ತೆಗ್ಸಿಕೊಡು ಹೇಳಿ..' ಎಂದುಕೊಳ್ಳುತ್ತಾ ಮುಂದೆ ಸಾಗಿದರೆ, ಕಂಡಿತು ಕುಸುಮಾಲೆ ಹಣ್ಣು. ಕೆಂಪಾಗಿ, ನುಣ್ಣಗಿದ್ದ ಹಣ್ಣುಗಳನ್ನು ತಿನ್ನುತ್ತಾ ಕಾಲಿನ ಗಾಯದ ನೋವು ಮರೆಯಾಯಿತು. ಹಣ್ಣುಗಳನ್ನು ತಿನ್ನುತ್ತಾ, ಹಾಡುಗಳನ್ನು ಗುನಗುಸುತ್ತಾ ಹೆದ್ದಾರಿಯನ್ನು ಸೇರುವಾಗ ತಾಸೇ ಕಳೆದಿತ್ತು. ಕಿವಿಯಿಂದಿಳಿದು ಕೆನ್ನೆ ಸೇರಿದ ಬೆವರನ್ನು ಅಂಗಿಯ ತುದಿಯಲ್ಲಿ ಒರೆಸಿಕೊಳ್ಳುತ್ತಾ ಮರದ ಬುಡವೊಂದಕ್ಕೆ ಬಂದಳು ಕಮಲ.

ಸುಮಾರು ತಾಸುಗಳೇ ಕಳೆದವು. ಮನುಷ್ಯರ ಸುಳಿವೇ ಇಲ್ಲಾ . ಪೇಟೆಯ ಕಡೆ ಹೋಗುವ ಗಾಡಿಗಳಿಗೆಲ್ಲಾ ಕೈ ಮಾಡಿ ಸೋತು ಹೋದಳು. ಯಾರೊಬ್ಬರೂ ಕಮಲಿಯನ್ನಾಗಲಿ, ಕೈಯಲ್ಲಿದ್ದ ಮಾಲೆಗಳನ್ನಾಗಲೀ ಕಣ್ಣೆತ್ತೂ ನೋಡಲಿಲ್ಲ. ಸಮಯ ಕಳೆಯಲು ಹೊಟ್ಟೆ ಚುರುಗುಟ್ಟಿತು. ಪಕ್ಕದಲ್ಲೇ ಇದ್ದ ಬೋರ್‌ವೆಲ್ ನೀರನ್ನು ಕುಡಿದು ತಂಪಾಗಿಸಿಕೊಂಡು, ಮಾಲೆಗಳು ಬಾಡದಂತಿಡಲು ಸ್ವಲ್ಪ ನೀರನ್ನು ಚಿಮುಕಿಸಿಕೊಂಡಳು.

ರವಿ ಈಗ ತನ್ನ ಪ್ರಖರತೆಯನ್ನು ಕಳೆದುಕೊಳ್ಳತೊಡಗಿದ್ದ. ಕಮಲಿಯ ಮನ ಬೇಸರದ ಗೂಡಾಗಿತ್ತು. ಸಂಜೆಯಾಗುವುದರೊಳಗೆ ಮಾಲೆಗಳನ್ನು ಮಾರಿ ಮನೆಯನ್ನು ಬೇರೆ ಸೇರಬೇಕಿತ್ತು. ಮನೆಯ ನೆನಪಾದೊಡನೆ ಕಣ್ಣಲ್ಲಿ ನೀರು ಬಂತು. ಮಾವಿನ ಮರದ ಕೋಗಿಲೆಯೊಂದು ಕುಹೂ .. ಎನ್ನಲು, ಕಣ್ಣೀರೊರೆಸಿಕೊಂಡು ತಾನೂ 'ಕುಹೂ..' ಎಂದಳು, ಆಕೆಯ ನೋವಿಗೆ ತನ್ನ ಹಾಡೊಂದೇ ಮದ್ದು ಎಂಬಂತೆ ಕೋಗಿಲೆ ಮತ್ತೆ ಮಾರ್ದಯಿತು. ಹೀಗೇ ಮತ್ತಷ್ಟು ತಾಸುಗಳು ಕಳೆದವು. ಜನರ ಸುಳಿವೆ ಇಲ್ಲಾ. ಸಮಯ ಜಾರಿದಂತೆ ಮಲ್ಲಿಯ ಮನದಲ್ಲಿ ರಾಸೆಯ ಕಾರ್ಮೋಡ ಕವಿದು ಕಣ್ಣೀರು ಬಂತು. ಇನ್ನು ಯಾರೂ ಕೊಳ್ಳರೆಂದುಕೊಳ್ಳುತ್ತಾ ಸೋತ ಹೆಜ್ಜೆಯನ್ನು ಹಾಕಿದಳು ಮನೆಯ ಕಡೆಗೆ.

