ಜೋಗದ ಸೌಂದರ್ಯವನ್ನು ನಮ್ಮ ನಾಡಿನ ಹಲವು ಕವಿಗಳು ಅದ್ಭುತವಾಗಿ ಹಾಡಿಹೊಗಳಿದ್ದಾರೆ. ನಿತ್ಯೋತ್ಸವ ಗೀತೆಯನ್ನು ಕೇಳದವರೇ ಇಲ್ಲ ಎನ್ನಬಹುದು. ಹಾಗೆ ನೋಡಿದರೆ ನನ್ನ ಹುಟ್ಟೂರಿನಿಂದ ಜೋಗ ಬಹಳ ದೂರವೇನಿಲ್ಲ. ಶಿರಸಿಯಿಂದ ಒಂದೂವರೆ ತಾಸಿನ ಪ್ರಯಾಣವಷ್ಟೇ. ಚಿಕ್ಕವಳಿದ್ದಾಗಲೊಮ್ಮೆ ಅಪ್ಪನೊಂದಿಗೆ ಹೋಗಿ ಜೋಗವನ್ನು ನೋಡಿದ್ದೆ. ತದನಂತರ ಎರಡು ವರುಷಗಳ ಹಿಂದೆಯಷ್ಟೇ ಏನೋ ಕಾರ್ಯದ ನಿಮಿತ್ತ ಅತ್ತ ಹೋಗಿದವಳು ಮಳೆಗಾಲದ ಒಂದು ದಿವಸ ಜೋಗದ ಅದ್ಭುತ ಸೌಂದರ್ಯದ ದರ್ಶನವನ್ನು ಮಾಡಿದ್ದರ ನೆನಪು ಇನ್ನೂ ಹಸಿರಾಗಿದೆ. ಆದರೆ ಈ ಜೋಗಜಲಪಾತ ತನ್ನ ಮೂಲ ಆರ್ಭಟವನ್ನು, ಸೌಂದರ್ಯವನ್ನು ಕಳೆದುಕೊಂಡು ಸೊರಗಿದ್ದರ ಹಿಂದಿನ ಕಥೆ, ಶರಾವತಿ ನದಿಗೆ ಕಟ್ಟಿರುವ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ಹಿಂದಿನ ಕಟು ವಾಸ್ತವಿಕತೆ, ಅ ಸಮಯದಲ್ಲಿ ಉಂಟಾದ ತ್ಯಾಗ, ಬಲಿದಾನಗಳು, ಮುಳುಗಡೆಯ ಯಾತನಾಮಯ ವ್ಯಥೆಗಳು ಇವೆಲ್ಲವುಗಳ ವಿವರಣೆ ನನಗೆ ಗೊತ್ತಿರಲಿಲ್ಲ. ಮುಳುಗುವುದು ಕೇವಲ ನೆಲ ಹಾಗೂ ಜನರ ಆಸ್ತಿಪಾಸ್ತಿ ಮಾತ್ರವಲ್ಲ, ಒಂದಿಡೀ ಸಮುದಾಯದ ಅಸ್ತಿತ್ವ, ಕನಸು, ಸಹಜೀವಿಗಳ, ಮೂಕಪ್ರಾಣಿಗಳ ಜೊತೆಗಿನ ನಂಟು, ಹೊಲ, ತೋಟ, ಕಾಡು – ಇವೆಲ್ಲವುಗಳೊಂದಿಗೆ ಬೆಸೆದಿರುವ ಅವಿನಾಭಾವ ಬಂಧವೊಂದು ಮಹತ್ತರ ಉದ್ದೇಶದಡಿಯಲಿ ಸಿಲುಕಿ ನಜ್ಜುಗುಜ್ಜಾಗಿ ಸವೆದು ಬೆಳಕನ್ನು ನೀಡುತ್ತಿದೆ ಎಂಬುದನ್ನು ಬಹಳ ವಿಸ್ತಾರವಾಗಿ, ಮನದೊಳಗೆ ಇಳಿದು ಕಾಡುವಂತೆ, ಹಲವೆಡೆ ಓದುಗನ ಮನಸ್ಸನ್ನು ಎಳೆದು ನಾನಾ ವಿಧದ ಚಿಂತನೆಗಳೆಡೆ ಎಳೆಯುವಂತೆ ಪ್ರಸ್ತುತ ಕಾದಂಬರಿಯನ್ನು ರಚಿಸಿದ್ದಾರೆ ಲೇಖಕ ಶ್ರಿ ಗಜಾನನ ಶರ್ಮ ಅವರು.(ನಾ. ಡಿಸೋಜಾ ಅವರ ಮುಳುಗಡೆ ಕಾದಂಬರಿಯನ್ನು ಬಹಳ ಹಿಂದೆ ಓದಿದ್ದೆ. ಅದನ್ನೂ ನೆನಪಿಸಿತ್ತು ಈ ಪುಸ್ತಕ.)
