ಸೋಮವಾರ, ಏಪ್ರಿಲ್ 12, 2010

ನಮ್ಮೊಳಗೊಬ್ಬ ಯುವ ಕಾದಂಬರಿಕಾರ


ಪುಟ್ಟ ಊರಿನಿಂದ ಈ ಬೃಹತ್ ಬೆಂಗಳೂರಿಗೆ ಬಂದು, ಇಲ್ಲಿಯ ಜನರೊಳಗೆ ಬೆರೆತು ಒಂದಾಗಿ, ತಾ ಪಡೆದ ಸಣ್ಣ ಪುಟ್ಟ ಅನುಭವಗಳನ್ನು ನಮ್ಮ ಮುಂದಿರಿಸುತ್ತಾ ಹೊರಟ ಸುಧೇಶ್ ಅವರ ಪರಿಚಯ ಅವರ ಬ್ಲಾಗ್ "ಅನುಭೂತಿ"ಯ ಮೂಲಕ ಈಗಾಗಲೇ ಬಹಳಷ್ಟು ಜನರಿಗಾಗಿರಬಹುದು. ಆದರೆ ಎಲೆಮರೆಯ ಕಾಯಂತೆ ಕಳೆದ ಜುಲೈ ತಿಂಗಳಿನಿಂದ ಅವರು ಬರೆಯುತ್ತಿರುವ ಬೊಚ್ಚಲ ಕಾದಂಬರಿಯ ಕುರಿತು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. "ನೀ ಬರುವ ಹಾದಿಯಲಿ..." ಎನ್ನುವ ಬ್ಲಾಗ್‌ನಲ್ಲಿ ಅದೇ ಶೀರ್ಷಿಕೆಯನ್ನು ಹೊಂದಿರುವ ಅವರ ಮೊದಲ ಕಾದಂಬರಿ ೨೦೦೯ ಜುಲೈ ತಿಂಗಳಿಂದ ಕಂತಿನಲ್ಲಿ ಬರುತ್ತಿದೆ. ಕೆಲಸದೊತ್ತಡ ಹಾಗೂ ಮೊದಲ ಬ್ಲಾಗ್ ಅನುಭೂತಿಯ ಅಪ್‌ಡೇಟ್ ಮಾಡುವ ಜವಾಬ್ದಾರಿಯ ನಡುವೆ ಧಾರಾವಾಹಿಯ ಕಂತುಗಳ ಬರುವಿಕೆಯಲ್ಲಿ ಸ್ವಲ್ಪ ನಿಧಾನವಾಗುತ್ತಿದೆಯಾದರೂ ಬಹು ಸುಂದರವಾಗಿ, ಕುತೂಹಲಕರವಾಗಿ, ಭಿನ್ನವಾದ ಶೈಲಿಯಲ್ಲಿ ನಿರೂಪಿಸುತ್ತಿದ್ದಾರೆ ಸುಧೇಶ್. ಈವರೆಗೆ ಒಟ್ಟೂ ಹದಿನೇಳು ಭಾಗಗಳು ಬಂದಿದ್ದು, ಕುತೂಹಲ ಘಟ್ಟದಲ್ಲಿದೆ ಕಥೆ.