ಆಗ ಕೇಳಿತು ದೂರದಲ್ಲೇಲ್ಲೋ ಕಾರಿನ ಸದ್ದು. ಕವಿದ ಕಾರ್ಮೋಡ ಸೀಳಿ ಆಶಾ ಕಿರಣಮೂಡಿದಂತಾಯಿತು. ಪುಟ್ಟ ಕೈಯನ್ನು ಇಷ್ಟುದ್ದ ಮಾಡಿ ಇದ್ದುದರಲ್ಲಿಯೇ ಚೆನ್ನಾದ ಮಾಲೆಗಳನ್ನು ಮುಂದೆಮಾಡಿದಳು. ಹಸಿವು, ಆಯಾಸಗಳಿಂದ ಬಸವಳಿದ ಮುಖ, ಮಾಸಲು ಅಂಗಿ, ಕೆದರಿದ ಕೂದಲು, ಸವೆದ ಚಪ್ಪಲಿಗಳು- ದೈನ್ಯವೇ ಮೂರ್ತವೆತ್ತಂತೆ ನಿಂತಿದ್ದಳು ಕಮಲ. ಭರ್ರೆಂದು ಕಾರು ಅವಳ ದಾಟಿ ತುಸು ದೂರ ಹೊದರೂ ಮತ್ತೆ ತಿರುಗಿ ಅವಳ ಬಳಿ ಬಂದು ನಿಂತಿತು.

“ಸ್ವಲ್ಪ ಹೂ ತಗೊಳೋಣ್ವಾ? ಹೇಗಿದ್ರೂ ಪೇಟೆಲಿ ತಗೋ ಬೇಕು. ಲೇಟಾದ್ರೆ ಅಲ್ಲಿ ಸಿಗತ್ತೋ ಇಲ್ವೋ !” ಆಕೆ ಆತನನ್ನು ಕೇಳಿದಳು. ಕ್ಷಣ ಆತ ಯೋಚಿಸಿದ. ಏನೋ ಹೊಳೆದಂತಾಗಿ ಕಮಲಿಯ ಕಡೆ ತಿರುಗಿದ. ಆಸೆ ಕಣ್ಗಳು ಆತನ್ನೇ ದಿಟ್ಟಿಸುತ್ತಿದ್ದವು. ಲೇ ಹುಡುಗಿ ಎಷ್ಟು ಮೊಳವಿದೆ ಇಲ್ಲಿ ಎಂದು ಕೇಳದಾಕ್ಷಣ ಥಟ್ಟನೆ “ಏಳು ಮೊಳ ಅಣ್ಣ” ಎಂದುತ್ತರಿಸಿದಳು. “ಸರಿ ಹಾಗಿದ್ರೆ ಎಲ್ಲಾ ಮೊಳ ಕೊಡು. ತಗೋ ದುಡ್ಡು" ಎಂದು ನೂರರ ಎರಡು ನೋಟುಗಳನ್ನಿತ್ತ. ಅಷ್ಟೊಂದು ದುಡ್ಡನ್ನು ಕಮಲಿಯೆಂದೂ ಕಂಡಿದ್ದಿಲ್ಲ. ಅಯೋಮಯಗೊಂಡು ಆತನ್ನೇ ನೋಡಿದಳು. ಪಕ್ಕದಲ್ಲಿ ಕುಳಿತಿದ್ದಾಕೆ ಎನೋ ಹೇಳಲು ಹೋಗಲು ಕಣ್ಸನ್ನೆಯಲ್ಲೇ ಸುಮ್ಮನಾಗಿಸಿ “ಪರವಾಗಿಲ್ಲ ಇಟ್ಟುಕೋ..” ಎಂದು ಹೊರಟೇ ಬಿಟ್ಟ. ಕಮಲಿಗೆ ತುಂಬಾ ಸಂತೋಷವಾಯಿತು.. ಬೆಳಗಿನಿಂದ ಕಾದು ಸೋತಹೋಗಿದ್ದ ಅವಳಲ್ಲಿ ನವ ಚೈತನ್ಯ ತುಂಬಿದಂತಾಯಿತು. ‘ಬಾ ಸಖಿ ಆಡುವಾ ಬಾಲೆಯರೆಲ್ಲಾ ಕೂಡುವಾ..’ ಎಂದು ಹಾಡುತ್ತಾ, ಕುಣಿಯುತ್ತಾ, ನೋಟುಗಳನ್ನೇ ನೋಡುತ್ತಾ ಹೊಸ ಹುರುಪಿನಿಂದ ಮನೆಯ ಕಡೆ ಹೊರಟಳು, ಕಣ್ಣಲಿ ಹೊಸ ಅಂಗಿ, ಚಪ್ಪಲಿಗಳ ಕನಸುಗಳ ಹೊತ್ತು.