1916ರಲ್ಲಿ ಸರ್. ಎಂ.ವಿಶ್ವೇಶ್ವರಯ್ಯನವರು ಜೋಗಕ್ಕೆ ಭೇಟಿ ನೀಡಿ ವಿದ್ಯುತ್ ಯೋಜನೆಗೆ ಸಮೀಕ್ಷೆ ನಡೆಸಲು ಆದೇಶಿಸುವ ಘಟನೆಯೊಂದಿಗೆ ಶುರುವಾಗುವ ಕಥೆಯು, ಮುಂದೆ ಅವರೇ ಮೊದಲು ಕಟ್ಟಿಸಿದ್ದ ಹಿರೇಭಾಸ್ಕರ ಅಣೆಕಟ್ಟಿನ ಜೊತೆಗೇ ಸಮೃದ್ಧವಾಗಿದ್ದ ಪ್ರದೇಶಗಳು, ಜನಜೀವನ, ಅವರ ಬದುಕು ಎಲ್ಲಾ ಮುಳುಗಡೆಯಾಗುವುದರೊಂದಿಗೆ ಮುಗಿಯುತ್ತದೆ. ಈ ಸುದೀರ್ಘಾವಧಿಯ ಸಮಯದಲ್ಲಿ ಸ್ವಾತಂತ್ರ್ಯ ಪೂರ್ವದ ಹಾಗೂ ಆ ನಂತರದ ಶರಾವತಿ ತೀರದ ಹಳ್ಳಿಗರ ಬದುಕು ಅದು ಹೇಗೆ ಈ ಒಂದು ಪ್ರಾಜೆಕ್ಟಿನಿಂದ ಬದಲಾಗುತ್ತಾ ಹೋಯಿತು, ಅಭಿವೃದ್ಧಿಯ ಹೆಸರಿನಲ್ಲಿ ಒಳಗೆ ಬಲಿದು ಹೊರಗೆ ಬೆಳೆಯುವ ಬದಲು, ಒಳಗೆ ಸಂಕುಚಿತಗೊಳ್ಳುತ್ತಾ ಹೊರಗೆ ವಿರಾಟ್ ಸ್ವರೂಪ ಪಡೆಯಿತು ಎಂಬೆಲ್ಲಾ ಚಿತ್ರಣಗಳು ನಮ್ಮೊಳಗೆ ಅಚ್ಚಾಗುತ್ತಾ ಹೋಗುತ್ತವೆ.
ಸರ್ ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ಕಡಾಂಬಿ, ಫೋರ್ಬ್ಸ್ – ಮುಂತಾದ ನಿಷ್ಟಾವಂತ, ದೇಶಕ್ಕೆ ಒಳಿತಾಗಲು ಆಲೋಚಿಸುವ ಜನರಿರುವ ತನಕ ಕೆಲಸಗಾರರಲ್ಲಿ, ಅಧಿಕಾರಿಗಳಲ್ಲಿ ಪ್ರಕೃತಿಯ ಕುರಿತು ಒಂದು ಒಲವು, ಸಹಾನುಭೂತಿಯೂ ಇತ್ತು. ತಮ್ಮ ಪ್ರಾಜೆಕ್ಟಿನಿಂದಾಗುವ ಪ್ರಕೃತಿ ನಾಶ, ಹಳ್ಳಿಗರ ಜನಜೀವಕ್ಕಗುತ್ತಿರುವ ಧಕ್ಕೆಯ ಕುರಿತು ಪಶ್ಚಾತ್ತಾಪ, ಮರುಗುವಿಕೆಯಾದರೂ ಕಾಣಿಸುತ್ತಿತ್ತು. ಹೀಗಾಗಿ ಮೊದಮೊದಲು ಆದಷ್ಟು ಮೆಲುವಾಗಿ, ಸ್ಪಂದನೆಯೊಂದಿಗೆ ಸಾಗುವ ಹಿರೇಭಾಸ್ಕರ ಅಣೆಕಟ್ಟಿನ ದಾರಿ, ಲಿಂಗನಮಕ್ಕಿ ಪ್ರಾಜೆಕ್ಟಿಗೆ ಬರುವಷ್ಟರಲ್ಲಿ ಏನೇನೆಲ್ಲಾ ರಾಜಕೀಯ ಆಟಾಗಳು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಅಧಿಕಾರಿ ವರ್ಗಗಳಲ್ಲಿ ನಡೆದವು, ಹೇಗೆಲ್ಲಾ ವಂಚನೆಗಳು ತೆರೆಯ ಹಿಂದೆ/ಮುಂದೆ ನಡೆದಿದ್ದವು – ಇವನ್ನೆಲ್ಲಾ ಸ್ಪಷ್ಟವಾಗಿ ಓದುತ್ತಿರುವಾಗ, ರಾಜಕೀಯ ಎನ್ನುವುದು ಅಂದು ಹಾಗೂ ಇಂದೂ ಒಂದೇ ರೀತಿ ಇದೆ.. ಸ್ವರೂಪ ಬದಲಿಸಿರುತ್ತದೆ ಅಷ್ಟೇ ಎಂಬುದು ಮನದಟ್ಟಾಗುತ್ತದೆ.