ಕಾದಂಬರಿಯ ಕಿರು ಪರಿಚಯ : ಪ್ರಸ್ತುತ ವಿದ್ಯಮಾನಗಳನ್ನೆಲ್ಲಾ ಸಣ್ಣ ಪುಟ್ಟ ಘಟನೆಗಳ ಮೂಲಕ ಮತ್ತೂ ಆಪ್ತಗೊಳಿಸುತ್ತಾ, ಚುರುಕಾದ, ಮನಮುಟ್ಟುವ, ಸುಲಲಿತ ಸರಳ ಸಂಭಾಷಣೆಗಳ ಮೂಲಕ ಕಾದಂಬರಿಯನ್ನು ಒಂದು ಉತ್ತಮ ಹಾಗೂ ಸುಂದರ ಚೌಕಟ್ಟಿನೊಳಗೆ ಬಂಧಿಸಿಡುವಲ್ಲಿ ಸುಧೇಶ್ ಸಫಲರಾಗಿದ್ದಾರೆ. ಎಲ್ಲಕ್ಕಿಂತ ಮೊದಲು ನೆನಪಿಡಬೇಕಾದ್ದು, ಇದು ಅವರ ಮೊದಲ ಕಾದಂಬರಿ. ಪ್ರಥಮ ಪ್ರಯತ್ನದಲ್ಲೇ ಓದುಗರ ಮನಸ್ಸನ್ನು ಗೆಲ್ಲುವ ನಿಟ್ಟಿನಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. "ಏನೋ ಬರೀತಿನಿ ಅಷ್ಟೆ.... ನನ್ನ ತೃಪ್ತಿಗೆ, ಯಾರು ಓದ್ತಾರೆ ಇದನ್ನ? ಪಬ್ಲಿಷಿಂಗ್ ಎಲ್ಲಾ ಬೇಡ....ಪುಸ್ತಕ ಎಲ್ಲಾ ಮಾಡೋವಷ್ಟು ಚೆನ್ನಾಗಿದೆಯಾ..?!" ಎಂದೆಲ್ಲಾ ತನ್ನ ಸಾಮರ್ಥ್ಯದ ಬಗ್ಗೆ ಅಪನಂಬಿಕೆ ತೋರಿದರೂ, ಕಾದಂಬರಿಯ ಬರವಣಿಗೆಯಲ್ಲಿ ಬಹು ಭರವಸೆಯನ್ನು ಕಾಣಿಸುತ್ತಾರೆ. ಓರ್ವ ಹೆಣ್ಣಿನ ಒಂಟಿತನ, ಮಾನಸಿಕ ಘರ್ಷಣೆಗಳನ್ನು, ನೋವು ನಲಿವುಗಳನ್ನು, ಪ್ರೀತಿಯ ನವಿರತೆಯನ್ನು, ಸಾಮಾಜಿಕ ಬದ್ಧತೆಯನ್ನು, ಜವಾಬ್ದಾರಿಯನ್ನು ಮೊದಲ ಯತ್ನದಲ್ಲೇ ಸಮರ್ಥವಾಗಿ ನಿರೂಪಿಸಿದ್ದಾರೆ. ಅಲ್ಲಲ್ಲಿ ಅವಸರದ ಟೈಪಿಂಗ್‌ನಿಂದಾಗಿಯೋ ಇಲ್ಲ ಕಣ್ತಪ್ಪಿನಿಂದಾಗಿಯೋ ಸಣ್ಣ ಪುಟ್ಟ ತಪ್ಪುಗಳಾಗಿದ್ದರೂ ಸಹ ಕಾದಂಬರಿಯೊಳಗಿನ ಚುರುಕಾದ ಓಘ ಅವುಗಳನ್ನು ನಗಣ್ಯವಾಗಿಸುತ್ತದೆ.