ಇತ್ತ ಕಾರೊಳಗೆ ಆಕೆ ಆತನನ್ನು ತರಾಟೆಗೆ ತೆಗೆದುಕೊಂಡಳು. “ದುಡ್ಡು ಹೆಚ್ಚಾಗಿದ್ಯಾ ನಿನಗೆ? ಒಂದ್ ಮೊಳ ಹೂವಿಗೂ ಅಳೆದೂ ಸುರಿದೂ ಚೌಕಾಶಿ ಮಾಡುವವ, ಇವತ್ತು ಸೊರಗಿದ ಅಷ್ಟೊಂದು ಮಾಲೆಗಳನ್ನ ತಗೊಂಡ್ಯಲ್ಲಾ? ಅಯ್ಯೋ ಪಾಪ ಚಿಕ್ಕ ಹುಡ್ಗಿ ಅಂತ ಒಂದ್ ಮೊಳ ತಗೋ ಅಂದ್ರೆ...ನೀನೂ ಸರಿ.. ಎಲ್ ಹೋಯ್ತು ನಿನ್ನ ಕಂಜೂಸ್ ಬುದ್ಧಿ? ” ಎಂದು ಕಿಚಾಯಿಸುತ್ತಾ ಆಕೆ ತಿರುಗಿದರೆ, ಆತ ನಗುತ್ತಿದ್ದ ! “ಲೇ ಮಂಕೆ ನಾನೇನೂ ಪೆದ್ದನಲ್ಲ...ಅವತ್ತು ನನಗೆ ಯಾರೋ ಟೋಪಿ ಹಾಕಿದ್ರು ಅಂದ್ನಲ್ಲಾ .. ಆ ನೋಟುಗಳನ್ನೇ ನಾನು ಕೊಟ್ಟಿದ್ದು ಆ ಹುಡುಗಿಗೆ... ಅವುಗಳು ಖೋಟಾ ನೋಟುಗಳು..ನಯಾ ಪೈಸೆ ಖರ್ಚಿಲ್ಲದೆ ನಿಂಗೆ ಇಷ್ಟೊಂದು ಮಾಲೆಗಳು ಸಿಕ್ಕಿದ್ವೋ ಇಲ್ಲೋ..” ಎಂದು ಗಹಗಹಿಸಿ ನಕ್ಕ, ಬೇಟೆಗಾರ ತನ್ನ ಬಲೆಯೊಳಗೆ ಸಿಕ್ಕಿಬಿದ್ದಿದ್ದ ಮಿಗವೊಂದನ್ನು ನೆನೆಸಿಕೊಂಡು ನಗುವಂತೆ.
("ಕಾಣ್ಕೆ"ಯಿಂದ)

23 ಕಾಮೆಂಟ್‌ಗಳು:

sunaath ಹೇಳಿದರು...