554 ಪುಟಗಳ ಈ ಬೃಹತ್ ಕದಂಬರಿ ಕೇವಲ ಶರಾವತಿ ನಡಿಗೆ ಅಣೆಕಟ್ಟುಗಳನ್ನು (ಹಿರೇಭಾಸ್ಕರ ಅಣೆಕಟ್ಟು ಮತ್ತು ಲಿಂಗನಮಕ್ಕಿ) ಕಟ್ಟುವುದು, ಅದರಿಂದ ಆ ಪರಿಸರದ ಮೇಲೆರಗಿದ ವಿಪತ್ತುಗಳ ಚಿತ್ರಣವನ್ನು ಮಾತ್ರ ಹೇಳುವುದಿಲ್ಲ. ನಾಡಿಗೆ ಬೆಳಕು ನೀಡಲು ಹೇಗೆ ಅಲ್ಲಿಯ ಜನರು, ಒಂದಿಡೀ ಸಮುದಾಯ ತಮ್ಮ ಅಸ್ತಿತ್ವವನ್ನು, ಬದುಕನ್ನು ಕತ್ತಲೆಗೆ ನೂಕಿಕೊಂಡರು ಎಂಬುದನ್ನು ತೆರೆದು ತೋರಿಸುತ್ತದೆ. ದೀಪದ ಬುಡ ಕತ್ತಲು ಎಂಬ ಗಾದೆ ಇಲ್ಲಿ ನಿಚ್ಚಳವಾಗಿದೆ. ಈಗಲೂ ನಮ್ಮೂರಿನ ಹಳ್ಳಿಗಳು ಜೋರು ಮಳೆ ಬರಲಿ, ಬೇಸಿಗೆಯ ಬಿರು ಬಿಸಿಲಿರಲಿ, ದಿನದ ಬಹುತೇಕ ಕರೆಂಟಿಲ್ಲದೇ ಬದುಕುವುದನು ಕಲಿತಾಗಿದೆ. ನಗರಗಳ ದೊಡ್ಡ ಹೊಟ್ಟೆ ತುಂಬಿಸುವ ತವಕದಲ್ಲಿ ಜೋಗದ ಬುಡ, ಆಸು ಪಾಸಿನ ಊರುಗಳ ಪರಿಸ್ಥಿತಿ ಎಷ್ಟು ಸುಧಾರಿಸಿದೆ? ಉತ್ತರ ಕರ್ನಾಟಕ ಜಿಲ್ಲೆಗೆ ಯಾವೆಲ್ಲಾ ಸೌಲಭ್ಯ, ಸೌಕರ್ಯಗಳು ಈಗ ದೊರಕುತ್ತಿವೆ ಎಂಬ ಪ್ರಶ್ನೆಯೂ ಮೂಡುತ್ತದೆ.