ಕಥೆಯನ್ನು ಬರೆಯುವುದಕ್ಕಿಂತ ಕಾದಂಬರಿ ಬರೆಯುವುದು ಬಲು ಕಷ್ಟ ಎನ್ನುವುದು ನನ್ನ ಅಭಿಮತ. ಅದಕ್ಕೆ ಬೇಕಾಗಿರುವ ಚಾಕಚಕ್ಯತೆ, ನಿರೂಪಣಾ ಶೈಲಿಯೊಳಗಿನ ನಿಪುಣತೆ, ಸಂಭಾಷಣೆಯೊಳಗಿನ ಹೊಸತನ - ಇವೆಲ್ಲವೂ ಓದುಗನನಲ್ಲಿ ಆಸಕ್ತಿಯನ್ನೂ, ಕುತೂಹಲವನ್ನೂ ಹುಟ್ಟಿಸುವಂತಿವೆ. ಈ ನಿಟ್ಟಿನಲ್ಲಿ ಸುಧೇಶ್ ಅವರು ಇಷ್ಟು ಚಿಕ್ಕ ವಯಸ್ಸಿನಲ್ಲೇ ಪ್ರಯತ್ನಿಸಿ ಸಫಲತೆ ಕಾಣುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕಥೆ ಸಾಮಾಜಿಕವಾಗಿದ್ದು, ಪ್ರೀತಿ, ಸ್ನೇಹ, ಮೋಸ, ಸಾಂಸಾರಿಕ ಜಂಜಾಟ - ಇವುಗಳನ್ನು ಹೊಂದಿದ್ದು ಸಾಮಾನ್ಯ ಎಂದೆನಿಸಬಹುದು. ಆದರೆ ಅದನ್ನು ಹಣೆದ ರೀತಿ, ಹಳ್ಳಿಯ ಸೊಗಡತನವನ್ನು ಬೆಸೆದ ಪರಿ, ನಗರಜೀವನದೊಳಗಿನ ಯಾಂತ್ರಿಕತೆಯನ್ನು ತೋರುವ ಘಟನಾವಳಿಗಳು, ಕೃತಕತೆಯಿಲ್ಲದ ಹೊಸತನದಿಂದ ಕೂಡಿದ ಸುಂದರ ಸಂಭಾಷಣೆಗಳು ಕಥೆಗೆ ಒಂದು ವಿಭಿನ್ನವಾದ ಆಯಾಮವನ್ನು ನೀಡುತ್ತವೆ.

ಪ್ರಾಮಾಣಿಕ ಬರಹಗಾರನಿಗೆ ಉತ್ತಮ ಓದುಗರೇ ಪೋಷಕರು. ಹೆಚ್ಚು ಬೆಂಬಲ ಸಿಕ್ಕಿದಷ್ಟು ಬರವಣಿಗೆಯ ಪ್ರತಿ ಹೆಚ್ಚಿನ ಜವಾಬ್ದಾರಿ ಹೊಂದಿ, ಬರಹಗಾರನಿಗೆ ಮತ್ತಷ್ಟು ಉತ್ತಮ ಮಟ್ಟದ ಬರಹವನ್ನು ನೀಡಲಾಗುತ್ತದೆ. ಇದರಿಂದ ಓದುಗರಿಗೂ ಉತ್ತಮ ಬರಹಗಾರ ಹಾಗೂ ಬರವಣಿಗೆ ಸಿಕ್ಕಂತಾಗುತ್ತದೆ ಅಲ್ಲವೇ? ಮೊದಲ ಕಂತಿನಿಂದ ಓದಿದರೆ ಮಾತ್ರ ಕಾದಂಬರಿಯೊಳಗಿನ ಸತ್ವ, ಅವರ ಪ್ರತಿಭೆ, ಕಂತಿನಿಂದ ಕಂತಿಗೆ ಅವರು ಹೊಂದಿದ ಪ್ರಭುತ್ವ ಹಾಗೂ ಬೆಳವಣಿಗೆಗಳನ್ನು ತಿಳಯಬಹುದು. ಹಾಗಾಗಿ ಸಾಧ್ಯವಾದಾಗ ಮೊದಲ ಹೆಜ್ಜೆಯಿಂದಲೇ "ನೀ ಬರುವ ಹಾದಿಯಲಿ..." ಒಮ್ಮೆ ಸಾಗಿ ಬನ್ನಿ.