Heartbreaking.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ತೇಜು...
ಕಥೆ ಚೆನ್ನಾಗಿದೆ.
ಆದರೆ ಪುಟ್ಟ ಹುಡುಗಿಯೊಬ್ಬಳಿಗೆ ಮೋಸವಾದಾಗ ಕಮಲಿಯ ಮೇಲಿನ ಕರುಣೆಯೆಲ್ಲ ಕಾರಲ್ಲಿ ಕೂತವನ ಮೇಲಿನ ಸಿಟ್ಟಾಗಿ ಮಾರ್ಪಾಡಾಯ್ತು. ಆದರೂ ಇಂಥಹವುಗಳು ವಾಸ್ತವದಲ್ಲಿಯೂ ಇರುವಂಥವೇ.
ದೊಡ್ಡ ಬಾಜಾರುಗಳಲ್ಲಿ ಸಿಗುವ ಪ್ಯಾಕ್ಡ್ ಕಾಯಿಪಲ್ಲೆಗಳನ್ನು ಬೆಲೆಯನ್ನೂ ನೋಡದೇ ಬುಟ್ಟಿಗೆ ಹಾಕಿಕೊಂಡು ಟ್ಯಾಕ್ಸ್ ಕೂಡ ತೆತ್ತು ತೆರುವ ನಾವುಗಳೇ ರಸ್ತೆಯಂಚಿಗೆ ಮಳೆ ಬಿಸಿಲೆನ್ನದೇ ಗಾಡಿ ತಳ್ಳುವ ಬಡ ವ್ಯಾಪಾರಿಯೊಬ್ಬನಲ್ಲಿ ಚೌಕಾಸಿ ಮಾಡುತ್ತೇವೆ.(ನಾನು ಅಂಥವರೊಂದಿಗೆ ಚೌಕಾಸಿ ಮಾಡೋಲ್ಲ, ಅದು ಬೇರೆಯದೇ ಪ್ರಶ್ನೆ.)
ನಾವುಗಳು ಅಸಹಾಯಕರು ಅನ್ನಿಸಿಬಿಡುತ್ತೆ.
ಯಾಕೋ ನಾವು ಮಾತ್ರ ಖುಷಿಯಿಂದಿದ್ದರೆ ಖುಷಿಯಿರಲಾರದು ಅನ್ನಿಸಿಬಿಡುತ್ತೆ ಅಲ್ವಾ?

ravikumar.a ಹೇಳಿದರು...

Namaste,
"kamaliya mugda manasige moosa maaduva janarannu eennannona?

moosa maaduvudu kela buddivathara laxana aagiruvudu durantha.

nyaya-neethi endu veegavagi kanmareyaagi "vasthu samsruthige"
praadanyathe labisutthide?

danyavaadagalu inthi nimma
ravikumar.a

ಶ್ರೀನಿಧಿ.ಡಿ.ಎಸ್ ಹೇಳಿದರು...

nice story!, eega kaNke odbekaytu!:)

ಶ್ರೀನಿಧಿ.ಡಿ.ಎಸ್ ಹೇಳಿದರು...
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಶ್ಯಾಮಾ ಹೇಳಿದರು...

ಒಳ್ಳೆ ಕಥೆ. ಜಗತ್ತು ಯಾಕೆ ಹೀಗೆ ಅಂತ ಮತ್ತೆ ಮತ್ತೆ ಯೋಚಿಸುವ ಹಾಗೆ ಮಾಡಿತು

ಸುಧೇಶ್ ಶೆಟ್ಟಿ ಹೇಳಿದರು...

ಕಥೆ ಓದಿ ಮನಸು ಚುರ್ರೆ೦ದಿತು. ಬಡತನದ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದವರಿಗೆ ಗೊತ್ತು ಅದರ ಕಷ್ಟ. ಎಷ್ಟೋ ಮ೦ದಿ ಹೂ ಮಾರುವವರನ್ನು ನೋಡಿದ್ದೇನೆ. ಅವರಲ್ಲೂ ಕಮಲಿಯ೦ತವರು ಇದ್ದಿರಬಹುದೆ೦ಬ ಕಲ್ಪನೆಯಿರಲಿಲ್ಲ.

ತೇಜಸ್ವಿನಿ ಹೆಗಡೆ ಹೇಳಿದರು...