ಆ ಕಾಲಘಟ್ಟದಲ್ಲಿ ಈ ಪ್ರಾಜೆಕ್ಟಿನ ಸಾಧಕ ಬಾಧಕಗಳನ್ನು ಜನರಿಗೆ ತಲುಪಿಸುತ್ತಿದ್ದ ಪತ್ರಿಕಾವರದಿಗಳು, ವಸ್ತುನಿಷ್ಟವಾಗಿರುತ್ತಿದ್ದ ಲೇಖನಗಳು, ಅವುಗಳ ಕೆಲವೊಂದು ತುಣುಗಳು, ಜಲಪಾತಗಳಿಗೆ ರಾಜ, ರೋರರ್, ರಾಕೆಟ್, ಲೇಡಿ – ಈ ಹೆಸರುಗಳು ಹೇಗೆ ಬಂದವು ಮತ್ತು ಅವುಗಳ ಹಿಂದಿನ ಕಥೆಯೇನು ಮುಂತಾದ ವಿವರಗಳು ಬಹಳ ಆಸಕ್ತಿಕರವಾಗಿ ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ಲಿಂಗನಮಕ್ಕಿ ಜಲಾಶಯ ಕಟ್ಟುವಾಗ ಬರುವ ಸವಿಸ್ತಾರವಾದ ತಾಂತ್ರಿಕ ಹಾಗೂ ಆರ್ಕಿಟೆಕ್ಟ್ ವಿವರಣೆಗಳು, ಅಂಕಿ-ಅಂಶಗಳೆಲ್ಲಾ ಆ ವಿಷಯದಲ್ಲಿ ಅಷ್ಟು ಅರಿವಿಲ್ಲದ ನನಗೆ ಆಸಕ್ತಿ ಅನ್ನಿಸದಿದ್ದರೂ ಈ ನಿಟ್ಟಿನಲ್ಲಿ ಓದುತ್ತಿರುವವರಿಗೆ, ಅಧ್ಯಯನ ಮಾಡುತ್ತಿರುವವರಿಗೆ ಇದೊಂದು ಒಳ್ಳೆಯ ಮಾಹಿತಿ ಅನ್ನಿಸಿತು.
ಇನ್ನು, ಜನರು ನೆಲೆಯನ್ನು ತೊರೆದು ಸಾಗುವಾಗಿನ ಕರಣಾಜನಕ ಚಿತ್ರಣವನ್ನೋದುತ್ತಿರುವಾಗ ಮತ್ತೆ ಮನಸ್ಸು ಒಂದು ಸುದೀರ್ಘ ನಿಲುಗಡೆಯನ್ನು ಪಡೆದಿತ್ತು. ಸ್ವಾತಂತ್ರ್ಯದ ಸಮಯದಲ್ಲಿ ಒಂದಿಷ್ಟು ನಾಯಕರ ಸ್ವಾರ್ಥವೋ, ದುರಾಸೆಯೋ, ಅಸಹಾಯಕತೆಯೋ, ಮುಂದಾಲೋಚನೆಯಿಲ್ಲದ ದುಡುಕು ನಿರ್ಧಾರವೋ, ರಾಜಕೀಯ ಜಿದ್ದಾಜಿದ್ದಿಯೋ – ಇವೆಲ್ಲವುಗಳಿಂದಾಗಿ ಕೋಟಿಗಟ್ಟಲೆ ಜನ ತಮ್ಮ ಹುಟ್ಟೂರನ್ನು, ಮನೆ, ಜಾನುವಾರು, ಹೊಲಗಳನ್ನೆಲ್ಲಾ ಉಟ್ಟಬಟ್ಟೆಯಲ್ಲಿ ತೊರೆದು ಬರುವಾಗ, ದ್ವೇಷದ ದಳ್ಳುರಿಗೆ ಸಿಲುಕಿ ಪ್ರಾಣ ಬಿಡುವಾಗ ಹೇಗೆ ನೋವನ್ನನುಭವಿಸಿರಬಹುದುದು ಎಂಬ ಆಲೋಚನೆಗೆ ಮನಸು ಎಳೆಯಿತು. ಈ ಕಾದಂಬರಿಯ ಆ ಚಿತ್ರಣ ನನಗೆ ಅಮೃತ ಪ್ರೀತಂ ಅವರ ‘ಪಿಂಜಾರಾ’ ಕಾದಂಬರಿಯನ್ನು ನೆನಪಿಸಿತು. ಪುನರ್ವಸುವಿನಲ್ಲಿ ಮುಳುಗಡೆಯ ಅವಾಂತರವನ್ನು ವಿವರಿಸುತ್ತಾ, “ಇರುವೆಗೆ ಮೂತ್ರವೇ ಪ್ರಳಯ, ದೊಡ್ಡವರು ಮಹತ್ವದ ಕಾರಣವಿಲ್ಲದೆಯೂ ತೆಗೆದುಕೊಳ್ಳುವ ಒಂದು ನಿರ್ಧಾರ, ಸಣ್ಣವರ ಪಾಲಿಗೆ ಪ್ರಾಣಾಂತಿಕವಾಗಿಬಿಡಬಹುದು” ಎನ್ನಲಾಗಿದೆ!