ಕಾದಂಬರಿಯ ಪ್ರಾರಂಭದಲ್ಲಿ ಸುಧೇಶ್ ಅವರೇ ಹೇಳಿಕೊಂಡ ಮನದ ಮಾತುಗಳಿವು : "ಡಿ.ಗ್ರಿ.ಯಲ್ಲಿ ಇದ್ದಾಗಿನಿ೦ದ ಕಾದ೦ಬರಿ ಬರೆಯಬೇಕು ಎ೦ಬ ಯೋಜನೆಯೊ೦ದಿತ್ತು. ಅನುಭವ, ವಿಷಯದ ಕೊರತೆಯಿ೦ದ ಮು೦ದೆ ಹಾಕುತ್ತಲೆ ಬ೦ದಿದ್ದೆ. ಈಗ ಅನುಭವ ತು೦ಬಾ ಆಗಿದೆ ಅ೦ತೇನಿಲ್ಲ… ಆದರೆ ಒ೦ದು ವಿಷಯ ತು೦ಬಾ ಸಮಯದಿ೦ದ ಕೊರೆಯುತ್ತಿದೆ. ಅದನ್ನು ಮನಸ್ಸಿನಲ್ಲಿ ಬಚ್ಚಿಟ್ಟುಕೊಳ್ಳಲಾಗುತ್ತಿಲ್ಲ. ಅದಕ್ಕೆ ಅದನ್ನೇ ಬರಹಕ್ಕೆ ಇಳಿಸಬೇಕೆ೦ದಿದ್ದೇನೆ. ಅದು ಒ೦ದು ಅಧ್ಯಾಯದ ಕಥೆ ಆಗಬಹುದು, ಸಣ್ಣ ಧಾರಾವಾಹಿ ಆಗಬಹುದು, ಇಲ್ಲವೇ ಕಾದ೦ಬರಿ ಆಗಬಹುದು. ಎಡವಿದಾಗ ನನ್ನ ನೆರವಿಗೆ ನೀವೆಲ್ಲರೂ ಇದ್ದೀರೆ೦ಬ ದೃಢ ನ೦ಬಿಕೆಯಿದೆ. ನಾನು ಬರೆದುದ್ದನ್ನೆಲ್ಲಾ ಮೆಚ್ಚಿಕೊ೦ಡು ಬೆನ್ನುತಟ್ಟಿರುವ ದೊಡ್ಡ ಮನಸಿನವರು ನೀನು. ನನ್ನ ಈ ಪ್ರಯತ್ನದಲ್ಲೂ ನನ್ನ ಹಿ೦ದೆ ಇರುತ್ತೀರಿ ಎ೦ಬ ಕಾನ್ಫಿಡೆನ್ಸ್ ನನಗಿದೆ. ಈ ಕಾದ೦ಬರಿಯ ವಿಷಯ ನಿಜವಾಗಿ ನಡೆದದ್ದು. ಅದರ ಮೇಲೆ ಮಹೇಶ್ (ಅನುಭವ್ ಎ೦ಬ ಆ೦ಗ್ಲ ಬ್ಲಾಗ್ ಬರೆಯುತ್ತಾರೆ) ಎ೦ಬ ಬ್ಲಾಗಿಗರು ಇ೦ಗ್ಲಿಷಿನಲ್ಲಿ ಕಥೆ ಬರೆದಿದ್ದರು. ಅದು ತು೦ಬಾ ಚೆನ್ನಾಗಿತ್ತು ಮತ್ತು ಎಲ್ಲರ ಮೆಚ್ಚುಗೆ ಗಳಿಸಿತ್ತು. ಕಥೆಯ ಹಿನ್ನೆಲೆ ಅವರಿಗೆ ಅಷ್ಟಾಗಿ ಗೊತ್ತಿರದಿದ್ದುರಿ೦ದ ಅವರು ಕಲ್ಪನೆಯನ್ನು ಹೆಚ್ಚು ಸೇರಿಸಬೇಕಾಯಿತು. ಈಗ ಅದನ್ನು ನನ್ನದೇ ರೀತಿಯಲ್ಲಿ ಬರೆಯಬೇಕೆ೦ದು ಮಾಡಿದ್ದೇನೆ. ಅದರ ಹೆಸರು "ನೀ ಬರುವ ಹಾದಿಯಲ್ಲಿ... - ಸುಧೇಶ್ "