@ಸುನಾಥರೆ,

ನಿಜ. ಕಥೆ ಓದಿದರೇ ಎದೆಯೊಡೆಯುತ್ತದೆ.. ಆದರೆ ಕಮಲಿಯಂತವರಿಗೆ ನಿಜ ಸ್ಥಿತಿ ತಿಳಿದಾಗ ಏನಾಗಬಹುದೆಂದು ಊಹಿಸಲೂ ಸಾಧ್ಯವಿಲ್ಲ ;-(

@ಶಾಂತಲ,

ನಿಜ್ವಾಗ್ಲೂ ಹೌದು. ಸಂತೋಷ ನಮಗೆ ಮಾತ್ರ ಸಂತಸ ತರುವಂತಾದರೆ ಅದು ಅಷ್ಟು ಖುಶಿ ನೀಡದು ನಮಗೂ ಇತರರಿಗೂ ಸಂತಸನೀಡುವಂತದ್ದೇ ನಿಜವಾದ ಸಂತೋಷ. ಕಮಲಿಯಂತವರು ಎಲ್ಲಾಕಡೆಯಿದ್ದಾರೆ.. ನಿರಂತರವಾಗಿ ಶೋಷಣೆಗೊಳಗಾಗುತ್ತಲೇ ಇರುತ್ತಾರೆ. ಕೆಲವೊಮ್ಮೆ ಅನಿಸಿದ್ದಿದೆ ಮುಗ್ಧರಾಗಿರುವುದು ಶಾಪವೇ? ಎಂದು. !

@ರವಿಕುಮಾರ್ ಅವರೆ,

ನಿಜ ಇಂದು ನ್ಯಾಯಾ-ನೀತಿಗೆ ಬೆಲೆಯಿಲ್ಲದಂತಾಗಿದೆ. ಅದಕ್ಕೇ ಇರಬಹುದು ಹಿಂದಿನ ಯುಗದಲ್ಲಿ (ದ್ವಾಪರ, ತ್ರೇತಾಯುಗ...)ಮನುಷ್ಯರೂಪದಲ್ಲಿರುತ್ತಿದ್ದ ದೇವರು ಇಂದು ಕಲ್ಲಾಗಿನಿಂತಿರುವುದು. ಎಲ್ಲಾ ಕಲಿಯುಗ ಮಹಿಮೆ ಅಷ್ಟೇ!

@ಶ್ರೀನಿಧಿ,

ಅಂತೂ ಇಂತೂ ‘ಕಾಣ್ಕೆ’ಗೂ ಕಾಲಕೂಡಿ ಬಂತು ;-)

@ಶ್ಯಾಮಾ,

ಹೌದು.. ಜಗತ್ತು ಸುಂದರ, ಭೀಕರ, ಕ್ರೂರಿ ಕೆಲವೊಮ್ಮೆ ಭಯಂಕರ ಮೌನಿ!!!

@ಸುಧೇಶ್ ಅವರೆ,

ಇಲ್ಲಿ ಅವಳಿಗೆ ಮೋಸಮಾಡಿದ್ದು ಬಡತನವಲ್ಲ, ಅವಳ ಮುಗ್ಧತೆ ಹಾಗೂ ಆ ಮನುಷ್ಯನ ಕ್ರೌರ್ಯ!

Yogesh Bhat ಹೇಳಿದರು...

ಅದ್ಭುತ ಕಥೆ.
ಜೊತೆಗೆ ಇಷ್ಟವಾದದ್ದು ಶೈಲಿ....

ಕಮಲೆಯ ದೊಡ್ಡ-ಸಣ್ಣ ಕಷ್ಟಗಳೆಲ್ಲವೂ ಬಹಳ ಮೆದುವಾಗಿ, ಎಲ್ಲರಿಗೂ ಇರುವಂಥದ್ದೇ ಎಂಬಂತೆ ಮೂಡಿಬಂದರೂ, ಕಥೆಯ ಕೊನೆಯಲ್ಲಿನ ಚಿತ್ರಣ ಬಹಳ ಕಠೋರವಾಗಿದೆ.... ಅದಿಕ್ಕೆ ಅನ್ಸುತ್ತೆ "ಅ(ಬಲೆ)" ಗೆದ್ದಿದ್ದು :)

ತೇಜಸ್ವಿನಿ ಹೆಗಡೆ ಹೇಳಿದರು...