ಅಣೆಕಟ್ಟನ್ನು ಆ ದುರ್ಗಮ ಜಾಗದಲ್ಲಿ, ಅಪಾಯಕಾರಿ ಕಣಿವೆಯಲ್ಲಿ ಕಟ್ಟುವಾಗ ಬಲಿಯಾದ ಅಸಂಖ್ಯಾತ ಕಾರ್ಮಿಕರು, ಮನಸ್ಸಿಲ್ಲದಿದ್ದರೂ ಒತ್ತಾಯದಲ್ಲಿ ತಮ್ಮ ನೆಲ, ತೋಟ, ಜಾನುವಾರುಗಳನ್ನೆಲಾ ತೊರೆದು ತಬ್ಬಲಿಗಳಂತೆ ಗುಳೆ ಹೊರಟ ಜನರು – ಕಣ್ಣಿಗೆ ಕಟ್ಟುವಂತೆ ವಿವರಿಸಲ್ಪಟ್ಟಿದ್ದು, ಇದು ಆಗಾಗ ಓದಿನ ಓಘಕ್ಕೆ ಒಂದು ಸುದೀರ್ಘ ನಿಲುಗಡೆ ನಿಲ್ಲಿಸಿ, ನಿಟ್ಟುಸಿರು ತಂದುಬಿಡುತ್ತದೆ. ಜಗತ್ತು ಬದಲಾದಂತೆ, ಹೊಸಹೊಸ ಆವಿಷ್ಕಾರಕ್ಕೆ ತೆರೆದುಕೊಂಡಂತೆ ಹಿಂದೆ ಬೀಳುವ ಹಳೆಯ ತಲೆಮಾರು, ಅವರ ಕುಲಕಸುಬುಗಳು, ಹೊಸ ಕಾಲದ ಸೆಳೆತಕ್ಕೆ ಸಿಲುಕಿ ಉನ್ಮಾದದಲ್ಲಿ ತಮ್ಮ ಬೇರನ್ನೇ ಮರೆತು ಕಡಿದುಕೊಂಡು ಓಡುವ ಯುವಜನಾಂಗ – ಇವೆಲ್ಲಾ ಇಂದಿಗೂ, ಎಂದಿಗೂ ಬಹಳ ಪ್ರಸ್ತುತವೆನ್ನಿಸುತ್ತವೆ. ಅಲ್ಲಿಯ ಜನತೆ ಮೊದಲು ಬ್ರಿಟಿಶ್ ಸರ್ಕಾರದ ವಿರುದ್ಧ ಹೋರಾಡಿ, ಆಮೇಲೆ ತಮ್ಮ ಉಳಿವಿಗಾಗಿ, ಹಕ್ಕಿಗಾಗಿ ನವ ಭಾರತದ ಹೊಸ ಸರ್ಕಾರದ ವಿರುದ್ಧ ಹೋರಾಡಲಾಗದೇ ಅಸಹಾಯಕರಾಗುವ ಚಿತ್ರಣ ಮನದೊಳಗೆ ಹಲವು ಪ್ರಶ್ನೆಗಳನ್ನು ಎಬ್ಬಿಸಿಬಿಡುತ್ತದೆ.
೧. ಪ್ರಗತಿ ಎಂದರೇನು? ಅದಕ್ಕಿರುವ ಮಾನದಂಡವೇನು? ಎಲ್ಲಾ ಯೋಜನೆಗಳು ಆರಂಭದಲ್ಲಿ ಒಳಿತಿಗೆ, ಉನ್ನತಿಗೆ ಎಂಬಂತೇ ತೋರುತ್ತವೆ ಅಥವಾ ಹಾಗೆ ಕಾಣಿಸಲ್ಪಡುತ್ತವೆ. ಆದರೆ ಅದರ ಹಿಂದಿನ ಉದ್ದೇಶ, ಮುಂದಿನ ಪರಿಣಾಮ, ಸುದೀರ್ಘಾವಧಿಯಲ್ಲಿ ಅದರಿಂದ ಆಗುವ ಲಾಭ ನಷ್ಟಗಳ ಪರಿಗಣನೆ – ಇವೆಲ್ಲಾ ನಿಷ್ಪಕ್ಷವಾಗಿ ಆಗುತ್ತವೆಯೇ?
೨. ಎಲ್ಲಾ ಅವನತಿಗೂ ಕೇವಲ ಜಾಗತೀಕರಣ ಮಾತ್ರ ಕಾರಣವೇ? ಮನುಷ್ಯ ತನ್ನ ಮಹಾತ್ವಾಕಾಂಕ್ಷೆಯ ಮಾಂತ್ರಿಕ ಶಕ್ತಿಗೆ ಸಿಲುಕಿ, ಕುರುಡಾಗಿ ಸ್ವನಿಯಂತ್ರಣ, ಸಂಯಮ, ತುಸು ನಿಲುಗಡೆಯನ್ನು ಹಾಕಿಕೊಳ್ಳದಿರುವುದೂ ಕಾರಣ ತಾನೇ?
