ಗುರುವಾರ, ಜನವರಿ 15, 2015

ಸಂಚಾರಿ ಭಾವಗಳು....

ಕೆಲವು ಭಾವಗಳೇ ಹೀಗೆ-
ಧುಮ್ಮಿಕ್ಕಿ ಹರಿಯುವ ಜಲಧಾರೆಯೊಂದು
ಥಟ್ಟನೆ ನಿಂತು ತಣ್ಣಗೆ ಹರಿವ ಹೊಳೆಯಾದಂತೆ
ನಿಶೆಯ ಗರ್ಭವನೇ ಸೀಳಲು ಹೊರಟ ಕೋಲ್ಮಿಂಚು
ತನ್ನ ಬೆಳಕಿಗೆ ತಾನೇ ಉರಿದು ಮತ್ತೆ ಕಪ್ಪಾಗುವಂತೆ.
ಇಂದು ಬದುಕಿರುವಂತೆ ಕಾಣುವಾತ,
ನಾಳೆ ಭೂತವಾಗಿ ಕಾಡುವಂತೆ!


ಕೆಲವು ಭಾವಗಳು ಹೀಗೂ-
ಕಲಾವಿದನೋರ್ವ ತನ್ನ ಸುಂದರ ಚಿತ್ರಕೆ
ಅರೆಬರೆ ಬಣ್ಣವ ಬಳಿದು ಬಿಟ್ಟಂತೆ
ತಾಯ ಗರ್ಭದೊಳು ನೀರಾಡುವ ಶಿಶುವಿಗೆ
ಇಳೆ ಗರ್ಭದಿಂದುಕ್ಕಿದ ನೀರು ಚಳಿಯಾಗುವಂತೆ.
ಚಿಕ್ಕ ಸವತೆ ಮಿಡಿಯಂತಹ ಪುಗ್ಗವೊಂದು ಉಬ್ಬಿ,
ಸೂಜಿಮೊನೆಯೊಂದರ ಮುತ್ತಿಗೆ ಠುಸ್ ಎನ್ನುವಂತೆ.

ಕೆಲವೊಂದು ಭಾವಗಳು ಹೀಗೆಲ್ಲಾ-
ಉಷಾಕಾಲದೊಳು ತಲೆಯ ಹೊಕ್ಕಿ,
ಮಟ ಮಧ್ಯಾಹ್ನದೊಳು ಕಕ್ಕಾಬಿಕ್ಕಿಯಾಗಿ
ಸಧ್ಯಾರಾಗದಲ್ಲೇ ಕಣ್ಮುಚ್ಚಿ ಅಂತ್ಯವಾಗುವ,
ಈ ಹುಚ್ಚು ಯೋಚನೆಗಳೆಲ್ಲಾ ಹೀಗೇ....

-ತೇಜಸ್ವಿನಿ ಹೆಗಡೆ.

ಬುಧವಾರ, ಜನವರಿ 7, 2015

ಮಿಥುನ

Tejaswini & Ramakrishna

ಆ ಬಲಗೈ ಬೆಸೆದಿದ್ದ ಬೆಸುಗೆಯಿಂದಲೋ
ಭಾವ ಮಂಥನದ ನಡುಕದಿಂದಲೋ
ಬೆವರಿದ ನನ್ನ ಬಲಗೈಯಿಂದೆದ್ದು,
ಹನಿಯುತ್ತಿದ್ದ ಬೆವರಿನಹನಿಗಳನ್ನೇ
ಬಾಗಿ ನೋಡುತ್ತಿದ್ದ ನೊಸಲ ಹನಿಗಳು.....
ಹೊಸ ರೇಶಿಮೆ ಸೀರೆಯ ಸರಪರದ ಸದ್ದು,
ಜೊತೆಗೆ ಮಲ್ಲೆ ಹೂವುಗಳ ಮತ್ತು,
ಅನೂಹ್ಯ ರೋಮಾಂಚನಕೆಳೆಸಿದ ಆ
‘ಸುಲಗ್ನೇ ಸಾವಧಾನ....ಸುಮುಹೂರ್ತೇ ಸಾವಧಾನ..’

ಲಾಜಹೋಮದಲ್ಲಿ ತುಸು ಬಿಸಿಯಾದ
ಕೈ ಸವರಿ ಮೆಲುನಕ್ಕಿದ ಆ ಪರಿ,
ಅರಳು ಹೊಯ್ದು ಮರಳು ಮಾಡಿ
ಕಣ್ಸೆರೆ ಹಿಡಿದು ಕೆಂಪಾಗಿಸಿದಾ ನೋಟ,
ಕೊರಳೊಳಗಿನ ಕರಿ ಮಣಿಗಳ
ಪಿಸುದನಿಗಳ ಕಚಗುಳಿಗಳು,
ಸುಖಾಸುಮ್ಮನೆ ಹೊಡೆದುಕೊಳ್ಳುತ್ತಿದ್ದ
ಎದೆಬಡಿತದ ಸದ್ದು...

ಎಲ್ಲವೂ ಹಸಿಯಾಗಿ ಹಸಿರಾಗಿವೆ....
ಹರುಷಕೆ ಹತ್ತು ವರುಷಗಳಾದರೂ!

ದಶಕಗಳನು ಹತ್ತೇ ನಿಮಿಷಗಳಲಿ,
ಕೂಡಿ ಕಳೆದಂತೆ.... ಕಳೆದು ಕೂಡಿದಂತೇ...
ಸಾಗಿಹುದು, ಸಾಗುತಿದೆ ಬಾಳ ಪಯಣ
ಸವಿಗನಸಿನಂತೇ....

-ತೇಜಸ್ವಿನಿ ರಾಮಕೃಷ್ಣ ಹೆಗಡೆ.



ನಾನೇ ಕಲಿತು ಮೊದಲ ಬಾರಿ ತಯಾರಿಸಿದ 2 ನಿಮಿಷಗಳಪುಟ್ಟ ಮೂವಿಯ ಲಿಂಕ್ ಇಲ್ಲಿದೆ..... :)
https://www.youtube.com/watch?v=HaoFV6hdEpc&feature=youtu.be