ಯೋಗೇಶ್ ಅವರೆ,

ಧನ್ಯವಾದಗಳು ಮೆಚ್ಚಿಕೊಂಡಿದ್ದಕ್ಕೆ. ನಿಜ ಕೊನೆ ಕಠೋರವೆನಿಸುತ್ತದೆ. ಆದರೆ ಇದು ವಾಸ್ತವ. ಮುಗ್ಧತೆ ಹಾಗೂ ವಂಚನೆ -ಎರಡೂ ಮನುಷ್ಯನ ಮನಸ್ಸೊಳಗೇ ಇರುವಂಥದ್ದು.. ಎಂತಹ ವಿಪರ್ಯಾಸ ಅಲ್ಲವೇ?!! ಒಂದು ಇನ್ನೊಂದನ್ನು ದಮನಿಸುತ್ತದೆ...!

ವಿ.ರಾ.ಹೆ. ಹೇಳಿದರು...

ಓದಿದೆ. nice story. ಮುಂದಿನ ಗುರಿ ’ಕಾಣ್ಕೆ’ :)

ಹೌದು...ಕಾಣ್ಕೆ ಅಂದ್ರೆ ಏನರ್ಥ?!

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್,

‘ಕಾಣ್ಕೆ’ ಪದ ಇಲ್ಲಿ ಎರಡರ್ಥದಲ್ಲಿ ಬಳಕೆಯಾಗಿದೆ. ಒಂದು "ಕಾಣಿಕೆ" ಎರಡು ದೃಷ್ಟಿಕೋನ, ನೋಟ (Vision). ಆದಷ್ಟು ಬೇಗ ನೀನು ನಿನ್ನ ‘ಗುರಿ’ ಮುಟ್ಟುವಂತಾಗಲಿ ಎಂದು ಹಾರೈಸುವೆ ;-)

Unknown ಹೇಳಿದರು...

ತೇಜಸ್ವಿನಿ,
ತುಂಬಾ ಥ್ಯಾಂಕ್ಸ್.. ನಿಮ್ಮ ಕಮೆಂಟ್ ನೋಡಿದೆ. ತುಂಬಾ ದಿನಗಳ ಹಿಂದೆ ಈ ಪ್ರಯತ್ನ ಮಾಡಿದ್ದೆ. ಇಂಗ್ಲಿಷ್ನಲ್ಲಿ ಬರೆಯೋದು ನನ್ನಿಂದ ಆಗದ ಕೆಲಸ. ಕನ್ನಡದಲ್ಲಿ ಬರೆಯಬಹುದಾದ ಸಾಧ್ಯತೆಗಳೇ ನನಗೆ ಗೊತ್ತಿರದ ದಿನಗಳವು. ಹಾಗಾಗಿ ಬರೆದದ್ದೆನ್ನೆಲ್ಲಾ ಇಮೇಜ್ ಆಗಿ ಅಪಲೋಡ್ ಮಾಡುತ್ತಿದ್ದೆ. ಅದು ನಾಲ್ಕೇ ದಿನಕ್ಕೆ ಅಸಾಧ್ಯವೆನಿಸಿ ಕೈಬಿಟ್ಟೆ. ನಿನ್ನೆ ರಾತ್ರಿ ಈ ಬ್ಲಾಗ್ ರೀಲಾಂಚ್ ಮಾಡಬೇಕೆಂದುಕೊಂಡೆ. ಅದೇ ನೆನಪಾಗಿ ಈ ಬ್ಲಾಗ್ ತೆಗೆದೆ (ಇಲ್ಲಿಯವರೆಗೂ ತಲೆ ಹಾಕಿರಲಿಲ್ಲ) ನಿಮ್ಮ ಕಮೆಂಟ್ ಕಣ್ಣಿಗೆ ಬಿತ್ತು ತುಂಬಾ ಥ್ಯಾಂಕ್ಸ್. ಶೀಘ್ರದಲ್ಲೇ ರೀಲಾಂಚ್ ಮಾಡ್ತೀನಿ ವಿಸಿಟ್ ಮಾಡಿ..
thanks..

sritri ಹೇಳಿದರು...

ಆ ನೋಟುಗಳು ಕಮಲಿಯ ಕೈಯಿಂದ ಮತ್ತಾರ ಕೈಗೋ ದಾಟಿರುವ ಸಾಧ್ಯತೆಗಳೂ ಇವೆ. ಹಾಗಾಗಿದ್ದರೆ ಕಮಲಿ ಬಚಾವ್, ಮತ್ತ್ಯಾರೋ ಬಲಿಪಶು.