೩. ಯೋಜನೆಗಳೆಲ್ಲಾ ಬೃಹತ್ ಆಗಿದ್ದಷ್ಟು ಯೋಚನೆಗಳು ಸಂಕುಚಿತಗೊಳ್ಳುತ್ತಾ ಹೋಗುವುದು ಏಕೆ?
೪. ಬ್ರಿಟೀಶರನ್ನು ಓಡಿಸಿ ಹೋರಾಟದಲ್ಲಿ ಗೆದ್ದ ನಾವುಗಳು ನಮ್ಮೊಳಗಿನ (ಅದು ಹೊರಗಿರಬಹುದು ಅಥವಾ ನಮ್ಮ ಒಳಗಿನ ಗುಣವೇ ಆಗಿದ್ದಿರಬಹುದು) ಅವಗುಣಗಳು, ಕೊಳ್ಳುಬಾಕತನ, ದೇಶದ್ರೋಹಿತನವನ್ನು ಗೆಲ್ಲಲು ಯಾಕೆ ಆಗಲಿಲ್ಲ? ಕಾದಂಬರಿಯಲ್ಲೇ ಒಂದೆಡೇ ಬರುವಂತೆ, ಪ್ರಾಜೆಕ್ಟ್ ಅಳೆಯೋಕೆ ಬಂದ ಜನರೇ ಆಮೇಲೆ ಆ ಪ್ರದೇಶವನ್ನೇ ವಶಪಡಿಸಿಕೊಂಡು ಅಲ್ಲಿನ ಮೂಲ ನಿವಾಸಿಗಳನ್ನೆ ಆಳಲು ಹೊರಡುವುದು. ಇದೊಂಥರ ಬೆಂಕಿಯಿಂದ ಬಾಣಲೆಗೆ ಬಿದ್ದ ಪರಿಸ್ಥಿತಿ. ವ್ಯಾಪರದ ನೆಪದಲ್ಲಿ ನುಸುಳಿದ ಬ್ರಿಟೀಶರು ದೇಶವನ್ನೇ ಆಳಿದಂತೇ ಶರಾವತಿ ನದಿತೀರದ ಮುಗ್ಧ ಜನರು ಒದ್ದಾಡಿದ ಬಗೆಯನ್ನು ಓದಿದಾಗ ಅನ್ನಿಸಿದ್ದು.
೫. ಆ ಕಾಲದಿಂದ ಈ ಕಾಲದವರೆಗೂ, ತರತಮ ಬೇಧ ಇವೆಲ್ಲವೂ ಇರುವುದು ಅಧಿಕಾರ, ಅಂತಸ್ತು, ಐಶ್ವರ್ಯ ಉಳ್ಳುವರು ಮತ್ತು ಅವುಗಳಿಲ್ಲದವರ ನಡುವೆ ಮಾತ್ರವೇ ಅಲ್ಲವೇ?
*
ಹಾಗೆಂದು ಕಾದಂಬರಿಯ ತುಂಬಾ ನೋವಿನ ಚಿತ್ರಣವೇ ತುಂಬಿದೆ ಎಂದಲ್ಲ. ಮಲೆನಾಡಿನ ಸುಂದರ ಪ್ರಕೃತಿಯ ವರ್ಣನೆ, ಅಲ್ಲಿಯ ಹಳ್ಳಿಗರ ವಿಶಾಲ ಮನಸ್ಸು, ಆತಿಥ್ಯ, ಉಣಿಸು-ತಿನಿಸುಗಳು, ವಿಶೇಷ ಭಕ್ಷ್ಯಗಳು, ಆರ್ಭಟಿಸುವ ಮಳೆಯ ಅದ್ಭುತ ವರ್ಣನೆ, ಕಚಗಳಿಯಿಡುವ ಭೂತ, ಯಕ್ಷಿ, ಜಟ್ಟಿಗಳ ಭಯಾನಕ ಕತೆಯ ಪ್ರಸ್ತಾಪ, ಅಡಿಕೆ ಕೊಯ್ಲು, ಅದಕ್ಕೆ ಮಾಡಿಕೊಳ್ಳುವ ತಯಾರಿ, ಜಲಪಾತದ ಸೌಂದರ್ಯವನ್ನು ತೆರೆದಿಡುವ ರೀತಿ – ಹೀಗೆ ನಡುನಡುವೆ ಅನೇಕ ಮುದ ನೀಡುವಂತಹ ಕಥನಗಳನ್ನು ನೀಡುತ್ತಲೇ ವಾಸ್ತವಿಕ ಚಿತ್ರಣವನ್ನು ನೀಡುತ್ತಾ ಹೋಗಿ, ಅದು ನನ್ನ ಬಾಲ್ಯ, ಬೆಳೆದ ಪರಿಸರ, ಅಜ್ಜಿಯಿಂದ ಕೇಳಿದ್ದ ಭೂತದ ಕಥೆಗಳು ಇವೆಲ್ಲವುಗಳನ್ನು ನೆನಪಿಸಿತು.