ಸಹಮಾನಸಿಗರಾದ ನೀವೂ ಇವರ ಈ ಪ್ರತಿಭೆಗೆ ಸ್ಪಂದಿಸಿ, ಪ್ರೋತ್ಸಾಹಿಸಿದರೆ ಅವರ ಬರವಣಿಗೆಯ ಉತ್ಸಾಹಕ್ಕೆ ಮತ್ತಷ್ಟು ಇಂಬುಕೊಟ್ಟಂತಾಗುವುದು.


-ತೇಜಸ್ವಿನಿ ಹೆಗಡೆ.

ಸೋಮವಾರ, ಏಪ್ರಿಲ್ 5, 2010

ಕಾಣದ ಕಾಣಿಕೆಗಳ ಕನವರಿಕೆ....

ಒಂದು ಅರೆಬಿರಿದ ತಿಳಿಗುಲಾಬಿ ಹೂ,
ಒಂದು ಮೊಳ ದುಂಡು ಮಲ್ಲಿಗೆ ಮಾಲೆ,
ಒಂದೇ ಒಂದು ಕ್ಯಾಡ್‌ಬರಿ ಚಾಕೊಲೇಟ್
ಮುದ್ದಾದ, ಪುಟ್ಟದೊಂದು ಗ್ರೀಟಿಂಗ್ ಕಾರ್ಡ್
ಇವುಗಳಲ್ಲೇ ಒಂದನ್ನಾದರೂ ನೀ ನಿನ್ನ
ಹೂನಗೆಯ ಲೇಪನದಿಂದಿತ್ತಿದ್ದರೆ,
ನಾ ಕಣ್ಬಿಟ್ಟ ದಿನ ಮತ್ತಷ್ಟು ಬೆಳಕಾಗುತಿತ್ತು..

ಒಂದು ವರುಷ ಎಂ.ಪಿ.ತ್ರಿ,
ಮರುವರ್ಷವೋ ಪೆನ್ ಡ್ರೈವ್,
ಮತ್ತೆ ಬಂತು ಡಿಜಿಟಲ್ ಕ್ಯಾಮರಾ,
ಅದ ಹಿಂಬಾಲಿಸಿ ಪಡೆದೆ ವೆಬ್‍ಕ್ಯಾಮ್,
ಲಾಪ್‌ಟಾಪ್, ಓಪ್ಟಿಕಲ್ ಮೌಸ್!
ಪ್ರತಿಬಾರಿಯೂ ಮನಸು ಹೇಳುತಿತ್ತು
ನೀನೊಬ್ಬ ಪಕ್ಕಾ, ಗಣಕ ಯಂತ್ರ ಅಭಿಯಂತರ.

ಕೇಳಿ ಪಡೆಯುವುದು ಉಡುಗೊರೆಯಲ್ಲ,
ಪ್ರತಿ ಸಲವೂ 'ಮೌನಂ ಸಮ್ಮತಿ ಲಕ್ಷಣಂ' ಅಲ್ಲ...
ಗೊತ್ತು ಬಿಡು, ಭಾವನೆಗಳಿಗೂ ತಾಂತ್ರಿಕತೆಗೂ
ಕಾಗೆ-ಕೋಗೆಲೆಗಳಂತರ.....
ಮೃದು ಹೂವೊಂದ ಬಯಸಿದ ಮನಸಿಗೆ
ನೀ ನೀಡುತ್ತಾ ಹೋದೆ, ಬಹು ದೊಡ್ಡ
ಸಾಫ್ಟ್‌ವೇರ್ ಗಿಫ್ಟ್‌ಗಳ!

-ತೇಜಸ್ವಿನಿ ಹೆಗಡೆ :)