ಕಥೆ ಚೆನ್ನಾಗಿದೆ. "ಕಾಣ್ಕೆ" ಕಥಾ ಸಂಕಲನವೇ?

ತೇಜಸ್ವಿನಿ ಹೆಗಡೆ ಹೇಳಿದರು...

@ ಅಲೆಮಾರಿಗಳು..

ಧನ್ಯವಾದಗಳು ಬ್ಲಾಗ್ ಗೆ ಭೇಟಿನೀಡಿದ್ದಕ್ಕಾಗಿ..

@ ತುಳಸಿಯಮ್ಮಾ,

ನಿಜ.. ಆ ಹಣ ಬೇರೆಯವರ ಕೈ ಸೇರಿದರೆ ಆಕೆ ಬಚಾವ್! ಆದರೆ ಆ ಮತ್ತೊಬ್ಬ ವ್ಯಕ್ತಿ ಕಮಲಿಗಿಂತಲೋ ಇಲ್ಲಾ ಅವಳಮ್ಮನಿಗಿಂತಲೂ ಮುಗ್ಧನಾಗಿರಬೇಕಷ್ಟೇ! ತುಂಬಾ ಧನ್ಯವಾದಗಳು. ಬರುತ್ತಿರಿ.

Anveshi ಹೇಳಿದರು...

ತೇಜಸ್ವಿನಿ ಅವರೆ,

ಯಬ್ಬಾ... ಕಥೆಯಂತೂ ದೇಹದೊಳಗೆಲ್ಲಾ ಹರಿದಾಡಿ ಹೃದಯವನ್ನು ಬ್ರೇಕ್ ಮಾಡಿತು. ಅಂದ್ರೆ ಸುನಾಥರು ಹೇಳಿದ್ದೇ... heart break! ಆದ್ರೆ ನೀವು ಈ ರೀತಿ ಮಾಡಬಾರದಿತ್ತು... ಅವಳಿಗ್ಯಾಕೆ ಖೋಟಾ ನೋಟು ಕೊಟ್ಟು ಮುಗಿಸಿದ್ರೀ?

ಆಮೇಲೆ... ಕಾಣ್ಕೆ ಏನು? ನಾವೇನಾದ್ರೂ ಕಾಣಿಕೆ ಕೊಡ್ಬೇಕಾಗುತ್ತಾ? ;)

ತೇಜಸ್ವಿನಿ ಹೆಗಡೆ ಹೇಳಿದರು...

ಅಸತ್ಯ ಅನ್ವೇಷಿ ಅವರೆ,

ಧನ್ಯವಾದಗಳು. ಇದು ಜಗತ್ತು. ಇಲ್ಲಿ ಒಳ್ಳೆಯತನ ಮನಸ್ಸಲ್ಲಿ ಹುಟ್ಟಿ ಬಾಯಲ್ಲಿ ಕೊನೆಯಾಗುತ್ತದೆ(ಸಮಾನ್ಯವಾಗಿ). ಕಥೆಯನ್ನು ವಾಸ್ತವಿಕ ನೆಲೆಯಲ್ಲಿ ನೋಡಿದಾಗ ಕಥೆಯ ಅಂತ್ಯ ಅಸತ್ಯವೆನಿಸದು ಅಲ್ಲವೇ ಅನ್ವೇಷಿಯವರೆ? :-)

ಇನ್ನು "ಕಾಣ್ಕೆ" ಇದು ೨ ತಿಂಗಳಹಿಂದೆ ಬಿಡುಗಡೆಯಾದ ನನ್ನ ಕಥಾ ಸಂಕಲನದ ಹೆಸರು. ಇಅದರ್ ಜೊತೆ ನನ್ನ ಕವನ ಸಂಕಲನವಾದ "ಪ್ರತಿಬಿಂಬ" ಕೂಡ ಬುಡುಗಡೆಯಾಗಿದೆ. ನನ್ನ ಬ್ಲಾಗ್ ನಲ್ಲಿ ಕಾರ್ಯಕ್ರಮದ ವರದಿ ಹಾಗೂ ಫೋಟೋಗಳನ್ನೂ ಹಾಕಿದ್ದೆ. ನೋಡಬಹುದು. ಖಂಡಿತ ಕಾಣ್ಕೆಯೇನೂ ಬೇಡಾ ನೋಡಲು, ಓದಲು...;-) ಮಾನಸಕ್ಕೆ ಬರುತ್ತಿರಿ.