ಕಾದಂಬರಿಯನ್ನು ಮುಗಿಸಿದ ಮೇಲೆ ನನಗೆ ಅನ್ನಿಸಿದ್ದು...
ಔದ್ಯೋಗೀಕರಣ, ಜಾಗತಿಕರಣ – ಇವೆಲ್ಲಾ ತಡೆಯಲಾಗದಂಥದ್ದು. ಅಭಿವೃದ್ಧಿಗೆ ವಿದ್ಯುತ್ ಬೇಕೇಬೇಕು, ಅನಿವಾರ್ಯ ಎಲ್ಲವೂ ಸರಿಯೇ. ಆದರೆ ಇದಕ್ಕೆ ತೆರೆಬೇಕಾದ, ತೆತ್ತಿರುವ ಬೆಲೆಯಾದರೂ ಏನು? ಪ್ರಕೃತಿಯ ನಾಶವಿಲ್ಲದೇ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲವೇ? ಕಾಡನ್ನು, ವನವನ್ನು ಆಶ್ರಯಿಸಿ ಬದುಕುತ್ತಿರುವ ಅಸಂಖ್ಯಾತ ಜೀವಿಗಳ ನಾಶ, ಆ ಮೂಲಕ ನಮ್ಮ ಭವಿಷ್ಯತ್ತಿಗೆ ಅಂಧಕಾರವನ್ನೆಳೆದುಕೊಳ್ಳುವ ರೀತಿಯ ಹುಚ್ಚುಚ್ಚಾದ ಅಭಿವೃದ್ಧಿಗಳು ಅಗತ್ಯವೇ? ಒಂದು ನಿಯಂತ್ರಣ, ದೂರದರ್ಶಿತ್ವ, ಸಂಯಮ, ಸಹ ಜೀವಿಗಳ ಕುರಿತು ಕಾಳಜಿ – ಇವುಗಳನ್ನೆಲ್ಲಾ ಮರೆತ ಓಟ ನಮ್ಮನು ಮುಗ್ಗರಿಸದಿರದೇ? ನಾವಿಲ್ಲದಿದ್ದರೂ ನಮ್ಮೆದುರು ಇರುವ ಕಾರ್ಯ ಸಫಲವಾಗಿ ಸಮಾಜ ಅದರ ಫಲವನ್ನುಣ್ಣುವಂತಾಗಬೇಕು, ಅದೇ ನಿಜವದ ವೃತ್ತಿಧರ್ಮ – ಎಂದು ನಾಡಿಗಾಗಿ ನಿಸ್ಪ್ರಹತೆಯಿಂದ ದುಡಿದಿದ್ದ ಕಡಾಂಬಿಯಂತವರ ಸದ್ಭಾವನೆ, ಸದುದ್ದೇಶ ಆಮೇಲೆ ನಿಜವಾಗಿಯೂ ಈಡೇರಿತೆ? ನಗರಗಳು ಬೆಳಕು, ಸಕಲ ಸೌಲಭ್ಯಗಳನ್ನು ಹೊಂದಿದರೂ ಮುಳುಗಡೆಯಿಂದ ನೊಂದ ಆ ಪ್ರದೇಶದ ಜನರು, ಅವರ ಜೀವನ ಅಷ್ಟೇ ಪ್ರಗತಿ ಕಂಡಿತೆ? ಆಮೇಲಾದರೂ ಉಳಿದ, ಕಾಡು, ಜಲಗಳ ಸಂರಕ್ಷಣೆಗೆ ಸರಕಾರ ಏನು ಕೊಡುಗೆ ನೀಡಿತು? ಗತಕಾಲದ ಜೋಗದ ವೈಭವ ಮತ್ತೆ ಮರುಕಳಿಸೀತೆ? – ಹೀಗೆ ಕೊನೆಯಲ್ಲಿದ ಅನೇಕ ಪ್ರಶ್ನಾವಳಿಗಳನ್ನು ಓದುಗರ ಮನದೊಳಗೆ ಬಿತ್ತಿಬಿಡುತ್ತದೆ.
ಪುನರ್ವಸು – ಕಾದಂಬರಿಯ ಈ ಶೀರ್ಷಿಕೆಯೇ ನನ್ನನ್ನು ಮೊದಲು ಸೆಳೆದದ್ದು, ಕುತೂಹಲ ಮೂಡಿಸಿದ್ದು. ಪುನರ್ವಸು ಎಂದರೆ ಇಪ್ಪತ್ತೇಳು ಮಳೆ ನಕ್ಷತ್ರಗಳಲ್ಲೊಂದು ಎಂದಷ್ಟೇ ಅರಿತಿದ್ದೆ. ಆದರೆ ಈ ಹೆಸರಿನ ಹಿಂದೆ ಅದೆಷ್ಟು ಅರ್ಥವತ್ತಾದ ಕಥೆಯಿದೆ, ಬಹಳ ಉದಾತ್ತವಾದ ಅರ್ಥವಿದೆ ಎಂಬುದನ್ನು ಓದಿ ತಿಳಿದುಕೊಂಡೆ. ಮನುಷ್ಯನ ಕ್ರೌರ್ಯಕ್ಕೆ, ಹಪಹಪಿಗೆ, ನಿಲ್ಲದ ದಾಹಕ್ಕೆ ನಲುಗಿರುವ ಪ್ರಕೃತಿ ತಾನೇ ಸಂಯಮ, ಕಡಿವಾಣ, ಆಗೀಗ ಹಾಕಿಕೊಳ್ಳುತ್ತಲೇ ಬರುತ್ತಿದ್ದಾಳೆ. ಕ್ರಮೇಣ ವಸುಂಧರೆ ತನ್ನ ಮೊದಲಿನ ರಸ, ಗಂಧ, ಫಲಗಳಿಂದ ಕಂಗೊಳಿಸಲಿ, ಆಕೆ ಪುನರ್ವಸುವಾಗಲಿ ಎಂದು ಹಾರಿಸುವುದು ಮಾತ್ರ ಸದ್ಯ ಸಾಧ್ಯವಾಗುತ್ತಿದೆ. ಜೋಗದ ಸಿರಿ ಬೆಳಕಿನಡಿಯಲ್ಲಿರುವ ಇರುಳುಗತ್ತಲೆಯನ್ನು ಹೊರಗೆಳೇದು ತೋರಿಸಿ, ಹಿನ್ನಲೆ-ಮುನ್ನಲೆಗಳ ಸಮಗ್ರ ಮಾಹಿತಿಗಳನ್ನು ಒದಗಿಸಿ, ಆ ಮೂಲಕ ಒಂದು ಎಚ್ಚರಿಕೆ, ಜಾಗೃತಿಯನ್ನು, ಸಾಮಾಜಿಕ ಕಳಕಳಿಯನ್ನು ಮೂಡಿಸುವಂತಹ ವಸ್ತುನಿಷ್ಟವಾದ ಅಪೂರ್ವ ಕಾದಂಬರಿಯನ್ನು ನೀಡಿದ್ದಕ್ಕಾಗಿ ಲೇಖಕರಿಗೆ ಅಭಿನಂದನೆಗಳು.
ಕಾದಂಬರಿ : ಪುನರ್ವಸು
ಲೇಖಕ : ಡಾ. ಗಜಾನನ ಶರ್ಮ
ಪ್ರಕಟನೆ : ಅಂಕಿತ ಪ್ರಕಾಶನ
ಪುಟಗಳು : ೫೪೪
ಬೆಲೆ : ೪೫೦ ರೂ.
~ತೇಜಸ್ವಿನಿ ಹೆಗಡೆ
1 ಕಾಮೆಂಟ್:
ತೇಜಸ್ವಿನಿ, ಒಂದು ಅಪೂರ್ವವಾದ ಕಾದಂಬರಿಯ ಬಗೆಗೆ ನೀವು ಬರೆದಿರುವ ಅಪೂರ್ವವಾದ ವಿಶ್ಲೇಷಣೆಯನ್ನು ಓದಿದೆ. ಕಾದಂಬರಿಯ ವಿವಿಧ ಮಗ್ಗಲುಗಳನ್ನು ಸಮರ್ಪಕವಾಗಿ ವಿವರಿಸಿರುವಿರಿ. ನೀವು ಹೇಳಿದಂತೆ ಕಾದಂಬರಿಯು ಅನೇಕ ಪ್ರಶ್ನೆಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ. ಅದಕ್ಕೆ ಒಂದೇ ಉತ್ತರ ಸಿಗಲಾರದೇನೊ!ವಿಮರ್ಶೆಗಾಗಿ ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