ಅಂತರ್ವಾಣಿ ಹೇಳಿದರು...

ತೇಜಸ್ವಿನಿ ಅವರೆ,

ಕಥಯು ಮನದಾಳದಲ್ಲಿ ಕೂತಿದೆ.

Shashi Dodderi ಹೇಳಿದರು...

I dont have comment on story but two poems in the story were great I mean they brought back my childhood memories in a mansoon day

ಚಿತ್ರಾ ಹೇಳಿದರು...

ತೇಜಸ್ವಿನಿ ,

ಕಥೆ ಚೆನಾಗಿದ್ದು. ಕಮಲಿಯ ಪರಿಸ್ಥಿತಿಗೆ ಹೊಟ್ಟೆಲಿ ಕಲಸಿದಂತಾತು. ಯಾರೋ ತಪ್ಪಿಸಿಕೊಳ್ಳಲು ಇನ್ಯಾರೋ ಪಾಪದವರು ಬಲಿಪಶುಗಳಾಗುವುದು ಯಾವತ್ತಿಂದಲೂ ನಡೆದುಬಂದಿದೆ ಅಲ್ಲವೆ?

Harisha - ಹರೀಶ ಹೇಳಿದರು...

ಆಕೆಗೆ ಮೋಸವಾಗಿದ್ದು ನಿಜ. ಆದರೆ ಆ ಕಾರಿನವನಿಗೂ ಮೊಸವಾಗಿದ್ದಕ್ಕೆ ತಾನೇ ಆತ ಹಾಗೆ ಮಾಡಿದ್ದು?

ಆ ಖೋಟಾ ನೋಟ್ ಮಾಡಿದವನಿಗೆ ಉಗೀಬೇಕು!

ತೇಜಸ್ವಿನಿ ಹೆಗಡೆ ಹೇಳಿದರು...

@ ಶಂಕರ್ ಹಾಗೂ ಶಶಿಯವರಿಗೆ,

ತುಂಬಾ ಧನ್ಯವಾದಗಳು. ಪ್ರೋತ್ಸಾಹ ಹೀಗೇ ಇರಲಿ.

@ ಚಿತ್ರ ಅವರೆ,

ಧನ್ಯವಾದಗಳು. ನಿಜ.. ಹೆಚ್ಚಿನ ಬಲಿಪಶುಗಳೆಲ್ಲಾ ಅಮಾಯಕರೇ.. ಮುಗ್ಧತೆ ಎನ್ನುವುದು ಈಗಿನ ಕಲಿಕಾಲಕ್ಕೆ ಒಂದು ಶಾಪವೇನೋ ಎಂದೆನಿಸುತ್ತಿದೆ. ಮಾನಸಕ್ಕೆ ಬರುತ್ತಿರಿ.

@ ಹರೀಶ್ ಅವರೆ,

ಹೌದು.. ಈ ಖೋಟಾ ನೊಟು ತಯಾರಕರನ್ನು ಉಗೀಬೇಕು. ಆದರೆ ಆ ಕಾರಿನವನೇನೋ ಪುಟ್ಟ ಹುಡುಗಿಯಷ್ಟು ಮುಗ್ಧನೂ ಅಲ್ಲಾ, ಸಂಭಾವಿತನೂ ಅಲ್ಲ. ಆತನಿಗೆ ಆದ ಮೋಸ ಆತನಂತವನೇ ಆದ ಓರ್ವ ಮೋಸಗಾರನಿಂದ. ಆದರೆ ಆ ಹುಡುಗಿ ಎನೂ ಪ್ರಾಪಂಚಿಕ ಜ್ಞಾನವಿಲ್ಲದವಳು. ಅಂತಹ ಬಡವಳಿಗೆ ಮೋಸ ಮಾಡಿ ಹೆಮ್ಮೆ ಪಟ್ಟ ಕಾರಿನವನನ್ನು ಏನುಮಾಡಬೇಕು? ಮಾನಸವನ್ನು ಮರೆಯದಿರಿ. ಧನ್ಯವಾದಗಳು.

ವನಿತಾ / Vanitha ಹೇಳಿದರು...

Abba..really touching Story!!